ಸಂತೋಷದ ಜೀವನಮಾರ್ಗ
ಪ್ರೀತಿ
ಮಾನವರು ಪ್ರೀತಿಗಾಗಿ ಹಂಬಲಿಸುತ್ತಾರೆ. ವಿವಾಹಬಂಧ, ಕುಟುಂಬ ಜೀವನ, ಸ್ನೇಹ ಇವೆಲ್ಲದ್ದರ ಜೀವಾಳವೇ ಪ್ರೀತಿ. ಮಾನಸಿಕ ಆರೋಗ್ಯ ಹಾಗೂ ಸಂತೋಷಕ್ಕೆ ಪ್ರೀತಿ ತುಂಬ ಅಗತ್ಯವೆಂದು ಇದರಿಂದ ತಿಳಿದುಬರುತ್ತದೆ. ಆದರೆ “ಪ್ರೀತಿ” ಅಂದರೇನು?
ನಾವಿಲ್ಲಿ ಪ್ರಣಯಾತ್ಮಕ ಪ್ರೀತಿ ಬಗ್ಗೆ ಚರ್ಚಿಸುತ್ತಿಲ್ಲ. ಪ್ರಣಯಾತ್ಮಕ ಪ್ರೀತಿ ಪ್ರಾಮುಖ್ಯ ನಿಜ. ಆದರೆ ಅದಕ್ಕಿಂತಲೂ ಶ್ರೇಷ್ಠ ವಿಧದ ಪ್ರೀತಿ ಇದೆ. ಈ ಪ್ರೀತಿಯಿದ್ದರೆ ಒಬ್ಬ ವ್ಯಕ್ತಿ ಬೇರೆಯವರ ಕ್ಷೇಮದ ಬಗ್ಗೆ ನಿಜವಾದ ಚಿಂತೆ ತೋರಿಸುತ್ತಾನೆ. ತನಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಮಹತ್ವ ಕೊಡುತ್ತಾನೆ. ಇದು ದೇವರ ತತ್ವಗಳ ಮೇಲೆ ಆಧರಿತವಾದ ಪ್ರೀತಿ. ಹಾಗಿದ್ದರೂ ಅದು ಭಾವಶೂನ್ಯವಲ್ಲ.
ಪ್ರೀತಿಯ ಕುರಿತ ಈ ಸುಂದರ ವರ್ಣನೆ ನೋಡಿ: ‘ಪ್ರೀತಿಯು ದೀರ್ಘ ಸಹನೆಯುಳ್ಳದ್ದು, ದಯೆಯುಳ್ಳದ್ದು ಆಗಿದೆ. ಅದು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ, ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ, ಸತ್ಯದಲ್ಲಿ ಹರ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ, ಎಲ್ಲವನ್ನು ನಿರೀಕ್ಷಿಸುತ್ತದೆ, ಎಲ್ಲವನ್ನು ತಾಳಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.’—1 ಕೊರಿಂಥ 13:4-8.
ಈ ಪ್ರೀತಿ “ಎಂದಿಗೂ ವಿಫಲವಾಗುವುದಿಲ್ಲ” ಅಂದರೆ ಸದಾ ಇರುತ್ತದೆ. ನಿಜವೇನೆಂದರೆ ಅದು ಸಮಯ ದಾಟಿದಂತೆ ಬಲಗೊಳ್ಳುತ್ತಾ ಹೋಗುತ್ತದೆ. ಅದು ಸಹನೆ, ದಯೆ ಮತ್ತು ಕ್ಷಮೆ ತೋರಿಸುವುದರಿಂದ “ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊಸ್ಸೆ 3:14) ಈ ಪ್ರೀತಿಯಿರುವ ವ್ಯಕ್ತಿಗಳಲ್ಲಿ ಕುಂದುಕೊರತೆಗಳಿದ್ದರೂ ಅವರ ಸಂಬಂಧ ಸುರಕ್ಷಿತವಾಗಿರುತ್ತದೆ ಮತ್ತು ಅದರಲ್ಲಿ ಸಂತೋಷವಿರುತ್ತದೆ. ಇದಕ್ಕೆ ಉದಾಹರಣೆಯಾಗಿ ವಿವಾಹಬಂಧವನ್ನು ಚರ್ಚಿಸೋಣ.
“ಐಕ್ಯದ ಪರಿಪೂರ್ಣ ಬಂಧ”
ಯೇಸು ಕ್ರಿಸ್ತನು ವಿವಾಹದ ಬಗ್ಗೆ ಮುಖ್ಯವಾದ ತತ್ವಗಳನ್ನು ಕಲಿಸಿದನು. ಉದಾಹರಣೆಗೆ ಅವನು ಹೇಳಿದ ಒಂದು ಮಾತು ಹೀಗಿದೆ: “‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ . . . ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾಯ 19:5, 6) ಇದರಲ್ಲಿ ಎರಡು ಮುಖ್ಯವಾದ ತತ್ವಗಳು ಎದ್ದುಕಾಣುತ್ತವೆ.
“ಅವರಿಬ್ಬರು ಒಂದೇ ಶರೀರವಾಗಿರುವರು.” ಮಾನವರಲ್ಲಿ ಇರುವ ಅತ್ಯಾಪ್ತವಾದ ಸಂಬಂಧ ವಿವಾಹಬಂಧ ಆಗಿದೆ. ಅದನ್ನು ಪ್ರೀತಿ ಕಾಪಾಡುತ್ತದೆ. ಯಾವುದರಿಂದ? ಗಂಡ ಅಥವಾ ಹೆಂಡತಿ ತನ್ನ ಸಂಗಾತಿಯಲ್ಲದ ಬೇರೊಬ್ಬರೊಟ್ಟಿಗೆ “ಒಂದೇ ದೇಹ”ವಾಗುವುದರಿಂದ ಅಂದರೆ ದಾಂಪತ್ಯದ್ರೋಹದಿಂದ. (1 ಕೊರಿಂಥ 6:16; ಇಬ್ರಿಯ 13:4) ದಾಂಪತ್ಯದ್ರೋಹವು ಸಂಗಾತಿಯ ಭರವಸೆಯನ್ನು ನುಚ್ಚುನೂರು ಮಾಡುತ್ತದೆ ಮತ್ತು ವಿವಾಹಬಂಧವನ್ನು ಮುರಿಯಬಲ್ಲದು. ಮಕ್ಕಳಿರುವಲ್ಲಿ ಅದು ಅವರನ್ನೂ ಭಾವನಾತ್ಮಕವಾಗಿ ಘಾಸಿಗೊಳಿಸುತ್ತದೆ. ತಮ್ಮನ್ನು ಯಾರೂ ಪ್ರೀತಿಸುವುದಿಲ್ಲ, ತಮಗೆ ಸುರಕ್ಷತೆ ಇಲ್ಲ ಎಂಬ ಭಾವನೆಗಳನ್ನು ಮತ್ತು ಸಿಟ್ಟನ್ನೂ ಅವರಲ್ಲಿ ಹುಟ್ಟಿಸಬಲ್ಲದು.
“ದೇವರು ಒಟ್ಟುಗೂಡಿಸಿದ್ದನ್ನು.” ವಿವಾಹಬಂಧವು ಒಂದು ಪವಿತ್ರ ಬಂಧವೂ ಆಗಿದೆ. ಈ ನಿಜಾಂಶವನ್ನು ಮಾನ್ಯಮಾಡುವ ದಂಪತಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನ ಹಾಕುತ್ತಾರೆ. ಕಷ್ಟಗಳು ಬಂದ ಕೂಡಲೇ ಈ ಬಂಧವನ್ನು ಮುರಿದುಹಾಕಲು ನೋಡುವುದಿಲ್ಲ. ಅವರ ಪ್ರೀತಿ ಬಲವಾಗಿರುತ್ತದೆ, ಕಷ್ಟಸಮಸ್ಯೆಯನ್ನು ಜಯಿಸಿ ನಿಲ್ಲುವಂಥದ್ದಾಗಿರುತ್ತದೆ. ಈ ಪ್ರೀತಿ “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ಸಮಸ್ಯೆಗಳನ್ನು ಬಗೆಹರಿಸಲು ಸಹಾಯಮಾಡುತ್ತಾ ವೈವಾಹಿಕ ಸಾಮರಸ್ಯ, ಶಾಂತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ತಂದೆತಾಯಿ ಮಧ್ಯೆ ಸ್ವತ್ಯಾಗದ ಪ್ರೀತಿ ಇರುವಾಗ ಮಕ್ಕಳಿಗೆ ಅದರಿಂದ ತುಂಬ ಪ್ರಯೋಜನವಾಗುತ್ತದೆ. ಜೆಸಿಕಾ ಎಂಬ ಯುವತಿ ಹೇಳಿದ್ದು: “ನನ್ನ ಅಪ್ಪ ಅಮ್ಮ ಒಬ್ಬರನ್ನೊಬ್ಬರು ನಿಜವಾಗಲೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅಪ್ಪನಿಗೆ ಅಮ್ಮ ಗೌರವ ಕೊಡುವುದನ್ನು ನೋಡುವಾಗ ನನಗೂ ಅವರ ಹಾಗೆಯೇ ಇರಲು ತುಂಬ ಮನಸ್ಸಾಗುತ್ತದೆ.”
ಪ್ರೀತಿ ದೇವರ ಪ್ರಧಾನ ಗುಣ. ಅದಕ್ಕೇ ಬೈಬಲ್ ಹೀಗನ್ನುತ್ತದೆ: “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾನ 4:8) ಆದ್ದರಿಂದ ಯೆಹೋವನನ್ನು “ಸಂತೋಷದ ದೇವರು” ಅಂತ ಕರೆಯಲಾಗಿರುವುದರಲ್ಲಿ ಆಶ್ಚರ್ಯವಿಲ್ಲ. (1 ತಿಮೊಥೆಯ 1:11) “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ. . . . ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ” ಎನ್ನುತ್ತದೆ ಎಫೆಸ 5:1, 2. ನಮ್ಮ ಸೃಷ್ಟಿಕರ್ತನ ಗುಣಗಳನ್ನು, ವಿಶೇಷವಾಗಿ ಪ್ರೀತಿಯೆಂಬ ಗುಣವನ್ನು ಅನುಕರಿಸಲು ಪ್ರಯತ್ನಿಸುವಾಗ ನಾವು ಸಹ ಸಂತೋಷವಾಗಿರುವೆವು.