ಸಂತೋಷದ ಜೀವನಮಾರ್ಗ
ಸಂತೃಪ್ತಿ ಮತ್ತು ಉದಾರಭಾವ
ಆಸ್ತಿಪಾಸ್ತಿ, ಐಶ್ವರ್ಯವಿದ್ದರೆ ಸಂತೋಷ, ಯಶಸ್ಸು ಸಿಕ್ಕಿದೆ ಎಂದರ್ಥ ಅಂತ ಜನರು ಹೇಳುವುದನ್ನು ಕೇಳಿದ್ದೀರಾ? ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಲಕ್ಷಗಟ್ಟಲೆ ಜನರು ಹೆಚ್ಚೆಚ್ಚು ಹಣ ಸಂಪಾದಿಸಲು ರಕ್ತಬೆವರನ್ನು ಒಂದುಮಾಡಿ ಹಗಲೂರಾತ್ರಿ ಕೆಲಸಮಾಡುತ್ತಾರೆ. ಆದರೆ ಹಣ, ಸೊತ್ತುಗಳಿದ್ದರೆ ಶಾಶ್ವತ ಸಂತೋಷ ಸಿಗುತ್ತಾ? ಪುರಾವೆ ಏನು ತೋರಿಸುತ್ತದೆ?
ಜರ್ನಲ್ ಆಫ್ ಹ್ಯಾಪಿನೆಸ್ ಸ್ಟಡೀಸ್ ಎಂಬ ಪತ್ರಿಕೆಗನುಸಾರ, ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುವಷ್ಟು ಹಣವಿದ್ದ ಮೇಲೂ ಹೆಚ್ಚಿನ ಹಣ ಸಂಪಾದಿಸಿದರೆ ಅದರಿಂದ ನಮ್ಮ ಸಂತೋಷ ಅಥವಾ ಕ್ಷೇಮ ಒಂಚೂರು ಹೆಚ್ಚಾಗುವುದಿಲ್ಲವಂತೆ. ಆದರೆ ಸಮಸ್ಯೆ ಹಣ ಅಲ್ಲ. “[ಹಣದ] ಹಿಂದೆ ಹೋಗುವುದು ಅಸಂತೋಷಕ್ಕೆ ಕಾರಣ” ಎನ್ನುತ್ತದೆ ಮಾನಿಟರ್ ಆನ್ ಸೈಕಾಲಜಿ ಎಂಬ ಪತ್ರಿಕೆಯಲ್ಲಿನ ಒಂದು ಲೇಖನ. ಈ ಮಾತುಗಳು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೈಬಲಿನಲ್ಲಿ ಹೇಳಲಾದ ಈ ಮುಂದಿನ ಮಾತಿಗೆ ಕನ್ನಡಿ ಹಿಡಿದಂತಿವೆ: “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ . . . ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ.” (1 ತಿಮೊಥೆಯ 6:9, 10) ಈ ವೇದನೆಗಳು ಏನಿರಬಹುದು?
ಹಣಸಂಪತ್ತನ್ನು ಕಾಪಾಡುವ ಪ್ರಯತ್ನದಿಂದ ಚಿಂತೆ ಮತ್ತು ನಿದ್ರಾಹೀನತೆ. “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು” ಅಥವಾ ನಿದ್ರೆ ಮಾಡಲು ಬಿಡುವುದಿಲ್ಲ.—ಪ್ರಸಂಗಿ 5:12.
ನಿರೀಕ್ಷಿಸಿದಂಥ ಸಂತೋಷ ಕೈಗೆಟುಕದಿದ್ದಾಗ ನಿರಾಶೆ. ಈ ನಿರಾಶೆಗೆ ಒಂದು ಕಾರಣವೇನೆಂದರೆ ಹಣಕ್ಕಾಗಿರುವ ಆಸೆಯನ್ನು ತೀರಿಸಲಾಗುವುದಿಲ್ಲ. “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು.” (ಪ್ರಸಂಗಿ 5:10) ಅಷ್ಟುಮಾತ್ರವಲ್ಲ, ಹಣದ ಹಸಿವಿದ್ದರೆ ಒಬ್ಬ ವ್ಯಕ್ತಿ ಸಂತೋಷ ತರುವ ಮುಖ್ಯ ವಿಷಯಗಳನ್ನು ಕೈಬಿಡುತ್ತಾನೆ. ಉದಾಹರಣೆಗೆ, ಕುಟುಂಬ ಮತ್ತು ಸ್ನೇಹಿತರೊಟ್ಟಿಗಿರಲು ಅಥವಾ ದೇವರ ಆರಾಧನೆಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಲು ಅವನಿಗೆ ಸಮಯ ಇರುವುದಿಲ್ಲ.
ಹಣ ಅಥವಾ ಹೂಡಿಕೆಗಳ ಮೌಲ್ಯ ಕುಸಿದಾಗ ಇಲ್ಲವೇ ನಷ್ಟವಾದಾಗ ದುಃಖ ಮತ್ತು ಹತಾಶೆ. “ದುಡ್ಡಿನಾಸೆಯಿಂದ ದುಡಿಯಬೇಡ; ಸ್ವಬುದ್ಧಿಯನ್ನೇ ಆಶ್ರಯಿಸಬೇಡ. ನಿನ್ನ ದೃಷ್ಟಿಯು ಧನದ ಮೇಲೆ ಎರಗುತ್ತದೋ? ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಗಳನ್ನು ಕಟ್ಟಿಕೊಂಡಿದೆ.”—ಜ್ಞಾನೋಕ್ತಿ 23:4, 5.
ಸಂತೋಷ ತರುವಂಥ ಗುಣಗಳು
ಸಂತೃಪ್ತಿ. “ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು. ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.” (1 ತಿಮೊಥೆಯ 6:7, 8) ಸಂತೃಪ್ತ ಜನರು ತಮ್ಮ ಹತ್ತಿರ ‘ಇದಿಲ್ಲ ಅದಿಲ್ಲ’ ಎಂದು ಅಳುತ್ತಾ ಇರುವುದಿಲ್ಲ ಅಥವಾ ಗೊಣಗುತ್ತಾ ಇರುವುದಿಲ್ಲ. ಇಂಥವರಿಗೆ ಸಂತೃಪ್ತ ಮನೋಭಾವ ಇರುವುದರಿಂದ ‘ಬೇರೆಯವರ ಹತ್ತಿರ ಇರೋದು ನನ್ ಹತ್ರನೂ ಇರಬೇಕು’ ಎಂಬ ಅಸೂಯೆ ಇರುವುದಿಲ್ಲ. ತಮ್ಮ ಕೈಗೆಟುಕುವಂಥ ವಿಷಯಗಳನ್ನಲ್ಲದೆ ಬೇರೇನೂ ಆಶಿಸದೆ ಇರುವುದರಿಂದ ಅವರಿಗೆ ಅನಗತ್ಯ ಚಿಂತೆ ಹಾಗೂ ಮಾನಸಿಕ ಒತ್ತಡ ಇರುವುದಿಲ್ಲ.
ಉದಾರಭಾವ. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕಾರ್ಯಗಳು 20:35) ಉದಾರಭಾವದ ಜನರಿಗೆ ಬೇರೆಯವರನ್ನು ಸಂತೋಷಪಡಿಸುವುದರಲ್ಲಿ ಸಂತೋಷ ಸಿಗುತ್ತದೆ. ಅವರಿಂದ ಬರೀ ಸ್ವಲ್ಪ ಸಮಯ, ಶಕ್ತಿ ಕೊಡಲು ಸಾಧ್ಯವಾದರೂ ಸರಿ ಅವರಿಗೆ ಖುಷಿ ಆಗುತ್ತದೆ. ಎಷ್ಟೇ ಹಣ ಕೊಟ್ಟು ಖರೀದಿಸಲಾಗದ ಪ್ರೀತಿ, ಗೌರವ ಮತ್ತು ನಿಜವಾದ ಸ್ನೇಹಿತರು ಇಂಥವರಿಗೆ ಹೇರಳವಾಗಿ ಸಿಗುತ್ತಾರೆ. ಈ ಸ್ನೇಹಿತರು ತಿರುಗಿ ಅವರಿಗೆ ಉದಾರತೆ ತೋರಿಸುತ್ತಾರೆ!—ಲೂಕ 6:38.
ವಸ್ತುಗಳಿಗಿಂತ ಜನರಿಗೆ ಹೆಚ್ಚು ಮಹತ್ವ ಕೊಡುವುದು. ‘ದ್ವೇಷವಿರುವಲ್ಲಿ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ.’ (ಜ್ಞಾನೋಕ್ತಿ 15:17) ಇದರರ್ಥವೇನು? ಹಣಸಂಪತ್ತಿಗಿಂತಲೂ ಪ್ರೀತಿ ತುಂಬಿರುವ ಸಂಬಂಧಗಳೇ ಹೆಚ್ಚು ಅಮೂಲ್ಯ. ಮುಂದೆ ನೋಡಲಿರುವಂತೆ ಪ್ರೀತಿಯು ಸಂತೋಷಕ್ಕೆ ಅತ್ಯಗತ್ಯ.
ದಕ್ಷಿಣ ಅಮೆರಿಕದಲ್ಲಿರುವ ಸಬೀನಾ ಎಂಬ ಮಹಿಳೆಗೆ ಬೈಬಲ್ ತತ್ವಗಳ ಮೌಲ್ಯ ತಿಳಿದುಬಂತು. ಆಕೆಯ ಗಂಡ ಬಿಟ್ಟುಹೋದದ್ದರಿಂದ, ತನ್ನ ಮತ್ತು ಇಬ್ಬರು ಹೆಣ್ಣುಮಕ್ಕಳ ಜೀವನಾವಶ್ಯಕತೆಗಳಿಗಾಗಿ ತುಂಬ ಶ್ರಮಪಡುತ್ತಿದ್ದಳು. ಅವಳು ಎರಡು ಕಡೆ ಕೆಲಸಮಾಡುತ್ತಿದ್ದಳು. ಪ್ರತಿದಿನ ಬೆಳಗ್ಗೆ 4 ಗಂಟೆಗೆ ಏಳುತ್ತಿದ್ದಳು. ಅವಳ ದಿನಚರಿ ತುಂಬ ಕಷ್ಟದ್ದಾಗಿದ್ದರೂ ಬೈಬಲ್ ಅಧ್ಯಯನ ಮಾಡಲು ನಿರ್ಧರಿಸಿದಳು. ಪರಿಣಾಮ?
ಅವಳ ಹಣಕಾಸಿನ ಸ್ಥಿತಿ ಅಷ್ಟೇನು ಸುಧಾರಿಸದಿದ್ದರೂ ಜೀವನದ ಬಗ್ಗೆ ಅವಳ ನೋಟ ಉತ್ತಮವಾಯಿತು! ಉದಾಹರಣೆಗೆ, ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳುವುದರಿಂದ ಸಿಗುವ ಸಂತೋಷ ಅವಳಿಗೆ ಲಭಿಸಿತು. (ಮತ್ತಾಯ 5:3) ಜೊತೆ ವಿಶ್ವಾಸಿಗಳ ಮಧ್ಯೆ ಅವಳಿಗೆ ನಿಜ ಸ್ನೇಹಿತರು ಸಿಕ್ಕಿದರು. ತಾನು ಕಲಿತದ್ದನ್ನು ಬೇರೆಯವರಿಗೆ ತಿಳಿಸುವ ಮೂಲಕ ಕೊಡುವುದರಿಂದ ಸಿಗುವ ಸಂತೋಷವನ್ನೂ ಪಡೆದಳು.
“ವಿವೇಕವು ಅದರ ಫಲಿತಾಂಶಗಳಿಂದ ಸರಿಯೆಂದು ಸಾಬೀತಾಗುತ್ತದೆ” ಎನ್ನುತ್ತದೆ ಬೈಬಲ್. (ಮತ್ತಾಯ 11:19, ನೂತನ ಲೋಕ ಭಾಷಾಂತರ ಪರಿಷ್ಕೃತ ಆವೃತ್ತಿ, ಪಾದಟಿಪ್ಪಣಿ) ಸಂತೃಪ್ತಿಯಿಂದಿರುವುದು ಮತ್ತು ಉದಾರಭಾವ ತೋರಿಸುವುದು ಮಾತ್ರವಲ್ಲ ವಸ್ತುಗಳಿಗಿಂತ ಜನರಿಗೆ ಹೆಚ್ಚು ಮಹತ್ವ ಕೊಡುವುದು ಸರಿಯೆಂದು ಅವುಗಳ ಫಲಿತಾಂಶಗಳಿಂದ ಖಂಡಿತ ಸಾಬೀತಾಗುತ್ತದೆ!