ದೇವರಿಗೆ ಪರಾನುಭೂತಿ ಇದೆಯಾ?
ಸೃಷ್ಟಿ ನಮಗೆ ಏನು ಕಲಿಸುತ್ತದೆ?
ಪರಾನುಭೂತಿ ಅಂದರೇನು? “ಬೇರೊಬ್ಬರ ಪರಿಸ್ಥಿತಿಯಲ್ಲಿ ನಾನಿದ್ದರೆ ಹೇಗಿರುತ್ತದೆ ಎಂದು ಮನಸ್ಸಲ್ಲೇ ಚಿತ್ರಿಸಿಕೊಳ್ಳುವ ಮೂಲಕ ಅವರ ಭಾವನೆಗಳನ್ನು ಅಥವಾ ಅವರಿಗಾಗುವ ಅನುಭವಗಳನ್ನು ನಾವೂ ಅನುಭವಿಸುವ ಸಾಮರ್ಥ್ಯವಾಗಿದೆ.” ಮಾನಸಿಕ ಆರೋಗ್ಯ ತಜ್ಞನಾದ ಡಾ. ರಿಕ್ ಹ್ಯಾನ್ಸನ್ ಪ್ರಕಾರ, ಪರಾನುಭೂತಿಯ ಗುಣ ನಮ್ಮ ರಕ್ತದಲ್ಲೇ ಇದೆ.
ಯೋಚಿಸಿ: ಭೂಮಿ ಮೇಲಿರುವ ಬೇರಾವುದೇ ಜೀವಿಯಲ್ಲಿ ಇಲ್ಲದಿರುವ ಪರಾನುಭೂತಿ ಮನುಷ್ಯರಲ್ಲಿ ಮಾತ್ರ ಯಾಕೆ ಇದೆ? ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲೇ ಸೃಷ್ಟಿ ಮಾಡಿದನೆಂದು ಬೈಬಲ್ ತಿಳಿಸುತ್ತದೆ. (ಆದಿಕಾಂಡ 1:26) ನಮ್ಮನ್ನು ದೇವರ ಸ್ವರೂಪದಲ್ಲಿ ರಚಿಸಲಾಗಿದೆ ಅಂದರೆ ನಾವು ಆತನ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತಾ ಆತನಲ್ಲಿರುವ ಗುಣಗಳನ್ನು ಸ್ವಲ್ಪಮಟ್ಟಿಗೆ ತೋರಿಸಬಲ್ಲೆವು. ಜನರು ಪರಾನುಭೂತಿಯಿಂದ ಇತರರಿಗೆ ಸಹಾಯ ಮಾಡುವಾಗ ತಮ್ಮ ಕರುಣಾಮಯಿ ಸೃಷ್ಟಿಕರ್ತನಾದ ಯೆಹೋವ ದೇವರಲ್ಲಿರುವ ಪರಾನುಭೂತಿಯನ್ನು ಪ್ರತಿಬಿಂಬಿಸುತ್ತಾರೆ.—ಜ್ಞಾನೋಕ್ತಿ 14:31.
ದೇವರ ಪರಾನುಭೂತಿಯ ಬಗ್ಗೆ ಬೈಬಲ್ ಏನು ಕಲಿಸುತ್ತದೆ?
ದೇವರಿಗೆ ನಮ್ಮ ಬಗ್ಗೆ ಪರಾನುಭೂತಿ ಇದೆ. ನಾವು ಕಷ್ಟ ಅನುಭವಿಸುವುದನ್ನು ನೋಡಲು ಆತನಿಂದ ಆಗುವುದಿಲ್ಲ. ಪ್ರಾಚೀನ ಇಸ್ರೇಲಿನ ಜನರು ಈಜಿಪ್ಟಿನಲ್ಲಿ ಕಠಿಣ ಗುಲಾಮಗಿರಿಯಲ್ಲಿದ್ದು, ನಂತರ ನಿರ್ಜನ ಪ್ರದೇಶದಲ್ಲಿ 40 ವರ್ಷ ಕಷ್ಟ ಅನುಭವಿಸಿದ್ದರು. ಇದರ ಬಗ್ಗೆ ಬೈಬಲ್ ಹೀಗನ್ನುತ್ತದೆ: “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು” ಅಂದರೆ ಅವರು ಸಂಕಟಪಡುತ್ತಿದ್ದಾಗ ದೇವರಿಗೂ ಸಂಕಟವಾಗುತ್ತಿತ್ತು. (ಯೆಶಾಯ 63:9) ಅವರು ಅನುಭವಿಸುತ್ತಿದ್ದ ಸಂಕಟದ ಬಗ್ಗೆ ದೇವರಿಗೆ ಗೊತ್ತಿತ್ತು ಮಾತ್ರವಲ್ಲ, ಅವರಿಗೆ ನೋವಾದಾಗ ಆತನಿಗೂ ನೋವಾಯಿತು. ಅಲ್ಲದೆ, ‘ನಿಮ್ಮನ್ನು ತಾಕುವವನು ನನ್ನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ’ ಎಂದೂ ದೇವರು ಹೇಳಿದ್ದಾನೆ. (ಜೆಕರ್ಯ 2:8) ಬೇರೆಯವರು ನಮಗೆ ನೋವು ಮಾಡಿದಾಗ ನಮಗೆ ಮಾತ್ರವಲ್ಲ, ಆತನಿಗೂ ನೋವಾಗುತ್ತದೆ.
ದೇವರ ಪರಾನುಭೂತಿ ಪಡೆಯಲು ನಾವು ಯೋಗ್ಯರಲ್ಲ ಅಂತನಿಸಿದರೂ ನಮ್ಮ ಮನಸ್ಸಾಕ್ಷಿ ಚುಚ್ಚುತ್ತಿದ್ದರೂ “ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ” ಎಂದು ಬೈಬಲ್ ಆಶ್ವಾಸನೆ ನೀಡುತ್ತದೆ. (1 ಯೋಹಾನ 3:19, 20) ನಮ್ಮ ಬಗ್ಗೆ ನಮಗಿಂತ ಚೆನ್ನಾಗಿ ದೇವರಿಗೆ ಗೊತ್ತು. ಆತನಿಗೆ ನಮ್ಮ ಪರಿಸ್ಥಿತಿ, ಯೋಚನೆಗಳು ಮತ್ತು ಭಾವನೆಗಳ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ಆತನಿಗೆ ನಮ್ಮ ಬಗ್ಗೆ ಪರಾನುಭೂತಿಯೂ ಇದೆ.
ದೇವರು ಸಂಕಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ನಾವು ಸಾಂತ್ವನ, ವಿವೇಕ, ಬೆಂಬಲಕ್ಕಾಗಿ ಆತನ ಕಡೆಗೆ ನೋಡಬಹುದು
ಬೈಬಲ್ ಕೊಡುವ ಆಶ್ವಾಸನೆ
-
“ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ ಇಗೋ, ಇದ್ದೇನೆ, ಅನ್ನುವನು.”—ಯೆಶಾಯ 58:9.
-
ಯೆಹೋವನು ಹೀಗನ್ನುತ್ತಾನೆ: “ಇವರಿಗೆ . . . ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.” —ಯೆರೆಮೀಯ 29:11, 12.
-
“ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ; ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರದದೆಯಲ್ಲಾ.”—ಕೀರ್ತನೆ 56:8.
ದೇವರು ನಮ್ಮನ್ನು ಗಮನಿಸುತ್ತಾನೆ, ನಮ್ಮನ್ನೂ ನಮ್ಮ ನೋವನ್ನೂ ಅರ್ಥಮಾಡಿಕೊಳ್ಳುತ್ತಾನೆ
ದೇವರಿಗೆ ನಮ್ಮ ಬಗ್ಗೆ ಪರಾನುಭೂತಿ ಇದೆ ಎಂದು ತಿಳಿದಿರುವುದು ನಮಗೆ ಬರುವ ಸಮಸ್ಯೆಗಳನ್ನು ಎದುರಿಸಲು ಸಹಾಯಮಾಡುತ್ತದಾ? ಮಾರಿಯ ಎಂಬಾಕೆಯ ಅನುಭವವನ್ನು ಗಮನಿಸಿ:
“ನನ್ನ ಮಗ 2 ವರ್ಷ ಕ್ಯಾನ್ಸರ್ನಿಂದ ನರಳಿ 18ನೇ ಪ್ರಾಯದಲ್ಲಿ ತೀರಿಹೋದಾಗ ನನಗೆ ಹೇಳಲಿಕ್ಕಾಗದಷ್ಟು ನೋವಾಯಿತು. ನಾನು ಜೀವನ ಮಾಡುವುದೇ ಕಷ್ಟ ಅಂತನಿಸಿತು. ನನಗೆ ಅನ್ಯಾಯ ಆಗಿದೆ, ಯೆಹೋವ ದೇವರು ಅವನನ್ನು ಗುಣಪಡಿಸಿ, ಸಾಯದಂತೆ ತಡೆಯಲಿಲ್ಲವಲ್ಲ ಎಂದು ಆತನ ಮೇಲೆ ಕೋಪಗೊಂಡಿದ್ದೆ.”
“ಇದಾಗಿ ಆರು ವರ್ಷಗಳ ನಂತರ ನಾನು ನಮ್ಮ ಸಭೆಯಲ್ಲಿರುವ ಪ್ರೀತಿಯ, ಕರುಣಾಮಯಿ ಸ್ನೇಹಿತೆ ಹತ್ತಿರ ನನ್ನ ಭಾವನೆಗಳನ್ನು ತೋಡಿಕೊಂಡೆ. ‘ಯೆಹೋವನಿಗೆ ನನ್ನ ಮೇಲೆ ಪ್ರೀತಿ ಇಲ್ಲ’ ಎಂಬ ನನ್ನ ಅನಿಸಿಕೆಯನ್ನು ಹೇಳಿಕೊಳ್ಳುವಾಗ ಅವಳು ಕಿವಿಗೊಟ್ಟು ಕೇಳಿದಳು. ಹೀಗೆ ಅನೇಕ ತಾಸುಗಳೇ ಕಳೆದರೂ ಆಕೆ ಮಧ್ಯೆ ಮಾತಾಡಲಿಲ್ಲ. ನಂತರ 1 ಯೋಹಾನ 3:19, 20ರಲ್ಲಿರುವ ಮಾತುಗಳನ್ನು ಹೇಳಿದಳು. ಇದು ನನ್ನನ್ನು ತುಂಬ ಪ್ರಭಾವಿಸಿತು. ‘ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ ಮತ್ತು ಎಲ್ಲವನ್ನೂ ತಿಳಿದವನಾಗಿದ್ದಾನೆ’ ಎಂದು ಅಲ್ಲಿ ಹೇಳಲಾಗಿದೆ. ಯೆಹೋವನು ನಮ್ಮ ಸಂಕಟವನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಅವಳು ವಿವರಿಸಿದಳು.”
“ಆದರೂ ಯೆಹೋವನ ಮೇಲಿನ ನನ್ನ ಕೋಪವನ್ನು ಬಿಟ್ಟುಬಿಡಲು ನನಗೆ ಕಷ್ಟವಾಯಿತು. ಆಗ ನಾನು ಕೀರ್ತನೆ 94:19ನ್ನು ಓದಿದೆ. ‘ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ’ ಅಂತ ಅಲ್ಲಿದೆ. ಈ ಮಾತನ್ನು ನನಗಾಗಿಯೇ ಬರೆಯಲಾಗಿದೆ ಎಂದು ಅನಿಸಿತು. ಕ್ರಮೇಣ ನಾನು, ಯೆಹೋವನು ನನ್ನ ಪ್ರಾರ್ಥನೆಯನ್ನು ಕೇಳುತ್ತಾನೆ, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆಯಿಂದ ನನ್ನ ಸಂಕಟದ ಬಗ್ಗೆ ಯೆಹೋವನಿಗೆ ಪ್ರಾರ್ಥಿಸಲು ಆರಂಭಿಸಿದೆ. ಆಗ ನನಗೆ ಸಾಂತ್ವನ ಸಿಕ್ಕಿತು.”
ಯೆಹೋವನು ನಮ್ಮನ್ನೂ ನಮ್ಮ ಭಾವನೆಗಳನ್ನೂ ಅರ್ಥಮಾಡಿಕೊಳ್ಳುತ್ತಾನೆ ಎಂದು ತಿಳಿದುಕೊಳ್ಳುವಾಗ ಎಷ್ಟು ಸಾಂತ್ವನ ಸಿಗುತ್ತದಲ್ಲವೇ?ದೇವರು ಹೀಗೆ ಪರಾನುಭೂತಿ ತೋರಿಸುವವನಾಗಿದ್ದರೆ ಇಷ್ಟೊಂದು ಕಷ್ಟ-ಸಂಕಟ ಯಾಕಿದೆ? ಇದು ಆತನು ನಮ್ಮ ತಪ್ಪುಗಳಿಗಾಗಿ ಕೊಡುವ ಶಿಕ್ಷೆನಾ? ಈ ಕಷ್ಟಗಳನ್ನೆಲ್ಲಾ ತೆಗೆದುಹಾಕಲಿಕ್ಕಾಗಿ ದೇವರು ಏನಾದರೂ ಮಾಡುತ್ತಾನಾ? ಈ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಲೇಖನಗಳಲ್ಲಿ ನೋಡಲಿದ್ದೇವೆ.