ಅವರ ನಂಬಿಕೆಯನ್ನು ಅನುಕರಿಸಿ | ಯೋನಾತಾನ
‘ಯೆಹೋವನಿಗೆ ಯಾವುದೂ ಅಸಾಧ್ಯವಲ್ಲ’
ಸೇನೆಯ ಠಾಣೆಯನ್ನು ಬಿಟ್ಟರೆ ಅಲ್ಲಿ ಏನೂ ಇಲ್ಲ. ಹೊರಗೆ ದೊಡ್ಡ ಕಲ್ಲುಗಳಿಂದ ತುಂಬಿದ ಒಂದು ಬಂಜರು ಪ್ರದೇಶ. ಅಲ್ಲಿದ್ದ ಫಿಲಿಷ್ಟಿಯ ಸೈನಿಕರಿಗೆ, ಆ ವೈವಿಧ್ಯರಹಿತ ಕಡಿದಾದ ಪ್ರದೇಶದಲ್ಲಿ ಏನನ್ನೋ ಕಂಡು ಆಸಕ್ತಿ ಕೆರಳುತ್ತೆ. ಕಣಿವೆಯ ಆಚೆಗೆ ಇಬ್ಬರು ಇಸ್ರಾಯೇಲ್ಯ ಸೈನಿಕರು ನಿಂತಿದ್ದಾರೆ. ಅದನ್ನು ನೋಡಿ ಫಿಲಿಷ್ಟಿಯ ಸೈನಿಕರಿಗೆ ತಮಾಷೆ ಅನಿಸುತ್ತದೆ ಏಕೆಂದರೆ ಅಲ್ಲಿಂದ ಅವರಿಬ್ಬರಿಗೆ ಏನೂ ಮಾಡಲಿಕ್ಕಾಗುವುದಿಲ್ಲ. ಫಿಲಿಷ್ಟಿಯರು ತುಂಬ ದಿನಗಳಿಂದ ಇಸ್ರಾಯೇಲ್ಯರನ್ನು ದಬ್ಬಾಳಿಕೆ ಮಾಡಿದ್ದರು. ಇಸ್ರಾಯೇಲ್ಯರು ತಮ್ಮ ಲೋಹದ ವ್ಯವಸಾಯ ಸಾಧನಗಳನ್ನು, ತಮ್ಮ ವೈರಿಗಳಾದ ಫಿಲಿಷ್ಟಿಯರ ಕಡೆ ಸಹಾಯ ಕೇಳದೆ ಹರಿತ ಮಾಡಲು ಸಹ ಆಗುತ್ತಿರಲಿಲ್ಲ. ಹಾಗಾಗಿ ಇಸ್ರಾಯೇಲ್ಯ ಸೈನಿಕರ ಹತ್ತಿರ ಅಷ್ಟು ಆಯುಧಗಳಿರಲಿಲ್ಲ. ಅಷ್ಟೇ ಅಲ್ಲ, ಈಗ ಬರೀ ಇಬ್ಬರೇ ಬಂದಿದ್ದರು! ಅವರ ಹತ್ತಿರ ಆಯುಧಗಳು ಇದ್ದಿದ್ದರೂ, ಏನು ತಾನೇ ಮಾಡಲು ಆಗುತ್ತಿತ್ತು? ಆದ್ದರಿಂದ ಫಿಲಿಷ್ಟಿಯರು, “ಹತ್ತಿ ನಮ್ಮ ಬಳಿಗೆ ಬನ್ನಿರಿ; ನಿಮಗೆ ಕಾರ್ಯತೋರಿಸಿಕೊಡುತ್ತೇವೆ” ಅಂದರೆ ‘ಪಾಠ ಕಲಿಸುತ್ತೇವೆ’ ಎಂದು ಹೀಯಾಳಿಸಿದರು.—1 ಸಮುವೇಲ 13:19-23; 14:11, 12.
ಹೌದು, ಒಂದು ಪಾಠ ಕಲಿಯಲ್ಲಿಕ್ಕಿದ್ದರು. ಆದರೆ ಅದನ್ನು ಕಲಿಯಲಿಕ್ಕಿದ್ದವರು ಇಸ್ರಾಯೇಲ್ಯರಲ್ಲ, ಫಿಲಿಷ್ಟಿಯರು. ಆ ಇಬ್ಬರು ಇಸ್ರಾಯೇಲ್ಯರು ಕಣಿವೆಯಲ್ಲಿ ಇಳಿದು, ಈ ಬದಿಗೆ ಬಂದು, ಅದನ್ನು ಹತ್ತಲು ಶುರು ಮಾಡಿದರು. ಆ ಕಣಿವೆ ಎಷ್ಟು ಕಡಿದಾಗಿತ್ತೆಂದರೆ, ಅದನ್ನು ಹತ್ತಲು ಅವರು ಕೈಕಾಲುಗಳೆರಡನ್ನೂ ಬಳಸಬೇಕಾಯಿತು. ಆದರೂ ಹತ್ತುವುದನ್ನು ನಿಲ್ಲಿಸಲಿಲ್ಲ. ಆ ಫಿಲಿಷ್ಟಿಯರ ಠಾಣೆಯ ಕಡೆಗೇ ಹೊರಟಿದ್ದರು. (1 ಸಮುವೇಲ 14:13) ಮುಂದಾಳತ್ವ ತೆಗೆದುಕೊಂಡಿದ್ದ ವ್ಯಕ್ತಿಯ ಹತ್ತಿರ ಆಯುಧಗಳಿದ್ದವೆಂದು, ಮತ್ತು ಅವನ ಹಿಂದೆ ಬರುತ್ತಿದ್ದವನು ಆಯುಧ ಹೊರುವವನು ಎಂದು ಫಿಲಿಷ್ಟಿಯ ಸೈನಿಕರಿಗೆ ಈಗ ಕಾಣುತ್ತಿತ್ತು. ಆದರೆ ಬರೀ ಇಬ್ಬರು ಸೇರಿ ಒಂದು ಇಡೀ ಸೈನಿಕರ ದಳದ ಮೇಲೆ ದಾಳಿ ಮಾಡಬೇಕಂತ ಅವನು ಅಂದುಕೊಂಡಿದ್ದನಾ? ಅವನಿಗೇನು ತಲೆ ಕೆಟ್ಟಿತ್ತಾ?
ಅವನಿಗೆ ತಲೆ ಕೆಟ್ಟಿರಲಿಲ್ಲ, ಬದಲಿಗೆ ಅಛಲ ನಂಬಿಕೆ ಇತ್ತು. ಅವನ ಹೆಸರು ಯೋನಾತಾನ. ಅವನ ಕಥೆಯಲ್ಲಿ ಇಂದಿನ ಸತ್ಯ ಕ್ರೈಸ್ತರಿಗೋಸ್ಕರ ಪಾಠಗಳು ತುಂಬಿವೆ. ನಾವು ಯುದ್ಧಕ್ಕೆ ಹೋಗುವುದಿಲ್ಲವಾದರೂ, ನಿಜ ನಂಬಿಕೆಯನ್ನು ಕಟ್ಟುವುದಕ್ಕೆ ಬೇಕಾಗಿರುವ ಧೈರ್ಯ, ನಿಷ್ಠೆ, ನಿಸ್ವಾರ್ಥತೆಯ ಬಗ್ಗೆ ಯೋನಾತಾನನಿಂದ ಕಲಿಯಲು ಸಾಕಷ್ಟಿದೆ.—ಯೆಶಾಯ 2:4; ಮತ್ತಾಯ 26:51, 52.
ನಿಷ್ಟಾವಂತ ಮಗ, ಧೀರ ಸೈನಿಕ
ಯೋನಾತಾನ ಯಾಕೆ ಆ ಸೈನಿಕರ ಠಾಣೆಯನ್ನು ದಾಳಿ ಮಾಡಿದ ಅಂತ ಅರ್ಥಮಾಡಿಕೊಳ್ಳಲು ಅವನ ಹಿನ್ನಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಅವನು ಇಸ್ರಾಯೇಲಿನ ಮೊದಲನೇ ರಾಜನಾಗಿದ್ದ ಸೌಲನ ಹಿರಿಯ ಮಗನಾಗಿದ್ದನು. ಸೌಲನು ರಾಜನಾಗಿ ಅಭಿಷೇಕಿಸಲ್ಪಟ್ಟಾಗ ಯೋನಾತಾನನು ಬೆಳೆದು ದೊಡ್ಡವನಾಗಿದ್ದನು. ಆಗ ಅವನು ಬಹುಶಃ 20 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವನು ಆಗಿದ್ದಿರಬೇಕು. ಯೋನಾತಾನನು ತನ್ನ ತಂದೆಯ ಜೊತೆ ಆಪ್ತ ಸಂಬಂಧವನ್ನಿಟ್ಟುಕೊಂಡಿದ್ದನು ಅಂತ ಕಾಣುತ್ತದೆ. ಸೌಲನು, ತನ್ನ ಮಗನಲ್ಲಿ ಪೂರ್ತಿ ಭರವಸೆ ಇಟ್ಟು ಅವನ ಹತ್ತಿರ ಬಿಚ್ಚು ಮನಸ್ಸಿನಿಂದ ಮಾತಾಡುತ್ತಿದ್ದನು. ಆ ಸಮಯದಲ್ಲಿ ಯೋನಾತಾನನು, ತನ್ನ ತಂದೆಯನ್ನು ಒಬ್ಬ ಎತ್ತರವಾದ, ಚೆಲುವಿನ ಪುರುಷನಾಗಿ ಮತ್ತು ಧೈರ್ಯವಂತ ಯೋಧನಾಗಿ ಮಾತ್ರ ನೋಡಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ತನ್ನ ತಂದೆ ನಂಬಿಕೆ ಮತ್ತು ದೀನತೆಯ ವ್ಯಕ್ತಿ ಎಂದು ಗುರುತಿಸಿದ್ದನು. ಸೌಲನನ್ನೇ ರಾಜನಾಗಿ ಯೆಹೋವನು ನೇಮಿಸಿದ್ದೇಕೆ ಎಂದು ಯೋನಾತಾನನಿಗೆ ಚೆನ್ನಾಗಿ ಅರ್ಥವಾಗಿತ್ತು. ಇಡೀ ದೇಶದಲ್ಲಿ ಸೌಲನಂತೆ ಇನ್ಯಾರೂ ಇಲ್ಲ ಎಂದು ಪ್ರವಾದಿ ಸಮುವೇಲನು ಸಹ ಹೇಳಿದ್ದನು.—1 ಸಮುವೇಲ 9:1, 2, 21; 10:20-24; 20:2.
ತನ್ನ ತಂದೆಯ ನಾಯಕತ್ವದ ಕೆಳಗೆ, ಯೆಹೋವನ ಜನರ ಶತ್ರುಗಳ ವಿರುದ್ಧ ಯುದ್ಧ ಮಾಡುವುದನ್ನು ಯೋನಾತಾನನು ತನಗೆ ಸಿಕ್ಕ ಗೌರವ ಎಂದು ಪರಿಗಣಿಸಿರಬೇಕು. ಆ ಯುದ್ಧಗಳು ಇವತ್ತು ದೇಶಾಭಿಮಾನದಿಂದ ನಡೆಯುವ ಉಗ್ರ ಸಂಘರ್ಷಗಳಂತೆ ಇರಲಿಲ್ಲ. ಆಗಿನ ಕಾಲದಲ್ಲಿ, ಇಸ್ರಾಯೇಲ್ ದೇಶವನ್ನು ಯೆಹೋವನು ತನ್ನನ್ನು ಪ್ರತಿನಿಧಿಸುವಂತೆ ಆಯ್ಕೆ ಮಾಡಿದ್ದನು. ಆದರೆ ಆ ದೇಶವು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದ ದೇಶಗಳಿಂದ ಸತತವಾಗಿ ದಾಳಿಗಳನ್ನು ಅನುಭವಿಸುತ್ತಿತ್ತು. ಫಿಲಿಷ್ಟಿಯರು ದಾಗೋನನಂಥ ದೇವರುಗಳ ಆರಾಧನೆಯಿಂದ ಪ್ರಭಾವಿತರಾಗಿ ಯೆಹೋವನು ಆರಿಸಿಕೊಂಡ ಜನರನ್ನು ಆಗಿಂದಾಗ್ಗೆ ಹಿಂಸಿಸಲು ಮಾತ್ರವಲ್ಲ, ನಾಶ ಮಾಡಲು ಸಹ ಪ್ರಯತ್ನಿಸುತ್ತಿದ್ದರು.
ಹಾಗಾಗಿ ಯೋನಾತಾನನಂಥವರಿಗೆ, ಯುದ್ಧ ಮಾಡುವುದು ಯೆಹೋವ ದೇವರಿಗೆ ಸಲ್ಲಿಸುವ ನಿಷ್ಠಾವಂತ ಸೇವೆಯಾಗಿತ್ತು. ಯೆಹೋವನು ಅವನ ಪ್ರಯತ್ನಗಳನ್ನು ಆಶೀರ್ವದಿಸಿದನು. ಸೌಲನು ರಾಜನಾಗಿ ಸ್ವಲ್ಪ ಸಮಯದಲ್ಲಿ, ತನ್ನ ಮಗನನ್ನು 1,000 ಸೈನಿಕರ ಮೇಲೆ ನಾಯಕನಾಗಿ ನೇಮಿಸಿದನು. ಯೋನಾತಾನನು ಅವರನ್ನು ಗೆಬದಲ್ಲಿದ್ದ ಫಿಲಿಷ್ಟಿಯರ ದಂಡಿನ ಮೇಲೆ ದಾಳಿ ಮಾಡುವಂತೆ ನಡೆಸಿದನು. ಅವನ ಸೈನಿಕರು ಅಷ್ಟೇನು ಆಯುಧಗಳನ್ನು ಹೊಂದಿರಲಿಲ್ಲವಾದರೂ, ಯೋನಾತಾನ ಯೆಹೋವನ ಸಹಾಯದಿಂದ ಯುದ್ಧದಲ್ಲಿ ಗೆದ್ದನು. ಆದರೆ ಇದಕ್ಕೆ ಪ್ರತಿಯಾಗಿ, ಫಿಲಿಷ್ಟಿಯರು ಒಂದು ದೊಡ್ಡ ಸೇನೆಯನ್ನು ಕಟ್ಟಿದರು. ಸೌಲನ ಸೈನಿಕರು ಇದನ್ನು ತಿಳಿದು ಭಯಬಿದ್ದರು. ಕೆಲವರು ಓಡಿಹೋಗಿ ಅಡಗಿಕೊಂಡರು, ಇನ್ನು ಕೆಲವರಂತೂ ಫಿಲಿಷ್ಟಿಯರ ಜೊತೆ ಸೇರಿಕೊಂಡರು! ಇಷ್ಟಾದರೂ ಯೋನಾತಾನನ ಧೈರ್ಯ ಕುಗ್ಗಿಹೋಗಲಿಲ್ಲ.—1 ಸಮುವೇಲ 13:2-7; 14:21.
ಆರಂಭದಲ್ಲಿ ವರ್ಣಿಸಿದ ದಿನದಂದು, ಯೋನಾತಾನನು ತನ್ನ ಸೈನ್ಯದವರಿಗೆ ಗೊತ್ತಾಗದೇ ಬರೀ ತನ್ನ ಆಯುಧಗಳನ್ನು ಹೊರುವವನ ಜೊತೆ ಮಿಕ್ಮಾಷಿನಲ್ಲಿದ್ದ ಫಿಲಿಷ್ಟಿಯ ಸೈನ್ಯದ ಪಾಳೆಯದ ಕಡೆಗೆ ಹೋಗಲು ನಿರ್ಧರಿಸಿದ್ದನು. ಪಾಳೆಯವನ್ನು ಸಮೀಪಿಸಿದಾಗ ಆಯುಧ ಹೊರುವವನಿಗೆ ತಾನು ಮಾಡಿದ್ದ ಯೋಜನೆಯನ್ನು ತಿಳಿಸಿದನು. ಅವರು ಫಿಲಿಷ್ಟಿಯ ಸೈನಿಕರಿಗೆ ಕಾಣುವಂತೆ ನಿಂತುಕೊಳ್ಳಬೇಕು. ಆಗ, ಫಿಲಿಷ್ಟಿಯರು ತಮ್ಮನ್ನು ಎದುರಿಸಲು ಕರೆದರೆ, ಯೆಹೋವನು ತನ್ನ ಸೇವಕರಿಗೆ ಸಹಾಯ ಮಾಡುತ್ತಾನೆನ್ನಲು ಅದು ಒಂದು ಸೂಚನೆ ಆಗಿರುವುದು ಎಂದು ಹೇಳಿದನು. ಆಯುಧ ಹೊರುವವನು ತಕ್ಷಣ ಒಪ್ಪಿಕೊಂಡನು. ಬಹುಶಃ ಯೋನಾತಾನ ಹೇಳಿದ ಈ ಪ್ರಬಲವಾದ ಮಾತು ಅವನಿಗೆ ಧೈರ್ಯ ನೀಡಿರಬೇಕು: “ಬಹುಜನರಿಂದಾದರೂ ಸ್ವಲ್ಪಜನರಿಂದಾದರೂ ರಕ್ಷಿಸುವದು ಯೆಹೋವನಿಗೆ ಅಸಾಧ್ಯವಲ್ಲ.” (1 ಸಮುವೇಲ 14:6-10) ಹಾಗಂದರೆ ಏನು?
ಇದರಿಂದ, ಯೋನಾತಾನನು ತನ್ನ ದೇವರನ್ನು ಚೆನ್ನಾಗಿ ತಿಳಿದುಕೊಂಡಿದ್ದನು ಅನ್ನೋದು ವ್ಯಕ್ತ. ಈ ಹಿಂದೆ, ತಮಗಿಂತ ಹೆಚ್ಚು ಸಂಖ್ಯೆಯಲ್ಲಿರುವ ಶತ್ರುಗಳನ್ನು ಸೋಲಿಸಲು ಯೆಹೋವನು ತನ್ನ ಜನರಿಗೆ ಸಹಾಯ ಮಾಡಿದ್ದನು ಎಂದು ಅವನಿಗೆ ಖಂಡಿತ ತಿಳಿದಿತ್ತು. ಜಯ ಸಾಧಿಸಲು, ಕೆಲವೊಮ್ಮೆ ಯೆಹೋವನು ಒಬ್ಬನೇ ಒಬ್ಬ ವ್ಯಕ್ತಿಯನ್ನು ಕೂಡ ಉಪಯೋಗಿಸಿದ್ದನು. (ನ್ಯಾಯಸ್ಥಾಪಕರು 3:31; 4:1-23; 16:23-30) ಹಾಗಾಗಿ, ದೇವರ ಸೇವಕರ ಸಂಖ್ಯೆಯಾಗಲಿ, ಶಕ್ತಿಯಾಗಲಿ, ಆಯುಧಗಳಾಗಲಿ ಮುಖ್ಯವಲ್ಲ, ಅವರ ನಂಬಿಕೆಯೇ ಮುಖ್ಯವಾದದ್ದು ಎಂದು ಯೋನಾತಾನನಿಗೆ ತಿಳಿದಿತ್ತು. ಆ ಪಾಳೆಯವನ್ನು ದಾಳಿ ಮಾಡಬೇಕೋ ಬೇಡವೋ ಎಂದು ಯೆಹೋವನು ನಿರ್ಧರಿಸುವಂತೆ ಅವನು ಬಿಟ್ಟಿದ್ದು ನಂಬಿಕೆಯಿಂದಲೇ. ಯೆಹೋವನು ತನ್ನ ಒಪ್ಪಿಗೆಯನ್ನು ತೋರಿಸಿಕೊಡಲಿಕ್ಕಾಗಿ ಅವನು ಒಂದು ಸೂಚನೆಯನ್ನು ಆಯ್ಕೆ ಮಾಡಿದನು. ಆ ಒಪ್ಪಿಗೆ ಸಿಕ್ಕಿದಾಗ, ಯೋನಾತಾನನು ನಿರ್ಭಯವಾಗಿ ಮುನ್ನಡೆದನು.
ಯೋನಾತಾನನ ನಂಬಿಕೆಯ ಬಗ್ಗೆ ಎರಡು ವಿಷಯಗಳನ್ನು ನೋಡಬಹುದು. ಮೊದಲನೇದಾಗಿ, ಅವನಿಗೆ ತನ್ನ ದೇವರಾದ ಯೆಹೋವನ ಮೇಲೆ ಗಾಢವಾದ ಭಯಭಕ್ತಿ ಇತ್ತು. ಸರ್ವಶಕ್ತ ದೇವರು ತನ್ನ ಉದ್ದೇಶಗಳನ್ನು ನೆರವೇರಿಸುವುದಕ್ಕೆ ಮಾನವರ ಶಕ್ತಿಯ ಮೇಲೆ ಹೊಂದಿಕೊಂಡಿಲ್ಲ; ಆದರೂ ಯೆಹೋವನು ತನ್ನನ್ನು ನಂಬಿಕೆಯಿಂದ ಸೇವೆ ಮಾಡುವವರನ್ನು ಆಶೀರ್ವದಿಸಲು ಸಂತೋಷಿಸುತ್ತಾನೆ ಎಂದು ಅವನಿಗೆ ತಿಳಿದಿತ್ತು. (2 ಪೂರ್ವಕಾಲವೃತ್ತಾಂತ 16:9) ಎರಡನೇದಾಗಿ, ಕ್ರಿಯೆಗೈಯುವ ಮುಂಚೆ ಯೆಹೋವನ ಒಪ್ಪಿಗೆ ಇದೆಯಾ ಎಂದು ಖಚಿತಪಡಿಸಿಕೊಂಡನು. ಇಂದು ನಾವು ಮಾಡುವ ತೀರ್ಮಾನಗಳಿಗೆ ದೇವರ ಒಪ್ಪಿಗೆ ಇದೆಯಾ ಎಂದು ತಿಳಿಯಲು ಆತನಿಂದ ಅದ್ಭುತವಾದ ಸೂಚನೆಗಳನ್ನು ನಿರೀಕ್ಷಿಸುವುದಿಲ್ಲ. ಆದರೆ ದೇವರ ಇಷ್ಟವನ್ನು ಗ್ರಹಿಸಲು ಈಗ ನಮ್ಮ ಬಳಿ ಇಡೀ ದೈವಪ್ರೇರಿತ ವಾಕ್ಯವಿದೆ. (2 ತಿಮೊಥೆಯ 3:16, 17) ಪ್ರಾಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಸಲಹೆಗಾಗಿ ನಾವು ಶ್ರದ್ಧೆಯಿಂದ ಬೈಬಲಿನಲ್ಲಿ ಹುಡುಕುತ್ತೇವಾ? ಹಾಗೆ ಮಾಡಿದರೆ ನಾವು ಯೋನಾತಾನನಂತೆ ನಮ್ಮ ಇಷ್ಟಕ್ಕಿಂತ ದೇವರ ಇಷ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆಂದು ತೋರಿಸುತ್ತೇವೆ.
ಒಬ್ಬ ಯುದ್ಧವೀರ, ಮತ್ತೊಬ್ಬ ಆಯುಧ ಹೊರುವವನು, ಅವರಿಬ್ಬರೂ, ಸೈನಿಕರ ಠಾಣೆಯ ದಿಕ್ಕಿಗಿದ್ದ ಕಡಿದಾದ ಬೆಟ್ಟವನ್ನು ಏರಿದರು. ಫಿಲಿಷ್ಟಿಯರಿಗೆ ಇದೊಂದು ದಾಳಿ ಎಂದು ಕೊನೆಯಲ್ಲಿ ಅರ್ಥವಾಯಿತು. ಆ ಇಬ್ಬರು ಆಕ್ರಮಣಕಾರರನ್ನು ಎದುರಿಸಲು ಅವರು ಸೈನಿಕರನ್ನು ಕಳಿಸಿದರು. ಫಿಲಿಷ್ಟಿಯರ ಸಂಖ್ಯೆ ಹೆಚ್ಚಿತ್ತು. ಅಲ್ಲದೆ, ಅವರು ಎತ್ತರದ ನೆಲದ ಮೇಲೆ ನಿಂತಿದ್ದರು. ಹಾಗಾಗಿ, ಎರಡೇ-ಎರಡು ಸೈನಿಕರನ್ನು ಸುಲಭವಾಗಿ ಕೊಲ್ಲಬಹುದಾಗಿತ್ತು. ಆದರೆ ಯೋನಾತಾನನು ಒಬ್ಬರ ನಂತರ ಒಬ್ಬರನ್ನು ನೆಲ್ಲಕ್ಕುರುಳಿಸಿದನು. ಯೋನಾತಾನನ ಏಟಿನಿಂದ ಅರೆಜೀವವಾದವರನ್ನು ಅವನ ಹಿಂದೆ ಇದ್ದ ಆಯುಧ ಹೊರುವವನು ಕೊಂದುಹಾಕಿದನು. ಸ್ವಲ್ಪ ಸಮಯದಲ್ಲೇ, ಇವರಿಬ್ಬರೂ ಒಟ್ಟಿಗೆ 20 ಸೈನಿಕರನ್ನು ಕೊಂದರು! ಮುಂದೆ, ಯೆಹೋವನು ಇನ್ನೂ ಏನು ಮಾಡಿದನೆಂದು ಹೀಗೆ ತಿಳಿಸಲಾಗಿದೆ: “ಇದರಿಂದ ಪಾಳೆಯದಲ್ಲಿದ್ದವರೂ ಕಾವಲುಗಾರರಾಗಿ ಠಾಣದಲ್ಲಿದ್ದವರೂ ಸುಲಿಗೆಗೋಸ್ಕರ ಹೊರಗೆ ಹೋಗಿದ್ದವರೂ ಉಳಿದ ಎಲ್ಲಾ ಜನರೂ ಭಯದಿಂದ ನಡುಗಹತ್ತಿದರು. ಇದಲ್ಲದೆ ದೇವರು ಭೂಕಂಪವನ್ನುಂಟುಮಾಡಿದ್ದರಿಂದ ಜನರಲ್ಲಿ ಮಹಾಭೀತಿಯುಂಟಾಯಿತು.”—1 ಸಮುವೇಲ 14:15.
ಸ್ವಲ್ಪ ದೂರದಿಂದ, ಸೌಲನು ಮತ್ತು ಅವನ ಸೈನಿಕರು, ಫಿಲಿಷ್ಟಿಯರ ದಂಡಿನಲ್ಲಿ ಹೆಚ್ಚೆಚ್ಚು ಗಲಿಬಿಲಿ ಮತ್ತು ಕಳವಳ ಉಂಟಾಗಿದ್ದನ್ನೂ ಅವರಲ್ಲಿ ಒಬ್ಬನು ಇನ್ನೊಬ್ಬನನ್ನು ಕೊಂದುಹಾಕುವುದನ್ನೂ ನೋಡಿದರು. (1 ಸಮುವೇಲ 14:16, 20) ಆಗ ಇಸ್ರಾಯೇಲ್ಯರು ಧೈರ್ಯ ಪಡೆದುಕೊಂಡು ಆಕ್ರಮಣ ಮಾಡಿದರು. ಬಹುಶಃ ಸತ್ತು ಹೋಗಿದ್ದ ಫಿಲಿಷ್ಟಿಯ ಸೈನಿಕರ ಆಯುಧಗಳನ್ನು ತೆಗೆದುಕೊಂಡು ಅವರು ಆಕ್ರಮಣ ಮಾಡಿರಬೇಕು. ಆ ದಿನ ಯೆಹೋವನು ತನ್ನ ಜನರಿಗೆ ಒಂದು ಮಹಾ ವಿಜಯವನ್ನು ಕೊಟ್ಟನು. ಆ ಕುತೂಹಲಕರ ದಿನಗಳಿಂದ ಇಂದಿನ ವರೆಗೂ ಆತನು ಬದಲಾಗಿಲ್ಲ. ಯೋನಾತಾನ ಮತ್ತು ಅವನ ಅನಾಮಿಕ ಆಯುಧ ಹೊರುವವನ ಹಾಗೆ ನಾವೂ ಆತನಲ್ಲಿ ನಂಬಿಕೆ ಇಡುವುದಾದರೆ ನಮಗೆ ಯಾವತ್ತೂ ನಿರಾಶೆ ಆಗಲ್ಲ.—ಮಲಾಕಿಯ 3:6; ರೋಮನ್ನರಿಗೆ 10:11.
‘ದೇವರ ಸಹಾಯದಿಂದ . . . ಮಹಾಜಯವನ್ನುಂಟುಮಾಡಿದನು’
ಯೋನಾತಾನನಿಗೆ ಯೆಹೋವನ ಆಶೀರ್ವಾದದಿಂದ ಜಯ ಸಿಕ್ಕಿತು. ಆದರೆ ಸೌಲನ ವಿಷಯದಲ್ಲಿ, ಬೇರನೇ ನಡೆಯುತ್ತಿತ್ತು. ಅವನು ಕೆಲವು ಗಂಭೀರ ತಪ್ಪುಗಳನ್ನು ಮಾಡಿದ್ದನು. ಲೇವಿ ವಂಶದ ಸಮುವೇಲನು ಅರ್ಪಿಸಬೇಕಾಗಿದ್ದ ಯಜ್ಞವನ್ನು ತಾನೇ ಅರ್ಪಿಸಿದ್ದನು. ಹೀಗೆ ಯೆಹೋವನು ಅಭಿಷೇಕಿಸಿದ ಪ್ರಾವಾದಿಯ ಮಾತು ಮೀರಿ ನಡೆದಿದ್ದನು. ಸೌಲನು ಅವಿಧೇಯನಾಗಿದ್ದರಿಂದ ಅವನ ರಾಜ್ಯವು ಶಾಶ್ವತವಾಗಿ ಸ್ಥಿರಗೊಳ್ಳದು ಎಂದು ಸಮುವೇಲನು ಅಲ್ಲಿಗೆ ಬಂದಾಗ ಹೇಳಿದನು. ಆಮೇಲೆ ಸೌಲನು ತನ್ನ ಸೈನಿಕರನ್ನು ಯುದ್ಧಕ್ಕೆ ಕಳಿಸುವಾಗ ಒಂದು ವಿಚಾರಹೀನ ಆಣೆ ಇಡುವ ಮೂಲಕ ಅವರನ್ನು ಕಷ್ಟಕ್ಕೆ ಸಿಕ್ಕಿಸಿದನು. “ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾಲದವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ” ಎಂದವನು ಹೇಳಿದನು.—1 ಸಮುವೇಲ 13:10-14; 14:24, ಪವಿತ್ರ ಗ್ರಂಥ.
ದುಃಖಕರವಾಗಿ, ಸೌಲನ ಮನೋಭಾವದಲ್ಲಿ ಬದಲಾವಣೆ ಆಗುತ್ತಿರುವುದು ಅವನ ಆ ಮಾತುನಿಂದ ಕಂಡುಬರುತ್ತದೆ. ದೀನ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದವನು ಈಗ ಹೆಬ್ಬಯಕೆ ತುಂಬಿದ ಅಹಂಕಾರಿಯಾಗಿದ್ದನಾ? ಆ ಧೈರ್ಯವಂತ ಹಾಗೂ ಶ್ರಮಶೀಲ ಸೈನಿಕರ ಮೇಲೆ ಅಂಥ ವಿಚಾರಹೀನ ನಿರ್ಬಂಧವನ್ನು ಹೊರಿಸಲು ಯೆಹೋವನು ಯಾವತ್ತೂ ನಿರ್ದೇಶಿಸಿರಲಿಲ್ಲ. “ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ” ಎಂಬ ಸೌಲನ ಮಾತು, ಅವನು ಈ ಯುದ್ಧ ಬರೀ ತನ್ನ ಬಗ್ಗೆನೇ ಇದೆ ಅಂತ ನೆನಸಿದ್ದನೆಂದು ಸೂಚಿಸುತ್ತಿದೆಯಾ? ಮುಯ್ಯಿ ತೀರಿಸುವುದಕ್ಕೆ, ಘನತೆ ಪಡೆಯುವುದಕ್ಕೆ ಅಥವಾ ಜಯ ಸಾಧಿಸುವದಕ್ಕೆ ತನಗಿದ್ದಂಥ ಕಟ್ಟಾಸೆ ಅಲ್ಲ, ಬದಲಿಗೆ ಯೆಹೋವನ ನ್ಯಾಯವೇ ಮುಖ್ಯವಾದ ವಿಷಯ ಎಂದು ಸೌಲ ಮರೆತು ಹೋಗುತ್ತಿದ್ದನಾ?
ಯೋನಾತಾನನಿಗೆ ತನ್ನ ತಂದೆ ಯೋಚಿಸದೆ ಮಾಡಿದ ಆಣೆಯ ಬಗ್ಗೆ ತಿಳಿದಿರಲಿಲ್ಲ. ಘೋರ ಯುದ್ಧದಿಂದ ಸುಸ್ತಾಗಿ ಬರುವಾಗ, ತನ್ನ ಕೋಲನ್ನು ನೆಲಜೇನಿನಲ್ಲಿ ಅದ್ದಿ ಸ್ವಲ್ಪ ತಿಂದನು. ತಿಂದ ಕೂಡಲೇ ಶಕ್ತಿ ಪಡೆದನು. ಆಗ ಒಬ್ಬನು ಅವನಿಗೆ ಸೌಲನು ಮಾಡಿದ ನಿಷೇಧದ ಕುರಿತು ಹೇಳಿದನು. ಯೋನಾತಾನನು, “ನನ್ನ ತಂದೆಯು ದೇಶಕ್ಕೆ ನಷ್ಟವನ್ನುಂಟುಮಾಡಿದ್ದಾನೆ; ನಾನು ಸ್ವಲ್ಪ ಜೇನುತುಪ್ಪವನ್ನು ತಿಂದದರಿಂದ ನನ್ನ ಕಣ್ಣುಗಳು ಹೇಗೆ ಕಳೆಗೊಂಡಿರುತ್ತವೆ ನೋಡು. ಜನರು ತಾವು ಇಂದು ಶತ್ರುಗಳಿಂದ ಸುಲುಕೊಂಡ ಆಹಾರವನ್ನು ಯಥೇಚ್ಛವಾಗಿ ಊಟಮಾಡಿದ್ದರೆ ಅವರು ಇನ್ನಷ್ಟು ಬಲಗೊಳ್ಳುತ್ತಿದ್ದರು. ಫಿಲಿಷ್ಟಿಯರಲ್ಲಿ ಹತವಾಗದವರು ಇನ್ನೂ ಹೆಚ್ಚು ಮಂದಿ ಇದ್ದಾರೆ,” ಎಂದು ಹೇಳಿದನು. (1 ಸಮುವೇಲ 14:25-30) ಅವನು ಹೇಳಿದ್ದು ಸರಿಯಾಗಿಯೇ ಇತ್ತು. ಯೋನಾತಾನ ಒಬ್ಬ ನಿಷ್ಠಾವಂತ ಮಗನಾಗಿದ್ದ ನಿಜ, ಆದರೆ ಅವನ ನಿಷ್ಠೆ ಕುರುಡಾಗಿರಲಿಲ್ಲ. ತನ್ನ ತಂದೆ ಹೇಳಿದ ಮಾತಿಗೆ ಅಥವಾ ಮಾಡಿದ ಕೆಲಸಕ್ಕೆ ಅವನು ಯಾವತ್ತೂ ಯೋಚನೆ ಮಾಡದೆ ಒಪ್ಪುತ್ತಿರಲಿಲ್ಲ. ಹೀಗೆ ನ್ಯಾಯಸಮ್ಮತತೆ ತೋರಿಸುವ ಮೂಲಕ ಅವನು ಬೇರೆಯವರ ಗೌರವ ಸಂಪಾದಿಸಿದನು.
ತಾನು ಆಜ್ಞಾಪಿಸಿದ ನಿಷೇಧವನ್ನು ಯೋನಾತಾನನು ಉಲ್ಲಂಘಿಸಿದ್ದಾನೆಂದು ಸೌಲನಿಗೆ ತಿಳಿದು ಬಂದಾಗಲೂ, ತಾನು ಇಂಥ ಆಜ್ಞೆ ಹೊರಡಿಸಿದ್ದು ಎಷ್ಟು ಮೂರ್ಖತನವಾಗಿತ್ತು ಎಂದು ಅರ್ಥಮಾಡಿಕೊಳ್ಳಲಿಲ್ಲ. ಬದಲಿಗೆ ತನ್ನ ಸ್ವಂತ ಮಗ ಕೊಲ್ಲಲ್ಪಡಬೇಕೆಂದು ಅಂದುಕೊಂಡನು! ಆಗ, ಯೋನಾತಾನ ವಾದ ಮಾಡಲಿಲ್ಲ ಅಥವಾ ಕರುಣೆಗಾಗಿ ಕಾಲಿಗೆ ಬೀಳಲಿಲ್ಲ. ಅವನು ಕೊಟ್ಟ ಉತ್ತರ ಕೇಳಿದರೆ ಆಶ್ಚರ್ಯವಾಗುತ್ತದೆ. ಅವನು ತನ್ನ ಬಗ್ಗೆ ಕಿಂಚಿತ್ತೂ ಯೋಚಿಸದೆ, ನಿಸ್ವಾರ್ಥವಾಗಿ, “ಸಾಯುವದಕ್ಕೆ ಸಿದ್ಧನಾಗಿದ್ದೇನೆ” ಎಂದು ಉತ್ತರಕೊಟ್ಟನು. ಆದರೆ ಇಸ್ರಾಯೇಲ್ಯರು, “ದೇವರ ಸಹಾಯದಿಂದ ಈ ಹೊತ್ತು ಇಸ್ರಾಯೇಲ್ಯರಿಗೆ ಮಹಾಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಕೂಡದು; ಯೆಹೋವನಾಣೆ, ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು” ಎಂದು ಹೇಳಿದರು. ಪರಿಣಾಮ? ಸೌಲನು ಅವರ ತರ್ಕಕ್ಕೆ ಬಾಗಿದನು. ವೃತ್ತಾಂತ ಮುಂದುವರಿಸಿ ಹೇಳುತ್ತದೆ, ಜನರು “ಪ್ರಾಯಶ್ಚಿತ್ತವನ್ನು ಕೊಟ್ಟು ಅವನನ್ನು ಬಿಡಿಸಿದರು” ಮತ್ತು ಅವನು ಸಾಯಲಿಲ್ಲ.—1 ಸಮುವೇಲ 14:43-45.
ತನ್ನ ಧೈರ್ಯ, ಶ್ರಮ ಮತ್ತು ನಿಸ್ವಾರ್ಥ ಮನೋಭಾವದಿಂದ ಯೋನಾತಾನ ಒಂದು ಒಳ್ಳೇ ಹೆಸರನ್ನು ಸಂಪಾದಿಸಿದ್ದನು. ಅವನು ಅಪಾಯದಲ್ಲಿದ್ದಾಗ, ಅವನ ಒಳ್ಳೇ ಹೆಸರು ಅವನ ಸಹಾಯಕ್ಕೆ ಬಂತು. ದಿನನಿತ್ಯ, ನಾವು ಎಂಥ ಹೆಸರನ್ನು ಗಳಿಸುತ್ತಿದ್ದೇವೆ ಎಂದು ಧ್ಯಾನಿಸುವುದರಿಂದ ಪ್ರಯೋಜನ ಪಡೆಯುತ್ತೇವೆ. ಒಂದು ಒಳ್ಳೇ ಹೆಸರು ತುಂಬ ಅಮೂಲ್ಯವಾಗಿದೆ ಎಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 7:1) ಯೋನಾತಾನನಂತೆ, ಯೆಹೋವನ ಜೊತೆ ನಾವು ಒಂದು ಒಳ್ಳೇ ಹೆಸರು ಸಂಪಾದಿಸಿದರೆ, ಅದು ನಮಗೆ ಒಂದು ದೊಡ್ಡ ನಿಧಿಯಾಗಿರುತ್ತದೆ.
ನಿಧಾನವಾಗಿ ಆವರಿಸುತ್ತಿದ್ದ ಕತ್ತಲು
ಸೌಲನು ತಪ್ಪುಗಳನ್ನು ಮಾಡಿದ್ದರೂ, ಯೋನಾತಾನನು ಯುದ್ಧಗಳಲ್ಲಿ ವರ್ಷಾನುಗಟ್ಟಲೆ ನಿಷ್ಠಾವಂತನಾಗಿ ತನ್ನ ತಂದೆಯ ಪಕ್ಷದಲ್ಲಿ ನಿಂತಿದ್ದನು. ತನ್ನ ತಂದೆ ಅವಿಧೇಯ ಹಾಗೂ ಅಹಂಕಾರ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೋಡಿದಾಗ ಅವನ ಮನಸ್ಸಿನ ನೋವನ್ನು ಬರೀ ಊಹಿಸಕೊಳ್ಳಬಹುದು ಅಷ್ಟೇ. ಈ ಕೆಟ್ಟ ಮನೋಭಾವವು ತನ್ನ ತಂದೆಯನ್ನು ಕತ್ತಲೆಯಂತೆ ಆವರಿಸುತ್ತಿತ್ತು ಮತ್ತು ಅದನ್ನು ತಡೆಯುವ ಶಕ್ತಿ ಯೋನಾತಾನನಿಗಿರಲಿಲ್ಲ.
ಯೆಹೋವನು ಅಮಾಲೇಕ್ಯರ ವಿರುದ್ಧ ಯುದ್ಧ ಮಾಡಲು ಆಜ್ಞಾಪಿಸಿದಾಗ, ಈ ಸಮಸ್ಯೆ ತಡೆಯಲು ಸಾಧ್ಯವಿಲ್ಲದಷ್ಟು ದೊಡ್ಡದಾಗಿ ಬೆಳೆಯಿತು. ಅಮಾಲೇಕ್ಯರು ಎಷ್ಟು ದುಷ್ಟರಾಗಿದ್ದರೆಂದರೆ, ಯೆಹೋವನು ಮೋಶೆಯ ದಿನಗಳಲ್ಲಿ ಆ ಇಡೀ ದೇಶದ ನಾಶನವನ್ನು ಮುಂತಿಳಿಸಿದ್ದನು. (ವಿಮೋಚನಕಾಂಡ 17:14) ಅವರ ಎಲ್ಲಾ ಪಶುಗಳನ್ನು ಮತ್ತು ಅವರ ರಾಜನಾದ ಅಗಾಗನನ್ನು ಕೊಲ್ಲಬೇಕೆಂದು ಸೌಲನಿಗೆ ನಿರ್ದೇಶನ ಕೊಟ್ಟಿದ್ದನು. ಯೋನಾತಾನನು ತನ್ನ ತಂದೆಯ ನಾಯಕತ್ವದ ಕೆಳಗೆ ಮುಂಚಿನಂತೆ ಈ ಸಾರಿನೂ ಧೈರ್ಯವಾಗಿ ಯುದ್ಧ ಮಾಡಿದನೆನ್ನುವುದು ನಿಸ್ಸಂಶಯ. ಸೌಲನು ಯುದ್ಧವನ್ನು ಗೆದ್ದನು. ಆದರೆ ಯೆಹೋವನ ನೇರ ನಿರ್ದೇಶನಕ್ಕೆ ಅವಿಧೇಯನಾದನು. ಅವನು ಅಗಾಗನ ಜೀವವನ್ನೂ, ಹಣ-ಆಸ್ತಿ ಮತ್ತು ದನಕುರಿಗಳನ್ನೂ ನಾಶಮಾಡದೆ ಉಳಿಸಿದನು. ಆಗ ಪ್ರವಾದಿ ಸಮುವೇಲನು ಸೌಲನ ಮೇಲೆ ಯೆಹೋವನ ಈ ಅಂತಿಮ ತೀರ್ಪನ್ನು ನುಡಿದನು: “ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ.”—1 ಸಮುವೇಲ 15:2, 3, 9, 10, 23.
ಇದಾಗಿ ಸ್ವಲ್ಪ ದಿನಗಳಲ್ಲಿ ಯೆಹೋವನು ಸೌಲನಿಂದ ತನ್ನ ಪವಿತ್ರ ಶಕ್ತಿಯನ್ನು ಹಿಂದೆಗೆದನು. ಯೆಹೋವನ ಪ್ರೀತಿಯ ಶಕ್ತಿ ಇಲ್ಲದೆ, ಸೌಲನ ಭಾವನೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದವು, ಕೋಪದಿಂದ ಕೆರಳುತ್ತಿದ್ದನು, ಮತ್ತು ವಿಪರೀತ ಭಯ ಅವನನ್ನು ಆವರಿಸಿತು. ಯೆಹೋವನು ತನ್ನ ಒಳ್ಳೇ ಶಕ್ತಿಯನ್ನು ತೆಗೆದು ಕೆಟ್ಟ ಶಕ್ತಿಯನ್ನು ಕಳುಹಿಸಿದಂತಿತ್ತು. (1 ಸಮುವೇಲ 16:14; 18:10-12) ಒಂದು ಕಾಲದಲ್ಲಿ ಒಳ್ಳೇ ವ್ಯಕ್ತಿಯಾಗಿದ್ದ ತನ್ನ ತಂದೆ, ಈ ರೀತಿ ಭಯಂಕರವಾಗಿ ಬದಲಾಗಿರುವುದನ್ನು ನೋಡುವಾಗ ಯೋನಾತಾನನು ಎಷ್ಟು ಮನಗುಂದಿರಬೇಕು! ಏನೇ ಆದರೂ, ಯೆಹೋವನ ನಿಷ್ಠಾವಂತ ಸೇವೆಯಿಂದ ಯೋನಾತಾನನು ಸ್ವಲ್ಪವೂ ಅಲುಗಾಡಲಿಲ್ಲ. ಅವನು ತನ್ನ ತಂದೆಯನ್ನು ಎಷ್ಟಾಗುತ್ತೋ ಅಷ್ಟು ಬೆಂಬಲಿಸಿದನು. ಕೆಲವೊಮ್ಮೆ ಮನಬಿಚ್ಚಿ ನೇರವಾಗಿ ಕೂಡ ಮಾತಾಡಿದನು. ಆದರೆ ಎಂದಿಗೂ ಬದಲಾಗದ ದೇವರೂ ತಂದೆಯೂ ಆದ ಯೆಹೋವನ ಮೇಲೆ ತನ್ನ ಗಮನವಿಟ್ಟನು.—1 ಸಮುವೇಲ 19:4, 5.
ನೀವು ಪ್ರೀತಿಸುವ ವ್ಯಕ್ತಿಯೊಬ್ಬರು, ಬಹುಶಃ ನಿಮ್ಮ ಕುಟುಂಬದವರು, ತೀರಾ ಕೆಟ್ಟ ದಾರಿ ಹಿಡಿದಿದ್ದನ್ನು ನೋಡಿದ್ದೀರಾ? ಅದು ತುಂಬಾ ನೋವು ತರುವ ಅನುಭವ. ಯೋನಾತಾನನ ಉದಾಹರಣೆ, ಸಮಯಾನಂತರ ಕೀರ್ತನೆಗಾರನು ಬರೆದ ಮಾತನ್ನು ನೆನಪಿಗೆ ತರಬಹುದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಯೆಹೋವನು ನಿಷ್ಠಾವಂತನು. ಆತನು ನಿಮ್ಮನ್ನೂ ಸೇರಿಸಿಕೊಳ್ಳುತ್ತಾನೆ. ಅಪರಿಪೂರ್ಣ ಮಾನವರು ನಿಮಗೆ ಬೇಸರವಾಗುವ ಅಥವಾ ಆಶಾಭಂಗವಾಗುವ ರೀತಿಯಲ್ಲಿ ಏನೇ ಮಾಡಿದರೂ ಯೆಹೋವನು ನಿಮಗೆ ಅತ್ಯುತ್ತಮ ತಂದೆಯಾಗಿರುತ್ತಾನೆ.
ಸೌಲನಿಂದ ರಾಜ್ಯಾಧಿಕಾರವನ್ನು ತೆಗೆದುಬಿಡಬೇಕೆಂಬ ಯೆಹೋವನ ಯೋಚನೆ ಯೋನಾತಾನನಿಗೆ ತಿಳಿದುಬಂದಿರಬೇಕು. ಅದಕ್ಕವನು ಹೇಗೆ ಪ್ರತಿಕ್ರಿಯಿಸಿದನು? ತಾನು ಎಂಥ ರಾಜನಾಗಿರುತ್ತೇನೋ ಎಂದು ಅವನು ಯಾವಾಗಾದರೂ ಕಲ್ಪಿಸಿಕೊಂಡಿದ್ದನಾ? ತನ್ನ ತಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿ, ಒಬ್ಬ ನಿಷ್ಠಾವಂತ ಹಾಗೂ ವಿಧೇಯ ರಾಜನಾಗಿ ಉತ್ತಮ ಮಾದರಿಯನ್ನಿಡುವ ನಿರೀಕ್ಷೆಯನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡಿದ್ದನಾ? ಅವನ ಹೃದಯಾಳದ ಯೋಚನೆಗಳು ನಮಗೆ ಗೊತ್ತಿಲ್ಲ. ಒಂದುವೇಳೆ ಅವನು ಇಂಥ ನಿರೀಕ್ಷೆ ಇಟ್ಟಿದ್ದರೂ, ಅದರಲ್ಲಿ ಒಂದಿಷ್ಟೂ ಈಡೇರಲಿಲ್ಲ ಅನ್ನೋದು ಮಾತ್ರ ನಮಗೆ ಗೊತ್ತು. ಹಾಗಾದರೆ ಯೆಹೋವನು ಆ ನಂಬಿಗಸ್ತನ ಕೈಬಿಟ್ಟನಾ? ಇಲ್ಲ. ಬದಲಿಗೆ, ಬೈಬಲಿನಲ್ಲೇ, ನಿಷ್ಠಾವಂತ ಸ್ನೇಹದ ಒಂದು ಅತ್ಯುತ್ತಮವಾದ ಮಾದರಿಯನ್ನಿಡಲು ಯೋನಾತಾನನ್ನು ಉಪಯೋಗಿಸಿದನು! ಯೋನಾತಾನನ ಬಗ್ಗೆ ಇರುವ ಮುಂದಿನ ಲೇಖನ ಆ ಸ್ನೇಹದ ಬಗ್ಗೆ ಮಾತಾಡುತ್ತದೆ.