ಪ್ರವಾಹ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ ಹಂಗೆರಿಯ ಯೆಹೋವನ ಸಾಕ್ಷಿಗಳಿಗೆ ಶ್ಲಾಘನೆ
2013ರ ಜೂನ್ ತಿಂಗಳಿನಲ್ಲಿ ಮಧ್ಯ ಯೂರೋಪಿನಲ್ಲಿ ಭಾರಿ ಮಳೆ ಬಂತು. ಪ್ರವಾಹದ ಪರಿಸ್ಥಿತಿ ಎದುರಾಯಿತು. ಹಂಗೆರಿಯ ಡಾನ್ಯೂಬ್ ನದಿಯ ಉದ್ದಕ್ಕೂ ನೀರಿನ ಮಟ್ಟ ಇಷ್ಟು ಜಾಸ್ತಿ ಯಾವತ್ತೂ ಆಗಿರಲಿಲ್ಲ.
ಈ ಪ್ರವಾಹದಿಂದ ಬಹಳಷ್ಟು ಹಾನಿಯಾಯಿತು. ಇದನ್ನು ಪರಿಹರಿಸಲು, ಹಂಗೆರಿಯ ಮಾನವ ಸಂಪನ್ಮೂಲಗಳ ಮಂತ್ರಿಮಂಡಲ ಅಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್ನ ಸಹಾಯ ಕೇಳಿಕೊಂಡಿತು. ಮುಂದೆ ಇಂಥ ಹಾನಿ ಆಗಬಾರದು ಅಂತ ಸ್ಥಳೀಯ ಅಧಿಕಾರಿಗಳು ಕೆಲವು ಯೋಜನೆಗಳನ್ನೂ ಮಾಡಿದ್ದರು. ಅದಕ್ಕೆ ಕೈಜೋಡಿಸುವಂತೆ ಬ್ರಾಂಚ್ ಆಫೀಸ್ ಡಾನ್ಯೂಬ್ ನದಿಯ ತೀರದಲ್ಲಿದ್ದ ಎಲ್ಲಾ ಸಭೆಗಳಿಗೂ ಕರೆ ನೀಡಿತು.
ಈ ಕರೆಗೆ ಸಭೆಗಳು ಹೃತ್ಪೂರ್ವಕವಾಗಿ ಸ್ಪಂದಿಸಿದವು. 72 ಸಭೆಗಳಿಂದ ಸುಮಾರು 900 ಯೆಹೋವನ ಸಾಕ್ಷಿಗಳು ನದಿಯ ದಡವನ್ನು ಬಲಪಡಿಸುವ ಕೆಲಸದಲ್ಲಿ ಭಾಗವಹಿಸಿದರು. ಎಲ್ಲರೂ “ಯೆಹೋವನ ಸಾಕ್ಷಿಗಳು” ಎಂಬ ಬ್ಯಾಡ್ಜನ್ನು ಹಾಕಿಕೊಂಡಿದ್ದರು. ಅದರಲ್ಲಿ ತಮ್ಮ ಮತ್ತು ತಮ್ಮ ನಗರದ ಹೆಸರೂ ಇತ್ತು.
ಹಂಗೆರಿಯನ್ ರೆಡ್ ಕ್ರಾಸ್ನ ಒಬ್ಬ ಪ್ರತಿನಿಧಿ ಅಲ್ಲಿನ ಸಭೆಗೆ ಒಂದು ಪತ್ರ ಬರೆದು ಹೇಳಿದ್ದು: “ನಿಮಗೆ ತುಂಬಾ ವಂದನೆಗಳು. ತುಂಬಾ ದೂರ ದೂರದಿಂದ ಬಂದು ನಮಗೆ ಸಹಾಯ ಮಾಡಿದ್ದೀರ. ಇಂಥ ಐಕ್ಯತೆ ಮತ್ತು ಸಿದ್ದಮನಸ್ಸನ್ನು ಕಾಣುವುದು ತುಂಬಾನೇ ಅಪರೂಪ. ನಿಮ್ಮ ಬಗ್ಗೆ ನಮ್ಮ ಗೌರವ ಇನ್ನಷ್ಟು ಹೆಚ್ಚಿದೆ. ಖಂಡಿತ ಇದನ್ನು ನಾವು ಗೌರವಿಸುತ್ತೇವೆ. ನಮ್ಮ ನಗರದವರಿಗೆ ನೀವೊಂದು ಉತ್ತಮ ಮಾದರಿ!”
ಹಂಗೆರಿಯ ಪಾರ್ಲಿಮೆಂಟ್ನ ಸದಸ್ಯರೊಬ್ಬರು ಬ್ರಾಂಚಿಗೆ ಒಂದು ಪತ್ರ ಬರೆದರು. ಅವರು ವಿಪತ್ತು ಪರಿಹಾರ ಸಂಸ್ಥೆಯಲ್ಲಿ ಅದ್ಯಕ್ಷರೂ ಆಗಿದ್ದಾರೆ. ಪತ್ರದಲ್ಲಿ ಅವರು, ಯೆಹೋವನ ಸಾಕ್ಷಿಗಳ ಸಹಾಯಕ್ಕಾಗಿ ತಮ್ಮ ಮನದಾಳದ ಕೃತಜ್ಞತೆಯನ್ನು ತಿಳಿಸಿದರು.