1| ಪ್ರಾರ್ಥನೆ—“ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ”
ಬೈಬಲ್ ಹೀಗೆ ಹೇಳುತ್ತೆ: “ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ. ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”—1 ಪೇತ್ರ 5:7.
ಇದರ ಅರ್ಥ ಏನು
‘ನಿಮ್ಮ ಚಿಂತೆಯನ್ನೆಲ್ಲಾ ನನ್ನ ಮೇಲೆ ಹಾಕಿ’ ಅಂತ ಯೆಹೋವನೇ ಹೇಳ್ತಿದ್ದಾನೆ. (ಕೀರ್ತನೆ 55:22) ನಮಗಿರೋ ಸಮಸ್ಯೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಆತನ ಹತ್ರ ಮನಸ್ಸುಬಿಚ್ಚಿ ಹೇಳಬೇಕು. ನಮಗೆ ಏನು ಅನಿಸ್ತಿದೆ, ನಮ್ಮ ಮನಸ್ಸಲ್ಲಿ ಏನಾಗ್ತಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತು. ನಮ್ಮ ಮೇಲೆ ಆತನಿಗೆ ತುಂಬ ಕಾಳಜಿ ಇದೆ. ನಮಗೆ ಮನಶ್ಶಾಂತಿ ಸಿಗಬೇಕಂದ್ರೆ ಪ್ರಾರ್ಥನೆ ಮಾಡಬೇಕು.—ಫಿಲಿಪ್ಪಿ 4:6, 7.
ಇದು ಹೇಗೆ ಸಹಾಯ ಮಾಡುತ್ತೆ
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಕಷ್ಟಪಡ್ತಿರುವಾಗ ‘ನಾವು ಒಂಟಿ, ನಮಗೆ ಯಾರೂ ಇಲ್ಲ’ ಅಂತ ಅನಿಸಬಹುದು. ಯಾಕಂದ್ರೆ ನಮಗೆ ಏನಾಗ್ತಿದೆ ಅಂತ ನಮ್ಮಿಂದ ವಿವರಿಸೋಕೂ ಆಗಲ್ಲ ಮತ್ತು ಬೇರೆಯವ್ರಿಗೆ ನಾವು ಪಡ್ತಿರೋ ಕಷ್ಟ ಪೂರ್ತಿಯಾಗಿ ಅರ್ಥನೂ ಆಗಲ್ಲ. (ಜ್ಞಾನೋಕ್ತಿ 14:10) ಆದ್ರೆ, ನಮಗೆ ಹೇಗನಿಸ್ತಿದೆ, ಏನಾಗ್ತಿದೆ ಅಂತ ನಾವು ಪ್ರಾರ್ಥನೆಯಲ್ಲಿ ಮನಸ್ಸುಬಿಚ್ಚಿ ದೇವರ ಹತ್ರ ಹೇಳ್ಕೊಂಡ್ರೆ ಅದನ್ನ ಆತನು ಪ್ರೀತಿಯಿಂದ ಕೇಳಿಸ್ಕೊಳ್ತಾನೆ. ನಮ್ಮ ಕಷ್ಟವನ್ನ, ದುಃಖವನ್ನ ಆತನು ಚೆನ್ನಾಗಿ ಅರ್ಥಮಾಡ್ಕೊಳ್ತಾನೆ. ಹಾಗಾಗಿ ನಮ್ಮ ಚಿಂತೆಯನ್ನೆಲ್ಲಾ ನಾವು ಪ್ರಾರ್ಥನೆಯಲ್ಲಿ ಹೇಳಬೇಕು ಅಂತ ಆತನು ಇಷ್ಟಪಡ್ತಾನೆ.—2 ಪೂರ್ವಕಾಲವೃತ್ತಾಂತ 6:29, 30.
ನಾವು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದಾಗ ಆತನು ನಮ್ಮ ಬಗ್ಗೆ ಚಿಂತೆ ಮಾಡ್ತಾನೆ ಅನ್ನೋ ನಂಬಿಕೆ ಇನ್ನೂ ಜಾಸ್ತಿಯಾಗುತ್ತೆ. ಒಬ್ಬ ದೇವರ ಆರಾಧಕ ತನ್ನ ಪ್ರಾರ್ಥನೆಯಲ್ಲಿ, “ನನ್ನ ಸಂಕಟವನ್ನ ನೀನು ನೋಡಿದ್ದೀಯ, ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ” ಅಂತ ಹೇಳಿದ. (ಕೀರ್ತನೆ 31:7) ನಮ್ಮ ಮನಸ್ಸಲ್ಲಿ ಎಷ್ಟೇ ಸಂಕಟ ಇರಲಿ ಅದಕ್ಕೆ ಯೆಹೋವ ದೇವರು ಗಮನ ಕೊಡ್ತಿದ್ದಾನೆ ಅನ್ನೋದನ್ನ ನಾವು ನೆನಪಲ್ಲಿ ಇಟ್ಕೊಂಡ್ರೆ ನಮ್ಮ ಸಮಸ್ಯೆನ ನಿಭಾಯಿಸೋಕೆ ಆಗುತ್ತೆ. ಆತನಿಗಿಂತ ಚೆನ್ನಾಗಿ ನಮ್ಮನ್ನ ಅರ್ಥಮಾಡ್ಕೊಳ್ಳೋಕೆ ಬೇರೆ ಯಾರಿಂದನೂ ಆಗಲ್ಲ. ಅಷ್ಟೇ ಅಲ್ಲ, ನಮ್ಮ ಸಮಸ್ಯೆಯನ್ನ ನಿಭಾಯಿಸೋಕೆ ಬೇಕಾದ ಧೈರ್ಯ ಮತ್ತು ಪ್ರೋತ್ಸಾಹವನ್ನ ಆತನು ಬೈಬಲ್‌ನಿಂದ ಕೊಡ್ತಾನೆ.