ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ

ದೇವರ ರೂಪ ಮತ್ತು ಗುಣಗಳು

ದೇವರ ರೂಪ ಮತ್ತು ಗುಣಗಳು

ದೇವರಿಗೆ ಯಾವ ರೀತಿಯ ಶರೀರ ಇದೆ?

ದೇವರು ಅದೃಶ್ಯನು. —1 ತಿಮೊಥೆಯ 1:17.

ಬೈಬಲ್‌ ಏನು ಹೇಳುತ್ತದೆ?

ದೇವರು ಆತ್ಮಸ್ವರೂಪಿ ಅಂತ ಬೈಬಲ್‌ ಹೇಳುತ್ತದೆ. (2 ಕೊರಿಂಥ 3:17) ಅಂದರೆ ಮಾನವನಿಗಿಂತ ಅತೀ ಉತ್ಕೃಷ್ಟವಾದ ಶರೀರ ಅದು. ನಮ್ಮ ಕಣ್ಣಿಗೆ ಕಾಣಿಸೋದಿಲ್ಲ. ದೇವರು ‘ನಿತ್ಯತೆಯ ಅರಸ, ನಿರ್ಲಯ, ಅದೃಶ್ಯ’ ಅಂತ ಬೈಬಲ್‌ ಹೇಳುತ್ತದೆ. (1 ತಿಮೊಥೆಯ 1:17) “ದೇವರನ್ನು ಯಾರೂ ಎಂದೂ ನೋಡಿಲ್ಲ” ಅಂತ ಸಹ ಹೇಳುತ್ತದೆ.—1 ಯೋಹಾನ 4:12.

ದೇವರು ನಮಗಿಂತ ಎಷ್ಟು ಶ್ರೇಷ್ಠನೆಂದರೆ ಆತನು ನೋಡಲು ಹೇಗಿದ್ದಾನೆ ಅಂತ ಕಲ್ಪಿಸಿಕೊಳ್ಳೋದು ಅಸಾಧ್ಯ. ಅದಕ್ಕೆ ಬೈಬಲ್‌ ಹೇಳುತ್ತದೆ “ಹೀಗಿರಲು ದೇವರನ್ನು ಯಾರಿಗೆ ಹೋಲಿಸೀರಿ? ಯಾವ ರೂಪವನ್ನು ಆತನಿಗೆ ಸಮಮಾಡೀರಿ?” (ಯೆಶಾಯ 40:18) ಅತ್ಯದ್ಭುತವಾದ ಆಕಾಶ ಕೂಡ ಸರ್ವಶಕ್ತ ದೇವರ ಮುಂದೆ ಏನೂ ಅಲ್ಲ.—ಯೆಶಾಯ 40:22, 26.

ಆದರೆ ದೇವರನ್ನು ನೋಡುವ ಮತ್ತು ಮುಖಾಮುಖಿ ಮಾತಾಡುವ ಸಾಮರ್ಥ್ಯವಿರುವ ಜೀವಿಗಳಿವೆ. ದೇವರಂತೆ ಇವರಿಗೂ ಆತ್ಮಸ್ವರೂಪವಿದೆ. ಸ್ವರ್ಗದಲ್ಲಿ ಇವರ ವಾಸ. (1 ಅರಸುಗಳು 22:21; ಇಬ್ರಿಯ 1:7) ಇವರನ್ನು ದೇವದೂತರು ಅಂತ ಕರೆಯುತ್ತಾರೆ. ಈ ಬುದ್ಧಿಶಕ್ತಿಯುಳ್ಳ ಜೀವಿಗಳು ಮನುಷ್ಯರಿಗಿಂತ ಶ್ರೇಷ್ಠ. ಇವರ ಬಗ್ಗೆ ಯೇಸು ಕ್ರಿಸ್ತ ಹೇಳಿದ್ದು: “ಸ್ವರ್ಗದಲ್ಲಿರುವ ದೂತರು . . . ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ.”—ಮತ್ತಾಯ 18:10.

ದೇವರು ಎಲ್ಲಾ ಕಡೆ ಇದ್ದಾನಾ?

“ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: “‘ಸ್ವರ್ಗದಲ್ಲಿರುವ ನಮ್ಮ ತಂದೆಯೇ . . .”—ಮತ್ತಾಯ 6:9.

ಬೈಬಲ್‌ ಏನು ಹೇಳುತ್ತದೆ?

ದೇವರು ಸರ್ವಾಂತರ್ಯಾಮಿ ಅಂದರೆ ಅಮೂರ್ತ ಶಕ್ತಿ, ಆತನು ಎಲ್ಲಾ ಕಡೆ ಯಾವಾಗಲೂ ಇರುತ್ತಾನೆ ಅಂತ ಬೈಬಲ್‌ ಕಲಿಸೋದಿಲ್ಲ. ಬೈಬಲಿನ ಮತ್ತಾಯ 6:9 ಮತ್ತು 18:10 ರಲ್ಲಿ ದೇವರನ್ನು ತಂದೆ ಅಂತ ಯೇಸು ಕರೆದಿದ್ದಾನೆ. ಅಂದರೆ ದೇವರು ಒಬ್ಬ ವ್ಯಕ್ತಿ. ಆತನಿರುವುದು ಸ್ವರ್ಗದಲ್ಲಿ. ಅದೇ ಆತನ ನಿವಾಸ.—1 ಅರಸುಗಳು 8:43.

ತನ್ನ ಬದುಕಿನ ಕೊನೇ ದಿನಗಳಲ್ಲಿ ಯೇಸು ಹೇಳಿದ್ದು: “ನಾನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತಿದ್ದೇನೆ.” (ಯೋಹಾನ 16:28) ಮಾನವನಾಗಿ ಜೀವಿಸಿ ಮರಣಪಟ್ಟು ನಂತರ ಆತ್ಮಜೀವಿಯಾಗಿ ಯೇಸು ಮತ್ತೆ ಜೀವ ಪಡೆದನು. ‘ದೇವರ ಸಮ್ಮುಖದಲ್ಲಿ ಕಾಣಿಸಿಕೊಳ್ಳಲು ಸ್ವರ್ಗವನ್ನು ಪ್ರವೇಶಿಸಿದನು.’—ಇಬ್ರಿಯ 9:24.

ದೇವರ ಕುರಿತ ಈ ಸತ್ಯಾಂಶಗಳನ್ನೆಲ್ಲ ತಿಳಿದುಕೊಳ್ಳುವುದರಿಂದ ಪ್ರಯೋಜನವೇನು? ಒಂದು, ದೇವರು ವ್ಯಕ್ತಿಯಾಗಿರುವುದರಿಂದ ಆತನ ಬಗ್ಗೆ ತಿಳಿದುಕೊಂಡು, ಆತನ ಜೊತೆ ಆಪ್ತತೆಯನ್ನು ಬೆಳೆಸಿಕೊಳ್ಳಬಹುದು. (ಯಾಕೋಬ 4:8) ಇನ್ನೊಂದು, ದೇವರ ರೂಪ, ಗುಣಗಳ ಬಗ್ಗೆ ನಿಜವಾದ ವಿಷಯಗಳನ್ನು ತಿಳಿದುಕೊಂಡಾಗ ನಾವು ದೇವರನ್ನು ತಪ್ಪಾದ ರೀತಿಯಲ್ಲಿ ಆರಾಧಿಸುವುದಿಲ್ಲ. ಜೀವವಿಲ್ಲದ ವಿಗ್ರಹಗಳನ್ನು, ವಸ್ತುಗಳನ್ನು ಪೂಜಿಸುವುದಿಲ್ಲ. “ಚಿಕ್ಕ ಮಕ್ಕಳೇ, ವಿಗ್ರಹಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ” ಅಂತ 1 ಯೋಹಾನ 5:21 ಹೇಳುತ್ತದೆ.

ಮನುಷ್ಯರು ದೇವರ ಸ್ವರೂಪದಲ್ಲಿ ಸೃಷ್ಟಿಯಾದರು ಅಂದರೆ ಅರ್ಥವೇನು?

“ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.”—ಆದಿಕಾಂಡ 1:27.

ಬೈಬಲ್‌ ಏನು ಹೇಳುತ್ತದೆ?

ಪ್ರೀತಿ, ನ್ಯಾಯ, ವಿವೇಕದಂಥ ದೇವರ ಗುಣಗಳನ್ನು ತೋರಿಸುವ ಸಾಮರ್ಥ್ಯ ಮನುಷ್ಯರಿಗಿದೆ. ಇಷ್ಟಕ್ಕೂ ಬೈಬಲ್‌ ನಮಗೆ “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ. . . . ಪ್ರೀತಿಯಲ್ಲಿ ನಡೆಯುತ್ತಾ ಇರಿ” ಅಂತ ಹೇಳುತ್ತದೆ.—ಎಫೆಸ 5:1, 2.

ಸರಿಯಾದ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ದೇವರು ನಮಗೆ ಕೊಟ್ಟಿದ್ದಾನೆ. ಬೇರೆ ಬೇರೆ ರೀತಿಯಲ್ಲಿ ಪ್ರೀತಿ ತೋರಿಸುವ ಸಾಮರ್ಥ್ಯವನ್ನೂ ಕೊಟ್ಟಿದ್ದಾನೆ. (1 ಕೊರಿಂಥ 13:4-7) ಹಾಗೇ ಕಲ್ಪನಾಶಕ್ತಿಯನ್ನು, ಸೌಂದರ್ಯವನ್ನು ಆಸ್ವಾದಿಸುವ ಗುಣವನ್ನು, ನಿಸರ್ಗದ ಕೌತುಕವನ್ನು ನೋಡಿ ಬೆರಗಾಗುವ ಸಾಮರ್ಥ್ಯವನ್ನೂ ದೇವರು ನಮಗೆ ಕೊಟ್ಟಿದ್ದಾನೆ. ಇದೆಲ್ಲಕ್ಕಿಂತ ಹೆಚ್ಚಾಗಿ, ದೇವರ ಬಗ್ಗೆ, ಆತನು ನಮ್ಮ ವಿಷಯದಲ್ಲಿ ಮಾಡಿರುವ ಸಂಕಲ್ಪಗಳ ಬಗ್ಗೆ ಕಲಿಯುವ ಸಾಮರ್ಥ್ಯವನ್ನು, ಬಯಕೆಯನ್ನು ನಮಗೆ ಕೊಟ್ಟಿದ್ದಾನೆ.—ಮತ್ತಾಯ 5:3.

ಬೈಬಲಿನಿಂದ ಸತ್ಯಾಂಶಗಳನ್ನು ತಿಳಿಯುವುದರಿಂದ ಸಿಗುವ ಪ್ರಯೋಜನ. ದೇವರ ಬಗ್ಗೆ ಕಲಿಯುತ್ತಾ ಹೋಗೋದಾದರೆ, ದೇವರ ಗುಣಗಳನ್ನು ಅನುಕರಿಸಲು ಶ್ರಮಿಸುವುದಾದರೆ ದೇವರ ಇಷ್ಟದ ಪ್ರಕಾರ ಜೀವಿಸುತ್ತೇವೆ. ಇದರಿಂದ ನಾವು ಹೆಚ್ಚು ಸಂತೋಷವಾಗಿರುತ್ತೇವೆ. ಜತೆಗೆ ಸಂತೃಪ್ತಿ, ನೆಮ್ಮದಿ, ಸಾರ್ಥಕತೆಯ ಭಾವ ಇರುತ್ತದೆ. (ಯೆಶಾಯ 48:17, 18) ದೇವರ ಸೊಗಸಾದ ಗುಣಗಳು ಮಾನವರ ಮನಸ್ಪರ್ಶಿಸುತ್ತದೆ, ಒಳ್ಳೇ ಜನರನ್ನು ದೇವರ ಬಳಿ ಸೆಳೆಯುತ್ತದೆ ಮತ್ತು ಶಾಶ್ವತ ಜೀವನದ ದಾರಿಯಲ್ಲಿ ಅವರನ್ನು ನಡೆಸುತ್ತದೆ. ಇಂಥ ಪ್ರಯೋಜನಗಳನ್ನು ಮಾನವರು ಪಡೆಯಬೇಕೆನ್ನುವುದೇ ದೇವರ ಆಶೆ.—ಯೋಹಾನ 6:44; 17:3. ◼ (g13-E 05)