ಮುಖಪುಟ ಲೇಖನ | ಸಾವಿನ ನೋವಿಗೆ ಸಾಂತ್ವನದ ಮದ್ದು
ದುಃಖದಿಂದ ಹೊರಗೆ ಬರೋದು ಹೇಗೆ?
ಈ ವಿಚಾರದಲ್ಲಿ ಸಲಹೆಗಳಿಗೇನೂ ಕಮ್ಮಿ ಇಲ್ಲ. ಜನರ ಎಲ್ಲ ಸಲಹೆಗಳೂ ನಮಗೆ ಪ್ರಯೋಜನ ತರುವುದಿಲ್ಲ. ಉದಾಹರಣೆಗೆ, ಯಾರಾದರೂ ಸತ್ತಾಗ ಅಳಲೇಬಾರದು ಅಂತ ಕೆಲವರು ಸಲಹೆ ಕೊಟ್ಟರೆ, ಇನ್ನು ಕೆಲವರು ನಿಮ್ಮ ಎಲ್ಲಾ ಭಾವನೆಗಳನ್ನು ಹೊರಗೆ ಹಾಕಿ ಅಂತ ಒತ್ತಡ ಹಾಕುತ್ತಾರೆ. ಆದರೆ ಬೈಬಲ್ ಈ ರೀತಿ ಹೇಳುವುದಿಲ್ಲ. ನೋವನ್ನು ವ್ಯಕ್ತಪಡಿಸುವುದರಲ್ಲಿ ಸಮತೋಲನ ಇರಬೇಕೆಂದು ಹೇಳುತ್ತದೆ. ಇದನ್ನೇ ಇಂದಿನ ಸಂಶೋಧನೆಗಳು ಕೂಡ ಒಪ್ಪುತ್ತವೆ.
ಗಂಡಸರು ಅಳುವುದು ಹೇಡಿತನದ ಲಕ್ಷಣ ಅಂತ ಕೆಲವು ಸಂಸ್ಕೃತಿಗಳಲ್ಲಿ ನೆನಸುತ್ತಾರೆ. ಹಾಗಾದರೆ ಎಲ್ಲರ ಮುಂದೆ ಅಳುವುದು ಅವಮಾನನಾ? ಯಾರಾದರೂ ತೀರಿಕೊಂಡಾಗ ದುಃಖದಿಂದ ಕಣ್ಣೀರು ಹಾಕುವುದು ಸಹಜ ಅಂತ ಮಾನಸಿಕ ಆರೋಗ್ಯ ತಜ್ಞರೇ ಹೇಳುತ್ತಾರೆ. ಅಳುವುದರಿಂದ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ನೋವನ್ನು ಮನಸ್ಸಿನೊಳಗೇ ಅದುಮಿಟ್ಟುಕೊಂಡರೆ ಒಳ್ಳೇದಕ್ಕಿಂತ ಜಾಸ್ತಿ ಕೆಟ್ಟದ್ದೇ ಆಗುತ್ತದೆ. ದುಃಖವಾದಾಗ ಅಳುವುದು ತಪ್ಪು ಅಂತನೋ, ಗಂಡಸರು ಅಳಬಾರದು ಅಂತನೋ ಬೈಬಲ್ ಹೇಳುವುದಿಲ್ಲ. ಯೇಸು ಕೂಡ ಅತ್ತಿದ್ದಾನೆ. ತನ್ನ ಸ್ನೇಹಿತ ಲಾಜರ ತೀರಿಕೊಂಡಾಗ ಅವನಿಗೆ ಮತ್ತೆ ಜೀವಕೊಡುತ್ತೇನೆಂದು ಗೊತ್ತಿದ್ದರೂ ಯೇಸು ಎಲ್ಲರ ಮುಂದೆ ಕಣ್ಣೀರಿಟ್ಟನು!—ಯೋಹಾನ 11:33-35.
ನಮ್ಮ ಪ್ರೀತಿಪಾತ್ರರು ತೀರಿಕೊಂಡಾಗ ಕೋಪ ತೋರಿಸುವುದು ಕೂಡ ದುಃಖವನ್ನು ಹೊರಗೆ ಹಾಕುವ ಒಂದು ವಿಧ. ಅದರಲ್ಲೂ ದಿಢೀರಂತ ತೀರಿಹೋದರಂತೂ ಈ ರೀತಿ ಕೋಪ ಬರುವುದು ಸಹಜ. ಇದಕ್ಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ನಾವು ಯಾರ ಮೇಲೆ ತುಂಬಾ ಗೌರವ ಇಟ್ಟುಕೊಂಡಿರುತ್ತೇವೋ ಅಂಥವರು ಹಿಂದೆಮುಂದೆ ಯೋಚನೆ ಮಾಡದೆ ಹೇಳುವಂಥ ಕೆಲವು ಮಾತುಗಳು ನಮಗೆ ಕೋಪ ಬರಿಸುತ್ತವೆ. ದಕ್ಷಿಣ ಆಫ್ರಿಕಾದ ಮೈಕ್ ಹೇಳುವುದು: “ನನ್ನ ಅಪ್ಪ ತೀರಿಹೋದಾಗ ನನಗೆ ಬರೀ 14 ವರ್ಷ. ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಪಾದ್ರಿಯೊಬ್ಬರು ‘ದೇವರು ಒಳ್ಳೇವರನ್ನೇ ಬೇಗ ಕರೆದುಕೊಂಡುಬಿಡುತ್ತಾರೆ’ * ಅಂತಂದ್ರು. ಇದನ್ನ ಕೇಳಿದಾಗ ನನ್ನ ಕೋಪ ನೆತ್ತಿಗೇರಿತು. ನಮ್ಮಪ್ಪನ ಅಗತ್ಯ ದೇವರಿಗಿಂತ ಹೆಚ್ಚು ನಮಗೇ ಇತ್ತು. ಪಾದ್ರಿ ಆ ಮಾತನ್ನ ಹೇಳಿ 63 ವರ್ಷ ಆದ್ರೂ ಆ ಮಾತುಗಳನ್ನ ನೆನಸಿಕೊಂಡರೆ ಇನ್ನೂ ಕೋಪಬರುತ್ತೆ.”
ಕೆಲವೊಮ್ಮೆ ಪಾಪಪ್ರಜ್ಞೆ ಕೂಡ ನಮ್ಮನ್ನು ಕಾಡುತ್ತದೆ. ಅವರು ಸಾಯುವ ಮುಂಚೆ ನಿಮ್ಮಿಬ್ಬರ ಮಧ್ಯೆ ಏನೋ ವಿಚಾರಕ್ಕೆ ವಿವಾದ ಆಗಿರಬಹುದು. ಆಗ ಅವರ ಸಾವಿಗೆ ನೀವೇ ಕಾರಣವೇನೋ ಅಂತ ಅನಿಸಬಹುದು. ಇನ್ನು ಕೆಲವೊಮ್ಮೆ ‘ನನ್ನಿಂದನೇ ಹೀಗಾಯ್ತು, ನಾನು ಹಾಗ್ ಮಾಡಿಲ್ಲ ಅಂದಿದ್ರೆ ಹೀಗಾಗುತ್ತಿರಲಿಲ್ಲ’ ಅಂತ ಮನಸ್ಸು ಚುಚ್ಚಬಹುದು.
ಈ ಥರ ನಿಮಗೆ ಕೋಪನೋ, ಪಾಪಪ್ರಜ್ಞೆನೋ ಕಾಡುತ್ತಿದ್ದರೆ ಅದನ್ನು ಮನಸ್ಸಿನೊಳಗೆ ಅದುಮಿಟ್ಟುಕೊಳ್ಳಬೇಡಿ. ಯಾರು ನಿಮ್ಮ ಮಾತನ್ನೆಲ್ಲಾ ಕೇಳಿ ಸಮಾಧಾನ ಮಾಡುತ್ತಾರೆ ಅಂತ ಅನಿಸುತ್ತೋ ಅಂಥ ಒಬ್ಬ ಒಳ್ಳೇ ಮಿತ್ರನ ಹತ್ತಿರ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳಿ. ಅದಕ್ಕೇ ಬೈಬಲ್ ಹೇಳುತ್ತೆ “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.
ಅಂಥ ಒಬ್ಬ ಒಳ್ಳೇ ಮಿತ್ರ ಯಾರು ಗೊತ್ತಾ? ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು. * “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಹಾಗಾಗಿ ಆತನ ಹತ್ತಿರ ಮನಸ್ಸು ಬಿಚ್ಚಿ ಮಾತಾಡಿ. ಆಗ ದೇವರು “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಕೊಡುತ್ತಾನೆ. (ಫಿಲಿಪ್ಪಿ 4:6, 7) ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆತನ ವಾಕ್ಯವಾದ ಬೈಬಲಿಗೆ ಕೂಡ ನಿಮ್ಮ ಮನಸ್ಸಿನ ಗಾಯವನ್ನು ವಾಸಿಮಾಡುವಷ್ಟು ಶಕ್ತಿ ಇದೆ. ಹಾಗಾಗಿ ನೆಮ್ಮದಿ ಕೊಡುವಂಥ ವಚನಗಳನ್ನು ಪಟ್ಟಿ ಮಾಡಿ ಓದಿ. (ಇದೇ ಪುಟದಲ್ಲಿರುವ ಚೌಕ ನೋಡಿ.) ಕೆಲವು ವಚನಗಳನ್ನು ಬಾಯಿಪಾಠ ಮಾಡಿಕೊಳ್ಳಿ. ರಾತ್ರಿ ಒಬ್ಬರೇ ಇದ್ದಾಗ, ನಿದ್ದೆ ಬರದಿದ್ದಾಗ ಈ ವಚನಗಳ ಬಗ್ಗೆ ಯೋಚನೆ ಮಾಡುವುದರಿಂದ ನಿಮಗೆ ತುಂಬ ಸಹಾಯವಾಗುತ್ತದೆ.—ಯೆಶಾಯ 57:15.
ನಲ್ವತ್ತರ ಪ್ರಾಯದಲ್ಲಿರುವ ಜ್ಯಾಕ್‌ರ ಹೆಂಡತಿ ಇತ್ತೀಚೆಗೆ ಕ್ಯಾನ್ಸರಿನಿಂದ ತೀರಿಕೊಂಡರು. ಆಗ ಅವರಿಗೆ ಒಂಟಿತನ ಕಾಡುವುದಕ್ಕೆ ಶುರು ಆಯಿತು. ಅವರಿಗೆ ಯಾವುದು ಸಹಾಯ ಮಾಡಿತು ಗೊತ್ತಾ? ಅವರು ಹೇಳುವುದು: “ನಾನು ಯೆಹೋವ ದೇವರಿಗೆ ಪ್ರಾರ್ಥಿಸಿದಾಗ ಆತನು ನನ್ನ ಜೊತೆ ಇದ್ದಾನೆ ಅನ್ನೋ ನೆಮ್ಮದಿ ಸಿಗುತ್ತೆ. ಒಮ್ಮೊಮ್ಮೆ ನಿದ್ದೆಯಿಂದ ಎಚ್ಚರ ಆಗಿಬಿಟ್ಟರೆ ಮತ್ತೆ ನಿದ್ದೆನೇ ಬರಲ್ಲ. ಆಗ ಮನಸ್ಸಿಗೆ ನೆಮ್ಮದಿ ಕೊಡೋ ವಚನಗಳನ್ನು ಬೈಬಲಿನಿಂದ ಓದಿ ಅದರ ಬಗ್ಗೆ ಯೋಚನೆ ಮಾಡ್ತೀನಿ. ಆಮೇಲೆ ದೇವರ ಹತ್ತಿರ ಮನಸ್ಸು ಬಿಚ್ಚಿ ಮಾತಾಡ್ತೀನಿ. ಇದರಿಂದ ಮನಸ್ಸು ತುಂಬ ಹಗುರ ಆಗಿ ನೆಮ್ಮದಿ ಅನಿಸುತ್ತೆ. ನಿದ್ದೆನೂ ಬರುತ್ತೆ.”
ವೆನೆಸ್ಸಾ ಎಂಬ ಯುವತಿಯ ತಾಯಿ ಕಾಯಿಲೆಬಿದ್ದು ತೀರಿಕೊಂಡರು. ಅವಳಿಗೂ ಪ್ರಾರ್ಥನೆ ತುಂಬ ಸಹಾಯ ಮಾಡಿದೆ. ಅವಳು ಹೇಳುವುದು: “ಅಮ್ಮ ನೆನಪಾದಾಗ ಯೆಹೋವನ ಹೆಸರು ಹೇಳಿ ತುಂಬ ಅಳ್ತೀನಿ. ಮನಸ್ಸಲ್ಲಿರೋ ನೋವನ್ನೆಲ್ಲಾ ಹೇಳಿಕೊಳ್ತೀನಿ. ಯೆಹೋವ ದೇವರು ನನ್ನ ಪ್ರಾರ್ಥನೆನಾ ಕೇಳಿ ನನ್ನನ್ನ ಬಲಪಡಿಸಿದ್ದಾನೆ.”
ಆಪ್ತರನ್ನು ಕಳೆದುಕೊಂಡು ದುಃಖದಲ್ಲಿರುವವರು ಬೇರೆಯವರಿಗೆ ಸಹಾಯ ಮಾಡುವಂತೆ, ಬೇರೆಯವರೊಟ್ಟಿಗೆ ಸಮಯ ಕಳೆಯುವಂತೆ ತಜ್ಞರು ಸಲಹೆ ಕೊಡುತ್ತಾರೆ. ಇದರಿಂದ ಮನಸ್ಸಿಗೆ ಸಂತೋಷ ಸಿಕ್ಕಿ ದುಃಖ ಕಡಿಮೆಯಾಗುತ್ತದೆ. (ಅಪೊಸ್ತಲರ ಕಾರ್ಯಗಳು 20:35) ಬೇರೆಯವರಿಗೆ ಸಹಾಯ ಮಾಡಿದ್ದರಿಂದ ತಮ್ಮ ಆಪ್ತರ ಸಾವಿನ ನೋವನ್ನು ಮರೆಯಲು ಸಾಧ್ಯವಾಗಿದೆ ಎನ್ನುವುದು ಅನೇಕ ಕ್ರೈಸ್ತರ ಅನುಭವ.—2 ಕೊರಿಂಥ 1:3, 4. (w16-E No. 3)
^ ಪ್ಯಾರ. 5 ಆದರೆ ಬೈಬಲ್ ಈ ರೀತಿ ಕಲಿಸುವುದಿಲ್ಲ. ಮನುಷ್ಯರು ಸಾಯುವುದಕ್ಕೆ ನಿಜವಾಗಲೂ ಏನು ಕಾರಣ ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ.—ಪ್ರಸಂಗಿ 9:11; ಯೋಹಾನ 8:44; ರೋಮನ್ನರಿಗೆ 5:12.
^ ಪ್ಯಾರ. 8 ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.