ವಿಕಾಸವೇ? ವಿನ್ಯಾಸವೇ?
ಹಂಪ್ಬ್ಯಾಕ್ ತಿಮಿಂಗಿಲದ ಈಜುಗೈ
ಪೂರ್ತಿ ಬೆಳೆದಿರುವ ಹಂಪ್ಬ್ಯಾಕ್ ತಿಮಿಂಗಿಲದ ತೂಕ ಒಂದು ಸಿಟಿ ಬಸ್ಗಿಂತ ಜಾಸ್ತಿ. ಹಾಗಿದ್ದರೂ ಈ ದೈತ್ಯಾಕಾರ ತಿಮಿಂಗಿಲ ಧುಮುಕುವುದರಲ್ಲಿ ಮತ್ತು ತಿರುಗುವುದರಲ್ಲಿ ತೋರಿಸುವ ಚುರುಕುತನ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಇಷ್ಟು ತೂಕ ಇದ್ದರೂ ಹೇಗೆ ಈ ತಿಮಿಂಗಿಲ ಅಷ್ಟು ಚುರುಕು? ಈಜುಗೈಯಲ್ಲಿದೆ ಇದರ ರಹಸ್ಯ.
ಪರಿಗಣಿಸಿ: ಅನೇಕ ರೀತಿಯ ತಿಮಿಂಗಿಲಗಳ ಮತ್ತು ಜಲಸ್ತನಿಗಳ ಈಜುಗೈಯ ಅಂಚು ತುಂಬ ನುಣುಪಾಗಿರುತ್ತೆ. ಆದರೆ ಹಂಪ್ಬ್ಯಾಕ್ ತಿಮಿಂಗಿಲದ ಈಜುಗೈ ವಿಶಿಷ್ಟವಾದದ್ದು. ಇದು ತಿಮಿಂಗಿಲದ ಉದ್ದದ ಮೂರನೇ ಒಂದು ಭಾಗದಷ್ಟಿದೆ. ಈಜುಗೈಯ ಮುಂಭಾಗದ ಅಂಚಿನಲ್ಲಿ ದೊಡ್ಡದಾದ ಉಬ್ಬುಗಳಿವೆ. ಈಜುವಾಗ ನೀರು ಈ ಉಬ್ಬುಗಳ ಮೇಲೆ ಚಲಿಸುತ್ತೆ ಮತ್ತು ಇದರಿಂದಾಗಿ ನೀರು ಅನೇಕ ಸುಳಿಗಳಾಗಿ ಸಾಗುತ್ತೆ. ಪರಿಣಾಮವಾಗಿ ತಿಮಿಂಗಿಲಕ್ಕೆ ಮೇಲಕ್ಕೇರುವ ಸಾಮರ್ಥ್ಯ ಸಿಗುತ್ತೆ. ಎಷ್ಟೇ ವೇಗವಾಗಿ ತನ್ನ ಈಜುಗೈಯನ್ನು ತಿರುಗಿಸಿದರೂ ಸಮತೋಲನ ಕಳೆದುಕೊಳ್ಳುವುದಿಲ್ಲ. ಮಾತ್ರವಲ್ಲ ಈಜುಗೈಯಲ್ಲಿ ಉಬ್ಬುಗಳಿರೋದರಿಂದ ನೀರಿನ ಹರಿವನ್ನು ಸಹ ತಡೆಯುತ್ತೆ. ಇದು ಹಂಪ್ಬ್ಯಾಕ್ ತಿಮಿಂಗಿಲಕ್ಕೆ ಇರುವ ದೊಡ್ಡ ಪ್ರಯೋಜನ.
ಈ ವಿಶೇಷತೆಯನ್ನು ವಿಜ್ಞಾನಿಗಳು ದೋಣಿ ಚುಕ್ಕಾಣಿಗಳಿಗೆ, ನೀರ್ಗಾಲಿಗೆ, ಗಾಳಿಯಂತ್ರಕ್ಕೆ ಮತ್ತು ಹೆಲಿಕಾಪ್ಟರ್ನ ರೆಕ್ಕೆಗಳಿಗೆ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ.
ನೀವೇನು ನೆನಸುತ್ತೀರಿ? ಹಂಪ್ಬ್ಯಾಕ್ ತಿಮಿಂಗಿಲಕ್ಕೆ ಇಂಥ ಈಜುಗೈ ವಿಕಾಸವಾಗಿ ಬಂತೇ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನೇ? ◼ (g13-E 06)