ವಿಶ್ವ-ವೀಕ್ಷಣೆ
ಅಮೆರಿಕ
ಯು. ಎಸ್ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವರದಿ ಹೇಳುವಂತೆ, ಅಮೆರಿಕದ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿಗಳು ಕಳೆದ ಹತ್ತು ವರ್ಷಗಳಿಂದ 5 ಕೋಟಿಯಷ್ಟು ನಿಷೇಧಿಸಲಾದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 2011ರಲ್ಲೇ ರಕ್ಷಣಾ ಸಿಬ್ಬಂದಿಗಳು ಸುಮಾರು 1,200ರಷ್ಟು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇವನ್ನು ವಿಮಾನದೊಳಗೆ ಕೊಂಡೊಯ್ಯಲಾಗುತ್ತಿತ್ತು. ಇದರ ಬಗ್ಗೆ ವಿಚಾರಿಸಿದಾಗ ‘ಓ ಗನ್ ಇದೇ ಅಂತ ಮರೆತು ಬಿಟ್ಟಿದ್ದೆ’ ಎಂದರು ಅದನ್ನು ತೆಗೆದುಕೊಂಡು ಬಂದವರು.
ಬ್ರೆಜಿಲ್
ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯಬಾರದೆಂಬ ಉದ್ದೇಶಕ್ಕಾಗಿ ಅವರ ಸಮವಸ್ತ್ರಕ್ಕೆ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಶಿಕ್ಷಣ ಅಧಿಕಾರಿಗಳು ಅಳವಡಿಸುತ್ತಿದ್ದಾರೆ. ಆ ಚಿಪ್‌ನ ಸೆನ್ಸಾರ್‌ನಿಂದ, ಮಕ್ಕಳು ಶಾಲೆಗೆ ತಲುಪಿದರೆಂದು ಗೊತ್ತಾದ ತಕ್ಷಣ ಹೆತ್ತವರಿಗೆ ಒಂದು ಮೆಸೆಜ್ ಹೋಗುತ್ತೆ. ಒಂದುವೇಳೆ ಮಗು 20 ನಿಮಿಷ ತಡವಾಗಿ ತಲುಪಿದರೆ ಬೇರೆ ತರದ ಮೆಸೆಜ್ ಹೋಗುತ್ತೆ.
ನಾರ್ವೆ
ಲೂಥರನ್ ಚರ್ಚ್ ಇನ್ನು ಮುಂದೆ ರಾಷ್ಟ್ರದ ಅಧಿಕೃತ ಧರ್ಮವಾಗಿರಲ್ಲ ಎಂದು ನಾರ್ವೆ ಸರ್ಕಾರ ಹೇಳಿತು. ಇದರ ಬಗ್ಗೆ ನಾರ್ವೇಜಿಯನ್ ಸಂವಿಧಾನದಲ್ಲಿ ತಿದ್ದುಪಡಿಯಾಗಿದ್ದು ಇದೇ ಮೊದಲ ಬಾರಿಗೆ. ರಾಜಕೀಯದಲ್ಲಿ ಚರ್ಚ್ ತಲೆಹಾಕದಂತೆ ಅವೆರಡರ ಮಧ್ಯೆ ಇರುವ ಸಂಬಂಧವನ್ನು ಕಡಿದುಹಾಕಿ ಈ ತಿದ್ದುಪಡಿಯನ್ನು ಜಾರಿಗೆ ತಂದಿದೆ.
ಚೆಕ್ ಗಣರಾಜ್ಯ
ಕೆಲಸದಲ್ಲಿ ಇಲ್ಲದಿರುವಾಗ ಸಹ ಕೆಲಸಕ್ಕೆ ಸಂಬಂಧಪಟ್ಟ ಕರೆ, ಮೆಸೆಜ್ ಅಥವಾ ಇ-ಮೇಲ್‌ಗಳನ್ನು ಸ್ವೀಕರಿಸುತ್ತೇವೆ, ಅದು ತಮ್ಮ ಕರ್ತವ್ಯ ಅಂತ ಚೆಕ್ ದೇಶದ ಮೂರರಲ್ಲಿ ಎರಡು ಭಾಗದಷ್ಟು ನೌಕರರು ಹೇಳುತ್ತಾರೆ. ಒಂದುವೇಳೆ ಹಾಗೆ ಮಾಡಲಿಲ್ಲ ಅಂದರೆ ಅದು ಒರಟು ಸ್ವಭಾವ ಎನ್ನುತ್ತಾರೆ ಮೂರರಲ್ಲಿ ಒಂದು ಭಾಗದಷ್ಟು ನೌಕರರು.
ಭಾರತ
ಭಾರತದಲ್ಲಿ 20 ವರ್ಷಗಳಲ್ಲಿ ಆಗಿರೋ ಉತ್ಪಾದನೆಗಿಂತ 50 ಪಟ್ಟು ಹೆಚ್ಚು ಆಹಾರ ಉತ್ಪಾದನೆ ಆಗುತ್ತಿದೆ. 7 ಕೋಟಿ 10 ಲಕ್ಷ ಟನ್‌ನಷ್ಟು ಅಕ್ಕಿ ಮತ್ತು ಗೋದಿಯ ಶೇಖರಣೆ ಮಾಡಲಾಗುತ್ತಿದೆ. ಆದರೂ ದೇಶ ಇನ್ನೂ ತನ್ನ ಜನರಿಗೆ ಆಹಾರ ಹಂಚುವುದರಲ್ಲಿ ಸೊರಗುತ್ತಿದೆ. ಶೇಖರಿಸಿರುವ ಅಷ್ಟು ಆಹಾರದಲ್ಲಿ ಜನರಿಗೆ ಸಿಗುತ್ತಿರುವುದು ಕೇವಲ 40% ಆಹಾರ ಮಾತ್ರ. ಇದಕ್ಕೆ ಕಾರಣ ಭ್ರಷ್ಟಾಚಾರ ಮತ್ತು ಆಹಾರ ಪೋಲಾಗುತ್ತಿರುವುದು. (g13-E 05)