ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?
ವಿದ್ಯಾವಂತರಿಗೆ, ಶ್ರೀಮಂತರಿಗೆ ಸುಭದ್ರ ಭವಿಷ್ಯ ಇರುತ್ತೆ ಅಂತ ತುಂಬ ಜನ ನೆನಸುತ್ತಾರೆ. ಉನ್ನತ ಶಿಕ್ಷಣ ಒಬ್ಬ ವ್ಯಕ್ತಿಯನ್ನು ಒಳ್ಳೇ ಕೆಲಸಗಾರ, ಒಳ್ಳೇ ಕುಟುಂಬ ಸದಸ್ಯ ಮತ್ತು ಒಳ್ಳೇ ನಾಗರಿಕನಾಗಲು ಸಹಾಯ ಮಾಡುತ್ತೆ ಅಂತ ಅಂದ್ಕೊಳ್ತಾರೆ. ಉತ್ತಮ ಶಿಕ್ಷಣ ಇದ್ದರೆ ಕೈ ತುಂಬ ಸಂಬಳ ಬರೋ ಕೆಲಸ ಸಿಗುತ್ತೆ. ಆಗ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳೋಕೆ ಆಗುತ್ತೆ ಅಂತ ನೆನಸುತ್ತಾರೆ.
ಹೆಚ್ಚಿನವರ ಆಯ್ಕೆ
ಚೈನಾದಲ್ಲಿರೋ ಜೆ಼ನ್ ಚೆನ್ ಹೇಳಿದ್ದು: “ಬಡತನದಿಂದ ಹೊರಗೆ ಬರೋಕೆ, ಕೈ ತುಂಬ ಸಂಬಳ ಬರೋ ಕೆಲಸ ಸಿಗೋಕೆ ಉನ್ನತ ಶಿಕ್ಷಣ ಮಾಡಬೇಕು. ಆಗಲೇ ನಾನು ಸಂತೋಷ ಸಂತೃಪ್ತಿಯಿಂದ ಇರೋಕೆ ಆಗುತ್ತೆ ಅಂತ ಅಂದ್ಕೊಂಡಿದ್ದೆ.”
ಸುಭದ್ರ ಭವಿಷ್ಯವನ್ನು ಕಂಡುಕೊಳ್ಳೋ ಉದ್ದೇಶದಿಂದ ಅನೇಕರು ಬೇರೆ ದೇಶದ ಫೇಮಸ್ ಯೂನಿವರ್ಸಿಟಿಗಳಿಗೆ ಹೋಗಿ ಕಲಿಯುತ್ತಿದ್ದಾರೆ. ಆದರೆ ಕೋವಿಡ್-19 ಶುರುವಾದಾಗಿಂದ ಹೊರ ದೇಶಗಳಿಗೆ ಹೋಗೋದು ಕಷ್ಟ ಆಯ್ತು. 2012ರಲ್ಲಿ ಎಕನಾಮಿಕ್ ಕೋ-ಆಪರೇಷನ್ ಆ್ಯಂಡ್ ಡೆವಲೆಪ್ಮೆಂಟ್ ಸಂಘಟನೆಯ ಒಂದು ವರದಿ ಹೇಳಿದ್ದು: “ಹೊರ ದೇಶಕ್ಕೆ ಹೋಗಿ ಕಲಿಯೋ 52% ವಿದ್ಯಾರ್ಥಿಗಳು ಏಷ್ಯಾದವರಾಗಿದ್ದಾರೆ.”
ತುಂಬ ಹೆತ್ತವರು ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಹೊರದೇಶಕ್ಕೆ ಕಳುಹಿಸಲು ಕಷ್ಟಪಡ್ತಿದ್ದಾರೆ. ತೈವಾನಲ್ಲಿರೋ ಶೆಶಾಂಗ್ ಹೇಳಿದ್ದು: “ನನ್ನ ಅಪ್ಪ-ಅಮ್ಮ ಹತ್ತಿರ ಅಷ್ಟೊಂದು ಹಣ ಇರಲಿಲ್ಲ. ಆದರೂ ನಾವು ನಾಲ್ಕೂ ಮಕ್ಕಳನ್ನು ಅಮೆರಿಕಕ್ಕೆ ಓದೋಕೆ ಕಳುಹಿಸಿದರು.” ಇದೇ ತರ ಎಷ್ಟೋ ಹೆತ್ತವರು ತಮ್ಮ ಮಕ್ಕಳನ್ನು ಕಲಿಸೋಕೆ ಹೋಗಿ ಸಾಲದಲ್ಲಿ ಬಿದ್ದಿದ್ದಾರೆ.
ಇದರ ಫಲಿತಾಂಶ ಏನು?
ಉನ್ನತ ಶಿಕ್ಷಣದಿಂದ ಕೆಲವರಿಗೆ ಪ್ರಯೋಜನ ಆಗಿದೆ. ಆದರೆ ವಿದ್ಯಾರ್ಥಿಗಳಿಗೆ ಅವರು ನೆನಸಿದ ಫಲಿತಾಂಶ ಯಾವಾಗಲೂ ಸಿಗಲ್ಲ. ಉದಾಹರಣೆಗೆ, ಎಷ್ಟೋ ವರ್ಷಗಳು ತ್ಯಾಗ ಮಾಡಿ ಶಿಕ್ಷಣಕ್ಕಾಗಿ ಸಾಲ ಮಾಡಿದ್ರೂ ಅವರು ಬಯಸಿದ ಕೆಲಸ ಸಿಕ್ಕಿಲ್ಲ. ರೇಚಲ್ ಮುಯ್ ಅನ್ನುವವರು ಸಿಂಗಪೂರಿ ಬಿಸಿನಸ್ ಟೈಮ್ಸ್ನಲ್ಲಿ ಹೇಳಿದ್ದು: “ಪದವಿದರ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಆಗ್ತಾ ಇದೆ.” ತೈವಾನ್ನಲ್ಲಿರೋ ಡಾಕ್ಟ್ರೇಟ್ ಪದವಿದರರಾದ ಜೇಂಜಿ ಹೇಳಿದ್ದು: “ಕೆಲವರಿಗೆ ತಮ್ಮ ಡಿಗ್ರಿಯಿಂದ ಯಾವುದೇ ಪ್ರಯೋಜನ ಆಗಿಲ್ಲ. ಸಿಕ್ಕಿದ ಕೆಲಸ ಮಾಡಬೇಕಾಯ್ತು ಬಿಟ್ರೆ ಬೇರೆ ಆಯ್ಕೆ ಇರಲಿಲ್ಲ.”
ಕೆಲವರಿಗೆ ತಾವು ಬಯಸಿದ ಕೆಲಸ ಸಿಕ್ಕಿದೆ. ಆದರೆ ಬಯಸಿದ ಜೀವನ ಸಿಗಲಿಲ್ಲ. ಯುನೈಟೆಡ್ ಕಿಂಗ್ಡಮಲ್ಲಿರೋ ಯೂನಿವರ್ಸಿಟಿಯಿಂದ ತೈಲ್ಯಾಂಡಿಗೆ ನಿರೆನ್ ವಾಪಸ್ ಬಂದ ಮೇಲೆ ಅವನು ಅಂದ್ಕೊಂಡಿದ್ದ ಕೆಲಸನೇ ಸಿಕ್ಕಿತು. ಅವನು ಹೇಳಿದ್ದು: “ನಾನು ಬಯಸಿದ ಹಾಗೇ ಒಳ್ಳೇ ಸಂಬಳ ಸಿಗೋ ಕೆಲಸ ಸಿಕ್ತು. ಆದರೆ ತಲೆ ಕೆರ್ಕೊಳ್ಳೋಕೂ ಸಮಯ ಇರ್ತಿರಲಿಲ್ಲ, ಒವರ್ ಟೈಮ್ ಮಾಡಬೇಕಿತ್ತು. ಇದ್ದಕ್ಕಿದ್ದ ಹಾಗೆ ಕಂಪನಿ, ತುಂಬ ಜನರನ್ನು ಕೆಲಸದಿಂದ ತೆಗೆದು ಹಾಕ್ತು. ನನ್ನ ಕೆಲಸನೂ ಹೋಯ್ತು. ಸುಭದ್ರ ಭವಿಷ್ಯಕ್ಕೆ ಯಾವ ಕೆಲಸನೂ ಗ್ಯಾರಂಟಿ ಕೊಡಲ್ಲ ಅಂತ ನಂಗೆ ಅರ್ಥವಾಯ್ತು.”
ಕುಟುಂಬ, ಆರೋಗ್ಯ, ಹಣಕಾಸಿನ ವಿಷಯದಲ್ಲಿ ಶ್ರೀಮಂತರಿಗೂ ಸಮಸ್ಯೆಗಳಿವೆ. ಜಪಾನಲ್ಲಿರೋ ಕಟ್ಸುಟೋಷಿ ಹೇಳಿದ್ದು: “ನನ್ನ ಹತ್ತಿರ ತುಂಬ ದುಡ್ಡಿದ್ರೂ ನಾನು ಖುಷಿಯಾಗಿಲ್ಲ. ಯಾಕಂದ್ರೆ ಬೇರೆಯವರು ನನ್ನ ಮೇಲೆ ಹೊಟ್ಟೆಕಿಚ್ಚು ಪಡ್ತಿದ್ರು, ಹೆದರಿಸುತ್ತಿದ್ದರು.” ವಿಯೆಟ್ನಾಂಲ್ಲಿರೋ ಲಾಂ ಹೇಳಿದ್ದು: “ಇವತ್ತು ತುಂಬ ಜನ, ಜೀವನ ಚೆನ್ನಾಗಿರಬೇಕು ಅಂತ ಒಳ್ಳೇ ಸಂಬಳ ಇರೋ ಕೆಲಸ ಹುಡುಕುತ್ತಾರೆ. ಆದರೆ ನಿಜ ಏನಂದ್ರೆ ಇಂಥವರಿಗೆ ತುಂಬ ಚಿಂತೆ, ಆರೋಗ್ಯ ಸಮಸ್ಯೆ, ಖಿನ್ನತೆ ಇರುತ್ತೆ.”
ಫ್ರಾಂಕ್ಲಿನ್ ತರಾನೇ ತುಂಬ ಜನರು ಶಿಕ್ಷಣ ಮತ್ತು ಶ್ರೀಮಂತಿಕೆಗಿಂತ ಜೀವನಕ್ಕೆ ಇನ್ನೂ ಕೆಲವು ವಿಷಯಗಳು ಬೇಕು ಅಂತ ಅರ್ಥಮಾಡಿಕೊಂಡಿದ್ದಾರೆ. ಇನ್ನು ಕೆಲವರು ಈ ವಿಷಯಗಳಿಗಿಂತ ಸುಭದ್ರ ಭವಿಷ್ಯ ಪಡಿಯೋಕೆ ಒಳ್ಳೇ ವ್ಯಕ್ತಿ ಆಗಬೇಕು ಅಥವಾ ಬೇರೆಯವರಿಗೆ ಒಳ್ಳೇದನ್ನು ಮಾಡಬೇಕು ಅಂತ ನೆನಸ್ತಾರೆ. ಆದರೆ ಇದರಿಂದ ಸುಭದ್ರ ಭವಿಷ್ಯ ಪಡೆಯಬಹುದಾ? ಇದಕ್ಕೆ ಉತ್ತರ ಮುಂದಿನ ಲೇಖನ ಕೊಡುತ್ತೆ.