ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಐಕ್ಯತೆಗೊಂದು ನಿದರ್ಶನ, ಭಾವೀ ಯೋಜನೆಗಳ ರೋಮಾಂಚನ

ಐಕ್ಯತೆಗೊಂದು ನಿದರ್ಶನ, ಭಾವೀ ಯೋಜನೆಗಳ ರೋಮಾಂಚನ

ವಾರ್ಷಿಕ ಕೂಟದ ವರದಿ

ಐಕ್ಯತೆಗೊಂದು ನಿದರ್ಶನ, ಭಾವೀ ಯೋಜನೆಗಳ ರೋಮಾಂಚನ

ವಾಚ್‌ ಟವರ್‌ ಬೈಬಲ್‌ ಅಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ವಾರ್ಷಿಕ ಕೂಟಗಳು ಕುತೂಹಲದಿಂದ ಕೂಡಿರುತ್ತವೆ. 2011, ಅಕ್ಟೋಬರ್‌ 1ರ ಶನಿವಾರದಂದು ನಡೆದ 127ನೇ ವಾರ್ಷಿಕ ಕೂಟದ ವಿಷಯದಲ್ಲೂ ಇದು ಸತ್ಯವಾಗಿತ್ತು. ಈ ಕೂಟಕ್ಕಾಗಿ ಲೋಕದೆಲ್ಲೆಡೆಯಿಂದ ಅತಿಥಿಗಳು ಬಂದಿದ್ದರು. ಅಮೆರಿಕದ ನ್ಯೂ ಜೆರ್ಸಿಯಲ್ಲಿರುವ ಯೆಹೋವನ ಸಾಕ್ಷಿಗಳ ಸಭಾಂಗಣದಲ್ಲಿ ಈ ಕೂಟವನ್ನು ನಡೆಸಲಾಯಿತು.

ಆಡಳಿತ ಮಂಡಲಿಯ ಸದಸ್ಯ ಗೆರಿಟ್‌ ಲಾಶ್‌ 85 ದೇಶಗಳಿಂದ ಬಂದಿದ್ದ ಪ್ರತಿನಿಧಿಗಳನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾ ಕಾರ್ಯಕ್ರಮವನ್ನು ಆರಂಭಿಸಿದರು. ನಮ್ಮಲ್ಲಿರುವ ಅಂತಾರಾಷ್ಟ್ರೀಯ ಐಕ್ಯತೆ ಅದ್ವಿತೀಯವಾದದ್ದು. ಇಂಥ ಐಕ್ಯತೆಯಿಂದ ಜನರಿಗೆ ಒಳ್ಳೇ ಸಾಕ್ಷಿ ಸಿಗುತ್ತದೆ, ಯೆಹೋವನಿಗೆ ಮಹಿಮೆ ಸಲ್ಲುತ್ತದೆ ಎಂದರವರು. ಕೂಟದಲ್ಲಿ ಐಕ್ಯತೆಯ ಬಗ್ಗೆ ಎಷ್ಟೋ ಸಾರಿ ಮಾತಾಡಲಾಯಿತು.

ಮೆಕ್ಸಿಕೋದಿಂದ ಒಳ್ಳೇ ವರದಿ

ಕಾರ್ಯಕ್ರಮದ ಮೊದಲ ಭಾಗ ಯೆಹೋವನ ಜನರ ಐಕ್ಯತೆಗೆ ಒಂದು ನಿದರ್ಶನವನ್ನು ಕೊಟ್ಟಿತು. ಮೆಕ್ಸಿಕೊ ಬೆತೆಲ್‌ ಕುಟುಂಬದ ಬಾಲ್ಟಾಸಾರ್‌ ಪೆರ್ಲಾ ಎಂಬ ಸಹೋದರರು ತಮ್ಮೊಂದಿಗೆ ಕೆಲಸಮಾಡುವ ಮೂವರು ಸಹೋದರರ ಸಂದರ್ಶನ ಮಾಡಿದರು. ಇತ್ತೀಚೆಗೆ ಮಧ್ಯ ಅಮೆರಿಕದ ಆರು ಬ್ರಾಂಚ್‌ ಆಫಿಸ್‌ಗಳನ್ನು ಮುಚ್ಚಿ ಮೆಕ್ಸಿಕೊ ಬ್ರಾಂಚ್‌ನೊಂದಿಗೆ ಸೇರಿಸಿದ್ದರ ಬಗ್ಗೆ ಕೇಳಿದರು. ಹೀಗೆ ಬ್ರಾಂಚ್‌ಗಳನ್ನು ಒಂದುಮಾಡಿದ್ದರಿಂದ ಮೆಕ್ಸಿಕೊ ಬೆತೆಲ್‌ ಕುಟುಂಬದಲ್ಲಿ ಬೇರೆ ಬೇರೆ ಸಂಸ್ಕೃತಿ, ದೇಶದ ಸಹೋದರ ಸಹೋದರಿಯರು ಒಟ್ಟಿಗೆ ಕೆಲಸಮಾಡುವ ಸದವಕಾಶ ಸಿಕ್ಕಿದೆ ಎಂದು ಸಂದರ್ಶನದಲ್ಲಿ ತಿಳಿಸಲಾಯಿತು. ಇದರಿಂದ ಎಲ್ಲರೂ ತುಂಬ ಪ್ರೋತ್ಸಾಹ ಹೊಂದಿದ್ದಾರೆ. ದೇವರು ಒಂದು ದೊಡ್ಡ ರಬ್ಬರ್‌ ತೆಗೆದುಕೊಂಡು ಈ ಎಲ್ಲಾ ದೇಶಗಳ ಗಡಿರೇಖೆಗಳನ್ನು ಅಳಿಸಿಬಿಟ್ಟ ಹಾಗೆ ತೋರುತ್ತದೆ ಎಂದು ತಿಳಿಸಲಾಯಿತು.

ಬ್ರಾಂಚ್‌ಗಳನ್ನು ಒಂದಾಗಿಸಿದ್ದರಿಂದ ಸವಾಲೊಂದು ಎದುರಾಯಿತು. ತಮ್ಮ ದೇಶದಲ್ಲಿ ಬ್ರಾಂಚ್‌ ಆಫಿಸ್‌ ಇಲ್ಲದ ಕಾರಣ ಅಲ್ಲಿಯ ಪ್ರಚಾರಕರಿಗೆ ಯೆಹೋವನ ಸಂಘಟನೆಯಿಂದ ದೂರವಾದಂತೆ ಅನಿಸಿತು. ಅವರು ಹಾಗೆ ನೆನಸದಂತೆ ಬೇಕಾದ ನೆರವು ಕೊಡಬೇಕಾಯಿತು. ಪ್ರತಿಯೊಂದು ಸಭೆಗೆ ಒಂದು ಸುರಕ್ಷಿತ ಇ-ಮೇಲ್‌ ಸಂಪರ್ಕವನ್ನು ಕೊಡಲಾಯಿತು. ಇದರ ಮೂಲಕ ದೂರದೂರದಲ್ಲಿರುವ ಸಭೆಗಳೂ ಬೇಕಾದಾಗ ಹೊಸ ಬ್ರಾಂಚ್‌ ಆಫಿಸನ್ನು ನೇರವಾಗಿ ಸಂಪರ್ಕಿಸುವಂತಾಗಿದೆ.

ಜಪಾನ್‌ನ ವರದಿ

ಈ ವರದಿಯನ್ನು ಪ್ರಸ್ತುತಪಡಿಸಿದವರು ಜಪಾನ್‌ ಬ್ರಾಂಚ್‌ನ ಸಹೋದರ ಜೇಮ್ಸ್‌ ಲಿಂಟನ್‌. 2011ರ ಮಾರ್ಚ್‌ನಲ್ಲಾದ ಭೂಕಂಪ ಮತ್ತು ಸುನಾಮಿಯಿಂದಾಗಿ ನಮ್ಮ ಸಹೋದರರಿಗೆ ಯಾವೆಲ್ಲಾ ಕಷ್ಟ ಎದುರಾಯಿತೆಂದು ತಿಳಿಸಿದರು. ಎಷ್ಟೋ ಮಂದಿ ತಮ್ಮ ಆಸ್ತಿಪಾಸ್ತಿಯನ್ನು ಕಳಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರನ್ನೂ ಕಳಕೊಂಡರು. ಬಾಧಿತ ಕ್ಷೇತ್ರದ ಹೊರಗಿದ್ದ ಸಾಕ್ಷಿಗಳು ಸಂತ್ರಸ್ತರಿಗೆ 3,100 ಮನೆಗಳನ್ನು ವ್ಯವಸ್ಥೆ ಮಾಡಿ ಕೊಟ್ಟರು, ನೂರಾರು ವಾಹನಗಳನ್ನು ಕೊಟ್ಟರು. ರೀಜನಲ್‌ ಬಿಲ್ಡಿಂಗ್‌ ಕಮಿಟಿಯಲ್ಲಿರುವ ಸ್ವಯಂ ಸೇವಕರು ಸಹೋದರರ ಮನೆಗಳನ್ನು ಸರಿಮಾಡಲು ರಾತ್ರಿಹಗಲು ಒಂದುಮಾಡಿ ದುಡಿದರು. ಅಗತ್ಯವಿದ್ದಲ್ಲಿಗೆ ಹೋಗಿ ಕೆಲಸಮಾಡಲು 1,700 ಮಂದಿ ಸ್ವಯಂ ಸೇವಕರು ಮುಂದೆ ಬಂದರು. ಅಮೆರಿಕದಿಂದ ಬಂದ ಸ್ವಯಂ ಸೇವಕರ ತಂಡ ರಾಜ್ಯ ಸಭಾಗೃಹಗಳ ದುರಸ್ತಿಯಲ್ಲಿ ತೊಡಗಿಸಿಕೊಂಡಿತು. 575 ಮಂದಿ ಈ ಕೆಲಸದಲ್ಲಿ ಸಾಥ್‌ ಕೊಟ್ಟರು.

ಸಂತ್ರಸ್ತರಿಗೆ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ನೆರವು ನೀಡಲು ಸಹ ಸಾಕಷ್ಟು ಏರ್ಪಾಡು ಮಾಡಲಾಯಿತು. 400ಕ್ಕಿಂತ ಹೆಚ್ಚು ಸಭಾ ಹಿರಿಯರು ಅಗತ್ಯವಿದ್ದಲ್ಲಿಗೆ ಹೋಗಿ ಪರಿಪಾಲನೆಯ ಕೆಲಸ ಮಾಡಿದರು. ಬಾಧಿತ ಕ್ಷೇತ್ರದಲ್ಲಿರುವ ಸಹೋದರರನ್ನು ಉತ್ತೇಜಿಸಲು ಇಬ್ಬರು ಝೋನ್‌ ಮೇಲ್ವಿಚಾರಕರನ್ನು ಕಳುಹಿಸಿಕೊಡುವ ಮೂಲಕ ಆಡಳಿತ ಮಂಡಲಿ ತನ್ನ ಕಳಕಳಿಯನ್ನು ತೋರಿಸಿತು. ಲೋಕದಾದ್ಯಂತವಿರುವ ಸಹೋದರ ಸಹೋದರಿಯರು ತಮ್ಮ ಬಗ್ಗೆ ಎಷ್ಟು ಚಿಂತಿಸುತ್ತಾರೆ ಎಂದು ತಿಳಿದುಕೊಂಡಾಗ ಬಾಧಿತರಿಗೆ ತುಂಬ ಸಾಂತ್ವನ ಸಿಕ್ಕಿತು ಎಂದರು ಸಹೋದರ ಲಿಂಟನ್‌.

ಮೊಕದ್ದಮೆಗಳಲ್ಲಿ ಸಿಕ್ಕಿದ ಜಯ

ಬ್ರಿಟನ್‌ ಬ್ರಾಂಚ್‌ನ ಸ್ಟೀವನ್‌ ಹಾರ್ಡಿ ಇತ್ತೀಚಿನ ಕೋರ್ಟ್‌ ಕೇಸ್‌ಗಳಲ್ಲಿ ಸಿಕ್ಕಿದ ಜಯಗಳ ಕುರಿತು ಮಾತಾಡಿದಾಗ ಬಂದಿದ್ದವರೆಲ್ಲರೂ ನಿಕಟ ಗಮನ ಕೊಟ್ಟರು. ಫ್ರಾನ್ಸ್‌ನಲ್ಲಿ ದಕ್ಕಿದ ಜಯದ ಕುರಿತು ಅವರು ಮಾತಾಡಿದರು. ಅಲ್ಲಿನ ಯೆಹೋವನ ಸಾಕ್ಷಿಗಳು 8 ಕೋಟಿ 20 ಲಕ್ಷ ಅಮೆರಿಕನ್‌ ಡಾಲರ್‌ ಮೊತ್ತದ ತೆರಿಗೆ ಸಲ್ಲಿಸಬೇಕೆಂದು ಫ್ರಾನ್ಸ್‌ ಸರ್ಕಾರ ಆದೇಶಿಸಿತು. ಈ ವಿವಾದವನ್ನು ಮಾನವ ಹಕ್ಕುಗಳ ಯೂರೋಪಿಯನ್‌ ಕೋರ್ಟ್‌ನ (ECHR) ಮುಂದೆ ಇಟ್ಟಾಗ ಅದು ನಮ್ಮ ಪರವಾಗಿ ತೀರ್ಪು ಕೊಟ್ಟಿತು. ಆ ತೀರ್ಪಿನಲ್ಲಿ ಫ್ರಾನ್ಸ್‌ ಸರ್ಕಾರದ ಆದೇಶವನ್ನು ಖಂಡಿಸಲಾಯಿತು. ಏಕೆಂದರೆ ಅದು ಧಾರ್ಮಿಕ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಯೂರೋಪಿಯನ್‌ ಒಪ್ಪಂದದ ಅನುಚ್ಛೇದ 9ನ್ನು ಉಲ್ಲಂಘಿಸಿತ್ತೆಂದು ಕೋರ್ಟ್‌ ಹೇಳಿಕೆ ನೀಡಿತು. ಮಾತ್ರವಲ್ಲದೆ ವಿವಾದ ತೆರಿಗೆ ವಿಷಯದಲ್ಲಲ್ಲ ಅನ್ನುವುದು ಅಂತಿಮ ತೀರ್ಪಿನ ಈ ಮಾತುಗಳಿಂದ ವ್ಯಕ್ತ: “ಒಂದು ಧಾರ್ಮಿಕ ಸಂಸ್ಥೆಯನ್ನು ಮಾನ್ಯಮಾಡದಿರುವುದು, ಅದನ್ನು ಮುಚ್ಚಿಹಾಕಲು ಪ್ರಯತ್ನಿಸುವುದು, ಅದರ ವಿರುದ್ಧ ಅವಾಚ್ಯ ಪದಗಳನ್ನಾಡುವುದು ಇದೆಲ್ಲಾ [ಯೂರೋಪಿಯನ್‌] ಒಪ್ಪಂದದ ಅನುಚ್ಛೇದ 9 ಕೊಡುವ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ.”

ಅರ್ಮೇನಿಯಕ್ಕೆ ಸಂಬಂಧಪಟ್ಟ ಒಂದು ಮೊಕದ್ದಮೆಯಲ್ಲೂ ECHR ನಮಗೇ ಗೆಲುವು ಕೊಟ್ಟಿತು. 1965ರಿಂದ ECHRನ ನಿಲುವು ಏನಿತ್ತೆಂದರೆ, ಯಾವುದೇ ದೇಶ ಮಿಲಿಟರಿ ಸೇವೆಯನ್ನು ಕಡ್ಡಾಯಪಡಿಸುವಲ್ಲಿ ಅದರಿಂದ ಯಾರಿಗೂ ವಿನಾಯಿತಿ ಕೊಡಿಸಲು ಯೂರೋಪಿಯನ್‌ ಒಪ್ಪಂದದಿಂದ ಸಾಧ್ಯವಿಲ್ಲ ಎಂದು ಹೇಳುತ್ತಿತ್ತು. ಆದರೆ ECHRನ ಮುಖ್ಯ ಪೀಠ ಈ ವಿಷಯವನ್ನು ಕೈಗೆತ್ತಿಕೊಂಡು ಒಂದು ತಿದ್ದುಪಡಿಯನ್ನು ಮಾಡಿತು. “ಒಬ್ಬ ವ್ಯಕ್ತಿ ಗಂಭೀರವಾದ ಕಾರಣವನ್ನು ಕೊಟ್ಟು ಮಿಲಿಟರಿ ಸೇವೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿಸುವಲ್ಲಿ” ಅವನಿಗೆ ಯೂರೋಪಿಯನ್‌ ಒಪ್ಪಂದ ಆ ವಿನಾಯಿತಿಯನ್ನು ಕೊಡಿಸಬೇಕು. ಈ ತೀರ್ಪಿನ ಅನ್ವಯ ಅರ್ಮೇನಿಯ ಮಾತ್ರವಲ್ಲ ಅಜರ್‌ ಬೈಜಾನ್‌ ಮತ್ತು ಟರ್ಕಿ ಸಹ ಮಿಲಿಟರಿ ಸೇವೆಯನ್ನು ಒತ್ತಾಯಿಸುವಂತಿಲ್ಲ.

ನಿರ್ಮಾಣ ಯೋಜನೆಗಳು

ಆಡಳಿತ ಮಂಡಲಿಯ ಗೈ ಪಿಯರ್ಸ್‌ ಈ ವಿಷಯದ ಕುರಿತು ಮಾತಾಡಿದರು. ನ್ಯೂ ಯಾರ್ಕ್‌ನಲ್ಲಿ ಯಾವ ನಿರ್ಮಾಣ ಯೋಜನೆಗಳನ್ನು ಸಂಘಟನೆ ಕೈಗೆತ್ತಿಕೊಳ್ಳಲಿದೆ ಎನ್ನುವುದನ್ನು ತಿಳಿಯಲು ಕೂಡಿಬಂದಿರುವ ಎಲ್ಲರೂ ಆಸಕ್ತರಾಗಿದ್ದರು. ವಾಲ್‌ಕಿಲ್‌ ಹಾಗೂ ಪ್ಯಾಟರ್‌ಸನ್‌ನಲ್ಲಿ ಏನೆಲ್ಲಾ ಕೆಲಸ ಆಗುತ್ತಿದೆ ಎಂದು ತೋರಿಸುವ ಒಂದು ವಿಡಿಯೋ ಪ್ರದರ್ಶನ ಇತ್ತು. ವಾಲ್‌ಕಿಲ್‌ನಲ್ಲಿ 2014ರ ಸರಿಸುಮಾರಿಗೆ ಪೂರ್ತಿಗೊಳ್ಳಲಿರುವ ಒಂದು ಕಟ್ಟಡದಲ್ಲಿ 300 ಹೆಚ್ಚಿನ ವಾಸದ ಕೋಣೆಗಳು ಲಭ್ಯವಾಗಲಿವೆ ಎಂದು ತಿಳಿದುಬಂತು. ವಾರ್ವಿಕ್‌ ಮತ್ತು ಟಕ್ಸೀಡೋದಲ್ಲಿ ತೆಗೆದುಕೊಂಡಿರುವ ಹೊಸ ನಿವೇಶನಗಳ ದೃಶ್ಯಗಳೂ ಆ ವಿಡಿಯೋದಲ್ಲಿತ್ತು.

ಅನಂತರ ಅವರು ವಾರ್ವಿಕ್‌ನಲ್ಲಿರುವ 248 ಎಕರೆ ನಿವೇಶನದ ಕುರಿತು ಮಾತಾಡಿದರು. “ವಾರ್ವಿಕ್‌ನ ಬಗ್ಗೆ ಯೆಹೋವನ ಚಿತ್ತ ಏನಿದೆ ಅನ್ನೋದು ಖಚಿತವಾಗಿ ತಿಳಿದಿಲ್ಲವಾದರೂ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯವನ್ನು ಅಲ್ಲಿಗೆ ಸ್ಥಳಾಂತರಿಸುವ ಉದ್ದೇಶದಿಂದ ನಾವು ಕೆಲಸವನ್ನು ಮುಂದುವರಿಸುತ್ತಿದ್ದೇವೆ” ಎಂದರು ಸಹೋದರ ಪಿಯರ್ಸ್‌. ವಾರ್ವಿಕ್‌ನ ಉತ್ತರಕ್ಕೆ 10 ಕಿ.ಮಿ. ದೂರದಲ್ಲಿರುವ 50 ಎಕರೆ ಸ್ಥಳದಲ್ಲಿ ನಿರ್ಮಾಣ ಯೋಜನೆಗೆ ಬೇಕಾದ ಎಲ್ಲ ಸಾಮಗ್ರಿ ಯಂತ್ರೋಪಕರಣಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ. “ಸರ್ಕಾರದಿಂದ ಅನುಮತಿ ಪಡೆದ ಮೇಲೆ ಕೆಲಸವನ್ನು ಆರಂಭಿಸಿ 4 ವರ್ಷದೊಳಗೆ ಮುಗಿಸುವ ಯೋಚನೆಯಿದೆ. ನಂತರ ಬ್ರೂಕ್ಲಿನ್‌ನಲ್ಲಿರುವ ನಮ್ಮ ನಿವೇಶನವನ್ನು ಮಾರಲಾಗುವುದು” ಎಂದು ಸಹೋದರ ಪಿಯರ್ಸ್‌ ತಿಳಿಸಿದರು.

“ಇದನ್ನೆಲ್ಲಾ ನೋಡುವಾಗ ಆಡಳಿತ ಮಂಡಲಿಯ ಮನಸ್ಸಲ್ಲಿ ಮಹಾ ಸಂಕಟ ದೂರ ಹೋಗಿರಬೇಕೋ?” ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅದಕ್ಕೆ, “ಖಂಡಿತ ಇಲ್ಲ” ಎಂದು ಉತ್ತರಿಸುತ್ತಾ “ನಮ್ಮ ಯೋಜನೆಗಳನ್ನು ಪೂರ್ತಿಗೊಳಿಸುವ ಮುಂಚೆ ಮಹಾ ಸಂಕಟ ಬಂದುಬಿಟ್ಟರೆ ಅದಕ್ಕಿಂತ ಸಂತೋಷದ ವಿಷಯ ಬೇರೊಂದಿರಲ್ಲ, ಖಂಡಿತ ಇರಲ್ಲ!” ಎಂದರು.

ಗರ್ಜಿಸುವ ಸಿಂಹವಿದೆ​—⁠ಎಚ್ಚರ!

ಆಡಳಿತ ಮಂಡಲಿಯ ಮತ್ತೊಬ್ಬ ಸದಸ್ಯ ಸ್ಟೀಫನ್‌ ಲೆಟ್‌ 1ನೇ ಪೇತ್ರ 5:8ನ್ನು ಚರ್ಚಿಸಿದರು. ವಚನ ಹೀಗಿದೆ: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” ಸಿಂಹದ ವಿವಿಧ ಗುಣಗಳನ್ನು ನೋಡುವಾಗ ಪಿಶಾಚನನ್ನು ಬಣ್ಣಿಸಲು ಪೇತ್ರ ಅತಿ ಸೂಕ್ತ ದೃಷ್ಟಾಂತವನ್ನೇ ಬಳಸಿದ್ದಾನೆ ಎನ್ನುವುದು ಅರ್ಥವಾಗುತ್ತದೆ ಎಂದರು ಸಹೋದರ ಲೆಟ್‌.

ಸಿಂಹ ಮಾನವರಿಗಿಂತ ಬಲಿಷ್ಠ, ಅತಿ ವೇಗಿ. ಸೈತಾನನು ಸಹ ನಮಗಿಂತ ತುಂಬ ಬಲಶಾಲಿ. ನಮ್ಮ ಸ್ವಂತ ಬಲದಿಂದ ಅವನನ್ನು ಒಂದು ಕೈ ನೋಡಿಬಿಡೋಣ ಎಂದು ನೆನಸುವುದು ವಿವೇಕಪ್ರದವಲ್ಲ. ಅವನನ್ನು ಗೆಲ್ಲಲು ಯೆಹೋವನ ಸಹಾಯ ಬೇಕು. (ಯೆಶಾ. 40:31) ಸಿಂಹ ಹೊಂಚುಹಾಕುತ್ತಾ ಬೇಟೆಯಾಡುವಂತೆ ಸೈತಾನನು ಮರೆಯಲ್ಲಿದ್ದು ದಾಳಿಮಾಡುತ್ತಾನೆ. ನಾವು ಆಧ್ಯಾತ್ಮಿಕ ಕತ್ತಲೆಯಲ್ಲಿದ್ದರೆ ಕಟುಕನ ಕೈಗೆ ಕತ್ತಿ ಕೊಟ್ಟ ಹಾಗಿರುವುದು. ಬೇಟೆ ಪ್ರಾಣಿ ಒಂದು ಪಾಪದ ಜಿಂಕೆಯಾಗಿರಲಿ ಮಲಗಿರುವ ಸಣ್ಣ ಜೀಬ್ರಾ ಮರಿಯಾಗಿರಲಿ ಮೃಗರಾಜನಿಗೆ ಮರುಕ ಹುಟ್ಟುವುದಿಲ್ಲ. ಸೈತಾನನೂ ಅಷ್ಟೇ ನಿರ್ದಯಿ. ನಮ್ಮ ಜೀವ ತೆಗೆಯುವುದೆಂದರೆ ಅವನಿಗೆ ಬಲು ಇಷ್ಟ. ಸಿಂಹ ತಾನು ಹಿಡಿದ ಬೇಟೆಯನ್ನು ಚಿಂದಿ ಚಿಂದಿ ಮಾಡಿ ತಿಂದುಹಾಕುತ್ತದೆ. ಆಮೇಲೆ ಬೇಟೆಪ್ರಾಣಿಯ ಗುರುತೇ ಸಿಗುವುದಿಲ್ಲ. ಅದೇ ರೀತಿ ಆಗುತ್ತದೆ ಸೈತಾನನಿಗೆ ಬಲಿಪಶು ಆಗುವವರ ಗತಿ. “ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿ” ಬಿಡುತ್ತದೆ. (2 ಪೇತ್ರ 2:20) ಆದ್ದರಿಂದ ಸೈತಾನನ ವಿರುದ್ಧ ದೃಢವಾಗಿ ನಿಂತು ನಾವು ಕಲಿತಿರುವ ಬೈಬಲ್‌ ತತ್ತ್ವಗಳಿಗೆ ಬಲವಾಗಿ ಅಂಟಿಕೊಳ್ಳಬೇಕು.​—⁠1 ಪೇತ್ರ 5:⁠9.

ಯೆಹೋವನ ಮನೆಯಲ್ಲಿ ನಿಮಗೊಂದು ಸ್ಥಾನ

“ನಮಗೆಲ್ಲರಿಗೂ ಯೆಹೋವನ ಮನೆಯಲ್ಲಿ ಒಂದು ಸ್ಥಾನವಿದೆ” ಎಂದರು ಮುಂದಿನ ಭಾಷಣಕಾರರಾದ ಸ್ಯಾಮ್ಯೆಲ್‌ ಹರ್ಡ್‌, ಆಡಳಿತ ಮಂಡಲಿಯ ಸದಸ್ಯ. ದೇವರ ಮನೆ ಅಂದರೆ ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಮೇಲಾಧರಿತ ಆರಾಧನೆಯ ಏರ್ಪಾಡು. ಈ ಆಧ್ಯಾತ್ಮಿಕ ಆಲಯದಲ್ಲಿ ಕ್ರೈಸ್ತರೆಲ್ಲರಿಗೆ ಸ್ಥಾನವಿದೆ. ನಮಗೆ ಸಿಕ್ಕಿದ ಅತ್ಯಮೂಲ್ಯ ಸುಯೋಗವಿದು. ದಾವೀದನಂತೆ ನಾವು ನಮ್ಮ “ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ” ಇರಲು ಇಷ್ಟಪಡುತ್ತೇವೆ.​—⁠ಕೀರ್ತ. 27:⁠4.

ಸಹೋದರ ಹರ್ಡ್‌ ಕೀರ್ತನೆ 92:​12-14 ಉಲ್ಲೇಖಿಸುತ್ತಾ “ನಮ್ಮ ಒಳಿತು ಬಯಸಿ ಯೆಹೋವನು ಏನೆಲ್ಲಾ ಮಾಡಿದ್ದಾನೆ?” ಎಂದು ಕೇಳಿದರು. ಉತ್ತರಿಸುತ್ತಾ ಅವರು ಹೀಗಂದರು: “ದೇವರು ಆಧ್ಯಾತ್ಮಿಕ ಪರದೈಸಿನಲ್ಲಿ ನಮಗೆ ಪ್ರೀತಿ ಸಿಗುವಂತೆ ಮಾಡಿದ್ದಾನೆ, ನಮ್ಮನ್ನು ಜೋಪಾನವಾಗಿ ಇಟ್ಟಿದ್ದಾನೆ, ಸತ್ಯದ ಚೈತನ್ಯದಾಯಕ ನೀರು ಸಿಗುವಂತೆ ಏರ್ಪಡಿಸಿದ್ದಾನೆ. ನಾವಿದಕ್ಕಾಗಿ ಚಿರಋಣಿ.” ಬಳಿಕ ನೆರೆದು ಬಂದವರನ್ನು “ಯೆಹೋವನ ಮನೆ ಬಿಟ್ಟು ಎಲ್ಲಿ ಹೋಗೋಣ ಹೇಳಿ? ಆದ್ದರಿಂದ ಆತನ ಮನೆಯಲ್ಲಿ ಸ್ವಲ್ಪಕಾಲಕ್ಕೆ ಮಾತ್ರವಲ್ಲ ಸದಾಕಾಲಕ್ಕೂ ಇರೋಣ” ಎಂದು ಪ್ರೋತ್ಸಾಹಿಸಿದರು.

ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ

ಮುಂದಿನ ಭಾಷಣಕರ್ತರು ಆಡಳಿತ ಮಂಡಲಿಯ ಸದಸ್ಯರಾದ ಡೇವಿಡ್‌ ಸ್ಪ್ಲೇನ್‌. ನಿಜ ಕ್ರೈಸ್ತರಿಗೆ ದೇವರ ವಾಕ್ಯದ ಮೇಲೆ ತುಂಬ ಗೌರವವಿತ್ತು, ಈಗಲೂ ಇದೆ ಎಂದರವರು. ಒಂದನೇ ಶತಮಾನದಲ್ಲಿ ಎದ್ದ ಸುನ್ನತಿಯ ವಿವಾದವನ್ನು ಇತ್ಯರ್ಥಗೊಳಿಸಲು ಅಂದಿನ ಕ್ರೈಸ್ತರು ದೇವರ ವಾಕ್ಯವನ್ನು ಅವಲಂಬಿಸಿದರು. (ಅ. ಕಾ. 15:​16, 17) ಆದರೆ ಎರಡನೇ ಶತಮಾನದಷ್ಟಕ್ಕೆ ಕ್ರೈಸ್ತರೆಂದು ಹೇಳಿಕೊಂಡಿದ್ದ ಕೆಲವರಿಗೆ ಬೈಬಲಿಗಿಂತ ತಾವು ಪಡೆದಿದ್ದ ಪಾಂಡಿತ್ಯವೇ ದೊಡ್ಡದೆನಿಸಿತು. ತಾವು ಕಲಿತಿದ್ದ ಗ್ರೀಕ್‌ ತತ್ವಜ್ಞಾನವನ್ನು ಕ್ರೈಸ್ತತ್ವದಲ್ಲಿ ತುರುಕಿಸಲು ಪ್ರಯತ್ನಿಸಿದರು. ಅನಂತರ ಬಂದ ಬೇರೆ ಕೆಲವರು ಬೈಬಲ್‌ ಬೋಧನೆಗಳನ್ನು ಮೂಲೆಗೆ ಹಾಕಿ ಚರ್ಚ್‌ ಪಾದ್ರಿಗಳ ಮತ್ತು ರೋಮ್‌ ಸಾಮ್ರಾಟರ ಅನಿಸಿಕೆಗಳನ್ನು ಪಾಲಿಸಲಾರಂಭಿಸಿದರು. ಇದರಿಂದ ಅನೇಕ ಸುಳ್ಳು ಸಿದ್ಧಾಂತಗಳು ಹುಟ್ಟಿಕೊಂಡವು.

ಯೇಸು ಸ್ವರ್ಗಕ್ಕೆ ಹೋದ ಮೇಲೆ ಅಭಿಷಿಕ್ತ ಕ್ರೈಸ್ತರು ಭೂಮಿಯ ಮೇಲೆ ಶತಮಾನಗಳುದ್ದಕ್ಕೂ ಇದ್ದು ಸತ್ಯದ ಪರ ನಿಲ್ಲುವರೆಂದು ಆತ ಒಂದು ದೃಷ್ಟಾಂತದಲ್ಲಿ ಸೂಚಿಸಿದ್ದಾನೆಂದು ಸಹೋದರ ಸ್ಪ್ಲೇನ್‌ ತಿಳಿಸಿದರು. (ಮತ್ತಾ. 13:​24-30) ಕಳೆದುಹೋದ ಅಷ್ಟೆಲ್ಲಾ ಶತಮಾನಗಳಲ್ಲಿ ಯಾರು ಈ ಅಭಿಷಿಕ್ತ ವರ್ಗಕ್ಕೆ ಸೇರಿದ್ದರೆಂದು ನಿಖರವಾಗಿ ಹೇಳಸಾಧ್ಯವಿಲ್ಲ. ಆದರೆ ಬೈಬಲಿಗೆ ವಿರುದ್ಧವಾದ ನಂಬಿಕೆ ಆಚರಣೆಗಳನ್ನು ಪಾಲಿಸಬಾರದೆಂದು ಧ್ವನಿಯೆತ್ತಿದ ಎಷ್ಟೋ ಮಂದಿ ಇದ್ದರು. ಅಂಥವರಲ್ಲಿ ಕೆಲವರೆಂದರೆ 9ನೇ ಶತಕದ ಲಯನ್ಸ್‌ನ ಆರ್ಚ್‌ಬಿಷಪ್‌ ಎಗೊಬಾರ್ಡ್‌, 12ನೇ ಶತಕದ ಬ್ರವೀ ನಗರದ ಪೀಟರ್‌, ಲೂಸಾನಿನ ಹೆನ್ರಿ, ವಾಲ್ಡಿಸ್‌ (ಅಥವಾ ವಾಲ್ಡೊ), 14ನೇ ಶತಕದ ಜಾನ್‌ ವಿಕ್ಲಿಫ್‌, 16ನೇ ಶತಕದ ವಿಲ್ಯಮ್‌ ಟಿಂಡೇಲ್‌, 19ನೇ ಶತಕದ ಹೆನ್ರಿ ಗ್ರೂ ಮತ್ತು ಜಾರ್ಜ್‌ ಸ್ಟೋರ್ಸ್‌. ಯೆಹೋವನ ಸಾಕ್ಷಿಗಳು ಕೂಡ ಇಂದು ಬೈಬಲಿನ ಮಟ್ಟಗಳನ್ನು ಎತ್ತಿಹಿಡಿಯುತ್ತಾರೆ, ಬೈಬಲನ್ನು ಸತ್ಯಕ್ಕೆ ಆಧಾರವಾಗಿ ಬಳಸುತ್ತಾರೆ. ಆದ್ದರಿಂದಲೇ ಆಡಳಿತ ಮಂಡಲಿ ಯೋಹಾನ 17:17ನ್ನು 2012ರ ವರ್ಷವಚನವಾಗಿ ಆರಿಸಿದೆ. “ನಿನ್ನ ವಾಕ್ಯವೇ ಸತ್ಯ” ಎನ್ನುತ್ತದೆ ಆ ವಚನ.

ಶಾಲೆ, ಸೇವೆಗೆ ಸಂಬಂಧಿಸಿದ ಪುಳಕಗೊಳಿಸುವ ಬದಲಾವಣೆಗಳು

ಆಡಳಿತ ಮಂಡಲಿಯ ಸಹೋದರ ಆ್ಯಂಥನಿ ಮಾರಿಸ್‌ ಮಾಡಿದ ಒಂದು ಪ್ರಕಟನೆಯಲ್ಲಿ ಮಿಷನರಿ ಹಾಗೂ ವಿಶೇಷ ಪಯನೀಯರ್‌ ಸೇವೆಯಲ್ಲಿ ಮಾಡಲಾಗಿರುವ ಬದಲಾವಣೆಗಳು ಇತ್ತು. 2012ರ ಸೆಪ್ಟೆಂಬರ್‌ನಿಂದ ಆರಂಭಿಸಿ ಆಯ್ದ ದೇಶಗಳಲ್ಲಿ ಕ್ರೈಸ್ತ ದಂಪತಿಗಳಿಗಾಗಿರುವ ಬೈಬಲ್‌ ಶಾಲೆ ನಡೆಯುವುದು. ಗಿಲ್ಯಡ್‌ ಶಾಲೆಯ ಉದ್ದೇಶದಲ್ಲೂ ಬದಲಾವಣೆಯಾಗಿದೆ. ಕಳೆದ ಅಕ್ಟೋಬರ್‌ನಿಂದ ನಡೆಯುತ್ತಿರುವ ಗಿಲ್ಯಡ್‌ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವವರು ಈಗಾಗಲೇ ಪೂರ್ಣ ಸಮಯದ ಸೇವೆಯಲ್ಲಿದ್ದವರು. ಇವರು ಗಿಲ್ಯಡ್‌ಗೆ ಹಾಜರಾಗಿಲ್ಲದ ಮಿಷನರಿಗಳು, ವಿಶೇಷ ಪಯನೀಯರರು, ಸಂಚರಣ ಮೇಲ್ವಿಚಾರಕರು, ಬೆತೆಲ್‌ ಸೇವಕರು ಆಗಿದ್ದವರು. ಯೆಹೋವನ ಜನರನ್ನು ಬಲಪಡಿಸಿ ಉತ್ತೇಜಿಸಲು ಗಿಲ್ಯಡ್‌ ಪದವೀಧರರನ್ನು ಬಳಸಲಾಗುವುದು. ಅವರಿದನ್ನು ಬ್ರಾಂಚ್‌ ಆಫಿಸ್‌ನಿಂದ ಮಾಡಬಹುದು, ಅಥವಾ ಸಂಚರಣ ಕೆಲಸದಲ್ಲಿದ್ದು ಮಾಡಬಹುದು. ಇಲ್ಲವೆ ಜನನಿಬಿಡ ಸ್ಥಳಗಳಿಗೆ ನೇಮಕ ಹೊಂದಿ ಅಲ್ಲಿರುವ ಸಭೆಗಳಿಗೆ ಸಾರುವ ಕೆಲಸದಲ್ಲಿ ನೆರವು ನೀಡುವರು.

ವಿಶೇಷ ಪಯನೀಯರರಾಗಿ ನೇಮಿಸಲಾಗುವ ಸಹೋದರ ಸಹೋದರಿಯರು ನಗರ ಪ್ರದೇಶಗಳಿಂದ ದೂರದಲ್ಲಿರುವ ಮತ್ತು ಸಾಕ್ಷಿಗಳೇ ಇಲ್ಲದ ಕ್ಷೇತ್ರಗಳಲ್ಲಿ ಸೇವೆಯನ್ನು ಆರಂಭಿಸುವರು. 2012 ಜನವರಿ 1ರಿಂದ ಆರಂಭಿಸಿ, ಅವಿವಾಹಿತ ಸಹೋದರರಿಗಾಗಿರುವ ಬೈಬಲ್‌ ಶಾಲೆ ಮತ್ತು ಕ್ರೈಸ್ತ ದಂಪತಿಗಳಿಗಾಗಿರುವ ಬೈಬಲ್‌ ಶಾಲೆಯಲ್ಲಿ ಪದವಿ ಪಡೆದ ಕೆಲವರನ್ನು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಿಸಲಾಗುವುದು. ಇವರು ದೂರದ ಸ್ಥಳಗಳಿಗೆ ಹೋಗಿ ಸೇವೆಯನ್ನು ಆರಂಭಿಸುವರು. ಮೊದಲ ಮೂರು ವರ್ಷದಲ್ಲಿ ವರ್ಷಕ್ಕೊಮ್ಮೆ ಅವರು ತಮ್ಮ ನೇಮಕವನ್ನು ನವೀಕರಿಸಬೇಕು. ಈ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡುವವರಿಗೆ ಖಾಯಂ ನೇಮಕ ಸಿಗಬಹುದು.

2011ರ ವಾರ್ಷಿಕ ಕೂಟ ಸಂತಸದಿಂದ ಕೂಡಿತ್ತು. ಸಾರುವ ಕೆಲಸವನ್ನು ತ್ವರಿತಗೊಳಿಸಲು ಮತ್ತು ನಮ್ಮ ಸಹೋದರ ಬಳಗವನ್ನು ಇನ್ನಷ್ಟು ಐಕ್ಯಗೊಳಿಸಲು ಮಾಡಲಾಗಿರುವ ಹೊಸ ಏರ್ಪಾಡುಗಳನ್ನು ಯೆಹೋವನು ಆಶೀರ್ವದಿಸಲಿ. ಇದರಿಂದ ಆತನಿಗೆ ಸ್ತುತಿ, ಘನ, ಮಾನ ಸಿಗಲಿ.

[ಪುಟ 18,19ರಲ್ಲಿರುವ ಚೌಕ/ಚಿತ್ರಗಳು]

ಸುಪರಿಚಯ

ಆಡಳಿತ ಮಂಡಲಿಯ ಸದಸ್ಯರಾಗಿದ್ದು ಭೂಜೀವಿತವನ್ನು ಮುಗಿಸಿದ್ದ ಒಂಭತ್ತು ಮಂದಿ ಸಹೋದರರ ಪತ್ನಿಯರು ನಮ್ಮೊಂದಿಗಿದ್ದಾರೆ. ಅವರಲ್ಲಿ ಐವರನ್ನು ಅಂದರೆ ಮರೀನಾ ಸಿಡ್ಲಿಕ್‌, ಈಡಿತ್‌ ಸೂಟರ್‌, ಮೆಲಿಟ ಜಾರಸ್‌, ಮೆಲ್ಬಾ ಬ್ಯಾರಿ, ಸಿಡ್ನಿ ಬಾರ್ಬರ್‌ರವರನ್ನು ಸಂದರ್ಶನ ಮಾಡಲಾಯಿತು. ಹೇಗೆ ಸತ್ಯಕ್ಕೆ ಬಂದರು ಮತ್ತು ಪೂರ್ಣ ಸಮಯದ ಸೇವೆಯನ್ನು ಹೇಗೆ ಆರಂಭಿಸಿದರು ಎಂದು ಕೇಳಲಾಯಿತು. ಈ ಸಹೋದರಿಯರು ತಮ್ಮ ಮನದಾಳದ ಸವಿನೆನಪುಗಳನ್ನು ಸಭಿಕರ ಮುಂದೆ ಬಿಚ್ಚಿಟ್ಟರು. ತಮ್ಮತಮ್ಮ ಪತಿಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡರು. ದಂಪತಿಯಾಗಿ ಆನಂದಿಸಿದ ಆಶೀರ್ವಾದಗಳ ಕುರಿತೂ ತಿಳಿಸಿದರು. ಈ ಸಂದರ್ಶನದ ಅಂತ್ಯದಲ್ಲಿ “ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು” ಶಿರೋನಾಮೆಯ ಗೀತೆ 86ನ್ನು ಸಭಿಕರೆಲ್ಲರೂ ಹಾಡಿದ್ದು ಮನಮುಟ್ಟುವಂತಿತ್ತು.

[ಚಿತ್ರಗಳು]

(ಮೇಲೆ) ಡಾನಿಯೆಲ್‌ ಮತ್ತು ಮರೀನಾ ಸಿಡ್ಲಿಕ್‌; ಗ್ರಾಂಟ್‌ ಮತ್ತು ಈಡಿತ್‌ ಸೂಟರ್‌; ಥಿಯೊಡರ್‌ ಮತ್ತು ಮೆಲಿಟ ಜಾರಸ್‌

(ಕೆಳಗೆ) ಲಾಯ್ಡ್‌ ಮತ್ತು ಮೆಲ್ಬಾ ಬ್ಯಾರಿ; ಕ್ಯಾರಿ ಮತ್ತು ಸಿಡ್ನಿ ಬಾರ್ಬರ್‌

[ಪುಟ 16ರಲ್ಲಿರುವ ಭೂಪಟ]

ಆರು ಬ್ರಾಂಚ್‌ಗಳನ್ನು ಮೆಕ್ಸಿಕೊ ಬ್ರಾಂಚ್‌ನೊಂದಿಗೆ ವಿಲೀನ ಮಾಡಲಾಯಿತು

ಮೆಕ್ಸಿಕೊ

ಗ್ವಾಟೆಮಾಲ

ಹೊಂಡುರಾಸ್‌

ಎಲ್‌ ಸಾಲ್ವಡಾರ್‌

ನಿಕರಾಗುವ

ಕೋಸ್ಟಾರಿಕ

ಪನಾಮ

[ಪುಟ 17ರಲ್ಲಿರುವ ಚಿತ್ರ]

ನ್ಯೂ ಯಾರ್ಕ್‌ನ ವಾರ್ವಿಕ್‌ನಲ್ಲಿ ಕಟ್ಟಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ನಮೂನೆ