ಮಾಹಿತಿ ಇರುವಲ್ಲಿ ಹೋಗಲು

ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?

ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?

 ಶಿಕ್ಷಣದ ವಿಷಯದಲ್ಲಿ ತೀರ್ಮಾನ ಮಾಡುವಾಗ ನಾವು ಬೈಬಲಲ್ಲಿರುವ ತತ್ವಗಳನ್ನು ನೋಡುತ್ತೇವೆ. ಬೈಬಲಿಂದ ತರಬೇತಿ ಹೊಂದಿದ ಮನಸ್ಸಾಕ್ಷಿ ಪ್ರಕಾರ ನಡೆಯುತ್ತೇವೆ. ಕೆಳಗಿನ ಬೈಬಲ್‌ ವಚನಗಳನ್ನು ಹೇಗೆ ಅನ್ವಯಿಸಬೇಕೆಂದು ಯೋಚಿಸುತ್ತೇವೆ. a

 ಶಿಕ್ಷಣ ಬೇಕೇ ಬೇಕು

 ‘ವಿವೇಕ ಪಡೆಯಲು, ಯೋಚನೆ ಮಾಡುವ ಶಕ್ತಿ’ ಬೆಳೆಸಿಕೊಳ್ಳಲು ಶಿಕ್ಷಣ ಬೇಕು. ಇವೆರಡು ತುಂಬ ಒಳ್ಳೇ ಗುಣ ಅಂತ ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 2:10, 11; 3:21, 22) ಅಲ್ಲದೆ, ಯೇಸು ನಮಗೆ ಏನೇನು ಹೇಳಿಕೊಟ್ಟಿದ್ದಾನೋ ಅದನ್ನು ಬೇರೆಯವರಿಗೆ ಕಲಿಸಬೇಕೆಂದು ಹೇಳಿದ್ದಾನೆ. (ಮತ್ತಾಯ 28:19, 20) ಹಾಗಾಗಿ ನಮ್ಮ ಸಭೆಯಲ್ಲಿ ಇರುವವರಿಗೆ ನಾವು ಒಳ್ಳೇ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತೇವೆ ಮತ್ತು ಅದಕ್ಕೆ ಸಹಾಯ ಮಾಡುತ್ತೇವೆ. ಚೆನ್ನಾಗಿ ಓದಲು, ಬರೆಯಲು, ಮಾತನಾಡಲು, b ಬೇರೆ ಧರ್ಮ ಮತ್ತು ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತೇವೆ.—1 ಕೊರಿಂಥ 9:20-22; 1 ತಿಮೊತಿ 4:13.

 ಸರ್ಕಾರಗಳು ಕೂಡ ಶಿಕ್ಷಣಕ್ಕೆ ಮಹತ್ವ ಕೊಡುವುದರಿಂದ ಪ್ರತಿಯೊಂದು ಮಗುವಿಗೆ ಮೂಲಭೂತ ಶಿಕ್ಷಣ ಕೊಡಬೇಕೆಂದು ಹೇಳುತ್ತದೆ. ನಾವು ಇಂಥ ನಿಯಮವನ್ನು ಪಾಲಿಸುತ್ತೇವೆ. ಏಕೆಂದರೆ ಎಲ್ಲರೂ ಅಧಿಕಾರಿಗಳ ಅಥವಾ ಸರ್ಕಾರದ ಮಾತು ಕೇಳಬೇಕು ಎಂದು ಬೈಬಲ್‌ ಹೇಳುತ್ತದೆ. (ರೋಮನ್ನರಿಗೆ 13:1) ಅಲ್ಲದೆ, ಶಾಲೆಗೆ ಹೋಗಿ ಕಾಟಾಚಾರಕ್ಕೆ ಓದದೆ ಚೆನ್ನಾಗಿ ಓದಬೇಕು ಎಂದು ನಾವು ಮಕ್ಕಳಿಗೆ ಹೇಳಿಕೊಡುತ್ತೇವೆ. c ಏಕೆಂದ್ರೆ ಬೈಬಲ್‌ ಹೀಗೆ ಹೇಳುತ್ತದೆ: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.”—ಕೊಲೊಸ್ಸೆ 3:23, ಸತ್ಯವೇದವು.

 ಶಿಕ್ಷಣ ಇದ್ದರೆ ಕುಟುಂಬ ನೋಡಿಕೊಳ್ಳಬಹುದು. “ಯಾರಾದ್ರೂ ತನ್ನವ್ರಿಗೆ, ಅದ್ರಲ್ಲೂ ತನ್ನ ಕುಟುಂಬದವ್ರಿಗೆ ಅಗತ್ಯ ಇರೋದನ್ನ ಕೊಡದಿದ್ರೆ ಅವನು ನಂಬಿಕೆ ಬಿಟ್ಟವನಿಗಿಂತ, ನಂಬಿಕೆ ಇಲ್ಲದವನಿಗಿಂತ ಮೋಸವಾಗಿ ಇದ್ದಾನೆ” ಎನ್ನುತ್ತದೆ ಬೈಬಲ್‌. (1 ತಿಮೊತಿ 5:8) ಕುಟುಂಬ ನೋಡಿಕೊಳ್ಳುವ ಪವಿತ್ರ ಜವಾಬ್ದಾರಿಯನ್ನು ನಿರ್ವಹಿಸಲು ಶಿಕ್ಷಣ ಸಹಾಯ ಮಾಡುತ್ತದೆ. “ಜನರನ್ನು ಸಮಾಜಕ್ಕೆ ಒಳ್ಳೇದು ಮಾಡುವ ವ್ಯಕ್ತಿಗಳಾಗಿ, ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಕೆಲಸಗಾರರಾಗಿ ಮಾಡುವುದೇ” ಶಿಕ್ಷಣದ ಮುಖ್ಯ ಉದ್ದೇಶ ಎಂದು ದ ವಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ ಹೇಳುತ್ತದೆ. ಕೌಶಲ ಇಲ್ಲದ ಮತ್ತು ಮೂಲಭೂತ ಶಿಕ್ಷಣ ಪಡೆಯದ ವ್ಯಕ್ತಿಗೆ ತನ್ನ ಕುಟುಂಬ ನೋಡಿಕೊಳ್ಳಲು ತುಂಬ ಕಷ್ಟ. ಆದರೆ ಕೌಶಲವಿರುವ, ಚೆನ್ನಾಗಿ ಓದಿದ ವ್ಯಕ್ತಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.—ಜ್ಞಾನೋಕ್ತಿ 22:29.

 ಮಕ್ಕಳು ಅವರ ಕಾಲ ಮೇಲೆ ಅವರು ನಿಂತುಕೊಳ್ಳಲು ಕೂಡ ಹೆತ್ತವರು ಸಹಾಯ ಮಾಡುತ್ತಾರೆ. ಇದಕ್ಕೆ ಶಾಲಾ ಶಿಕ್ಷಣ ತುಂಬ ಪ್ರಾಮುಖ್ಯ. (2 ಕೊರಿಂಥ 12:14) ಹಾಗಾಗಿ ಅವರಿರುವ ಸ್ಥಳದಲ್ಲಿ ಶಾಲಾ ಶಿಕ್ಷಣ ಉಚಿತವಲ್ಲದಿದ್ದರೂ, ಶಿಕ್ಷಣ ಪಡೆಯೋದು ಕಷ್ಟ ಆಗಿದ್ದರೂ ಅಥವಾ ಸಂಸ್ಕೃತಿಗೆ ವಿರುದ್ಧವಾಗಿದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರೋತ್ಸಾಹಿಸುತ್ತೇವೆ. d ಅಲ್ಲದೆ, ಓದಿನ ಕಡೆಗೆ ಮಕ್ಕಳು ಗಮನ ಕೊಡಲು ಹೆತ್ತವರು ಹೇಗೆ ಸಹಾಯ ಮಾಡಬಹುದು ಅನ್ನುವುದಕ್ಕೆ ಉಪಯುಕ್ತ ಸಲಹೆಗಳನ್ನು ಕೊಡುತ್ತೇವೆ. e

 ಶಿಕ್ಷಣದ ಬಗ್ಗೆ ಸರಿಯಾದ ನೋಟ

 ಯಾವ ಶಿಕ್ಷಣ ಪಡೆದರೆ ಒಳ್ಳೇದು ಅಂತ ಜಾಗ್ರತೆಯಿಂದ ನೋಡುತ್ತೇವೆ. “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 14:15) ಈ ತತ್ವವನ್ನು ಮನಸ್ಸಲ್ಲಿಟ್ಟು ನಾವು ಮೂಲಭೂತ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗೆ ಏನೇನು ಕೋರ್ಸ್‌ ಮಾಡಬಹುದು, ಅದಕ್ಕೆಷ್ಟು ಖರ್ಚು ಆಗುತ್ತೆ, ಅದರಿಂದ ಏನು ಪ್ರಯೋಜನ ಇದೆಲ್ಲವನ್ನು ಜಾಗ್ರತೆಯಿಂದ ನೋಡಿ ತೀರ್ಮಾನಿಸುತ್ತೇವೆ. ಉದಾಹರಣೆಗೆ, ಕೆಲವು ವೃತ್ತಿ ತರಬೇತಿ ಕೋರ್ಸ್‌ಗಳನ್ನು ಮಾಡುವುದರಿಂದ ತುಂಬ ಪ್ರಯೋಜನ ಇದೆ, ಒಳ್ಳೊಳ್ಳೆ ಕೌಶಲ ಕಲಿಯಬಹುದು. ಇಂಥ ಕೋರ್ಸ್‌ಗೆ ನಾವು ಕೊಡುವ ಸಮಯ ಸಾರ್ಥಕ.

 ದೇವರು ಕೊಡುವ ಶಿಕ್ಷಣ ಶಾಲಾ-ಕಾಲೇಜಿನ ಶಿಕ್ಷಣಕ್ಕಿಂತ ತುಂಬ ಶ್ರೇಷ್ಠ. ಬೈಬಲ್‌ ಮೂಲಕ ದೇವರು ಕೊಡುವ ಶಿಕ್ಷಣವನ್ನು ಪಡೆದರೆ ಆತನ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಇದರಿಂದ ನಾವು ಜೀವ ಪಡೆದುಕೊಳ್ಳುತ್ತೇವೆ. ಆದರೆ ಶಾಲಾ-ಕಾಲೇಜಿನ ಶಿಕ್ಷಣ ಜೀವ ಕೊಡಲ್ಲ. (ಯೋಹಾನ 17:3) ಅಲ್ಲದೆ ದೇವರು ಕೊಡುವ ಶಿಕ್ಷಣದಿಂದ ನಾವು ನೈತಿಕ ಮೌಲ್ಯಗಳನ್ನು ಅಂದರೆ ‘ನ್ಯಾಯ-ನೀತಿ, ಭೇದಭಾವ ಮಾಡದೆ ಇರೋದು, ಯಾವುದು ಒಳ್ಳೇ ದಾರಿ’ ಅಂತ ಕಲಿಯುತ್ತೇವೆ. (ಜ್ಞಾನೋಕ್ತಿ 2:9) ನಾವೀಗ ಯಾವುದನ್ನು ವಿಶ್ವವಿದ್ಯಾಲಯ ಶಿಕ್ಷಣ (ಯೂನಿವರ್ಸಿಟಿ ಎಜ್ಯೂಕೇಷನ್‌) ಅಂತ ಕರೆಯುತ್ತೇವೋ ಅದನ್ನು ಅಪೊಸ್ತಲ ಪೌಲ ಪಡೆದಿದ್ದ. ಆದರೆ ಅವನು ಬೆಲೆಕಟ್ಟಲು ಆಗದೇ ಇರುವಂಥ ಶಿಕ್ಷಣ ಒಂದಿದೆ, ಅದು ಕ್ರಿಸ್ತ ಯೇಸುವಿನ ಕುರಿತ ಜ್ಞಾನ ಅಂತ ಒಪ್ಪಿಕೊಂಡ. (ಫಿಲಿಪ್ಪಿ 3:8; ಅಪೊಸ್ತಲರ ಕಾರ್ಯ 22:3) ಅದೇ ತರ ಯೆಹೋವನ ಸಾಕ್ಷಿಗಳಲ್ಲೂ ಉನ್ನತ ಶಿಕ್ಷಣ ಪಡೆದವರು ಎಷ್ಟೋ ಜನ ಇದ್ದಾರೆ. ಆದರೆ ಅವರು ಶಾಲಾ-ಕಾಲೇಜಿನ ಶಿಕ್ಷಣಕ್ಕಿಂತ ದೇವರು ಕೊಟ್ಟಿರುವ ಶಿಕ್ಷಣವೇ ತುಂಬ ಶ್ರೇಷ್ಠ ಅಂತ ಒಪ್ಪಿಕೊಳ್ಳುತ್ತಾರೆ. f

ದೇವರು ಕೊಡುವ ಶಿಕ್ಷಣದಿಂದ ಒಳ್ಳೇ ಗುಣಗಳನ್ನು ಕಲಿಯಬಹುದು

 ಉನ್ನತ ಶಿಕ್ಷಣಕ್ಕೆ ಹೋದರೆ ಅಪಾಯ ಆಗಬಹುದು

 “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ” ಎನ್ನುತ್ತದೆ ಬೈಬಲಿನ ಒಂದು ಗಾದೆ. (ಜ್ಞಾನೋಕ್ತಿ 22:3) ಕೆಲವು ಯೂನಿವರ್ಸಿಟಿಗಳಲ್ಲಿ, ಉನ್ನತ ಶಿಕ್ಷಣ ಸೆಂಟರ್‌ಗಳಲ್ಲಿ ವಾತಾವರಣ ಅಷ್ಟು ಚೆನ್ನಾಗಿಲ್ಲ. ಮಕ್ಕಳು ಕೆಟ್ಟಕೆಟ್ಟ ವಿಷಯ ಕಲಿಯುತ್ತಾರೆ. ಇದರಿಂದ ದೇವರ ಜೊತೆ ಅವರಿಗಿರುವ ಸಂಬಂಧನೂ ಹಾಳಾಗುತ್ತೆ ಅಂತ ಯೆಹೋವನ ಸಾಕ್ಷಿಗಳು ನೆನೆಸುತ್ತಾರೆ. ಹಾಗಾಗಿ ಹೆಚ್ಚಿನ ಸಾಕ್ಷಿಗಳು ಯೂನಿವರ್ಸಿಟಿಗಳಿಗೆ ಹೋಗಲ್ಲ, ಅವರ ಮಕ್ಕಳನ್ನೂ ಕಳುಹಿಸಲ್ಲ. ಅಲ್ಲಿಗೆ ಹೋದರೆ ಮಕ್ಕಳ ತಲೆಯಲ್ಲಿ ತುಂಬಿಸುವ ಕೆಲವು ತಪ್ಪು ಅಭಿಪ್ರಾಯಗಳನ್ನು ಈಗ ನೋಡೋಣ.

  •   ತಪ್ಪು: ದುಡ್ಡು ಇದ್ದರೆ ದುನಿಯಾ

     ಯೂನಿವರ್ಸಿಟಿಗೆ ಹೋದರೆ ಕೈತುಂಬ ಸಂಬಳ ಸಿಗುವ ಕೆಲಸ ಸಿಕ್ಕೇ ಸಿಗುತ್ತೆ ಅಂತ ಜನ ನೆನಸುತ್ತಾರೆ. ಹಾಗಾಗಿ ತುಂಬ ವಿದ್ಯಾರ್ಥಿಗಳು ದುಡ್ಡು ಸಂಪಾದನೆ ಮಾಡಬೇಕು ಅಂತಾನೇ ಯೂನಿವರ್ಸಿಟಿಗೆ ಹೋಗುತ್ತಾರೆ. ದುಡ್ಡು ಇದ್ದರೆ ಏನು ಬೇಕಾದರೂ ಮಾಡಬಹುದು, ಜೀವನದಲ್ಲಿ ಸಂತೋಷವಾಗಿ ಇರಬಹುದು, ಯಾವುದಕ್ಕೂ ಕೊರತೆ ಇರಲ್ಲ ಅಂತ ಕೆಲವರ ಅಭಿಪ್ರಾಯ. ಆದರೆ ಈ ರೀತಿಯ ಯೋಚನೆ ತಪ್ಪು ಅಂತ ಬೈಬಲ್‌ ಹೇಳುತ್ತದೆ. (ಪ್ರಸಂಗಿ 5:10) ಅಷ್ಟೇ ಅಲ್ಲ “ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ” ಮತ್ತು ದೇವರ ಮೇಲಿರುವ ನಂಬಿಕೆ ಕಳೆದುಕೊಳ್ಳುವ ಹಾಗೆ ಮಾಡುತ್ತದೆ ಎಂದು ಬೈಬಲ್‌ ಹೇಳುತ್ತದೆ. (1 ತಿಮೊತಿ 6:10) ಮೋಸಮಾಡೋ ಶಕ್ತಿಯಿರುವ ಹಣದ ಬಲೆಗೆ ಸಿಕ್ಕಿಕೊಳ್ಳದಿರಲು ಯೆಹೋವನ ಸಾಕ್ಷಿಗಳು ಜಾಗ್ರತೆಯಿಂದ ಇರುತ್ತಾರೆ.—ಮತ್ತಾಯ 13:22.

  •   ತಪ್ಪು: ಹೈಯರ್‌ ಎಜ್ಯೂಕೇಷನ್‌ ಮಾಡಿದರೆ ಸಮಾಜದಲ್ಲಿ ಒಳ್ಳೇ ಹೆಸರು ಮತ್ತು ಗೌರವ ಸಿಗುತ್ತದೆ

     ಜಾರ್ಜಿಯದ ಮಾಜಿ ಪ್ರಧಾನ ಮಂತ್ರಿ ನೆಕ ಗಲಾರಿ ತಮ್ಮ ದೇಶದಲ್ಲಿ ಸಾಮಾನ್ಯವಾಗಿ ಜನರಲ್ಲಿರುವ ಅಭಿಪ್ರಾಯದ ಬಗ್ಗೆ ಹೀಗೆ ಬರೆದಿದ್ದಾರೆ: “ಜಾರ್ಜಿಯದಲ್ಲಿ ಯೂನಿವರ್ಸಿಟಿ ಡಿಗ್ರಿ ಕಡ್ಡಾಯ. ... ಅಲ್ಲಿಗೆ ಹೋದರೆನೇ ಸಮಾಜದಲ್ಲಿ ಒಳ್ಳೇ ಸ್ಥಾನಮಾನ ಸಿಗೋದು. ಒಂದು ಕಾಲದಲ್ಲಿ ಯಾರಾದರೂ ಸ್ಕೂಲ್‌ ಮುಗಿಸಿ ಡಿಗ್ರಿ ಮಾಡದಿದ್ದರೆ ಇಡೀ ಕುಟುಂಬಕ್ಕೆ ಅವಮಾನ ಆಗುತಿತ್ತು.” g ಆದರೆ ಈ ಲೋಕದಲ್ಲಿ ದೊಡ್ಡ ಹೆಸರು ಮಾಡುವುದು ತಪ್ಪು ಅಂತ ಬೈಬಲ್‌ ಎಚ್ಚರಿಸುತ್ತದೆ. ಸ್ಥಾನಮಾನ ಇಷ್ಟಪಡುತ್ತಿದ್ದ ಧಾರ್ಮಿಕ ಮುಖಂಡರ ಬಗ್ಗೆ ಯೇಸು ಹೀಗಂದನು: “ಬೇರೆಯವರನ್ನ ಹೊಗಳೋದು, ಅವ್ರಿಂದ ಹೊಗಳಿಸ್ಕೊಳ್ಳೋದು ಅಂದ್ರೆ ನಿಮಗೆ ತುಂಬ ಇಷ್ಟ. ಹಾಗಿರುವಾಗ ನೀವು ನನ್ನನ್ನ ಹೇಗೆ ನಂಬ್ತೀರಾ?” (ಯೋಹಾನ 5:44) ಯೂನಿವರ್ಸಿಟಿಗೆ ಹೋದರೆ ಅಹಂಕಾರ ಬರುತ್ತೆ. ಆ ಗುಣವನ್ನು ದೇವರು ಇಷ್ಟಪಡಲ್ಲ.—ಜ್ಞಾನೋಕ್ತಿ 6:16, 17; 1 ಪೇತ್ರ 5:5.

  •   ತಪ್ಪು: ಯಾವುದು ಸರಿ ಅಂತ ಅನಿಸುತ್ತೋ ಅದನ್ನು ಮಾಡು, ತಪ್ಪು ಅಂತ ಅನಿಸಿದರೆ ಮಾಡಬೇಡ

     ಯಾವುದು ಸರಿ ಯಾವುದು ತಪ್ಪು ಅಂತ ಯೆಹೋವನು ಹೇಳುತ್ತಾನೋ ಅದನ್ನು ಆತನ ಜನರು ಒಪ್ಪಿಕೊಳ್ಳುತ್ತಾರೆ. (ಯೆಶಾಯ 5:20) “ಹೆಚ್ಚಿನ ವಿದ್ಯಾರ್ಥಿಗಳಿಗೆ ಸರಿ-ತಪ್ಪು ಯಾವುದು ಅಂತ ಗೊತ್ತಿದ್ದರೂ ಅವರ ವಯಸ್ಸಿನವರ ಒತ್ತಡದಿಂದ ತಪ್ಪಾದ ನಿರ್ಣಯ ಮಾಡಿಬಿಡುತ್ತಾರೆ” ಎಂದು ಜರ್ನಲ್‌ ಆಫ್‌ ಆಲ್ಕಹಾಲ್‌ ಆಂಡ್‌ ಡ್ರಗ್‌ ಎಜ್ಯೂಕೇಷನ್‌ನಲ್ಲಿರುವ ಒಂದು ಲೇಖನ ಹೇಳುತ್ತದೆ. h ಈ ಮಾತು ಬೈಬಲಲ್ಲಿರುವ ಒಂದು ತತ್ವವನ್ನು ಒಪ್ಪುತ್ತದೆ, ಅದು ಯಾವುದಂದ್ರೆ “ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ ಹಾಳು ಮಾಡುತ್ತೆ.” (1 ಕೊರಿಂಥ 15:33) ಡ್ರಿಂಕ್ಸ್‌, ಡ್ರಗ್ಸ್‌, ಮದುವೆ ಹೊರಗೆ ಸೆಕ್ಸ್‌ ಹೀಗೆ ದೇವರು ಮಾಡಬಾರದು ಅಂತ ಹೇಳಿರುವ ಎಷ್ಟೋ ವಿಷಯ ಯೂನಿವರ್ಸಿಟಿಗಳಲ್ಲಿ ಸರ್ವೇಸಾಮಾನ್ಯ.—1 ಕೊರಿಂಥ 6:9, 10; 2 ಕೊರಿಂಥ 7:1.

  •   ತಪ್ಪು: ಉನ್ನತ ಶಿಕ್ಷಣ ಪಡೆದರೆ ಜಗತ್ತನ್ನು ಉದ್ಧಾರ ಮಾಡಬಹುದು

     ಉನ್ನತ ಶಿಕ್ಷಣ ಮಾಡುವ ಹೆಚ್ಚಿನವರಿಗೆ ಶ್ರೀಮಂತರಾಗಬೇಕು, ಹೆಸರು ಮಾಡಬೇಕು, ಕೆಟ್ಟಕೆಟ್ಟ ವಿಷಯಗಳನ್ನು ಮಾಡಬೇಕು ಅನ್ನುವ ಉದ್ದೇಶ ಇರಲ್ಲ. ತಾವೂ ಉದ್ಧಾರ ಆಗಬೇಕು, ಜಗತ್ತನ್ನೂ ಉದ್ಧಾರ ಮಾಡಬೇಕು ಅನ್ನುವ ಆಸೆ ಇರುತ್ತೆ. ಇದು ಒಳ್ಳೇದೆ, ಆದರೆ ಯೆಹೋವನ ಸಾಕ್ಷಿಗಳಾದ ನಾವು ದೇವರ ಸರ್ಕಾರದಿಂದ ಮಾತ್ರ ಲೋಕದ ಸುಧಾರಣೆ ಆಗುತ್ತದೆಂದು ನಂಬುತ್ತೇವೆ. ಯೇಸು ಕೂಡ ಅದನ್ನೇ ನಂಬಿದ್ದನು. (ಮತ್ತಾಯ 6:9, 10) ಹಾಗಂತ ದೇವರ ಸರ್ಕಾರ ಲೋಕದ ಸಮಸ್ಯೆಗಳನ್ನು ತೆಗೆದುಹಾಕುವ ತನಕ ನಾವು ಕೈಕಟ್ಟಿಕೊಂಡು ಸುಮ್ಮನೆ ಕೂರಲ್ಲ. ಯೇಸುವಿನಂತೆ ನಾವು ‘ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು’ ಭೂಮಿಯ ಎಲ್ಲ ಕಡೆ ಸಾರುತ್ತಾ ಸಾವಿರಾರು ಜನರಿಗೆ ಒಳ್ಳೇಯವರಾಗಲು ಸಹಾಯ ಮಾಡುತ್ತೇವೆ. iಮತ್ತಾಯ 24:14.

a ಯೆಹೋವನ ಸಾಕ್ಷಿಯಾಗಿರುವ ಯುವಕ ಯುವತಿಯರು ತಂದೆತಾಯಿಯೊಟ್ಟಿಗೆ ಇದ್ದರೆ ಶಿಕ್ಷಣದ ವಿಷಯದಲ್ಲಿ ಅವರ ಮಾತು ಕೇಳುತ್ತಾರೆ. ಆದರೆ ಅವರ ಮಾತು ದೇವರ ನಿಯಮಕ್ಕೆ ವಿರುದ್ಧವಾಗಿದ್ದರೆ ಕೇಳುವುದಿಲ್ಲ.—ಕೊಲೊಸ್ಸೆ 3:20.

b ಇದಕ್ಕಾಗಿಯೇ 1 ಕೋಟಿ 10 ಲಕ್ಷಕ್ಕಿಂತ ಹೆಚ್ಚು ಸಾಕ್ಷಾರತೆ ಪುಸ್ತಕವನ್ನು ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಒಂದು ಅಪ್ಲೈ ಯುವರ್‌ಸೆಲ್ಫ್‌ ಟು ರೀಡಿಂಗ್‌ ಆ್ಯಂಡ್‌ ರೈಟಿಂಗ್‌ (ಓದುಬರಹಕ್ಕೆ ಶ್ರದ್ಧೆಯಿಂದ ಗಮನಕೊಡಿ). ಅಲ್ಲದೆ, ಲೋಕವ್ಯಾಪಕವಾಗಿ 120 ಭಾಷೆಗಳಲ್ಲಿ ಸಾಕ್ಷಾರತಾ ಕ್ಲಾಸ್‌ಗಳನ್ನು ನಡೆಸುತ್ತೇವೆ. ಇದು ಉಚಿತ. 2003 ರಿಂದ 2017 ರಲ್ಲಿ ನಾವು ಸುಮಾರು 70,000 ಜನರಿಗೆ ಓದುಬರಹ ಕಲಿಸಿದ್ದೇವೆ.

d ಉದಾಹರಣೆಗೆ ಗಂಡು-ಹೆಣ್ಣು ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಬೇಕೆಂದು ಹೆತ್ತವರಿಗೆ ಪ್ರೋತ್ಸಾಹಿಸುತ್ತೇವೆ. ಕಾವಲಿನಬುರುಜು 2003, ಮಾರ್ಚ್‌ 15 ರಲ್ಲಿ “ನನ್ನ ಮಗು ಶಾಲೆಗೆ ಹೋಗಬೇಕೋ?” ಲೇಖನ ನೋಡಿ.

f jw.orgನಲ್ಲಿ “ಜೀವದ ಉಗಮದ ಬಗ್ಗೆ ದೃಷ್ಟಿಕೋನಗಳು” ವಿಭಾಗ ನೋಡಿ.

g ಪ್ರಾಕ್ಟಿಕಲ್‌ ಎಕನಾಮಿಕ್ಸ್‌: ಎಕನಾಮಿಕ್ಸ್‌ ಟ್ರಾನ್ಸ್‌ಫಾರ್‌ಮೇಷನ್‌ ಆಂಡ್‌ ಗವರನ್‌ಮೆಂಟ್‌ ರಿಫಾರ್ಮ್‌ ಇನ್‌ ಜಾರ್ಜಿಯ 2004—2012, ಪುಟ 170.

h ಸಂಪುಟ 61, ನಂ. 1, ಏಪ್ರಿಲ್‌ 2017, ಪುಟ 72.

i jw.orgನಲ್ಲಿ “ಬದುಕು ಬದಲಾದ ವಿಧ” ವಿಭಾಗ ನೋಡಿ. ಇದರಲ್ಲಿ ಅನೇಕರ ನಿಜ ಜೀವನ ಕಥೆ ಇದೆ. ಪವಿತ್ರ ಗ್ರಂಥ ಮತ್ತು ದೇವರ ಆಳ್ವಿಕೆಯ ಸಂದೇಶಕ್ಕೆ ಜನರ ಜೀವನವನ್ನೇ ಬದಲಾಯಿಸುವ ಶಕ್ತಿ ಇದೆಯೆಂದು ಅವರ ಕಥೆ ತೋರಿಸುತ್ತದೆ.