ಲೋಕದಲ್ಲಿರೋ ಮಾನಸಿಕ ಆರೋಗ್ಯದ ಬಿಕ್ಕಟ್ಟು
“ಕಾರಣನೇ ಇಲ್ಲದೆ ನನಗೆ ಯಾವಾಗ್ಲೂ ಆತಂಕ ಆಗುತ್ತೆ.”
“ನಾನು ಯಾವಾಗೆಲ್ಲ ಖುಷಿಯಾಗಿ ಇರ್ತಿನೋ, ಆಗೆಲ್ಲ ಇದ್ದಕ್ಕಿದ್ದ ಹಾಗೆ ಚಿಂತೆ ಕಾಡೋಕೆ ಶುರು ಆಗುತ್ತೆ. ಹೀಗಾದಾಗ, ಖುಷಿಯಾಗಿದ್ರೂ ಸ್ವಲ್ಪ ಹೊತ್ತಲ್ಲೇ ಬೇಜಾರಾಗಿಬಿಡುತ್ತೆ.”
“ಆ ದಿನದಲ್ಲಿ ನಡೆದ ವಿಷ್ಯದ ಬಗ್ಗೆ ಮಾತ್ರ ಯೋಚಿಸಬೇಕು ಅಂದ್ಕೊಳ್ತೀನಿ. ಆದ್ರೆ ಇದ್ದಕ್ಕಿದ್ದ ಹಾಗೆ ಆತಂಕ ಶುರುವಾಗಿ ಬೇರೆ ದಿನಗಳಲ್ಲಿ ನಡೆದ ವಿಷ್ಯದ ಬಗ್ಗೆನೂ ಯೋಚನೆ ಮಾಡ್ತಾ ಚಿಂತೆಯಲ್ಲಿ ಮುಳುಗಿಹೋಗ್ತೀನಿ.”
ಮಾನಸಿಕ ಆರೋಗ್ಯದ ಬಗ್ಗೆ ಇರೋ ಈ ಹೇಳಿಕೆಗಳನ್ನ ಓದಿದಾಗ, ‘ನನಗೂ ಹೀಗೇ ಅನಿಸುತ್ತೆ’ ಅಂತ ನಿಮ್ಮ ಮನಸ್ಸಿಗೂ ಬಂತಾ? ನಿಮ್ಮ ಸ್ನೇಹಿತರಲ್ಲಿ ಯಾರಿಗಾದ್ರೂ ಈ ಸಮಸ್ಯೆ ಇದ್ಯಾ?
ಹೀಗೆ ಅನಿಸೋದು ನಿಮಗೆ ಮಾತ್ರ ಅಲ್ಲ. ಲೋಕದಲ್ಲಿರೋ ಅನೇಕ ಜನ್ರಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಇದೆ.
ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿರೋದ್ರಿಂದ ಬೇರೆ-ಬೇರೆ ತರದ ಸಮಸ್ಯೆಗಳು ನಮ್ಮನ್ನ ಕಾಡುತ್ತೆ. (2 ತಿಮೊತಿ 3:1) ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಪ್ರಕಾರ ಇಡೀ ಲೋಕದಲ್ಲಿ, ಪ್ರತಿ ಎಂಟು ಜನ್ರಲ್ಲಿ ಒಬ್ಬ ವ್ಯಕ್ತಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಇದೆ. 2019ಕ್ಕೆ ಹೋಲಿಸಿದ್ರೆ, 2020ರಲ್ಲಿ ಕೋವಿಡ್-19ನಿಂದಾಗಿ 26% ಜನ್ರು ಆತಂಕಕ್ಕೆ ಮತ್ತು 28%ಜನ್ರು ಗಂಭೀರ ಖಿನ್ನತೆಗೆ ಒಳಗಾದ್ರು ಅಂತ ಆ ವರದಿ ಹೇಳುತ್ತೆ.
ಆತಂಕ ಮತ್ತು ಖಿನ್ನತೆಯಿಂದ ಎಷ್ಟು ಜನ್ರಿಗೆ ತೊಂದ್ರೆ ಆಗ್ತಿದೆ ಅಂತ ತಿಳ್ಕೊಳ್ಳೋದಷ್ಟೇ ಅಲ್ಲ, ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದವ್ರಿಗೆ ಈ ಸಮಸ್ಯೆ ಇದ್ಯಾ ಅಂತ ತಿಳ್ಕೊಳ್ಳೋದೂ ತುಂಬ ಮುಖ್ಯ.
ಒಳ್ಳೇ ಮಾನಸಿಕ ಆರೋಗ್ಯ ಅಂದ್ರೇನು?
ಚೆನ್ನಾಗಿ ಕೆಲಸ ಮಾಡ್ಕೊಂಡು ಪ್ರತಿದಿನ ಬರೋ ಒತ್ತಡಗಳನ್ನ ನಿಭಾಯಿಸ್ಕೊಂಡು ತೃಪ್ತಿಯಿಂದ ಜೀವನ ನಡೆಸಿದ್ರೆ ನಿಮಗೆ ಒಳ್ಳೇ ಮಾನಸಿಕ ಆರೋಗ್ಯ ಇದೆ ಅಂತ ಅರ್ಥ.
ಮಾನಸಿಕ ಆರೋಗ್ಯ ಸಮಸ್ಯೆ . . .
-
ಇದು ವೈಯಕ್ತಿಕ ಬಲಹೀನತೆ ಅಲ್ಲ.
-
ಈ ಸಮಸ್ಯೆ ಇರೋ ವ್ಯಕ್ತಿಗೆ ತುಂಬ ಭಯ ಮತ್ತು ಚಿಂತೆ ಕಾಡುತ್ತೆ. ಆಗ ಅವನಿಗೆ ಸರಿಯಾಗಿ ಯೋಚನೆ ಮಾಡೋಕಾಗಲ್ಲ, ತನ್ನ ಭಾವನೆಗಳನ್ನ ನಿಯಂತ್ರಿಸೋಕೆ ಆಗಲ್ಲ ಮತ್ತು ಸರಿಯಾಗಿ ಕೆಲಸಗಳನ್ನ ಮಾಡೋಕೂ ಆಗಲ್ಲ. ಇದೊಂದು ವೈದ್ಯಕೀಯ ಸ್ಥಿತಿಯಾಗಿದೆ.
-
ಇಂಥ ವ್ಯಕ್ತಿಗಳಿಗೆ ಬೇರೆಯವರ ಜೊತೆ ಬೆರೆಯೋಕೆ ಮತ್ತು ದಿನನಿತ್ಯದ ಕೆಲಸಗಳನ್ನ ಸಲೀಸಾಗಿ ಮಾಡೋಕೆ ಕಷ್ಟ ಆಗುತ್ತೆ.
-
ಈ ಸಮಸ್ಯೆ ಎಲ್ಲ ವಯಸ್ಸಿನವರಿಗೆ, ಬೇರೆ-ಬೇರೆ ಸಂಸ್ಕೃತಿಯವರಿಗೆ, ದೇಶದವರಿಗೆ, ಧರ್ಮದವರಿಗೆ, ಓದು-ಬರಹ ಗೊತ್ತಿಲ್ಲದವ್ರಿಗೆ ಮತ್ತು ಗೊತ್ತಿರೋರಿಗೆ, ಶ್ರೀಮಂತರಿಗೆ, ಬಡವರಿಗೆ, ಹೀಗೆ ಯಾರಿಗೆ ಬೇಕಾದ್ರೂ ಬರಬಹುದು.
ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸಹಾಯ ಪಡೆಯಿರಿ
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲ್ತಿರೋ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ತುಂಬಾ ನಿದ್ದೆ ಮಾಡಬಹುದು ಅಥವಾ ಸ್ವಲ್ಪ ನಿದ್ದೆ ಮಾಡಬಹುದು, ಹೆಚ್ಚು ತಿನ್ನಬಹುದು ಇಲ್ಲವೇ ಕಡಿಮೆ ತಿನ್ನಬಹುದು, ತುಂಬಾ ಬೇಜಾರಲ್ಲಿ, ಚಿಂತೆಯಿಂದ ಇರಬಹುದು. ಒಬ್ಬ ವ್ಯಕ್ತಿಗೆ ಹೀಗೆಲ್ಲಾ ಆಗ್ತಿರೋದಾದ್ರೆ ವೈದ್ಯಕೀಯ ಸಹಾಯದಿಂದ ಈ ಬದಲಾವಣೆಗಳಿಗೆ ಏನು ಕಾರಣ ಮತ್ತು ಇದನ್ನ ಹೇಗೆ ಸರಿ ಮಾಡೋದು ಅಂತ ತಿಳಿಯಬಹುದು.
ಎಲ್ಲರಿಗಿಂತ ವಿವೇಕಿಯಾಗಿದ್ದ ಯೇಸು ಕ್ರಿಸ್ತ ಹೀಗಂದನು: “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.” (ಮತ್ತಾಯ 9:12) ಹಾಗಾಗಿ ಯಾರಿಗೆಲ್ಲ ಆರೋಗ್ಯದ ಸಮಸ್ಯೆಗಳು ಇದಿಯೋ ಅವರು ಅದಕ್ಕೆ ಬೇಕಾದ ಚಿಕಿತ್ಸೆ ಮತ್ತು ಔಷಧಿಗಳನ್ನ ತಗೊಂಡಾಗ ತಮ್ಮ ಸಮಸ್ಯೆಯನ್ನ ಕಡಿಮೆ ಮಾಡ್ಕೊಂಡು, ಸಂತೋಷವಾಗಿ ಜೀವನ ಮಾಡೋಕಾಗುತ್ತೆ. ತುಂಬಾ ಸಮಯದಿಂದ ಮಾನಸಿಕ ಆರೋಗ್ಯದ ಸಮಸ್ಯೆ ಇದ್ರೆ ಆದಷ್ಟು ಬೇಗ ಚಿಕಿತ್ಸೆ ತಗೊಳ್ಳೋದು ಒಳ್ಳೇದು. a
ಬೈಬಲ್ ಒಂದು ವೈದ್ಯಕೀಯ ಪುಸ್ತಕ ಅಲ್ಲ. ಆದ್ರೂ ಅದ್ರಲ್ಲಿರೋ ವಿಷ್ಯಗಳು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನ ನಿಭಾಯಿಸೋಕೆ ಸಹಾಯ ಮಾಡುತ್ತೆ. ಅದು ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಳ್ಳೋಕೆ ಮುಂದಿನ ಲೇಖನಗಳನ್ನ ಓದಿ.
a ಕಾವಲಿನಬುರುಜು ಪತ್ರಿಕೆ ಯಾವುದೇ ನಿರ್ದಿಷ್ಟ ರೀತಿಯ ಚಿಕಿತ್ಸೆಯನ್ನ ಪಡೆಯಬೇಕು ಅಂತ ಹೇಳ್ತಾ ಇಲ್ಲ. ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅನ್ನೋದು ಒಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಣಯ ಆಗಿದೆ.