ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
ಪರಾನುಭೂತಿ ದಯೆ ಹಾಗೂ ಕರುಣೆಗೆ ಕೀಲಿ ಕೈ
“ನೀನು ಇನ್ನೊಬ್ಬ ವ್ಯಕ್ತಿಯ ದುಃಖವನ್ನು ಶಮನಗೊಳಿಸುವಷ್ಟರ ವರೆಗೆ ನಿನ್ನ ಬದುಕು ವ್ಯರ್ಥವಾಗಿರುವುದಿಲ್ಲ” ಎಂದು ಹೆಲೆನ್ ಕೆಲರ್ ಬರೆದರು. ಅವರಿಗೆ ಭಾವನಾತ್ಮಕ ನೋವು ಎಂದರೇನೆಂಬುದು ಖಂಡಿತವಾಗಿಯೂ ಚೆನ್ನಾಗಿ ಅರ್ಥವಾಗುತ್ತಿತ್ತು. ಅವರು 19 ತಿಂಗಳುಗಳ ಪ್ರಾಯದಲ್ಲಿ, ಒಂದು ಕಾಯಿಲೆಗೆ ತುತ್ತಾಗಿ, ಪೂರ್ತಿಯಾಗಿ ಕುರುಡಿಯೂ ಕಿವುಡಿಯೂ ಆದರು. ಆದರೆ ಕರುಣಾಭರಿತರಾದ ಒಬ್ಬ ಶಿಕ್ಷಕಿಯು ಅವರಿಗೆ ಬ್ರೇಲ್ ಲಿಪಿಯನ್ನು ಓದಿ ಬರೆಯಲು ಮತ್ತು ಅನಂತರ ಮಾತಾಡಲೂ ಕಲಿಸಿದರು.
ಕೆಲರ್ ಅವರ ಶಿಕ್ಷಕಿ ಆ್ಯನ್ ಸಲಿವನರಿಗೂ, ಒಂದು ಶಾರೀರಿಕ ದೌರ್ಬಲ್ಯದೊಂದಿಗೆ ಸೆಣಸಾಡುವುದರಿಂದ ಆಗುವ ನಿರಾಶೆಯು ಚೆನ್ನಾಗಿ ಅರ್ಥವಾಗುತ್ತಿತ್ತು. ಅವರೇ ಬಹುಮಟ್ಟಿಗೆ ಕುರುಡಿಯಾಗಿದ್ದರು. ಆದರೆ ಹೆಲೆನರ ಕೈಗಳ ಮೇಲೆ ಅಕ್ಷರಗಳ “ಸಂಯೋಜನೆ ಮಾಡುವ” ಮೂಲಕ, ಹೆಲೆನರೊಂದಿಗೆ ಸಂವಾದಮಾಡುವ ಒಂದು ವಿಧಾನವನ್ನು ಆ್ಯನ್ ತುಂಬ ತಾಳ್ಮೆಯಿಂದ ಕಲ್ಪಿಸಿಕೊಂಡರು. ತಮ್ಮ ಶಿಕ್ಷಕಿಯ ಪರಾನುಭೂತಿಯಿಂದ ಸ್ಫೂರ್ತಿಯನ್ನು ಪಡೆದ ಹೆಲೆನ್, ಸ್ವತಃ ತಮ್ಮ ಬದುಕನ್ನು ಕುರುಡ ಹಾಗೂ ಕಿವುಡ ವ್ಯಕ್ತಿಗಳಿಗೆ ಸಹಾಯಮಾಡಲಿಕ್ಕಾಗಿ ಮುಡಿಪಾಗಿರಿಸಲು ನಿರ್ಣಯಿಸಿದರು. ತುಂಬ ಪ್ರಯತ್ನವನ್ನು ಮಾಡಿ ತಮ್ಮ ಸ್ವಂತ ದೌರ್ಬಲ್ಯವನ್ನು ಜಯಿಸಿದ ಬಳಿಕ, ತಾನಿರುವ ಸ್ಥಿತಿಯಲ್ಲೇ ಇರುವ ಇತರರಿಗಾಗಿ ಅವರಲ್ಲಿ ಪರಾನುಭೂತಿ ಹುಟ್ಟಿತು. ಹೆಲೆನರು ಅಂಥವರಿಗೆ ಸಹಾಯಮಾಡಲು ಬಯಸಿದರು.
ಈ ಸ್ವಾರ್ಥ ಲೋಕದಲ್ಲಿ, ನಾವು “ಕರುಣಿಸದೆ” ಇತರರು ಅಗತ್ಯದಲ್ಲಿರುವುದನ್ನು ನೋಡಿಯೂ ನೋಡದಂತೆ ಇರುವುದು ತುಂಬ ಸುಲಭ. (1 ಯೋಹಾನ 3:17) ಆದರೆ ಕ್ರೈಸ್ತರು ತಮ್ಮ ನೆರೆಯವರನ್ನೂ ಪರಸ್ಪರರನ್ನೂ ಯಥಾರ್ಥವಾಗಿ ಪ್ರೀತಿಸುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. (ಮತ್ತಾಯ 22:39; 1 ಪೇತ್ರ 4:8) ಆದರೆ ನಿಮಗೆ ಈ ವಾಸ್ತವಿಕತೆಯ ಬಗ್ಗೆ ಗೊತ್ತಿರಬಹುದು: ನಾವು ಪರಸ್ಪರರನ್ನು ಪ್ರೀತಿಸಬೇಕೆಂದು ಉದ್ದೇಶಿಸುತ್ತೇವಾದರೂ, ಇತರರ ದುಃಖವನ್ನು ಉಪಶಮನಗೊಳಿಸುವ ಅವಕಾಶಗಳನ್ನು ನಾವು ಅನೇಕವೇಳೆ ಉಪೇಕ್ಷೆಮಾಡುತ್ತೇವೆ. ಅವರ ಅಗತ್ಯಗಳೇನಾಗಿವೆ ಎಂಬುದು ನಮಗೆ ಗೊತ್ತಿರದಿರುವುದರಿಂದ ನಾವು ಹಾಗೆ ಮಾಡುತ್ತಿರಬಹುದು. ಆದುದರಿಂದ, ನಮ್ಮ ದಯೆ ಮತ್ತು ಕರುಣೆಯನ್ನು ತೋರಿಸುವ ಬಾಗಿಲನ್ನು ತೆರೆಯುವ ಕೀಲಿ ಕೈಯೇ ಪರಾನುಭೂತಿ.
ಪರಾನುಭೂತಿ ಅಂದರೇನು?
ಪರಾನುಭೂತಿಯು, “ಬೇರೊಬ್ಬರ ಸನ್ನಿವೇಶ, ಭಾವನೆಗಳು ಮತ್ತು ಉದ್ದೇಶಗಳನ್ನು ತನ್ನದಾಗಿ ಅನುಭವಿಸುವ ಶಕ್ತಿ ಮತ್ತು ಅವುಗಳ ಕುರಿತಾದ ತಿಳಿವಳಿಕೆ” ಆಗಿದೆಯೆಂದು ಒಂದು ಶಬ್ದಕೋಶವು ಹೇಳುತ್ತದೆ. ಬೇರೊಬ್ಬ ವ್ಯಕ್ತಿಯ ಸ್ಥಾನದಲ್ಲಿ ತನ್ನನ್ನೇ ಇರಿಸಿಕೊಳ್ಳುವ ಶಕ್ತಿಯೆಂದೂ ಅದನ್ನು ವರ್ಣಿಸಲಾಗಿದೆ. ಆದುದರಿಂದ, ಪರಾನುಭೂತಿಯು ಮೊತ್ತಮೊದಲಾಗಿ ನಾವು ಬೇರೊಬ್ಬ ವ್ಯಕ್ತಿಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಎರಡನೆಯದಾಗಿ ಆ ಪರಿಸ್ಥಿತಿಗಳು ಆ ವ್ಯಕ್ತಿಯಲ್ಲಿ ಬಡಿದೆಬ್ಬಿಸುವ ಭಾವನೆಗಳಲ್ಲಿ ಪಾಲ್ಗೊಳ್ಳುವುದೇ ಆಗಿದೆ. ಹೌದು, ಪರಾನುಭೂತಿಯಲ್ಲಿ, ಬೇರೊಬ್ಬ ವ್ಯಕ್ತಿಯ ದುಃಖವನ್ನು ನಮ್ಮ ಹೃದಯದಲ್ಲಿ ಅನುಭವಿಸುವುದು ಒಳಗೂಡಿರುತ್ತದೆ.
“ಪರಾನುಭೂತಿ” ಎಂಬ ಪದವು ಬೈಬಲಿನಲ್ಲಿ ಎಲ್ಲೂ ಇಲ್ಲ, ಆದರೆ ಶಾಸ್ತ್ರವಚನಗಳು ಪರೋಕ್ಷವಾಗಿ ಈ ಗುಣಕ್ಕೆ ಸೂಚಿಸುತ್ತವೆ. ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಸಲಹೆ ನೀಡಿದ್ದು: ‘ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ [“ಅನುಕಂಪವುಳ್ಳವರಾಗಿರಿ,” NW]; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆ ಉಳ್ಳವರಾಗಿರಿ.’ (1 ಪೇತ್ರ 3:8) “ಅನುಕಂಪ” ಎಂದು ಭಾಷಾಂತಾರಿಸಲ್ಪಟ್ಟಿರುವ ಗ್ರೀಕ್ ಪದದ ಅಕ್ಷರಾರ್ಥವು, “ಇನ್ನೊಬ್ಬರೊಂದಿಗೆ ಕಷ್ಟಪಡುವುದು” ಇಲ್ಲವೇ “ಕರುಣೆಯುಳ್ಳವರಾಗಿರುವುದು” ಎಂದಾಗಿದೆ. ಅಪೊಸ್ತಲ ಪೌಲನು ಅದೇ ರೀತಿಯ ಭಾವಗಳನ್ನು ಶಿಫಾರಸ್ಸು ಮಾಡಿ, “ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ” ಎಂದು ಜೊತೆ ಕ್ರೈಸ್ತರಿಗೆ ಬುದ್ಧಿವಾದವನ್ನಿತ್ತನು. ಪೌಲನು ಕೂಡಿಸಿ ಹೇಳಿದ್ದು: “ನಿಮ್ಮ ಕಡೆಗೆ ಯಾವ ಮನಸ್ಸುಳ್ಳವರಾಗಿರುತ್ತೀರೊ ಅದೇ ವಿಧದಲ್ಲಿ ಬೇರೆಯವರ ಕಡೆಗೂ ಇರಿ.” (ರೋಮಾಪುರ 12:15, 16, NW) ನಾವು ನಮ್ಮನ್ನೇ ನಮ್ಮ ನೆರೆಯವನ ಸ್ಥಾನದಲ್ಲಿ ಇರಿಸದಿದ್ದರೆ, ಅವನನ್ನು ನಮ್ಮಂತೆಯೇ ಪ್ರೀತಿಸುವುದು ಬಹುಮಟ್ಟಿಗೆ ಅಸಾಧ್ಯ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೊ?
ಬಹುಮಟ್ಟಿಗೆ ಎಲ್ಲರಲ್ಲೂ ಒಂದಿಷ್ಟು ಮಟ್ಟಿಗಿನ ಸ್ವಾಭಾವಿಕವಾದ ಪರಾನುಭೂತಿ ಇದ್ದೇ ಇರುತ್ತದೆ. ಹಸಿಯುತ್ತಿರುವ ಮಕ್ಕಳ ಇಲ್ಲವೆ ದುಗುಡಗೊಂಡಿರುವ ನಿರಾಶ್ರಿತರ ಕರುಳು ಹಿಂಡುವಂಥ ಚಿತ್ರಗಳನ್ನು ನೋಡಿ ಯಾರ ಹೃದಯ ಕಲಕುವುದಿಲ್ಲ? ತನ್ನ ಮಗುವಿನ ಅಳುವನ್ನು ಪ್ರೀತಿಯುಳ್ಳ ಯಾವುದೇ ತಾಯಿಯು ಅಲಕ್ಷಿಸಬಲ್ಲಳೊ? ಆದರೆ ಎಲ್ಲ ರೀತಿಯ ಸಂಕಷ್ಟವು ದೃಷ್ಟಿಗೆ ಗೋಚರವಾಗುವಂಥದ್ದಾಗಿರುವುದಿಲ್ಲ. ಆದುದರಿಂದ ನಾವು ಈ ಸಮಸ್ಯೆಗಳನ್ನು ಸ್ವತಃ ಅನುಭವಿಸಿರದಿದ್ದರೆ, ಖಿನ್ನತೆ, ಕಣ್ಣಿಗೆ ಮರೆಯಾಗಿರುವ ಒಂದು ಶಾರೀರಿಕ ಕಾಯಿಲೆ ಇಲ್ಲವೆ ತಿನ್ನುವ ಸಂಬಂಧದ ವ್ಯಾಧಿಯಿಂದ ನರಳುತ್ತಿರುವ ಒಬ್ಬ ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಕಷ್ಟಕರ! ಆದರೆ ನಾವು ಅಂಥ ಪರಿಸ್ಥಿತಿಯಲ್ಲಿಲ್ಲದಿದ್ದರೂ, ಅಂಥವರ ಕಡೆಗೆ ನಾವು ಅನುಕಂಪವನ್ನು ತೋರಿಸಬಲ್ಲೆವು ಮತ್ತು ಅದನ್ನು ಬೆಳೆಸಿಕೊಳ್ಳಬೇಕೆಂದು ಶಾಸ್ತ್ರವಚನಗಳು ತೋರಿಸುತ್ತವೆ.
ಪರಾನುಭೂತಿಯ ಶಾಸ್ತ್ರೀಯ ಉದಾಹರಣೆಗಳು
ಪರಾನುಭೂತಿಯ ವಿಷಯದಲ್ಲಿ ಯೆಹೋವನು ನಮ್ಮ ಪ್ರಧಾನ ಉದಾಹರಣೆಯಾಗಿದ್ದಾನೆ. ಆತನು ಸ್ವತಃ ಪರಿಪೂರ್ಣನಾಗಿದ್ದರೂ, ನಾವು ಪರಿಪೂರ್ಣರಾಗಿರುವಂತೆ ಆತನು ನಿರೀಕ್ಷಿಸುವುದಿಲ್ಲ. ಯಾಕೆಂದರೆ ಆತನು “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14; ರೋಮಾಪುರ 5:12) ಅಲ್ಲದೆ, ಆತನಿಗೆ ನಮ್ಮ ಇತಿಮಿತಿಗಳ ಬಗ್ಗೆ ತಿಳಿದಿರುವುದರಿಂದ, ‘ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಮಗೆ ಬರಗೊಡಿಸುವುದಿಲ್ಲ.’ (1 ಕೊರಿಂಥ 10:13) ತನ್ನ ಸೇವಕರ ಮತ್ತು ತನ್ನ ಆತ್ಮದ ಮೂಲಕ, ನಾವು ಪರಿಹಾರವನ್ನು ಕಂಡುಕೊಳ್ಳುವಂತೆ ಆತನು ನಮಗೆ ಸಹಾಯಮಾಡುತ್ತಾನೆ.—ಯೆರೆಮೀಯ 25:4, 5; ಅ. ಕೃತ್ಯಗಳು 5:32.
ತನ್ನ ಜನರು ಕಷ್ಟಪಡುತ್ತಿರುವಾಗ ಸ್ವತಃ ಯೆಹೋವನಿಗೆ ಅದರ ನೋವಿನ ಅನುಭವವಾಗುತ್ತದೆ. ಬಾಬೆಲಿನಿಂದ ಹಿಂದಿರುಗಿದ ಯೆಹೂದ್ಯರಿಗೆ ಆತನು ಹೇಳಿದ್ದು: “ನಿಮ್ಮನ್ನು ತಾಕುವವನು [ನನ್ನ] ಕಣ್ಣು ಗುಡ್ಡನ್ನು ತಾಕುವವನಾಗಿದ್ದಾನೆ.” (ಜೆಕರ್ಯ 2:8) ದೇವರ ಪರಾನುಭೂತಿಯ ಬಗ್ಗೆ ಚೆನ್ನಾಗಿ ತಿಳಿದಿದ್ದ ಬೈಬಲ್ ಲೇಖಕ ದಾವೀದನು ಆತನಿಗೆ ಹೇಳಿದ್ದು: “ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ; ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರದದೆಯಲ್ಲಾ.” (ಕೀರ್ತನೆ 56:8) ತನ್ನ ನಂಬಿಗಸ್ತ ಸೇವಕರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಹೋರಾಡುತ್ತಿರುವಾಗ ಸುರಿಸುವಂಥ ಕಣ್ಣೀರುಗಳನ್ನು, ಒಂದು ಪುಸ್ತಕದಲ್ಲಿ ಬರೆದಿಡಲ್ಪಟ್ಟಿದೆಯೊ ಎಂಬಂತೆ ಯೆಹೋವನು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಎಂಬ ಅರಿವು ಎಷ್ಟು ಸಾಂತ್ವನದಾಯಕವಾಗಿದೆ!
ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ತಂದೆಯಂತೆ, ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಅವನೊಬ್ಬ ಕಿವುಡನನ್ನು ಗುಣಪಡಿಸಿದಾಗ, ಅವನನ್ನು ಗುಂಪಿನಿಂದ ಪ್ರತ್ಯೇಕವಾಗಿ ಒತ್ತಟ್ಟಿಗೆ ಕರತಂದನು. ಅವನ ಚಮತ್ಕಾರದ ಗುಣಪಡಿಸುವಿಕೆಯು ಅವನನ್ನು ಅನಾವಶ್ಯಕವಾಗಿ ಪೇಚಾಟಕ್ಕೊಳಪಡಿಸಿ, ಬೆಚ್ಚಿಬೀಳಿಸದಂತೆ ಯೇಸು ಹೀಗೆ ಮಾಡಿರಬಹುದು. (ಮಾರ್ಕ 7:32-35) ಇನ್ನೊಂದು ಸಂದರ್ಭದಲ್ಲಿ, ಒಬ್ಬ ವಿಧವೆಯು ತನ್ನ ಒಬ್ಬನೇ ಮಗನನ್ನು ಹೂಳಿಡಲು ಹೋಗುವುದನ್ನು ಯೇಸು ನೋಡಿದನು. ಅವಳಿಗಾಗುತ್ತಿದ್ದ ವೇದನೆಯನ್ನು ಅವನು ಕೂಡಲೇ ಅರ್ಥಮಾಡಿಕೊಂಡನು. ಅವನು ಆ ಶವಯಾತ್ರೆಯ ಬಳಿ ಹೋಗಿ, ಆ ಯುವಕನನ್ನು ಪುನರುತ್ಥಾನಗೊಳಿಸಿದನು.—ಲೂಕ 7:11-16.
ಯೇಸು ತನ್ನ ಪುನರುತ್ಥಾನದ ನಂತರ, ಸೌಲನಿಗೆ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಕಾಣಿಸಿಕೊಂಡಾಗ, ತನ್ನ ಶಿಷ್ಯರನ್ನು ಅವನು ಕ್ರೂರವಾಗಿ ಹಿಂಸಿಸುತ್ತಿದ್ದದ್ದು ತನ್ನನ್ನು ಹೇಗೆ ಬಾಧಿಸುತ್ತಿದೆಯೆಂಬುದನ್ನು ತಿಳಿಸಿದನು. “ನೀನು ಹಿಂಸೆಪಡಿಸುವ ಯೇಸುವೇ ನಾನು” ಎಂದು ಯೇಸು ಅವನಿಗೆ ಹೇಳಿದನು. (ಅ. ಕೃತ್ಯಗಳು 9:3-5) ತನ್ನ ಅಸ್ವಸ್ಥ ಮಗುವಿಗಾಗುತ್ತಿರುವ ನೋವನ್ನು ಸ್ವತಃ ಅನುಭವಿಸುತ್ತಿರುವ ಒಬ್ಬ ತಾಯಿಯಂತೆ, ತನ್ನ ಶಿಷ್ಯರು ಅನುಭವಿಸುತ್ತಿದ್ದ ನೋವನ್ನು ಯೇಸು ಸ್ವತಃ ಅನುಭವಿಸುತ್ತಿದ್ದನು. ಹಾಗೆಯೇ ನಮ್ಮ ಸ್ವರ್ಗೀಯ ಮಹಾ ಯಾಜಕನೋಪಾದಿ ಯೇಸು ‘ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪಪಡುತ್ತಾನೆ.’—ಇಬ್ರಿಯ 4:15.
ಅಪೊಸ್ತಲ ಪೌಲನು ಇತರರ ಕಷ್ಟಕಾರ್ಪಣ್ಯಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಲಿತುಕೊಂಡನು. “ಯಾವನಾದರೂ ಬಲವಿಲ್ಲದವನಾದರೆ ನಾನು ಅವನೊಂದಿಗೆ ಬಲವಿಲ್ಲದವನಾಗದೆ ಇರುವೆನೋ? ಯಾವನಾದರೂ ಪಾಪದಲ್ಲಿ ಸಿಕ್ಕಿಕೊಂಡರೆ ನಾನು ತಾಪಪಡುವದಿಲ್ಲವೋ?” ಎಂದವನು ಕೇಳಿದನು. (2 ಕೊರಿಂಥ 11:29) ಒಬ್ಬ ದೇವದೂತನು ಪೌಲನನ್ನೂ ಸೀಲನನ್ನೂ ಫಿಲಿಪ್ಪಿಯಲ್ಲಿದ್ದ ಒಂದು ಸೆರೆಮನೆಯಿಂದ ಅದ್ಭುತಕರ ರೀತಿಯಲ್ಲಿ ಬಿಡಿಸಿದಾಗ, ಯಾರೂ ತಪ್ಪಿಸಿಕೊಂಡು ಓಡಿಹೋಗಿಲ್ಲವೆಂದು ಸೆರೆಯ ಯಜಮಾನನಿಗೆ ಹೇಳಬೇಕೆಂಬುದು ಪೌಲನ ಮನಸ್ಸಿಗೆ ಹೊಳೆದ ಮೊದಲ ವಿಚಾರವಾಗಿತ್ತು. ಸೆರೆಯ ಯಜಮಾನನು ಆತ್ಮಹತ್ಯೆ ಮಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಅವನು ಪರಾನುಭೂತಿಯಿಂದಾಗಿ ಗ್ರಹಿಸಿದನು. ಏಕೆಂದರೆ ಒಬ್ಬ ಸೆರೆಯಾಳು ತಪ್ಪಿಸಿಕೊಂಡು ಓಡಿಹೋಗುವಲ್ಲಿ ಮತ್ತು ವಿಶೇಷವಾಗಿ ಅವನ ಮೇಲೆ ಕಟ್ಟುನಿಟ್ಟಾದ ಕಾವಲಿಡುವಂತೆ ಅಪ್ಪಣೆ ಕೊಡಲ್ಪಟ್ಟಿರುವಲ್ಲಿ, ರೋಮನ್ ಪದ್ಧತಿಗನುಸಾರ ಸೆರೆಯ ಯಜಮಾನನಿಗೆ ತೀಕ್ಷ್ಣವಾದ ಶಿಕ್ಷೆಯು ಸಿಗುವುದೆಂದು ಪೌಲನಿಗೆ ಗೊತ್ತಿತ್ತು. (ಅ. ಕೃತ್ಯಗಳು 16:24-28) ಪೌಲನ ದಯಾಪರ ಜೀವರಕ್ಷಕ ಕೃತ್ಯವು ಸೆರೆಯ ಯಜಮಾನನನ್ನು ತುಂಬ ಪ್ರಭಾವಿಸಿತು, ಮತ್ತು ಅವನೂ ಅವನ ಕುಟುಂಬವೂ ಕ್ರೈಸ್ತರಾಗಲಿಕ್ಕಾಗಿ ಬೇಕಾದ ಹೆಜ್ಜೆಗಳನ್ನು ಕೈಗೊಂಡಿತು.—ಅ. ಕೃತ್ಯಗಳು 16:30-34.
ಪರಾನುಭೂತಿಯನ್ನು ಬೆಳೆಸಿಕೊಳ್ಳುವ ವಿಧ
ನಾವು ನಮ್ಮ ಸ್ವರ್ಗೀಯ ತಂದೆಯನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನನ್ನು ಅನುಕರಿಸಬೇಕೆಂದು ಶಾಸ್ತ್ರವಚನಗಳು ಪದೇ ಪದೇ ಉತ್ತೇಜಿಸುತ್ತವೆ. ಆದುದರಿಂದ ಪರಾನುಭೂತಿಯು ನಾವು ವಿಕಸಿಸಿಕೊಳ್ಳಬೇಕಾದ ಒಂದು ಗುಣವಾಗಿದೆ. ನಾವಿದನ್ನು ಹೇಗೆ ಮಾಡಬಹುದು? ನಾವು ಇತರರ ಅಗತ್ಯಗಳು ಮತ್ತು ಭಾವನೆಗಳ ಕುರಿತು ನಮ್ಮ ಪ್ರತಿಕ್ರಿಯೆಯನ್ನು ತೀವ್ರಗೊಳಿಸಬಲ್ಲ ಮೂರು ಮುಖ್ಯ ವಿಧಾನಗಳಿವೆ: ಕಿವಿಗೊಡುವ ಮೂಲಕ, ಗಮನಿಸುವ ಮೂಲಕ ಮತ್ತು ಕಲ್ಪಿಸಿಕೊಳ್ಳುವ ಮೂಲಕ.
ಕಿವಿಗೊಡಿರಿ. ಜಾಗರೂಕತೆಯಿಂದ ಕಿವಿಗೊಡುವ ಮೂಲಕ, ಇತರರು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ಮತ್ತು ನಾವು ಎಷ್ಟು ಉತ್ತಮವಾಗಿ ಕಿವಿಗೊಡುತ್ತೇವೊ, ಅವರು ತಮ್ಮ ಮನಬಿಚ್ಚಿ ತಮ್ಮ ಭಾವನೆಗಳನ್ನು ಹೊರಗೆಡಹುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗಿರುತ್ತದೆ. “ಅವರು ನನಗೆ ಕಿವಿಗೊಡುವರೆಂಬ ಭರವಸೆಯು ನನಗಾಗುವಲ್ಲಿ ಮಾತ್ರ ನಾನೊಬ್ಬ ಹಿರಿಯರೊಂದಿಗೆ ಮಾತಾಡಬಲ್ಲೆ. ಅವರು ನಿಜವಾಗಿಯೂ ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುತ್ತಾರೆಂದು ನನಗೆ ತಿಳಿದುಬರಬೇಕು. ನಾನೇನನ್ನು ಹೇಳಿದ್ದೇನೊ ಅದಕ್ಕೆ ಅವರು ಜಾಗ್ರತೆಯಿಂದ ಕಿವಿಗೊಟ್ಟಿದ್ದಾರೆಂದು ತೋರಿಸುವ, ಮನಸ್ಸನ್ನು ಶೋಧಿಸುವ ಪ್ರಶ್ನೆಗಳನ್ನು ಅವರು ಕೇಳುವಾಗ, ಅವರಲ್ಲಿರುವ ನನ್ನ ಭರವಸೆಯು ಹೆಚ್ಚಾಗುತ್ತಾ ಹೋಗುತ್ತದೆ” ಎಂದು ಮಿರ್ಯಮ್ ವಿವರಿಸುತ್ತಾಳೆ.
ಗಮನಿಸಿರಿ. ತಮಗೆ ಹೇಗನಿಸುತ್ತಿದೆ ಇಲ್ಲವೆ ತಾವೇನು ಅನುಭವಿಸುತ್ತಿದ್ದೇವೆಂಬುದನ್ನು ಎಲ್ಲರೂ ನಮಗೆ ಮುಚ್ಚುಮರೆಯಿಲ್ಲದೆ ಬಂದು ಹೇಳಲಿಕ್ಕಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸುವ ವ್ಯಕ್ತಿಯೊಬ್ಬನು, ಒಬ್ಬ ಜೊತೆ ಕ್ರೈಸ್ತನು ಖಿನ್ನನಾಗಿರುವಂತೆ ತೋರುತ್ತಿದ್ದಾನೆ, ಒಬ್ಬ ಹದಿವಯಸ್ಕನು ಹೆಚ್ಚು ಮಾತನಾಡದೇ ಮೌನಿಯಾಗಿ ಬಿಟ್ಟಿದ್ದಾನೆ, ಇಲ್ಲವೆ ಒಬ್ಬ ಹುರುಪಿನ ಶುಶ್ರೂಷಕನ ಉತ್ಸಾಹವು ತಣ್ಣಗಾಗಿಹೋಗಿದೆ ಎಂಬುದನ್ನು ಬೇಗನೆ ಗಮನಿಸುತ್ತಾನೆ. ಆರಂಭದ ಹಂತಗಳಲ್ಲೇ ಏನೋ ಸಮಸ್ಯೆಯಿದೆಯೆಂಬುದನ್ನು ಪತ್ತೆಹಚ್ಚುವ ಈ ಸಾಮರ್ಥ್ಯವು ಹೆತ್ತವರಿಗಿರುವುದು ಅತ್ಯಾವಶ್ಯಕ. “ನಾನು ತಾಯಿಯೊಂದಿಗೆ ಮಾತಾಡುವ ಮುಂಚೆಯೇ ನನಗೆ ಹೇಗನಿಸುತ್ತದೆಂದು ಅವರಿಗೆ ಗೊತ್ತಾಗಿ ಬಿಡುತ್ತದೆ, ಅದು ಹೇಗೊ ನಾನರಿಯೇ. ಆದರೆ ಇದರಿಂದಾಗಿ ನನ್ನ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಮನಬಿಚ್ಚಿ ಮಾತಾಡಲು ನನಗೆ ಸುಲಭವಾಗುತ್ತದೆ” ಎಂದು ಮಾರಿ ಹೇಳುತ್ತಾಳೆ.
ನಿಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸಿರಿ. ಪರಾನುಭೂತಿಯನ್ನು ಕೆರಳಿಸುವ ಅತಿ ಪ್ರಭಾವಶಾಲಿ ವಿಧವು, ‘ನಾನು ಈ ಸನ್ನಿವೇಶದಲ್ಲಿರುತ್ತಿದ್ದಲ್ಲಿ, ನನಗೆ ಹೇಗನಿಸುತ್ತಿತ್ತು? ನಾನು ಹೇಗೆ ಪ್ರತಿಕ್ರಿಯಿಸುತ್ತಿದ್ದೆ? ನನಗೆ ಯಾವುದರ ಅಗತ್ಯವಿರುತ್ತಿತ್ತು?’ ಎಂದು ಸ್ವತಃ ಕೇಳಿಕೊಳ್ಳುವುದು ಆಗಿದೆ. ಯೋಬನ ಮೂರು ಮಂದಿ ಸುಳ್ಳು ಸಾಂತ್ವನಗಾರರು, ತಮ್ಮನ್ನು ಅವನ ಸ್ಥಾನದಲ್ಲಿರಿಸಲು ತಪ್ಪಿಹೋದರು. ಆದುದರಿಂದ ಅವನು ಗೈದಿರಬಹುದೆಂದು ಅವರು ಊಹಿಸಿದ ಕಾಲ್ಪನಿಕ ಪಾಪಗಳಿಗಾಗಿ ಅವರು ಅವನನ್ನು ಖಂಡಿಸಿದರು.
ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಬದಲು, ಅವರ ತಪ್ಪುಗಳನ್ನು ಟೀಕಿಸುವುದೇ ಅಪರಿಪೂರ್ಣ ಮಾನವರಿಗೆ ಹೆಚ್ಚು ಸುಲಭದ ಕೆಲಸವಾಗಿರುತ್ತದೆ. ಆದರೆ, ಮನನೊಂದಿರುವ ಒಬ್ಬ ವ್ಯಕ್ತಿಯ ಸಂಕಟವನ್ನು ಊಹಿಸಿಕೊಳ್ಳಲು ನಾವು ಸ್ವಲ್ಪ ಹೆಚ್ಚು ಪ್ರಯತ್ನ ಮಾಡುವಲ್ಲಿ, ಖಂಡಿಸುವ ಬದಲು ಪರಾನುಭೂತಿಯನ್ನು ತೋರಿಸುವಂತೆ ಅದು ನಮಗೆ ಸಹಾಯಮಾಡುವುದು. ಒಬ್ಬ ಅನುಭವಸ್ಥ ಹಿರಿಯರಾಗಿರುವ ಕ್ವಾನ್ ಹೇಳಿದ್ದು: “ನಾನು ಜಾಗರೂಕತೆಯಿಂದ ಕಿವಿಗೊಟ್ಟು, ಯಾವುದೇ ಸಲಹೆಸೂಚನೆಗಳನ್ನು ಕೊಡುವ ಮುಂಚೆ ಇಡೀ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಹೆಚ್ಚು ಉತ್ತಮವಾದ ಸಲಹೆಯನ್ನು ಕೊಡುತ್ತೇನೆ.”
ಯೆಹೋವನ ಸಾಕ್ಷಿಗಳಿಂದ ವಿತರಿಸಲ್ಪಡುವ ಪ್ರಕಾಶನಗಳು ಅನೇಕರಿಗೆ ಈ ವಿಷಯದಲ್ಲಿ ಸಹಾಯಮಾಡಿವೆ. ಖಿನ್ನತೆ ಮತ್ತು ಮಕ್ಕಳ ದೌರ್ಜನ್ಯದಂಥ ಜಟಿಲವಾದ ಸಮಸ್ಯೆಗಳ ಕುರಿತಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಚರ್ಚಿಸಿವೆ. ಈ ಸಮಯೋಚಿತ ಮಾಹಿತಿಯು ವಾಚಕರಿಗೆ, ಇಂಥ ವಿಧಗಳಲ್ಲಿ ಕಷ್ಟಪಡುತ್ತಿರುವವರ ಭಾವನೆಗಳಿಗೆ ನಾವು ಹೆಚ್ಚು ಸೂಕ್ಷ್ಮಮತಿಗಳಾಗಿರುವಂತೆ ಸಹಾಯಮಾಡುತ್ತದೆ. ಅದೇ ರೀತಿಯಲ್ಲಿ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವು, ಅನೇಕ ಹೆತ್ತವರಿಗೆ ತಮ್ಮ ಮಕ್ಕಳ ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿದೆ.
ಪರಾನುಭೂತಿಯು ಕ್ರೈಸ್ತ ಚಟುವಟಿಕೆಗಳಲ್ಲಿ ಸಹಾಯಮಾಡುತ್ತದೆ
ಹಸಿದಿರುವ ಒಂದು ಮಗು ನಮ್ಮ ಮುಂದೆ ಇರುವಾಗ, ನಮ್ಮ ಬಳಿ ಅವನೊಂದಿಗೆ ಹಂಚಿಕೊಳ್ಳಲು ಸಾಕಾಗುವಷ್ಟು ಆಹಾರವಿರುವಲ್ಲಿ ನಮ್ಮಲ್ಲಿ ಹೆಚ್ಚಿನವರು ಅವನ ಆ ಅವಸ್ಥೆಯನ್ನು ಅಲಕ್ಷ್ಯಮಾಡೆವು. ನಮಗೆ ಪರಾನುಭೂತಿ ಇರುವಲ್ಲಿ, ನಾವು ಆ ವ್ಯಕ್ತಿಯ ಆತ್ಮಿಕ ಸ್ಥಿತಿಯನ್ನೂ ವಿವೇಚಿಸುವೆವು. ಯೇಸುವಿನ ಬಗ್ಗೆ ಬೈಬಲ್ ಹೇಳುವುದು: “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಇಂದು ಕೋಟಿಗಟ್ಟಲೆ ಜನರು ಅದೇ ರೀತಿಯ ಆತ್ಮಿಕ ಸ್ಥಿತಿಯಲ್ಲಿದ್ದಾರೆ ಮತ್ತು ಅವರಿಗೆ ಸಹಾಯದ ಅಗತ್ಯವಿದೆ.
ಯೇಸುವಿನ ದಿನದಲ್ಲಿದ್ದಂತೆಯೇ, ಕೆಲವು ಜನರ ಹೃದಯಗಳನ್ನು ತಲಪಲಿಕ್ಕಾಗಿ ನಾವು ಪೂರ್ವಗ್ರಹವನ್ನು ಇಲ್ಲವೇ ಆಳವಾಗಿ ಬೇರೂರಿರುವ ಸಂಪ್ರದಾಯವನ್ನು ಜಯಿಸಬೇಕಾಗಬಹುದು. ಪರಾನುಭೂತಿಯುಳ್ಳ ಶುಶ್ರೂಷಕನು ತನ್ನ ಸಂದೇಶವನ್ನು ಹೆಚ್ಚು ಆಕರ್ಷಕವನ್ನಾಗಿ ಮಾಡಲು, ಮನೆಯವನೂ ತಾನೂ ಪರಸ್ಪರ ಒಪ್ಪಿಕೊಳ್ಳುವಂಥ ಒಂದು ವಿಷಯದ ಬಗ್ಗೆ ಇಲ್ಲವೆ ಜನರ ಮನಸ್ಸಿನಲ್ಲಿರುವ ವಿಷಯಗಳ ಬಗ್ಗೆ ಮಾತಾಡಲು ಪ್ರಯತ್ನಿಸುವನು. (ಅ. ಕೃತ್ಯಗಳು 17:22, 23; 1 ಕೊರಿಂಥ 9:20-23) ಪರಾನುಭೂತಿಯಿಂದ ಪ್ರೇರಿಸಲ್ಪಟ್ಟಿರುವ ದಯೆಯ ಕೃತ್ಯಗಳು, ನಮ್ಮ ಕೇಳುಗರು ಫಿಲಿಪ್ಪಿಯ ಸೆರೆಯ ಯಜಮಾನನಂತೆಯೇ ರಾಜ್ಯ ಸಂದೇಶಕ್ಕೆ ಹೆಚ್ಚು ಸಂತೋಷದಿಂದ ಕಿವಿಗೊಡುವಂತೆ ಮಾಡುವವು.
ಸಭೆಯೊಳಗೆ ಇತರರ ಕುಂದುಕೊರತೆಗಳನ್ನು ಉಪೇಕ್ಷಿಸಲು ಸಹಾಯಮಾಡುವುದಕ್ಕಾಗಿ ಪರಾನುಭೂತಿಯು ಅತ್ಯಮೂಲ್ಯವಾಗಿದೆ. ನಮ್ಮ ಮನಸ್ಸಿಗೆ ನೋವನ್ನುಂಟುಮಾಡಿರುವ ಒಬ್ಬ ಸಹೋದರನ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಲ್ಲಿ, ಅವನನ್ನು ಕ್ಷಮಿಸುವುದು ನಿಸ್ಸಂದೇಹವಾಗಿಯೂ ಹೆಚ್ಚು ಸುಲಭವಾಗುವುದು. ಒಂದುವೇಳೆ ನಾವು ಆ ಪರಿಸ್ಥಿತಿಯಲ್ಲಿರುತ್ತಿದ್ದಲ್ಲಿ ಮತ್ತು ಅವನಂಥದ್ದೇ ಹಿನ್ನೆಲೆ ಇರುತ್ತಿದ್ದಲ್ಲಿ ಬಹುಶಃ ನಾವು ಕೂಡ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೆವೊ ಏನೋ. “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳು” ವಂತೆ ಯೆಹೋವನ ಪರಾನುಭೂತಿಯೇ ಆತನನ್ನು ಪ್ರಚೋದಿಸುತ್ತದೆ. ಹೀಗಿರುವುದರಿಂದ, ನಮ್ಮ ಪರಾನುಭೂತಿಯು ನಾವು ಇತರರ ಅಪರಿಪೂರ್ಣತೆಗಳಿಗೆ ಅನುವು ನೀಡಿ ಅವರನ್ನು ‘ಕ್ಷಮಿಸುವಂತೆ’ ನಮ್ಮನ್ನು ಪ್ರೇರಿಸಬೇಕಲ್ಲವೊ?—ಕೀರ್ತನೆ 103:14; ಕೊಲೊಸ್ಸೆ 3:13.
ನಾವು ಬುದ್ಧಿವಾದವನ್ನು ಕೊಡಬೇಕಾಗುವಾಗ, ತಪ್ಪುಮಾಡಿರುವ ವ್ಯಕ್ತಿಯ ಭಾವನೆಗಳನ್ನೂ ಸೂಕ್ಷ್ಮ ಮನೋವಿಕಾರಗಳನ್ನೂ ಗ್ರಹಿಸುವಲ್ಲಿ ನಾವು ಬಹುಶಃ ಸಲಹೆಯನ್ನು ಹೆಚ್ಚು ದಯೆಯಿಂದ ಕೊಡುವೆವು. ಪರಾನುಭೂತಿಯುಳ್ಳ ಹಿರಿಯನು ಇದನ್ನು ಜ್ಞಾಪಿಸಿಕೊಳ್ಳುತ್ತಾ ಇರುತ್ತಾನೆ: ‘ನಾನು ಸಹ ಇದೇ ತಪ್ಪನ್ನು ಮಾಡುವ ಸಾಧ್ಯತೆ ಇದೆ. ನಾನು ಅವನ ಸ್ಥಿತಿಯಲ್ಲಿರಸಾಧ್ಯವಿದೆ.’ ಹೀಗಿರುವುದರಿಂದ ಪೌಲನು ಶಿಫಾರಸ್ಸುಮಾಡುವುದು: “ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ.”—ಗಲಾತ್ಯ 6:1.
ಪರಾನುಭೂತಿಯು, ನಮ್ಮಿಂದ ಸಾಧ್ಯವಿರುವಲ್ಲಿ ಪ್ರಾಯೋಗಿಕ ಸಹಾಯವನ್ನು ಕೊಡುವಂತೆ ನಮ್ಮನ್ನು ಪ್ರಚೋದಿಸುವುದು. ಆ ಜೊತೆ ಕ್ರೈಸ್ತನು ಆ ಸಹಾಯವನ್ನು ಕೇಳಲು ಹಿಂಜರಿದರೂ ನಾವದನ್ನು ನೀಡುವೆವು. ಅಪೊಸ್ತಲ ಯೋಹಾನನು ಬರೆಯುವುದು: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ? . . . ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.”—1 ಯೋಹಾನ 3:17, 18.
“ಕೃತ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿಯನ್ನು ತೋರಿಸಲಿಕ್ಕಾಗಿ, ನಾವು ಪ್ರಥಮವಾಗಿ ನಮ್ಮ ಸಹೋದರರ ನಿರ್ದಿಷ್ಟ ಅಗತ್ಯಗಳೇನೆಂಬುದನ್ನು ನೋಡಬೇಕಾಗಿದೆ. ಬೇರೆಯವರಿಗೆ ಸಹಾಯಮಾಡುವ ದೃಷ್ಟಿಕೋನದಿಂದ ನಾವು ಅವರ ಅಗತ್ಯಗಳೇನೆಂಬುದನ್ನು ಜಾಗರೂಕತೆಯಿಂದ ಗಮನಿಸುತ್ತೇವೊ? ಪರಾನುಭೂತಿಯೆಂದರೆ ಇದೇ.
ಅನುಕಂಪವನ್ನು ಬೆಳೆಸಿಕೊಳ್ಳಿರಿ
ಸ್ವಾಭಾವಿಕವಾಗಿ ನಾವು ಪರಾನುಭೂತಿಯುಳ್ಳವರು ಆಗಿರಲಿಕ್ಕಿಲ್ಲ. ಆದರೆ ನಾವು ಈ ಅನುಕಂಪದ ಭಾವನೆಯನ್ನು ಬೆಳೆಸಿಕೊಳ್ಳಬಹುದು. ನಾವು ಹೆಚ್ಚು ಲಕ್ಷ್ಯವಿಟ್ಟು ಕಿವಿಗೊಡುವಲ್ಲಿ, ಹೆಚ್ಚು ಸೂಕ್ಷ್ಮವಾಗಿ ಗಮನಿಸುವಲ್ಲಿ, ಮತ್ತು ಇನ್ನೊಬ್ಬ ವ್ಯಕ್ತಿಯ ಪರಿಸ್ಥಿತಿಯಲ್ಲಿ ನಾವಿರುವುದನ್ನು ಪದೇ ಪದೇ ಕಲ್ಪಿಸಿಕೊಳ್ಳುವಲ್ಲಿ, ನಮ್ಮ ಪರಾನುಭೂತಿಯು ಬೆಳೆಯುವುದು. ಫಲಿತಾಂಶವಾಗಿ ನಾವು ನಮ್ಮ ಮಕ್ಕಳಿಗೆ, ಇತರ ಕ್ರೈಸ್ತರಿಗೆ ಮತ್ತು ನಮ್ಮ ನೆರೆಯವರಿಗೆ ಹೆಚ್ಚು ಪ್ರೀತಿ, ದಯೆ ಮತ್ತು ಕರುಣೆಯನ್ನು ತೋರಿಸುವಂತೆ ಪ್ರಚೋದಿಸಲ್ಪಡುವೆವು.
ಸ್ವಾರ್ಥಭಾವವು ನಿಮ್ಮ ಪರಾನುಭೂತಿಯನ್ನು ನಿಗ್ರಹಿಸುವಂತೆ ಬಿಡಬೇಡಿ. “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ” ಎಂದು ಪೌಲನು ಬರೆದನು. (ಫಿಲಿಪ್ಪಿ 2:4) ನಮ್ಮ ನಿತ್ಯ ಭವಿಷ್ಯತ್ತು, ಯೆಹೋವನ ಮತ್ತು ಆತನ ಮಹಾ ಯಾಜಕನಾದ ಯೇಸು ಕ್ರಿಸ್ತನ ಪರಾನುಭೂತಿಯ ಮೇಲೆ ಅವಲಂಬಿಸಿದೆ. ಹೀಗಿರುವುದರಿಂದ, ಈ ಗುಣವನ್ನು ಬೆಳೆಸಿಕೊಳ್ಳಲು ನಮಗೆ ಒಂದು ನೈತಿಕ ಹಂಗು ಇದೆ. ನಮ್ಮ ಪರಾನುಭೂತಿಯು ನಾವು ಹೆಚ್ಚು ಉತ್ತಮ ಶುಶ್ರೂಷಕರು ಮತ್ತು ಹೆಚ್ಚು ಉತ್ತಮ ಹೆತ್ತವರಾಗಿರುವಂತೆ ನಮ್ಮನ್ನು ಶಕ್ತಗೊಳಿಸುವುದು. ಎಲ್ಲದಕ್ಕಿಂತಲೂ ಹೆಚ್ಚಾಗಿ “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚು ಆನಂದ” ಇದೆಯೆಂಬುದನ್ನು ಕಂಡುಕೊಳ್ಳಲು ಪರಾನುಭೂತಿಯು ನಮಗೆ ಸಹಾಯಮಾಡುವುದು.—ಅ. ಕೃತ್ಯಗಳು 20:35, NW.
[ಪುಟ 25ರಲ್ಲಿರುವ ಚಿತ್ರ]
ಪರಾನುಭೂತಿಯಲ್ಲಿ, ಬೇರೆಯವರಿಗೆ ಸಹಾಯಮಾಡುವ ದೃಷ್ಟಿಕೋನದಿಂದ, ಅವರ ಅಗತ್ಯಗಳೇನೆಂಬುದನ್ನು ಜಾಗರೂಕತೆಯಿಂದ ಗಮನಿಸಿ ನೋಡುವುದು ಸೇರಿರುತ್ತದೆ
[ಪುಟ 26ರಲ್ಲಿರುವ ಚಿತ್ರ]
ಒಬ್ಬ ಪ್ರೀತಿಯುಳ್ಳ ತಾಯಿಯು ಸ್ವಾಭಾವಿಕವಾಗಿ ತನ್ನ ಮಗುವಿನ ಕಡೆಗೆ ತೋರಿಸುವ ಪರಾನುಭೂತಿಯನ್ನು ನಾವು ಸಹ ತೋರಿಸಲು ಕಲಿಯುವೆವೊ?