ಜಾರಿಬೀಳಿಸುವ ಜಾಹೀರಾತುಗಳು
ಜಾರಿಬೀಳಿಸುವ ಜಾಹೀರಾತುಗಳು
ಪೋಲೆಂಡ್ನ ಎಚ್ಚರ! ಲೇಖಕರಿಂದ
ಟೋಮೆಕ್ ಮಂತ್ರಮುಗ್ಧನಾಗಿ ಟಿವಿಯನ್ನು ನೋಡುತ್ತಿದ್ದಾನೆ ಎವೆಯಿಕ್ಕದೆ. ಪೋಷಾಕಿನ ಜಾಹೀರಾತೊಂದು ಕೇಳುಗರನ್ನು ಬಡಿದೆಬ್ಬಿಸುತ್ತಾ “ಇದನ್ನು ತೊಟ್ಟಲ್ಲಿ ನಿಮ್ಮ ಮಗನು ಹೇಗೆ ಕಾಣುವನು ಗೊತ್ತೇ? ದೃಢ ಕಾಯ, ಜಗಜಟ್ಟಿ ಹಾಗೂ ತನ್ನ ಮಿತ್ರರ ಕಣ್ಮಣಿ. ಇಂದೇ ಖರೀದಿಸಿ!” ಎಂದು ಪುಸಲಾಯಿಸುವಾಗ ಟೋಮೆಕ್ ಮೈಯೆಲ್ಲಾ ಕಿವಿಯಾಗಿ ಕೇಳುತ್ತಾನೆ. ಆಗಲೇ ಕೇಳಿದ ಮೋಹಕ ಗಾನವನ್ನು ಗುಣುಗುತ್ತಾ ತಂದೆಯ ಬಳಿಗೆ ಓಡಿ “ಅಪ್ಪಾ, ನನಗದು ಬೇಕೇ ಬೇಕು. ತಂದು ಕೊಡಿ” ಎನ್ನುತ್ತಾನೆ.
◼ ಜಾಹೀರಾತಿನಲ್ಲಿ ತೋರಿಸುವ ವಸ್ತುಗಳನ್ನು ಮಕ್ಕಳು ಅಷ್ಟು ಬಯಸುವುದೇಕೆ? “ಏಕೆಂದರೆ ಅವು ಬೇರೆ ಮಕ್ಕಳ ಬಳಿ ಇವೆ, ಆದ್ದರಿಂದ ತಮಗೂ ಬೇಕು. ಸಮಾನಸ್ಥರಂತೆ ತಮ್ಮ ಅಂತಸ್ತೂ ಇರಬೇಕು” ಎಂದು ಹೇಳುತ್ತಾರೆ ಪೋಲಿಶ್ ಪತ್ರಿಕೆಯಾದ ರೆವ್ಯಾದಲ್ಲಿ ಉಲ್ಲೇಖಿಸಲಾದ ಶಿಕ್ಷಕರು. ಮಕ್ಕಳು ಅಂಗಲಾಚಿ, ಮುಖ ಸಿಂಡರಿಸಿ, ಬಿಕ್ಕಿ ಅಳುತ್ತಾ ಬೇಡುವಾಗ ಹೆತ್ತವರ ಮನಕರಗಿ ಹೋಗುತ್ತದೆ. ಮಕ್ಕಳಿಗೆ ಬೇಕಾದದ್ದನ್ನು ತೆಗೆಸಿಕೊಡುತ್ತಾರೆ.
ಮಕ್ಕಳನ್ನೇ ಗುರಿಯಿಟ್ಟು ಮಾಡುವ ಜಾಹೀರಾತು ಅಷ್ಟು ಮೋಸಕರವೇಕೆ? ಏಕೆಂದರೆ ಅದು “ವಸ್ತುಗಳ ಬೆಲೆಯೆಷ್ಟು, ಗುಣಮಟ್ಟವೇನು ಅಥವಾ ಉಪಯುಕ್ತತೆ ಎಷ್ಟು ಎಂಬುದರ ಕುರಿತು ಏನನ್ನೂ ತಿಳಿಸುವುದಿಲ್ಲ” ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಯೊಲಾಂಟಾ ವಾನ್ಸ್. “ಭಾವನಾತ್ಮಕವಾಗಿ ಒಳಗೂಡಿಸುವುದೇ” ಜಾಹೀರಾತಿನ ಮುಖ್ಯಉದ್ದೇಶ. “ಚಿಕ್ಕ ಮಕ್ಕಳು ಒಂದು ಜಾಹೀರಾತಿನಲ್ಲಿ ಹೇಳಲಾಗುವ ಕಥೆಯನ್ನು ವಿಶ್ಲೇಷಿಸಿ ನೋಡುವುದಿಲ್ಲ . . . ಅದರಲ್ಲಿ ನೀಡಲಾದ ಮಾಹಿತಿಯನ್ನು ತಮಗಿರುವ ಐಹಿಕ ಜ್ಞಾನದೊಂದಿಗೆ ಹೋಲಿಸಿ ನೋಡುವುದಿಲ್ಲ” ಎಂದು ವಾನ್ಸ್ ಗಮನಿಸಿದರು. ಮಕ್ಕಳು ಪ್ರಯತ್ನಿಸಿದರೂ ಕೂಡ ಒಂದು ವಸ್ತುವಿನ ಯುಕ್ತಾಯುಕ್ತತೆಯನ್ನು ನಿಷ್ಕೃಷ್ಟವಾಗಿ ತಿಳಿಯಲು ಅವರಿಗಿರುವ ತಿಳಿವಳಿಕೆಯು ಕೊಂಚವೇ.
ನಿಮ್ಮ ಮಕ್ಕಳು ಜಾಹೀರಾತಿನ ಮೋಸಕರ ಬಲೆಯೊಳಗೆ ಬೀಳದಂತೆ ನೀವು ಹೇಗೆ ಕಾಪಾಡಬಲ್ಲಿರಿ? ಮೊದಲನೆಯದಾಗಿ, “ಮಕ್ಕಳಿಗೆ ಇದನ್ನು ಕಲಿಸಲು ನೀವು ಸಮಯ ತಕ್ಕೊಳ್ಳಬೇಕು. ಏನಂದರೆ ಒಬ್ಬ ವ್ಯಕ್ತಿಯ ಗೌರವಾರ್ಹತೆಯು ಅವನು ತೊಡುವ ಸೂಟು-ಬೂಟುಗಳಿಂದ ಅಳೆಯಲ್ಪಡುವುದಿಲ್ಲ ಎಂದು ಯಾವಾಗಲೂ ವಿವರಿಸುತ್ತಾ ಇರಬೇಕು” ಎನ್ನುತ್ತದೆ ರೆವ್ಯಾ ಪತ್ರಿಕೆ. ನವನವೀನ ಆಟಿಕೆಗಳಿಲ್ಲದಿದ್ದರೂ ಸಂತಸದ ಬಾಲ್ಯವು ಅವರದ್ದಾಗಿರಸಾಧ್ಯವಿದೆ ಎಂದು ಮಗುವಿಗೆ ತಿಳಿದಿರಲಿ. ಎರಡನೆಯದಾಗಿ, ಜಾಹೀರಾತುಗಳು ತಮ್ಮ ಮಕ್ಕಳನ್ನು ಹೇಗೆ ಮೋಸಕರವಾಗಿ ಪ್ರಭಾವಿಸಬಹುದು ಎಂದು ಹೆತ್ತವರು ತಾವೇ ತಿಳಿದಿರಬೇಕು. “ಜಾಹೀರಾತು ನಮ್ಮ ಮಗುವಿಗೆ ಯಾವುದು ಒಳ್ಳೇದು ಯಾವುದು ಕೆಟ್ಟದು ಎಂದು ಆಜ್ಞೆವಿಧಿಸದಂತೆ ಬಿಡದಿರುವುದೇ” ಮುಖ್ಯ ಕೀಲಿಕೈ ಎಂದು ವಾನ್ಸ್ ಶಿಫಾರಸ್ಸು ಮಾಡುತ್ತಾರೆ.
ಕೊನೆಯದಾಗಿ, ಹೆತ್ತವರೆಲ್ಲರೂ ಬೈಬಲ್ನಲ್ಲಿ ಅಡಕವಾಗಿರುವ ಬುದ್ಧಿವಾದದಿಂದ ಪ್ರಯೋಜನ ಹೊಂದಬಲ್ಲರು. ಅಪೊಸ್ತಲ ಯೋಹಾನನು ಬರೆದದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.”—1 ಯೋಹಾನ 2:15, 16.
ಹೆಚ್ಚಿನ ಜಾಹೀರಾತುಗಳು ಚಿಕ್ಕವರು ದೊಡ್ಡವರೆನ್ನದೆ ಎಲ್ಲರನ್ನು ‘ಕಣ್ಣಿನಾಶೆಗೆ’ ಮತ್ತು ‘ಬದುಕುಬಾಳಿನ ಡಂಬಕ್ಕೆ’ ಸೆಳೆಯುತ್ತದೆಂದು ನೀವು ಒಪ್ಪುವುದಿಲ್ಲವೇ? ಆಸಕ್ತಿಕರವಾಗಿ ಅಪೊಸ್ತಲ ಯೋಹಾನನು ತನ್ನ ಬುದ್ಧಿವಾದವನ್ನು ಮುಂದುವರಿಸುತ್ತಾ ಬರೆದದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.
ತಮ್ಮ ಮಕ್ಕಳೊಂದಿಗೆ ಭಕ್ತಿವರ್ಧಕ ಸಂಭಾಷಣೆಯಲ್ಲಿ ಕ್ರಮವಾಗಿ ಸಮಯ ಕಳೆಯುವ ಹೆತ್ತವರು ಅವರಲ್ಲಿ ದೈವಿಕ ಮೂಲತತ್ತ್ವಗಳನ್ನು ಮತ್ತು ಸಾರ್ಥಕವಾದ ಮೌಲ್ಯಗಳನ್ನು ಬೇರೂರಿಸಬಲ್ಲರು. (ಧರ್ಮೋಪದೇಶಕಾಂಡ 6:5-7) ಆಗ ಮಕ್ಕಳು ಈ ಭ್ರಷ್ಟ ಲೋಕದ ಜಾಹೀರಾತುಗಳಿಂದ ಬಹು ಸುಲಭವಾಗಿ ಜಾರಿಬೀಳರು ಮತ್ತು ತಮ್ಮ ಕಣ್ಣಿಗೆ ಕಂಡ ವಸ್ತುಗಳೆಲ್ಲಾ ತಮಗೆ ಬೇಕೆಂದೂ ಹೆತ್ತವರನ್ನು ಕಾಡಿಸರು. (g 12/08)