ಮಾಹಿತಿ ಇರುವಲ್ಲಿ ಹೋಗಲು

ಅಂತರವನ್ನು ಅಳಿಸಿ ಹಾಕಿದ ನೇರಪ್ರಸಾರ

ಅಂತರವನ್ನು ಅಳಿಸಿ ಹಾಕಿದ ನೇರಪ್ರಸಾರ

ಅಕ್ಟೋಬರ್‌ 5, 2013ರ ಒಂದು ಶನಿವಾರ. ವಾಚ್‌ಟವರ್‌ ಬೈಬಲ್‌ ಅಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 129ನೇ ವಾರ್ಷಿಕ ಕೂಟ ನಡೆಯಲಿದ್ದ ದಿನವದು. ಆ ಸಡಗರದ ದಿನಕ್ಕಾಗಿ ಕೆಲವರು ಪ್ರತ್ಯಕ್ಷ ಸಾಕ್ಷಿಗಳಾಗಲು ಅದು ನಡೆಯಲಿದ್ದ ಸ್ಥಳಕ್ಕೆ ಬಂದಿದ್ದರು. ಇನ್ನೂ ಕೆಲವರು ತಮ್ಮ ತಮ್ಮ ಊರುಗಳಲ್ಲೇ ಕುಳಿತು ಅದರ ನೇರಪ್ರಸಾರವನ್ನು ನೋಡುವ ಮೂಲಕ ಅದನ್ನು ತಮ್ಮ ಕಣ್ತುಂಬಿಸಿಕೊಂಡರು. ಹೀಗೆ 21 ದೇಶಗಳ 2,57,294 ಜನರು ಆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಂಡರು. ಮತ್ತೆ ಕೆಲವರು ಮಾರನೆ ದಿನ ಅದರ ಮರುಪ್ರಸಾರವನ್ನು ನೋಡಿ ಆನಂದಿಸಿದರು. ಹೀಗೆ 31 ದೇಶಗಳ 14,13,676 ಜನರು ಆ ಕಾರ್ಯಕ್ರಮದ ಸವಿಯನ್ನು ಸವಿದು ನೋಡಿದರು. ಯೆಹೋವನ ಸಾಕ್ಷಿಗಳ ಇತಿಹಾಸದಲ್ಲೇ ಇದೊಂದು ದಾಖಲೆ. ಇದನ್ನು ಬಿಟ್ಟರೆ ಹೆಚ್ಚಿನ ಹಾಜರಿ ಇದ್ದದ್ದು, ಏಪ್ರಿಲ್‌ 28, 2013ರಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲೇ. ಅದಕ್ಕೆ 13,27,704 ಜನರು ಹಾಜರಿದ್ದರು. ಅದು ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದಲ್ಲಿ ಜರುಗಿತ್ತು.

ಯೆಹೋವನ ಸಾಕ್ಷಿಗಳು ತಮ್ಮ ಅಧಿವೇಶನಗಳನ್ನು ಅಂತರರಾಷ್ಟ್ರೀಯ ಕೇಳುಗರಿಗೆ ಪ್ರಸಾರ ಮಾಡಲು ಆರಂಭಿಸಿದ್ದು 1920ರ ದಶಕದಲ್ಲಿ. ಇದಕ್ಕಾಗಿ ಅವರು ದೂರ ದೂರಕ್ಕೆ ಪ್ರಸಾರ ಮಾಡಬಹುದಾದಂಥ ರೇಡಿಯೋ ಮಾಧ್ಯಮಗಳನ್ನು ಮತ್ತು ದೂರವಾಣಿ ಮಾರ್ಗಗಳನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಇಂಟರ್‌ನೆಟ್‌ ಸೌಲಭ್ಯದಿಂದಾಗಿ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೆ ಅದನ್ನು ಅದು ನಡೆಯುವ ಸಮಯದಲ್ಲೇ ಅಥವಾ ನಡೆದ ಕೂಡಲೇ ಪ್ರಪಂಚದಾದ್ಯಂತ ಕೇಳಲೂ ಬಹುದು, ನೋಡಲೂ ಬಹುದು. ಅಮೆರಿಕದಲ್ಲಿರುವ ವಿಲಿಯಂ ಎಂಬ ಯೆಹೋವನ ಸಾಕ್ಷಿಯೊಬ್ಬರು 1942ರಲ್ಲಿ ವರ್ಜಿನಿಯದಲ್ಲಿನ ರಿಚ್‌ಮಂಡ್‌ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಿದ್ದರು. ಅಲ್ಲಿ ನಡೆದ ಕಾರ್ಯಕ್ರಮವನ್ನು ಅವರು ದೂರವಾಣಿಯ ಮೂಲಕ ಆಲಿಸಿದ್ದರು. ಈಗ ನಡೆದ ವಾರ್ಷಿಕ ಕೂಟದ ಕಾರ್ಯಕ್ರಮವನ್ನು ಅವರು ನೋಡಿದ್ದರು. ತಮ್ಮ ಹಿಂದಿನ ಅನುಭವಕ್ಕೂ, ಈಗಿನ ಅನುಭವಕ್ಕೂ ಹೋಲಿಸಿ ಅವರು ಹೇಳುವುದು: “ಕಾರ್ಯಕ್ರಮವನ್ನು ಕೇವಲ ಕೇಳಿಸಿಕೊಳ್ಳುವುದಕ್ಕೂ, ಅದನ್ನು ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೋಡುವಾಗ ನೀವು ಪಡೆಯುವ ಪ್ರಯೋಜನ ಅಪರಿಮಿತ.”

ಯೆಹೋವನ ಸಾಕ್ಷಿಗಳ ಬೇರೆ ಬೇರೆ ಬ್ರಾಂಚ್‌ಗಳಲ್ಲಿ ಕೆಲಸಮಾಡುವ ಹಲವಾರು ಸ್ವಯಂಸೇವಕರು ಈ ವಾರ್ಷಿಕ ಕಾರ್ಯಕ್ರಮದ ಪ್ರಸಾರದ ಸಿದ್ಧತೆಗಾಗಿ ಸುಮಾರು ಒಂದು ವರ್ಷ ಎಡಬಿಡದೆ ಕೆಲಸ ಮಾಡಿದರು. ಈ ಪ್ರಸಾರದ ಸಮಯದಲ್ಲಿ ಟೆಕ್ನಿಷಿಯನ್‌ಗಳು ಕಾರ್ಯಕ್ರಮದ ಕೇಂದ್ರ ಸ್ಥಾನವಾದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಿಂದ ಪ್ರತಿಯೊಂದು ಆಗು ಹೋಗುಗಳನ್ನು ಗಮನಿಸುತ್ತಿದ್ದರು. ಈ ಕಾರ್ಯಕ್ರಮವನ್ನು 15 ಬೇರೆ ಬೇರೆ ಕಾಲವಲಯಗಳಲ್ಲಿ (ಟೈಂ ಜೋನ್‌) ಪ್ರಸಾರ ಮಾಡಬೇಕಿತ್ತು. ಹಾಗಾಗಿ ಹಗಲು ರಾತ್ರಿಯೆನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಟೆಕ್ನಿಷಿಯನ್‌ಗಳು ದುಡಿದರು. ಅವರಲ್ಲೊಬ್ಬರು ಸಹೋದರ ರಯನ್‌. ಅವರು ಹೇಳುವುದು: “ಇದಕ್ಕಾಗಿ ನಾವು ನಮ್ಮ ನಿದ್ದೆ ತ್ಯಾಗಮಾಡಬೇಕಾಯ್ತು. ಆದ್ರೆ, ಅದರಿಂದ ಎಷ್ಟೋ ಜನ ಪ್ರಯೋಜನ ಪಡೆದುಕೊಂಡರು ಅಂತ ತಿಳಿದಾಗ, ನಾವು ಪಟ್ಟ ಪರಿಶ್ರಮ ಸಾರ್ಥಕ ಎಂದೆನಿಸಿತು.”

ಆಸ್ಟ್ರೇಲಿಯಾದ ಉತ್ತರ ಕ್ಷೇತ್ರದ ಕ್ಯಾಥರೀನ್‌ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು