ಭೂಮಿ ಚಪ್ಪಟೆಯಾಗಿದೆ ಅಂತ ಬೈಬಲ್ ಕಲಿಸುತ್ತಾ?
ಬೈಬಲ್ ಕೊಡೋ ಉತ್ತರ
ಇಲ್ಲ, ಭೂಮಿ ಚಪ್ಪಟೆಯಾಗಿದೆ ಅಂತ ಬೈಬಲ್ ಹೇಳಲ್ಲ. a ಬೈಬಲ್ ವಿಜ್ಞಾನದ ಪುಸ್ತಕ ಅಲ್ಲದೇ ಇದ್ರೂ ಅದು ವಿಜ್ಞಾನ ರುಜುಪಡಿಸಿರೋ ವಿಷಯಗಳಿಗೆ ವಿರುದ್ಧವಾಗಿಲ್ಲ. ಬೈಬಲ್ ಹೇಳೋದನ್ನ “ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.”—ಕೀರ್ತನೆ 111:8.
ಬೈಬಲಿನಲ್ಲಿ ‘ಭೂಮಿಯ ನಾಲ್ಕು ಮೂಲೆಗಳು’ ಅಂತ ಹೇಳಿರೋದ್ರ ಅರ್ಥ ಏನು?
ಬೈಬಲಿನಲ್ಲಿ ‘ಭೂಮಿಯ ನಾಲ್ಕು ಮೂಲೆಗಳು’ ಅಥವಾ ‘ಭೂಮಿಯ ಮೂಲೆ’ ಅಂತ ಹೇಳುವಾಗೆಲ್ಲಾ ಅದು ಚೌಕಕ್ಕೆ ಇರೋ ತರ ಭೂಮಿಗೆ ಮೂಲೆಗಳಿವೆ ಅನ್ನೋದನ್ನ ಸೂಚಿಸಲ್ಲ. (ಯೆಶಾಯ 11:12; ಯೋಬ 37:3) ಬದಲಿಗೆ, ಇದು ಇಡೀ ಭೂಮಿಯ ಎಲ್ಲ ಭಾಗಗಳನ್ನ ಸೂಚಿಸುತ್ತೆ. ಬೈಬಲಿನಲ್ಲಿ ಭೂಮಿಯ ಎಲ್ಲಾ ಭಾಗಗಳನ್ನ ಸೂಚಿಸೋಕೆ ನಾಲ್ಕು ದಿಕ್ಕುಗಳನ್ನ ಕೂಡ ಉಪಯೋಗಿಸಲಾಗಿದೆ.—ಲೂಕ 13:29.
‘ಮೂಲೆಗಳು’ ಅನ್ನೋದಕ್ಕಿರೋ ಹೀಬ್ರು ಪದ “ರೆಕ್ಕೆಗಳು” ಅನ್ನಲು ಉಪಯೋಗಿಸಲಾಗೋ ಪದದಿಂದ ಬಂದಿರಬಹುದು. “ಒಂದು ಹಕ್ಕಿ ತನ್ನ ಮರಿಗಳನ್ನ ಮರೆ ಮಾಡಲು ತನ್ನ ರೆಕ್ಕೆಗಳನ್ನ ವಿಶಾಲವಾಗಿ ಚಾಚುತ್ತೆ. ಹಾಗಾಗಿ ಹೀಬ್ರು ಭಾಷೆಯಲ್ಲಿ ಈ ಪದ ವಿಶಾಲವಾಗಿ ಚಾಚಿಕೊಂಡಿರುವ ಯಾವುದಾದರೊಂದು ವಸ್ತುವಿನ ಎಲ್ಲೆಯನ್ನ ಅಥವಾ ಅಂಚನ್ನ ಸೂಚಿಸುತ್ತೆ” ಅಂತ ದ ಇಟರ್‌ನ್ಯಾಶನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್‌ಸೈಕ್ಲೊಪೀಡಿಯ ಹೇಳುತ್ತೆ. ಯೋಬ 37:3 ಮತ್ತು ಯೆಶಾಯ 11:12 ರಲ್ಲಿ “ಈ ಪದದ ಅರ್ಥ ಭೂಮಿಯ ತೀರಗಳು, ಗಡಿಗಳು ಅಥವಾ ಎಲ್ಲೆಗಳು” ಅಂತ ಸಹ ಅದೇ ಪುಸ್ತಕ ತಿಳಿಸುತ್ತೆ. b
ಸೈತಾನ ಯೇಸುವಿಗೆ ತಂದ ಪರೀಕ್ಷೆಯ ಬಗ್ಗೆ ಇರೋ ವಿವರಣೆ ಭೂಮಿ ಚಪ್ಪಟೆಯಾಗಿದೆ ಅನ್ನೋದನ್ನ ಸೂಚಿಸುತ್ತಾ?
ಯೇಸುವನ್ನ ಪರೀಕ್ಷಿಸಲಿಕ್ಕಾಗಿ “ಸೈತಾನ ಆತನನ್ನ ತುಂಬ ಎತ್ರದ ಒಂದು ಬೆಟ್ಟಕ್ಕೆ ಕರ್ಕೊಂಡು ಹೋಗಿ ಲೋಕದ ಎಲ್ಲ ಸಾಮ್ರಾಜ್ಯಗಳನ್ನ, ಅವುಗಳ ಸಂಪತ್ತನ್ನ ತೋರಿಸಿದ.” (ಮತ್ತಾಯ 4:8) ಹಾಗಾಗಿ, ಭೂಮಿ ಚಪ್ಪಟೆಯಾಗಿದೆ ಮತ್ತು ಭೂಮಿಯ ಯಾವುದೋ ಒಂದು ಭಾಗದಿಂದ ಎಲ್ಲವನ್ನ ನೋಡೋಕಾಗುತ್ತೆ ಅಂತ ಬೈಬಲ್ ತಿಳಿಸುತ್ತೆ ಅಂತ ಕೆಲವ್ರು ಹೇಳ್ತಾರೆ. ಆದ್ರೆ ಇಲ್ಲಿ, ‘ತುಂಬ ಎತ್ರದ ಒಂದು ಬೆಟ್ಟದ’ ಬಗ್ಗೆ ಹೇಳಿರೋದಾದ್ರೂ ಅದು ನಿಜವಾಗಿ ಇರೋ ಒಂದು ಬೆಟ್ಟವಲ್ಲ. ನಾವು ಯಾಕೆ ಹಾಗೆ ಹೇಳಬಹುದು?
ಲೋಕದ ಎಲ್ಲಾ ಸಾಮ್ರಾಜ್ಯಗಳನ್ನ ನೋಡೋಕಾಗುವಷ್ಟು ಎತ್ತರವಾದ ಬೆಟ್ಟ ಭೂಮಿ ಮೇಲೆ ಇಲ್ಲವೇ ಇಲ್ಲ.
ಸೈತಾನನು ಯೇಸುಗೆ ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಮಾತ್ರವಲ್ಲ ‘ಅವುಗಳ ಸಂಪತ್ತನ್ನೂ’ ತೋರಿಸಿದ. ಆದ್ರೆ ತುಂಬ ದೂರದಿಂದ ಆ ಸಂಪತ್ತನ್ನೆಲ್ಲಾ ನೋಡೋಕೆ ಸಾಧ್ಯ ಇಲ್ಲ. ಹಾಗಾಗಿ, ಸೈತಾನ ಇಲ್ಲಿ ಯೇಸುಗೆ ಅವುಗಳನ್ನ ದರ್ಶನದ ರೂಪದಲ್ಲಿ ತೋರಿಸಿರಬೇಕು ಅಂತ ಕಾಣುತ್ತೆ. ಇದು ಥಿಯೇಟರ್‌ಗಳಲ್ಲಿ ಪ್ರೊಜೆಕ್ಟರನ್ನ ಉಪಯೋಗಿಸಿ ಬೇರೆ ಬೇರೆ ಸ್ಥಳಗಳನ್ನ ತೋರಿಸೋ ತರ ಇದ್ದಿರಬಹುದು.
ಸೈತಾನ ತಂದ ಈ ಪರೀಕ್ಷೆ ಬಗ್ಗೆ ಲೂಕ ಪುಸ್ತಕದಲ್ಲಿ ಸಹ ಇದೆ. ಲೂಕ 4:5 ರಲ್ಲಿ ಸೈತಾನ ಯೇಸುಗೆ, “ಲೋಕದ ಎಲ್ಲ ಸಾಮ್ರಾಜ್ಯಗಳನ್ನ ಒಂದೇ ಕ್ಷಣದಲ್ಲಿ ತೋರಿಸಿದ” ಅಂತ ಇದೆ. ಈ ರೀತಿ ಒಂದೇ ಕ್ಷಣದಲ್ಲಿ ಎಲ್ಲವನ್ನ ನೋಡೋಕೆ ಮನುಷ್ಯನ ಕಣ್ಣಿಂದ ಆಗಲ್ಲ. ಹಾಗಾಗಿ, ಸೈತಾನನು ಯೇಸುಗೆ ಈ ಪರೀಕ್ಷೆಯನ್ನ ತಂದಾಗ ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸದ, ಒಂದು ವಿಶೇಷ ರೀತಿಯಲ್ಲಿ ಇದನ್ನೆಲ್ಲಾ ತೋರಿಸಿದನು ಅಂತ ಗೊತ್ತಾಗುತ್ತೆ.
a “ಭೂಗೋಳದ ಮೇಲೆ ದೇವರು ವಾಸಿಸ್ತಾನೆ” ಅಂತ ಬೈಬಲ್ ಹೇಳುತ್ತೆ.—ಯೆಶಾಯ 40:22.
b ಪರಿಷ್ಕೃತ ಆವೃತ್ತಿ, ಸಂಪುಟ 2, ಪುಟ 4.