ಒಂದು ಶತಮಾನ ಯೆಹೋವನ ಸ್ತುತಿಗಾನ
“ನ್ಯೂಯಾರ್ಕ್ನಲ್ಲಿರುವ ಕೊಲಂಬಿಯಾ ಸ್ಟುಡಿಯೊಸ್ನಲ್ಲಿ ಯೆಹೋವನ ಸ್ತುತಿಗೀತೆಗಳ ಧ್ವನಿಮುದ್ರಣದ ಕೆಲಸ ನಡಿಯಲಿದೆ. ಅಲ್ಲಿ ಹೋಗಿ ನೀನೊಂದ್ ಹಾಡು ಹಾಡ್ಬೇಕು. ಈ ವಿಷಯ ನಿನ್ನಲ್ಲೇ ಇರಲಿ.”
ಇದು ವಿಲ್ಯಮ್ ಮಾಕ್ರಿಜ್ಗೆ ಸಹೋದರ ಚಾರ್ಲ್ಸ್ ಟೇಜ್ ರಸಲ್ರವರು * ನೀಡಿದ ಅಪೂರ್ವ ನೇಮಕವಾಗಿತ್ತು. ಇದನ್ನು ಅವರು 1913ರಲ್ಲಿ ಪೂರೈಸಿದರು. ಅವರು ಹಾಡಿದ ಹಾಡು “ದ ಸ್ವೀಟ್ ಬೈ ಆ್ಯಂಡ್ ಬೈ.” ಇದನ್ನು 78-rpm ಧ್ವನಿ ಸುರಳಿಯಲ್ಲಿ ಮುದ್ರಿಸಲಾಯಿತು. ಆ ಹಾಡನ್ನು “ಫೋಟೋ-ಡ್ರಾಮ ಆಫ್ ಕ್ರಿಯೇಷನ್”ನ ಆರಂಭಗೀತೆಯನ್ನಾಗಿ ಉಪಯೋಗಿಸಲಾಗುವುದು ಎಂದು ವಿಲ್ಯಮ್ಗೆ ತಿಳಿದುಬಂತು. “ಫೋಟೋ-ಡ್ರಾಮ” ಒಂದು ದೃಶ್ಯ ಪ್ರದರ್ಶನವಾಗಿದ್ದು ಅದರಲ್ಲಿ ಗ್ಲಾಸ್ ಸ್ಲೈಡ್ ಮೇಲೆ ಬರೆದ ಚಿತ್ರಗಳು ಮತ್ತು ಮೂಕ ಚಲನಚಿತ್ರಗಳು ಇರುತ್ತಿದ್ದವು. ಆ ಚಿತ್ರಗಳನ್ನು ಒಂದಾದ ನಂತರ ಒಂದರಂತೆ ಬಿತ್ತರಿಸುವಾಗ ಹಿನ್ನಲೆಯಲ್ಲಿ ಬೈಬಲ್ ಭಾಷಣಗಳನ್ನು ಮತ್ತು ಸಂಗೀತವನ್ನು ಅಳವಡಿಸಲಾಯಿತು. ಜನವರಿ 1914ರಲ್ಲಿ ‘ಫೋಟೋ ಡ್ರಾಮದ’ ಪ್ರಪ್ರಥಮ ಪ್ರದರ್ಶನ ನ್ಯೂಯಾರ್ಕ್ ನಗರದಲ್ಲಾಯಿತು.
ಈ “ಫೋಟೋ ಡ್ರಾಮ”ದಲ್ಲಿ 50ಕ್ಕಿಂತ ಹೆಚ್ಚು ಹಾಡುಗಳಿದ್ದವು. ಇಂಗ್ಲಿಷ್ ಭಾಷೆಯ ಈ ಡ್ರಾಮದ ಪ್ರದರ್ಶನ ಹಲವಾರು ಕಡೆಗಳಲ್ಲಿ ನಡೆದವು. ಹೆಚ್ಚಿನ ಸಂಗೀತಗಳ ಸಂಯೋಜನೆಯನ್ನು ಯೆಹೋವನ ಸಾಕ್ಷಿಗಳಲ್ಲದವರು ಮಾಡಿದ್ದರು. ಅವುಗಳಲ್ಲಿ ಕೆಲವೊಂದನ್ನು ಯೆಹೋವನ ಸಾಕ್ಷಿಗಳು ಅಧಿಕೃತವಾಗಿ ಪಡೆದುಕೊಂಡು ನಮ್ಮ ಆಗಿನ ಹಾಡುಪುಸ್ತಕವಾದ “ಹಿಮ್ಸ್ ಆಫ್ ದಿ ಮಿಲೆನಿಯಲ್ ಡಾನ್” ಪುಸ್ತಕದ ಸಾಹಿತ್ಯವನ್ನು ಅವುಗಳಿಗೆ ಜೊಡಿಸಿದರು. ಹೀಗೆ ‘ಫೋಟೋ-ಡ್ರಾಮಕ್ಕಾಗಿ’ ಅಧಿಕೃತವಾಗಿ ಪಡೆದ ಹಾಡುಗಳಲ್ಲಿ ಸಹೋದರ ವಿಲ್ಯಮ್ ಹಾಡಿದ ಹಾಡು ಸಹ ಒಂದು.
ತಿಳುವಳಿಕೆಗೆ ತಕ್ಕಂತೆ ಪದಗಳು
ಎಷ್ಟೋ ವರ್ಷಗಳ ತನಕ, ಬೇರೆಯವರು ಬರೆದ ಸ್ತುತಿಗೀತೆಗಳನ್ನೇ ಯೆಹೋವನ ಸಾಕ್ಷಿಗಳು ಆರಾಧನೆಗಾಗಿ ಉಪಯೋಗಿಸುತ್ತಿದ್ದರು. ಅಗತ್ಯವಿದ್ದಲ್ಲಿ, ಬೈಬಲ್ ಸತ್ಯಗಳ ತಿಳುವಳಿಕೆಗನುಸಾರ ಕೆಲವೊಂದು ಪದಗಳನ್ನು ಬದಲಾಯಿಸಿದರು.
ಉದಾಹರಣೆಗೆ, ಫೋಟೋ ಡ್ರಾಮದಲ್ಲಿ “ದ ಕಿಂಗ್ ಇಸ್ ಮಾರ್ಚಿಂಗ್ ಆನ್” ಎಂಬ ಹಾಡಿತ್ತು. ಆ ಹಾಡನ್ನು “ಬ್ಯಾಟಲ್ ಹಿಮ್ ಆಫ್ ದ ರಿಪಬ್ಲಿಕ್” ಎಂಬ ಹಾಡಿಗೆ ಹೊಂದಿಸಿಕೊಂಡರು. “ಬ್ಯಾಟಲ್ ಹಿಮ್ ಆಫ್ ದ ರಿಪಬ್ಲಿಕ್” ಹಾಡಿನಲ್ಲಿ “ನಾನು ಕರ್ತನ ಬರೋಣದ ಮಹಿಮೆಯನ್ನು ಕಂಡಿದ್ದೇನೆ” ಎಂಬ ಸಾಲಿತ್ತು. ಆ ಸಾಲನ್ನು “ನಾನು ಕರ್ತನ ಸಾನಿಧ್ಯವನ್ನು ಕಾಣಬಲ್ಲೆ” ಎಂದು ಬದಲಾಯಿಸಲಾಯಿತು. ಕಾರಣ, ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ಕೇವಲ ಆತನ ಬರೋಣವೊಂದೆ ಅಲ್ಲ, ಆತನ ಸಾನಿಧ್ಯದ ಸಮಯಾವಧಿ ಸಹ ಸೇರಿದೆ ಎಂದು ಸಾಕ್ಷಿಗಳು ಶಾಸ್ತ್ರವಚನಗಳಿಂದ ತಿಳಿದುಕೊಂಡಿದ್ದರು.—ಮತ್ತಾಯ 24:3.
1966ರಲ್ಲಿ ಸಿಂಗಿಂಗ್ ಆ್ಯಂಡ್ ಅಕಂಪನಿಯಿಂಗ್ ಯುವರ್ಸೆಲ್ವ್ಸ್ ವಿತ್ ಮ್ಯೂಸಿಕ್ ಇನ್ ಯುವರ್ ಹಾರ್ಟ್ಸ್ ಎಂಬ ಸಂಗೀತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಯಾವುದೇ ಐಹಿಕ ಅಥವಾ ಬೇರೆ ಧರ್ಮಗಳ ಮೂಲಗಳಿಂದ ಬಂದ ಹಾಡುಗಳ ಸುಳಿವಿಲ್ಲದಂತೆ ನೋಡಿಕೊಳ್ಳಲಾಯಿತು. ಅದೇ ವರ್ಷದಲ್ಲಿ, ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ವಾದ್ಯಮೇಳದ ಗುಂಪು ಈ ಹಾಡುಪುಸ್ತಕದಲ್ಲಿದ್ದ 119 ಹಾಡುಗಳನ್ನು ರೆಕಾರ್ಡ್ ಮಾಡಿತು. ಸಭೆಗಳು ಕೂಟವಾಗಿ ಕೂಡಿಬಂದು ಹಾಡುಗಳನ್ನು ಹಾಡುವಾಗ ಆ ರೆಕಾರ್ಡಿಂಗ್ಗಳನ್ನು ಹಾಕಲಾಗುತ್ತಿತ್ತು. ಕೆಲವು ಸಹೋದರರು ತಮ್ಮ ಮನೆಗಳಲ್ಲೂ ಇದನ್ನು ಕೇಳಿ ಆನಂದಿಸುತ್ತಿದ್ದರು.
2009ರಲ್ಲಿ ಯೆಹೋವನ ಸಾಕ್ಷಿಗಳು ಸಿಂಗ್ ಟು ಜೆಹೋವ (ಯೆಹೋವನಿಗೆ ಹಾಡಿರಿ) ಎಂಬ ಹೊಸ ಗೀತೆಪುಸ್ತಕವನ್ನು ಬಿಡುಗಡೆ ಮಾಡಿದರು. ಅದರಲ್ಲಿರುವ ಹಾಡುಗಳನ್ನು ಹಲವಾರು ಭಾಷೆಗಳಲ್ಲಿ ಹಾಡಿ ರೆಕಾರ್ಡ್ ಮಾಡಲಾಯಿತು. 2013ರಲ್ಲಿ ಮಕ್ಕಳಿಗಾಗಿ ಹಾಡಿನ ವಿಡಿಯೋಗಳನ್ನು ಹೊರತರಲು ಸಹ ಶುರುಮಾಡಿದರು. ಆ ಹಾಡುಗಳಲ್ಲಿ ಒಂದು ಪ್ರೇ ಎನಿ ಟೈಮ್. ಇದು jw.org ವೆಬ್ ಸೈಟ್ನಲ್ಲಿ ಲಭ್ಯ. ಪ್ರತಿ ತಿಂಗಳು, ಲಕ್ಷಾಂತರ ಜನರು ಈ ವೆಬ್ ಸೈಟ್ಗೆ ಭೇಟಿ ನೀಡಿ ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.
ಈ ಹಾಡುಗಳಿಗಾಗಿ ಹಲವು ಮಂದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಜೂಲಿ ಎಂಬವರು ಸಿಂಗ್ ಟು ಜೆಹೋವ ಪುಸ್ತಕದ ಬಗ್ಗೆ ಹೇಳಿದ್ದು: “ಈ ಹೊಸ ಹಾಡುಗಳು ತುಂಬಾ ಚೆನ್ನಾಗಿವೆ. ನಾನು ಒಬ್ಬಳೆ ಇದ್ದಾಗ ನನ್ನ ಭಾವನೆಗಳನ್ನ ಬಣ್ಣಿಸೊ ಹಾಡುಗಳನ್ನ ಕೇಳ್ತಿನಿ. ಇದರಿಂದ ಯೆಹೋವನಿಗೆ ಇನ್ನಷ್ಟು ಆಪ್ತಳಾಗಿದ್ದೀನಿ. ನನ್ನೆಲ್ಲವನ್ನು ಯೆಹೋವನ ಸೇವೆಗಾಗಿ ಮುಡಿಪಾಗಿಡಬೇಕು ಎಂಬ ತೀರ್ಮಾನ ಇನ್ನೂ ದೃಢವಾಗಿದೆ.”
7 ಮತ್ತು 9 ವಯಸ್ಸಿನ ಮಕ್ಕಳಿರುವ ತಾಯಿ ಹೆದರ್, ಪ್ರೇ ಎನಿ ಟೈಮ್ ವಿಡಿಯೋ ತನ್ನ ಮಕ್ಕಳ ಮೇಲೆ ಬೀರಿದ ಪ್ರಭಾವದ ಕುರಿತು ಹೀಗೆ ಹೇಳಿದರು: “ನನ್ನ ಮಕ್ಕಳು ಬರೀ ನನ್ ಮುಂದೆ ಅಥವಾ ಬೆಳಗ್ಗೆ ಎದ್ದಾಗ ಮಾತ್ರ ಅಲ್ಲ, ಯಾವಾಗೆಲ್ಲ ಯೆಹೋವ ದೇವ್ರ ಹತ್ತಿರ ಮಾತಾಡಬೇಕು ಅಂತ ಅನ್ಸುತ್ತೊ ಆಗೆಲ್ಲ ಪ್ರಾರ್ಥಿಸಬೇಕೆಂದು ಈ ವಿಡಿಯೋ ನೋಡಿ ಕಲ್ತಿದ್ದಾರೆ.”
^ ಪ್ಯಾರ. 3 ಮೊದಲು ಬೈಬಲ್ ವಿದ್ಯಾರ್ಥಿಗಳು ಎಂದು ಕರೆಯಲಾಗುತ್ತಿದ್ದ ಯೆಹೋವನ ಸಾಕ್ಷಿಗಳ ಮುಂದಾಳತ್ವವನ್ನು ಚಾರ್ಲ್ಸ್ ಟೇಜ್ ರಸಲ್ರವರು (1852-1916) ವಹಿಸಿದರು.