ಮಾಹಿತಿ ಇರುವಲ್ಲಿ ಹೋಗಲು

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 133ನೇ ತರಗತಿಯ ಪದವಿ ಪ್ರದಾನ ಕಾರ್ಯಕ್ರಮ

2012, ಸೆಪ್ಟೆಂಬರ್‌ 8 ಶನಿವಾರ

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 133ನೇ ತರಗತಿಯ ಪದವಿ ಪ್ರದಾನ ಕಾರ್ಯಕ್ರಮ

ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಎಜ್ಯುಕೇಷನಲ್‌ ಸೆಂಟರ್‌ನಲ್ಲಿ ‘ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌’ ಜರುಗುತ್ತದೆ. 2012ರ ಸಾಲಿನ 133ನೇ ತರಗತಿಯಲ್ಲಿ 48 ವಿದ್ಯಾರ್ಥಿಗಳು ಐದು ತಿಂಗಳು ಸತತ ಅಧ್ಯಯನದಲ್ಲಿ ಒಳಗೂಡಿದ್ದರು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಅವರ ಬಂಧುಮಿತ್ರರು, ಹಿತೈಷಿಗಳು ಕೂಡಿಬಂದಿದ್ದರು. ನೆರೆದು ಬಂದಿದ್ದವರ ಒಟ್ಟು ಹಾಜರಿ 9,694!

1943ರಲ್ಲಿ ಆರಂಭವಾದ ಗಿಲ್ಯಡ್‌ ಸ್ಕೂಲ್‌ನಲ್ಲಿ ಈ ವರೆಗೆ 8,000ಕ್ಕಿಂತ ಹೆಚ್ಚು ಮಂದಿ ಅನುಭವಸ್ಥ ಸೇವಕರು ಮಿಷನರಿ ಸೇವೆಗಾಗಿ ತರಬೇತಿ ಪಡೆದಿದ್ದಾರೆ. ಈ ತರಬೇತಿಯ ಮುಖ್ಯ ಪಠ್ಯಪುಸ್ತಕ ಬೈಬಲ್‌. ಇಲ್ಲಿ ಕೊಡುವ ಬೈಬಲ್‌ ಆಧರಿತ ತರಬೇತಿಯು ವಿದ್ಯಾರ್ಥಿಗಳ ನಂಬಿಕೆಯನ್ನು ಬಲಗೊಳಿಸುತ್ತದೆ. ಮಾತ್ರವಲ್ಲ ಮಿಷನರಿ ಸೇವೆಯಲ್ಲಿ ಬರುವ ಸವಾಲುಗಳನ್ನು ಜಯಿಸಲು ಬೇಕಾದ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

“ಪ್ರೀತಿಯೋಗ್ಯವಾದ ವಿಷಯಗಳನ್ನೇ ಆಲೋಚಿಸಿ.” ಇದು ಮೊದಲ ಭಾಷಣದ ಶೀರ್ಷಿಕೆ. ಆಡಳಿತ ಮಂಡಳಿಯ ಸದಸ್ಯರಾದ ಸಹೋದರ ಆ್ಯಂಥನಿ ಮಾರಿಸ್‌ ಆ ಭಾಷಣವನ್ನು ಸಾದರಪಡಿಸಿದರು. ಇವರು ಅಂದಿನ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಅವರ ಭಾಷಣವು ಫಿಲಿಪ್ಪಿ 4:8​ರ ಮೇಲೆ ಆಧರಿತವಾಗಿತ್ತು. “ಯಾವ ವಿಷಯಗಳು ... ಪ್ರೀತಿಯೋಗ್ಯವಾಗಿವೆಯೊ ... ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ.”

ಪ್ರೀತಿಯೋಗ್ಯ ವಿಷಯಗಳನ್ನು ಆಲೋಚಿಸುವುದರಿಂದ ಪ್ರೀತಿಯು ಬತ್ತಿಹೋಗಿರುವ ಈ ಲೋಕದಲ್ಲೂ ನಮ್ಮ ಮನೋಭಾವವನ್ನು ಸಕಾರಾತ್ಮಕವಾಗಿಡಲು ಸಾಧ್ಯ ಎಂದು ವಿವರಿಸಿದರು ಸಹೋದರ ಮಾರಿಸ್‌. “ಪ್ರೀತಿಯೋಗ್ಯವಾದ ವಿಷಯಗಳನ್ನು ಹುಡುಕಿ ಅವುಗಳ ಬಗ್ಗೆ ಯೋಚಿಸಿ. ನಿಮ್ಮನ್ನು ಬೇರೆಯವರ ಪ್ರೀತಿಗೆ ಯೋಗ್ಯರನ್ನಾಗಿ ಮಾಡುವಂಥ ಸದ್ಗುಣಗಳನ್ನು ಬೆಳೆಸಿಕೊಳ್ಳಿ” ಎಂದರು.

ಉದಾಹರಣೆಗೆ ನಮ್ಮ ತಂದೆಯಾದ ಯೆಹೋವನು ನಮ್ಮ ತಪ್ಪುಗಳ ಮೇಲೆ ಗಮನ ನೆಡುವುದಿಲ್ಲ. (ಕೀರ್ತನೆ 130:3) ಆತನ ಈ ಉತ್ತಮ ಮಾದರಿಯನ್ನು ಅನುಕರಿಸಿ. “ನಿಮ್ಮ ಸಹೋದರ ಸಹೋದರಿಯರ ತಪ್ಪುಗಳ ಮೇಲೆ ಗಮನ ನೆಡಬೇಡಿ. ಆಗ ಇಂಥ ಒಳ್ಳೇ ಗುಣಗಳಿಂದಾಗಿ ನೀವು ಇತರರ ಪ್ರೀತಿಗೆ ಯೋಗ್ಯರಾಗುತ್ತೀರಿ” ಎಂದು ಉತ್ತೇಜಿಸಿದರು ಸಹೋದರ ಮಾರಿಸ್‌.

“ಜ್ಞಾನವನ್ನು ಪಡೆದುಕೊ, ಆದರೆ ಅತಿ ಜ್ಞಾನಿಯಾಗಬೇಡ.” ಪ್ರಸಂಗಿ 7:16​ರ ಮೇಲೆ ಆಧರಿತವಾದ ಈ ಭಾಷಣವನ್ನು ಅಮೆರಿಕದ ಬ್ರಾಂಚ್‌ ಕಮಿಟಿ ಸದಸ್ಯರಾದ ಸಹೋದರ ಹ್ಯಾರಲ್ಡ್‌ ಕಾರ್ಕರ್ನ್‌ ನೀಡಿದರು. ನಾವು ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಮತ್ತು ಅದು ತಲೆಗೇರಬಾರದು ಎಂದು ದೇವರು ಬಯಸುತ್ತಾನೆ ಎಂದರವರು.

ನಾವು ಇತರರಿಗೆ ಬುದ್ಧಿವಾದ ಹೇಳುವಾಗ ಅಥವಾ ಅವರನ್ನು ತಿದ್ದುವಾಗ ಪ್ರೀತಿಪರರಾಗಿರುವುದು ಎಷ್ಟು ಪ್ರಾಮುಖ್ಯ ಎಂದು ಸಹ ಸಹೋದರ ಕಾರ್ಕರ್ನ್‌ ತೋರಿಸಿಕೊಟ್ಟರು. ದೇವರು ನಮ್ಮ ಸಹೋದರರಿಂದ ನಿರೀಕ್ಷಿಸುವುದಕ್ಕಿಂತ ಹೆಚ್ಚನ್ನು ನಾವು ನಿರೀಕ್ಷಿಸಬಾರದು. “ನೀವು ಜ್ಞಾನ, ವಿವೇಕ, ತಿಳಿವಳಿಕೆಯನ್ನು ಒಳ್ಳೇ ರೀತಿ ಬಳಸಿ, ಆಗ ಸಹೋದರರು ನಿಮ್ಮೊಂದಿಗಿರಲು ತುಂಬ ಇಷ್ಟಪಡುತ್ತಾರೆ” ಎಂದರು ಅವರು.

“ದೇವರ ಮಹಾ ಕ್ರಿಯೆಗಳನ್ನು ಮರೆಯಬೇಡಿ.” (ಕೀರ್ತನೆ 78:8) ಈ ಭಾಷಣವನ್ನು ಆಡಳಿತ ಮಂಡಳಿಯ ಸದಸ್ಯರಾದ ಗೈ ಪಿಯರ್ಸ್‌ ಒಂದು ಮಗುವಿನ ಉದಾಹರಣೆಯೊಂದಿಗೆ ಶುರುಮಾಡಿದರು. ಮಗು ಒಳ್ಳೇ ರೀತಿ ನಡೆದುಕೊಂಡರೆ ಹೆತ್ತವರಿಗೆ ಒಳ್ಳೇ ಹೆಸರನ್ನು ತರುತ್ತದೆ, ಕೆಟ್ಟದಾಗಿ ವರ್ತಿಸಿದರೆ ಹೆತ್ತವರಿಗೆ ಕೆಟ್ಟ ಹೆಸರನ್ನು ತರುತ್ತದೆ. (ಜ್ಞಾನೋಕ್ತಿ 20:11) ಅದೇ ರೀತಿ ನಾವು ನಡೆದುಕೊಳ್ಳುವ ರೀತಿ ನಮ್ಮ ತಂದೆಯಾದ ಯೆಹೋವನಿಗೆ ಒಂದೋ ಒಳ್ಳೇ ಹೆಸರನ್ನು ಅಥವಾ ಕೆಟ್ಟ ಹೆಸರನ್ನು ತರುತ್ತದೆ. ‘ಯಾರು ದೇವರ ಮಕ್ಕಳು ಮತ್ತು ಯಾರು ಪಿಶಾಚನ ಮಕ್ಕಳು ಎಂಬುದು ಈ ವಾಸ್ತವಾಂಶದಿಂದ ವ್ಯಕ್ತವಾಗುತ್ತದೆ: ನೀತಿಯನ್ನು ನಡಿಸುತ್ತಾ ಮುಂದುವರಿಯದೆ ಇರುವವನು ದೇವರಿಂದ ಹುಟ್ಟಿದವನಲ್ಲ.’—1 ಯೋಹಾನ 3:10.

ವಿದ್ಯಾರ್ಥಿಗಳು ದೀನತೆಯಂಥ ಕ್ರೈಸ್ತ ಗುಣಗಳನ್ನು ತೋರಿಸಿರುವುದರಿಂದಲೇ ಗಿಲ್ಯಡ್‌ ಸ್ಕೂಲ್‌ಗೆ ಹಾಜರಾಗುವ ಸದವಕಾಶ ಪಡೆದಿದ್ದಾರೆಂದು ಸಹೋದರ ಪಿಯರ್ಸ್‌ ಹೇಳಿದರು. ಮುಂದೆಯೂ ದೀನರಾಗಿ ಉಳಿಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಗಿಲ್ಯಡ್‌ ತರಬೇತಿ ಪಡೆದ ಕಾರಣ ನೀವು ಇತರರಿಗಿಂತ ಶ್ರೇಷ್ಠರೆಂದಲ್ಲ. ಬದಲಿಗೆ ನೀವು ಲೋಕವ್ಯಾಪಕ ಸಹೋದರತ್ವದ ಐಕ್ಯವನ್ನು ಕಾಪಾಡಲು ಮತ್ತು ದೀನತೆಯಲ್ಲಿ ಮಾದರಿಯನ್ನಿಡಲು ಹೆಚ್ಚು ಸಮರ್ಥರಾಗಿದ್ದೀರಿ ಎಂದು ಹೇಳಿದರು. (ಕೀರ್ತನೆ 133:1) “ನೀವೀಗ ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಈ ಜ್ಞಾನವನ್ನು ಯೆಹೋವನೊಂದಿಗಿನ ಸಂಬಂಧವನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸಲು ಉಪಯೋಗಿಸಿ” ಎಂದರು ಸಹೋದರ ಪಿಯರ್ಸ್‌.

“ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ.” ಬೈಬಲ್‌ ಶಾಲೆಗಳ ಇಲಾಖೆಯ ಮೇಲ್ವಿಚಾರಕರಾಗಿರುವ ಸಹೋದರ ವಿಲ್ಯಮ್‌ ಸ್ಯಾಮ್ವೆಲ್‌ಸನ್‌ ವಿದ್ಯಾರ್ಥಿಗಳಿಗೆ ಹೀಗೆ ಕೇಳಿದರು: “ಯೆಹೋವನು ಕೊಡುವ ನೇಮಕ ನಿಮಗೆ ಇಷ್ಟವಾಗದಿದ್ದರೂ ನೀವದನ್ನು ಸ್ವೀಕರಿಸುತ್ತೀರಾ?” ಲೂಕ 17:7-10​ರಲ್ಲಿರುವ ಯೇಸುವಿನ ಮಾತಿನಿಂದ ಪಾಠವನ್ನು ಕಲಿಯಬಹುದು. “ನಿಮಗೆ ನೇಮಿಸಲ್ಪಟ್ಟಿರುವ ಎಲ್ಲವನ್ನೂ ಮಾಡಿ ಮುಗಿಸಿದ ಬಳಿಕ, ‘ನಾವು ಕೆಲಸಕ್ಕೆ ಬಾರದ ಆಳುಗಳು. ನಾವು ಮಾಡಬೇಕಾಗಿದ್ದುದನ್ನೇ ಮಾಡಿದ್ದೇವೆ’ ಎಂದು ಹೇಳಿರಿ.” ನಮ್ಮ ಯಜಮಾನನಾದ ಯೆಹೋವನಿಗೆ ಹೋಲಿಸುವಾಗ ನಾವು ನಿಜಕ್ಕೂ ‘ಕೆಲಸಕ್ಕೆ ಬಾರದವರು.’

ವಿದ್ಯಾರ್ಥಿಗಳು ವಾರಗಟ್ಟಲೆ ಅಧ್ಯಯನ ಮಾಡಿದ್ದರು. ಕೆಲವರಿಗೆ ಅದು ಕಷ್ಟವಾಗಿದ್ದಿರಬಹುದು. “ಆದರೆ ನೀವು ಮಾಡಬೇಕಾದದ್ದನ್ನೇ ಮಾಡಿದ್ದೀರಿ. ಅದೆಷ್ಟು ನಿಮಗೆ ಪ್ರಯೋಜನ ತಂದಿದೆ, ನಿಮ್ಮ ನಂಬಿಕೆಯನ್ನು ಎಷ್ಟು ಬಲಗೊಳಿಸಿದೆ ಎಂದು ನಿಮಗೀಗ ಗೊತ್ತಾಗಿದೆ. ಯೆಹೋವನಿಗೆ ಭರವಸಾರ್ಹ ಕೆಲಸಗಾರರಾಗಿ ಇರಿ. ವಿಶ್ವದ ಪರಮಾಧಿಕಾರಿಯ ಸೇವೆ ಮಾಡುವುದನ್ನು ಸದಾ ಅಮೂಲ್ಯವಾಗಿ ಎಣಿಸಿ ಆನಂದಿಸಿ” ಎಂದರು ಸಹೋದರ ಸ್ಯಾಮ್ವೆಲ್‌ಸನ್‌.

“ಕಷ್ಟದಲ್ಲಿರುವಾಗ ಯೆಹೋವನ ಆಶ್ವಾಸನೆಯನ್ನು ಮರೆಯಬೇಡಿ.” ಬೈಬಲ್‌ ಶಾಲೆಗಳ ಇಲಾಖೆಯ ಸಹಾಯಕ ಮೇಲ್ವಿಚಾರಕರಾಗಿರುವ ಸ್ಯಾಮ್‌ ರಾಬರ್‌ಸನ್‌ ಈ ಭಾಷಣವನ್ನು ಸಾದರಪಡಿಸಿದರು. ಒಮ್ಮೊಮ್ಮೆ ನಿರುತ್ತೇಜನಗೊಳ್ಳುವುದು ಸಹಜ, ಅಂಥ ಸಮಯದಲ್ಲಿ ದೇವರಿಂದ ಉತ್ತೇಜನ ಪಡೆದುಕೊಂಡ ದೇವಭಕ್ತ ವ್ಯಕ್ತಿಗಳನ್ನು ನೆನಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಉದಾಹರಣೆಗೆ ಮೋಶೆಯು ಯೆಹೋಶುವನನ್ನು ಹೀಗೆ ಬಲಪಡಿಸಿದನು: “ಯೆಹೋವನು . . . ನಿನ್ನನ್ನು ಅಪಜಯಕ್ಕೆ ಗುರಿಪಡಿಸುವದೇ ಇಲ್ಲ, ಕೈಬಿಡುವದಿಲ್ಲ.” (ಧರ್ಮೋಪದೇಶಕಾಂಡ 31:8) ಯೆಹೋಶುವನು ತನ್ನ ಜೀವಮಾನದ ಕೊನೆಯಲ್ಲಿ ಹೀಗೆ ಹೇಳಲಿಕ್ಕಾಯಿತು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ.”—ಯೆಹೋಶುವ 23:14.

ಯೆಹೋವನು ತನ್ನ ಸೇವಕರಿಗೆ “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಮಾತುಕೊಟ್ಟಿದ್ದಾನೆ. (ಇಬ್ರಿಯ 13:5) ಮಾತ್ರವಲ್ಲ ಆತನು “ಯೆಹೋವ” (ಅಂದರೆ ಆತನು ಆಗುವಂತೆ ಮಾಡುತ್ತಾನೆ) ಎಂಬ ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ ನಡೆಯುತ್ತೇನೆಂದು ಮತ್ತು ನಮ್ಮನ್ನು ಆರೈಕೆ ಮಾಡಲು ಯಾವ ಪಾತ್ರ ಬೇಕಾದರೂ ವಹಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದಾನೆ. ಆದ್ದರಿಂದ ಏನೇ ಬಂದರೂ ಬಿಟ್ಟುಕೊಡಬೇಡಿ, ಬಿದ್ದುಹೋಗಬೇಡಿ, ಸೋತುಹೋಗಬೇಡಿ. ಯೆಹೋವನು ಯಾವತ್ತೂ, ಎಂದಿಗೂ, ಎಂದೆಂದಿಗೂ ನಿಮ್ಮ ಕೈಬಿಡುವುದಿಲ್ಲ ಎಂದು ಭರವಸೆ ತುಂಬಿದರು ಸಹೋದರ ರಾಬರ್‌ಸನ್‌.

‘ಅವರ ಧ್ವನಿಯು ಭೂಮಿಯಾದ್ಯಂತ ಪ್ರಸರಿಸಿತು.’ (ರೋಮನ್ನರಿಗೆ 10:18) ಇದನ್ನು ಗಿಲ್ಯಡ್‌ ಸ್ಕೂಲ್‌ನ ಶಿಕ್ಷಕರಾದ ಸಹೋದರ ಮಾರ್ಕ್‌ ನೂಮ್ಯಾರ್‌ ನಿರ್ವಹಿಸಿದರು. ಬೇರೆ ಬೇರೆ ದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳು ಪ್ಯಾಟರ್‌ಸನ್‌ನ ಸುತ್ತಮುತ್ತಲು ಸೇವೆ ಮಾಡಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸಿದರು, ಕೆಲವರು ಅಭಿನಯಿಸಿ ತೋರಿಸಿದರು. ಉದಾಹರಣೆಗೆ ದಕ್ಷಿಣ ಆಫ್ರಿಕದಿಂದ ಬಂದಿದ್ದ ಒಂದು ದಂಪತಿಗೆ ಅವರ ದೇಶದ ಮೂವರು ಸ್ತ್ರೀಯರು ಸೇವೆಯಲ್ಲಿ ಸಿಕ್ಕಿದರು. ಸೂಲು ಮತ್ತು ಕ್ಸೋಸ ಭಾಷೆಯಲ್ಲಿ ಅವರೊಂದಿಗೆ ಮಾತಾಡಿ ಆನಂದಿಸಿದರು. ಶ್ರೀಲಂಕದಿಂದ ಬಂದಿದ್ದ ದಂಪತಿಗೆ ಒಬ್ಬ ಭಾರತೀಯ ಪುರುಷನೊಂದಿಗೆ ಮಾತಾಡಲು ಅವಕಾಶ ಸಿಕ್ಕಿತು. ಅವನ ಹೆಂಡತಿ ಮತ್ತು ಮಗಳು ಶ್ರೀಲಂಕದಲ್ಲಿ ವಾಸಿಸುತ್ತಿದ್ದಾರೆಂದು ಅವನು ತಿಳಿಸಿದ. ಅವನೆಂದೂ ಬೈಬಲನ್ನು ನೋಡೇ ಇರಲಿಲ್ಲವಂತೆ. ಆದ್ದರಿಂದ ಈ ದಂಪತಿ ತಮ್ಮ ಒಂದು ಬೈಬಲನ್ನು ಅವನಿಗೆ ಕೊಟ್ಟರು.

‘ಸಕಲ ಸತ್ಕಾರ್ಯಗಳಿಗೆ ಸನ್ನದ್ಧರು.’ ರೈಟಿಂಗ್‌ ಕಮಿಟಿಗೆ ಸಹಾಯಕರಾಗಿರುವ ಸಹೋದರ ಜೀನ್‌ ಸ್ಮಾಲೀ ಅವರು ಪದವಿ ಪಡೆಯಲಿದ್ದ ದಂಪತಿಗಳಲ್ಲಿ ಎರಡು ದಂಪತಿಗಳ ಸಂದರ್ಶನ ಮಾಡಿದರು. ಒಂದು ದಂಪತಿ ಸೀಎರ ಲಿಯೋನ್‌ ದೇಶದಿಂದ ಬಂದವರು. ಅವರು ತಮ್ಮ ಅನುಭವ ತಿಳಿಸಿದರು. ತಾವು ಸೇವೆ ಸಲ್ಲಿಸುತ್ತಿರುವ ಊರಿನಲ್ಲಿ ಮನೆಯೊಳಗೆ ನೀರಿನ ವ್ಯವಸ್ಥೆ ಇಲ್ಲ, ಆದ್ದರಿಂದ ಪ್ರತಿದಿನ ದೂರದಿಂದ ಮನೆಗೆ ನೀರನ್ನು ಹೊತ್ತು ತರಬೇಕು. ಆದರೆ 50 ಬೈಬಲ್‌ ಅಧ್ಯಯನಗಳನ್ನು ನಡೆಸುವುದರಿಂದ ಸಿಗುವ ಸಂತೋಷದ ಮುಂದೆ ಆ ಕಷ್ಟ ಏನೇನೂ ಇಲ್ಲ ಎಂದರು. ಮುಂದಿನ ನೇಮಕಗಳಲ್ಲಿ ಸಕಲ ಸತ್ಕಾರ್ಯಗಳನ್ನು ಮಾಡಲು ಗಿಲ್ಯಡ್‌ ಸ್ಕೂಲ್‌ ತಮ್ಮನ್ನು ಸನ್ನದ್ಧರನ್ನಾಗಿ ಮಾಡಿದ್ದಕ್ಕಾಗಿ ಎರಡೂ ದಂಪತಿಗಳು ಕೃತಜ್ಞತೆ ವ್ಯಕ್ತಪಡಿಸಿದರು.—2 ತಿಮೊಥೆಯ 3:16, 17.

“ಕೊನೆ ವರೆಗೂ ಅದರ ನಂತರವೂ ತಾಳಿಕೊಳ್ಳಿರಿ.” ಇದು ಮುಖ್ಯ ಭಾಷಣ. ಇದನ್ನು ಆಡಳಿತ ಮಂಡಳಿಯ ಸದಸ್ಯರಾದ ಗೆರಿಟ್‌ ಲಾಶ್‌ ಸಾದರಪಡಿಸಿದರು. ಬಹುದೂರದ ಓಟದಲ್ಲಿ ಓಟಗಾರರು ಅಂತಿಮ ಗೆರೆ ಮುಟ್ಟುವ ವರೆಗೂ ತಾವು ಬಳಲಿ ಹೋಗದಂತೆ ನೋಡಿಕೊಳ್ಳುವುದು ಎಷ್ಟೊಂದು ಪ್ರಾಮುಖ್ಯ ಎಂದು ತಿಳಿಸುತ್ತಾ ಭಾಷಣ ಆರಂಭಿಸಿದರು. ಆ ಪಂದ್ಯದಲ್ಲಿ ಒಬ್ಬನು ಮಾತ್ರ ಜಯಶಾಲಿಯಾಗುತ್ತಾನೆ. ಆದರೆ ಕ್ರೈಸ್ತ ಓಟದಲ್ಲಿ ಕೊನೆವರೆಗೂ ತಾಳಿಕೊಳ್ಳುವ ಎಲ್ಲರೂ ವಿಜಯಿಗಳಾಗುತ್ತಾರೆ ಎಂದರು ಸಹೋದರ ಲಾಶ್‌.

ತಾಳಿಕೊಳ್ಳುವುದು ಅಂದರೆ ಏನೇ ಕಷ್ಟ, ಅಡ್ಡಿತಡೆ, ನಿರುತ್ತೇಜನ, ಹಿಂಸೆ ಬಂದರೂ ದೇವರ ಸೇವೆ ಮಾಡುತ್ತಾ ಇರುವುದು ಎಂದಾಗಿದೆ. “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು” ಎಂದು ಯೇಸು ಹೇಳಿದನು. (ಮತ್ತಾಯ 24:13) ನಾವು ತಾಳಿಕೊಳ್ಳುವುದನ್ನು ಯೆಹೋವನು ಮತ್ತು ಯೇಸು ಗಮನಿಸುತ್ತಾ ಇರುತ್ತಾರೆ ಎಂಬುದು ನಿಜಕ್ಕೂ ನಮಗೆ ಪ್ರೋತ್ಸಾಹಕರ ಎಂದರು ಸಹೋದರ ಲಾಶ್‌. ಕಷ್ಟಗಳ ಮಧ್ಯೆಯೂ ತಾಳಿಕೊಳ್ಳಬೇಕಾದರೆ ನಾವು ಮಾಡಬೇಕಾದ ಅನೇಕ ವಿಷಯಗಳನ್ನು ಬಳಿಕ ಅವರು ತಿಳಿಸಿದರು. ಕೆಲವೆಂದರೆ,

  • ‘ತಾಳ್ಮೆಯನ್ನು ಒದಗಿಸುವ’ ಮತ್ತು ‘ಅನುದಿನವೂ ನಮ್ಮ ಭಾರವನ್ನು ಹೊರುವ’ ದೇವರಿಗೆ ಪ್ರಾರ್ಥಿಸಿ.—ರೋಮನ್ನರಿಗೆ 15:5; ಕೀರ್ತನೆ 68:19.

  • “ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು” ಎಂಬ ಭರವಸೆಯಿಂದಿದ್ದು ಆತನಿಗೆ ನಂಬಿಗಸ್ತರಾಗಿ ಉಳಿಯಲು ದೃಢಸಂಕಲ್ಪ ಮಾಡಿ.—1 ಕೊರಿಂಥ 10:13.

  • ನಿಮ್ಮ ನಿರೀಕ್ಷೆಯನ್ನು ಮನಸ್ಸಿನಲ್ಲಿ ಹಚ್ಚಹಸುರಾಗಿಡಿ. ‘ಯೇಸು ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬದ ಮರಣವನ್ನು ಸಹಿಸಿಕೊಂಡನು.’—ಇಬ್ರಿಯ 12:2.

ಕ್ರೈಸ್ತ ಓಟದಲ್ಲಿ ನಾವು ಇನ್ನೇನು ಅಂತಿಮ ರೇಖೆ ಮುಟ್ಟಲಿದ್ದೇವೆ. ಓಡುವುದನ್ನು ನಿಲ್ಲಿಸುವ ಸಮಯ ಇದಲ್ಲ. ಆದ್ದರಿಂದ “ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ” ಎಂದರು ಸಹೋದರ ಲಾಶ್‌.—ಇಬ್ರಿಯ 12:2.

ಈ ಸಂತೋಷದ ಕೂಟದ ಕೊನೆಯಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಸಹಪಾಠಿಗಳೆಲ್ಲರ ಪರವಾಗಿ ಒಂದು ಪತ್ರವನ್ನು ಓದಿದನು. ಈ ಗಿಲ್ಯಡ್‌ ಸ್ಕೂಲ್‌ನಿಂದ ಅತ್ಯುತ್ತಮ ತರಬೇತಿ ಪಡೆದುಕೊಂಡದ್ದಕ್ಕೆ ವಿದ್ಯಾರ್ಥಿಗಳು ಆ ಪತ್ರದ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದರು. ಬೈಬಲನ್ನು ಗಾಢವಾಗಿ ಮತ್ತು ಕಾಲಾನುಕ್ರಮದಲ್ಲಿ ಅಧ್ಯಯನ ಮಾಡಿದ್ದು ದೇವರ ಉದ್ದೇಶವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮಾತ್ರವಲ್ಲ ತಮ್ಮ ನಂಬಿಕೆಯನ್ನು ಹೆಚ್ಚೆಚ್ಚು ಬಲಪಡಿಸಿಕೊಳ್ಳಲು ಸಹಾಯ ಮಾಡಿತೆಂದು ತಿಳಿಸಿದರು. “ಕಲಿತ ಎಲ್ಲ ಒಳ್ಳೇ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವುದೇ ನಮ್ಮ ದೃಢ ತೀರ್ಮಾನ” ಎಂದರು ವಿದ್ಯಾರ್ಥಿಗಳು.