ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ”

“ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ”

“ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.”—1 ಯೋಹಾ. 3:18.

ಗೀತೆಗಳು: 72, 124

1. ಅತಿ ಶ್ರೇಷ್ಠ ವಿಧದ ಪ್ರೀತಿ ಯಾವುದು? ವಿವರಿಸಿ. (ಲೇಖನದ ಆರಂಭದ ಚಿತ್ರ ನೋಡಿ.)

ಯೆಹೋವನು ಪ್ರೀತಿಯ ಮೂಲನು. (1 ಯೋಹಾ. 4:7) ಆತನು ತೋರಿಸುವ ಪ್ರೀತಿ ಅತಿ ಶ್ರೇಷ್ಠ ವಿಧದ ಪ್ರೀತಿ. ಇದು ಸರಿಯಾದ ತತ್ವಗಳ ಮೇಲೆ ಆಧರಿತವಾಗಿದೆ. ಈ ರೀತಿಯ ಪ್ರೀತಿಯನ್ನು ವರ್ಣಿಸಲು ಬೈಬಲು ಅಗಾಪೆ ಎಂಬ ಗ್ರೀಕ್‌ ಪದವನ್ನು ಬಳಸುತ್ತದೆ. ಈ ಪ್ರೀತಿಯಲ್ಲಿ ಮಮತೆ ಮಮಕಾರ ಸೇರಿರಬಹುದಾದರೂ ಇದರಲ್ಲಿ ಭಾವನೆಗಳಿಗಿಂತ ಹೆಚ್ಚಿನದ್ದು ಸೇರಿದೆ. ಬೇರೆಯವರ ಒಳಿತನ್ನು ಬಯಸಿ ಮಾಡುವ ನಿಸ್ವಾರ್ಥ ಕ್ರಿಯೆಗಳಲ್ಲಿ ಈ ಪ್ರೀತಿ ತೋರಿಬರುತ್ತದೆ. ಇಂಥ ಪ್ರೀತಿ ತೋರಿಸುವಾಗ ನಮಗೆ ಸಂತೋಷ ಸಿಗುತ್ತದೆ, ಜೀವನಕ್ಕೊಂದು ಅರ್ಥ ಇರುತ್ತದೆ.

2, 3. ಯೆಹೋವನು ಮಾನವರಿಗೆ ನಿಸ್ವಾರ್ಥ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ?

2 ಯೆಹೋವನು ಆದಾಮಹವ್ವರನ್ನು ಸೃಷ್ಟಿಸುವ ಮುಂಚೆಯೇ ಮಾನವರಿಗೆ ಪ್ರೀತಿ ತೋರಿಸಿದನು. ಹೇಗೆ? ಆತನು ಭೂಮಿಯನ್ನು ಸೃಷ್ಟಿಸಿ ಅದರಲ್ಲಿ ಮಾನವರು ಬದುಕುಳಿಯಲು ಬೇಕಾದ ಎಲ್ಲ ವಿಷಯಗಳನ್ನು ಮಾಡಿದನು. ನಾವು ಕೇವಲ ಜೀವಿಸಲು ಮಾತ್ರವಲ್ಲ, ಜೀವನವನ್ನು ಆನಂದಿಸಲೂ ಬೇಕಾದ ವಿಷಯಗಳನ್ನು ಅದರಲ್ಲಿಟ್ಟು ಅದನ್ನು ನಮ್ಮ ಮನೆಯಂತೆ ಸಜ್ಜುಗೊಳಿಸಿದನು. ಯೆಹೋವನು ಇದನ್ನೆಲ್ಲಾ ತನಗೋಸ್ಕರ ಮಾಡಿಕೊಳ್ಳಲಿಲ್ಲ, ನಮಗೋಸ್ಕರ ಮಾಡಿದನು. ಈ ಮನೆ ಸಿದ್ಧವಾದ ಮೇಲೆ ಮಾನವರನ್ನು ಸೃಷ್ಟಿಸಿ ಪರದೈಸ್‌ ಭೂಮಿಯಲ್ಲಿ ಸದಾಕಾಲ ಜೀವಿಸುವ ಅವಕಾಶ ಕೊಟ್ಟನು.

3 ಆದಾಮಹವ್ವರು ದಂಗೆಯೆದ್ದ ನಂತರ ಯೆಹೋವನು ಮಾನವರ ಮೇಲೆ ತನಗಿರುವ ನಿಸ್ವಾರ್ಥ ಪ್ರೀತಿಯನ್ನು ಮಹತ್ತರವಾದ ವಿಧದಲ್ಲಿ ತೋರಿಸಿದನು. ಅವರ ಸಂತತಿಯಲ್ಲಿ ಹುಟ್ಟಲಿರುವ ಕೆಲವರು ತನ್ನನ್ನು ಖಂಡಿತ ಪ್ರೀತಿಸುವರು ಎಂದು ಯೆಹೋವನಿಗೆ ಗೊತ್ತಿತ್ತು. ಇಂಥ ನಂಬಿಗಸ್ತರನ್ನು ರಕ್ಷಿಸಲು ಆತನು ತನ್ನ ಮಗನನ್ನು ವಿಮೋಚನಾ ಯಜ್ಞವಾಗಿ ಕೊಡಲು ಏರ್ಪಾಡು ಮಾಡಿದನು. (ಆದಿ. 3:15; 1 ಯೋಹಾ. 4:10) ವಿಮೋಚನಾ ಮೌಲ್ಯವನ್ನು ಕೊಡುತ್ತೇನೆಂದು ಯೆಹೋವನು ಮಾತು ಕೊಟ್ಟಾಗ ಆತನ ದೃಷ್ಟಿಯಲ್ಲಿ ಆ ಯಜ್ಞವನ್ನು ಆಗಲೇ ಕೊಟ್ಟಂತಾಗಿತ್ತು. ಯೆಹೋವನು ಕೊಟ್ಟ ಮಾತಿನಂತೆ 4,000 ವರ್ಷಗಳಾದ ಮೇಲೆ ತನ್ನ ಏಕೈಕಜಾತ ಪುತ್ರನನ್ನು ಮಾನವರಿಗೋಸ್ಕರ ಯಜ್ಞವಾಗಿ ಕೊಟ್ಟನು. (ಯೋಹಾ. 3:16) ಯೆಹೋವನು ನಮ್ಮನ್ನು ಇಷ್ಟೊಂದು ಪ್ರೀತಿಸಿದ್ದರಿಂದ ನಾವು ಆತನಿಗೆ ಚಿರಋಣಿ!

4. ಅಪರಿಪೂರ್ಣ ಮಾನವರು ನಿಸ್ವಾರ್ಥ ಪ್ರೀತಿ ತೋರಿಸಸಾಧ್ಯ ಎಂದು ನಮಗೆ ಹೇಗೆ ಗೊತ್ತು?

4 ಅಪರಿಪೂರ್ಣರಾಗಿರುವ ನಾವು ನಿಸ್ವಾರ್ಥ ಪ್ರೀತಿ ತೋರಿಸಲು ಸಾಧ್ಯನಾ? ಸಾಧ್ಯ. ಯೆಹೋವನು ನಮ್ಮನ್ನು ಆತನ ಸ್ವರೂಪದಲ್ಲಿ ಸೃಷ್ಟಿಮಾಡಿದ್ದಾನೆ. ಆತನನ್ನು ಅನುಕರಿಸುವ ಸಾಮರ್ಥ್ಯವನ್ನು ನಮ್ಮಲ್ಲಿ ಇಟ್ಟಿದ್ದಾನೆ. ನಮ್ಮ ಅಪರಿಪೂರ್ಣತೆಯ ಕಾರಣ ಕೆಲವೊಮ್ಮೆ ಈ ಪ್ರೀತಿಯನ್ನು ತೋರಿಸಲು ಕಷ್ಟವಾಗುವುದಾದರೂ ತೋರಿಸಲಿಕ್ಕೆ ಆಗುವುದೇ ಇಲ್ಲ ಎಂದೇನಿಲ್ಲ. ಹೇಬೆಲನು ತನ್ನ ಹಿಂಡಿನಲ್ಲಿದ್ದ ಶ್ರೇಷ್ಠವಾದ ಕುರಿಯನ್ನು ಅರ್ಪಿಸುವ ಮೂಲಕ ದೇವರ ಮೇಲಿರುವ ಪ್ರೀತಿಯನ್ನು ತೋರಿಸಿದನು. (ಆದಿ. 4:3, 4) ನೋಹನು ಸಹ ತನ್ನ ಮಾತಿಗೆ ಜನರು ಬೆಲೆ ಕೊಡದಿದ್ದರೂ ಅನೇಕ ವರ್ಷ ದೇವರ ಸಂದೇಶವನ್ನು ಸಾರುವ ಮೂಲಕ ನಿಸ್ವಾರ್ಥ ಪ್ರೀತಿ ತೋರಿಸಿದನು. (2 ಪೇತ್ರ 2:5) ಅಬ್ರಹಾಮನು ದೇವರ ಮೇಲೆ ತನಗಿರುವ ಪ್ರೀತಿ ಬೇರೆ ಎಲ್ಲದಕ್ಕಿಂತ ಬಲವಾದದ್ದು ಎಂದು ತನ್ನ ಪ್ರಿಯ ಪುತ್ರ ಇಸಾಕನನ್ನು ಯಜ್ಞವಾಗಿ ಕೊಡಲು ಮುಂದಾಗುವ ಮೂಲಕ ತೋರಿಸಿದನು. (ಯಾಕೋ. 2:21) ನಾವು ಸಹ ಈ ನಂಬಿಗಸ್ತ ಪುರುಷರಂತೆ ಕಷ್ಟವಾದಾಗಲೂ ಪ್ರೀತಿ ತೋರಿಸಲು ಬಯಸುತ್ತೇವೆ.

ನಿಜವಾದ ಪ್ರೀತಿ ಅಂದರೇನು?

5. ನಾವು ನಿಜವಾದ ಪ್ರೀತಿಯನ್ನು ತೋರಿಸುವ ವಿಧಗಳು ಯಾವುವು?

5 ನಾವು ನಿಜವಾದ ಪ್ರೀತಿಯನ್ನು “ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ” ತೋರಿಸದೆ “ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ತೋರಿಸುತ್ತೇವೆ ಎಂದು ಬೈಬಲ್‌ ಹೇಳುತ್ತದೆ. (1 ಯೋಹಾ. 3:18) ನಾವು ಮಾತಿನಲ್ಲಿ ಪ್ರೀತಿ ತೋರಿಸಬೇಕು ನಿಜ. (1 ಥೆಸ. 4:18) ಆದರೆ ನಾವು ಬರೀ ಬಾಯಿಮಾತಿನಲ್ಲಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಿದರೆ ಸಾಕಾಗುವುದಿಲ್ಲ. ಕ್ರಿಯೆಯಲ್ಲೂ ಅದನ್ನು ತೋರಿಸಬೇಕು. ಉದಾಹರಣೆಗೆ, ನಮ್ಮ ಸಹೋದರ ಸಹೋದರಿಯರಿಗೆ ಸಾಕಷ್ಟು ಊಟ ಬಟ್ಟೆ ಇಲ್ಲದಿರುವಾಗ ಬರೀ ಪ್ರೀತಿಯಿಂದ ಮಾತಾಡಿಸಿದರೆ ಸಾಕಾಗುವುದಿಲ್ಲ. (ಯಾಕೋ. 2:15, 16) ಅದೇ ರೀತಿ, ನಮಗೆ ಯೆಹೋವ ಮತ್ತು ನೆರೆಯವರ ಮೇಲೆ ಪ್ರೀತಿ ಇರುವುದರಿಂದ ಸಾರುವ ಕೆಲಸಕ್ಕೆ ‘ಹೆಚ್ಚು ಕೆಲಸಗಾರರನ್ನು ಕೊಡು’ ಎಂದು ಬರೀ ಪ್ರಾರ್ಥಿಸುವುದಿಲ್ಲ. (ಮತ್ತಾ. 9:38) ಸಾರುವ ಕೆಲಸದಲ್ಲಿ ಶ್ರಮಪಟ್ಟು ದುಡಿಯುತ್ತೇವೆ ಸಹ.

6, 7. (ಎ) “ನಿಷ್ಕಪಟವಾದ ಪ್ರೀತಿ” ಅಂದರೆ ಏನು? (ಬಿ) ನಕಲಿ ಪ್ರೀತಿಗೆ ಕೆಲವು ಉದಾಹರಣೆಗಳನ್ನು ಕೊಡಿ.

6 ನಾವು “ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿಸಬೇಕೆಂದು ಅಪೊಸ್ತಲ ಯೋಹಾನ ಹೇಳಿದನು. ಆದ್ದರಿಂದ ನಮ್ಮ ಪ್ರೀತಿ “ನಿಷ್ಕಪಟ” ಆಗಿರಬೇಕು. (ರೋಮ. 12:9; 2 ಕೊರಿಂ. 6:6) ಇದರರ್ಥ ಪ್ರೀತಿ ಇಲ್ಲದಿದ್ದರೂ ಪ್ರೀತಿ ಇರುವ ತರ ನಾವು ನಾಟಕವಾಡುವುದಿಲ್ಲ. ಹಾಗೆ ಮಾಡಿದರೆ ಅದು ಒಂದು ರೀತಿಯಲ್ಲಿ ಮುಖವಾಡ ಹಾಕಿದ ಹಾಗೆ ಇರುತ್ತದೆ. ‘ಕಪಟ ಪ್ರೀತಿ ಅನ್ನೋದೂ ಇದೆಯಾ?’ ಅಂತ ನಾವು ಯೋಚಿಸಬಹುದು. ನಿಜವಾಗಿ ಹೇಳುವುದಾದರೆ ಕಪಟತನ ಇರುವ ಪ್ರೀತಿಯನ್ನು ಪ್ರೀತಿ ಎಂದು ಕರೆಯಲು ಸಾಧ್ಯವಿಲ್ಲ. ಅದು ನಕಲಿ ಪ್ರೀತಿ, ಅದಕ್ಕೆ ಬೆಲೆಯೇ ಇಲ್ಲ.

7 ನಕಲಿ ಪ್ರೀತಿಯನ್ನು ತೋರಿಸಿದ ಕೆಲವರ ಉದಾಹರಣೆಗಳನ್ನು ನೋಡೋಣ. ಸೈತಾನನು ಏದೆನ್‌ ತೋಟದಲ್ಲಿ ಹವ್ವಳೊಂದಿಗೆ ಮಾತಾಡಿದಾಗ, ‘ಅವನಿಗೆ ನನ್ನ ಬಗ್ಗೆ ಅದೆಷ್ಟೊಂದು ಕಾಳಜಿ’ ಎಂದು ಹವ್ವಳಿಗೆ ಅನಿಸಿರಬೇಕು. ಆದರೆ ಅವನ ಮನಸ್ಸಿನಲ್ಲಿ ಇದ್ದದ್ದೇ ಬೇರೆ ಎಂದು ಅವನ ಕ್ರಿಯೆಗಳು ತೋರಿಸಿದವು. (ಆದಿ. 3:4, 5) ದಾವೀದ ರಾಜನಾಗಿದ್ದಾಗ ಅವನಿಗೆ ಅಹೀತೋಫೆಲ ಎಂಬ ಸ್ನೇಹಿತನಿದ್ದನು. ಇವನು ತನ್ನ ಲಾಭಕ್ಕಾಗಿ ದಾವೀದನಿಗೆ ದ್ರೋಹ ಬಗೆದನು. ಇವನು ನಿಜವಾದ ಸ್ನೇಹಿತನಲ್ಲ ಎಂದು ಇವನ ಕ್ರಿಯೆಗಳು ತೋರಿಸಿದವು. (2 ಸಮು. 15:31) ಇಂದು ಸಭೆಗಳಲ್ಲಿ ಒಡಕುಗಳನ್ನು ಉಂಟುಮಾಡುವ ಧರ್ಮಭ್ರಷ್ಟರು ಮತ್ತು ಇತರರು ‘ನಯವಾದ ನುಡಿಗಳನ್ನೂ ಹೊಗಳಿಕೆಯ ಮಾತುಗಳನ್ನೂ’ ಉಪಯೋಗಿಸುತ್ತಾರೆ. (ರೋಮ. 16:17, 18) ಅವರು ಬೇರೆಯವರ ಬಗ್ಗೆ ತುಂಬ ಕಾಳಜಿ ವಹಿಸುವ ತರ ನಾಟಕವಾಡುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ, ಅವರು ಬರೀ ಸ್ವಾರ್ಥಿಗಳೇ.

8. ನಾವು ನಮ್ಮನ್ನೇ ಯಾವ ಪ್ರಶ್ನೆ ಕೇಳಿಕೊಳ್ಳಬೇಕು?

8 ನಕಲಿ ಪ್ರೀತಿ ನಾಚಿಕೆಗೆಟ್ಟದ್ದು. ಏಕೆಂದರೆ ಈ ಪ್ರೀತಿ ತೋರಿಸಿ ಜನರನ್ನು ಮೋಸ ಮಾಡಲಾಗುತ್ತದೆ. ಮನುಷ್ಯರು ಮೋಸ ಹೋಗಬಹುದು, ಆದರೆ ಯೆಹೋವನು ಮೋಸ ಹೋಗಲ್ಲ. ಕಪಟಿಗಳಂತೆ ಇರುವವರಿಗೆ “ಅತಿ ತೀಕ್ಷ್ಣವಾದ ದಂಡನೆ” ವಿಧಿಸಲಾಗುತ್ತದೆ ಎಂದು ಯೇಸು ಹೇಳಿದ್ದಾನೆ. (ಮತ್ತಾ. 24:51) ಯೆಹೋವನ ಸೇವಕರಾಗಿರುವ ನಾವು ಎಂದೂ ಕಪಟ ಪ್ರೀತಿ ತೋರಿಸಬಾರದು. ಆದ್ದರಿಂದ ‘ನಾನು ತೋರಿಸುವ ಪ್ರೀತಿ ನಿಜವಾಗಿದೆಯಾ ಅಥವಾ ಅದರಲ್ಲಿ ಸ್ವಾರ್ಥ, ವಂಚನೆ ಇದೆಯಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. “ನಿಷ್ಕಪಟವಾದ ಪ್ರೀತಿ” ತೋರಿಸುವ ಒಂಬತ್ತು ವಿಧಗಳನ್ನು ಈಗ ನೋಡೋಣ.

“ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿ ತೋರಿಸುವುದು ಹೇಗೆ?

9. ನಮ್ಮಲ್ಲಿ ನಿಜ ಪ್ರೀತಿ ಇದ್ದರೆ ಏನು ಮಾಡುತ್ತೇವೆ?

9 ನೀವು ಸಹೋದರರಿಗಾಗಿ ಏನು ಮಾಡುತ್ತಿದ್ದೀರೊ ಅದು ಬೇರೆಯವರ ಗಮನಕ್ಕೆ ಬರದಿದ್ದರೂ ಸಂತೋಷದಿಂದ ಮಾಡಿರಿ. ನಾವು ಸಹೋದರರಿಗೆಂದು ಮಾಡುವ ಪ್ರೀತಿಭರಿತ, ದಯಾಭರಿತ ವಿಷಯಗಳು ಯಾರಿಗೂ ಎಂದಿಗೂ ಗೊತ್ತಾಗಲಿಕ್ಕಿಲ್ಲವಾದರೂ ಅದನ್ನು ಮಾಡಲು ಸಿದ್ಧರಿರಬೇಕು. (ಮತ್ತಾಯ 6:1-4 ಓದಿ.) ಈ ಮನೋಭಾವ ಅನನೀಯ ಮತ್ತು ಸಪ್ಫೈರಳಿಗೆ ಇರಲಿಲ್ಲ. ಅವರು ಕೊಡುತ್ತಿರುವ ಕಾಣಿಕೆಯ ಬಗ್ಗೆ ಬೇರೆಯವರಿಗೆ ಗೊತ್ತಾಗಬೇಕೆಂದು ಬಯಸಿದರು. ತಾವು ಎಷ್ಟು ಕಾಣಿಕೆ ಕೊಡುತ್ತಿದ್ದೇವೆ ಎಂಬುದರ ಬಗ್ಗೆ ಸುಳ್ಳು ಹೇಳಿದರು. ಅವರ ಈ ಕಪಟತನಕ್ಕಾಗಿ ಅವರಿಗೆ ಶಿಕ್ಷೆ ಸಿಕ್ಕಿತು. (ಅ. ಕಾ. 5:1-10) ಆದರೆ ನಮಗೆ ನಮ್ಮ ಸಹೋದರರ ಮೇಲೆ ನಿಜ ಪ್ರೀತಿ ಇದ್ದರೆ, ನಾವು ಮಾಡುವ ಸಹಾಯ ಬೇರೆಯವರಿಗೆ ಗೊತ್ತಾಗಬೇಕೆಂಬ ಯೋಚನೆಯೂ ಇಲ್ಲದೆ ಸಂತೋಷದಿಂದ ಮಾಡುತ್ತೇವೆ. ಈ ವಿಷಯದಲ್ಲಿ, ಆಧ್ಯಾತ್ಮಿಕ ಆಹಾರ ತಯಾರಿಸಲು ಆಡಳಿತ ಮಂಡಲಿಗೆ ಸಹಾಯ ಮಾಡುವ ಸಹೋದರರು ಒಳ್ಳೇ ಮಾದರಿ ಇಟ್ಟಿದ್ದಾರೆ. ಅವರು ಬೇರೆಯವರ ಗಮನವನ್ನು ತಮ್ಮ ಕಡೆಗೆ ಸೆಳೆಯಲು ನೋಡುವುದಿಲ್ಲ, ಯಾವ ಪ್ರಾಜೆಕ್ಟ್‌ನಲ್ಲಿ ಕೆಲಸಮಾಡಿದ್ದರು ಎಂದು ಹೇಳುವುದೂ ಇಲ್ಲ.

10. ನಾವು ಹೇಗೆ ಬೇರೆಯವರಿಗೆ ಗೌರವ ತೋರಿಸಬಹುದು?

10 ಬೇರೆಯವರಿಗೆ ಗೌರವ ತೋರಿಸಿ. (ರೋಮನ್ನರಿಗೆ 12:10 ಓದಿ.) ಯೇಸು ತನ್ನ ಅಪೊಸ್ತಲರ ಕಾಲುಗಳನ್ನು ತೊಳೆಯುವ ಮೂಲಕ ಅವರಿಗೆ ಗೌರವ ತೋರಿಸಿದನು. (ಯೋಹಾ. 13:3-5, 12-15) ಹೀಗೆ ಇತರರ ಸೇವೆ ಮಾಡುವ ಮೂಲಕ ಅವರಿಗೆ ಗೌರವ ತೋರಿಸಲಿಕ್ಕಾಗಿ ಯೇಸುವಿನ ಹಾಗೆ ದೀನತೆ ಬೆಳೆಸಿಕೊಳ್ಳಲು ನಾವು ಶ್ರಮಪಡಬೇಕು. ಯೇಸುವಿನ ಈ ಮಾದರಿಯನ್ನು ಹೇಗೆ ಅನುಕರಿಸಬೇಕೆಂದು ಅಪೊಸ್ತಲರಿಗೆ ಮುಂದೆ ಅವರು ಪವಿತ್ರಾತ್ಮವನ್ನು ಪಡೆದ ನಂತರವೇ ಪೂರ್ತಿಯಾಗಿ ಅರ್ಥವಾಯಿತು. (ಯೋಹಾ. 13:7) ನಾವು ಒಂದುವೇಳೆ ಬೇರೆಯವರಿಗಿಂತ ಹೆಚ್ಚಿನ ಶಿಕ್ಷಣ ಪಡೆದಿರಬಹುದು, ಅವರಿಗಿಂತ ಹೆಚ್ಚು ಶ್ರೀಮಂತರಾಗಿರಬಹುದು ಅಥವಾ ನಮಗೆ ವಿಶೇಷ ನೇಮಕಗಳು ಸಿಕ್ಕಿರಬಹುದು. ಆದರೆ ಈ ಕಾರಣಗಳಿಂದಾಗಿ ನಾವು ಅವರಿಗಿಂತ ಶ್ರೇಷ್ಠ ಎಂದು ನೆನಸದಿರುವ ಮೂಲಕ ನಾವು ಅವರಿಗೆ ಗೌರವ ತೋರಿಸುತ್ತೇವೆ. (ರೋಮ. 12:3) ಯಾವುದೊ ಕೆಲಸಕ್ಕಾಗಿ ಒಬ್ಬರಿಗೆ ಹೊಗಳಿಕೆ ಸಿಕ್ಕಿದಾಗ ಆ ಕೆಲಸದಲ್ಲಿ ನಮ್ಮ ಪಾಲೂ ಇದ್ದದರಿಂದ ನಮಗೂ ಸ್ವಲ್ಪ ಹೊಗಳಿಕೆ ಸಿಗಬೇಕಿತ್ತೆಂದು ಅನಿಸಿದರೂ ಹೊಟ್ಟೆಕಿಚ್ಚುಪಡದೆ ಅವರ ಜೊತೆ ಖುಷಿಪಡಬೇಕು.

11. ನಾವು ಕೊಡುವ ಪ್ರಶಂಸೆ ಯಾಕೆ ಮನದಾಳದಿಂದ ಬರಬೇಕು?

11 ಮನದಾಳದಿಂದ ಪ್ರಶಂಸೆ ನೀಡಿ. ಬೇರೆಯವರಿಗೆ ಪ್ರಶಂಸೆ ನೀಡಲು ಅವಕಾಶಗಳಿಗಾಗಿ ಹುಡುಕಿ. ಏಕೆಂದರೆ ಪ್ರಶಂಸೆಯ ಮಾತುಗಳು “ಭಕ್ತಿವೃದ್ಧಿ” ಮಾಡುತ್ತವೆ. (ಎಫೆ. 4:29) ಆದರೆ ನಾವು ಹೇಳುವ ಮಾತು ಮನದಾಳದಿಂದ ಬರಬೇಕು, ಸುಮ್ಮನೆ ಮೇಲೇರಿಸಲು ಹೇಳಬಾರದು. ಬುದ್ಧಿವಾದ ಕೊಡುವ ಜವಾಬ್ದಾರಿ ನಮಗಿದ್ದರೆ ಅಗತ್ಯವಿರುವಾಗ ಅದನ್ನು ಕೊಡಬೇಕು. (ಜ್ಞಾನೋ. 29:5) ನಾವು ಯಾರನ್ನಾದರೂ ಹೊಗಳಿ ನಂತರ ಬೆನ್ನಹಿಂದೆ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಅದು ಕಪಟತನ. ಅಪೊಸ್ತಲ ಪೌಲನು ಹೀಗೆ ಮಾಡಲಿಲ್ಲ, ನಿಜ ಪ್ರೀತಿ ತೋರಿಸಿದನು. ಅವನು ಕೊರಿಂಥ ಸಭೆಯಲ್ಲಿರುವ ಕ್ರೈಸ್ತರಿಗೆ ಪತ್ರ ಬರೆದಾಗ ಅವರು ಮಾಡುತ್ತಿದ್ದ ಒಳ್ಳೇ ವಿಷಯಗಳಿಗಾಗಿ ಶ್ಲಾಘಿಸಿದನು. (1 ಕೊರಿಂ. 11:2) ಆದರೆ ಅವರಿಗೆ ಬುದ್ಧಿ ಹೇಳಬೇಕಾದ ಪರಿಸ್ಥಿತಿ ಬಂದಾಗ ಅದನ್ನು ಯಾಕೆ ಹೇಳುತ್ತಿದ್ದಾನೆಂದು ದಯೆಯಿಂದ ಸ್ಪಷ್ಟವಾಗಿ ತಿಳಿಸಿದನು.—1 ಕೊರಿಂ. 11:20-22.

ಕಷ್ಟದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಸಹಾಯ ಮಾಡುವ ಮೂಲಕ ನಾವು ಪ್ರೀತಿ ತೋರಿಸುತ್ತೇವೆ, ಅತಿಥಿಸತ್ಕಾರ ಮಾಡುತ್ತೇವೆ (ಪ್ಯಾರ 12 ನೋಡಿ)

12. ಅತಿಥಿಸತ್ಕಾರ ಮಾಡುವಾಗ ನಾವು ಹೇಗೆ ನಿಜ ಪ್ರೀತಿ ತೋರಿಸಬಹುದು?

12 ಅತಿಥಿಸತ್ಕಾರ ಮಾಡಿ. ನಾವು ನಮ್ಮ ಸಹೋದರ ಸಹೋದರಿಯರಿಗೆ ಉದಾರವಾಗಿ ಕೊಡಬೇಕೆಂದು ಯೆಹೋವನು ಆಜ್ಞೆ ಕೊಟ್ಟಿದ್ದಾನೆ. (1 ಯೋಹಾನ 3:17 ಓದಿ.) ಆದರೆ ನಾವು ಅತಿಥಿಸತ್ಕಾರವನ್ನು ಒಳ್ಳೇ ಉದ್ದೇಶದಿಂದ ಮಾಡಬೇಕು. ನಾವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ನನ್ನ ಮನೆಗೆ ನನ್ನ ಆಪ್ತ ಸ್ನೇಹಿತರನ್ನು ಅಥವಾ ಸಭೆಯಲ್ಲಿ ಮುಖ್ಯ ವ್ಯಕ್ತಿಗಳು ಎಂದು ನಾನು ನೆನಸುವಂಥವರನ್ನು ಮಾತ್ರ ಕರೆಯುತ್ತೇನಾ? ಯಾರಿಂದ ನನಗೆ ಪ್ರಯೋಜನ ಆಗುತ್ತದೆ ಅಂತ ಅನಿಸುತ್ತದೋ ಅಂಥವರನ್ನು ಮಾತ್ರ ಕರೆಯುತ್ತೇನಾ? ಅಥವಾ ನನಗೆ ಹೆಚ್ಚು ಪರಿಚಯವಿಲ್ಲದ ಇಲ್ಲವೆ ನನಗಾಗಿ ಏನೂ ಮಾಡಲಿಕ್ಕಾಗದಂಥ ಸಹೋದರ ಸಹೋದರಿಯರನ್ನು ಸಹ ಕರೆಯುತ್ತೇನಾ?’ (ಲೂಕ 14:12-14) ತಪ್ಪು ತೀರ್ಮಾನಗಳನ್ನು ಮಾಡಿದ್ದರಿಂದ ಕಷ್ಟದಲ್ಲಿ ಬಿದ್ದಿರುವ ಒಬ್ಬ ಸಹೋದರನಿಗೆ ಸಹಾಯ ಮಾಡುವುದರ ಕುರಿತೇನು? ಅಥವಾ ನಮ್ಮ ಮನೆಗೆ ಬಂದು ಅತಿಥಿಸತ್ಕಾರ ಆನಂದಿಸಿದ ವ್ಯಕ್ತಿ ನಮಗೆ ಧನ್ಯವಾದ ಹೇಳಲಿಲ್ಲವಾದರೆ ಆಗೇನು? ಇಂಥ ಸನ್ನಿವೇಶಗಳಲ್ಲಿ, “ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಯೆಹೋವನು ಕೊಟ್ಟಿರುವ ಸಲಹೆಯನ್ನು ನಾವು ಪಾಲಿಸಬೇಕು. (1 ಪೇತ್ರ 4:9) ಒಳ್ಳೇ ಮನಸ್ಸಿನಿಂದ ಅತಿಥಿಸತ್ಕಾರ ಮಾಡುವಾಗ ನಮಗೆ ಸಂತೋಷ ಸಿಗುತ್ತದೆ.—ಅ. ಕಾ. 20:35.

13. (ಎ) ನಾವು ಹೆಚ್ಚು ತಾಳ್ಮೆ ತೋರಿಸಬೇಕಾದ ಸನ್ನಿವೇಶ ಯಾವಾಗ ಎದುರಾಗುತ್ತದೆ? (ಬಿ) ಬಲಹೀನರಿಗೆ ಸಹಾಯ ಮಾಡಲು ನಾವೇನು ಮಾಡಬಹುದು?

13 ಬಲಹೀನರಿಗೆ ಸಹಾಯ ಮಾಡಿ. “ಬಲಹೀನರಿಗೆ ಆಧಾರವಾಗಿರಿ, ಎಲ್ಲರ ಕಡೆಗೆ ದೀರ್ಘ ಸಹನೆಯನ್ನು ತೋರಿಸಿರಿ” ಎಂಬ ಆಜ್ಞೆ ನಮ್ಮಲ್ಲಿರುವ ಪ್ರೀತಿ ನಿಜವಾಗಿದೆಯಾ ಇಲ್ಲವಾ ಎಂದು ತೋರಿಸುತ್ತದೆ. (1 ಥೆಸ. 5:14) ಬಲಹೀನರಾಗಿದ್ದ ಅನೇಕ ಸಹೋದರರು ಸಮಯಾನಂತರ ನಂಬಿಕೆಯಲ್ಲಿ ಬಲಗೊಂಡಿದ್ದಾರೆ. ಆದರೆ ಇನ್ನೂ ಕೆಲವು ಸಹೋದರರ ವಿಷಯದಲ್ಲಿ ನಾವು ಹೆಚ್ಚು ಸಮಯದ ವರೆಗೆ “ದೀರ್ಘ ಸಹನೆ” ಅಥವಾ ತಾಳ್ಮೆ ತೋರಿಸಬೇಕಾಗುತ್ತದೆ, ಪ್ರೀತಿಯಿಂದ ಸಹಾಯ ಮಾಡಬೇಕಾಗುತ್ತದೆ. ಹೇಗೆ? ನಾವು ಬೈಬಲನ್ನು ಉಪಯೋಗಿಸಿ ಅವರನ್ನು ಪ್ರೋತ್ಸಾಹಿಸಬಹುದು, ನಮ್ಮೊಂದಿಗೆ ಸೇವೆಗೆ ಬರುವಂತೆ ಆಮಂತ್ರಿಸಬಹುದು ಅಥವಾ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳುವಾಗ ಕಿವಿಗೊಟ್ಟು ಕೇಳಬಹುದು. ಆದರೆ ನಾವು ಒಂದು ವಿಷಯವನ್ನು ಮನಸ್ಸಿನಲ್ಲಿಡಬೇಕು. ಅದೇನೆಂದರೆ, ನಾವು ನಮ್ಮ ಸಹೋದರ ಸಹೋದರಿಯರ ಬಗ್ಗೆ ‘ಇವರು ಬಲವುಳ್ಳವರು’ ಅಥವಾ ‘ಇವರು ಬಲಹೀನರು’ ಎಂಬ ತೀರ್ಮಾನಕ್ಕೆ ಬರಬಾರದು. ನಮ್ಮೆಲ್ಲರಲ್ಲೂ ಬಲವಾದ ವಿಷಯಗಳು ಇವೆ, ಕೆಲವು ಬಲಹೀನತೆಗಳೂ ಇವೆ ಎಂದು ಜ್ಞಾಪಕದಲ್ಲಿಡಬೇಕು. ಅಪೊಸ್ತಲ ಪೌಲನು ಸಹ ತನ್ನಲ್ಲಿ ಬಲಹೀನತೆಗಳಿವೆ ಎಂದು ಒಪ್ಪಿಕೊಂಡನು. (2 ಕೊರಿಂ. 12:9, 10) ಆದ್ದರಿಂದ ನಮ್ಮೆಲ್ಲರಿಗೂ ಸಹಾಯ ಮತ್ತು ಪ್ರೋತ್ಸಾಹದ ಅಗತ್ಯವಿದೆ.

14. ನಮ್ಮ ಸಹೋದರರೊಂದಿಗೆ ಶಾಂತಿಯಿಂದಿರಲು ನಾವೇನು ಮಾಡಲು ಸಿದ್ಧರಿರಬೇಕು?

14 ಶಾಂತಿಯಿಂದಿರಿ. ನಮ್ಮ ಸಹೋದರರೊಂದಿಗೆ ಶಾಂತಿಯಿಂದ ಇರುವುದು ತುಂಬ ಪ್ರಾಮುಖ್ಯ. ನಮ್ಮನ್ನು ಯಾರೋ ತಪ್ಪರ್ಥ ಮಾಡಿಕೊಂಡಿದ್ದಾರೆ ಅಥವಾ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅನಿಸುವಾಗಲೂ ನಾವು ಅವರೊಂದಿಗೆ ಶಾಂತಿಯಿಂದಿರಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. (ರೋಮನ್ನರಿಗೆ 12:17, 18 ಓದಿ.) ಒಂದುವೇಳೆ ನಾವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಕ್ಷಮೆ ಕೇಳುವುದು ಒಳ್ಳೇದು. ಆದರೆ ನಾವು ಮನಸಾರೆ ಕ್ಷಮೆ ಕೇಳಬೇಕು. “ನಾನು ಆ ಅರ್ಥದಲ್ಲಿ ಹೇಳಲಿಲ್ಲ. ಆದ್ರೆ ನಿಮಗೆ ಹಾಗನಿಸಿದರೆ ಕ್ಷಮಿಸಿಬಿಡಿ” ಎಂದು ಹೇಳುವ ಬದಲು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾ “ನಾನು ಹಾಗೆ ಹೇಳಿ ನಿಮ್ಮ ಮನಸ್ಸನ್ನು ನೋಯಿಸಿದ್ದಕ್ಕೆ ಕ್ಷಮಿಸಿಬಿಡಿ” ಎಂದು ಹೇಳಬೇಕು. ಒಂದು ವಿವಾಹ ಸಂಬಂಧದಲ್ಲಿ ಶಾಂತಿಯಿರುವುದು ತುಂಬ ಪ್ರಾಮುಖ್ಯ. ಗಂಡ ಹೆಂಡತಿ ಬೇರೆಯವರ ಮುಂದೆ ತುಂಬ ಪ್ರೀತಿ ಇರುವ ತರ ತೋರಿಸಿಬಿಟ್ಟು ಅವರಿಬ್ಬರೇ ಇದ್ದಾಗ ಮಾತೇ ಆಡದಿದ್ದರೆ, ಮನಸ್ಸಿಗೆ ನೋವಾಗುವ ರೀತಿ ಮಾತಾಡಿದರೆ ಅಥವಾ ಹೊಡೆದಾಡಿದರೆ ಅದು ಸರಿಯಲ್ಲ.

15. ನಾವು ಮನದಾಳದಿಂದ ಕ್ಷಮಿಸಿದ್ದೇವೆ ಎಂದು ಹೇಗೆ ತೋರಿಸಬಹುದು?

15 ಉದಾರವಾಗಿ ಕ್ಷಮಿಸಿರಿ. ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿರುವುದಾದರೆ ನಾವು ಅವರನ್ನು ಕ್ಷಮಿಸಿ, ಮನಸ್ಸಿನಿಂದ ಅಸಮಾಧಾನವನ್ನು ತೆಗೆದುಹಾಕುತ್ತೇವೆ. ಅವರು ನಮ್ಮನ್ನು ನೋಯಿಸಿದ್ದಾರೆಂದು ಅವರಿಗೆ ಗೊತ್ತಾಗದಿದ್ದರೂ ಇದನ್ನು ಮಾಡುತ್ತೇವೆ. ‘ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಂಡು, ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ ಶ್ರದ್ಧೆಯಿಂದ ಪ್ರಯತ್ನಿಸುತ್ತೇವೆ.’ ಹೀಗೆ ನಾವು ಉದಾರವಾಗಿ ಕ್ಷಮಿಸುತ್ತೇವೆ. (ಎಫೆ. 4:2, 3) ನಾವು ಮನದಾಳದಿಂದ ಕ್ಷಮಿಸಿದ್ದೇವೆ ಎಂದಾದರೆ ನಡೆದ ವಿಷಯದ ಬಗ್ಗೆ ಯೋಚಿಸುತ್ತಾ ಇರುವುದಿಲ್ಲ. ಯಾಕೆಂದರೆ ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.” (1 ಕೊರಿಂ. 13:4, 5) ನಡೆದ ವಿಷಯವನ್ನು ನಾವು ಮನಸ್ಸಿನಲ್ಲೇ ಇಟ್ಟುಕೊಂಡು ಕುದಿಯುತ್ತಾ ಇದ್ದರೆ ಆ ನಮ್ಮ ಸಹೋದರ ಅಥವಾ ಸಹೋದರಿಯೊಟ್ಟಿಗೆ ನಮ್ಮ ಸಂಬಂಧ ಹಾಳಾಗುತ್ತದೆ. ಯೆಹೋವನೊಟ್ಟಿಗಿರುವ ಸಂಬಂಧ ಕೂಡ ಹಾಳಾಗುವ ಸಾಧ್ಯತೆ ಇದೆ. (ಮತ್ತಾ. 6:14, 15) ನಮ್ಮ ಮನಸ್ಸನ್ನು ನೋಯಿಸಿದ ವ್ಯಕ್ತಿಗಾಗಿ ನಾವು ಪ್ರಾರ್ಥಿಸುವ ಮೂಲಕವೂ ಮನದಾಳದಿಂದ ಅವರನ್ನು ಕ್ಷಮಿಸಿದ್ದೇವೆ ಎಂದು ತೋರಿಸಿಕೊಡುತ್ತೇವೆ.—ಲೂಕ 6:27, 28.

16. ಯೆಹೋವನ ಸೇವೆಯಲ್ಲಿ ವಿಶೇಷ ನೇಮಕಗಳು ಸಿಕ್ಕಿದಾಗ ನಾವೇನು ಮಾಡಬೇಕು?

16 ವೈಯಕ್ತಿಕ ಪ್ರಯೋಜನ ನೋಡಬೇಡಿ. ಯೆಹೋವನ ಸೇವೆಯಲ್ಲಿ ನಮಗೊಂದು ವಿಶೇಷ ನೇಮಕ ಸಿಕ್ಕಿದಾಗ ‘ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುವ’ ಮೂಲಕ ನಮ್ಮಲ್ಲಿ ನಿಜ ಪ್ರೀತಿ ಇದೆಯೆಂದು ತೋರಿಸಬಹುದು. (1 ಕೊರಿಂ. 10:24) ಉದಾಹರಣೆಗೆ, ನಮ್ಮ ಸಮ್ಮೇಳನ ಮತ್ತು ಅಧಿವೇಶನ ನಡೆಯುವ ಸ್ಥಳಕ್ಕೆ ಸಹಾಯಕರು ಮೊದಲು ಪ್ರವೇಶಿಸುತ್ತಾರೆ, ನಂತರವೇ ಸಭಿಕರು ಬರುತ್ತಾರೆ. ತಮಗಾಗಿ, ತಮ್ಮ ಕುಟುಂಬದವರಿಗಾಗಿ ಒಳ್ಳೊಳ್ಳೇ ಜಾಗದಲ್ಲಿ ಸೀಟುಗಳನ್ನು ಹಿಡಿಯಲು ಈ ಸಹಾಯಕರಿಗೆ ತುಂಬ ಮನಸ್ಸಾಗಬಹುದು. ಹಾಗಿದ್ದರೂ ಅವರಲ್ಲಿ ಹೆಚ್ಚಿನವರು ತಮಗೆ ನೇಮಿಸಲಾಗಿರುವ ವಿಭಾಗದಲ್ಲಿ ಅಷ್ಟೇನೂ ಅನುಕೂಲವಿಲ್ಲದ ಕಡೆ ಕೂತುಕೊಳ್ಳುತ್ತಾರೆ. ಹೀಗೆ ತಮ್ಮ ನಿಸ್ವಾರ್ಥ ಪ್ರೀತಿ ತೋರಿಸುತ್ತಾರೆ. ನೀವು ಅವರ ಒಳ್ಳೇ ಮಾದರಿಯನ್ನು ಹೇಗೆ ಅನುಕರಿಸಬಹುದು?

17. ಗಂಭೀರ ಪಾಪ ಮಾಡಿದ ಒಬ್ಬ ಕ್ರೈಸ್ತನಲ್ಲಿ ನಿಜ ಪ್ರೀತಿ ಇದ್ದರೆ ಏನು ಮಾಡುತ್ತಾನೆ?

17 ಗುಟ್ಟಾದ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡಿ. ಕೆಲವು ಕ್ರೈಸ್ತರು ಗಂಭೀರವಾದ ಪಾಪ ಮಾಡಿ ಅದನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಮುಜುಗರದಿಂದಲೋ ಬೇರೆಯವರ ಮನಸ್ಸನ್ನು ನೋಯಿಸಬಾರದು ಎಂಬ ಕಾರಣದಿಂದಲೋ ಅವರು ಮುಚ್ಚಿಡಬಹುದು. (ಜ್ಞಾನೋ. 28:13) ಆದರೆ ಇದು ಪ್ರೀತಿಯ ಕ್ರಿಯೆ ಅಲ್ಲ. ಏಕೆಂದರೆ ಪಾಪವನ್ನು ಮುಚ್ಚಿಡುವುದರಿಂದ ಅದನ್ನು ಮಾಡಿದವರಿಗೂ ಇತರರಿಗೂ ಹಾನಿಯಾಗುತ್ತದೆ. ಹೇಗೆ? ಯೆಹೋವನು ಸಭೆಗೆ ಪವಿತ್ರಾತ್ಮ ಕೊಡುವುದನ್ನು ನಿಲ್ಲಿಸಬಹುದು ಮತ್ತು ಸಭೆಯಲ್ಲಿ ಶಾಂತಿ ಇಲ್ಲದೆ ಹೋಗಬಹುದು. (ಎಫೆ. 4:30) ಆದ್ದರಿಂದ ಗಂಭೀರ ಪಾಪ ಮಾಡಿದ ಒಬ್ಬ ಕ್ರೈಸ್ತನಲ್ಲಿ ನಿಜ ಪ್ರೀತಿ ಇದ್ದರೆ ಅವನು ಹಿರಿಯರ ಹತ್ತಿರ ಅದನ್ನು ಹೇಳಿಕೊಂಡು ಬೇಕಾದ ಸಹಾಯ ಪಡೆಯುತ್ತಾನೆ.—ಯಾಕೋ. 5:14, 15.

18. ನಿಜ ಪ್ರೀತಿ ತೋರಿಸುವುದು ಯಾಕೆ ಮುಖ್ಯ?

18 ಪ್ರೀತಿ ಎಲ್ಲಕ್ಕಿಂತಲೂ ಶ್ರೇಷ್ಠವಾದ ಗುಣ. (1 ಕೊರಿಂ. 13:13) ಇದು ನಮ್ಮನ್ನು ಯೇಸುವಿನ ನಿಜ ಹಿಂಬಾಲಕರೆಂದು ಮತ್ತು ಪ್ರೀತಿಯ ಮೂಲನಾದ ಯೆಹೋವನನ್ನು ಅನುಕರಿಸುವವರೆಂದು ಗುರುತಿಸುತ್ತದೆ. (ಎಫೆ. 5:1, 2) ತನ್ನಲ್ಲಿ ಪ್ರೀತಿಯಿಲ್ಲದಿದ್ದರೆ ತಾನು ಏನೂ ಅಲ್ಲ ಎಂದು ಪೌಲನು ಹೇಳಿದ್ದಾನೆ. (1 ಕೊರಿಂ. 13:2) ಆದ್ದರಿಂದ ನಾವೆಲ್ಲರೂ ‘ಮಾತಿನಲ್ಲಿ’ ಮಾತ್ರವಲ್ಲ “ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿ ತೋರಿಸುವುದನ್ನು ಮುಂದುವರಿಸೋಣ.