ಅವರ ನಂಬಿಕೆಯನ್ನು ಅನುಕರಿಸಿ | ಯೋನಾತಾನ
ಪ್ರಾಣಸ್ನೇಹಿತರಾದರು
ಯುದ್ಧವು ಮುಗಿದಿತ್ತು. ಏಲಾ ಕಣಿವೆಯಲ್ಲಿ ಶಾಂತಿಯು ಆವರಿಸಿತ್ತು. ಮಧ್ಯಾಹ್ನದ ಹೊತ್ತಲ್ಲಿ ಬೀಸುತ್ತಿದ್ದ ಗಾಳಿಯಿಂದಾಗಿ ಸೇನೆಯ ಗುಡಾರಗಳು ಪಟಪಟ ಬಡಿಯುತ್ತಿದ್ದವು. ಅಲ್ಲಿ, ರಾಜ ಸೌಲನು ತನ್ನ ಕೆಲವು ಸೈನಿಕರೊಂದಿಗೆ ಒಂದು ಕೂಟವನ್ನು ಏರ್ಪಡಿಸಿದ್ದನು. ಅವನ ಹಿರಿಯ ಮಗನಾದ ಯೋನಾತಾನನೂ ಅಲ್ಲಿದ್ದನು. ಅಲ್ಲಿ ಒಬ್ಬ ಯುವ ಕುರುಬನು ತನ್ನ ಕಥೆಯನ್ನು ಖುಷಿಯಿಂದ ಹೇಳುತ್ತಿದ್ದನು. ಆ ಯುವಕ ದಾವೀದನಾಗಿದ್ದನು. ಅವನು ಹುರುಪು-ಹುಮ್ಮಸ್ಸಿನಿಂದ ಮಾತಾಡುತ್ತಿದ್ದನು. ದಾವೀದ ಹೇಳುತ್ತಿದ್ದ ಒಂದು ಶಬ್ಧವೂ ತಪ್ಪದ ಹಾಗೆ ಸೌಲನು ಮೈಯೆಲ್ಲಾ ಕಿವಿಯಾಗಿಸಿ ಕೇಳಿಸಿಕೊಳ್ಳುತ್ತಿದ್ದನು. ಆದರೆ, ಯೋನಾತಾನನಿಗೆ ಹೇಗನಿಸುತ್ತಿತ್ತು? ಎಷ್ಟೋ ವರ್ಷಗಳು ಯೆಹೋವನ ಸೇನೆಯ ಸೇವೆ ಮಾಡುತ್ತಾ ಅವನು ಕೂಡ ಜಯ ತಂದಿದ್ದನು. ಆದರೆ ಇವತ್ತು ಜಯ ತಂದಿದ್ದು ಯೋನಾತಾನನಾಗಿರಲಿಲ್ಲ; ಈ ಯುವಕ ತಂದಿದ್ದನು. ದಾವೀದನು ದೈತ್ಯನಾದ ಗೊಲ್ಯಾತನನ್ನು ಕೊಂದುಹಾಕಿದ್ದನು! ದಾವೀದನಿಗೆ ಸಿಗುತ್ತಿದ್ದ ಮಹಿಮೆ-ಪ್ರತಿಷ್ಠೆಯನ್ನು ನೋಡಿದಾಗ ಯೋನಾತಾನನು ಹೊಟ್ಟೆಕಿಚ್ಚುಪಟ್ಟನಾ?
ಯೋನಾತಾನನ ಪ್ರತಿಕ್ರಿಯೆ ನಿಮ್ಮ ಹುಬ್ಬೇರಿಸುತ್ತೆ. ದಾವೀದನ ಮತ್ತು ಸೌಲನ ಸಂಭಾಷಣೆ ಮುಗಿದ ಕೂಡಲೇ, ‘ಯೋನಾತಾನನು ಹಾಗು ದಾವೀದನು ಪ್ರಾಣಸ್ನೇಹಿತರಾದರು. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು’ ಎಂದು ನಾವು ಓದಬಹುದು. ಯೋನಾತಾನನು ಸ್ವತಃ ತಾನು ಉಪಯೋಗಿಸುತ್ತಿದ್ದ ಆಯುಧಗಳನ್ನು, ಅದರಲ್ಲೂ ತನ್ನ ಬಿಲ್ಲನ್ನು ದಾವೀದನಿಗೆ ಕೊಟ್ಟಿದ್ದು ಒಂದು ಗಮನಾರ್ಹ ವಿಷಯವಾಗಿದೆ, ಏಕೆಂದರೆ ಯೋನಾತಾನನು ಒಬ್ಬ ಹೆಸರುವಾಸಿ ಬಿಲ್ಲುಗಾರನಾಗಿದ್ದ. ಅಲ್ಲಿಗೇ ನಿಲ್ಲಿಸದೆ, ಯೋನಾತಾನ ಮತ್ತು ದಾವೀದ ಹೃತ್ಪೂರ್ವಕವಾಗಿ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು. ಒಬ್ಬರು ಇನ್ನೊಬ್ಬರನ್ನು ಬೆಂಬಲಿಸುವಂಥ ಸ್ನೇಹಿತರಾಗಿರಲು ಆ ಒಪ್ಪಂದ ಅವರನ್ನು ಬದ್ಧಪಡಿಸಿತು.—1 ಸಮುವೇಲ 18:1-5, ಪವಿತ್ರ ಬೈಬಲ್.
ಹೀಗೆ, ಬೈಬಲಿನಲ್ಲಿ ವಿವರಿಸಲಾಗಿರುವ ಅತ್ಯುತ್ತಮ ಸ್ನೇಹ ಸಂಬಂಧಗಳಲ್ಲೊಂದು ಆರಂಭವಾಯಿತು. ಸ್ನೇಹವು ನಂಬಿಗಸ್ತ ಜನರಿಗೆ ಒಂದು ಪ್ರಾಮುಖ್ಯ ವಿಷಯ. ನಾವು ವಿವೇಚನೆಯಿಂದ ಸ್ನೇಹಿತರನ್ನು ಆಯ್ಕೆ ಮಾಡಿದರೆ ಮತ್ತು ಬೆಂಬಲ ನೀಡುವ, ನಿಷ್ಠಾವಂತ ಸ್ನೇಹಿತರು ನಾವಾದರೆ, ಪ್ರೀತಿ ಕಳೆದು ಹೋಗಿರುವ ಈಗಿನ ಕಾಲದಲ್ಲಿ ನಾವು ಪರಸ್ಪರ ನಂಬಿಕೆಯನ್ನು ಬಲಪಡಿಸಿಕೊಳ್ಳಬಹುದು. (ಜ್ಞಾನೋಕ್ತಿ 27:17) ಹಾಗಾಗಿ, ಸ್ನೇಹದ ಬಗ್ಗೆ ಯೋನಾತಾನನಿಂದ ನಾವೇನು ಕಲಿಯಬಹುದು ಎಂದು ನೋಡೋಣ.
ಅವರ ಸ್ನೇಹದ ಆಧಾರ
ಇಷ್ಟು ಬೇಗ ಇಂಥ ಬಲವಾದ ಸ್ನೇಹ ಬೆಳೆಯಲು ಹೇಗೆ ಸಾಧ್ಯ? ಆ ಸ್ನೇಹಕ್ಕಿದ್ದ ಆಧಾರವೇ ಇದಕ್ಕೆ ಕಾರಣ. ಮೊದಲು ನಾವು, ಆ ಸ್ನೇಹ ಆರಂಭವಾಗುವ ಸಮಯದಲ್ಲಿ ಸನ್ನಿವೇಶ ಹೇಗಿತ್ತೆಂದು ಸ್ವಲ್ಪ ತಿಳಿದುಕೊಳ್ಳೋಣ. ಯೋನಾತಾನನಿಗೆ ಅದು ಕಷ್ಟದ ಸಮಯವಾಗಿತ್ತು. ಯಾಕೆಂದರೆ, ವರ್ಷಗಳು ಉರುಳಿದಂತೆ ಅವನ ತಂದೆಯಾದ ರಾಜ ಸೌಲನು, ಹೆಚ್ಚೆಚ್ಚು ಕೆಟ್ಟವನಾಗುತ್ತಾ ಹೋಗುತ್ತಿದ್ದನು. ಒಂದು ಕಾಲದಲ್ಲಿ ದೀನ, ವಿಧೇಯ ಹಾಗೂ ನಂಬಿಗಸ್ತ ವ್ಯಕ್ತಿಯಾಗಿದ್ದ ಸೌಲ ಈಗ ದುರಹಂಕಾರಿ ಮತ್ತು ಅವಿಧೇಯ ರಾಜನಾಗಿಬಿಟ್ಟಿದ್ದನು.—1 ಸಮುವೇಲ 15:17-19, 26.
ಯೋನಾತಾನನು ತನ್ನ ತಂದೆಗೆ ಆಪ್ತನಾಗಿದ್ದ ಕಾರಣ, ಸೌಲ ಬದಲಾಗುವುದನ್ನು ನೋಡುವಾಗ ಯೋನಾತಾನನಿಗೆ ತುಂಬ ನೋವಾಗಿರಬೇಕು. (1 ಸಮುವೇಲ 20:2) ‘ಯೆಹೋವನು ಆಯ್ದುಕೊಂಡಿದ್ದ ಜನಾಂಗಕ್ಕೆ ಸೌಲನು ಏನು ಹಾನಿ ತರುತ್ತಾನೋ? ರಾಜನ ಅವಿಧೇಯತೆಯಿಂದ ಪ್ರಜೆಗಳು ದಾರಿ ತಪ್ಪಿ, ಯೆಹೋವನ ಅನುಗ್ರಹವನ್ನು ಎಲ್ಲಿ ಕಳೆದುಕೊಂಡುಬಿಡುತ್ತಾರೋ?’ ಎಂದು ಯೋನಾತಾನ ಯೋಚಿಸಿರಬೇಕು. ಅವನಂಥ ನಂಬಿಗಸ್ತರಿಗೆ ಇದು ನಿಜವಾಗಲೂ ಕಷ್ಟದ ಸಮಯವಾಗಿತ್ತು.
ಯೋನಾತಾನನು ದಾವೀದನ ಕಡೆಗೆ ಏಕೆ ಆಕರ್ಷಿತನಾದನು ಎಂದು ತಿಳಿದುಕೊಳ್ಳಲು ಈ ಹಿನ್ನಲೆ ಸಹಾಯ ಮಾಡುತ್ತದೆ. ಯೋನಾತಾನನು ದಾವೀದನ ಬಲವಾದ ನಂಬಿಕೆಯನ್ನು ಕಂಡನು. ಸ್ವಲ್ಪ ನೆನಪಿಸಿಕೊಳ್ಳಿ, ದಾವೀದನು ಸೌಲನ ಸೈನ್ಯದಲ್ಲಿದ್ದವರ ಥರ ಗೊಲ್ಯಾತನ ದೈತ್ಯಾಕಾರಕ್ಕೆ ಒಂಚೂರೂ ಹೆದರಿರಲಿಲ್ಲ. ಗೊಲ್ಯಾತನ ಹತ್ತಿರ ಎಲ್ಲಾ ಆಯುಧಗಳಿದ್ದರೂ, ತಾನು ಯೆಹೋವನ ಹೆಸರಿನಲ್ಲಿ ಯುದ್ಧಕ್ಕಿಳಿದಿದ್ದ ಕಾರಣ, ತಾನೇ ಬಲಾಢ್ಯನು ಎಂದು ದಾವೀದನು ಅರ್ಥಮಾಡಿಕೊಂಡಿದ್ದನು.—1 ಸಮುವೇಲ 17:45-47.
ವರ್ಷಗಳ ಹಿಂದೆ, ಯೋನಾತಾನನು ಕೂಡ ಅದನ್ನೇ ಅರ್ಥಮಾಡಿಕೊಂಡಿದ್ದನೆಂದು ಗೊತ್ತಾಗುತ್ತದೆ. ತಾನು ಮತ್ತು ತನ್ನ ಆಯುಧ ಹೊರುವವನು, ಇಬ್ಬರೇ ಇದ್ದಿದ್ದರೂ, ಸೈನಿಕರ ಒಂದು ಇಡೀ ದಳವನ್ನೇ ದಾಳಿ ಮಾಡಿ ಸೋಲಿಸಲು ಖಂಡಿತ ಆಗುತ್ತೆ ಎಂಬ ಖಾತ್ರಿ ಅವನಿಗಿತ್ತು. ಯಾಕೆ? “ಬಹುಜನರಿಂದಾದರೂ ಸ್ವಲ್ಪಜನರಿಂದಾದರೂ ರಕ್ಷಿಸುವದು ಯೆಹೋವನಿಗೆ ಅಸಾಧ್ಯವಲ್ಲ” ಎಂದು ಯೋನಾತಾನನು ಹೇಳಿದ್ದನು. (1 ಸಮುವೇಲ 14:6) ಹಾಗಾಗಿ ಯೋನಾತಾನನ ಮತ್ತು ದಾವೀದನ ಮಧ್ಯೆ ತುಂಬ ಸಮಾನತೆ ಇತ್ತು. ಅವರಿಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಹಾಗೂ ಗಾಢ ಪ್ರೀತಿ ಇತ್ತು. ಇದೇ ಅವರಿಬ್ಬರ ಸ್ನೇಹಕ್ಕಿರಬಹುದಾದ ಅತ್ಯುತ್ತಮ ಆಧಾರವಾಗಿತ್ತು. ಯೋನಾತಾನನು 50 ವರ್ಷದವನಾಗಿದ್ದನು ಮತ್ತು ಒಬ್ಬ ಧೀರ ರಾಜಕುಮಾರನಾಗಿದ್ದನು. ಆದರೆ ದಾವೀದನು ಸಾಧಾರಣ ಕುರುಬನಾಗಿದ್ದನು ಮತ್ತು ಅವನಿಗೆ 20 ವರ್ಷ ಕೂಡ ಆಗಿರಲಿಕ್ಕಿಲ್ಲ. ಆದರೆ ಈ ವ್ಯತ್ಯಾಸಗಳನ್ನು ಅವರಿಬ್ಬರು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. *
ಅವರು ಮಾಡಿಕೊಂಡ ಒಡಂಬಡಿಕೆ ಅವರ ಸ್ನೇಹಕ್ಕೆ ನಿಜಕ್ಕೂ ಒಂದು ಸಂರಕ್ಷಣೆಯಂತಿತ್ತು. ಅದು ಹೇಗೆ? ತಾನು ಮುಂದೇನು ಆಗಬೇಕೆಂದು ಯೆಹೋವನು ನಿರ್ಧರಿಸಿದ್ದಾನೆ ಎನ್ನುವುದು ದಾವೀದನಿಗೆ ಗೊತ್ತಿತ್ತು. ಅವನು ಸೌಲನ ನಂತರ ಇಸ್ರಾಯೇಲಿನ ರಾಜನಾಗಲಿದ್ದನು! ಇದನ್ನು ಅವನು ಗುಟ್ಟಾಗಿಟ್ಟುಕೊಂಡು ಯೋನಾತಾನನಿಗೆ ಹೇಳದೇ ಇದ್ದನಾ? ಇಲ್ಲ! ಬಿಚ್ಚು ಮನಸ್ಸಿನ ಮಾತುಕತೆಯಿದ್ದರೆ ಮಾತ್ರ ಅಂಥ ಬಲವಾದ ಸ್ನೇಹ ಬಾಳಲು ಸಾಧ್ಯ. ಆದರೆ ಗುಟ್ಟುಗಳು ಸುಳ್ಳುಗಳು ಇದ್ದರೆ ಅದು ಬಾಳಲು ಅಸಾಧ್ಯ. ದಾವೀದನು ಮುಂದೆ ರಾಜನಾಗಲಿದ್ದಾನೆ ಎಂದು ತಿಳಿದುಬಂದಾಗ ಅದು ಯೋನಾತಾನನ ಮೇಲೆ ಹೇಗೆ ಪ್ರಭಾವ ಬೀರಿರಬೇಕು? ಒಂದು ವೇಳೆ, ತಾನು ರಾಜನಾಗಿ, ತನ್ನ ತಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುವ ನಿರೀಕ್ಷೆ ಅವನ ಹೃದಯದಲ್ಲಿ ಇದ್ದಿದ್ದರೆ ಅದರ ಬಗ್ಗೆ ಏನು? ಯೋನಾತಾನನಿಗೆ ತನ್ನೊಳಗೆ ಈ ರೀತಿ ಗೊಂದಲ ಇತ್ತೆಂದು ಬೈಬಲ್ ಹೇಳುವುದಿಲ್ಲ; ಏನು ಅವಶ್ಯವಾಗಿದೆಯೋ ಅಷ್ಟನ್ನೇ ಹೇಳುತ್ತದೆ ಅಂದರೆ, ಯೋನಾತಾನನ ನಿಷ್ಠೆ ಹಾಗೂ ನಂಬಿಕೆಯ ಬಗ್ಗೆ ಹೇಳುತ್ತದೆ. ದಾವೀದನೊಂದಿಗೆ ಯೆಹೋವನ ಶಕ್ತಿ ಇತ್ತೆಂದು ಅವನು ನೋಡಿದ್ದನು. (1 ಸಮುವೇಲ 16:1, 11-13) ಹಾಗಾಗಿ ಯೋನಾತಾನನು ತಾನು ಕೊಟ್ಟ ಮಾತನ್ನು ಪೂರೈಸಿದನು, ದಾವೀದನನ್ನು ಒಬ್ಬ ಎದುರಾಳಿಯಂತೆ ಅಲ್ಲ, ಒಬ್ಬ ಸ್ನೇಹಿತನಾಗಿ ಪರಿಗಣಿಸುತ್ತಾ ಮುಂದುವರಿದನು. ಯೋನಾತಾನನು ದೇವರ ಚಿತ್ತ ನೆರವೇರುವುದನ್ನು ನೋಡಲು ಬಯಸಿದನು.
ಯೋನಾತಾನ ಮತ್ತು ದಾವೀದ ಇಬ್ಬರಿಗೂ ಯೆಹೋವನ ಮೇಲೆ ಬಲವಾದ ನಂಬಿಕೆ ಮತ್ತು ಗಾಢವಾದ ಪ್ರೀತಿ ಇತ್ತು
ಆ ಸ್ನೇಹ ಒಂದು ದೊಡ್ಡ ಆಶೀರ್ವಾದವಾಗಿ ಪರಿಣಮಿಸಿತು. ಯೋನಾತಾನನ ನಂಬಿಕೆಯಿಂದ ನಾವು ಏನು ಕಲಿಯಬಹುದು? ದೇವರ ಪ್ರತಿಯೊಬ್ಬ ಸೇವಕನು, ಸ್ನೇಹಕ್ಕಿರುವ ಮೌಲ್ಯವನ್ನು ತಿಳಿದರೆ ಪ್ರಯೋಜನ ಪಡೆಯುತ್ತಾನೆ. ನಮ್ಮ ಸ್ನೇಹಿತರು ನಮ್ಮ ವಯಸ್ಸಿನವರೇ ನಮ್ಮ ಹಿನ್ನೆಲೆಯವರೇ ಆಗಿರಬೇಕಂತಿಲ್ಲ. ಆದರೆ ಅವರಿಗೆ ದೇವರ ಮೇಲೆ ನಿಜ ನಂಬಿಕೆ ಇದ್ದರೆ, ಅವರು ನಮಗೆಷ್ಟೋ ಒಳ್ಳೇದನ್ನು ಮಾಡಬಹುದು. ಯೋನಾತಾನ ಹಾಗೂ ದಾವೀದ ಒಬ್ಬರನ್ನೊಬ್ಬರು ಅನೇಕ ಬಾರಿ ಬಲಪಡಿಸಿ ಉತ್ತೇಜಿಸಿದರು. ಅವರ ಸ್ನೇಹಕ್ಕೆ ಇನ್ನೂ ದೊಡ್ಡ ಪರೀಕ್ಷೆಗಳು ಬರಲಿಕ್ಕಿದ್ದದರಿಂದ ಅವರಿಗೆ ಇಂಥ ಸಹಾಯ ಬೇಕಾಗುತ್ತಿತ್ತು.
ಇಬ್ಬರಲ್ಲಿ ಯಾರಿಗೆ ನಿಷ್ಠೆ ತೋರಿಸುವುದು?
ಮೊದಮೊದಲು ಸೌಲನಿಗೆ ದಾವೀದನ ಮೇಲೆ ಅಕ್ಕರೆ ಇತ್ತು ಮತ್ತು ಅವನನ್ನು ತನ್ನ ಸೇನಾಧಿಕಾರಿಯಾಗಿ ಮಾಡಿದ್ದನು. ಯೋನಾತಾನನಾದರೋ ಹೊಟ್ಟೆಕಿಚ್ಚು ಪಡಲಿಲ್ಲ. ಆದರೆ ಸೌಲ ಹೊಟ್ಟೆಕಿಚ್ಚಿನಿಂದ ಹೊತ್ತಿ ಉರಿಯುತ್ತಿದ್ದನು. ಇಸ್ರಾಯೇಲ್ಯರ ವೈರಿಗಳಾಗಿದ್ದ ಫಿಲಿಷ್ಟಿಯರ ವಿರುದ್ಧ ದಾವೀದನಿಗೆ ಗೆಲುವಿನ ಮೇಲೆ ಗೆಲುವು ಸಿಕ್ಕಿತು. ಇದರಿಂದ ದಾವೀದನು ಮಹಿಮೆ ಹಾಗೂ ಪ್ರತಿಷ್ಠೆ ಪಡೆದನು. ಕೆಲವು ಇಸ್ರಾಯೇಲ್ಯ ಮಹಿಳೆಯರು “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು” ಎಂದು ಹಾಡಿದರು. ಸೌಲನಿಗೆ ಆ ಹಾಡು ಇಷ್ಟವಾಗಲಿಲ್ಲ. “ಅಂದಿನಿಂದ [ಸೌಲನು] ಅವನ ಮೇಲೆ ಕಣ್ಣಿಟ್ಟನು.” (1 ಸಮುವೇಲ 18:7, 9) ದಾವೀದನು ತನ್ನ ರಾಜ್ಯಾಧಿಕಾರವನ್ನು ಕಿತ್ತುಕೊಳ್ಳುತ್ತಾನೆ ಎಂದು ಸೌಲ ಭಯಪಟ್ಟನು. ಇದು ಸೌಲನ ಮೂರ್ಖತನವಾಗಿತ್ತು. ಸೌಲನ ನಂತರ ತಾನು ಆಳುತ್ತೇನೆ ಎಂದು ದಾವೀದನಿಗೆ ತಿಳಿದಿತ್ತು ನಿಜ, ಆದರೆ ಅವನು, ಯೆಹೋವನ ಅಭಿಷಿಕ್ತ ರಾಜನು ಆಳುತ್ತಿರುವಾಗಲೇ ಅವನಿಂದ ರಾಜ್ಯಾಧಿಕಾರವನ್ನು ಕಿತ್ತುಕೊಳ್ಳುವ ಯೋಚನೆಯನ್ನೂ ಮಾಡಿರಲಿಲ್ಲ.
ದಾವೀದನನ್ನು ಯುದ್ಧದಲ್ಲಿ ಕೊಂದುಹಾಕಲು ಸೌಲನು ಯೋಜಿಸಿದನು. ಆದರೆ ಅದು ನೀರುಪಾಲಾಯಿತು. ದಾವೀದನು ಒಂದರ ಮೇಲೊಂದು ಯುದ್ಧಗಳನ್ನು ಗೆಲ್ಲುತ್ತಾ ಹೋದನು. ಇದರಿಂದ ಜನರಿಗೆ ಅವನ ಮೇಲಿದ್ದ ಗೌರವ ಮತ್ತು ಪ್ರೀತಿ ಇನ್ನೂ ಹೆಚ್ಚಾಗುತ್ತಾ ಹೋಯಿತು. ಹಾಗಾಗಿ ಸೌಲನು ದಾವೀದನನ್ನು ಕೊಂದುಹಾಕಲು ಇನ್ನೊಂದು ಒಳಸಂಚನ್ನು ಮಾಡಿದನು. ತನ್ನ ಎಲ್ಲಾ ಸೇವಕರು ಮತ್ತು ಹಿರಿಯ ಮಗನು ಅದರಲ್ಲಿ ಸೇರಿಕೊಳ್ಳುವಂತೆ ಕೇಳಿಕೊಂಡನು. ತನ್ನ ತಂದೆ ಈ ರೀತಿ ನಡಕೊಳ್ಳುವುದನ್ನು ನೋಡಿ ಯೋನಾತಾನನಿಗೆ ಎಷ್ಟು ಬೇಸರ ಆಗಿರಬೇಕು! (1 ಸಮುವೇಲ 18:25-30; 19:1) ಯೋನಾತಾನನು ಒಬ್ಬ ನಿಷ್ಠಾವಂತ ಮಗನಷ್ಟೇ ಅಲ್ಲ, ನಿಷ್ಠಾವಂತ ಸ್ನೇಹಿತನೂ ಆಗಿದ್ದನು. ಆದರೆ ಈಗ ಇವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ನಿಷ್ಠೆ ತೋರಿಸಬೇಕಿತ್ತು. ಕೊನೆಗೆ, ಯೋನಾತಾನ ಯಾರಿಗೆ ನಿಷ್ಠೆ ತೋರಿಸುವನು? ತಂದೆಗಾ ಸ್ನೇಹಿತನಿಗಾ?
ಈ ಒಳಸಂಚನ್ನು ಕೇಳಿ ಯೋನಾತಾನನು ಸುಮ್ಮನೆ ಇರಲಿಲ್ಲ. ಅವನು ತನ್ನ ತಂದೆಗೆ, “ಒಡೆಯನು ತನ್ನ ಸೇವಕನಾದ ದಾವೀದನಿಗೆ ಅನ್ಯಾಯಮಾಡದಿರಲಿ; ಅವನು ನಿನಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ. ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯನನ್ನು ಕೊಂದನು; ಯೆಹೋವನು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿ ಸಂತೋಷಪಟ್ಟಿಯಲ್ಲಾ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನೇಕೆ ಗುರಿಯಾಗುತ್ತೀ” ಎಂದು ಹೇಳಿದನು. ಸೌಲನು ಯೋನಾತಾನನ ಮಾತನ್ನು ಕೇಳಿದನು ಮತ್ತು ದಾವೀದನಿಗೆ ಹಾನಿ ಮಾಡುವುದಿಲ್ಲ ಎಂದು ಮಾತು ಸಹ ಕೊಟ್ಟನು. ಆ ಸಮಯದಲ್ಲಿ ಸೌಲನ ನ್ಯಾಯದ ಪ್ರಜ್ಞೆ ವಾಪಸ್ ಬಂದಂತೆ ಇತ್ತು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ ಸೌಲನಾಗಿರಲಿಲ್ಲ. ದಾವೀದನು ಇನ್ನೂ ಹೆಚ್ಚು ಯಶಸ್ಸು ಪಡೆದಾಗ, ಸೌಲನ ಹೊಟ್ಟೆಕಿಚ್ಚು ಮತ್ತು ಕೋಪ ನೆತ್ತಿಗೇರಿತು ಹಾಗೂ ದಾವೀದನನ್ನು ಕೊಲ್ಲಲು ಈಟಿಯನ್ನು ಎಸೆದನು! (1 ಸಮುವೇಲ 19:4-6, 9, 10) ಆದರೆ ದಾವೀದನು ಅದರಿಂದ ತಪ್ಪಿಸಿಕೊಂಡು ಸೌಲನ ಅರಮನೆಯಿಂದ ಓಡಿಹೋದನು.
ನೀವು ಯಾವತ್ತಾದರೂ ‘ಯಾರಿಗೆ ನಿಷ್ಠೆ ತೋರಿಸಬೇಕಪ್ಪಾ?’ ಅನ್ನುವ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಾ? ಅದು ತುಂಬ ನೋವು ತರುತ್ತದೆ. ಆಗ ಕೆಲವರು, ನಿಮ್ಮ ಕುಟುಂಬಕ್ಕೆ ಯಾವಾಗಲೂ ಮೊದಲ ಆದ್ಯತೆ ಕೊಡಬೇಕು ಎಂದು ನಿಮಗೆ ಹೇಳಬಹುದು. ಆದರೆ ಯೋನಾತಾನನಿಗೆ ಹಾಗೆ ಮಾಡುವುದು ಸರಿ ಅಲ್ಲ ಎಂದು ತಿಳಿದಿತ್ತು. ದಾವೀದನು ಯೆಹೋವನ ನಿಷ್ಠಾವಂತ ಹಾಗೂ ವಿಧೇಯ ಸೇವಕನಾಗಿರುವಾಗ, ಯೋನಾತಾನನು ಹೇಗೆ ತಾನೇ ತನ್ನ ತಂದೆಯ ಪಕ್ಷದಲ್ಲಿ ನಿಂತುಕೊಳ್ಳಲು ಸಾಧ್ಯ? ಹಾಗಾಗಿ ಯೋನಾತಾನನು ಯೆಹೋವನಿಗೆ ನಿಷ್ಠನಾಗಿದ್ದು ಯಾವುದೇ ಹಿಂಜರಿಕೆಯಿಲ್ಲದೆ ದಾವೀದನ ಪರ ನಿಂತುಕೊಳ್ಳುವ ನಿರ್ಣಯ ಮಾಡಿದನು. ದೇವರಿಗೆ ನಿಷ್ಠೆ ತೋರಿಸುವುದು ಅವನಿಗೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ಅದೇ ಸಮಯದಲ್ಲಿ ಅವನು, ತನ್ನ ತಂದೆ ಕೇಳಿಸಿಕೊಳ್ಳಲು ಬಯಸಿದ್ದನ್ನು ಹೇಳದೆ, ಕೊಡಬೇಕಾಗಿದ್ದ ಸಲಹೆಯನ್ನು ನೇರವಾಗಿ ಕೊಡುವ ಮೂಲಕ ತನ್ನ ತಂದೆಗೂ ನಿಷ್ಠೆ ತೋರಿಸಿದನು. ಯೋನಾತಾನನು ನಿಷ್ಠೆ ತೋರಿಸಿದ ರೀತಿಯನ್ನು ನಾವೆಲ್ಲರೂ ಅನುಕರಿಸಿದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಳ್ಳೇದಾಗುತ್ತದೆ.
ನಿಷ್ಠನಾಗಿರಲು ಮಾಡಿದ ತ್ಯಾಗ
ದಾವೀದ ಮತ್ತು ಸೌಲನನ್ನು ಒಂದಾಗಿಸಲು ಯೋನಾತಾನನು ಪುನಃ ಪ್ರಯತ್ನಿಸಿದನು. ಆದರೆ ಈ ಬಾರಿ ಸೌಲನು ಅದನ್ನು ಕೇಳಿಸಿಕೊಳ್ಳಲಿಕ್ಕೂ ಸಿದ್ಧನಿರಲಿಲ್ಲ. ನಂತರ, ದಾವೀದನು ಯಾರಿಗೂ ಗೊತ್ತಾಗದಂತೆ ಯೋನಾತಾನನ ಹತ್ತಿರ ಬಂದು, ತನ್ನ ಜೀವ ತೆಗೆಯುತ್ತಾರೇನೋ ಅಂತ ಭಯ ಆಗುತ್ತಿದೆ ಎಂದು ಮನ ಬಿಚ್ಚಿ ಹೇಳಿದನು. ತನಗಿಂತ ವಯಸ್ಸಾಗಿದ್ದ ಗೆಳೆಯನ ಹತ್ತಿರ ಬಂದು “ನನಗೂ ಮರಣಕ್ಕೂ ಒಂದು ಗೇಣು ಮಾತ್ರ ಅಂತರವಿದೆ” ಎಂದನು. ಆಗ ಯೋನಾತಾನನು, ದಾವೀದನ ಬಗ್ಗೆ ತನ್ನ ತಂದೆಗೆ ಇರುವ ಅನಿಸಿಕೆಯನ್ನು ತಿಳಿದುಕೊಂಡು ವಿಷಯ ಮುಟ್ಟಿಸುತ್ತೇನೆಂದು ಹೇಳಿದನು. ನಂತರ, ದಾವೀದನಿಗೆ ಅಡಗಿಕೊಳ್ಳಲು ಹೇಳಿ ಯೋನಾತಾನನು ಬಿಲ್ಲು-ಬಾಣಗಳನ್ನು ಉಪಯೋಗಿಸಿ ಸೂಚನೆ ಕೊಡುತ್ತೇನೆ ಎಂದನು. ಯೋನಾತಾನನು ದಾವೀದನಿಂದ ಒಂದೇ ಒಂದು ಪ್ರಮಾಣ ಮಾಡುವಂತೆ ಕೇಳಿಕೊಂಡನು. “ನಾನು ಸತ್ತನಂತರ ನನ್ನ ಮನೆಯ ಮೇಲೆಯೂ ಶಾಶ್ವತವಾಗಿ ನಿನ್ನ ದಯವಿರಲಿ. ಯೆಹೋವನು ನಿನ್ನ ಎಲ್ಲಾ ಶತ್ರುಗಳನ್ನು ಭೂಮಿಯಿಂದ ತೆಗೆದುಹಾಕಿದ ಮೇಲಾದರೂ ಅದು ನನ್ನ ಮನೆಯಿಂದ ಅಗಲದಿರಲಿ” ಅಂದನು. ಅದಕ್ಕೆ ದಾವೀದನು ಒಪ್ಪಿ ಯೋನಾತಾನನ ಮನೆಯವರನ್ನು ಯಾವಾಗಲೂ ನೋಡಿಕೊಳ್ಳುವೆನು ಎಂದು ಮಾತುಕೊಟ್ಟನು.—1 ಸಮುವೇಲ 20:3, 13-27.
ಯೋನಾತಾನನು ಸೌಲನ ಮುಂದೆ ದಾವೀದನ ಪರ ಮಾತಾಡಲು ಪ್ರಯತ್ನಿಸಿದಾಗ ಸೌಲನು ಕೋಪದಿಂದ ಕೆಂಡಾಮಂಡಲನಾದನು! ಯೋನಾತಾನನನ್ನು “ದುಷ್ಟ ದಾಸಿಯ ಮಗನೇ” ಎಂದು ಕರೆದದ್ದಲ್ಲದೆ ಅವನು ದಾವೀದನಿಗೆ ತೋರಿಸುತ್ತಿದ್ದ ನಿಷ್ಠೆಯು ತಮ್ಮ ಕುಟುಂಬಕ್ಕೆ ನಾಚಿಕೆ ತರುವ ವಿಷಯವಾಗಿದೆ ಎಂದು ಅವಹೇಳನ ಮಾಡಿದನು. “ಆ ಇಷಯನ ಮಗನು ಭೂಲೋಕದಲ್ಲಿರುವ ವರೆಗೆ ನಿನಗಾದರೂ ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ . . . ಅವನು ಸಾಯಬೇಕು” ಎಂದು ಹೇಳುವ ಮೂಲಕ ಯೋನಾತಾನನು ತನ್ನ ಸ್ವಾರ್ಥ ಮಾತ್ರ ನೋಡಿಕೊಳ್ಳುವಂತೆ ಸೌಲನು ಪ್ರೋತ್ಸಾಹಿಸಿದನು. ಆದರೆ ಯೋನಾತಾನನು ಸೋಲನ್ನೊಪ್ಪದೆ, ‘ಅವನು ಯಾಕೆ ಸಾಯಬೇಕು? ಅವನು ಏನು ಮಾಡಿದನು?’ ಎಂದು ಕೇಳಿದನು. ಇದನ್ನು ಕೇಳಿಸಿಕೊಂಡ ಸೌಲನು ಸಿಟ್ಟಿನಿಂದ ಸಿಡಿದೆದ್ದು ತನ್ನ ಮಗನ ಮೇಲೆನೇ ಈಟಿಯನ್ನು ಎಸೆದನು! ಸೌಲನಿಗೆ ವಯಸ್ಸಾಗಿದ್ದರೂ, ಶಕ್ತಿಶಾಲಿ, ನಿಪುಣ ಯುದ್ಧವೀರನಾಗಿದ್ದನು! ಆದರೂ ಅವನ ಗುರಿ ತಪ್ಪಿತು. ಯೋನಾತಾನನು ತನ್ನ ಮನಸ್ಸಿಗಾದ ನೋವು, ಅವಮಾನ ಸಹಿಸಲಿಕ್ಕಾಗದೆ ಅಲ್ಲಿಂದ ಹೊರಟು ಹೋದನು.—1 ಸಮುವೇಲ 20:24-34.
ಯೋನಾತಾನ ನಿಸ್ವಾರ್ಥತೆ ತೋರಿಸುವುದರಲ್ಲಿ ಯಶಸ್ವಿಯಾದನು
ಮರುದಿನ ಮುಂಜಾನೆ ಯೋನಾತಾನನು ದಾವೀದನು ಅಡಗಿಕೊಂಡಿದ್ದ ಅಡವಿಯ ಹತ್ತಿರ ಹೋದನು. ಅವರಿಬ್ಬರು ಒಪ್ಪಿದಂತೆಯೇ, ಒಂದು ಬಾಣವನ್ನು ಬಿಟ್ಟನು. ಸೌಲನು ತನ್ನನ್ನು ಸಾಯಿಸಬೇಕು ಎಂದುಕೊಂಡಿದ್ದಾನೆಂದು ದಾವೀದನಿಗೆ ಅದರಿಂದ ಗೊತ್ತಾಯಿತು. ಆಮೇಲೆ ಯೋನಾತಾನನು ತನ್ನ ಸೇವಕನನ್ನು ಊರಿಗೆ ಹಿಂದಿರುಗಲು ಹೇಳಿದನು. ನಂತರ, ಅವನು ಮತ್ತು ದಾವೀದನು ಇಬ್ಬರೇ ಇದ್ದದರಿಂದ ಮಾತಾಡಲು ಸ್ವಲ್ಪ ಸಮಯ ಸಿಕ್ಕಿತು. ಇಬ್ಬರೂ ತುಂಬ ಅತ್ತರು. ತನ್ನ ಸ್ನೇಹಿತ ದಾವೀದನು ನಿರಾಶ್ರಿತನಾಗಿ ಹೊಸ ಬದುಕನ್ನು ನಡೆಸಲು ಹೋಗುವಾಗ ಯೋನಾತಾನನು ದುಃಖದಿಂದ ವಿದಾಯ ಹೇಳಿದನು.—1 ಸಮುವೇಲ 20:35-42.
ಯೋನಾತಾನನು ಕಷ್ಟದ ಪರಿಸ್ಥಿತಿಯಲ್ಲೂ ಸ್ವಾರ್ಥವನ್ನು ಮೆಟ್ಟಿನಿಲ್ಲುವ ಮೂಲಕ ನಿಷ್ಠನಾಗಿ ಉಳಿದನು. ಸೌಲನಂತೆಯೇ ಯೋನಾತಾನನು ಸಹ ಅಧಿಕಾರ, ಹೆಸರು ಎಂಬ ಹೆಬ್ಬಯಕೆಗಳನ್ನು ಬೆನ್ನಟ್ಟಬೇಕೆಂದು ಸೈತಾನನು ಖಂಡಿತ ಆಸೆಪಟ್ಟಿರಬೇಕು. ನೆನಪಿಡಿ, ಎಲ್ಲಾ ನಂಬಿಗಸ್ತರ ವೈರಿಯಾಗಿರುವ ಈ ಸೈತಾನನು, ಮಾನವರನ್ನು ಸ್ವಾರ್ಥ ಬಯಕೆಗಳ ಪ್ರಕಾರ ನಡೆಯುವಂತೆ ಪ್ರೇರೇಪಿಸುತ್ತಾನೆ. ನಮ್ಮ ಮೊದಲ ತಂದೆ-ತಾಯಿ ಈ ಪಾಶದಲ್ಲಿ ಸಿಕ್ಕಿಹಾಕಿಕೊಂಡರು. (ಆದಿಕಾಂಡ 3:1-6) ಆದರೆ, ಯೋನಾತಾನನು ಸಿಕ್ಕಿಹಾಕಿಕೊಳ್ಳದೆ ಸೈತಾನನ್ನು ಸೋಲಿಸಿದನು. ಇದರಿಂದ ಸೈತಾನನಿಗೆ ಎಷ್ಟು ಮೈ ಉರಿದಿರಬೇಕು! ನೀವೂ ಸೈತಾನನನ್ನು ಸೋಲಿಸುತ್ತೀರಾ? ನಾವು ಜೀವಿಸುತ್ತಿರುವ ಈ ಕಾಲದಲ್ಲಿ ಸ್ವಾರ್ಥ ಎಲ್ಲಾ ಕಡೆ ಹಬ್ಬಿದೆ, ಎಲ್ಲರನ್ನೂ ಆವರಿಸಿದೆ. (2 ತಿಮೊಥೆಯ 3:1-5) ಯೋನಾತಾನನ ನಿಸ್ವಾರ್ಥ, ನಿಷ್ಠಾವಂತ ಮನೋಭಾವವನ್ನು ನಾವೂ ಅನುಕರಿಸುತ್ತೇವಾ?
“ನೀನು ನನಗೆ ಬಹುಮನೋಹರನಾಗಿದ್ದಿ”
ಸಮಯ ಕಳೆದಂತೆ, ಸೌಲನಿಗೆ ದಾವೀದನ ಮೇಲಿದ್ದ ದ್ವೇಷ ಬೆಳೆದು ಹೆಮ್ಮರವಾಗಿಬಿಟ್ಟಿತ್ತು. ಒಬ್ಬ ನಿರಪರಾಧಿಯನ್ನು ಹುಡುಕಿ ಕೊಲ್ಲಲು ಸೌಲನು ಒಂದು ದೊಡ್ಡ ಸೈನ್ಯವನ್ನೇ ಕಟ್ಟಿಕೊಂಡು ದೇಶವೆಲ್ಲ ಸುತ್ತುತ್ತಿದ್ದನು. ತನ್ನ ತಂದೆ ಒಂದು ರೀತಿ ಹುಚ್ಚನಂತೆ ವರ್ತಿಸುತ್ತಿದ್ದರೂ ಯೋನಾತಾನನಿಗೆ ಅವನನ್ನು ತಡೆಯಲು ಆಗಲಿಲ್ಲ. (1 ಸಮುವೇಲ 24:1, 2, 12-15; 26:20) ಹಾಗಂತ ಅವನೂ ಸೌಲನ ಜೊತೆ ಸೇರಿದನಾ? ಯೋನಾತಾನನು ಈ ತಪ್ಪಾದ ಕೆಲಸಕ್ಕೆ ಯಾವುದೇ ಬೆಂಬಲ ನೀಡಿದ್ದನೆನ್ನಲು ಬೈಬಲಿನಲ್ಲೆಲ್ಲೂ ಆಧಾರ ಇಲ್ಲ. ಯೋನಾತಾನನಿಗೆ ಯೆಹೋವನ ಕಡೆಗೆ, ದಾವೀದನ ಕಡೆಗೆ ಮತ್ತು ತಾನು ಮಾಡಿದ ಸ್ನೇಹ-ಒಪ್ಪಂದದ ಕಡೆಗೆ ಇದ್ದ ನಿಷ್ಠೆ ಅವನಿಗೆ ಈ ರೀತಿ ನಡೆದುಕೊಳ್ಳಲು ಸಹಾಯ ಮಾಡಿತು.
ತನ್ನ ಸ್ನೇಹಿತನ ಕಡೆಗೆ ಯೋನಾತಾನನಿಗಿದ್ದ ಭಾವನೆಗಳು ಯಾವತ್ತೂ ಬದಲಾಗಲಿಲ್ಲ. ಸಮಯಾನಂತರ ಅವನು “ಕಾಡು” ಎಂಬ ಅರ್ಥವಿರುವ ಹೋರೆಷದಲ್ಲಿ ದಾವೀದನನ್ನು ಭೇಟಿಯಾದನು. ಇದು ಗುಡ್ಡಗಾಡಿನ ಅರಣ್ಯಪ್ರದೇಶವಾಗಿತ್ತು ಮತ್ತು ಹೆಬ್ರೋನಿನಿಂದ ಕೆಲವು ಮೈಲು ದೂರ ಆಗ್ನೇಯ ದಿಕ್ಕಿನಲ್ಲಿತ್ತು. ಯೋನಾತಾನನಿಗೆ ಅಪಾಯವಿದ್ದರೂ ಈ ಅಲೆಮಾರಿಯನ್ನು ಭೇಟಿಯಾಗಲು ಯಾಕೆ ಹೋದನು? ದಾವೀದನನ್ನು ‘ದೇವರಲ್ಲಿ ಬಲಪಡಿಸಲಿಕ್ಕಾಗಿ’ ಹೋದನು ಎಂದು ಬೈಬಲ್ ಹೇಳುತ್ತದೆ. (1 ಸಮುವೇಲ 23:15-17) ಯೋನಾತಾನನು ಅದನ್ನು ಹೇಗೆ ಮಾಡಿದನು?
ದಾವೀದನಿಗೆ ಅವನು, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವದಿಲ್ಲ” ಎಂಬ ಆಶ್ವಾಸನೆ ಕೊಟ್ಟನು. ಯಾವ ಆಧಾರದ ಮೇಲೆ ಈ ಆಶ್ವಾಸನೆ ಕೊಟ್ಟನು? ಯೆಹೋವನ ವಾಗ್ದಾನಗಳು ನೆರವೇರುತ್ತವೆ ಎಂಬ ದೃಢ ನಂಬಿಕೆ ಇದ್ದದರಿಂದಲೇ ಯೋನಾತಾನನು ಹಾಗೆ ಹೇಳಿದನು. ನಂತರ, “ನೀನು ಇಸ್ರಾಯೇಲ್ಯರ ಅರಸನಾಗುವಿ” ಎಂದನು. ವರ್ಷಗಳ ಹಿಂದೆ ದೇವರು ಇದೇ ಮಾತುಗಳನ್ನು ಪ್ರವಾದಿಯಾದ ಸಮುವೇಲನ ಮೂಲಕ ಹೇಳಿಸಿದ್ದನು. ಯೋನಾತಾನನು ಅದನ್ನೇ ಪುನಃ ಹೇಳುವ ಮೂಲಕ ಯೆಹೋವನ ಮಾತನ್ನು ಯಾವಾಗಲೂ ನಂಬಬಹುದು ಎಂದು ದಾವೀದನಿಗೆ ನೆನಪಿಸಿದನು. ಯೋನಾತಾನನು ಮುಂದೆ ಏನಾಗಬೇಕು ಅಂದುಕೊಂಡಿದ್ದನು? “ನಾನು ನಿನಗೆ ಎರಡನೆಯವನಾಗಿರುವೆನು” ಎಂದನು. ಅವನು ಬೆಲೆಕಟ್ಟಲು ಆಗದಂಥ ದೀನತೆ ತೋರಿಸಿದ್ದನು! ತನಗಿಂತ 30 ವರ್ಷ ಚಿಕ್ಕವನಾಗಿದ್ದ ದಾವೀದನ ಆದೇಶದ ಕೆಳಗೆ ಕೆಲಸ ಮಾಡಿ ಅವನಿಗೆ ಬೆಂಬಲ ನೀಡುವುದರಲ್ಲೇ ತೃಪ್ತಿ ಕಾಣಲು ಬಯಸಿದನು! ಕೊನೆಗೆ ಅವನು, “ಹೀಗಾಗುವದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ” ಎಂದನು. (1 ಸಮುವೇಲ 23:17, 18) ಯೆಹೋವನು ಆರಿಸಿಕೊಂಡಿರುವ ಭಾವೀ ರಾಜನ ವಿರುದ್ಧ ಹೋರಾಡಿ ಜಯಿಸುವುದು ಅಸಾಧ್ಯ ಎಂದು ಸೌಲನಿಗೆ ಗೊತ್ತಿತ್ತು.
ಮುಂದಿನ ಕೆಲವು ವರ್ಷಗಳವರೆಗೆ ದಾವೀದನು ಖಂಡಿತ ಆ ಭೇಟಿಯನ್ನು ಆಗಾಗ್ಗೆ ನೆನಪಿಸಿಕೊಂಡಿರಬೇಕು. ಆಗೆಲ್ಲಾ ಅವನ ಮನಸ್ಸಿಗೆ ಹಿತವೆನಿಸಿರಬೇಕು. ಅದು ಅವರಿಬ್ಬರ ಕೊನೆಯ ಭೇಟಿಯಾಗಿತ್ತು. ದುಃಖಕರವಾಗಿ, ದಾವೀದನಿಗೆ ಎರಡನೆಯವನಾಗಿ ಬೆಂಬಲಕೊಡಬೇಕೆಂಬ ಯೋನಾತಾನನ ಆಸೆ ನೆರವೇರಲೇ ಇಲ್ಲ.
ಇಸ್ರಾಯೇಲ್ಯರ ಶತ್ರುಗಳಾದ ಫಿಲಿಷ್ಟಿಯರ ವಿರುದ್ಧ ಯೋನಾತಾನನು ತನ್ನ ತಂದೆ ಜೊತೆ ಯುದ್ಧಕ್ಕೆ ಹೋದನು. ತನ್ನ ತಂದೆ ಎಷ್ಟೇ ತಪ್ಪು ಮಾಡಿದ್ದರೂ ಅವನ ಜೊತೆ ಯುದ್ಧದಲ್ಲಿ ಹೋರಾಡುವಾಗ ಯೋನಾತಾನನ ಮನಸ್ಸಾಕ್ಷಿ ಚುಚ್ಚಲಿಲ್ಲ. ಯಾಕೆಂದರೆ ಅವನು ಯಾವಾಗಲೂ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡುತ್ತಿದ್ದನು. ಈಗ ಸಹ ಅವನು ಸೌಲನ ಜೊತೆ ಸೇರಿ ಯುದ್ಧ ಮಾಡುವಾಗ, ಯೆಹೋವನ ಶತ್ರುಗಳ ವಿರುದ್ಧ ಹೋರಾಡುತ್ತಿದ್ದೇನೆಂದು ಯೋಚಿಸಿ ಹೋಗಿರಬಹುದು. ಮುಂಚಿನಂತೆಯೇ ಈಗಲೂ ಅವನು ನಿಷ್ಠಾವಂತನಾಗಿ ಧೈರ್ಯದಿಂದ ಹೋರಾಡಿದನು. ಆದರೂ ಇಸ್ರಾಯೇಲ್ಯರು ಯುದ್ಧದಲ್ಲಿ ಸೋತುಹೋದರು. ಯಾಕೆಂದರೆ, ಸೌಲ ಎಷ್ಟು ದುಷ್ಟನಾಗಿದ್ದನೆಂದರೆ ಪ್ರೇತವ್ಯವಹಾರಕ್ಕೂ ಕೈಹಾಕಿದ್ದನು. ಇದು ಯೆಹೋವನ ಧರ್ಮಶಾಸ್ತ್ರದ ಪ್ರಕಾರ ತುಂಬ ಗಂಭೀರ ತಪ್ಪಾಗಿತ್ತು. ಹಾಗಾಗಿ ಯೆಹೋವನು ಸೌಲನನ್ನು ಆಶೀರ್ವದಿಸುವುದನ್ನು ಬಿಟ್ಟುಬಿಟ್ಟಿದ್ದನು. ಯೋನಾತಾನನನ್ನೂ ಸೇರಿಸಿ ಸೌಲನ ಮೂರು ಮಂದಿ ಮಕ್ಕಳೂ ಯುದ್ಧದಲ್ಲಿ ತೀರಿಹೋದರು. ಸೌಲನಿಗೆ ಗಾಯವಾಗಿತ್ತು. ತನ್ನ ಪ್ರಾಣವನ್ನು ತಾನೇ ತೆಗೆದುಕೊಂಡನು.—1 ಸಮುವೇಲ 28:6-14; 31:2-6.
“ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು,” ಎಂದು ಯೋನಾತಾನನು ಹೇಳಿದನು.—1 ಸಮುವೇಲ 23:17
ಇದನ್ನು ತಿಳಿದ ದಾವೀದನು ದುಃಖದಿಂದ ಕುಗ್ಗಿಹೋದನು. ತನಗೆ ಎಷ್ಟೋ ಕಾಟ ಕೊಟ್ಟು ಕಷ್ಟಕ್ಕೆ ಸಿಕ್ಕಿಸಿದ್ದ ಸೌಲನಿಗೋಸ್ಕರನೂ ನೊಂದುಕೊಂಡನು! ದಾವೀದನದ್ದು ಎಂಥ ದೊಡ್ಡ ಮನಸ್ಸು! ದಾವೀದನು ಸೌಲ ಯೋನಾತನರ ಬಗ್ಗೆ ಒಂದು ಶೋಕ ಗೀತೆಯನ್ನು ರಚಿಸಿದನು. ಅದರಲ್ಲಿ ಅವನು, “ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ; ನೀನು ನನಗೆ ಬಹುಮನೋಹರನಾಗಿದ್ದಿ. ನನ್ನ ಮೇಲಿದ್ದ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದೇ ಸರಿ; ಅದು ಸತೀಪ್ರೇಮಕ್ಕಿಂತ ಶ್ರೇಷ್ಠವಾದದ್ದು” ಎಂದು ಬರೆದನು.(2 ಸಮುವೇಲ 1:26) ಇವು ಅವನು ತನ್ನ ಅಚ್ಚುಮೆಚ್ಚಿನ ಸಲಹೆಗಾರ ಹಾಗೂ ಸ್ನೇಹಿತನ ಬಗ್ಗೆ ಬರೆದ ಅತಿ ಹೆಚ್ಚು ಮನಕಲಕುವ ಮಾತುಗಳು.
ದಾವೀದನು ಯೋನಾತಾನನಿಗೆ ಕೊಟ್ಟ ಮಾತನ್ನು ಮರೆಯದೆ ನಿಷ್ಠೆ ತೋರಿಸಿದನು. ಯೋನಾತಾನನ ವಿಕಲಚೇತನ ಮಗನಾಗಿದ್ದ ಮೆಫೀಬೋಶೆತನನ್ನು ಹುಡುಕಿ, ಚೆನ್ನಾಗಿ ನೋಡಿಕೊಂಡನು. (2 ಸಮುವೇಲ 9:1-13) ಈ ಗುಣವನ್ನು ದಾವೀದನು ಹೇಗೆ ಕಲಿತಿರಬಹುದು? ಹಿಂದೆ ಯೋನಾತಾನನು ದಾವೀದನಿಗೆ ನಿಷ್ಠೆ, ಗೌರವ ತೋರಿಸಿದ್ದನು, ದೊಡ್ಡ ತ್ಯಾಗ ಮಾಡಬೇಕಾಗಿ ಬಂದರೂ ನಿಷ್ಠನಾಗಿರಲು ಸಿದ್ಧನಾಗಿದ್ದನು. ಈಗ ದಾವೀದನು ಸಹ ಅದನ್ನೇ ಮಾಡಿದ್ದನು. ಇದರಿಂದ ನಾವೇನು ಕಲಿಯುತ್ತೇವೆ? ಯೋನಾತಾನನಂಥ ವ್ಯಕ್ತಿಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವಾ? ನಾವೂ ಅಂಥ ಸ್ನೇಹಿತರಾಗಿದ್ದೇವಾ? ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಹಾಗೂ ಬಲಪಡಿಸಿಕೊಳ್ಳಲು ನಮ್ಮ ಸ್ನೇಹಿತರಿಗೆ ಸಹಾಯ ಮಾಡುತ್ತೇವಾ? ಏನೇ ಆದರೂ ದೇವರಿಗೆ ನಿಷ್ಠೆ ತೋರಿಸುತ್ತೇವಾ? ನಮ್ಮ ಸ್ವಾರ್ಥವನ್ನು ನೋಡಿಕೊಳ್ಳದೆ ಸ್ನೇಹಿತರಿಗೆ ನಿಷ್ಠಾವಂತರಾಗಿ ಉಳಿಯುತ್ತೇವಾ? ಹೀಗೆ ಮಾಡಿದರೆ ನಾವು ಯೋನಾತಾನನಂಥ ಸ್ನೇಹಿತರಾಗಲು ಮತ್ತು ಆತನ ನಂಬಿಕೆಯನ್ನು ಅನುಕರಿಸಲು ಸಾಧ್ಯ.
^ ಪ್ಯಾರ. 10 ಯೋನಾತಾನನ ಕುರಿತು ಬೈಬಲಿನಲ್ಲಿರುವ ಮೊಟ್ಟಮೊದಲ ದಾಖಲೆಯಲ್ಲಿ ಅವನು ಸೌಲನ ಆಡಳಿತದ ಕೆಳಗೆ ಒಬ್ಬ ಸೇನಾಪತಿ ಆಗಿದ್ದನೆಂದು ತಿಳಿಸಲಾಗಿದೆ. ಹಾಗಾದರೆ ಆಗ ಅವನಿಗೆ 20 ವರ್ಷವಾದರೂ ಆಗಿದ್ದಿರಬೇಕು. (ಅರಣ್ಯಕಾಂಡ 1:3; 1 ಸಮುವೇಲ 13:2) ಸೌಲನು 40 ವರ್ಷ ಆಳಿದನು. ಹಾಗಾಗಿ ಸೌಲನ ಮರಣದ ಸಮಯದಲ್ಲಿ, ಯೋನಾತಾನನಿಗೆ 60 ವರ್ಷ ಆಗಿರಬಹುದು. ಸೌಲನು ಸತ್ತಾಗ ದಾವೀದನಿಗೆ 30 ವರ್ಷ ಆಗಿತ್ತು. (1 ಸಮುವೇಲ 31:2; 2 ಸಮುವೇಲ 5:4) ಹಾಗಾದರೆ, ದಾವೀದನಿಗಿಂತ ಯೋನಾತಾನನು 30 ವರ್ಷ ದೊಡ್ಡವನಾಗಿದ್ದನೆಂದು ಕಾಣುತ್ತದೆ.