‘ಫ್ಲೂ’ ರೋಗದಿಂದ ನಿಮ್ಮ ಕುಟುಂಬವನ್ನು ಕಾಪಾಡಿ
‘ಫ್ಲೂ’ ರೋಗದಿಂದ ನಿಮ್ಮ ಕುಟುಂಬವನ್ನು ಕಾಪಾಡಿ
ಈ ಲೋಕದ ದುಷ್ಟ ವ್ಯವಸ್ಥೆಯ ಅಂತ್ಯದ ಮುಂಚೆ ನಡೆಯಲಿರುವ ಅನೇಕ ಸಂಗತಿಗಳ ಜೊತೆಗೆ ‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಇರುವವು’ ಎಂದು ಯೇಸು ಮುಂತಿಳಿಸಿದನು. (ಲೂಕ 21:11) ನಾವಿಂದು ‘ಫ್ಲೂ’ ಎಂದು ಕರೆಯುವ ಇನ್‌ಫ್ಲುಯೆಂಜಾ ಅಂಥ ರೋಗಗಳ ಸಾಲಿಗೆ ಸೇರಿದ್ದು.
‘ಫ್ಲೂ’ ರೋಗಕ್ಕೆ ಕಾರಣ ಒಂದು ವೈರಸ್. ಈ ವೈರಸ್ ಸೂಕ್ಷ್ಮಾಣುಜೀವಿಯಾಗಿದ್ದು ಜೀವಕೋಶಗಳನ್ನು ಭೇದಿಸಿ ಒಳನುಸುಳುತ್ತದೆ. ಬಳಿಕ ಆ ಜೀವಕೋಶಗಳಲ್ಲಿರುವ ವ್ಯವಸ್ಥೆಯನ್ನೇ ಬಳಸಿಕೊಂಡು ಹೆಚ್ಚಿನ ವೈರಸ್‌ಗಳನ್ನು ಪುನರುತ್ಪತ್ತಿಮಾಡುತ್ತದೆ. ಈ ವೈರಸ್ ಮನುಷ್ಯನ ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿಮಾಡುತ್ತದೆ. ಅದು ಹರಡುವ ಪ್ರಮುಖ ವಿಧಾನ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಮಾತಾಡಿದಾಗಲೂ ಹೊರಬೀಳುವ ತುಂತುರುಗಳ ಮೂಲಕವೇ. ಒಂದು ದೊಡ್ಡ ಕ್ಷೇತ್ರದಲ್ಲಿ ಈ ಫ್ಲೂವಿನಿಂದ ಹಲವಾರು ಜನರು ಸೋಂಕಿತರಾಗುವಾಗ ಅದೊಂದು ಪಿಡುಗು ಆಗಿಬಿಡುತ್ತದೆ.
ವೈರಸ್‌ಗಳು ಮಾನವರನ್ನು ಮಾತ್ರವಲ್ಲ ಪ್ರಾಣಿಪಕ್ಷಿಗಳನ್ನೂ ಬಾಧಿಸುತ್ತವೆ. ಫ್ಲೂ ರೋಗದ ವೈರಸ್‌ಗಳನ್ನು ‘ಎ,’ ‘ಬಿ,’ ‘ಸಿ’ ಪ್ರಭೇದಗಳಾಗಿ ವಿಂಗಡಿಸಲಾಗಿದೆ. ‘ಎ’ ಪ್ರಬೇಧವು ಇನ್‌ಫ್ಲುಯೆಂಜಾ ರೋಗಕ್ಕೆ ಅತಿ ಪ್ರಮುಖ ಕಾರಣ. ವೈರಸ್‌ನ ಜಾತಿಗಳನ್ನು ಮುಖ್ಯವಾಗಿ ಅವುಗಳ ಮೇಲ್ಮೈಯಲ್ಲಿ ಕಂಡುಬರುವ ಎರಡು ಪ್ರೋಟೀನುಗಳಾದ ಹಿಮೊಗ್ಲುಟಿನಿನ್ (ಎಚ್) ಮತ್ತು ನ್ಯುರಮಿನಿಡೆಸ್ (ಎನ್)ಗನುಸಾರ ವರ್ಗೀಕರಿಸಲಾಗುತ್ತದೆ.
ಫ್ಲೂ ವೈರಸ್‌ಗಳು ಮಾರ್ಪಾಟಾಗುತ್ತಾ ಇದ್ದು ತ್ವರಿತಗತಿಯಲ್ಲಿ ಪುನರುತ್ಪತ್ತಿಯಾಗುತ್ತಿರುವುದೇ ತುಂಬ ಚಿಂತೆಗೆ ಕಾರಣವಾಗಿದೆ. ಈ ಬೇರೆ ಬೇರೆ ತಳಿಗಳೆಲ್ಲ ಸೇರಿ ಇನ್ನೊಂದು ಹೊಸ ತಳಿ ಜನ್ಮತಾಳಬಹುದು. ಈ ತಳಿ ತುಂಬ ಭಿನ್ನವಾಗಿದ್ದರೆ, ಮಾನವರಲ್ಲಿರುವ ರೋಗನಿರೋಧಕ ವ್ಯವಸ್ಥೆ ಸಹ ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುವುದಿಲ್ಲ.
ಚಳಿಗಾಲದಲ್ಲಿ ಫ್ಲೂ ಸರ್ವೇಸಾಮಾನ್ಯ. ಇತ್ತೀಚಿನ ಸಂಶೋಧನೆಗನುಸಾರ ತಾಪಮಾನ ತಣ್ಣಗಿರುವಾಗ, ವೈರಸ್‌ನ ಹೊರ ಪೊರೆ ಒಂದು ಸಂರಕ್ಷಕ ಜೆಲ್ ಥರ ಆಗಿಬಿಡುತ್ತದೆ. ಇದರಿಂದಾಗಿ ಆ ವೈರಸ್ ಗಾಳಿಯಲ್ಲಿ ಹೆಚ್ಚು ಸಮಯ ಬದುಕಿ ಉಳಿಯಬಲ್ಲದು. ಆದರೆ ಅದು ಮಾನವನ ಉಸಿರಾಟದ ವ್ಯವಸ್ಥೆಯನ್ನು ಸೇರಿದಾಗ ಅಲ್ಲಿರುವ ಉಚ್ಚ ತಾಪಮಾನದಲ್ಲಿ ಆ ಜೆಲ್ ಕರಗಿಹೋಗುತ್ತದೆ. ಇದರಿಂದ ಸೋಂಕು ಉಂಟಾಗುತ್ತದೆ. ಚಳಿಗಾಳಿ ವೈರಲ್ ಸೋಂಕಿಗೆ ಕಾರಣವಲ್ಲದಿದ್ದರೂ ಅದು ವೈರಸ್ ವೃದ್ಧಿಯಾಗಲು ಅನುಕೂಲ ವಾತಾವರಣವನ್ನು ನಿರ್ಮಿಸುತ್ತದೆ.
ಮುಂಜಾಗ್ರತಾ ಕ್ರಮಗಳು
ವೈರಸ್ ದಾಳಿಯನ್ನು ಎದುರಿಸಲು ಸಜ್ಜಾಗಿರುವ ಅಗತ್ಯವನ್ನು ಮನಗಂಡು ಅನೇಕ ಸರ್ಕಾರಗಳು ಈಗಾಗಲೇ ಯೋಜನೆಗಳನ್ನು ಕಾರ್ಯರೂಪಕ್ಕೆ ಹಾಕಿವೆ. ಆದರೆ ನೀವೇನು ಮಾಡಬಲ್ಲಿರಿ? ಮೂಲಭೂತವಾದ ಮೂರು ಮುಂಜಾಗ್ರತಾ ಕ್ರಮಗಳನ್ನು ನೋಡೋಣ.
ರೋಗನಿರೋಧಕ ಶಕ್ತಿ ಹೆಚ್ಚಿಸಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮ್ಮ ಕುಟುಂಬದವರೆಲ್ಲರೂ ಸಾಕಷ್ಟು ನಿದ್ದೆ ಮಾಡುವಂತೆ ಮತ್ತು ಉತ್ತಮ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಇದರಲ್ಲಿ ತಾಜಾ ಹಣ್ಣು-ತರಕಾರಿ, ಧಾನ್ಯಗಳು, ಕಡಿಮೆ ಕೊಬ್ಬಿನಾಂಶವಿರುವ ಪ್ರೋಟೀನುಗಳು ಇರತಕ್ಕದ್ದು. ಈ ಪ್ರೋಟೀನುಗಳು ನಿಮ್ಮ ರೋಗನಿರೋಧಕ ಶಕ್ತಿಯ ವೃದ್ಧಿಗೆ ಬೇಕಾದ ಅಮಿನೊ ಆಮ್ಲಗಳನ್ನು ಒದಗಿಸುತ್ತವೆ.
ಪರಿಸರವನ್ನು ಕೀಟಾಣು ಮುಕ್ತವಾಗಿರಿಸಿ: ಸಾಧ್ಯವಿರುವಷ್ಟರ ಮಟ್ಟಿಗೆ ಕೌಂಟರುಗಳನ್ನು, ಮೇಜುಗಳನ್ನು ಪ್ರತಿದಿನವೂ ಪೂರ್ತಿಯಾಗಿ ಸ್ವಚ್ಛಗೊಳಿಸಿ. ಅಡಿಗೆಗೊ ತಿನ್ನಲಿಕ್ಕೊ ಬಳಸಿದ ಪಾತ್ರೆಪರಡಿಯನ್ನು ಪ್ರತಿ ಸಲ ತೊಳೆದಿಡಿ. ಬೆಡ್‌ಶೀಟು, ಕಂಬಳಿ, ದಿಂಬುಗಳ ಕವರು ಇತ್ಯಾದಿ ಹಾಸಿಗೆ ಬಟ್ಟೆಗಳನ್ನು ಆಗಾಗ್ಗೆ ಒಗೆಯಿರಿ. ಎಲ್ಲರೂ ಮುಟ್ಟುವಂಥ ವಸ್ತುಗಳನ್ನು ಅಂದರೆ ಬಾಗಿಲುಗಳ ಹಿಡಿಗಳು, ಫೋನುಗಳು, ರಿಮೋಟ್ ಕಂಟ್ರೋಲ್‌ಗಳನ್ನು ಕೀಟಾಣು ಮುಕ್ತವಾಗಿರಿಸಲು ಸ್ವಚ್ಛಗೊಳಿಸಿ. ಕೋಣೆಯೊಳಗೆ ಒಳ್ಳೇ ಗಾಳಿ ಸಂಚಾರವಿರುವಂತೆ ನೋಡಿಕೊಳ್ಳಿ.
ದೈಹಿಕ ಸ್ವಚ್ಛತೆಯ ಒಳ್ಳೇ ರೂಢಿಗಳಿರಲಿ: ಕೈಗಳನ್ನು ಸಾಬೂನು-ನೀರಿನಿಂದ ಚೆನ್ನಾಗಿ ತೊಳೆಯಿರಿ. ಇಲ್ಲದಿದ್ದರೆ ‘ಹ್ಯಾಂಡ್-ಕ್ಲೀನರ್’ ದ್ರವ ಬಳಸಿರಿ. (ಪ್ರಾಯೋಗಿಕವಾಗಿದ್ದಲ್ಲಿ ನಿಮ್ಮೊಟ್ಟಿಗೆ ಯಾವಾಗಲೂ ಹ್ಯಾಂಡ್ ಸ್ಯಾನಿಟೈಸರ್‌ನ ಒಂದು ಚಿಕ್ಕ ಬಾಟಲಿಯನ್ನು ಕೊಂಡೊಯ್ಯಿರಿ) ಬೇರೆಯವರು, ಕುಟುಂಬ ಸದಸ್ಯರು ಸಹ ಕೈ, ಮುಖ ಒರಸಲಿಕ್ಕಾಗಿ ಬಳಸಿದ ಟವೆಲನ್ನೇ ನೀವು ಬಳಸಬೇಡಿ.
ಕೈ ತೊಳೆಯದೆ ಕಣ್ಣು, ಮೂಗು, ಬಾಯಿ ಮುಟ್ಟಬೇಡಿ. ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಸಾಧ್ಯವಿರುವಲ್ಲಿ ಟಿಷ್ಯುಗಳಿಂದ ಮುಚ್ಚಿ, ನಂತರ ಆ ಟಿಷ್ಯುಗಳನ್ನು ಕೂಡಲೇ ಕಸದ ಬುಟ್ಟಿಯಲ್ಲಿ ಬಿಸಾಡಿ. ಸೆಲ್‌ಫೋನುಗಳಂಥ ಉಪಕರಣಗಳನ್ನು ಇತರರಿಗೆ ಕೊಡಬೇಡಿ ಇಲ್ಲವೇ ನೀವು ಬೇರೆಯವರದ್ದನ್ನು ಬಳಸಬೇಡಿ ಏಕೆಂದರೆ ಅವು ಕೀಟಾಣುಗಳನ್ನು ಸುಲಭವಾಗಿ ಹರಡಿಸಬಲ್ಲವು. ಇವುಗಳನ್ನೆಲ್ಲ ಮಕ್ಕಳಿಗೂ ಚೆನ್ನಾಗಿ ಕಲಿಸಿಕೊಡಬೇಕು. ಈ ರೂಢಿಗಳನ್ನು ನೀವು ಎಲ್ಲ ಸಮಯ ಪಾಲಿಸಿದರೆ ಒಳ್ಳೇದು. ಫ್ಲೂ ಹರಡುವ ಋತುವಿನಲ್ಲಂತೂ ಇದನ್ನು ತಪ್ಪದೇ ಮಾಡಿ.
ಬೇರೆಯವರ ಕ್ಷೇಮವನ್ನು ಮನಸ್ಸಿನಲ್ಲಿಡಿ
ನಿಮ್ಮಲ್ಲಿ ರೋಗಲಕ್ಷಣಗಳು ತೋರಿಬರುವ ಒಂದು ದಿನ ಮುಂಚೆಯೇ ಮತ್ತು ಕಾಯಿಲೆಬಿದ್ದು ಗುಣಮುಖರಾದ ಬಳಿಕ ಐದು ದಿನಗಳ ವರೆಗೂ ನೀವು ಇತರರಿಗೆ ಸೋಂಕು ತಗಲಿಸುವ ಸಾಧ್ಯತೆ ಇದೆ. ಫ್ಲೂವಿನ ಲಕ್ಷಣಗಳು ನೆಗಡಿಯ ಲಕ್ಷಣಗಳನ್ನು ಹೋಲುವುದಾದರೂ ಅವು ಇನ್ನಷ್ಟು ತೀವ್ರವಾಗಿರುತ್ತವೆ. ಜ್ವರ (ಸಾಮಾನ್ಯವಾಗಿ ಜಾಸ್ತಿ), ತಲೆನೋವು, ವಿಪರೀತ ಸುಸ್ತು, ಒಣ ಕೆಮ್ಮು, ಮೈಕೈ ನೋವು ಇರುತ್ತದೆ. ಮೂಗಿನಿಂದ ನೀರು ಸೋರುವುದು ಮತ್ತು ಹೊಟ್ಟೆ ಸಮಸ್ಯೆಗಳು ಅಂದರೆ ವಾಕರಿಕೆ, ವಾಂತಿ, ಬೇಧಿ ಮುಂತಾದ ರೋಗಲಕ್ಷಣಗಳು ವಯಸ್ಕರಿಗಿಂತ ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು. ಫ್ಲೂ ರೋಗಲಕ್ಷಣಗಳು ನಿಮ್ಮಲ್ಲಿ ತೋರಿಬಂದರೆ ಬೇರೆಯವರಿಗೆ ಸೋಂಕು ಹತ್ತಿಸದಂತೆ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಇರಿ.
ಸಾಕಷ್ಟು ವಿಶ್ರಾಂತಿ ಪಡೆಯಿರಿ. ದ್ರವ ಪದಾರ್ಥಗಳನ್ನು ಸೇವಿಸಿದಷ್ಟು ಒಳ್ಳೇದು. ವೈರಸ್ ನಿರೋಧಕ ಔಷಧಗಳು ಪರಿಣಾಮ ಬೀರಬೇಕಾದರೆ ರೋಗಲಕ್ಷಣಗಳು ತಲೆದೋರಿದ ಕೂಡಲೇ ಅವನ್ನು ಸೇವಿಸಬೇಕು. ಫ್ಲೂ ಇರುವ ಮಕ್ಕಳಿಗೆ ಆ್ಯಸ್ಪಿರಿನ್ (ಆಸೆಟಿಲ್‌ಸಾಲಿಸಿಲಿಕ್ ಆಸಿಡ್) ಕೊಡಬಾರದು. ನಿಮ್ಮಲ್ಲಿ ನ್ಯೂಮೋನಿಯಾದಂಥ ರೋಗಲಕ್ಷಣಗಳು ಅಂದರೆ ಉಸಿರಾಟದ ತೊಂದರೆ, ಎದೆನೋವು, ಕಡಿಮೆಯಾಗದ ತೀವ್ರ ತಲೆನೋವು ಕಾಣಿಸುವಲ್ಲಿ ತತ್‌ಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಫ್ಲೂ ರೋಗಕ್ಕೆ ತುತ್ತಾಗುವ ವ್ಯಕ್ತಿ ಸೋತುಸುಣ್ಣವಾಗಬಹುದು. ಆದ್ದರಿಂದ ನೀವದಕ್ಕೆ ತುತ್ತಾದರೂ ಅದನ್ನು ಚೆನ್ನಾಗಿ ನಿಭಾಯಿಸಲು ಮಾನಸಿಕವಾಗಿ ಮುಂಚೆಯೇ ಸಿದ್ಧರಾಗಿರಿ. ಅದಕ್ಕಿಂತಲೂ ಹೆಚ್ಚಾಗಿ ಬೈಬಲ್ ಮಾತುಕೊಡುವಂತೆ, ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದಿರುವ’ ಸಮಯಕ್ಕಾಗಿ ನೀವು ಎದುರುನೋಡಬಹುದು.—ಯೆಶಾಯ 33:24. (g10-E 06)
[ಪುಟ 13ರಲ್ಲಿರುವ ಚೌಕ]
ಉಗ್ರ ರೂಪದ ಫ್ಲೂ
2009ರಲ್ಲಿ ಪ್ರಥಮವಾಗಿ ಮೆಕ್ಸಿಕೊ ದೇಶದಲ್ಲಿ ಪತ್ತೆಹಚ್ಚಲಾದ ಫ್ಲೂ ಎಚ್1ಎನ್1 ಜಾತಿಯದ್ದು. ಇದು ಲಕ್ಷಾಂತರ ಜನರ ಜೀವತೆಗೆದ 1918ರ ಸ್ಪ್ಯಾನಿಷ್ ಫ್ಲೂನಂತೆಯೇ ಇದೆ. ಆದರೆ ಈ ಎಚ್1ಎನ್1ನಲ್ಲಿ, ಹಂದಿಗಳನ್ನೂ ಪಕ್ಷಿಗಳನ್ನೂ ಬಾಧಿಸುವಂಥ ವೈರಸ್‌ಗಳಲ್ಲಿರುವ ಅಂಶಗಳೂ ಇವೆ.
[ಪುಟ 14ರಲ್ಲಿರುವ ಚೌಕ/ಚಿತ್ರಗಳು]
6 ಸೂತ್ರಗಳನ್ನು ಪಾಲಿಸಿ, ನಿಮ್ಮನ್ನೂ ಇತರರನ್ನೂ ರಕ್ಷಿಸಿ
1. ಕೆಮ್ಮುವಾಗ ಬಾಯಿ ಮುಚ್ಚಿ
2. ಕೈ ತೊಳೆಯಿರಿ
3. ಮನೆಯಲ್ಲಿ ಒಳ್ಳೇ ಗಾಳಿಸಂಚಾರ ಇರಲಿ
4. ಮನೆಯನ್ನು ಸ್ವಚ್ಛವಾಗಿಡಿ
5. ಅಸ್ವಸ್ಥರಾಗಿದ್ದಲ್ಲಿ ಮನೆಯಲ್ಲೇ ಇರಲು ಪ್ರಯತ್ನಿಸಿ
6. ಫ್ಲೂ ಬಂದಾಗ ಯಾರನ್ನೂ ಮುಟ್ಟಬೇಡಿ
[ಪುಟ 15ರಲ್ಲಿರುವ ಚೌಕ/ಚಿತ್ರ]
ಮಹಾ ಪಿಡುಗು ಆರಂಭವಾದಾಗ
ಮೊದಲಾಗಿ, ಆರೋಗ್ಯ ಇಲಾಖೆಯವರು ಕೊಡುವ ಸೂಚನೆಗಳನ್ನು ಪಾಲಿಸಿ. ಗಾಬರಿಗೊಳ್ಳಬೇಡಿ ಇಲ್ಲವೆ ನಿಮ್ಮ ಪ್ರತಿಕ್ರಿಯೆ ಅತಿರೇಕಕ್ಕೆ ಹೋಗದಿರಲಿ. ಇಲ್ಲಿ ಚರ್ಚಿಸಲಾಗಿರುವ ಒಳ್ಳೇ ರೂಢಿಗಳನ್ನು ಇನ್ನಷ್ಟು ಶ್ರದ್ಧೆಯಿಂದ ಪಾಲಿಸಿ. ಸಾಧ್ಯವಿರುವಲ್ಲಿ ಜನಜಂಗುಳಿಯಿಂದ ದೂರವಿರಿ. ನಿಮಗೆ ಫ್ಲೂ ಇರುವಲ್ಲಿ ತಕ್ಕದಾದ ಮಾಸ್ಕ್ ಹಾಕುವುದು ಒಳ್ಳೇದು. ಆಗಾಗ ಕೈತೊಳೆಯುತ್ತಿರಿ. ನೀವು ಅಂಗಡಿಗೆ ಹೋಗಲು ಆಗದ ಪರಿಸ್ಥಿತಿ ಬರಬಹುದೆಂಬದನ್ನು ಮನಸ್ಸಿನಲ್ಲಿಟ್ಟು ಸುಮಾರು 2 ವಾರಗಳಿಗೆ ಆಗುವಷ್ಟು, ಬೇಗನೆ ಕೆಡದ ಆಹಾರ ಸಾಮಗ್ರಿಗಳನ್ನೂ ಆರೋಗ್ಯಕ್ಕೆ ಹಾಗೂ ಸ್ವಚ್ಛತೆಗೆ ಬೇಕಾದ ಉತ್ಪನ್ನಗಳನ್ನೂ ಖರೀದಿಸಿಡಿ.
ಕೊಡಲಾಗಿರುವ ಸಲಹೆಗಳನ್ನು ಕೆಲಸದ ಸ್ಥಳ, ಆರಾಧನಾ ಸ್ಥಳ ಇಲ್ಲವೆ ಜನಜಂಗುಳಿಯ ಸ್ಥಳಗಳಲ್ಲಿರುವಾಗ ಪಾಲಿಸಿರಿ. ಅಲ್ಲದೆ ನೀವಿರುವ ಪರಿಸರದಲ್ಲಿ ಒಳ್ಳೇ ಗಾಳಿಸಂಚಾರ ಇರುವಂತೆ ನೋಡಿಕೊಳ್ಳಿ.
[ಪುಟ 13ರಲ್ಲಿರುವ ಚಿತ್ರ]
ಎಚ್1ಎನ್1 ಇನ್‌ಫ್ಲುಯೆಂಜಾ ವೈರಸ್ ಅನ್ನು ದೊಡ್ಡದ್ದಾಗಿ ತೋರಿಸುವ ಚಿತ್ರ
[ಕೃಪೆ]
CDC/Cynthia Goldsmith