ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳ ನಂಬಿಕೆಗಳೇನು?

ಯೆಹೋವನ ಸಾಕ್ಷಿಗಳ ನಂಬಿಕೆಗಳೇನು?

ಯೆಹೋವನ ಸಾಕ್ಷಿಗಳ ನಂಬಿಕೆಗಳೇನು?

ಯೆಹೋವನ ಸಾಕ್ಷಿಗಳ ನಂಬಿಕೆಗಳು ರಹಸ್ಯದ ವಿಷಯವೇನಲ್ಲ. ಅವರ ಸಾಹಿತ್ಯಗಳು ನೂರಾರು ಭಾಷೆಗಳಲ್ಲಿ ಎಲ್ಲರಿಗೂ ಲಭ್ಯ. ಅವರ ಮುಖ್ಯ ನಂಬಿಕೆಗಳಲ್ಲಿ ಕೆಲವೊಂದನ್ನು ಇಲ್ಲಿ ಚುಟುಕಾಗಿ ಕೊಡಲಾಗಿದೆ.

1. ಬೈಬಲ್‌: “ಇಡೀ ಶಾಸ್ತ್ರಗ್ರಂಥವು [ಬೈಬಲ್‌] ದೇವರಿಂದ ಪ್ರೇರಿತವಾಗಿದೆ” ಎಂದು ಸಾಕ್ಷಿಗಳು ನಂಬುತ್ತಾರೆ. (2 ತಿಮೊಥೆಯ 3:16) ಧಾರ್ಮಿಕ ಅಧ್ಯಯನಗಳಲ್ಲಿ ಜಂಟಿ ಪ್ರೊಫೆಸರರಾದ ಜೇಸನ್‌ ಡಿ. ಬೆಡ್ಹನ್‌ ಬರೆದದ್ದು: “[ಯೆಹೋವನ ಸಾಕ್ಷಿಗಳು] ಬೈಬಲಿನ ಮೇಲೆ ತಮ್ಮ ನಂಬಿಕೆ ಮತ್ತು ಚಟುವಟಿಕೆಗಳನ್ನು ಆಧರಿಸುತ್ತಾರೆ ವಿನಃ ಅವುಗಳನ್ನು ಮೊದಲೇ ನಿರೂಪಿಸಿ ಆಮೇಲೆ ಹೇಗಾದರೂ ಮಾಡಿ ಅವುಗಳನ್ನು ಬೈಬಲಿನಿಂದ ಸಮರ್ಥಿಸಲು ಪ್ರಯತ್ನಿಸುವುದಿಲ್ಲ.” ಅವರು ಬೈಬಲನ್ನು ತಮಗೆ ಹೇಗೆ ಬೇಕೊ ಹಾಗೆ ವಿವರಿಸುವುದಿಲ್ಲ ಬದಲಾಗಿ ಅದರಲ್ಲೇನಿದೆಯೋ ಅದನ್ನೇ ನಂಬುತ್ತಾರೆ. ಅದೇ ಸಮಯದಲ್ಲಿ ಅದರಲ್ಲಿರುವ ಎಲ್ಲ ಸಂಗತಿಗಳನ್ನು ಅಕ್ಷರಶಃವಾಗಿ ಅರ್ಥಮಾಡಿಕೊಳ್ಳಬಾರದೆಂದೂ ಗ್ರಹಿಸಿದ್ದಾರೆ. ಉದಾಹರಣೆಗೆ, ಸೃಷ್ಟಿಯ ಏಳು ದಿನಗಳು ಬರೀ 24 ತಾಸುಗಳ ದಿನಗಳಲ್ಲ ಬದಲಾಗಿ ಸಾವಿರಾರು ವರ್ಷಗಳ ಅವಧಿಗೆ ಸೂಚಿಸುತ್ತದೆಂದು ಅವರು ನಂಬುತ್ತಾರೆ. ಏಕೆಂದರೆ ಬೈಬಲಿಗನುಸಾರ ಒಂದು ದಿನ ಎಂಬುದು ಸಾವಿರ ವರ್ಷಗಳೂ ಆಗಿರಬಲ್ಲದು.—ಆದಿಕಾಂಡ 1:31; 2 ಪೇತ್ರ 3:8.

2. ಸೃಷ್ಟಿಕರ್ತ: ಸತ್ಯ ದೇವರು ತನಗೊಂದು ಹೆಸರನ್ನು ಇರಿಸಿದ್ದಾನೆ. ಅದು ಯೆಹೋವ (ಇಲ್ಲವೆ ಆಧುನಿಕ ದಿನದ ಕೆಲವು ವಿದ್ವಾಂಸರು ಸರಿಯೆಂದು ಹೇಳುವ “ಯಾಹ್ವೆ”) ಎಂದಾಗಿದೆ. ಈ ಹೆಸರು ಆತನನ್ನು ಮಿಥ್ಯ ದೇವರುಗಳಿಂದ ಪ್ರತ್ಯೇಕಿಸುತ್ತದೆ. * (ಕೀರ್ತನೆ 83:18) ದೇವರ ಹೆಸರಿನ ಹೀಬ್ರು ರೂಪ ಬೈಬಲಿನ ಮೂಲ ಪ್ರತಿಯಲ್ಲಿ 7,000ಕ್ಕಿಂತ ಹೆಚ್ಚು ಬಾರಿ ಕಂಡುಬರುತ್ತದೆ! ಈ ಹೆಸರಿನ ಪ್ರಾಮುಖ್ಯತೆಯನ್ನು ಯೇಸು ತಾನು ಕಲಿಸಿಕೊಟ್ಟ ಪ್ರಾರ್ಥನೆಯಲ್ಲಿ ಹೀಗೆ ಎತ್ತಿತೋರಿಸಿದನು: “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:10, ಸತ್ಯವೇದವು) ಆರಾಧನೆ ತನಗೆ ಮಾತ್ರ ಸಲ್ಲಬೇಕೆಂದು ಯೆಹೋವ ದೇವರು ಹೇಳುತ್ತಾನೆ. ಆತನು ಅಂಥ ಆರಾಧನೆಗೆ ಅರ್ಹನೂ ಆಗಿದ್ದಾನೆ. ಹೀಗಿರುವುದರಿಂದ ಯೆಹೋವನ ಸಾಕ್ಷಿಗಳು ಚಿತ್ರಗಳನ್ನಾಗಲಿ ವಿಗ್ರಹಗಳನ್ನಾಗಲಿ ಆರಾಧಿಸುವುದಿಲ್ಲ.—1 ಯೋಹಾನ 5:21.

3. ಯೇಸು ಕ್ರಿಸ್ತ: ಆತನು ರಕ್ಷಕ, “ದೇವರ ಮಗ,” “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ” ಆಗಿದ್ದಾನೆ. (ಯೋಹಾನ 1:34; ಕೊಲೊಸ್ಸೆ 1:15; ಅ. ಕಾರ್ಯಗಳು 5:31) ಯೇಸುವನ್ನು ದೇವರು ಸೃಷ್ಟಿಸಿದ್ದಾನೆ. ಹಾಗಾಗಿ ಆತನೂ ದೇವರೂ ಒಂದೇ ಆಗಿರಲು ಸಾಧ್ಯವಿಲ್ಲ. “ತಂದೆಯು ನನಗಿಂತಲೂ ದೊಡ್ಡವನು” ಅಂದನು ಯೇಸು. (ಯೋಹಾನ 14:28) ಸ್ವರ್ಗದಲ್ಲಿ ವಾಸಿಸುತ್ತಿದ್ದ ಯೇಸು ಭೂಮಿಗೆ ಬಂದನು. ತನ್ನ ಮರಣ ಹಾಗೂ ಪುನರುತ್ಥಾನದ ಬಳಿಕ ಮತ್ತೆ ಸ್ವರ್ಗಕ್ಕೆ ಮರಳಿದನು. “[ಆತನ] ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.”—ಯೋಹಾನ 14:6.

4. ದೇವರ ರಾಜ್ಯ: ಇದು ಸ್ವರ್ಗದಲ್ಲಿರುವ ಒಂದು ನೈಜ ಸರ್ಕಾರ. ಯೇಸು ಕ್ರಿಸ್ತನು ಇದರ ರಾಜ. ಅವನೊಂದಿಗೆ ಆಳಲಿರುವ 1,44,000 ಮಂದಿ ‘ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟವರು.’ (ಪ್ರಕಟನೆ 5:9, 10; 14:1, 3, 4; ದಾನಿಯೇಲ 2:44; 7:13, 14) ದುಷ್ಟತನ ಇಲ್ಲದ ಮತ್ತು ಲಕ್ಷಾಂತರ ದೇವಭಕ್ತ ಜನರಿಂದ ತುಂಬಿರುವ ಭೂಮಿಯನ್ನು ಅವರು ಆಳುವರು.—ಜ್ಞಾನೋಕ್ತಿ 2:21, 22.

5. ಭೂಮಿ: ‘ಭೂಮಿ ಶಾಶ್ವತವಾಗಿ ನಿಲ್ಲುವದು’ ಎಂದು ಪ್ರಸಂಗಿ 1:4 ಹೇಳುತ್ತದೆ. ದುಷ್ಟರ ನಾಶನದ ಬಳಿಕ ಈ ಭೂಮಿ ಒಂದು ಸುಂದರ ಉದ್ಯಾನವಾಗಿ ಮಾರ್ಪಡುವುದು. ಅಲ್ಲಿ ಒಳ್ಳೇ ಜನರು ಸದಾಕಾಲ ವಾಸಿಸುವರು. (ಕೀರ್ತನೆ 37:10, 11, 29) ಹೀಗೆ, “ನಿನ್ನ [ಅಂದರೆ ದೇವರ] ಚಿತ್ತವು . . . ಭೂಲೋಕದಲ್ಲಿಯೂ ನೆರವೇರಲಿ” ಎಂದು ಯೇಸು ಕಲಿಸಿಕೊಟ್ಟ ಪ್ರಾರ್ಥನೆಯ ಮಾತುಗಳು ನೆರವೇರುವವು.—ಮತ್ತಾಯ 6:10, ಸತ್ಯವೇದವು.

6. ಬೈಬಲ್‌ ಭವಿಷ್ಯವಾಣಿಗಳು: ‘ದೇವರು ಸುಳ್ಳಾಡನು.’ (ತೀತ 1:2) ಹಾಗಾಗಿ ಆತನು ಮುಂತಿಳಿಸಿದ್ದೆಲ್ಲವೂ ಖಂಡಿತವಾಗಿ ನೆರವೇರುತ್ತದೆ. ಲೋಕದ ದುಷ್ಟತನದ ಅಂತ್ಯಕ್ಕೆ ಸಂಬಂಧಿಸಿ ಆತನು ಬೈಬಲ್‌ನಲ್ಲಿ ಮುಂತಿಳಿಸಿದ ಭವಿಷ್ಯವಾಣಿಗಳೂ ನೆರವೇರುವವು. (ಯೆಶಾಯ 55:11; ಮತ್ತಾಯ 24:3-14) ಬರಲಿರುವ ನಾಶನದಿಂದ ಯಾರು ಪಾರಾಗುವರು? “ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎನ್ನುತ್ತದೆ 1 ಯೋಹಾನ 2:17.

7. ಅಧಿಕಾರಿಗಳು: “ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಎಂದನು ಯೇಸು. (ಮಾರ್ಕ 12:17) ಈ ಮಾತಿಗೆ ತಕ್ಕಂತೆ ಯೆಹೋವನ ಸಾಕ್ಷಿಗಳು ದೇಶದ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಅವು ದೇವರ ನಿಯಮಗಳಿಗೆ ವಿರುದ್ಧವಾಗಿರುವಾಗ ದೇವರ ನಿಯಮಗಳಿಗೇ ಹೆಚ್ಚು ಮಹತ್ವ ಕೊಡುತ್ತಾರೆ.—ಅ. ಕಾರ್ಯಗಳು 5:29; ರೋಮನ್ನರಿಗೆ 13:1-3.

8. ಸಾರುವ ಕೆಲಸ: ದೇವರ ‘ರಾಜ್ಯದ ಸುವಾರ್ತೆಯು’ ದುಷ್ಟತನ ಅಂತ್ಯವಾಗುವ ಮುಂಚೆ ಭೂಮಿಯಾದ್ಯಂತ ಸಾರಲ್ಪಡುವುದು ಎಂದು ಯೇಸು ಮುನ್ನುಡಿದನು. (ಮತ್ತಾಯ 24:14) ಈ ಜೀವರಕ್ಷಕ ಕೆಲಸದಲ್ಲಿ ಪಾಲ್ಗೊಳ್ಳುವುದನ್ನು ಯೆಹೋವನ ಸಾಕ್ಷಿಗಳು ವಿಶೇಷ ಗೌರವದ ಸಂಗತಿಯೆಂದು ಎಣಿಸುತ್ತಾರೆ. ಆದರೆ ಆ ಸುವಾರ್ತೆಯನ್ನು ಕೇಳುವುದು ಬಿಡುವುದು ಜನರಿಗೆ ಬಿಟ್ಟದ್ದು. “ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ” ಎನ್ನುತ್ತದೆ ಬೈಬಲ್‌.—ಪ್ರಕಟನೆ 22:17.

9. ದೀಕ್ಷಾಸ್ನಾನ: ಬೈಬಲಿನ ಅಧ್ಯಯನ ಮಾಡಿದ ಬಳಿಕ ದೇವರ ಸಾಕ್ಷಿಗಳಲ್ಲಿ ಒಬ್ಬರಾಗಿ ಸೇವೆಮಾಡಬೇಕೆಂದು ಮನಃಪೂರ್ವಕವಾಗಿ ಯಾರು ಇಚ್ಛಿಸುತ್ತಾರೋ ಅವರಿಗೆ ಮಾತ್ರ ಯೆಹೋವನ ಸಾಕ್ಷಿಗಳು ದೀಕ್ಷಾಸ್ನಾನ ಕೊಡುತ್ತಾರೆ. (ಇಬ್ರಿಯ 12:1) ಇಂಥವರು ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದೇವೆ ಎಂಬುದನ್ನು ನೀರಿನಲ್ಲಿ ಪೂರ್ತಿ ಮುಳುಗಿ ಪಡೆಯುವ ದೀಕ್ಷಾಸ್ನಾನದ ಮೂಲಕ ತೋರಿಸುತ್ತಾರೆ.—ಮತ್ತಾಯ 3:13, 16; 28:19.

10. ಪಾದ್ರಿಗಳು-ಸಾಮಾನ್ಯ ಜನರು ಎಂಬ ಭೇದವಿಲ್ಲ: ಯೇಸು ತನ್ನ ಹಿಂಬಾಲಕರಿಗೆ “ನೀವೆಲ್ಲರೂ ಸಹೋದರರು” ಎಂದು ಹೇಳಿದನು. (ಮತ್ತಾಯ 23:8) ಆದಿ ಕ್ರೈಸ್ತರಲ್ಲಿ (ಆಗಿನ ಬೈಬಲ್‌ ಬರಹಗಾರರಲ್ಲೂ) ಪಾದ್ರಿ ವರ್ಗ ಎಂಬುದು ಇರಲಿಲ್ಲ. ಬೈಬಲಿನಲ್ಲಿರುವ ಈ ಮಾದರಿಯನ್ನೇ ಯೆಹೋವನ ಸಾಕ್ಷಿಗಳು ಅನುಸರಿಸುತ್ತಾರೆ. (g10-E 08)

[ಪಾದಟಿಪ್ಪಣಿ]

^ “ಯೆಹೋವ” ಎಂಬುದು ಯೆಹೋವನ ಸಾಕ್ಷಿಗಳೇ ಕಲ್ಪಿಸಿಕೊಂಡಿರುವ ಹೆಸರಲ್ಲ. ಬೈಬಲನ್ನು ಬರೆಯಲಾದ ಭಾಷೆಗಳಲ್ಲಿ ಅಲ್ಲದೆ ಬೇರೆ ಹಲವಾರು ಭಾಷೆಗಳಲ್ಲೂ ದೇವರ ಹೆಸರನ್ನು “ಯೆಹೋವ” ಎಂದು ಶತಮಾನಗಳ ಹಿಂದೆಯೇ ಭಾಷಾಂತರಿಸಲಾಗಿತ್ತು. ಉದಾಹರಣೆಗೆ, 1865ರ ‘ಹಳೆ ಹೊಸ ಒಡಂಬಡಿಕೆಗಳು ಅಡಗಿರುವ ದೇವರ ವಾಕ್ಯವು’ ಎಂಬ ಬೈಬಲ್‌ ಅನುವಾದದಲ್ಲೂ ಯೆಹೋವನ ಹೆಸರನ್ನು ಬಳಸಲಾಗಿದೆ. ದುಃಖದ ಸಂಗತಿಯೇನೆಂದರೆ, ಆಧುನಿಕ ಕಾಲದ ಕೆಲವೊಂದು ಬೈಬಲ್‌ ಭಾಷಾಂತರಗಳಲ್ಲಿ ದೇವರ ಹೆಸರನ್ನು ತೆಗೆಯಲಾಗಿದ್ದು, ಅದರ ಸ್ಥಾನದಲ್ಲಿ ಬರೀ “ದೇವರು,” “ಕರ್ತನು,” “ಸರ್ವೇಶ್ವರ” ಎಂಬ ಬಿರುದುಗಳನ್ನು ಹಾಕಲಾಗಿದೆ. ಹೀಗೆ, ಬೈಬಲಿನ ಗ್ರಂಥಕರ್ತನಿಗೆ ಘೋರ ಅಗೌರವವನ್ನು ತೋರಿಸಲಾಗಿದೆ.

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

“ತಂದೆಯು ನನಗಿಂತಲೂ ದೊಡ್ಡವನು.” —ಯೋಹಾನ 14:28

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

“ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” —ಮತ್ತಾಯ 24:14