ಮದ್ಯದ ಸಂಕೋಲೆಯಿಂದ ಬಿಡುಗಡೆ
ಮದ್ಯದ ಸಂಕೋಲೆಯಿಂದ ಬಿಡುಗಡೆ
ಮದ್ಯದ ಸೀಮಿತ ಉಪಯೋಗ ಒಂದು ಭೋಜನಕ್ಕೆ ಪೂರಕವಾಗಿರಬಲ್ಲದು ಅಥವಾ ಒಂದು ಸಮಾರಂಭಕ್ಕೆ ಸಂತೋಷವನ್ನು ಕೂಡಿಸಬಲ್ಲದು. ಆದರೆ ಕೆಲವರನ್ನು ಮದ್ಯಪಾನವು ಗಂಭೀರ ಸಮಸ್ಯೆಗಳಿಗೆ ನಡೆಸುತ್ತದೆ. ನಾವೀಗ ಮದ್ಯಪಾನ ದುರುಪಯೋಗದ ಸಂಕೋಲೆಯಿಂದ ಬಿಡುಗಡೆಹೊಂದಿದ ವ್ಯಕ್ತಿಯೊಬ್ಬನ ಕಥೆಯನ್ನು ಕೇಳೋಣ.
ನಮ್ಮ ಮನೆಯಲ್ಲಿದ್ದ ಬಿಗುಪಿನ ವಾತಾವರಣವನ್ನು ವರ್ಣಿಸುವುದು ನನಗೆ ಈಗಲೂ ನೋವನ್ನುಂಟುಮಾಡುತ್ತದೆ. ನನ್ನ ಅಪ್ಪಅಮ್ಮ ಕುಡಿಯುತ್ತಿದ್ದರು. ಬಳಿಕ ಅಪ್ಪ ಅಮ್ಮನಿಗೆ ಹೊಡೆಯುತ್ತಿದ್ದರು. ಅನೇಕವೇಳೆ ತಂದೆಯ ಹೊಡೆತಕ್ಕೆ ನಾನೂ ಬಲಿಯಾಗುತ್ತಿದ್ದೆ. ಅವರಿಬ್ಬರು ಪ್ರತ್ಯೇಕವಾಸ ಮಾಡಲು ನಿರ್ಣಯಿಸಿದಾಗ ನನಗೆ ಕೇವಲ ನಾಲ್ಕು ವರ್ಷವಾಗಿತ್ತು. ಅಜ್ಜಿ ಮನೆಯಲ್ಲಿ ವಾಸಿಸುವಂತೆ ನನ್ನನ್ನು ಕರೆದೊಯ್ದದ್ದು ನನಗಿನ್ನೂ ನೆನಪಿದೆ.
ನಾನು ಯಾರಿಗೂ ಬೇಡವಾಗಿದ್ದೇನೆ ಎಂಬ ಅನಿಸಿಕೆ ನನಗಾಯಿತು. ನಾನು ಯಾರಿಗೂ ಕಾಣದಂತೆ ಮನೆಯಲ್ಲೇ ತಯಾರಿಸಿದ ವೈನ್ ಕುಡಿಯಲು ನೆಲಮಾಳಿಗೆಗಿಳಿದು ಹೋಗುತ್ತಿದ್ದೆ. ನನಗಾಗ ಕೇವಲ ಏಳು ವರ್ಷವಾಗಿತ್ತಷ್ಟೆ. ವೈನ್ ಕುಡಿಯುವುದು ನನ್ನ ಬೇಸರವನ್ನು ಪರಿಹರಿಸುವಂತೆ ಕಂಡಿತು. ನಾನು 12 ವಯಸ್ಸಿನವನಾಗಿರುವಾಗ, ನನ್ನ ವಿಷಯದಲ್ಲಿ ಅಮ್ಮ ಮತ್ತು ಅಜ್ಜಿಯ ಮಧ್ಯೆ ಸಿಟ್ಟಿನ ವಾಗ್ವಾದವುಂಟಾಯಿತು. ಅಮ್ಮ ಎಷ್ಟು ಕೋಪೋದ್ರಿಕ್ತರಾದರೆಂದರೆ ಅವರು ಬಿರುಸಿನಿಂದ ಮೊನಚಾದ ಕವೆಗೋಲನ್ನು ನನ್ನ ಮೇಲೆ ಎಸೆದರು. ಸದ್ಯ ಹೇಗೊ ನಾನು ಬದಿಗೆ ಹಾರಿ ತಪ್ಪಿಸಿಕೊಂಡೆ! ನನ್ನ ಜೀವ ಅಪಾಯಕ್ಕೊಳಗಾದದ್ದು ಅದೊಂದೇ ಬಾರಿಯಲ್ಲ. ಆದರೂ ನನ್ನ ಶರೀರದ ಮೇಲೆ ಆದ ಗಾಯಗಳು ಮನಸ್ಸಿನ ಮೇಲೆ ಆದ ಗಾಯಗಳಿಗಿಂತ ದೊಡ್ಡದಾಗಿರಲಿಲ್ಲ.
ನಾನು 14 ವಯಸ್ಸಿನೊಳಗೆ ವಿಪರೀತ ಕುಡಿಯತೊಡಗಿದೆ. ಕೊನೆಗೆ 17 ವಯಸ್ಸಿನಲ್ಲಿ ಮನೆಬಿಟ್ಟು ಓಡಿಹೋದೆ. ಹೀಗೆ ಕುಡಿತ ನನಗೆ ಸ್ವಾತಂತ್ರ್ಯದ ಅನಿಸಿಕೆಯನ್ನು ಕೊಟ್ಟಿತು ಮತ್ತು ನಾನು ಜಗಳಗಂಟನಾದೆ. ಸ್ಥಳಿಕ ಬಾರ್ಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದೆ. ನನ್ನ ಒಂದೇ ಸಂತೋಷ ಕುಡಿತವಾಗಿತ್ತು. ಒಂದೇ ದಿನದಲ್ಲಿ ನಾನು 5 ಲೀಟರ್ ವೈನ್, ಕೆಲವು ಬಾಟ್ಲಿ ಬಿಯರ್ ಮತ್ತು ತೀಕ್ಷ್ಣಮದ್ಯವನ್ನು ಸಹ ಕುಡಿಯುತ್ತಿದ್ದೆ.
ಮದುವೆಯಾದ ಬಳಿಕವಂತೂ ನನ್ನ ಕುಡಿತ ನನ್ನ ಹೆಂಡತಿಗೆ ದೊಡ್ಡ ಸಮಸ್ಯೆಯಾಯಿತು. ಅಸಮಾಧಾನ ಮತ್ತು ವೈಮನಸ್ಯ ಬೆಳೆಯಿತು. ನಾನು ಆಕೆಯನ್ನೂ ಮಕ್ಕಳನ್ನೂ ಬಡಿಯುತ್ತಿದ್ದೆ. ನಾನು ಬೆಳೆದುಬಂದಿದ್ದ ನಾಶಕಾರಕ ವಾತಾವರಣವನ್ನು ಪುನಃ ತಂದುಬಿಟ್ಟೆ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಖರ್ಚುಮಾಡಿದೆ. ಮನೆಯಲ್ಲಿ ಪೀಠೋಪಕರಣಗಳು ಇಲ್ಲದ್ದರಿಂದ ನಾನು ನನ್ನ ಹೆಂಡತಿ ನೆಲದ ಮೇಲೆ ಮಲಗುತ್ತಿದ್ದೆವು. ನನ್ನ ಜೀವನಕ್ಕೆ ಅರ್ಥವೇ ಇರಲಿಲ್ಲ ಮತ್ತು ನಾನು ಅದನ್ನು ಸುಧಾರಿಸಲು ಪ್ರಯತ್ನಿಸಲೂ ಇಲ್ಲ.
ಹೀಗಿರುವಾಗ ಒಂದು ದಿನ ನಾನು ಯೆಹೋವನ ಸಾಕ್ಷಿಯೊಬ್ಬನೊಂದಿಗೆ ಮಾತಾಡಿದೆ. ಇಷ್ಟೆಲ್ಲ ಕಷ್ಟಾನುಭವಗಳೇಕೆ ಎಂದು ಕೇಳಿದಾಗ ಆ ಸಾಕ್ಷಿಯು ಸಮಸ್ಯೆರಹಿತ ಲೋಕವೊಂದರ ಕುರಿತ ದೇವರ ವಾಗ್ದಾನವನ್ನು ಬೈಬಲಿನಿಂದ ತೋರಿಸಿದ. ಇದು ನನ್ನನ್ನು ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುವ ದೃಢತೆಯನ್ನು ಕೊಟ್ಟಿತು. ನಾನು ಬೈಬಲ್ ಬೋಧನೆಗಳನ್ನು ಅನ್ವಯಿಸಿಕೊಂಡು ಕುಡಿಯುವುದನ್ನು ಕಡಮೆಮಾಡಿದಾಗ ನಮ್ಮ ಕುಟುಂಬ ಜೀವನ ತುಂಬ ಸುಧಾರಿಸಿತು. ಹೀಗಿದ್ದರೂ, ಯೆಹೋವ ದೇವರನ್ನು ಅಂಗೀಕಾರಯೋಗ್ಯವಾಗಿ ಸೇವಿಸಬೇಕಾದರೆ
ನನ್ನ ಮದ್ಯಪಾನ ಸಮಸ್ಯೆಯನ್ನು ಜಯಿಸಲೇಬೇಕೆಂದು ನನಗೆ ಮನದಟ್ಟಾಯಿತು. ಮೂರು ತಿಂಗಳು ಕಠಿಣವಾಗಿ ಹೋರಾಡಿದ ಬಳಿಕ ನಾನು ಮದ್ಯದ ದಾಸ್ಯದಿಂದ ಮುಕ್ತನಾದೆ. ಇದಾಗಿ ಆರು ತಿಂಗಳ ಬಳಿಕ ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನದ ಮೂಲಕ ಅದನ್ನು ಸೂಚಿಸಿದೆ.ಮದ್ಯಸಾರದ ಸಂಕೋಲೆಯಿಂದ ಬಿಡುಗಡೆ ಹೊಂದಿದಾಗ ನನ್ನ ಸಾಲವನ್ನೆಲ್ಲ ತೀರಿಸಲು ಸಾಧ್ಯವಾಯಿತು. ಕ್ರಮೇಣ ನಾನು ಒಂದು ಮನೆಯನ್ನೂ ಕಾರನ್ನೂ ಖರೀದಿಸಿದೆ. ಅದನ್ನು ನಾವು ಕ್ರೈಸ್ತ ಕೂಟಗಳಿಗೆ ಹೋಗಲು ಮತ್ತು ಮನೆಮನೆಯ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಬಳಸುತ್ತೇವೆ. ಅಂತಿಮವಾಗಿ, ನಾನು ಆತ್ಮಗೌರವವನ್ನು ಸಂಪಾದಿಸಿದ್ದೇನೆ.
ಕೆಲವೊಮ್ಮೆ ಸಾಮಾಜಿಕ ಕೂಟದಲ್ಲಿ ನನ್ನನ್ನು ಮದ್ಯಪಾನ ಮಾಡಲು ಇತರರು ಕರೆಯುತ್ತಾರೆ. ನನಗಿರುವ ದೊಡ್ಡ ಹೋರಾಟದ ಕುರಿತು ಅನೇಕರಿಗೆ ಗೊತ್ತಿಲ್ಲ. ಮತ್ತು ಆ ಒಂದೇ ಒಂದು ಸಲದ ಮದ್ಯಪಾನ ನನ್ನನ್ನು ಪುನಃ ಮದ್ಯದ ದಾಸ್ಯಕ್ಕೆ ಕರೆದೊಯ್ಯಬಲ್ಲದು. ಮದ್ಯ ಕುಡಿಯುವ ಚಪಲ ನನ್ನನ್ನು ಇನ್ನೂ ಕಾಡುತ್ತಿದೆ. ಬೇಡವೆಂದು ಹೇಳುವ ಶಕ್ತಿ ದೊರೆಯಲಿಕ್ಕಾಗಿ ಕಟ್ಟಾಸಕ್ತಿಯ ಪ್ರಾರ್ಥನೆ ಮತ್ತು ದೃಢನಿಶ್ಚಯತೆ ಆವಶ್ಯಕ. ನನಗೆ ಬಾಯಾರಿದಾಗ ಯಾವುದೇ ಮದ್ಯಸಾರರಹಿತ ಪಾನೀಯಗಳನ್ನು ಸಾಧ್ಯವಾದಷ್ಟು ಹೆಚ್ಚು ಕುಡಿಯುತ್ತೇನೆ. ಈಗ ಹತ್ತು ವರ್ಷಗಳಿಂದ ನಾನು ಮದ್ಯವನ್ನೇ ಮುಟ್ಟಿಲ್ಲ.
ಮಾನವನಿಗೆ ಅಸಾಧ್ಯವಾದದ್ದು ಯೆಹೋವನಿಗೆ ಸಾಧ್ಯ. ನಾನು ಸಾಧ್ಯವೆಂದು ಎಂದಿಗೂ ನಂಬದಿದ್ದ ಸ್ವಾತಂತ್ರ್ಯವನ್ನು ಅನುಭವಿಸಲು ಆತನು ನನಗೆ ಸಹಾಯಮಾಡಿದ್ದಾನೆ! ನನ್ನ ಬಾಲ್ಯದ ಭಾವಾತ್ಮಕ ಗಾಯಗಳಿಂದ ನಾನಿನ್ನೂ ಕಷ್ಟಪಡುತ್ತಿದ್ದೇನೆ. ನಕಾರಾತ್ಮಕ ಆಲೋಚನೆಗಳ ವಿರುದ್ಧ ನಾನಿನ್ನೂ ಹೋರಾಡುತ್ತ ಇರಬೇಕಾಗಿದೆ. ಆದರೆ ಇನ್ನೊಂದು ಕಡೆ ದೇವರೊಂದಿಗೆ ಸುಸಂಬಂಧ, ನಿಜ ಸ್ನೇಹಿತರಿರುವ ಸಭೆ ಮತ್ತು ನನ್ನ ನಂಬಿಕೆಯಲ್ಲಿ ಪಾಲಿಗರಾಗಿರುವ ಆನಂದಕರ ಕುಟುಂಬವಿರುವುದು ನನಗೆ ಸಂತೋಷ. ಮದ್ಯಪಾನಕ್ಕೆದುರಾಗಿ ನಾನು ಮಾಡುವ ಹೋರಾಟದಲ್ಲಿ ನನ್ನ ಪತ್ನಿಯೂ ಮಕ್ಕಳೂ ನನ್ನನ್ನು ಪೂರ್ಣಹೃದಯದಿಂದ ಬೆಂಬಲಿಸುತ್ತಾರೆ. ನನ್ನ ಹೆಂಡತಿ ಹೇಳುವುದು: “ಈ ಹಿಂದೆ ನನ್ನ ಜೀವನ ‘ನರಕ’ವಾಗಿತ್ತು. ಆದರೆ ನಾನಿಂದು ನನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂತೋಷಭರಿತ ಕುಟುಂಬ ಜೀವನದಲ್ಲಿ ಆನಂದಿಸುತ್ತಿದ್ದೇನೆ. ಇದಕ್ಕಾಗಿ ನಾನು ಯೆಹೋವನಿಗೆ ಅತಿ ಆಭಾರಿ.”—ದತ್ತಲೇಖನ. (g 5/07)
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
14 ವಯಸ್ಸಿನೊಳಗೆ ನಾನು ವಿಪರೀತ ಕುಡಿಯತೊಡಗಿದೆ
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾನವನಿಗೆ ಅಸಾಧ್ಯವಾದದ್ದು ಯೆಹೋವನಿಗೆ ಸಾಧ್ಯ
[ಪುಟ 12ರಲ್ಲಿರುವ ಚೌಕ/ಚಿತ್ರಗಳು]
ಮದ್ಯಸಾರದ ಕುರಿತು ಬೈಬಲಿನ ದೃಷ್ಟಿಕೋನ
◼ ಮದ್ಯ ಸೇವನೆಯನ್ನು ಬೈಬಲ್ ಖಂಡಿಸುವುದಿಲ್ಲ. “ಹೃದಯಾನಂದಕರವಾದ ದ್ರಾಕ್ಷಾಮದ್ಯ” ಮಾನವಕುಲಕ್ಕೆ ದೇವರು ಕೊಟ್ಟಿರುವ ಉಡುಗೊರೆ ಎಂದು ಅದು ವರ್ಣಿಸುತ್ತದೆ. (ಕೀರ್ತನೆ 104:14, 15, NW) ದ್ರಾಕ್ಷಾಲತೆಯು ಸಮೃದ್ಧಿ ಮತ್ತು ಭದ್ರತೆಯ ಸಂಕೇತ ಎಂದು ಸಹ ಬೈಬಲ್ ತಿಳಿಸುತ್ತದೆ. (ಮೀಕ 4:4) ವಾಸ್ತವವಾಗಿ ಯೇಸು ಮಾಡಿದ ಮೊತ್ತಮೊದಲ ಅದ್ಭುತವೇ ಒಂದು ವಿವಾಹದ ಔತಣದಲ್ಲಿ ನೀರನ್ನು ದ್ರಾಕ್ಷಾಮದ್ಯವಾಗಿ ಮಾರ್ಪಡಿಸಿದ್ದಾಗಿತ್ತು. (ಯೋಹಾನ 2:7-9) ಅಪೋಸ್ತಲ ಪೌಲನು ತಿಮೊಥೆಯನಿಗೆ “ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ” ಕುರಿತು ಕೇಳಿದಾಗ ‘ದ್ರಾಕ್ಷಾಮದ್ಯವನ್ನು ಸ್ವಲ್ಪವಾಗಿ ತೆಗೆದುಕೊಳ್ಳುವಂತೆ’ ಸಲಹೆ ನೀಡಿದನು.—1 ತಿಮೊಥೆಯ 5:23, NW.
◼ ಬೈಬಲ್ ಖಂಡಿಸುವುದು ಮದ್ಯಸಾರದ ಮಿತಿಮೀರಿದ ಸೇವನೆಯನ್ನೇ:
“ಕುಡಿಕರು . . . ದೇವರ ರಾಜ್ಯಕ್ಕೆ ಎಂದಿಗೂ ಬಾಧ್ಯರಾಗುವದಿಲ್ಲ.—1 ಕೊರಿಂಥ 6:9-11, “ದ ಜೆರೂಸಲೇಮ್ ಬೈಬಲ್.”
“ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ.”—ಎಫೆಸ 5:18.
“ಅಯ್ಯಯ್ಯೋ ಅನ್ನುವವರು ಯಾರು? ಅಕಟಾ ಎಂದು ಕೂಗಿಕೊಳ್ಳುವವರು ಯಾರು? ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಕೆಂಪೇರಿದ ಕಣ್ಣುಳ್ಳವರು ಯಾರು? ಮಿಶ್ರಮದ್ಯಪಾನಾಸಕ್ತರಾಗಿ ದ್ರಾಕ್ಷಾರಸವನ್ನು ಕುಡಿಯುತ್ತಾ ಕಾಲಹರಣಮಾಡುವವರೇ. ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ [ದ್ರಾಕ್ಷಾಮದ್ಯದ] ಮೇಲೆ ಕಣ್ಣಿಡಬೇಡ. ಅದು [ಗಂಟಲಿನೊಳಗೆ] ಮೆಲ್ಲಗೆ ಇಳಿದುಹೋಗಿ ಆಮೇಲೆ ಹಾವಿನಂತೆ ಕಚ್ಚುತ್ತದೆ, ಹೌದು, ನಾಗದ ಹಾಗೆ ಕಡಿಯುತ್ತದೆ. ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವದು, ಮನಸ್ಸು ವಿಪರೀತಗಳನ್ನು ಹೊರ ಪಡಿಸುವದು.”—ಜ್ಞಾನೋಕ್ತಿ 23:29-33.
ಇದರೊಂದಿಗಿರುವ ಲೇಖನದಲ್ಲಿ ತಿಳಿಸಲ್ಪಟ್ಟ ಪ್ರಕಾರ ಕುಡಿತದ ಸಮಸ್ಯೆಯಿದ್ದ ಕೆಲವರು ವಿವೇಕಯುತವಾಗಿ ಅದನ್ನು ಸಂಪೂರ್ಣವಾಗಿ ತೊರೆದುಬಿಟ್ಟಿದ್ದಾರೆ.—ಮತ್ತಾಯ 5:29.