ಮರಿಯಳು ದೇವರ ತಾಯಿನಾ?
ಬೈಬಲ್ ಕೊಡೋ ಉತ್ತರ
ಅಲ್ಲ. ಬೈಬಲ್ನಲ್ಲಿ ಎಲ್ಲಿಯೂ ಮರಿಯಳು ದೇವರ ತಾಯಿ ಅಂತ ಹೇಳಲ್ಲ. ಅಷ್ಟೇ ಅಲ್ಲ ಕ್ರೈಸ್ತರು ಮರಿಯಳನ್ನ ಆರಾಧಿಸಬೇಕು, ಪೂಜೆ ಮಾಡಬೇಕು ಅಂತನೂ ಬೈಬಲ್ ಹೇಳಲ್ಲ. a ಈ ಮುಂದಿನ ವಿಷ್ಯಗಳನ್ನ ಗಮನಿಸಿ:
ಮರಿಯ ಯಾವತ್ತು ‘ನಾನು ದೇವರ ತಾಯಿ’ ಅಂತ ಹೇಳಿಕೊಳ್ಳಲಿಲ್ಲ. ಮರಿಯಳು ‘ದೇವರ ಮಗನನ್ನ’ ಹೆತ್ತಳು ಅಂತ ಬೈಬಲ್ನಲ್ಲಿ ಇದೇ ಹೊರತು ದೇವರನ್ನ ಹೆತ್ತಳು ಅಂತ ಇಲ್ಲ.—ಮಾರ್ಕ 1:1; ಲೂಕ 1:32.
ಯೇಸು ಯಾವತ್ತು ಮರಿಯಳು ದೇವರ ತಾಯಿ ಅಥವಾ ಅವಳನ್ನ ವಿಶೇಷವಾಗಿ ಆರಾಧನೆ ಮಾಡಬೇಕು ಅಂತ ಹೇಳಲಿಲ್ಲ. ಒಬ್ಬ ಸ್ತ್ರೀ ಯೇಸುವಿಗೆ ‘ಮರಿಯ ನಿನ್ನ ತಾಯಿಯಾಗಿ ಇರೋದ್ರಿಂದ ಖುಷಿಯಾಗಿ ಇರ್ತಾಳೆ’ ಅಂತ ಹೇಳಿದಾಗ ಯೇಸು ಅವಳನ್ನ ತಿದ್ದಿ “ಇಲ್ಲ, ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂದನು.—ಲೂಕ 11:27, 28.
“ದೇವರ ತಾಯಿ” ಮತ್ತು ತಿಯೋಟೊಕೊಸ್ (ದೇವರನ್ನು-ಹೊತ್ತವಳು) ಅನ್ನೋ ಪದಗಳು ಬೈಬಲ್ನಲ್ಲಿ ಇಲ್ಲ.
ಬೈಬಲ್ನಲ್ಲಿ “ಸ್ವರ್ಗದ ರಾಣಿ” ಅಂತ ಹೇಳಿರೋದು ಮರಿಯಳಿಗೆ ಅಲ್ಲ, ಬದಲಿಗೆ ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸುತ್ತಿದ್ದ ಸುಳ್ಳು ದೇವತೆಗಳಿಗೆ. (ಯೆರೆಮೀಯ 44:15-19) ಬಹುಶಃ ‘ಸ್ವರ್ಗದ ರಾಣಿಯನ್ನ’ ಬಾಬೆಲಿನ ದೇವತೆಯಾದ ಇಶಾರ್ಟ್ (ಅಸ್ಟಾರ್ಟೆ) ಅನ್ನು ಸೂಚಿಸುತ್ತಿರಬಹುದು.
ಒಂದನೇ ಶತಮಾನದ ಕ್ರೈಸ್ತರು ಮರಿಯಳನ್ನು ಆರಾಧಿಸಲೂ ಇಲ್ಲ, ಅವಳಿಗೆ ವಿಶೇಷ ಸ್ಥಾನಮಾನ ಕೊಡಲೂ ಇಲ್ಲ. ಒಂದನೇ ಶತಮಾನದ ಕ್ರೈಸ್ತರ ಬಗ್ಗೆ ಒಬ್ಬ ಇತಿಹಾಸಗಾರ ಹೀಗೆ ಹೇಳುತ್ತಾನೆ: “ಅವರು ವಿಧರ್ಮಿ ಆಚರಣೆಗಳನ್ನ ತಿರಸ್ಕರಿಸಿದರು. ಅಷ್ಟೇ ಅಲ್ಲ, ಅವರು ಮರಿಯಳಿಗೆ ವಿಶೇಷ ಸ್ಥಾನಮಾನ ಕೊಟ್ಟರೆ ಅದು ದೇವತೆಗಳ ಆರಾಧನೆ ಮಾಡಿದ ಹಾಗೆ ಆಗುತ್ತೆ ಅಂತ ತಿಳಿದು ಹೆದರಿರಬಹುದು.”—ಇನ್ ಕ್ವೇಷ್ಟ್ ಆಫ್ ದಿ ಜೂಯಿಷ್ ಮೇರಿ.
ದೇವರು ಯಾವಾಗಲೂ ಇದ್ದವನು ಮತ್ತು ಯಾವತ್ತೂ ಇರುವವನು ಆಗಿದ್ದಾನೆ ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 90:1, 2; ಯೆಶಾಯ 40:28) ದೇವರಿಗೆ ಆರಂಭವೇ ಇಲ್ಲ ಅಂದಮೇಲೆ ಆತನಿಗೆ ತಾಯಿಯೂ ಇಲ್ಲ ಅಂತ ಅರ್ಥ. ಹಾಗಾಗಿ ಮರಿಯಳ ಗರ್ಭದಲ್ಲಿ ಇದದ್ದು ದೇವರಲ್ಲ. ಆತನಿಗೆ ವಿಶಾಲ ಆಕಾಶವೇ ಸಾಕಾಗಲ್ಲ ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ.—1 ಅರಸು 8:27.
ಮರಿಯ—ಯೇಸುವಿನ ತಾಯಿ ಹೊರತು “ದೇವರ ತಾಯಿ” ಅಲ್ಲ
ಮರಿಯಳು ಹುಟ್ಟಿನಿಂದ ಯೆಹೂದ್ಯಳಾಗಿದ್ದಳು. ಅವಳು ರಾಜ ದಾವೀದನ ವಂಶದವಳಾಗಿದ್ದಳು. (ಲೂಕ 3:23-31) ಅವಳಿಗೆ ದೇವರ ಮೇಲೆ ತುಂಬ ನಂಬಿಕೆ, ಭಯ ಭಕ್ತಿ ಇದಿದ್ರಿಂದ ಆತನಿಂದ ತುಂಬ ಆಶೀರ್ವಾದಗಳನ್ನ ಪಡೆದಳು. (ಲೂಕ 1:28) ಯೇಸುವಿನ ತಾಯಿ ಆಗೋಕೆ ದೇವರು ಮರಿಯಳನ್ನು ಆರಿಸಿಕೊಂಡನು. (ಲೂಕ 1:31, 35) ಮರಿಯ ಮತ್ತು ಅವಳ ಗಂಡ ಯೋಸೇಫನಿಗೆ ಬೇರೆ ಮಕ್ಕಳೂ ಇದ್ದರು.—ಮಾರ್ಕ 6:3.
ಅಷ್ಟೇ ಅಲ್ಲ, ಮರಿಯಳು ನಂತರ ಯೇಸುವಿನ ಶಿಷ್ಯಳಾದಳು ಅಂತ ಬೈಬಲ್ ಹೇಳುತ್ತೆ. ಅದನ್ನ ಬಿಟ್ಟು ಬೇರೆ ಹೆಚ್ಚಿನ ಮಾಹಿತಿ ಬೈಬಲ್ನಲ್ಲಿ ಇಲ್ಲ.—ಅಪೊಸ್ತಲರ ಕಾರ್ಯ 1:14.
a ಅನೇಕ ಕ್ರೈಸ್ತ ಪಂಗಡದವರು ಮರಿಯಳು ದೇವರ ತಾಯಿ ಅಂತ ಕಲಿಸ್ತಾರೆ. ಅವರು ಮರಿಯಳನ್ನ “ಸ್ವರ್ಗದ ರಾಣಿ” ಅಥವಾ ತಿಯೋಟೊಕೊಸ್ ಅಂತ ಕರಿತಾರೆ. ಗ್ರೀಕ್ನಲ್ಲಿ ತಿಯೋಟೊಕೊಸ್ಗೆ ಇರೋ ಅರ್ಥ “ದೇವರನ್ನು-ಹೊತ್ತವಳು” ಎಂದಾಗಿದೆ.