ಪ್ರಕಟನೆ ಪುಸ್ತಕದಲ್ಲಿರುವ ವಿಷಯಗಳು ಏನನ್ನ ಸೂಚಿಸುತ್ತೆ?
ಬೈಬಲ್ ಕೊಡೋ ಉತ್ತರ
ಪ್ರಕಟನೆ ಪುಸ್ತಕವನ್ನ ಗ್ರೀಕ್ನಲ್ಲಿ ಅಪಾಕಲಿಪ್ಸ್ ಅಂತ ಕರಿತಾರೆ. ಅದರ ಅರ್ಥ “ಮುಸುಕು ತೆರೆಯುವುದು” ಅಥವಾ “ಬಯಲು ಮಾಡೋದು.” ಪ್ರಕಟನೆ ಪುಸ್ತಕ ಹೆಸರಿಗೆ ತಕ್ಕ ಹಾಗೆ ಇದೆ. ಅದು ಗುಟ್ಟಾಗಿರುವ ಎಷ್ಟೋ ವಿಷಯಗಳನ್ನ ರಟ್ಟು ಮಾಡುತ್ತೆ. ಅಲ್ಲದೆ ಮುಂದೆ ಆಗುವ ಎಷ್ಟೋ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ಈಗಾಗಲೇ ಬರೆಯಲಾಗಿದೆ. ಇದರಲ್ಲಿ ಹೇಳಿರುವಂಥ ಅನೇಕ ಭವಿಷ್ಯವಾಣಿಗಳು ಮುಂದೆ ನೆರವೇರಲಿಕ್ಕಿದೆ.
ಪ್ರಕಟನೆ ಪುಸ್ತಕದಲ್ಲಿ ಏನೇನಿದೆ?
ಪ್ರಕಟನೆ ಪುಸ್ತಕದ ಪರಿಚಯ.—ಪ್ರಕಟನೆ 1:1-9.
ಏಳು ಸಭೆಗಳಿಗೆ ಯೇಸು ಕೊಟ್ಟ ಸಂದೇಶಗಳು.—ಪ್ರಕಟನೆ 1:10–3:22.
ದೇವರು ಸಿಂಹಾಸನದ ಮೇಲೆ ಕುಳಿತಿರುವ ದರ್ಶನ.—ಪ್ರಕಟನೆ 4:1-11.
ಒಂದಾದ ಮೇಲೆ ಒಂದು ನಡೆಯುವ ವಿಷಯಗಳ ದರ್ಶನಗಳು:
ಏಳು ಮುದ್ರೆಗಳು.—ಪ್ರಕಟನೆ 5:1–8:6.
ಏಳು ತುತೂರಿಗಳು. ಅದರಲ್ಲಿ ಕೊನೇ ಮೂರು ತುತೂರಿಗಳು ಮೂರು ಕಷ್ಟಗಳ ಬಗ್ಗೆ ಹೇಳುತ್ತೆ.—ಪ್ರಕಟನೆ 8:7–14:20.
ಏಳು ಬಟ್ಟಲುಗಳು. ಪ್ರತಿಯೊಂದು ಬಟ್ಟಲು ಭೂಮಿಯ ಮೇಲೆ ದೇವರು ತರುವ ನ್ಯಾಯತೀರ್ಪನ್ನು ಸೂಚಿಸುತ್ತೆ.—ಪ್ರಕಟನೆ 15:1–16:21.
ದೇವರ ಶತ್ರುಗಳ ನಾಶನದ ಬಗ್ಗೆ ಇರುವ ದರ್ಶನಗಳು.—ಪ್ರಕಟನೆ 17:1–20:10.
ಸ್ವರ್ಗ ಮತ್ತು ಭೂಮಿಯನ್ನು ದೇವರು ಆಶೀರ್ವದಿಸುವ ದರ್ಶನಗಳು.—ಪ್ರಕಟನೆ 20:11–22:5.
ಮುಕ್ತಾಯ.—ಪ್ರಕಟನೆ 22:6-21.
ಪ್ರಕಟನೆ ಪುಸ್ತಕವನ್ನ ಅರ್ಥ ಮಾಡಿಕೊಳ್ಳಬೇಕಾದ್ರೆ ಈ ಕೆಳಗಿನ ವಿಷಯಗಳನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು
ತುಂಬ ಜನ “ಅಪಾಕಲಿಪ್ಸ್” ಅಂದ್ರೆ ದೊಡ್ಡ ನಾಶ, ವಿಪತ್ತು ಅಂತ ಅಂದುಕೊಂಡಿರುವುದರಿಂದ ಪ್ರಕಟನೆ ಪುಸ್ತಕನ ಓದೋಕೆ ಭಯಪಡ್ತಾರೆ. ಆದ್ರೆ ದೇವರ ಇಷ್ಟದ ಪ್ರಕಾರ ನಡೆಯುವವರು ಭಯಪಡಬೇಕಾಗಿಲ್ಲ. ಯಾಕಂದ್ರೆ ಪ್ರಕಟನೆ ಪುಸ್ತಕದ ಆರಂಭ ಮತ್ತು ಕೊನೆಯಲ್ಲಿ ಏನಿದೆ ಗೊತ್ತಾ? ಯಾರು ದೇವರ ವಾಕ್ಯವನ್ನ ಓದಿ, ಅರ್ಥ ಮಾಡಿಕೊಂಡು ಅದರ ಪ್ರಕಾರ ನಡೆಯುತ್ತಾರೋ ಅವರು ತುಂಬ ಖುಷಿಯಾಗಿ ಇರುತ್ತಾರೆ.—ಪ್ರಕಟನೆ 1:3; 22:7.
ಪ್ರಕಟನೆ ಪುಸ್ತಕದಲ್ಲಿ ಅನೇಕ ‘ಕನಸುಗಳ’ ಬಗ್ಗೆ ಇದೆ. ಅದು ನಿಜವಾದ ವಿಷಯಗಳನ್ನ ಸೂಚಿಸದೆ ಬೇರೆ ವಿಷಯಗಳನ್ನ ಸೂಚಿಸುತ್ತೆ.—ಪ್ರಕಟನೆ 1:1.
ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾದ ಪ್ರಾಮುಖ್ಯ ಪಾತ್ರಗಳ ಬಗ್ಗೆ ಬೈಬಲ್ನಲ್ಲಿ ಈಗಾಗಲೇ ತಿಳಿಸಿದೆ. ಉದಾಹರಣೆಗೆ:
ಯೆಹೋವ—‘ಸ್ವರ್ಗದಲ್ಲಿರೋ ಸತ್ಯದೇವರು’ ಮತ್ತು ಎಲ್ಲವನ್ನು ಸೃಷ್ಟಿಮಾಡಿದವನು.—ಧರ್ಮೋಪದೇಶಕಾಂಡ 4:39; ಕೀರ್ತನೆ 103:19; ಪ್ರಕಟನೆ 4:11; 15:3.
ಯೇಸು ಕ್ರಿಸ್ತ—“ದೇವರ ಕುರಿಮರಿ.”—ಯೋಹಾನ 1:29; ಪ್ರಕಟನೆ 5:6; 14:1.
ಪಿಶಾಚನಾದ ಸೈತಾನ—ದೇವರ ಶತ್ರು.—ಆದಿಕಾಂಡ 3:14, 15; ಯೋಹಾನ 8:44; ಪ್ರಕಟನೆ 12:9.
ಮಹಾ ಬಾಬೆಲ್—ಹಿಂದಿನ ಕಾಲದ ಬಾಬೆಲ್ ತರನೇ ಇದು ಯೆಹೋವ ದೇವರ ಮತ್ತು ಆತನ ಜನರ ಶತ್ರು ಆಗಿದೆ. ಧರ್ಮಗಳು ಕಲಿಸುವ ಎಲ್ಲಾ ಸುಳ್ಳುಗಳು ಇಲ್ಲಿಂದಾನೇ ಹುಟ್ಟಿಕೊಂಡಿದೆ.—ಆದಿಕಾಂಡ 11:2-9; ಯೆಶಾಯ 13:1, 11; ಪ್ರಕಟನೆ 17:4-6; 18:4, 20.
“ಸಮುದ್ರ”—ದೇವರನ್ನ ವಿರೋಧಿಸುವಂಥ ಕೆಟ್ಟ ಜನರು.—ಯೆಶಾಯ 57:20; ಪ್ರಕಟನೆ 13:1; 21:1.
ಹಿಂದಿನ ಕಾಲದಲ್ಲಿ ದೇವರನ್ನ ಆರಾಧನೆ ಮಾಡ್ಲಿಕ್ಕೆ ಪವಿತ್ರ ಡೇರೆಯಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳು—ಉದಾಹರಣೆಗೆ, ಒಪ್ಪಂದದ ಮಂಜೂಷ, ಗಾಜಿನ ತರ ಇದ್ದ ಸಮುದ್ರ, ದೀಪಗಳು, ಧೂಪ ಮತ್ತು ಬಲಿ ಅರ್ಪಿಸೋಕೆ ಉಪಯೋಗಿಸುತ್ತಿದ್ದ ಯಜ್ಞವೇದಿ.—ವಿಮೋಚನಕಾಂಡ 25:10, 17, 18; 40:24-32; ಪ್ರಕಟನೆ 4:5, 6; 5:8; 8:3; 11:19.
ಕಾಡು ಪ್ರಾಣಿಗಳು—ಮಾನವ ಸರ್ಕಾರಗಳನ್ನ ಸೂಚಿಸುತ್ತೆ.—ದಾನಿಯೇಲ 7:1-8, 17-26; ಪ್ರಕಟನೆ 13:2, 11; 17:3.
ಈ ಪುಸ್ತಕದಲ್ಲಿರುವ ಸಂಖ್ಯೆಗಳಿಗೂ ಬೇರೆ ಬೇರೆ ಅರ್ಥ ಇದೆ.—ಪ್ರಕಟನೆ 1:20; 8:13; 13:18; 21:16.
ಈ ಪುಸ್ತಕದಲ್ಲಿ “ಒಡೆಯನ ದಿನಕ್ಕೆ” ಸಂಬಂಧಪಟ್ಟ ಅನೇಕ ದರ್ಶನಗಳಿವೆ. ಈ ಒಡೆಯನ ದಿನ 1914ರಲ್ಲಿ ಶುರುವಾಯ್ತು. ಆಗಿಂದ ಯೇಸು ದೇವರ ಸರ್ಕಾರದ ರಾಜನಾಗಿ ಆಳ್ವಿಕೆ ಮಾಡ್ತಿದ್ದಾನೆ. (ಪ್ರಕಟನೆ 1:10) ಹಾಗಾಗಿ ಈ ಪುಸ್ತಕದಲ್ಲಿ ತಿಳಿಸಿರುವಂಥ ಪ್ರಾಮುಖ್ಯ ದರ್ಶನಗಳು ನಮ್ಮ ಕಾಲದಲ್ಲಿ ನೆರವೇರುತ್ತೆ ಅಂತ ಹೇಳಬಹುದು.
ಪ್ರಕಟನೆ ಪುಸ್ತಕ ಆಗಿರಲಿ ಅಥವಾ ಬೈಬಲಿನ ಬೇರೆ ಯಾವುದೇ ಪುಸ್ತಕ ಆಗಿರಲಿ ಅದನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದ್ರೆ ನಮಗೆ ದೇವರ ಸಹಾಯ ಬೇಕು. ಜೊತೆಗೆ, ಬೈಬಲನ್ನ ಚೆನ್ನಾಗಿ ಅರ್ಥ ಮಾಡಿಕೊಂಡವರ ಸಹಾಯನೂ ಬೇಕು.—ಅಪೊಸ್ತಲರ ಕಾರ್ಯ 8:26-39; ಯಾಕೋಬ 1:5.