ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ
ಮಾತು ಕಮ್ಮಿ ಮಾಡಿ ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ?
ಸಮಸ್ಯೆ
ಹೆಂಡತಿ ಹೇಳುತ್ತಾಳೆ: “ನಾನು ಹೇಳ್ತಿರೋದಕ್ಕೆ ನೀವು ಕಿವಿನೇ ಕೊಡ್ತಾ ಇಲ್ಲ”. ‘ಇಲ್ಲ ನಾನು ಕೇಳ್ತಾ ಇದ್ದೀನಲ್ಲಾ’ ಅಂತ ನಿಮಗನಿಸ್ತದೆ. ಆದರೆ ನಿಮ್ಮ ಹೆಂಡತಿ ಹೇಳಿದ್ದು ಒಂದು ನೀವು ಕೇಳಿಸಿಕೊಂಡದ್ದು ಇನ್ನೊಂದು. ಹಾಗಾಗಿ ಜಗಳ ಶುರು.
ಈ ರೀತಿ ಮನಸ್ತಾಪಗಳು ಆಗೋದನ್ನು ನೀವು ತಡೆಯಬಹುದು. ನಿಮ್ಮ ಸಂಗಾತಿ ಹೇಳೋದನ್ನು ಕೇಳಿಸಿಕೊಳ್ತಾ ಇದ್ದೀರಿ ಅಂತ ನಿಮಗನಿಸಿದರೂ ಅವರು ಹೇಳೋ ಮುಖ್ಯ ವಿಷಯದ ಕಡೆಗೆ ನೀವು ಗಮನ ಕೊಡದೆ ಇದ್ದಿರಬಹುದು. ಹಾಗೆ ಯಾಕೆ ಆಗುತ್ತೆ ಅಂತ ಕಾರಣ ಮೊದಲು ಕಂಡು ಹಿಡಿಯಬೇಕು.
ಯಾಕೆ ಹೀಗಾಗುತ್ತೆ?
ಅಪಕರ್ಷಣೆ ಅಥವಾ ಸುಸ್ತು. ಒಂದು ಕಡೆ ಮಕ್ಕಳು ಇನ್ನೊಂದು ಕಡೆ ಟಿವಿ ಒಂದೇ ಸಮನೆ ಹೊಯ್ಯಿಕೊಳ್ತಾ ಇದೆ. ನೀವು ಕೆಲಸದ ಸ್ಥಳದಲ್ಲಿ ಆದ ಯಾವುದೋ ವಿಷಯದ ಬಗ್ಗೆ ತಲೆಕೆರಕೊಳ್ತಾ ಕೂತಿದ್ದಿರ. ನಿಮ್ಮ ಹೆಂಡತಿ ‘ರೀ, ಮನೆಗೆ ಇವತ್ತು ಒಬ್ಬರು ಊಟಕ್ಕೆ ಬರ್ತಿದ್ದಾರೆ’ ಅಂಥ ಹೇಳುತ್ತಾಳೆ. ‘ಆಗಲಿ’ ಅಂತ ತಲೆ ಅಲ್ಲಾಡಿಸಿ ಸುಮ್ಮನೆ ಇದ್ದುಬಿಡ್ತಿರ. ಆದರೆ ನೀವು ನಿಜವಾಗ್ಲೂ ಕೇಳಿಸಿಕೊಂಡ್ರಾ? ಇಲ್ಲ.
ಊಹಾಪೋಹಗಳು. ಒಬ್ಬರ ಮನಸ್ಸನ್ನು ಓದಲು ನಮ್ಮಿಂದ ಆಗುತ್ತೆಂದು ಅಂದುಕೊಳ್ಳುವ ತಪ್ಪುಕಲ್ಪನೆಯೇ ಇದು. ನಿಮ್ಮ ಸಂಗಾತಿಯ ಮಾತಿನ ಹಿಂದೆ ಏನೋ ಇದೆ ಅಂತ ಅಂದುಕೊಳ್ಳುತ್ತೀರಿ. ಅಂದರೆ ನೀವು ಅವರ ಮನಸ್ಸಿನಲ್ಲಿ ಇದ್ದದಕ್ಕಿಂತ ಜಾಸ್ತಿನೇ ಓದುತ್ತಾ ಇರ್ತಿರಾ. ಉದಾಹರಣೆಗೆ, ನಿಮ್ಮ ಹೆಂಡತಿ ಹೇಳ್ತಾಳೆ: “ಈ ವಾರದಲ್ಲಿ ನೀವು ಜಾಸ್ತಿ ಟೈಮ್ ಆಫೀಸಲ್ಲೇ ಕಳೆದುಬಿಟ್ರಿ!” ಅವಳು ನಿಮ್ಮನ್ನು ದೂರುತ್ತಾ ಇದ್ದಾಳೆ ಅಂತ ತಪ್ಪಾಗಿ ಊಹಿಸಿಕೊಂಡು, “ಮತ್ತೆ ಅದು ನನ್ನ ತಪ್ಪಾ! ನೀನು ಮಾಡೋ ಖರ್ಚಿಗೆ ನಾನು ಜಾಸ್ತಿ ಕೆಲಸ ಮಾಡ್ಲೇ ಬೇಕು” ಅಂದುಬಿಡುತ್ತೀರಾ. “ನಾನು ನಿಮ್ಮ ಕಾಲು ಎಳೆಯಕ್ಕೆ ಹಾಗೆ ಹೇಳಲಿಲ್ಲಾ!” ಅಂತ ಹೆಂಡತಿ ಒದರುತ್ತಾಳೆ. ಅವಳು ಏನು ಹೇಳಕ್ಕೆ ಇಷ್ಟಪಟ್ಟಳು? “ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಾ. ಈ ವಾರಾಂತ್ಯದಲ್ಲಿ ಚೆನ್ನಾಗಿ ರೆಸ್ಟ್ ತಗೊಳಿ” ಅಂತ.
ಸಮಸ್ಯೆ ಏನಂತ ಅರ್ಥಮಾಡಿಕೊಳ್ಳದೆ ಪರಿಹಾರ ಹುಡುಕೋದು. “ಕೆಲವೊಮ್ಮೆ ನಾನೇನೋ ನನ್ನ ಸಮಸ್ಯೆಗಳನ್ನು ಭಾವನೆಗಳನ್ನು ಹಂಚಿಕೊಳ್ಳಬೇಕು ಅಂತ ಇರ್ತಿನಿ, ಆದರೆ ಮೈಕಲ್ * ಅದನ್ನ ಹೇಗೆ ಸರಿಪಡಿಸಬೇಕು ಅಂತ ಹೇಳಿಬಿಡುತ್ತಾರೆ. ಅವರು ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡರೆ ಸಾಕು” ಅಂತ ಮಾರಿಯಾ ಹೇಳುತ್ತಾರೆ. ಹಾಗಾದರೆ ಇಲ್ಲಿ ಸಮಸ್ಯೆ ಏನಂತ ನಿಮಗೆ ಗೊತ್ತಾಯಿತಾ? ಸಮಸ್ಯೆಯನ್ನು ಹೇಗೆ ಸರಿಪಡಿಸಲಿ ಅಂತ ಮೈಕಲ್ ಯೋಚಿಸ್ತಾ ಇರುತ್ತಾರೆ. ಆಗ ಮಾರಿಯಾ ಹೇಳುವ ಎಷ್ಟೋ ವಿಷಯಗಳು ಮೈಕಲ್ನ ಕಿವಿಗೆ ಬಿದ್ದೂ ಬೀಳದೆ ಹೋಗಿಬಿಟ್ಟಿರುತ್ತವೆ.
ಸಮಸ್ಯೆಗೆ ಏನೇ ಕಾರಣ ಇರಲಿ, ನೀವು ಹೇಗೆ ಒಬ್ಬ ಒಳ್ಳೇ ಕೇಳುಗರಾಗೋದು?
ಇದಕ್ಕೇನು ಪರಿಹಾರ?
ಸಂಪೂರ್ಣ ಏಕಾಗ್ರತೆ ಕೊಡಿ. ನಿಮ್ಮ ಸಂಗಾತಿಗೆ ಏನೋ ಮುಖ್ಯವಾದದ್ದು ಹೇಳಬೇಕಂತ ಇದೆ. ಅದನ್ನು ಕೇಳಕ್ಕೆ ತಯಾರಿದ್ದೀರಾ? ನಿಮ್ಮ ಮನಸ್ಸಲ್ಲಿ ತುಂಬ ವಿಷಯಗಳು ಓಡಾಡ್ತಾ ಇರಬಹುದು. ಹಾಗಂತ ಕೇಳೋ ತರ ನಟಿಸಬೇಡಿ. ಸಾಧ್ಯವಾದರೆ ಏನು ಕೆಲಸ ಮಾಡ್ತಾ ಇದ್ದೀರೋ ಅದನ್ನು ಸ್ವಲ್ಪ ನಿಲ್ಲಿಸಿ ಸಂಗಾತಿ ಹೇಳೋ ಮಾತಿಗೆ ಕಿವಿಗೊಡಿ. ಅಥವಾ ‘ನಾನೀಗ ಸ್ವಲ್ಪ ಕೆಲಸದಲ್ಲಿ ಇದ್ದೀನಿ. ಆಮೇಲೆ ಮಾತಾಡೋಣ್ವ’ ಅಂತ ಕೇಳಿಕೊಳ್ಳಿ.—ಬೈಬಲ್ ತತ್ವ: ಯಾಕೋಬ 1:19.
ಒಬ್ಬೊಬ್ಬರೇ ಮಾತಾಡಿ. ಮಾತಾಡುವ ಸರದಿ ನಿಮ್ಮ ಸಂಗಾತಿಯದಿದ್ದಾಗ ನೀವು ಮಾತಾಡದೆ ಕೇಳಿ. ಮಧ್ಯದಲ್ಲಿ ಬಾಯಿ ಹಾಕಬೇಡಿ, ಅದು ಹಾಗಲ್ಲ ಹೀಗಲ್ಲ ಅಂತ ತಕರಾರು ಮಾಡಬೇಡಿ. ನಿಮ್ಮ ಸರದಿ ಬರುವ ವರೆಗೆ ಕೇಳ್ತಾ ಇರಿ ಅಷ್ಟೇ.—ಬೈಬಲ್ ತತ್ವ: ಜ್ಞಾನೋಕ್ತಿ 18:13.
ಪ್ರಶ್ನೆಗಳನ್ನು ಕೇಳಿ. ಪ್ರಶ್ನೆಗಳನ್ನು ಕೇಳೋದಾದರೆ ನಿಮ್ಮ ಸಂಗಾತಿ ನಿಜವಾಗಲೂ ಏನು ಹೇಳಕ್ಕೆ ಬಯಸುತ್ತಾ ಇದ್ದಾರೋ ಅದು ನಿಮಗೆ ಅರ್ಥ ಆಗುತ್ತೆ. ಮಾರಿಯಾ ಹೇಳೋದು: “ಮೈಕಲ್ ಪ್ರಶ್ನೆ ಕೇಳೋದಂದ್ರೆ ನಂಗೆ ತುಂಬ ಇಷ್ಟ, ಯಾಕಂದರೆ ಹಾಗೆ ಕೇಳಿದಾಗೆಲ್ಲ ನಾನು ಹೇಳೋದನ್ನ ಕೇಳೋ ಮನಸ್ಸು ಅವರಲ್ಲಿದೆ ಅಂತ ಗೊತ್ತಾಗುತ್ತೆ.”
ಪದಗಳನ್ನಲ್ಲ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಹಾವಭಾವ, ಕಣ್ಣಿನ ಚಲನೆ, ಮಾತಾಡುವ ಸ್ವರ ಗಮನಿಸಿ ಅವರು ಹೇಳುವ ವಿಷಯವನ್ನು ಅರ್ಥಮಾಡಿಕೊಳ್ಳಿ. ಮಾತಿನಲ್ಲಿ ಅಡಗಿರುವ ಭಾವನೆಯನ್ನು ತಿಳಿದುಕೊಳ್ಳಲು ಅವರು ಹೇಳುವ ವಿಧವನ್ನು ಗಮನಿಸಿ. “ನೀವು ಹೇಳಿದ್ದೇ ಸರಿ” ಅಂತ ಹೇಳಿದರೆ ಅದರ ಅರ್ಥ “ನೀವು ಹೇಳಿದ್ದು ಸರಿಯಲ್ಲ” ಅಂತ ಆಗಿರಬಹುದು. “ನನಗೆ ನಿಮ್ ಸಹಾಯ ಬೇಕಿರುವಾಗ ನೀವು ಸಹಾಯನೇ ಮಾಡಲ್ಲ” ಅನ್ನೋದರ ಅರ್ಥ “ನಾನು ನಿಮಗೆ ಅಷ್ಟು ಮುಖ್ಯ ಅಲ್ಲ ಅನಿಸಿಬಿಡುತ್ತೆ” ಅಂತ ಆಗಿರಬಹುದು. ಅವರ ಮಾತಿನ ಹಿಂದಿರುವ ಕೊರಗನ್ನು ಅರ್ಥಮಾಡಿಕೊಳ್ಳಿ. ಹಾಗೆ ಮಾಡದೇ ಇದ್ದಲ್ಲಿ ಕೇಳದ ಭಾವನೆಗಳನ್ನು ಬಿಟ್ಟು, ಕೇಳಿದ ಪದಗಳನ್ನು ಹಿಡಕೊಂಡು ಜಗಳಮಾಡ್ತಾ ಕೂರುತ್ತೀರಿ.
ಕಿವಿ ನಿಮಿರಿಸಿ ಕೇಳಿ. ನಿಮ್ಮ ಸಂಗಾತಿ ಹೇಳೋ ವಿಷಯ ನಿಮಗೆ ಇಷ್ಟವಾಗದಿದ್ದರೂ ಕೂಗಾಡಿ ಅವರ ಬಾಯಿಮುಚ್ಚಿಸಬೇಡಿ. ಸಂಗಾತಿ ನಿಮ್ಮ ತಪ್ಪುಗಳನ್ನು ಹೇಳಿ ಟೀಕಿಸುತ್ತಾ ಇದ್ದರೆ? “ಸುಮ್ಮನೆ ಕೇಳ್ತಾ ಇರಿ” ಅಂತಾರೆ ಮದುವೆಯಾಗಿ 60 ವರ್ಷ ಆದ ಗ್ರೆಗರಿ. ಅವರು ಹೇಳೋದು “ಸಂಗಾತಿ ಏನು ಹೇಳ್ತಾರೋ ಅದನ್ನು ಕಿವಿ ನಿಮಿರಿಸಿ ಕೇಳಿ. ಅದಕ್ಕೆ ಸ್ವಲ್ಪ ಪ್ರೌಢತೆ ಬೇಕು, ಆದರೆ ಹಾಗೆ ಮಾಡಿದರೆ ಎಷ್ಟೋ ಪ್ರಯೋಜನ ಇದೆ.”—ಬೈಬಲ್ ತತ್ವ: ಜ್ಞಾನೋಕ್ತಿ 18:15.
ಸಂಗಾತಿಯ ಮಾತುಗಳನ್ನು ನಿಗಾ ಕೊಟ್ಟು ಕೇಳಿ. ಮನಸಾರೆ ಕೇಳೋದು ಒಂದು ಕೆಲಸ ಅಷ್ಟೇ ಅಲ್ಲ, ನಿಮ್ಮ ಪ್ರೀತಿಯ ಅಭಿವ್ಯಕ್ತಿಯೂ ಸಹ. ನಿಮ್ಮ ಸಂಗಾತಿ ಹೇಳೋ ಮಾತಲ್ಲಿ ನಿಜವಾದ ಆಸಕ್ತಿ ನಿಮಗಿದ್ದರೆ ಅವರು ಹೇಳೋದನ್ನು ಕೇಳಕ್ಕೆ ಕಷ್ಟ ಆಗಲ್ಲ ಸುಲಭವಾಗುತ್ತೆ. ಆಗ ಬೈಬಲ್ ಹೇಳುವ ಈ ಬುದ್ಧಿವಾದವನ್ನು ಪಾಲಿಸುತ್ತೀರ: “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:4, ಸತ್ಯವೇದವು. (g13-E 12)
^ ಪ್ಯಾರ. 9 ಹೆಸರುಗಳನ್ನು ಬದಲಿಸಲಾಗಿದೆ.