ನಮ್ಮ ಸಂಗ್ರಹಾಲಯ
“ಆ ಕೆಲಸ ವಹಿಸಲಾಗಿರುವ ಜನರು”
ಇಸವಿ 1919, ಸೆಪ್ಟೆಂಬರ್ 1 ರ ಸೋಮವಾರ. ಅಮೆರಿಕದಲ್ಲಿರುವ ಒಹಾಯೋದ ಸೀಡರ್ ಪಾಯಿಂಟ್ನಲ್ಲಿ ಅಧಿವೇಶನದ ಮೊದಲನೇ ದಿನ. ಹಲವಾರು ದಿನಗಳಿಂದ ಚಳಿಗಾಳಿ ಕೂಡಿದ ಮಳೆ ಸುರಿಯುತ್ತಾ ಇತ್ತು. ಆದರೆ ಆ ಸೋಮವಾರ ಬೆಳಗ್ಗೆ ಸೂರ್ಯನ ಬೆಚ್ಚಗಿನ ಕಿರಣಗಳು ವ್ಯಾಪಿಸಿದವು. 2,500 ಸೀಟುಗಳ ಸಭಾಂಗಣದಲ್ಲಿ ಬೆಳಗ್ಗಿನ ಸೆಷನ್ಗೆ 1,000ಕ್ಕಿಂತ ಕಡಿಮೆ ಜನರು ಹಾಜರಿದ್ದರು. ಆದರೆ ಸಂಜೆಯೊಳಗೆ ದೋಣಿ, ಕಾರು, ರೈಲುಗಾಡಿಗಳಲ್ಲಿ 2,000ಕ್ಕಿಂತಲೂ ಹೆಚ್ಚು ಜನರು ಆಗಮಿಸಿದರು. ಮಂಗಳವಾರ ಸಭಾಂಗಣ ಎಷ್ಟು ಕಿಕ್ಕಿರಿದಿತ್ತೆಂದರೆ ಉಳಿದ ಕಾರ್ಯಕ್ರಮವನ್ನು ಹೊರಗೆ ಭವ್ಯ ಮರಗಳ ನೆರಳಲ್ಲಿ ನಡೆಸಬೇಕಾಯಿತು.
ಸೂರ್ಯನ ಕಿರಣಗಳು ಮರಗಳ ದಟ್ಟ ಎಲೆಗಳನ್ನು ತೂರಿಬಂದು ಪುರುಷರ ಬಟ್ಟೆಗಳ ಮೇಲೆ ಚಿಕ್ಕಚಿಕ್ಕ ಚಿತ್ರಾಕೃತಿಗಳನ್ನು ಮೂಡಿಸಿದವು. ಎರ್ರಿ ಸರೋವರದಿಂದ ಬೀಸಿದ ತಂಗಾಳಿ ಮಹಿಳೆಯರ ಟೋಪಿಗಳ ಅಂದದ ಗರಿಗಳನ್ನು ಕೆದರಿದವು. “ಲೋಕದ ಗೌಜುಗದ್ದಲದಿಂದ ದೂರವಾಗಿದ್ದ ಈ ಮನೋಹರ ಪರಿಸರ ನಿಜಕ್ಕೂ ಪರದೈಸದಂತಿತ್ತು” ಎಂದು ಸಹೋದರನೊಬ್ಬ ನೆನಪಿಸಿಕೊಂಡನು.
ಆದರೆ ಹಾಜರಿದ್ದವರ ಮುಖಗಳಲ್ಲಿದ್ದ ಸಂತಸದ ಎದುರು ಸುತ್ತಲಿನ ಪ್ರಕೃತಿ ಸೌಂದರ್ಯ ಕಳೆಗುಂದಿದಂತಿತ್ತು. “ಅವರೆಲ್ಲರೂ ತುಂಬ ಭಕ್ತಿ-ಶ್ರದ್ಧೆಯ ಜನರಾಗಿದ್ದರೂ ತುಂಬ ಉತ್ಸಾಹ, ಗೆಲವಿನಿಂದ ಇದ್ದರು” ಎಂದಿತು ಒಂದು ಸ್ಥಳೀಯ ವಾರ್ತಾಪತ್ರಿಕೆ. ಬೈಬಲ್ ವಿದ್ಯಾರ್ಥಿಗಳಿಗಂತೂ ಹಲವಾರು ವರ್ಷಗಳ ತೀಕ್ಷ್ಣ ಪರೀಕ್ಷೆಗಳ ನಂತರ ಈ ಒಡನಾಟ ವಿಶೇಷವಾಗಿ ಆನಂದಕರವಾಗಿತ್ತು. ಯುದ್ಧಕಾಲದ ವಿರೋಧ, ಸಭೆಗಳಲ್ಲಿನ ತೀವ್ರ ಭಿನ್ನಾಭಿಪ್ರಾಯ, ಬ್ರೂಕ್ಲಿನ್ ಬೆತೆಲಿನ ಮುಚ್ಚುವಿಕೆ, ದೇವರ ರಾಜ್ಯಕ್ಕಾಗಿ ಅನೇಕರ ಸೆರೆವಾಸ, ಮಾತ್ರವಲ್ಲ ಮುಂದಾಳತ್ವ ವಹಿಸುತ್ತಿದ್ದ ಎಂಟು ಮಂದಿ ಸಹೋದರರಿಗೆ 20 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಲಾದದ್ದು ಇವೆಲ್ಲವನ್ನೂ ಅವರು ನೋಡಿದ್ದರು ಇಲ್ಲವೆ ಸ್ವತಃ ಅನುಭವಿಸಿದ್ದರು. *
ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವರು ಆ ಕಷ್ಟದ ವರ್ಷಗಳಲ್ಲಿ ನಿರಾಶೆ, ಭೀತಿಯಿಂದ ತಬ್ಬಿಬ್ಬಾಗಿ ಸಾರುವುದನ್ನು ನಿಲ್ಲಿಸಿದ್ದರು. ಆದರೆ ಹೆಚ್ಚಿನವರು ಅಧಿಕಾರಿಗಳ ವಿರೋಧದ ಮಧ್ಯೆಯೂ ಸಾರುವುದನ್ನು ಮುಂದುವರಿಸಲು ತಮ್ಮಿಂದಾದ ಎಲ್ಲವನ್ನು ಮಾಡಿದರು. ಇದಕ್ಕೊಂದು ಉದಾಹರಣೆ ಇಲ್ಲಿದೆ. ಒಬ್ಬ ತನಿಖೆಗಾರನು ಅನೇಕ ಬೈಬಲ್ ವಿದ್ಯಾರ್ಥಿಗಳ ವಿಚಾರಣೆ ಮಾಡಿದ್ದನು. ಸಾರಬಾರದೆಂದು ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಕೊಡಲಾಗಿದ್ದರೂ ಅವರು ಪಟ್ಟುಹಿಡಿದು “ಕೊನೇ ತನಕವೂ ದೇವರ ವಾಕ್ಯವನ್ನು ಸಾರುತ್ತಾ ಇರುವೆವು” ಎಂದು ಹೇಳಿದ್ದನ್ನು ಅವನು ವರದಿಸಿದನು.
ಈ ಪರೀಕ್ಷೆಯ ಅವಧಿಯ ಉದ್ದಕ್ಕೂ ನಂಬಿಗಸ್ತ ಬೈಬಲ್ ವಿದ್ಯಾರ್ಥಿಗಳು “ಕರ್ತನ ಮಾರ್ಗದರ್ಶನಕ್ಕಾಗಿ ಎಚ್ಚರದಿಂದ ಕಾಯುತ್ತಿದ್ದರು, . . . ತಂದೆಯ ನಿರ್ದೇಶನಕ್ಕಾಗಿ ಸದಾ ಪ್ರಾರ್ಥಿಸುತ್ತಿದ್ದರು.” ಈಗ ಸೀಡರ್ ಪಾಯಿಂಟ್ನ ಹರ್ಷಕರ ಅಧಿವೇಶನದಲ್ಲಿ ಅವರು ಪುನಃ ಎಲ್ಲರೂ ಒಟ್ಟುಗೂಡಿದ್ದರು. “ಇನ್ನೊಮ್ಮೆ ಸಾರುವ ಕಾರ್ಯದಲ್ಲಿ ಕ್ರಿಯಾಶೀಲವಾಗಿ, ಸಂಘಟಿತ ರೀತಿಯಲ್ಲಿ ತೊಡಗುವುದು ಹೇಗೆ” ಎಂಬ ಯೋಚನೆ ಒಬ್ಬ ಸಹೋದರಿಗಿತ್ತು. ಇದೇ ವಿಚಾರ ಅನೇಕರ ಮನಸ್ಸಲ್ಲೂ
ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಾರುವುದನ್ನು ಶುರುಮಾಡುವುದೇ ಅವರ ಬಯಕೆಯಾಗಿತ್ತು.ಹೊಚ್ಚಹೊಸ ಸಾಧನ!
ಅಧಿವೇಶನದಲ್ಲಿ ಒಂದು ವಿಷಯವು ಎಲ್ಲರ ಕುತೂಹಲವನ್ನು ಕೆರಳಿಸಿತು. ಅದೇನೆಂದರೆ ಕಾರ್ಯಕ್ರಮ ಪಟ್ಟಿಯಲ್ಲಿ, ಸ್ವಾಗತ ಕಾರ್ಡುಗಳಲ್ಲಿ, ಸಭಾಂಗಣದ ಸುತ್ತಲಿದ್ದ ಫಲಕಗಳಲ್ಲಿ “GA” (ಜಿ.ಎ.) ಎಂದು ದೊಡ್ಡದಾಗಿ ಮುದ್ರಿಸಲಾಗಿತ್ತು. ಎಲ್ಲರಿಗೂ ಇದೇನಿರಬಹುದು ಎಂಬ ಪ್ರಶ್ನೆ. ಶುಕ್ರವಾರದಂದು ಸಹೋದರ ಜೋಸೆಫ್ ಎಫ್. ರದರ್ಫರ್ಡ್ ಕೊಟ್ಟ ಭಾಷಣದ ಶೀರ್ಷಿಕೆ “ಸಹಕಾರ್ಯಕರ್ತರಿಗೆ ಭಾಷಣ” ಎಂದಾಗಿತ್ತು. ಅದರಲ್ಲಿ ಅವರು 6,000 ಸಭಿಕರಿಗೆ “GA” ಅಂದರೆ ‘ದ ಗೋಲ್ಡನ್ ಏಜ್’ (ಅಂದರೆ ಸುವರ್ಣಯುಗ) ಎಂಬ ರಹಸ್ಯವನ್ನು ಬಯಲುಮಾಡಿದರು. ಇದು ಸೇವೆಗಾಗಿ ಹೊರತಂದ ಒಂದು ಹೊಸ ಪತ್ರಿಕೆಯಾಗಿತ್ತು. *
ಅಭಿಷಿಕ್ತ ಜೊತೆ ಕ್ರೈಸ್ತರ ಬಗ್ಗೆ ಮಾತಾಡುತ್ತಾ ಸಹೋದರ ರದರ್ಫರ್ಡ್ ಹೇಳಿದ್ದು: “ನಂಬಿಕೆಯ ಕಣ್ಣುಗಳಿಂದ ಅವರು ಸಂಕಟದ ಸಮಯದಾಚೆ ಮೆಸ್ಸೀಯನ ಆಳ್ವಿಕೆಯ ಮಹಿಮಾಭರಿತ ಸುವರ್ಣಯುಗವನ್ನು ನೋಡುತ್ತಾರೆ. ಸುವರ್ಣಯುಗ ಬರಲಿದೆ ಎಂದು ಲೋಕಕ್ಕೆ ತಿಳಿಯಪಡಿಸುವುದೇ ತಮ್ಮ ಮುಖ್ಯ ಕರ್ತವ್ಯ, ಅದೊಂದು ಸುಯೋಗ ಕೂಡ ಎಂದವರು ನೆನಸುತ್ತಾರೆ. ಇದು ದೇವರು ಅವರಿಗೆ ಕೊಟ್ಟ ಕೆಲಸದ ಒಂದು ಅಂಶವಾಗಿದೆ.”
“ಸತ್ಯಾಂಶ, ನಿರೀಕ್ಷೆ, ಭರವಸೆ ಕೊಡುವ ಪತ್ರಿಕೆ”ಯಾದ ದ ಗೋಲ್ಡನ್ ಏಜ್ ಸತ್ಯವನ್ನು ಹಬ್ಬಿಸಲಿಕ್ಕಾಗಿ ಬಳಸುವ ಹೊಚ್ಚಹೊಸ ವಿಧಾನವಾಗಲಿದೆ ಎಂದು ಭಾಷಣದಲ್ಲಿ ತಿಳಿಸಲಾಯಿತು. ಅದು ಯಾವುದೆಂದರೆ ಮನೆ-ಮನೆ ಸೇವೆಯಲ್ಲಿ ಆ ಪತ್ರಿಕೆಗೆ ಚಂದಾದಾರರನ್ನು ಮಾಡುವ ಅಭಿಯಾನ. ಆ ಕೆಲಸವನ್ನು ಮಾಡಲು ಎಷ್ಟು ಮಂದಿಗೆ ಮನಸ್ಸಿದೆಯೆಂದು ಕೇಳಿದಾಗ ಸಭಿಕರೆಲ್ಲರೂ ಒಟ್ಟಿಗೆ ಕೂಡಲೇ ಎದ್ದುನಿಂತರು. ಅನಂತರ “ಯೇಸುವಿನ ಹೆಜ್ಜೆಜಾಡನ್ನು ಅನುಸರಿಸುವವರು ಮಾತ್ರ ತೋರಿಸಬಲ್ಲ ಉಲ್ಲಾಸ ಉತ್ಸಾಹದಿಂದ” ಅವರು “ಓ ಕರ್ತನೇ, ನಿನ್ನ ಸತ್ಯ, ಬೆಳಕನ್ನು ಕಳುಹಿಸು” ಎಂದು ಹಾಡಿದರು. “ಅವರ ಸ್ವರ ಎಷ್ಟು ಗಟ್ಟಿಯಾಗಿತ್ತೆಂದರೆ ಆ ಶಬ್ದಕ್ಕೆ ಸುತ್ತಲಿದ್ದ ಮರಗಳು ಅಲುಗಾಡಿದಂತೆ ಕಂಡವು. ಇದನ್ನು ನಾನೆಂದೂ ಮರೆಯಲಾರೆ” ಎಂದರು ಜೆ.ಎಮ್. ನೊರಿಸ್.
ಕಾರ್ಯಕ್ರಮ ಮುಗಿದ ಬಳಿಕ ಸಭಿಕರು ಪತ್ರಿಕೆಯ ಮೊತ್ತಮೊದಲ ಚಂದಾದಾರರಾಗುವ ತವಕದಿಂದ ಗಂಟೆಗಟ್ಟಲೆ ಸಾಲಲ್ಲಿ ನಿಂತರು. ಅನೇಕರಿಗೆ ಸಹೋದರಿ ಮೇಬಲ್ ಫಿಲ್ಬ್ರಿಕ್ರಂತೆ ಅನಿಸಿತು. ಅವರಂದದ್ದು: “ನಾವು ಪುನಃ ಈ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ತುಂಬ ರೋಮಾಂಚಕವಾಗಿತ್ತು!”
“ಆ ಕೆಲಸ ವಹಿಸಲಾಗಿರುವ ಜನರು”
ಸುಮಾರು 7,000 ಬೈಬಲ್ ವಿದ್ಯಾರ್ಥಿಗಳು ಆ ಸೇವೆಗಾಗಿ ಸಿದ್ಧರಾದರು. ಸಂಘಟನೆಯ ಕಾರ್ಯವಿಧಾನ (ಇಂಗ್ಲಿಷ್) ಎಂಬ ಕರಪತ್ರ ಮತ್ತು ಆ ಕೆಲಸ ವಹಿಸಲಾಗಿರುವ ಜನರು (ಇಂಗ್ಲಿಷ್) ಎಂಬ ಕಿರುಪುಸ್ತಿಕೆಯಲ್ಲಿ ಆ ಸೇವೆಯ ಕುರಿತ ವಿವರ ಹೀಗಿತ್ತು: ಮುಖ್ಯ ಕಾರ್ಯಾಲಯದಲ್ಲಿ ಒಂದು ಹೊಸ ಸೇವಾ ಇಲಾಖೆಯು ಈ ಕೆಲಸವನ್ನು ನಿರ್ದೇಶಿಸುವುದು. ಪ್ರತಿ ಸಭೆಯಲ್ಲಿ ಒಂದು ಸೇವಾ ಸಮಿತಿಯನ್ನು ರಚಿಸಬೇಕು ಮತ್ತು ಸೂಚನೆಗಳನ್ನು ಕೊಡಲು ಒಬ್ಬ ನಿರ್ದೇಶಕನನ್ನು ನೇಮಿಸಬೇಕು. ಸೇವಾಕ್ಷೇತ್ರದಲ್ಲಿ 150 ರಿಂದ 200 ಮನೆಗಳನ್ನು ಒಂದೊಂದು ವಿಭಾಗವಾಗಿ ವಿಂಗಡಿಸಬೇಕು. ಪ್ರತಿ ಗುರುವಾರ ಸಂಜೆ ಸಹೋದರರು ತಮ್ಮ ಅನುಭವಗಳನ್ನು ತಿಳಿಸಲು, ಸೇವಾ ವರದಿಗಳನ್ನು ಕೊಡಲು ಒಂದು ಸೇವಾ ಕೂಟವನ್ನು ನಡೆಸಲಾಗುವುದು.
“ನಮ್ಮ ಮನೆಗಳಿಗೆ ಹಿಂತಿರುಗಿದ ಮೇಲೆ ಚಂದಾ ಅಭಿಯಾನದಲ್ಲಿ ಕಾರ್ಯಮಗ್ನರಾದೆವು” ಎಂದರು ಹರ್ಮನ್ ಫಿಲ್ಬ್ರಿಕ್. ಎಲ್ಲೆಲ್ಲೂ ಸಂದೇಶಕ್ಕೆ ಕಿವಿಗೊಡುವ ಜನರು ಅವರಿಗೆ ಸಿಕ್ಕಿದರು. “ಯುದ್ಧ ಮತ್ತು ಕಷ್ಟದುಃಖದ ಸಮಯಗಳ ನಂತರ ಈ ಸುವರ್ಣಯುಗದ ಸಂದೇಶವು ತಾನೇ ಎಲ್ಲರನ್ನು ಆಕರ್ಷಿಸಿತು” ಎಂದು ಬ್ಯೂಲ ಕೊವಿ ಗಮನಿಸಿದರು. ಆರ್ಥರ್ ಕ್ಲಾಸ್ ಎಂಬವರು ಬರೆದದ್ದು: “ಹೆಚ್ಚಿನ ಸಂಖ್ಯೆಯಲ್ಲಿ ಚಂದಾದಾರರು ಸಿಕ್ಕಿದಾಗ ಇಡೀ ಸಭೆಗೆ ಆಶ್ಚರ್ಯವೊ ಆಶ್ಚರ್ಯ.” ದ ಗೋಲ್ಡನ ಏಜ್ನ ಮೊದಲನೇ ಸಂಚಿಕೆ ಪ್ರಕಟವಾದ ಎರಡು ತಿಂಗಳೊಳಗೇ ಸುಮಾರು 5 ಲಕ್ಷ ಮಾದರಿ ಪ್ರತಿಗಳನ್ನು ಜನರಿಗೆ ನೀಡಲಾಯಿತು. 50,000 ಮಂದಿ ಚಂದಾದಾರರಾದರು.
ಜುಲೈ 1, 1920 ರ ಕಾವಲಿನಬುರುಜು ಸಂಚಿಕೆಯ ಒಂದು ಲೇಖನ “ರಾಜ್ಯ ಸುವಾರ್ತೆ” ಎಂದಾಗಿತ್ತು. “ಸಂಘಟನೆಯು ಭೂಮಿಯಾದ್ಯಂತ ದೇವರ ರಾಜ್ಯವನ್ನು ಸಾರಲು ಸಹೋದರ ಸಹೋದರಿಯರನ್ನು ಮೊತ್ತಮೊದಲಾಗಿ ಉತ್ತೇಜಿಸಿದ ಲೇಖನ ಇದು” ಎಂದು ಎ. ಎಚ್. ಮ್ಯಾಕ್ಮಿಲನ್ ನಂತರ ಹೇಳಿದರು. ಆ ಲೇಖನವು “ಸ್ವರ್ಗದ ರಾಜ್ಯವು ಸಮೀಪಿಸಿದೆ ಎಂದು ಲೋಕಕ್ಕೆ ಸಾಕ್ಷಿಕೊಡುವಂತೆ” ಎಲ್ಲ ಅಭಿಷಿಕ್ತ ಕ್ರೈಸ್ತರನ್ನು ಹುರಿದುಂಬಿಸಿತು. ಇಂದು “ಆ ಕೆಲಸ ವಹಿಸಲಾಗಿರುವ ಜನರು” ಅಂದರೆ ಕ್ರಿಸ್ತನ ಸಹೋದರರು ಇತರ ಲಕ್ಷಾಂತರ ಜನರೊಂದಿಗೆ ಕೂಡಿ ಹುರುಪಿನಿಂದ ಸುವಾರ್ತೆ ಸಾರುತ್ತಿದ್ದಾರೆ. ಅದೇ ಸಮಯ ಮೆಸ್ಸೀಯನ ಸುವರ್ಣಯುಗಕ್ಕಾಗಿ ಎದುರುನೋಡುತ್ತಿದ್ದಾರೆ.
^ ಪ್ಯಾರ. 5 ಜೆಹೋವಸ್ ವಿಟ್ನೆಸೆಸ್—ಪ್ರೊಕ್ಲೆಮರ್ಸ್ ಆಫ್ ಗಾಡ್ಸ್ ಕಿಂಗ್ಡಮ್ ಪುಸ್ತಕದ ಅಧ್ಯಾಯ 6, “ಅ ಟೈಮ್ ಆಫ್ ಟೆಸ್ಟಿಂಗ್ (1914-1918)” ನೋಡಿ.
^ ಪ್ಯಾರ. 9 ದ ಗೋಲ್ಡನ್ ಏಜ್ ಪತ್ರಿಕೆಗೆ 1937 ರಲ್ಲಿ ಕಾನ್ಸಲೇಷನ್ ಎಂಬ ಹೆಸರು, 1946 ರಲ್ಲಿ ಅವೇಕ್! (ಎಚ್ಚರ!) ಎಂಬ ಹೆಸರು ಬಂತು.