ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಕೀರ್ತನೆ 37:4—“ಕರ್ತನಲ್ಲಿ ಆನಂದವಾಗಿರು”

ಕೀರ್ತನೆ 37:4—“ಕರ್ತನಲ್ಲಿ ಆನಂದವಾಗಿರು”

 “ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ, ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.”—ಕೀರ್ತನೆ 37:4, ಹೊಸ ಲೋಕ ಭಾಷಾಂತರ.

 “ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು.”—ಕೀರ್ತನೆ 37:4, ಪವಿತ್ರ ಬೈಬಲ್‌ ಈಸಿ-ಟು-ರೀಡ್‌ ವರ್ಷನ್‌.

ಕೀರ್ತನೆ 37:4—ಅರ್ಥ

 ಯೆಹೋವನ ಸೇವಕರು ಆತನ ಜೊತೆ ಸ್ನೇಹ ಬೆಳೆಸ್ಕೊಂಡ್ರೆ ಖುಷಿಯಾಗಿ ಇರ್ತಾರೆ ಅಂತ ಕೀರ್ತನೆಗಾರ ಹೇಳ್ತಿದ್ದಾನೆ. ಆತನಿಗೆ ಯಾರೆಲ್ಲ ಹತ್ರ ಆಗಿದ್ದಾರೋ ಅವ್ರ ಆಸೆನ ಯೆಹೋವ ನೆರವೇರಿಸ್ತಾನೆ. a

 “ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ.” ಇದನ್ನ ಹೀಗೂ ಹೇಳಬಹುದು: “ಯೆಹೋವನಲ್ಲಿ ಜಾಸ್ತಿ ಸಂತೋಷ ಕಂಡ್ಕೊಳ್ಳಿ,” “ಕರ್ತನ ಸೇವೆ ಮಾಡೋದ್ರಲ್ಲಿ ಆನಂದ ಕಂಡ್ಕೊಳ್ಳಿ,” ಅಥವಾ “ಕರ್ತ ನಿಮಗೆ ಕೊಟ್ಟಿರೋ ಮಾತಲ್ಲಿ ಆನಂದ ಪಡ್ಕೊಳ್ಳಿ.” ಇದರ ಅರ್ಥ ನಾವು ಸತ್ಯ ದೇವರನ್ನ ಆರಾಧಿಸ್ತಾ ಇದ್ರೆ “ತುಂಬ ಖುಷಿಯಾಗಿ” ಇರ್ತೀವಿ. (ಕೀರ್ತನೆ 37:4) ನಾವ್ಯಾಕೆ ಹೀಗೆ ಹೇಳಬಹುದು?

 ಯೆಹೋವನನ್ನ ಆರಾಧಿಸೋರು ಬೈಬಲನ್ನ ಓದಿ, ಯೆಹೋವನ ತರ ಯೋಚಿಸೋಕೆ ಕಲ್ತಿದ್ದಾರೆ. ಆತನ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದಾರೆ. ಅಷ್ಟೇ ಅಲ್ಲ, ಯೆಹೋವನ ಮಾತು ಕೇಳಿದ್ರೆ ಅವರು ಯಾವಾಗ್ಲೂ ಖುಷಿಯಾಗಿ ಇರ್ತಾರೆ ಅಂತ ಅವ್ರಿಗೆ ಗೊತ್ತು. ಅವರು ದೇವರ ಮಾತು ಕೇಳೋದ್ರಿಂದ ಮನಸ್ಸಾಕ್ಷಿ ಚುಚ್ಚೋ ಕೆಲಸಗಳನ್ನ ಮಾಡೋಕೆ ಹೋಗಲ್ಲ ಮತ್ತು ತಪ್ಪು ತೀರ್ಮಾನಗಳನ್ನ ತಗೊಂಡು ತೊಂದ್ರೆಗಳನ್ನ ಮೈಮೇಲೆ ಎಳ್ಕೊಳಲ್ಲ. (ಜ್ಞಾನೋಕ್ತಿ 3:5, 6) ಉದಾಹರಣೆಗೆ, ದುರಾಸೆ ಇರೋರು, ಮೋಸ ಮಾಡೋರು ಚೆನ್ನಾಗಿ ಇರೋದನ್ನ ನೋಡಿ ದೇವಜನ್ರು ಹೊಟ್ಟೆಕಿಚ್ಚು ಪಡಲ್ಲ, ತಮ್ಮ ಮನಶ್ಶಾಂತಿಯನ್ನ ಹಾಳು ಮಾಡ್ಕೊಳ್ಳಲ್ಲ. (ಕೀರ್ತನೆ 37:1, 7-9) ಯಾಕಂದ್ರೆ ಕೆಟ್ಟ ಜನ್ರನ್ನ ಯೆಹೋವ ಆದಷ್ಟು ಬೇಗ ನಾಶ ಮಾಡ್ತಾನೆ ಮತ್ತು ತನಗೆ ನಿಯತ್ತಾಗಿ ಇರೋರನ್ನ ಆಶೀರ್ವದಿಸ್ತಾನೆ ಅಂತ ಅವ್ರಿಗೆ ಗೊತ್ತು. (ಕೀರ್ತನೆ 37:34) ಅಷ್ಟೇ ಅಲ್ಲ, ಆತನು ತಮ್ಮನ್ನ ಮೆಚ್ಕೊಳ್ತಾನೆ ಅಂತನೂ ಅವ್ರಿಗೆ ಗೊತ್ತು. ಅದಕ್ಕೇ ಅವರು ಯಾವಾಗ್ಲೂ ಖುಷಿಯಾಗಿ ಇರ್ತಾರೆ.—ಕೀರ್ತನೆ 5:12; ಜ್ಞಾನೋಕ್ತಿ 27:11.

 “ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.” ಅಂದ್ರೆ “ಆತನು ನಿಮ್ಮ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನೆ” “ನೀವು ತುಂಬ ಆಸೆ ಪಡೋ ವಿಷ್ಯಗಳನ್ನ ಆತನು ನೆರವೇರಿಸ್ತಾನೆ.” ಹಾಗಂತ ನಾವು ಕೇಳಿದ್ದನ್ನೆಲ್ಲ ಯೆಹೋವ ಕೊಟ್ಟುಬಿಡಲ್ಲ. ಉದಾಹರಣೆಗೆ, ಒಂದು ಮಗುಗೆ ಏನು ಒಳ್ಳೇದು ಅಂತ ಅವ್ರ ಅಪ್ಪ-ಅಮ್ಮಂಗೆ ಚೆನ್ನಾಗಿ ಗೊತ್ತು. ಅದೇ ತರ ನಮಗೆ ಯಾವುದು ಒಳ್ಳೇದು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಮಾಡೋ ಪ್ರಾರ್ಥನೆ, ನಾವು ನಡ್ಕೊಳ್ಳೋ ರೀತಿ ಯೆಹೋವನಿಗೆ ಇಷ್ಟ ಆಗೋ ತರ ಇರಬೇಕು. (ಜ್ಞಾನೋಕ್ತಿ 28:9; ಯಾಕೋಬ 4:3; 1 ಯೋಹಾನ 5:14) ಆಗ ‘ಪ್ರಾರ್ಥನೆ ಕೇಳುವವನಾದ’ ಯೆಹೋವ ನಾವು ಹೇಳೋದನ್ನ ಕೇಳಿಸ್ಕೊಳ್ತಾನೆ ಅನ್ನೋ ನಂಬಿಕೆ ನಮಗಿರುತ್ತೆ.—ಕೀರ್ತನೆ 65:2; ಮತ್ತಾಯ 21:22.

ಕೀರ್ತನೆ 37:4—ಸಂದರ್ಭ

 37ನೇ ಕೀರ್ತನೆಯನ್ನ ಇಸ್ರಾಯೇಲ್ಯರ ರಾಜನಾದ ದಾವೀದ ಬರೆದ. ಅವನು ಅದನ್ನ ಅಕ್ಷರಮಾಲೆಯ ಕ್ರಮದಲ್ಲಿ ಅಥವಾ ಪದ್ಯರೂಪದಲ್ಲಿ ಬರೆದ. b

 ದಾವೀದನಿಗೆ ತುಂಬ ಅನ್ಯಾಯ ಆಗಿತ್ತು. ಸೌಲ ಮತ್ತು ಬೇರೆಯವರು ದಾವೀದನನ್ನ ಕೊಲ್ಲೋಕೆ ತುಂಬ ಪ್ರಯತ್ನ ಮಾಡಿದ್ರು. ಆಗ ಅವನು ಅಲ್ಲಿಂದ ಓಡಿಹೋಗಬೇಕಾಯ್ತು. (2 ಸಮುವೇಲ 22:1) ಆದ್ರೂ ಅವನಿಗೆ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇತ್ತು. ಕೆಟ್ಟವ್ರನ್ನ ಯೆಹೋವ ಒಂದಲ್ಲಾ ಒಂದಿನ ನಾಶ ಮಾಡ್ತಾನೆ ಅಂತನೂ ಅವನಿಗೆ ಗೊತ್ತಿತ್ತು. (ಕೀರ್ತನೆ 37:10, 11) ಕೆಟ್ಟವರು “ಹುಲ್ಲಿನ ತರ ಬೇಗ” ಬೆಳೆದ್ರೂ ಮುಂದೆ ನಾಶ ಆಗ್ತಾರೆ ಅಂತ ಅರ್ಥ ಮಾಡ್ಕೊಂಡಿದ್ದ.—ಕೀರ್ತನೆ 37:2, 20, 35, 36.

 ಯೆಹೋವನ ನೀತಿ-ನಿಯಮಗಳನ್ನ ಪಾಲಿಸೋರಿಗೆ ಏನಾಗುತ್ತೆ? ಪಾಲಿಸದೇ ಇರೋರಿಗೆ ಏನಾಗುತ್ತೆ ಅಂತ 37ನೇ ಕೀರ್ತನೆ ಹೇಳುತ್ತೆ. (ಕೀರ್ತನೆ 37:16, 17, 21, 22, 27, 28) ಹಾಗಾಗಿ ಈ ಕೀರ್ತನೆ ನಮಗೆ ವಿವೇಕ ಪಡ್ಕೊಳ್ಳೋಕೆ ಮತ್ತು ಯೆಹೋವ ಮೆಚ್ಚೋ ತರ ನಡ್ಕೊಳ್ಳೋಕೆ ಸಹಾಯ ಮಾಡುತ್ತೆ.

 ಕೀರ್ತನೆ ಪುಸ್ತಕದ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಈ ವಿಡಿಯೋ ನೋಡಿ.

a ಹೀಬ್ರೂ ಭಾಷೆಯಲ್ಲಿರೋ ದೇವರ ಹೆಸ್ರನ್ನ ಕನ್ನಡದಲ್ಲಿ ಯೆಹೋವ ಅಂತ ಕರೀತಾರೆ. ಆದ್ರೆ ತುಂಬ ಬೈಬಲ್‌ ಭಾಷಾಂತರಗಾರರು ಯೆಹೋವ ಅನ್ನೋ ಹೆಸ್ರಿಗೆ ಬದಲು ಕರ್ತ ಅಂತ ಬಳಸಿದ್ದಾರೆ. ಅವರು ಯಾಕೆ ಹಾಗೆ ಮಾಡಿದ್ದಾರೆ ಅಂತ ತಿಳ್ಕೊಳ್ಳೋಕೆ “ಯೆಹೋವ ಯಾರು?” ಅನ್ನೋ ಲೇಖನ ನೋಡಿ.

b ಈ ಕೀರ್ತನೆಯಲ್ಲಿ ವಚನಗಳನ್ನ ಗುಂಪುಗುಂಪಾಗಿ ರಚಿಸಲಾಗಿದೆ. ಮೊದಲನೇ ಗುಂಪನ್ನ ಹೀಬ್ರು ವರ್ಣಮಾಲೆಯ ಮೊದಲನೇ ಅಕ್ಷರದಿಂದ ಶುರು ಮಾಡಲಾಗಿದೆ. ಎರಡನೇ ಗುಂಪನ್ನ ಎರಡನೇ ಅಕ್ಷರದಿಂದ ಶುರು ಮಾಡಲಾಗಿದೆ. ಹೀಗೆ ಒಂದೊಂದು ಗುಂಪನ್ನೂ ಹೀಬ್ರೂ ವರ್ಣಮಾಲೆಯ ಮುಂದಿನ ಅಕ್ಷರಗಳಿಂದ ಶುರು ಮಾಡಲಾಗಿದೆ. ಇದ್ರಿಂದ ಜನ್ರಿಗೆ ಆ ಕೀರ್ತನೆಯನ್ನ ನೆನಪಲ್ಲಿ ಇಟ್ಕೊಳ್ಳೋಕೆ ಸುಲಭ ಆಗಿರಬಹುದು.