ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

‘ಈಗ ನಾನು ಖುಷಿಯಿಂದ ಸೇವೆ ಮಾಡ್ತಾ ಇದ್ದೀನಿ!’

‘ಈಗ ನಾನು ಖುಷಿಯಿಂದ ಸೇವೆ ಮಾಡ್ತಾ ಇದ್ದೀನಿ!’

ನ್ಯೂಜಿ಼ಲೆಂಡ್‌ನ ಬಲ್‌ಕ್ಲುತ ಅನ್ನೋ ಪಟ್ಟಣದಲ್ಲಿ ನಾನು ಬೆಳೆದೆ. ಚಿಕ್ಕವಳಿದ್ದಾಗ ನಂಗೆ ಯೆಹೋವ ಅಂದ್ರೆ ಪಂಚಪ್ರಾಣ. ಯೆಹೋವನ ಸಾಕ್ಷಿ ಆಗಿದ್ದಕ್ಕೆ ತುಂಬ ಖುಷಿನೂ ಆಗ್ತಿತ್ತು. ಮೀಟಿಂಗಲ್ಲಿ ನಂಗೆ ಬೋರ್‌ ಆಗ್ತಾ ಇರಲಿಲ್ಲ. ಸಭೆಗೆ ಹೋಗುವಾಗ ಖುಷಿ-ಖುಷಿಯಾಗಿ ಹೋಗುತ್ತಿದ್ದೆ. ನಂಗೆ ನಾಚಿಕೆ ಸ್ವಭಾವ ಇತ್ತು. ಆದ್ರೂ ಪ್ರತಿವಾರ ಸೇವೆಗೆ ಮಿಸ್‌ ಮಾಡದೆ ಹೋಗುತ್ತಿದ್ದೆ. ಸ್ಕೂಲಲ್ಲಿ ಮಕ್ಕಳಿಗೆ, ಬೇರೆಯವರಿಗೆ ಸಿಹಿಸುದ್ದಿ ಸಾರುತ್ತಿದ್ದೆ. ನಾನು ಯೆಹೋವನ ಸಾಕ್ಷಿ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಆಗುತ್ತಿತ್ತು. 11ನೇ ವಯಸ್ಸಲ್ಲಿ ನನ್ನನ್ನ ಯೆಹೋವ ದೇವರಿಗೆ ಸಮರ್ಪಿಸಿಕೊಂಡೆ.

ಸಂತೋಷ ಕಂಡುಕೊಂಡೆ

ನಂಗೆ ಸುಮಾರು 13 ವರ್ಷ ಆದಾಗ ಯೆಹೋವನ ಮೇಲೆ ಪ್ರೀತಿ ಕಡಿಮೆ ಆಗ್ತಾ ಬಂತು. ಸ್ಕೂಲಲ್ಲಿ ನನ್ನ ಜೊತೆ ಕಲಿತಿದ್ದ ಮಕ್ಕಳಿಗೆ ಮನೇಲಿ ಯಾವುದೇ ಕಟ್ಟುನಿಟ್ಟಿನ ನಿಯಮಗಳು ಇರಲಿಲ್ಲ. ಅದೇ ತರ ನಾನೂ ಇರಬೇಕಂತ ಆಸೆ ಪಡ್ತಿದ್ದೆ. ಮನೇಲಿ ಅಪ್ಪ-ಅಮ್ಮ ಇಡುತ್ತಿದ್ದ ಕಟ್ಟುನಿಟ್ಟಿನ ನಿಯಮಗಳು, ದೇವರ ನಿಯಮಗಳು ಇದೆಲ್ಲದ್ದರಿಂದ ನಂಗೆ ತುಂಬ ಕಷ್ಟ ಆಗುತ್ತಿತ್ತು. ಸೇವೆಗೆ, ಮೀಟಿಂಗ್‌ಗೆ ಹೋಗೋದು ಅಂದ್ರೆ ಇಷ್ಟಾನೇ ಆಗುತ್ತಿರಲಿಲ್ಲ. ನಾನು ಯಾವತ್ತೂ ಯೆಹೋವ ಇದ್ದಾನಾ ಅಂತ ಸಂಶಯ ಪಡಲಿಲ್ಲ. ಆದರೆ ಯೆಹೋವನಿಂದ ಸ್ವಲ್ಪ ಸ್ವಲ್ಪನೇ ದೂರ ಆಗ್ತಿದ್ದೆ.

ಸೇವೆಗೆ ಹೋಗೋದನ್ನು ನಾನು ಬಿಟ್ಟುಬಿಡಲಿಲ್ಲ. ಆದರೆ ಬೇಕೋ ಬೇಡವೋ ಅಂತ ಹೋಗ್ತಿದ್ದೆ. ಹೋಗುವಾಗ ತಯಾರಿ ಮಾಡಿಕೊಂಡು ಹೋಗ್ತಾ ಇರಲಿಲ್ಲ. ಇದರಿಂದಾಗಿ ಜನರ ಹತ್ರ ಮಾತು ಶುರು ಮಾಡೋಕೂ ಕಷ್ಟ ಪಡ್ತಿದ್ದೆ. ಶುರು ಮಾಡಿದ್ರೂ ಮುಂದುವರಿಸಿಕೊಂಡು ಹೋಗೋಕೆ ಪರದಾಡುತ್ತಿದ್ದೆ. ಹಾಗಾಗಿ ಒಂದು ಪುನರ್ಭೇಟಿ ಆಗಲಿ ಬೈಬಲ್‌ ಅಧ್ಯಯನ ಆಗಲಿ ಸಿಗ್ತಿರಲಿಲ್ಲ. ಆಗ ಸೇವೆ ಮಾಡೋಕೆ ನನಗಿದ್ದ ಆಸಕ್ತಿನೂ ಹೋಗಿಬಿಟ್ಟಿತು. ‘ಇಷ್ಟು ಕಷ್ಟಪಟ್ಟು ಯಾರು ಸೇವೆ ಮಾಡ್ತಾರೆ? ಬೇಡ ಸಾಕು’ ಅಂತ ಅನಿಸುತ್ತಿತ್ತು.

ನಂಗೆ 17 ವರ್ಷ ಆದಾಗ ಈ ಕಟ್ಟುನಿಟ್ಟಿನ ಜೀವನದಿಂದ ಹೊರಗೆ ಬರಬೇಕು, ಆರಾಮವಾಗಿ ಇರಬೇಕು ಅಂತ ಅನಿಸಿತು. ಅದಕ್ಕೆ ನನ್ನ ಬಟ್ಟೆ-ಬರೆಗಳನ್ನೆಲ್ಲ ಪ್ಯಾಕ್‌ ಮಾಡಿಕೊಂಡು ಆಸ್ಟ್ರೇಲಿಯಗೆ ಬಂದುಬಿಟ್ಟೆ. ಇದು ಅಪ್ಪ-ಅಮ್ಮಗೆ ಅಷ್ಟು ಇಷ್ಟ ಆಗಲಿಲ್ಲ. ಅಲ್ಲಿ ಹೋದ್ರೂ ನಾನು ಯೆಹೋವನ ಸೇವೆ ಮಾಡ್ತೀನಿ ಅಂತ ಅವರು ಸಮಾಧಾನ ಮಾಡಿಕೊಂಡ್ರು.

ಆಸ್ಟ್ರೇಲಿಯಗೆ ಹೋದ ಮೇಲಂತೂ ಎಲ್ಲಾ ಅಷ್ಟಕ್ಕಷ್ಟೇ ಆಗೋಯ್ತು. ಮೀಟಿಂಗ್‌ ಹೋಗೋದು ತುಂಬ ಕಡಿಮೆ ಆಯ್ತು. ನನ್ನ ತರಾನೇ ಇದ್ದ ಸಹೋದರ ಸಹೋದರಿಯರನ್ನು ಫ್ರೆಂಡ್ಸ್‌ ಮಾಡಿಕೊಂಡೆ. ಅವರು ಮೀಟಿಂಗಿಗೂ ಹೋಗುತ್ತಿದ್ದರು, ಈ ಕಡೆ ನೈಟ್‌ಕ್ಲಬ್‌ಗೂ ಹೋಗುತ್ತಿದ್ದರು. ಕುಡಿಯೋದು, ಕುಣಿಯೋದೇ ಅವರ ಜೀವನ ಆಗಿತ್ತು. ಹೀಗೆ ನಾನು ಎರಡು ದೋಣಿಯಲ್ಲಿ ಕಾಲು ಇಟ್ಟಿದ್ದೆ. ಆದರೆ ನಂಗೆ ಅಲ್ಲೂ ಖುಷಿ ಸಿಗಲಿಲ್ಲ, ಇಲ್ಲೂ ಖುಷಿ ಸಿಗಲಿಲ್ಲ.

ಒಂದು ಒಳ್ಳೇ ಪಾಠ ಕಲಿತೆ

ಎರಡು ವರ್ಷ ನಂತರ ನನ್ನ ಜೀವನವನ್ನೇ ಬದಲಾಯಿಸೋ ಒಂದು ಘಟನೆ ನಡಿತು. ನಾವು ಒಂದೈದು ಹುಡುಗಿಯರು ಒಂದು ಮನೇಲಿ ಇದ್ವಿ. ಸರ್ಕಿಟ್‌ ಮೇಲ್ವಿಚಾರಕರ ಭೇಟಿ ಇದ್ದಾಗ ಅವರನ್ನೂ ಅವರ ಪತ್ನಿಯನ್ನೂ ನಮ್ಮ ಮನೇಲಿ ಉಳಿಸಿಕೊಂಡ್ವಿ. ಆ ಸಹೋದರಿಯ ಹೆಸರು ಟಮಾರ. ಸಹೋದರನಿಗೆ ಸಭೆ ಕೆಲಸಗಳಿದ್ದಾಗ ಸಹೋದರಿ ನಮ್ಮ ಜೊತೆ ಸಮಯ ಕಳೆಯುತ್ತಿದ್ದರು. ನಮ್ಮನ್ನು ತುಂಬ ನಗಿಸುತ್ತಿದ್ದರು. ಅದು ನಂಗೆ ತುಂಬ ಇಷ್ಟ ಆಯ್ತು. ಅವರು ನಮ್ಮ ಜೊತೆ ಎಷ್ಟು ಬೆರೆತರಂದ್ರೆ ನಮ್ಮಲ್ಲಿ ಒಬ್ಬರಾದ್ರು. ಯಾವ ಸಂಕೋಚನೂ ಇಲ್ಲದೆ ಒಬ್ಬ ಫ್ರೆಂಡ್‌ ಹತ್ರ ಮಾತಾಡೋ ತರ ಅವರ ಹತ್ರ ಮಾತಾಡುತ್ತಾ ಇದ್ವಿ. ಯಾವಾಗಲೂ ಯೆಹೋವನ ಸೇವೆಯಲ್ಲೇ ಬಿಜಿ಼ಯಾಗಿದ್ದ ಆ ಸಹೋದರಿ ನಮ್ಮ ಜೊತೆ ಇಷ್ಟು ಮಜಾ ಮಾಡೋದನ್ನು ನೋಡಿ ನಂಗೆ ತುಂಬ ಖುಷಿ ಆಯ್ತು.

ಸಹೋದರಿ ಟಮಾರ ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದರು. ಅವರಿಗೆ ಸತ್ಯದ ಮೇಲೆ, ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದೇ ಭಾವನೆಯನ್ನು ಬೇರೆಯವರಲ್ಲೂ ಬೆಳೆಸುತ್ತಿದ್ದರು. ಅವರು ಯೆಹೋವನ ಸೇವೆಯನ್ನು ಖುಷಿಯಿಂದ ಮಾಡುತ್ತಿದ್ದರು. ಆದರೆ ನಾನು ಬೇಕೋ ಬೇಡ್ವೋ ಅಂತ ಮಾಡುತ್ತಿದ್ದೆ. ಅವರು ಖುಷಿ-ಖುಷಿಯಾಗಿ ಇರೋದನ್ನು ನೋಡಿದಾಗ ನಾನೂ ಯಾಕೆ ಅವರ ತರ ಆಗಬಾರದು ಅಂತ ಯೋಚಿಸಿದೆ. ನಾವು ‘ಸಂತೋಷದಿಂದ ಯೆಹೋವನ ಸೇವೆ ಮಾಡಬೇಕು, ಆತನಿಗೆ ಜೈಕಾರ ಹಾಕಬೇಕು’ ಅನ್ನೋದೇ ಆತನ ಆಸೆ ಅಂತ ನಂಗೆ ಅರ್ಥ ಆಯ್ತು.—ಕೀರ್ತ. 100:2.

ಮತ್ತೆ ಪ್ರೀತಿ ಬೆಳೆಸಿಕೊಂಡೆ

ನಾನು ಆ ಸಹೋದರಿ ತರ ಖುಷಿ-ಖುಷಿಯಾಗಿ ಇರೋಕೆ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿತ್ತು. ಇದಕ್ಕೆ 3 ವರ್ಷ ಹಿಡಿತು. ಮೊದಲು ಚಿಕ್ಕಚಿಕ್ಕ ಬದಲಾವಣೆ ಮಾಡಿಕೊಂಡೆ. ಅಂದರೆ ತಯಾರಿ ಮಾಡಿಕೊಂಡು ಸೇವೆಗೆ ಹೋಗುತ್ತಿದ್ದೆ. ಆಗಾಗ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡುತ್ತಿದ್ದೆ. ಇದರಿಂದ ನನ್ನ ಭಯ ಕಮ್ಮಿ ಆಯ್ತು. ಜನರ ಹತ್ರ ಮಾತಾಡೋಕೆ ಧೈರ್ಯ ಬಂತು. ಸೇವೆಯಲ್ಲಿ ಬೈಬಲನ್ನು ಉಪಯೋಗಿಸೋಕೆ ಆರಂಭಿಸಿದೆ. ಆಗ ಮನಸ್ಸಿಗೆ ತುಂಬ ತೃಪ್ತಿ ಆಗುತ್ತಿತ್ತು. ಕೊನೆಗೆ, ಪ್ರತಿ ತಿಂಗಳು ಆಕ್ಸಿಲಿಯರಿ ಪಯನೀಯರ್‌ ಸೇವೆ ಸ್ಟಾರ್ಟ್‌ ಮಾಡಿದೆ.

ಸಭೆಯಲ್ಲಿ ಬೇರೆಬೇರೆ ವಯಸ್ಸಿನ ಸಹೋದರ ಸಹೋದರಿಯರನ್ನು ಫ್ರೆಂಡ್‌ ಮಾಡಿಕೊಂಡೆ. ಅವರು ಯೆಹೋವನ ಸೇವೆಯನ್ನು ಸಂತೋಷದಿಂದ ಮನಸಾರೆ ಮಾಡುತ್ತಿದ್ದರು. ಇದನ್ನು ನೋಡಿದಾಗ ಜೀವನದಲ್ಲಿ ನಾನು ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು ಅಂತ ಪರೀಕ್ಷಿಸಿಕೊಂಡೆ. ದಿನಾ ಬೈಬಲ್‌ ಓದುವುದನ್ನು ರೂಢಿ ಮಾಡಿಕೊಂಡೆ. ಸಿಹಿಸುದ್ದಿ ಸಾರಿದ ಮೇಲೆ ಏನೋ ಒಂಥರಾ ಖುಷಿ ಆಗ್ತಿತ್ತು. ಕೊನೆಗೆ ರೆಗ್ಯುಲರ್‌ ಪಯನೀಯರಿಂಗ್‌ ಸ್ಟಾರ್ಟ್‌ ಮಾಡಿದೆ. ಸುಮಾರು ವರ್ಷಗಳ ನಂತ್ರ ನಾನು ಸಭೆ ಜೊತೆ ಸೇರಿ ಖುಷಿ-ಖುಷಿಯಾಗಿ ಸೇವೆ ಮಾಡೋಕೆ ಶುರುಮಾಡಿದೆ.

ಪಾರ್ಟ್‌ನರ್‌ ಸಿಕ್ಕಿದ್ರು!

ಒಂದು ವರ್ಷದ ನಂತರ ಅಲೆಕ್ಸ್‌ ಅನ್ನೋ ಸಹೋದರನನ್ನು ಭೇಟಿ ಮಾಡಿದೆ. ಅವರಿಗೆ ಯೆಹೋವ, ಸೇವೆ ಅಂದ್ರೆ ತುಂಬ ಇಷ್ಟ. ಅವರ ಒಳ್ಳೇ ಗುಣಗಳನ್ನು ನೋಡಿದಾಗ ನಂಗೆ ಅವರು ತುಂಬ ಇಷ್ಟ ಆದ್ರು. ಆಗ ಅವರು ಸಹಾಯಕ ಸೇವಕ ಆಗಿದ್ರು, 6 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿದ್ರು. ಮಲಾವಿ ದೇಶದಲ್ಲಿ ಅಗತ್ಯ ಇದ್ದ ಜಾಗಕ್ಕೆ ಹೋಗಿ ಏಳೆಂಟು ತಿಂಗಳು ಸೇವೆನೂ ಮಾಡಿದ್ದರು. ಅಲ್ಲಿ ಮಿಷನರಿಗಳ ಜೊತೆ ಸೇವೆ ಮಾಡಿದ್ದರಿಂದ ಒಳ್ಳೇ ಅನುಭವನೂ ಇತ್ತು. ಏನೇ ಆದರೂ ಜೀವನದಲ್ಲಿ ಯೆಹೋವನ ಸೇವೆಗೇ ಮೊದಲ ಸ್ಥಾನ ಕೊಡಬೇಕು ಅಂತ ಅವರಿಂದ ಕಲಿತಿದ್ರು.

2003ರಲ್ಲಿ ನಾನೂ ಅಲೆಕ್ಸ್‌ ಮದುವೆ ಆದ್ವಿ. ಅವತ್ತಿಂದ ಇಬ್ರೂ ಪೂರ್ಣ ಸಮಯದ ಸೇವೆ ಮಾಡುತ್ತಾ ಇದ್ದೀವಿ. ಇಷ್ಟು ವರ್ಷಗಳಲ್ಲಿ ನಾವು ಒಳ್ಳೊಳ್ಳೆ ಪಾಠಗಳನ್ನು ಕಲಿತ್ವಿ. ಯೆಹೋವ ದೇವರು ನಮ್ಮನ್ನ ಎಷ್ಟು ಆಶೀರ್ವಾದ ಮಾಡಿದ್ದಾರೆ ಅಂದ್ರೆ ಅದಕ್ಕೆ ಲೆಕ್ಕಾನೇ ಇಲ್ಲ.

ಆಶೀರ್ವಾದಗಳ ಸುರಿಮಳೆ

ಟಿಮೋರ್‌-ಲಿಸ್ಟೆಯ ಗ್ಲೆನೊ ಅನ್ನೋ ಊರಲ್ಲಿ ಸಾರುತ್ತಿರೋದು

2009ರಲ್ಲಿ ನಮಗೆ ಟಿಮೋರ್‌-ಲಿಸ್ಟೆ ಅನ್ನೋ ದೇಶಕ್ಕೆ ಮಿಷನರಿಗಳಾಗಿ ಹೋಗೋ ನೇಮಕ ಸಿಕ್ತು. ಇದು ಇಂಡೊನೇಶಿಯದ ದ್ವೀಪಸಮೂಹದಲ್ಲಿ ಇರೋ ಒಂದು ಚಿಕ್ಕ ದೇಶ. ಅಲ್ಲಿ ಸೇವೆ ಮಾಡೋದರ ಬಗ್ಗೆ ಒಂದು ಕಡೆ ನಮಗೆ ತುಂಬ ಖುಷಿ ಇತ್ತು. ಇನ್ನೊಂದು ಕಡೆ ಭಯನೂ ಆಗುತ್ತಿತ್ತು. 5 ತಿಂಗಳ ನಂತರ ಆ ದೇಶದ ರಾಜಧಾನಿಯಾದ ಡಿಲಿಗೆ ಬಂದು ತಲುಪಿದ್ವಿ.

ಅಲ್ಲಿನ ಸಂಸ್ಕೃತಿ, ಭಾಷೆ, ಊಟ ಇದೆಲ್ಲ ನಮಗೆ ಹೊಸದಾಗಿತ್ತು. ಅದನ್ನ ಕಲಿಬೇಕಿತ್ತು, ಅದಕ್ಕೆಲ್ಲ ಹೊಂದಿಕೊಳ್ಳಬೇಕಾಗಿತ್ತು. ಮುಂಚೆ ತರ ಸುಖ-ಸೌಕರ್ಯಗಳು ಇರಲಿಲ್ಲ. ಹಾಗಾಗಿ ನಮ್ಮ ಜೀವನ ರೀತಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಸೇವೆಯಲ್ಲಿ ಹೆಚ್ಚಾಗಿ ಬಡವರೇ ಸಿಗುತ್ತಿದ್ರು. ಅವರಿಗೆ ಓದು-ಬರಹ ಬರುತ್ತಿರಲಿಲ್ಲ. ಬೇರೆಯವರಿಂದ ಅನ್ಯಾಯ, ಮೋಸಕ್ಕೆ ಒಳಗಾಗಿದ್ರು. ಆ ದೇಶದಲ್ಲಿ ತುಂಬ ವರ್ಷಗಳ ಹಿಂದೆ ನಡೆದ ಯುದ್ಧ ಮತ್ತು ಹಿಂಸೆಯಿಂದಾಗಿ ಜನರು ತುಂಬ ಕಷ್ಟ ಅನುಭವಿಸುತ್ತಿದ್ರು. *

ಅಲ್ಲಿ ಸೇವೆಯಂತೂ ತುಂಬ ಸಕ್ಕತ್ತಾಗಿತ್ತು. ಒಂದು ಅನುಭವ ಹೇಳ್ತೀನಿ. ಒಂದಿನ ಸೇವೆ ಮಾಡುತ್ತಾ ಇದ್ದಾಗ 13 ವರ್ಷದ ಹುಡುಗಿಯೊಬ್ಬಳು ಸಿಕ್ಕಿದಳು. ಅವಳ ಹೆಸರು ಮರಿಯ. * ಅವಳ ಅಮ್ಮ ತೀರಿಹೋಗಿ ಕೆಲವು ವರ್ಷ ಆಗಿತ್ತು. ಅವಳ ಅಪ್ಪ ಯಾವಾಗಲೋ ಒಮ್ಮೆ ನೋಡೋಕೆ ಬರುತ್ತಿದ್ರು. ಅಲ್ಲಿನ ಹೆಚ್ಚಿನ ಮಕ್ಕಳಿಗೆ ಜೀವನದಲ್ಲಿ ಸರಿಯಾದ ದಾರಿ ತೋರಿಸೋಕೆ ಯಾರೂ ಇರುತ್ತಿರಲಿಲ್ಲ. ಮರಿಯದೂ ಇದೇ ಸ್ಥಿತಿ ಆಗಿತ್ತು. ಒಮ್ಮೆ ಅವಳು ತನ್ನ ನೋವನ್ನೆಲ್ಲಾ ಹೇಳಿಕೊಂಡು ತುಂಬ ಅತ್ತಳು. ನನಗಾಗ ಅವಳು ಹೇಳೋದು ಏನೂ ಅರ್ಥ ಆಗಲಿಲ್ಲ. ಯಾಕಂದರೆ ಆ ಭಾಷೆಯನ್ನು ನಾನಿನ್ನೂ ಚೆನ್ನಾಗಿ ಕಲಿತಿರಲಿಲ್ಲ. ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ಅವಳಿಗೆ ಧೈರ್ಯ ತುಂಬೋಕೆ ಸಹಾಯ ಮಾಡಪ್ಪಾ ಅಂತ ಬೇಡಿಕೊಂಡೆ. ಆಮೇಲೆ ಬೈಬಲಿಂದ ಕೆಲವು ಒಳ್ಳೊಳ್ಳೆ ವಚನಗಳನ್ನು ತೆರೆದು ಓದಿದೆ. ಕೆಲವು ವರ್ಷಗಳ ನಂತರ ಸತ್ಯ ಅವಳನ್ನು ತುಂಬ ಬದಲಾಯಿಸಿಬಿಟ್ಟಿತು. ಅವಳು ಖುಷಿ-ಖುಷಿಯಾಗಿ ಇರೋಕೆ ಕಲಿತಳು. ನೀಟಾಗಿ ತಲೆಬಾಚಿಕೊಂಡು, ಬಟ್ಟೆ-ಬರೆ ಹಾಕೋಕೆ ಕಲಿತಳು. ಅವಳ ಜೀವನಾನೇ ಪೂರ್ತಿ ಬದಲಾಗಿತ್ತು. ದೀಕ್ಷಾಸ್ನಾನ ಪಡಕೊಂಡಳು. ಅವಳೇ ತುಂಬ ಜನರಿಗೆ ಬೈಬಲ್‌ ಕಲಿಸೋಕೆ ಶುರುಮಾಡಿದಳು. ಈಗ ಅವಳಿಗೆ ಸಹೋದರ ಸಹೋದರಿಯರ ದೊಡ್ಡ ಕುಟುಂಬಾನೇ ಇದೆ. ಅವರೆಲ್ಲ ಅವಳನ್ನು ಪ್ರೀತಿಸೋದರಿಂದ ಖುಷಿಯಾಗಿ ಇದ್ದಾಳೆ.

ಟಿಮೋರ್‌-ಲಿಸ್ಟೆಯಲ್ಲಿ ಸಾರೋ ಕೆಲಸವನ್ನು ಯೆಹೋವ ದೇವರು ಆಶೀರ್ವದಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ತುಂಬ ಜನರು ಸತ್ಯ ಕಲಿತಿದ್ದಾರೆ. ಅವರಲ್ಲಿ ಹೆಚ್ಚಿನವರು ಪಯನೀಯರರು, ಸಹಾಯಕ ಸೇವಕರು, ಹಿರಿಯರಾಗಿ ಸೇವೆ ಮಾಡ್ತಿದ್ದಾರೆ. ಇನ್ನು ಕೆಲವರು ಭಾಷಾಂತರ ಕಚೇರಿಯಲ್ಲಿ ಬೈಬಲಿನ ಬಗ್ಗೆ ಇರೋ ಪುಸ್ತಕ-ಪತ್ರಿಕೆಗಳನ್ನು ಭಾಷಾಂತರ ಮಾಡೋಕೆ ಸಹಾಯ ಮಾಡ್ತಿದ್ದಾರೆ. ಇಲ್ಲಿನ ಸಹೋದರ ಸಹೋದರಿಯರು ಯೆಹೋವನನ್ನು ತುಂಬ ಪ್ರೀತಿಸುತ್ತಾರೆ. ಅವರ ನಗುಮುಖ ನೋಡುವಾಗ, ಕೂಟಗಳಲ್ಲಿ ಅವರು ಹಾಡೋದನ್ನು ಕೇಳಿಸಿಕೊಳ್ಳುವಾಗ ಖುಷಿ ಆಗುತ್ತೆ.

ಅಲೆಕ್ಸ್‌ ಜೊತೆ ದೂರದೂರದ ಟೆರಿಟೊರಿಗೆ ಸ್ಮರಣೆಯ ಆಮಂತ್ರಣ ಪತ್ರ ಹಂಚೋಕೆ ರೆಡಿ ಆಗಿರೋದು

ಇದಕ್ಕಿಂತ ಒಳ್ಳೇ ಜೀವನ ಬೇರೆ ಇಲ್ಲ

ಆಸ್ಟೇಲಿಯದ ಜೀವನ ರೀತಿಗೂ ಟಿಮೋರ್‌-ಲಿಸ್ಟೆಯ ಜೀವನ ರೀತಿಗೂ ತುಂಬ ವ್ಯತ್ಯಾಸ ಇದ್ರೂ ಅಲ್ಲಿ ಸೇವೆಯನ್ನು ಮಾತ್ರ ತುಂಬ ಎಂಜಾಯ್‌ ಮಾಡುತ್ತಿದ್ವಿ. ನಾವು ಓಡಾಡುತ್ತಿದ್ದ ಟೆಂಪೊಗಳಲ್ಲಿ ಜನ ತುಂಬಿಕೊಳ್ಳುತ್ತಿದ್ರು. ಕಾಲಿಡೋಕೂ ಜಾಗ ಇರುತ್ತಿರಲಿಲ್ಲ. ಜೊತೆಗೆ ಸಂತೆಯಿಂದ ತರುತ್ತಿದ್ದ ಒಣಮೀನು ಮತ್ತು ತರಕಾರಿಗಳ ಮೂಟೆಗಳನ್ನೂ ಇಟ್ಟುಕೊಳ್ಳುತ್ತಿದ್ದರು. ಅವರ ಮನೆಗಳು ತುಂಬ ಚಿಕ್ಕದು. ಮನೆ ಒಳಗಡೆ ಬೆವರು ಸುರಿಯೋಷ್ಟು ಶೆಕೆ ಆಗ್ತಿತ್ತು. ನೆಲ ಗಲೀಜಾಗಿ ಇರುತ್ತಿತ್ತು, ಮನೆ ತುಂಬ ಕೋಳಿಗಳು ಓಡಾಡುತ್ತಿತ್ತು. ಅದರ ಮಧ್ಯದಲ್ಲಿ ಕೂತು ನಾವು ಸ್ಟಡಿ ಮಾಡುತ್ತಿದ್ವಿ. ಇಷ್ಟೆಲ್ಲ ಇದ್ರೂ ಸೇವೆ ಮಾತ್ರ ಸಕ್ಕತ್ತಾಗಿತ್ತು.

1. ಸಾರೋಕೆ ಹೋಗ್ತಾ ಇರುವಾಗ

ಮಮ್ಮಿ-ಡ್ಯಾಡಿಗೆ ತುಂಬ ಥ್ಯಾಂಕ್ಸ್‌ ಹೇಳ್ತಿನಿ. ಯಾಕಂದರೆ ನಾನು ಚಿಕ್ಕವಳಿದ್ದಾಗ ಯೆಹೋವನಿಗೆ ಏನಿಷ್ಟ ಆಗುತ್ತೆ, ಏನಿಷ್ಟ ಆಗಲ್ಲ ಅಂತ ಚೆನ್ನಾಗಿ ಕಲಿಸಿಕೊಟ್ಟರು. ನಾನು ಯೆಹೋವನಿಂದ ಸ್ವಲ್ಪ ದೂರ ಆಗಿದ್ದ ಸಮಯದಲ್ಲೂ ಅವರು ನನ್ನ ಕೈಬಿಡಲಿಲ್ಲ. ಜ್ಞಾನೋಕ್ತಿ 22:6ರಲ್ಲಿ ಹೇಳಿದ ತರ ಅವರು ನಂಗೆ ಒಳ್ಳೇ ಟ್ರೈನಿಂಗ್‌ ಕೊಟ್ಟರು. ಈಗ ನನ್ನನ್ನೂ ಅಲೆಕ್ಸ್‌ನೂ ನೋಡಿದಾಗ ಮಮ್ಮಿ-ಡ್ಯಾಡಿಗೆ ಹೆಮ್ಮೆ ಆಗುತ್ತೆ. ನಾವು ಯೆಹೋವನ ಸೇವೆ ಮಾಡೋದನ್ನು ನೋಡಿದಾಗ ಅವರಿಗೆ ಖುಷಿ ಆಗ್ತಿದೆ. ನಾವು 2016ರಿಂದ ಆಸ್ಟ್ರಲೇಷ್ಯಾ ಬ್ರಾಂಚ್‌ ಟೆರಿಟೊರಿಯಲ್ಲಿ ಸರ್ಕಿಟ್‌ ಕೆಲಸ ಮಾಡ್ತಾ ಇದ್ದೀವಿ.

2. ಟಿಮೊರೀಸ್‌ ಮಕ್ಕಳಿಗೆ ಕೇಲಬ್‌-ಸೋಫಿಯ ವಿಡಿಯೋ ತೋರಿಸ್ತಾ ಇರೋದು

ಚಿಕ್ಕವಳಿದ್ದಾಗ ಸೇವೆಗೆ ಹೋಗೋಕೆ ನಂಗೆ ಇಷ್ಟಾನೇ ಆಗುತ್ತಿರಲಿಲ್ಲ ಅಂತ ನೆನಸಿಕೊಂಡರೆ ಈಗ ನಂಬೋಕೆ ಆಗುತ್ತಿಲ್ಲ. ಯಾಕಂದರೆ ಈಗ ನಾನು ಅಷ್ಟು ಖುಷಿಯಿಂದ ಸೇವೆ ಮಾಡ್ತಾ ಇದ್ದೀನಿ! ಯೆಹೋವನ ಸೇವೆಯನ್ನು ಮನಸಾರೆ ಮಾಡಿದ್ರೆ ಮಾತ್ರ ಸಂತೋಷ ಸಿಗೋದು ಅಂತ ಅರ್ಥ ಮಾಡಿಕೊಂಡಿದ್ದೀನಿ. ಅಲೆಕ್ಸ್‌ ಜೊತೆ ಸೇವೆ ಮಾಡಿರೋ ಈ 18 ವರ್ಷಗಳು ಜೀವನದಲ್ಲಿ ನಂಗೆ ತುಂಬ ಖುಷಿ ಕೊಟ್ಟಿರೋ ದಿನಗಳು. ದಾವೀದ ಯೆಹೋವನಿಗೆ “ನಿನ್ನಲ್ಲಿ ಆಶ್ರಯ ಪಡಿಯೋರೆಲ್ಲ ಖುಷಿಪಡ್ತಾರೆ, ಅವರು ಯಾವಾಗ್ಲೂ ಆನಂದದಿಂದ ಜೈಕಾರ ಹಾಕ್ತಾರೆ. . . . ನಿನ್ನ ಹೆಸ್ರನ್ನ ಪ್ರೀತಿಸೋರು ನಿನ್ನಿಂದ ಸಂತೋಷಪಡ್ತಾರೆ” ಅಂತ ಹೇಳಿದ. (ಕೀರ್ತ. 5:11) ಈ ಮಾತುಗಳು ನಿಜವಾಗಲೂ ಸತ್ಯ ಅಂತ ನಾನು ಜೀವನದಲ್ಲಿ ಸವಿದು ನೋಡಿದ್ದೀನಿ.

ದೀನತೆ ಇರೋ ಜನರಿಗೆ ಸ್ಟಡಿ ಮಾಡೋಕೆ ತುಂಬ ಖುಷಿ ಆಗುತ್ತೆ!

^ ಪ್ಯಾರ. 21 ಟಿಮೋರ್‌-ಲಿಸ್ಟೆಯಲ್ಲಿ ಸ್ವಾತಂತ್ರ್ಯಕ್ಕೋಸ್ಕರ 1975ರಿಂದ 20 ವರ್ಷ ಯುದ್ಧ ನಡಿತು.

^ ಪ್ಯಾರ. 22 ಹೆಸರನ್ನು ಬದಲಾಯಿಸಲಾಗಿದೆ.