ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ
ಅತ್ತೆ-ಮಾವ ಜೊತೆ ಹೊಂದಿಕೊಂಡು ಹೋಗುವುದು ಹೇಗೆ?
ಸಮಸ್ಯೆ
“ನಮ್ಮ ಮನೆಯಲ್ಲಿ ಏನೋ ಸಮಸ್ಯೆ ಆದಾಗ ನನ್ನ ಹೆಂಡತಿ ಅವರ ಅಪ್ಪ-ಅಮ್ಮನಿಗೆ ಫೋನ್ ಮಾಡಿ ಎಲ್ಲ ವಿಷಯ ಹೇಳಿಬಿಟ್ಟಳು. ಆಗ ಅವಳ ಅಪ್ಪ ನನಗೆ ಫೋನ್ ಮಾಡಿ, ‘ಹೀಗೆ ಮಾಡು ಹೀಗೆ ಮಾಡೆ್ಬೕಡ’ ಅಂತ ಬುದ್ಧಿವಾದ ಹೇಳಿದರು. ಅವರ ಮುಂದೆ ನಾನು ತಲೆ ತಗ್ಗಿಸೋ ಥರ ಆಯಿತು, ತುಂಬಾ ಬೇಜಾರಾಗಿ ಬಿಟ್ಟಿತು.”—ಜೇಮ್ಸ್. *
“‘ಮೊದಲು ನಾನೂ, ನನ್ನ ಮಗ ಎಷ್ಟು ಚೆನ್ನಾಗಿದ್ವಿ ಗೊತ್ತಾ! ಆದರೆ ಅವನು ಮದುವೆ ಆಗಿದ್ದೇ ತಡ, ನನ್ನಿಂದ ದೂರ ಆಗಿಬಿಟ್ಟ’ ಅಂತ ನಮ್ಮ ಅತ್ತೆ ಯಾವಾಗಲೂ ಹೇಳುತ್ತಿರುತ್ತಾರೆ. ಆಗೆಲ್ಲಾ ‘ನನ್ನಿಂದ ತಾನೇ ಇವರಿಗೆ ಇಷ್ಟೆಲ್ಲಾ ನೋವು ಆಗುತ್ತಿರೋದು? ನಾನು ಮದುವೆ ಆಗಿ ತಪ್ಪು ಮಾಡಿಬಿಟ್ಟೆ’ ಅಂತ ನನಗೆ ಅನಿಸುತ್ತಿತ್ತು.”—ನತಾಶಾ.
ಮೇಲಿನ ಅನುಭವಗಳು ತಿಳಿಸುವಂತೆ ಅತ್ತೆ-ಮಾವ ಜೊತೆಗಿನ ಸಮಸ್ಯೆಯಿಂದ ನಿಮ್ಮ ಮದುವೆಯ ಬಂಧದಲ್ಲಿ ಬಿರುಕು ಉಂಟಾಗಲು ಸಾಧ್ಯವಿದೆ. ಹಾಗಾದರೆ ಇದನ್ನು ಹೇಗೆ ತಡೆಯಬಹುದು?
ನಿಮಗಿದು ತಿಳಿದಿರಲಿ
ಮದುವೆಯಿಂದ ಹೊಸ ಕುಟುಂಬ ಆರಂಭವಾಗುತ್ತದೆ. ಮದುವೆಯಾದಾಗ ‘ಪುರುಷನು ತನ್ನ ತಂದೆತಾಯಿಯನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು’ ಎಂದು ಬೈಬಲ್ ಹೇಳುತ್ತದೆ. ಇದೇ ಮಾತು ಸ್ತ್ರೀಯರಿಗೂ ಅನ್ವಯವಾಗುತ್ತದೆ. ಗಂಡ-ಹೆಂಡತಿಯರಿಬ್ಬರೂ “ಒಂದೇ ಶರೀರವಾಗಿರುವರು” ಎಂದೂ ಬೈಬಲ್ ಹೇಳುತ್ತದೆ. ಹೀಗೆ ಮದುವೆಯಿಂದ ಒಂದು ಹೊಸ ಕುಟುಂಬ ಆರಂಭವಾಗುತ್ತದೆ.—ಮತ್ತಾಯ 19:5.
ನಿಮ್ಮ ಹೆತ್ತವರಿಗಿಂತ ನಿಮ್ಮ ಮದುವೆಯ ಬಂಧಕ್ಕೆ ಪ್ರಾಮುಖ್ಯತೆ ಕೊಡಿ. ‘ಒಬ್ಬ ವಿವಾಹಿತ ವ್ಯಕ್ತಿ, ‘ನಾನು, ನನ್ನದು’ ಅಂತ ಯೋಚಿಸದೆ ‘ನಾವು, ನಮ್ಮದು’ ಅಂತ ಯೋಚಿಸಬೇಕು. ಆದರೆ ಇದನ್ನು ಮಾಡುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯವಾಗಿರಲು ನೀವು ನಿಮ್ಮ ಕುಟುಂಬದವರಿಗಿಂತ ನಿಮ್ಮ ಸಂಗಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು’ ಎಂದು ವಿವಾಹ ಸಲಹೆಗಾರರಾದ ಜಾನ್ ಎಮ್. ಗೊಟ್‌ಮನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. *
ಕೆಲವು ಹೆತ್ತವರಿಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ತುಂಬ ಕಷ್ಟ ಆಗಬಹುದು. “ಮದುವೆಗೆ ಮುಂಚೆ ನನ್ನ ಹೆಂಡತಿ ಅವಳ ಅಪ್ಪ-ಅಮ್ಮನ ಇಷ್ಟದ ಪ್ರಕಾರ ನಡೆದುಕೊಳ್ಳುತ್ತಿದ್ದಳು. ಆದರೆ ನಮ್ಮ ಮದುವೆಯಾದ ನಂತರ ನನಗೆ ಪ್ರಾಮುಖ್ಯತೆ ಕೊಡುವುದನ್ನು ನೋಡಿ ಅವಳ ಅಮ್ಮನಿಗೆ ಅದನ್ನು ಅರಗಿಸಿಕೊಳ್ಳುವುದಕ್ಕೇ ಆಗಲಿಲ್ಲ.”
ನವ ದಂಪತಿಗಳಿಗೆ ಸಹ ತಮ್ಮ ಅತ್ತೆ-ಮಾವಂದಿರೊಂದಿಗೆ ಹೊಂದಿಕೊಳ್ಳಲು ಕಷ್ಟ ಆಗಬಹುದು. “ಸ್ನೇಹಿತರನ್ನು ಆಯ್ಕೆ ಮಾಡುವ ಹಾಗೆ ಅತ್ತೆ-ಮಾವನವರನ್ನು ಆಯ್ಕೆ ಮಾಡಲು ಆಗುವುದಿಲ್ಲ. ನಿಮಗೆ ಅವರು ಇಷ್ಟ ಆದರೂ ಆಗದೇ ಇದ್ದರೂ ಅವರ ಜೊತೆ ಹೊಂದಿಕೊಳ್ಳಲೇಬೇಕು. ಅವರು ನಿಮಗೆ ಕೋಪ ಬರುವಂತೆ ನಡೆದುಕೊಂಡರೂ ಅವರನ್ನು ದೂರ ಮಾಡೋಕಾಗಲ್ಲ. ಯಾಕೆಂದರೆ ಅವರೂ ನಿಮ್ಮ ಕುಟುಂಬದವರೇ” ಎಂದು ಆರಂಭದಲ್ಲಿ ತಿಳಿಸಲಾದ ಜೇಮ್ಸ್ ಹೇಳುತ್ತಾರೆ.
ಇದಕ್ಕೇನು ಪರಿಹಾರ?
ನಿಮ್ಮ ಅತ್ತೆ-ಮಾವನವರ ವಿಷಯದಲ್ಲಿ ನಿಮಗೂ ನಿಮ್ಮ ಸಂಗಾತಿಗೂ ಭಿನ್ನಾಭಿಪ್ರಾಯ ಇದ್ದರೆ, ಮೊದಲು ನಿಮ್ಮಿಬ್ಬರ ಅಭಿಪ್ರಾಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. “ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು” ಎಂಬ ಬೈಬಲ್ ಸಲಹೆಯನ್ನು ಅನ್ವಯಿಸುತ್ತಾ ಒಂದೇ ನಿರ್ಣಯಕ್ಕೆ ಬನ್ನಿ.—ಕೀರ್ತನೆ 34:14.
ಇದನ್ನು ಮಾಡುವುದು ಹೇಗೆಂದು ತಿಳಿದುಕೊಳ್ಳಲು ಈ ಕೆಳಗಿನ ಸನ್ನಿವೇಶಗಳನ್ನು ಗಮನಿಸಿ. ಈ ಸನ್ನಿವೇಶಗಳು ಗಂಡ ಅಥವಾ ಹೆಂಡತಿ, ಇವರಿಬ್ಬರಲ್ಲಿ ಯಾರಿಗೆ ಬೇಕಾದರೂ ಎದುರಾಗಬಹುದು. ಇಲ್ಲಿ ಕೊಡಲಾದ ಸೂತ್ರಗಳಿಗನುಸಾರ ನಡೆದುಕೊಂಡರೆ ಅತ್ತೆ, ಮಾವ ಜೊತೆಗಿನ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು.
‘ನೀವು ನಮ್ಮ ಅಮ್ಮನ ಜೊತೆ ಸ್ವಲ್ಪ ಚೆನ್ನಾಗಿರಬಹುದಲ್ಲಾ’ ಅಂತ ನಿಮ್ಮ ಹೆಂಡತಿ ಹೇಳುತ್ತಿರುತ್ತಾರೆ. ಆದರೆ ನಿಮಗೆ ಅವರ ಅಮ್ಮನ ಜೊತೆ ಹೊಂದಿಕೊಳ್ಳಲಿಕ್ಕೇ ಕಷ್ಟ ಆಗುತ್ತಿರಬಹುದು.
ಹೀಗೆ ಮಾಡಿ: ಈ ಸಮಸ್ಯೆಯ ಬಗ್ಗೆ ನಿಮ್ಮ ಹೆಂಡತಿಯ ಜೊತೆ ಮಾತಾಡಿ. ನಿಮ್ಮ ಅತ್ತೆಗೋಸ್ಕರ ಅಲ್ಲದೇ ಇದ್ದರೂ ನಿಮ್ಮ ಹೆಂಡತಿಗೋಸ್ಕರ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಯಾಕೆಂದರೆ ‘ಜೀವನ ಪೂರ್ತಿ ನಿನ್ನನ್ನು ಪ್ರೀತಿಸುತ್ತೇನೆ’ ಅಂತ ಆಕೆಗೆ ನೀವು ಮಾತುಕೊಟ್ಟಿದ್ದೀರಿ. ಆಕೆಯ ಅಮ್ಮನೊಂದಿಗೆ ಚೆನ್ನಾಗಿರಲು ಯಾವ ಒಂದೆರಡು ವಿಷಯಗಳನ್ನು ಮಾಡುತ್ತೀರೆಂದು ಆಕೆಯೊಂದಿಗೆ ಮಾತಾಡಿ ತೀರ್ಮಾನಿಸಿ. ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಿ. ನೀವು ಹಾಕುವ ಪ್ರಯತ್ನಗಳನ್ನು ನೋಡಿದಾಗ ನಿಮ್ಮ ಹೆಂಡತಿಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುವುದು.—ಬೈಬಲಿನ ತತ್ವ: 1 ಕೊರಿಂಥ 10:24.
‘ನಿನಗೆ ನನಗಿಂತ ನಿಮ್ಮ ಅಪ್ಪ ಅಮ್ಮನೇ ಹೆಚ್ಚು’ ಅಂತ ನಿಮ್ಮ ಗಂಡ ಹೇಳುತ್ತಾರೆ.
ಹೀಗೆ ಮಾಡಿ: ನಿಮ್ಮ ಗಂಡನಿಗೆ ಯಾಕೆ ಹಾಗೆ ಅನಿಸುತ್ತದೆ ಅಂತ ಅವರ ಹತ್ತಿರ ಮಾತಾಡಿ. ಅವರ ಅನಿಸಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ನಿಮ್ಮ ಹೆತ್ತವರಿಗೆ ಕೊಡಬೇಕಾದ ಗೌರವ ಕೊಟ್ಟರೆ ನಿಮ್ಮ ಗಂಡ ಬೇಜಾರು ಮಾಡಿಕೊಳ್ಳಬಾರದು. (ಜ್ಞಾನೋಕ್ತಿ 23:22) ಒಂದು ವೇಳೆ, ಅವರು ಬೇಜಾರು ಮಾಡಿಕೊಂಡರೆ ನೀವು ನಿಮ್ಮ ಮಾತು ಮತ್ತು ಕ್ರಿಯೆಗಳ ಮೂಲಕ ನಿಮ್ಮ ಹೆತ್ತವರಿಗಿಂತ ನಿಮಗೆ ನಿಮ್ಮ ಗಂಡನೇ ಮುಖ್ಯ ಅಂತ ತೋರಿಸಿಕೊಡಿ. ಅವರಿಗೆ ಒಮ್ಮೆ ಈ ವಿಷಯ ಸರಿಯಾಗಿ ಮನವರಿಕೆಯಾದರೆ ‘ನಿನಗೆ ನನಗಿಂತ ನಿನ್ನ ಹೆತ್ತವರೇ ಮುಖ್ಯ’ ಅಂತ ಯಾವತ್ತೂ ಹೇಳುವುದಿಲ್ಲ.—ಬೈಬಲಿನ ತತ್ವ: ಎಫೆಸ 5:33.
ನಿಮ್ಮ ಹೆಂಡತಿಗೆ ಸಲಹೆ ಬೇಕಿದ್ದಾಗ ನಿಮ್ಮನ್ನು ಕೇಳುವುದಿಲ್ಲ, ಬದಲಿಗೆ ಆಕೆ ತನ್ನ ಹೆತ್ತವರನ್ನು ಕೇಳುತ್ತಾರೆ.
ಹೀಗೆ ಮಾಡಿ: ಯಾವ ವಿಷಯಗಳನ್ನು ಅಪ್ಪ-ಅಮ್ಮಂದಿರಿಗೆ ಹೇಳಬಹುದು, ಯಾವ ವಿಷಯಗಳನ್ನು ಹೇಳಬಾರದೆಂದು ನಿಮ್ಮ ಹೆಂಡತಿಯ ಜೊತೆ ಮಾತಾಡಿ ಜೊತೆಯಾಗಿ ನಿರ್ಣಯಿಸಿ. ಎಲ್ಲಾ ವಿಷಯಗಳಲ್ಲಿ ನಿಮ್ಮ ಹೆಂಡತಿಗೆ ಕಟ್ಟುನಿಟ್ಟು ಮಾಡದೆ, ನ್ಯಾಯವಾಗಿ ನಡೆದುಕೊಳ್ಳಿ. ಹೆತ್ತವರ ಹತ್ತಿರ ಸಲಹೆ ಕೇಳುವುದೇ ತಪ್ಪಾ? ಯಾವ ಸಂದರ್ಭಗಳಲ್ಲಿ ಅವರ ಹತ್ತಿರ ಸಲಹೆ ಪಡೆಯಬಹುದು? ಎಂಬ ವಿಷಯಗಳಲ್ಲಿ ಇಬ್ಬರೂ ಒಂದೇ ತೀರ್ಮಾನಕ್ಕೆ ಬರುವುದಾದರೆ, ಈ ಸಮಸ್ಯೆ ಸರಿಹೋಗುತ್ತದೆ.—ಬೈಬಲಿನ ತತ್ವ: ಫಿಲಿಪ್ಪಿ 4:5. ▪ (g15-E 03)
^ ಪ್ಯಾರ. 4 ಹೆಸರುಗಳನ್ನು ಬದಲಾಯಿಸಲಾಗಿದೆ.
^ ಪ್ಯಾರ. 9 ಪುಸ್ತಕದ ಹೆಸರು ದ ಸೆವೆನ್ ಪ್ರಿನ್ಸಿಪಲ್ಸ್ ಫಾರ್ ಮೇಕಿಂಗ್ ಮ್ಯಾರೇಜ್ ವರ್ಕ್ ಎಂದಾಗಿದೆ.