ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ತಿಳಿದಿರಬೇಕು?
ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ತಿಳಿದಿರಬೇಕು?
ಕಂಪ್ಯೂಟರನ್ನು ಒಂದು ಸೂಕ್ತ ಜಾಗದಲ್ಲಿ ಅಂದರೆ ಮನೆಯ ನಡುಕೋಣೆಯಲ್ಲೊ ಎಲ್ಲರಿಗೆ ಕಾಣುವಂತೆಯೊ ಇಟ್ಟಲ್ಲಿ ತಮ್ಮ ಮಕ್ಕಳನ್ನು ಇಂಟರ್‌ನೆಟ್ (ಅಂತರ್ಜಾಲ) ಅಪಾಯಗಳಿಂದ ತಪ್ಪಿಸಬಹುದೆಂದು ಮುಂಚೆ ಜನರು ನೆನಸುತ್ತಿದ್ದರು. ಮಕ್ಕಳು ಅಪಾಯಕರ ವೆಬ್‌ಸೈಟ್‌ಗಳನ್ನು (ಜಾಲತಾಣ) ತೆರೆಯದಂತೆ ಇದು ತಡೆಯಬಹುದೆಂದು ಜನರ ಎಣಿಕೆಯಾಗಿತ್ತು. ಆ ಭಾವನೆಯು ಇಂದಿಗೂ ಸಮಂಜಸ. ಹೀಗಿರುವಾಗ, ಮಕ್ಕಳಿಗೆ ಅವರ ಬೆಡ್ ರೂಮ್‌ನ ಏಕಾಂತತೆಯಲ್ಲಿ ಇಂಟರ್‌ನೆಟ್ ವೀಕ್ಷಿಸುವ ಅವಕಾಶಕೊಡುವದು ವ್ಯವಹಾರಜ್ಞಾನಕ್ಕೆ ವಿರುದ್ಧ. ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿಡುವ ನಿರ್ಣಾಯಕ ಹೆಜ್ಜೆ ಇದಲ್ಲ. ಈ ದಿನಗಳಲ್ಲಿ ವಾಯರ್ಲೆಸ್ ಕನೆಕ್ಷನ್ ಲಭ್ಯವಿರುವುದರಿಂದ ಯುವಕಯುವತಿಯರು ತಮ್ಮ ಕಂಪ್ಯೂಟರನ್ನು ತಾವು ಹೋಗುವಲ್ಲೆಲ್ಲ ಒಯ್ಯಬಲ್ಲರು. ಅನೇಕ ಸೆಲ್‌ಫೋನ್‌ಗಳಲ್ಲೂ ಆನ್‌ಲೈನ್ ಸೌಕರ್ಯವಿದೆ. ಅದಲ್ಲದೆ ಇಂಟರ್‌ನೆಟ್ ಕೆಫೆ, ಇಂಟರ್‌ನೆಟ್ ಕೀಆಸ್ಕ್ಸ್, ಲೈಬ್ರರಿಗಳು ಅಥವಾ ಸ್ನೇಹಿತರ ಮನೆಗಳಲ್ಲಿ ಅವರು ಇದನ್ನು ಉಪಯೋಗಿಸಬಲ್ಲರು. ಇಂಥ ಎಲ್ಲಾ ಸೌಲಭ್ಯಗಳಿರುವುದರಿಂದ ಹೆತ್ತವರ ಕಣ್ತಪ್ಪಿಸಿ ತಮಗೆ ಇಷ್ಟ ಬಂದ ವಿಷಯಗಳನ್ನು ಇಂಟರ್‌ನೆಟ್‌ನಲ್ಲಿ ನೋಡುವುದು ಮಕ್ಕಳಿಗೆ ಎಷ್ಟು ಸುಲಭವೆಂದು ನಾವು ಕಾಣಬಲ್ಲೆವು.
ಅನೇಕ ಯೌವನಸ್ಥರು ಹೆಚ್ಚು ಆಕರ್ಷಿಸಲ್ಪಡುವ ಕೆಲವು ಆನ್‌ಲೈನ್ ಚಟುವಟಿಕೆಗಳನ್ನು ಮತ್ತು ಅವುಗಳಿಂದ ಬರುವ ಅಪಾಯಗಳನ್ನು ಪರಿಗಣಿಸಿ.
ಇ-ಮೇಲ್ಸ್
ಅಂದರೇನು? ಎಲೆಕ್ಟ್ರಾನಿಕ್ ಸಾಧನದ ಮೂಲಕ ಪತ್ರ ವ್ಯವಹಾರ ಅಥವಾ ವಿದ್ಯುನ್ಮಾನ ಅಂಚೆ.
ಆಕರ್ಷಕವೇಕೆ? ಇದು, ಬಂಧುಮಿತ್ರರಿಗೆ ಕ್ಷಣಾರ್ಧದಲ್ಲಿ ಮತ್ತು ಅಲ್ಪವ್ಯಯದಲ್ಲಿ ಪತ್ರ ಕಳುಹಿಸುವ ಸುಲಭ ವಿಧಾನ.
ಏನು ತಿಳಿದಿರಬೇಕು? ಹೆಚ್ಚಾಗಿ ‘ಸ್ಪ್ಯಾಮ್’ ಎಂದು ಕರೆಯಲ್ಪಡುವ ಬೇಡವಾದ ಇ-ಮೇಲ್‌ಗಳು ಪೀಡೆಯೇ ಹೊರತು ಬೇರೇನೂ ಅಲ್ಲ. ಅವುಗಳಲ್ಲಿ ಅಸಭ್ಯ ಭಾವನೆಗಳನ್ನು ಮೂಡಿಸುವ ಅಥವಾ ತೀರಾ ಹೇವರಿಕೆಯನ್ನು ಉಂಟುಮಾಡುವ ವಿಷಯಗಳಿರುತ್ತವೆ. ಮೆಸೇಜ್ ಲಿಂಕ್‌ಗಳು, ಮುಗ್ಧ ಮಗುವು ಸೇರಿದಂತೆ ಬಳಕೆಗಾರರನ್ನು ತಮ್ಮೆಲ್ಲಾ ಖಾಸಗಿ ವಿಷಯಗಳ ಕುರಿತು ಬಾಯ್ಬಿಡುವಂತೆ ಮಾಡುತ್ತದೆ. ಇದರಿಂದ ನಿಮ್ಮ ಗುರುತು ಬಯಲಾಗಿ ಕಳ್ಳತನಕ್ಕೆ ನೀವೇ ಅವಕಾಶ ನೀಡುತ್ತೀರಿ. ಇಂಥ ಇ-ಮೇಲ್‌ಗಳಿಗೆ, ‘ಹೀಗೆಲ್ಲಾ ಇನ್ನು ಮುಂದೆ ಮೆಸೇಜ್ ಕಳುಹಿಸಲೇಬಾರದು’ ಎಂದು ಖಡಾಖಂಡಿತವಾಗಿ ತಿಳಿಸುವುದಕ್ಕಾಗಿಯೂ ಪ್ರತ್ಯುತ್ತರ ನೀಡಕೂಡದು. ಏಕೆಂದರೆ ಅದರಿಂದ ಬಳಕೆದಾರರಿಗೆ ಒಂದು ಆಕ್ಟೀವ್ ಇ-ಮೇಲ್ ಅಡ್ರೆಸ್ ಇದೆಯೆಂದು ಕಳ್ಳಕಾಕರು ಖಚಿತಮಾಡಿಕೊಳ್ಳುತ್ತಾರೆ. ಅವರು ಇನ್ನಷ್ಟು ಬೇಡವಾದ ಇ-ಮೇಲ್‌ಗಳನ್ನು ಕಳುಹಿಸುತ್ತಲೇ ಇರಬಹುದು.
ವೆಬ್‌ಸೈಟ್ಸ್
ಅಂದರೇನು? ಶೈಕ್ಷಣಿಕ, ಔದ್ಯೋಗಿಕ, ವೈಯಕ್ತಿಕ ಸಂಘಸಂಸ್ಥೆಗಳು ತಯಾರಿಸಿ ನಡಿಸಿಕೊಂಡು ಬರುವ ಎಲೆಕ್ಟ್ರಾನಿಕ್ ಮಾಹಿತಿ ಸಂಗ್ರಹವೇ ವೆಬ್‌ಸೈಟ್ (ಜಾಲತಾಣ).
ಆಕರ್ಷಕವೇಕೆ? ಲಕ್ಷಾಂತರ ವೆಬ್‌ಸೈಟ್‌ಗಳು ಲಭ್ಯವಿರುವುದರಿಂದ ಯುವಜನರಿಗೆ ಶಾಪಿಂಗ್‌ಗಾಗಿ, ಸಂಶೋಧನೆಗಾಗಿ, ಮಿತ್ರರನ್ನು ಸಂಪರ್ಕಿಸಲಿಕ್ಕಾಗಿ, ಆಟವಾಡಲು ಮತ್ತು ಸಂಗೀತ ಕೇಳಲು ಅಥವಾ ಅವನ್ನು ಡೌನ್‌ಲೋಡ್ ಮಾಡಲು ಕೊನೆಮೊದಲಿಲ್ಲದ ಅವಕಾಶಗಳಿವೆ.
ಏನು ತಿಳಿದಿರಬೇಕು? ವೆಬ್‌ಸೈಟ್‌ಗಳು ಎಲ್ಲಾತರದ ದುಷ್ಟಹೇತುಗಳ ಜನರಿಂದ ಸ್ವಾರ್ಥಕ್ಕಾಗಿ ದುರುಪಯೋಗಿಸಲ್ಪಡುತ್ತವೆ. ಹೆಚ್ಚಿನ ವೆಬ್‌ಸೈಟ್‌ಗಳು ಲೈಂಗಿಕ ಕ್ರಿಯೆಗಳನ್ನು ಮುಚ್ಚುಮರೆಯಿಲ್ಲದೆ ತೋರಿಸುತ್ತವೆ. ಏನೂ ಅರಿಯದವರು ಆಕಸ್ಮಿಕವಾಗಿ ಇಂಥ ದೃಶ್ಯಗಳನ್ನು ಎದುರಾಗುವುದು ಬಹುಸುಲಭ. ಉದಾಹರಣೆಗೆ, ಅಮೆರಿಕದಲ್ಲಿ 8-16ರ ವಯಸ್ಸಿನವರ ಮಧ್ಯೆ ನಡಿಸಿದ ಸರ್ವೇಯಲ್ಲಿ 90 ಪ್ರತಿಶತ ಯುವಕರು ಹೇಳಿದ ಪ್ರಕಾರ ಅವರು ಆಕಸ್ಮಿಕವಾಗಿ ಅಶ್ಲೀಲ ಚಿತ್ರಗಳನ್ನು ನೋಡಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಶಾಲಾ ಹೋಮ್‌ವರ್ಕ್ ಮಾಡುತ್ತಿರುವಾಗಲೇ!
ಹದಿಹರೆಯದ ಮಕ್ಕಳು ಜೂಜಾಟದ ಚಾಳಿಗೆ ಬೀಳಲು ಸಹ ವೆಬ್‌ಸೈಟ್‌ಗಳು ಸುಲಭವಾಗಿ ದಾರಿಮಾಡುತ್ತವೆ. ಕೆನಡಾದಲ್ಲಿ, 10-11ನೆಯ ಕ್ಲಾಸಿನಲ್ಲಿರುವ ಹುಡುಗರ ಮಧ್ಯೆ ತೆಗೆದ ಸರ್ವೇಯಲ್ಲಿ ಸುಮಾರು ನಾಲ್ವರಲ್ಲಿ ಒಬ್ಬರು ತಾವು ಅಂಥ ಸೈಟ್‌ಗಳನ್ನು ಬಳಸುತ್ತೇವೆಂದು ಒಪ್ಪಿದರು. ಆನ್‌ಲೈನ್ ಜೂಜಾಟವು ಅತಿ ಚಟಹಿಡಿಸುವ ಗೀಳಾಗಿರುವುದರಿಂದ ಪರಿಣತರು ಚಿಂತೆಗೀಡಾಗಿರುವುದು ಗ್ರಾಹ್ಯ. ಅದಲ್ಲದೆ “ಆಹಾರಮಾಂದ್ಯ ಜೀವನಶೈಲಿ” * ಅನ್ನು ಬಣ್ಣಿಸುವ ‘ಪ್ರೊ-ಯಾನ’ ಎಂಬ ವೆಬ್‌ಸೈಟ್‌ಗಳು ಸಹ ಇವೆ. ಈ ಮಧ್ಯೆ, ಅಲ್ಪ ಸಂಖ್ಯಾತ ಧರ್ಮಗಳನ್ನು ಮತ್ತು ಕುಲಗುಂಪುಗಳನ್ನು ಗುರಿಯಾಗಿರಿಸಿ ದ್ವೇಷಹರಡಿಸುವ ವೆಬ್‌ಸೈಟ್‌ಗಳೂ ಇವೆ. ಇನ್ನು ಕೆಲವು ಸೈಟ್‌ಗಳು ಬಾಂಬ್ ತಯಾರಿಕೆ, ವಿಷ ಬೆರಸುವಿಕೆ, ಭಯೋತ್ಪಾದನಾ ಕೃತ್ಯಗಳನ್ನು ನಡೆಸುವಿಕೆ ಮುಂತಾದವುಗಳನ್ನು ಕಲಿಸಿಕೊಡುತ್ತವೆ. ಆನ್‌ಲೈನ್ ಗೇಮ್ಸ್‌ಗಳಲ್ಲಿ ಅತಿರೇಕ ಹಿಂಸಾಚಾರ ಮತ್ತು ಬೀಭತ್ಸ ದೃಶ್ಯಗಳನ್ನು ತೋರಿಸಲಾಗುತ್ತದೆ.
ಚ್ಯಾಟ್ ರೂಮ್ಸ್
ಅಂದರೇನು? ಒಂದು ನಿರ್ದಿಷ್ಟವಾದ ಅಥವಾ ಇಷ್ಟದ ವಿಷಯದ ಕುರಿತು ಟೈಪ್ ಮಾಡಿ ಸಂದೇಶ ಕಳುಹಿಸುತ್ತಾ ಮಾತಾಡುವುದು.
ಆಕರ್ಷಕವೇಕೆ? ಹಿಂದೆಂದೂ ಮುಖಾಮುಖಿ ಭೇಟಿಮಾಡಿರದ ಆದರೆ ಸಮಾನ ಆಸಕ್ತಿ ಹೊಂದಿರುವ ಹಲವಾರು ವ್ಯಕ್ತಿಗಳೊಂದಿಗೆ ನಿಮ್ಮ ಮಕ್ಕಳು ಸಂವಾದಿಸಬಲ್ಲರು.
ಏನು ತಿಳಿದಿರಬೇಕು? ಮಕ್ಕಳನ್ನು ಆನ್‌ಲೈನ್ ಮೂಲಕ ಸೆಳೆದುಕೊಳ್ಳಲು ಅಥವಾ ಲೈಂಗಿಕ ಸಂಪರ್ಕಕ್ಕಾಗಿ ಲೂಟಿಕೋರರು ಸಾಮಾನ್ಯವಾಗಿ ಚ್ಯಾಟ್ ರೂಮ್‌ಗಳನ್ನು ಬಳಸುತ್ತಾರೆ. ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಮಾಡುತ್ತಿರುವುದಾದರೂ ಏನು? ಎಂಬ ಪುಸ್ತಕಕ್ಕಾಗಿ ಇಂಟರ್‌ನೆಟ್ ಸುರಕ್ಷೆಯ ಬಗ್ಗೆ ರಿಸರ್ಚ್ ಮಾಡುತ್ತಿದ್ದ ಲೇಖಕಿಗೆ ಏನು ಸಂಭವಿಸಿತ್ತೆಂದು ಗಮನಿಸಿ. ಸಂಶೋಧನೆಯ ಭಾಗವಾಗಿ ಅವಳು ತನ್ನನ್ನು 12 ವರ್ಷದ ಹುಡುಗಿಯಾಗಿ ಆನ್‌ಲೈನ್‌ನಲ್ಲಿ ಪರಿಚಯಿಸಿಕೊಂಡಳು. ಆ ಪುಸ್ತಕ ವರದಿಸುವುದು: “ತಕ್ಷಣವೇ ಯಾರೋ ಒಬ್ಬನು ಅವಳನ್ನು ಖಾಸಗಿ ಚ್ಯಾಟ್ ರೂಮ್‌ನೊಳಗೆ ಆಮಂತ್ರಿಸಿದನು. ಖಾಸಗಿ ಚ್ಯಾಟ್ ರೂಮನ್ನು ಪ್ರವೇಶಿಸುವುದು ಹೇಗೆಂದು ತನಗೆ ಗೊತ್ತಿಲ್ಲವೆಂದಳು ಅವಳು. ಸ್ನೇಹಿತನಾಗಿ ನಟಿಸಿದ ಆ ವ್ಯಕ್ತಿ ಅವಳನ್ನು ಹೆಜ್ಚೆ ಹೆಜ್ಜೆಯಾಗಿ ಸೀದಾ ಚ್ಯಾಟ್ ರೂಮ್‌ಗೆ ನಡೆಸಿದನು. ಬಳಿಕ ಅವಳಿಗೆ ಆನ್‌ಲೈನ್ ಸೆಕ್ಸ್ ಬೇಕಿತ್ತೋ ಎಂದು ಅವನು ತಿಳಿಯಲು ಬಯಸಿದನು.”
ಇನ್‌ಸ್ಟಂಟ್ ಮೆಸೇಜಸ್
ಅಂದರೇನು? ಟೈಪ್ ಮಾಡಿ ಸಂದೇಶ ಕಳುಹಿಸುತ್ತಾ ಇಬ್ಬರು ಅಥವಾ ಹೆಚ್ಚು ಮಂದಿಯೊಂದಿಗೆ ನೇರ ಸಂಭಾಷಣೆ ಮಾಡುವುದು.
ಆಕರ್ಷಕವೇಕೆ? ಸಂದೇಶವನ್ನು ಆ ಕ್ಷಣವೇ ಕಳುಹಿಸಿ ಸಂಭಾಷಿಸುವುದರಿಂದ ಬಳಕೆದಾರನು ತಾನು ನಿರ್ಮಿಸಿದ ಕಾಂಟ್ಯಾಕ್ಟ್ ಲಿಸ್ಟಿನಿಂದ ತಾನು ಮಾತಾಡಲು ಬಯಸುವ ಸ್ನೇಹಿತರನ್ನು ಆರಿಸಿಕೊಳ್ಳಸಾಧ್ಯವಿದೆ. ಕೆನೇಡಿಯನ್ ಅಧ್ಯಯನವೊಂದು ವರದಿಸುವ ಪ್ರಕಾರ, 16-17 ವಯಸ್ಸಿನವರಲ್ಲಿ 84 ಪ್ರತಿಶತ ಮಂದಿ ತಮ್ಮ ಸ್ನೇಹಿತರಿಗೆ ಇನ್‌ಸ್ಟಂಟ್ ಮೆಸೇಜಸ್ ಕಳುಹಿಸುತ್ತಾರೆಂಬದು ಮತ್ತು ಪ್ರತಿದಿನ ಒಂದು ತಾಸಿಗಿಂತಲೂ ಹೆಚ್ಚು ಸಮಯ ಅದರಲ್ಲಿ ಕಳೆಯುತ್ತಾರೆಂಬುದೇನೂ ಆಶ್ಚರ್ಯವಲ್ಲ.
ಏನು ತಿಳಿದಿರಬೇಕು? ನಿಮ್ಮ ಮಕ್ಕಳು ಅಧ್ಯಯನ ಮಾಡುತ್ತಿರುವಾಗ ಅಥವಾ ಏಕಾಗ್ರತೆಯನ್ನು ಅವಶ್ಯಪಡಿಸುವ ಇನ್ನೊಂದು ಚಟುವಟಿಕೆಯಲ್ಲಿ ತೊಡಗಿರುವಾಗ ಇನ್‌ಸ್ಟಂಟ್ ಮೆಸೇಜಸ್ ಸಂಭಾಷಣೆಗಳು ಅಪಕರ್ಷಣೆಯಾಗಿರಬಲ್ಲವು. ಅದಲ್ಲದೆ, ನಿಮ್ಮ ಮಗ ಅಥವಾ ಮಗಳು ಯಾರೊಂದಿಗೆ ಸಂಭಾಷಿಸುತ್ತಾರೆಂದು ನಿಮಗೆ ಗೊತ್ತಾಗುವುದಾದರೂ ಹೇಗೆ? ಅವರು ಏನು ಸಂಭಾಷಿಸುತ್ತಾರೆಂದೂ ನಿಮಗೆ ಕೇಳಿಸುವುದಿಲ್ಲವಲ್ಲಾ.
ಬ್ಲಾಗ್ಸ್
ಅಂದರೇನು? ಬ್ಲಾಗ್ಸ್ ಎಂದರೆ ಆನ್‌ಲೈನ್ ಡೈರಿ.
ಆಕರ್ಷಕವೇಕೆ? ಯುವಕರಿಗೆ ತಮ್ಮ ಆಲೋಚನೆ, ಅಭಿರುಚಿ ಮತ್ತು ಚಟುವಟಿಕೆಗಳ ಕುರಿತು ಬರೆದು ತಿಳಿಸುವ ಸಂದರ್ಭವನ್ನು ಬ್ಲಾಗಿಂಗ್ ಕೊಡುತ್ತದೆ. ಹೆಚ್ಚಿನ ಬ್ಲಾಗ್‌ಗಳಲ್ಲಿ ಓದುಗರಿಗೂ ತಮ್ಮ ಹೇಳಿಕೆಗಳನ್ನು ಬರೆಯಲು ಖಾಲಿ ಜಾಗವಿರುತ್ತದೆ. ತಾವು ಬರೆದ ವಿಷಯಗಳಿಗೆ ಬೇರೆಯಾರಾದರೂ ಪ್ರತಿಕ್ರಿಯೆ ತೋರಿಸುತ್ತಿದ್ದಾರೆಂದು ತಿಳಿಯುವಾಗ ಮಕ್ಕಳಿಗೆ ಖುಷಿಯೋ ಖುಷಿಯಾಗುತ್ತದೆ.
ಏನು ತಿಳಿದಿರಬೇಕು? ಬ್ಲಾಗ್‌ಗಳು ಸಾರ್ವಜನಿಕರ ಓದುವಿಕೆಗಾಗಿ ತೆರೆದಿರುತ್ತವೆ. ಕೆಲವು ಮಕ್ಕಳು ಅಜಾಗರೂಕರಾಗಿ ತಮ್ಮ ಕುರಿತ ಮಾಹಿತಿಯನ್ನು ಅದರಲ್ಲಿ ಕೊಡುವುದರಿಂದ ಅವರ ಕುಟುಂಬ ಪರಿಚಯ, ಶಾಲೆ ಮತ್ತು ಮನೆಯ ವಿಳಾಸ ಬಯಲಾಗಸಾಧ್ಯವಿದೆ. ಬ್ಲಾಗ್‌ಗಳು ಅದನ್ನು ಬರೆದವರ ಸತ್ಕೀರ್ತಿಯನ್ನೂ ಕೆಡಿಸಬಹುದು. ಉದಾಹರಣೆಗೆ, ಅರ್ಜಿದಾರನನ್ನು ಕೆಲಸಕ್ಕೆ ಇಡಬೇಕೋ ಬಾರದೋ ಎಂಬುದನ್ನು ಪರಿಗಣಿಸುವಾಗ ಕೆಲವು ಮಾಲೀಕರು ಅವನ ಬ್ಲಾಗ್ ಅನ್ನು ಪರೀಕ್ಷಿಸುತ್ತಾರೆ.
ಆನ್‌ಲೈನ್ ಸೋಷಲ್ ನೆಟ್‌ವರ್ಕ್
ಅಂದರೇನು? ಈ ನೆಟ್‌ವರ್ಕ್‌ನಲ್ಲಿರುವ ಸೈಟ್ಸ್ ಯುವಕರಿಗೆ ವೆಬ್ ಪೇಜ್ ನಿರ್ಮಿಸಲು ಮತ್ತು ಅದನ್ನು ಚಿತ್ರಗಳಿಂದ, ವಿಡಿಯೋಗಳಿಂದ ಮತ್ತು ಬ್ಲಾಗ್‌ಗಳಿಂದ ತುಂಬಿಸಲು ಅವಕಾಶ ಕೊಡುತ್ತದೆ.
ಆಕರ್ಷಕವೇಕೆ? ಯುವಕರು ವೆಬ್ ಪೇಜನ್ನು ನಿರ್ಮಿಸಿ, ವರ್ಧಿಸುತ್ತಾರೆ. ಅದರಲ್ಲಿ ಅವರಿಗೆ ತಮ್ಮ ಪರಿಚಯದ ವಿವರವನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಆನ್‌ಲೈನ್ ಸೋಷಲ್ ನೆಟ್‌ವರ್ಕ್ ಯುವಜನರಿಗೆ ಅನೇಕಾನೇಕ ಹೊಸ “ಸ್ನೇಹಿತರು” ಎಂದೆಣಿಸಿಕೊಳ್ಳುವ ಜನರನ್ನು ಸಂಪರ್ಕಿಸಲು ಅವಕಾಶ ಕೊಡುತ್ತದೆ.
ಏನು ತಿಳಿದಿರಬೇಕು? “ಸೋಷಲ್ ನೆಟ್‌ವರ್ಕಿಂಗ್ ಸೈಟ್ ಒಂದು ಆನ್‌ಲೈನ್ ಪಾರ್ಟಿಯಂತಿದೆ. ಹೆದರಿಕೆ ಹುಟ್ಟಿಸುವ ವಿಚಿತ್ರ ವ್ಯಕ್ತಿಗಳು ಅಲ್ಲಿ ಕಂಡುಬರುತ್ತಾರೆ” ಎಂದು ಹೇಳುತ್ತಾಳೆ ಜೊಆನಾ ಎಂಬ ಹುಡುಗಿ. ಸೋಷಲ್ ನೆಟ್‌ವರ್ಕ್‌ಗಳಲ್ಲಿ ಕೊಟ್ಟಿರುವ ವೈಯಕ್ತಿಕ ಮಾಹಿತಿಗಳನ್ನು ದುಷ್ಕರ್ಮಿಗಳಾದ ಯುವಕರು ಹಾಗೂ ಪ್ರಾಯಸ್ಥರು ತಮ್ಮ ದುಷ್ಕಾರ್ಯಗಳಿಗಾಗಿ ಬಳಸುತ್ತಾರೆ. ಹೀಗೆ ಇಂಟರ್‌ನೆಟ್ ಸುರಕ್ಷಾ ಪರಿಣತರಾದ ಪೇರಿ ಅಫ್‌ತಾಬ್, ಅಂಥ ಸೈಟ್‌ಗಳನ್ನು “ವಿಕೃತ ಕಾಮಿಗಳಿಗಾಗಿರುವ ಬಿಗ್ ಬಜಾರ್” ಎಂದು ಕರೆಯುತ್ತಾರೆ.
ಅಷ್ಟಲ್ಲದೆ, ಇಂಟರ್‌ನೆಟ್ ಸ್ನೇಹಗಳು ಕಪಟ ಸ್ನೇಹಗಳಾಗಿರುವ ಸಂಭವವಿದೆ. ಕೆಲವು ಯುವಕರು ತಾವೆಂದೂ ಮುಖಾಮುಖಿಯಾಗಿ ಭೇಟಿಯಾಗಿರದ ಜನರ ರಾಶಿಗಟ್ಟಲೆ ವಿಳಾಸಗಳನ್ನು ತಮ್ಮ ವೆಬ್ ಪೇಜುಗಳಲ್ಲಿ ಜಮಾಯಿಸುತ್ತಾರೆ. ಯಾಕೆಂದರೆ ತಮ್ಮ ಸೈಟುಗಳನ್ನು ತೆರೆಯುವ ಜನರಿಗೆ ತಾವೆಷ್ಟು ಪ್ರಸಿದ್ಧರೆಂದು ತೋರಿಸಿಕೊಳ್ಳಲಿಕ್ಕಾಗಿಯೇ. ಇದರ ಕುರಿತು ಜನರೇಶನ್ ಮೈಸ್ಪೇಸ್ ಎಂಬ ತನ್ನ ಪುಸ್ತಕದಲ್ಲಿ ಕ್ಯಾಂಡಿಸ್ ಕೆಲ್ಸೀ ಬರೆಯುತ್ತಾ ಹೇಳುವುದು: ನಿಜವಾಗಿ ಏನು ಸಂಭವಿಸುತ್ತಿದೆಯೆಂದರೆ “ಒಬ್ಬನ ಸಾಮಾಜಿಕ ಯೋಗ್ಯತೆಯನ್ನು ಎಷ್ಟು ಜನರು ಅವನನ್ನು ಇಷ್ಟೈಸುತ್ತಾರೆಂಬ ಕಾರಣ ಮಾತ್ರದಿಂದ ತೀರ್ಮಾನಿಸುವುದಾಗಿದೆ.” ಆಕೆ ಮತ್ತೂ ಹೇಳುವುದು, “ಈ ಲೇವಾದೇವಿ ವಿಧಾನವು ನಮ್ಮ ಮಕ್ಕಳನ್ನು ಅಧೋಗತಿಗೆ ನಡೆಸುತ್ತದೆ. ಮತ್ತು ಯಾವ ರೀತಿಯಲ್ಲಾದರೂ ತಮಗಾಗಿ ಹೆಚ್ಚು ಮಿತ್ರರನ್ನು ಗಳಿಸಿಕೊಳ್ಳುವಂತೆ ಮಿತಿಮೀರಿದ ಒತ್ತಡವನ್ನು ಹಾಕುತ್ತದೆ.” ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಮಾಡುತ್ತಿರುವುದಾದರೂ ಏನು? (ಇಂಗ್ಲಿಷ್) ಎಂಬ ಪುಸ್ತಕ ಒಂದು ಮಹತ್ತ್ವಪೂರ್ಣ ಪ್ರಶ್ನೆಯನ್ನು ಕೇಳುತ್ತದೆ: “ಎಲೆಕ್ಟ್ರಾನಿಕ್ ಜಗತ್ತು ಮಕ್ಕಳಿಗೆ ಯಾವ ಪರಿವೆಯೂ ಇಲ್ಲದೆ ಸ್ನೇಹಿತರನ್ನು ಹುಡುಕಲು ಮತ್ತು ತ್ಯಜಿಸಿ ಬಿಡಲು ಕಲಿಸುತ್ತದೆ ಎಂದಾದರೆ ಮಕ್ಕಳು ಅನುಭೂತಿ ಮತ್ತು ದಯೆ ಬೆಳೆಸಿಕೊಳ್ಳಬೇಕು ಎಂದು ನಾವು ಹೇಳುವುದಾದರೂ ಹೇಗೆ?”
ಇಂದು ಯುವಕರನ್ನು ಅತ್ಯಾಕರ್ಷಿಸುವ ಇಂಟರ್‌ನೆಟ್ ಚಟುವಟಿಕೆಗಳಲ್ಲಿ ಮೇಲಿನ ಆರು ಉದಾಹರಣೆಗಳು ಕೇವಲ ಕೆಲವಷ್ಟೆ. ನೀವೊಬ್ಬ ಹೆತ್ತವರಾಗಿರುವಲ್ಲಿ ನಿಮ್ಮ ಮಕ್ಕಳನ್ನು ಇಂಟರ್‌ನೆಟ್ ಅಪಾಯಗಳಿಂದ ರಕ್ಷಿಸಲು ಏನು ಮಾಡಬಲ್ಲಿರಿ? (g 10/08)
[ಪಾದಟಿಪ್ಪಣಿ]
^ ಹೆಚ್ಚಿನ ‘ಪ್ರೊ-ಯಾನ’ ಸೈಟ್‌ಗಳು ಮತ್ತು ಸಂಸ್ಥೆಗಳು ಆಹಾರಮಾಂದ್ಯವನ್ನು ತಾವು ಪ್ರವರ್ಧಿಸುವುದಿಲ್ಲವೆಂದು ಹೇಳುತ್ತವೆ. ಆದರೂ ಇವುಗಳಲ್ಲಿ ಕೆಲವು, ಆಹಾರಮಾಂದ್ಯವನ್ನು ಒಂದು ಅಸ್ವಸ್ಥವೆಂದು ಹೇಳುವ ಬದಲಿಗೆ ಜೀವನಶೈಲಿಯ ಆಯ್ಕೆಯಾಗಿ ತೋರಿಸುತ್ತವೆ. ಒಬ್ಬನು ತನ್ನ ನಿಜ ತೂಕವನ್ನು ಅಡಗಿಸುವುದು ಹೇಗೆ ಹಾಗೂ ಅಕ್ರಮ ಊಟದ ಹವ್ಯಾಸಗಳನ್ನು ಹೆತ್ತವರಿಂದ ಮರೆಮಾಡುವುದು ಹೇಗೆ ಎಂಬ ಮಾಹಿತಿಯನ್ನು ಅಂಥ ಸೈಟ್‌ಗಳು ಒದಗಿಸುತ್ತವೆ.
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
ಭಾರತದಲ್ಲಿ ಇಂಟರ್‌ನೆಟ್ ಬಳಸುವವರ ಸಂಖ್ಯೆಯಲ್ಲಿ ತೀವ್ರ ವೃದ್ಧಿ. ಒಂದೇ ವರ್ಷದಲ್ಲಿ 54 ಪ್ರತಿಶತ. ಇವರಲ್ಲಿ ಹೆಚ್ಚಿನವರು ಯುವಜನರೇ.
[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]
“ವೆಬ್ ಕ್ಯಾಮರ ಮೂಲಕ ಬಂಧುಮಿತ್ರರೊಂದಿಗೆ ಮಕ್ಕಳು ಸಂವಾದಿಸುವುದು ಸುಲಭವೂ ಅಲ್ಪವ್ಯಯದ್ದೂ ಎಂದು ಹೆತ್ತವರು ನೆನಸಬಹುದು. ಆದರೆ ದಗಾಕೋರರಿಗಾದರೋ ಅದು ಮಗುವಿನ ಖಾಸಗಿ ವಿಷಯಗಳನ್ನು ಹೊರಗೆಡವಿಸುವ ಸಾಧನ.”—ರಾಬರ್ಟ್ ಎಸ್. ಮಲರ್, ಫೆಡಲರ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್‌ನ ನಿರ್ದೇಶಕರು