ಅಂಗರಕ್ಷಕ ದಳಕ್ಕೆ ಜೀವರಕ್ಷಕ ಸಂದೇಶ
ಅಂಗರಕ್ಷಕ ದಳಕ್ಕೆ ಜೀವರಕ್ಷಕ ಸಂದೇಶ
ಕ್ರಿಸ್ತಶಕ 59. ಶತಾಧಿಪತಿ ಯೂಲ್ಯನು ಮತ್ತು ಪ್ರಯಾಣದಿಂದ ದಣಿದು ಸುಸ್ತಾದ ಸೈನಿಕರು ಕೈದಿಗಳನ್ನು ಪೋರ್ಟಾ ಕಾಪೇನಾ ದ್ವಾರದ ಮೂಲಕ ರೋಮ್ ನಗರದೊಳಗೆ ಕರೆದೊಯ್ಯುತ್ತಿದ್ದಾರೆ. ಅಲ್ಲಿಂದ ಅವರಿಗೆ ಪ್ಯಾಲಟೈನ್ ಬೆಟ್ಟದ ಮೇಲಿರುವ ಚಕ್ರವರ್ತಿ ನೀರೊ ಅರಮನೆ ಕಾಣುತ್ತಿದೆ. ‘ಟೋಗಾ’ ಸಮವಸ್ತ್ರದಲ್ಲಿರುವ ಅಂಗರಕ್ಷಕ ದಳದ ಸೈನಿಕರು ತಮ್ಮ ಕತ್ತಿಗಳನ್ನು ಕಾಣದಂತೆ ಇಟ್ಟುಕೊಂಡು ಅರಮನೆಯನ್ನು ಭದ್ರವಾಗಿ ಕಾಯುತ್ತಿದ್ದಾರೆ. * ಶತಾಧಿಪತಿಯೊಂದಿಗೆ ಕೈದಿಗಳು ರೋಮ್‌ನ ಮಾರುಕಟ್ಟೆಯನ್ನು ದಾಟಿ ವಿಮಿನಲ್ ಬೆಟ್ಟವನ್ನು ಹತ್ತುತ್ತಿದ್ದಾರೆ. ದಾರಿಯಲ್ಲಿ ರೋಮ್ ದೇವರುಗಳಿಗಾಗಿ ಅನೇಕ ಬಲಿಪೀಠಗಳಿರುವ ಉದ್ಯಾನವನವನ್ನು, ಪರೇಡ್ ಮಾಡುವ ಹಾಗೂ ಸೈನ್ಯಕ್ಕೆ ತರಬೇತಿ ನೀಡುವ ಮೈದಾನವನ್ನು ಹಾದು ಹೋಗುತ್ತಾರೆ.
ಈ ಕೈದಿಗಳಲ್ಲಿ ಅಪೊಸ್ತಲ ಪೌಲನೂ ಒಬ್ಬನು. ರೋಮ್ ನಗರಕ್ಕೆ ಬಂದು ತಲುಪಲು ಕೈದಿಗಳು ಅನೇಕ ತಿಂಗಳು ಪ್ರಯಾಣ ಮಾಡಿದ್ದರು. ಕೆಲವು ತಿಂಗಳ ಹಿಂದೆ ಅವರು ಪ್ರಯಾಣಿಸುತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಿದಾಗ ಒಬ್ಬ ದೇವದೂತ ಪೌಲನಿಗೆ, “ನೀನು ಕೈಸರನ ಮುಂದೆ ನಿಲ್ಲಬೇಕು” ಎಂದು ಹೇಳಿದ್ದನು. (ಅ. ಕಾ. 27:24) ಪೌಲ ಕೈಸರನ ಮುಂದೆ ನಿಲ್ಲಲಿದ್ದನೋ? ಹೌದು. ಈಗ ಪೌಲ ರೋಮ್ ಸಾಮ್ರಾಜ್ಯದ ರಾಜಧಾನಿಯಲ್ಲಿದ್ದಾನೆ. ಅವನು ಪಟ್ಟಣದ ಸುತ್ತಲೂ ದೃಷ್ಟಿಹರಿಸುತ್ತಿದ್ದಂತೆ, ಯೆರೂಸಲೇಮ್‌ನ ಆ್ಯಂಟೊನಿಯ ಕೋಟೆಯಲ್ಲಿ ಯೇಸು ಅವನಿಗೆ ಹೇಳಿದ ಮಾತು ಅವನ ಮನದಲ್ಲಿ ಒಮ್ಮೆ ಹಾದುಹೋಗಿರಬೇಕು: “ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ಕುರಿತು ಕೂಲಂಕಷವಾಗಿ ಸಾಕ್ಷಿಕೊಡುತ್ತಿರುವಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡಬೇಕು.”—ಅ. ಕಾ. 23:10, 11.
ಪೌಲ ಒಂದು ಕ್ಷಣ ನಿಂತು ಅಂಗರಕ್ಷಕ ದಳದ ಕಾಸ್ಟ್ರಾ ಪ್ರೈಟೋರೀಯಾ ಎಂಬ ಕೋಟೆಯನ್ನು ನೋಡುತ್ತಾನೆ. ಕೆಂಬಣ್ಣದ ಇಟ್ಟಿಗೆಗಳಿಂದ ಕಟ್ಟಲಾದ ಈ ಬೃಹದಾಕಾರದ ಕೋಟೆಗೆ ಕಂಡಿಗಳುಳ್ಳ ಕೈಪಿಡಿಗೋಡೆ, ಬುರುಜುಗಳು ಇದ್ದವು. ಈ ಕೋಟೆಯು ಸಾಮ್ರಾಟನಿಗೆ ಬೆಂಗಾವಲಾಗಿ ಇರುತ್ತಿದ್ದ ಅಂಗರಕ್ಷಕ ದಳದ ಸದಸ್ಯರ ಹಾಗೂ ಪಟ್ಟಣದ ಪೊಲೀಸ್ ಪಡೆಯ ವಾಸಸ್ಥಳವಾಗಿತ್ತು. ಅಂಗರಕ್ಷಕ ದಳದ * ಈ ಕೋಟೆಯು ಸಾಮ್ರಾಟನಿಗೆ ಎಷ್ಟು ಶಕ್ತಿ, ಅಧಿಕಾರ ಇತ್ತೆಂದು ತೋರಿಸಿಕೊಡುತ್ತಿತ್ತು. ರೋಮ್ ಸಾಮ್ರಾಜ್ಯದ ಇತರ ಪ್ರಾಂತ್ಯಗಳಿಂದ ಬರುವ ಕೈದಿಗಳ ನಿರ್ವಹಣೆ ಸಹ ಅಂಗರಕ್ಷಕ ದಳದ ಜವಾಬ್ದಾರಿಯಾಗಿತ್ತು. ಆದ್ದರಿಂದಲೇ ಪೌಲ ಮತ್ತು ಉಳಿದ ಕೈದಿಗಳನ್ನು ಅಂಗರಕ್ಷಕ ದಳದ ಶತಾಧಿಪತಿ ಯೂಲ್ಯನು ಕರೆತಂದಿದ್ದನು. ಅನೇಕ ತಿಂಗಳು ಅಪಾಯಕಾರಿ ಪ್ರಯಾಣ ಮಾಡಿ ಕೊನೆಗೂ ಅವರನ್ನು ರೋಮ್‌ಗೆ ತಲಪಿಸಿದ್ದನು.—ಅ. ಕಾ. 27:1-3, 43, 44.
12 ಗಣಗಳು ಮತ್ತು ನಗರದ ಸೈನಿಕರ ಅನೇಕ ಗಣಗಳು ಮತ್ತು ಅಶ್ವದಳದವರು ಹೀಗೆ ಆ ಕೋಟೆ ಸಾವಿರಾರು ಸೈನಿಕರ ನಿವಾಸವಾಗಿತ್ತು.“ಯಾವ ಅಡ್ಡಿಯೂ ಇಲ್ಲದೆ” ಸುವಾರ್ತೆ ಸಾರಿದನು
ರೋಮ್‌ಗೆ ಪ್ರಯಾಣ ಮಾಡುವ ದಾರಿಯಲ್ಲಿ ಅನೇಕ ವಿಸ್ಮಯಕರ ಘಟನೆಗಳು ನಡೆದಿದ್ದವು. ಹಡಗು ಬಿರುಗಾಳಿಗೆ ಸಿಲುಕಿದಾಗ ಪೌಲನಿಗೆ ಒಂದು ದರ್ಶನವಾಯಿತು. ಹಡಗಿನಲ್ಲಿರುವ ಒಬ್ಬರಿಗೂ ಹಾನಿಯಾಗುವುದಿಲ್ಲ ಎಂದು ದೇವದೂತನು ಪೌಲನಿಗೆ ಹೇಳಿದನು. ಅವರು ಮಾಲ್ಟ ದ್ವೀಪಕ್ಕೆ ಬಂದಾಗ ಒಂದು ವಿಷಪೂರಿತ ಹಾವು ಪೌಲನಿಗೆ ಕಚ್ಚಿದಾಗಲೂ ಅವನಿಗೆ ಏನು ಆಗಲಿಲ್ಲ. ಅನಂತರ ಅವನು ಅಲ್ಲಿದ್ದ ಅಸ್ವಸ್ಥ ಜನರನ್ನು ವಾಸಿಮಾಡಿದನು. ಆ ದ್ವೀಪದ ಜನರೆಲ್ಲರೂ ಅವನನ್ನು ದೇವರೆಂದು ಕರೆಯತೊಡಗಿದರು. ಈ ಎಲ್ಲ ಘಟನೆಗಳ ಸುದ್ದಿ ಅಂಗರಕ್ಷಕ ದಳದ ಇತರ ಸೈನಿಕರಲ್ಲಿ ಹಬ್ಬಿರಬೇಕು.
ರೋಮ್‌ಗೆ ತಲಪುವ ಮುಂಚೆಯೇ ಪೌಲನಿಗೆ ರೋಮ್‌ನ ಸಹೋದರರ ಭೇಟಿಯಾಗಿತ್ತು. ಅವರು ಅವನನ್ನು ನೋಡಲೆಂದು “ಅಪ್ಪಿಯ ಪೇಟೆಯ ವರೆಗೂ ತ್ರಿಛತ್ರವೆಂಬ ಸ್ಥಳದ ವರೆಗೂ” ಬಂದಿದ್ದರು. (ಅ. ಕಾ. 28:15) ಪೌಲನಿಗೆ ರೋಮ್‌ನಲ್ಲಿ ಸುವಾರ್ತೆ ಸಾರಬೇಕೆಂಬ ಅಪೇಕ್ಷೆಯಿತ್ತು. ಆದರೆ ಒಬ್ಬ ಕೈದಿಯಾಗಿದ್ದ ಅವನಿಗೆ ಅದನ್ನು ಮಾಡಲು ಸಾಧ್ಯವಿತ್ತಾ? (ರೋಮ. 1:14, 15) ಮುಂದೇನಾಯಿತು ನೋಡೋಣ. ರೋಮ್‌ಗೆ ಕರೆತರಲಾದ ಕೈದಿಗಳನ್ನು ಮೊದಲು ಸೇನಾಧಿಕಾರಿ ಬಳಿ ಬಿಡಲಾಗುತ್ತಿತ್ತು ಎಂದು ಅನೇಕರು ನೆನಸುತ್ತಾರೆ. ಅದು ನಿಜವಾಗಿದ್ದರೆ ಪೌಲನನ್ನು ಸಾಮ್ರಾಟನ ನಂತರದ ಸ್ಥಾನದಲ್ಲಿದ್ದ ಸೇನಾಧಿಕಾರಿ ಆಫ್ರಾನ್ಯುಸ್ ಬುರೋಸ್‌ನ ಬಳಿ ಕರೆದೊಯ್ದಿರಬೇಕು. * ನಂತರ ಏನಾಯಿತು? ಪೌಲನನ್ನು ಶತಾಧಿಪತಿಯ ಬಂದೊಬಸ್ತಿನಲ್ಲಿಡದೆ ಒಬ್ಬ ಸಾಧಾರಣ ಅಂಗರಕ್ಷಕ ಸೈನಿಕನ ಕಾವಲಲ್ಲಿಡಲಾಯಿತು. ಅಷ್ಟೇ ಅಲ್ಲ ಪೌಲನಿಗೆ ತನ್ನದೇ ಬಾಡಿಗೆ ಮನೆ ಮಾಡಿಕೊಳ್ಳಲು, ಬೇರೆಯವರು ಅವನನ್ನು ಭೇಟಿಮಾಡಲು ಮತ್ತು ‘ಯಾವ ಅಡ್ಡಿ ಇಲ್ಲದೆ’ ಅವರಿಗೆ ಸುವಾರ್ತೆ ಸಾರಲು ಅನುಮತಿ ಕೊಡಲಾಯಿತು.—ಅ. ಕಾ. 28:16, 30, 31.
ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿನೀಡಿದನು
ಪೌಲನನ್ನು ಸಾಮ್ರಾಟ ನೀರೊ ಮುಂದೆ ಹಾಜರುಪಡಿಸುವ ಮೊದಲು ಸೇನಾಧಿಕಾರಿ ಬುರೋಸ್ ಅವನನ್ನು ಅರಮನೆಯಲ್ಲಿ ಅಥವಾ ಅಂಗರಕ್ಷಕ ದಳದ ಕೋಟೆಯಲ್ಲಿ ವಿಚಾರಣೆ ಮಾಡಿರಬಹುದು. ಈ ಅವಕಾಶವನ್ನು ಉಪಯೋಗಿಸುತ್ತಾ ಪೌಲ ಆ ಸೇನಾಧಿಕಾರಿಗೆ ಸಾಕ್ಷಿ ನೀಡಿದನು. ಹೀಗೆ ಅವನು ‘ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿನೀಡಿದನು.’ (ಅ. ಕಾ. 26:19-23) ವಿಚಾರಣೆ ಮಾಡಿದ ಬುರೋಸ್ ಯಾವ ನಿರ್ಣಯಕ್ಕೆ ಬಂದನೆಂಬುದು ನಮಗೆ ಗೊತ್ತಿಲ್ಲ. ಆದರೆ ಅವನು ಪೌಲನನ್ನು ಅಂಗರಕ್ಷಕ ದಳದ ಕೋಟೆಯೊಳಗಿರುವ ಸೆರೆಮನೆಗೆ ಹಾಕಲಿಲ್ಲ ಎಂಬುದು ಬೈಬಲ್ ದಾಖಲೆಯಿಂದ ತಿಳಿಯುತ್ತದೆ. *
ಪೌಲನು ತಾನು ಬಾಡಿಗೆಗಿದ್ದ ಮನೆಯಲ್ಲಿ “ಯೆಹೂದ್ಯರ ಪ್ರಮುಖ ಪುರುಷರನ್ನು ಕರೆಸಿ” ಸಾಕ್ಷಿ ಕೊಟ್ಟನು. ಮಾತ್ರವಲ್ಲ ‘ಅವನು ಉಳುಕೊಂಡಿದ್ದ ಸ್ಥಳಕ್ಕೆ ಬಂದ ಬಹು ಜನರಿಗೆ’ ಸುವಾರ್ತೆ ಸಾರಿದನು. ಪೌಲನನ್ನು ಕಾಯುತ್ತಿದ್ದ ಅಂಗರಕ್ಷಕ ದಳದ ಸೈನಿಕರಿಗೂ ಸುವಾರ್ತೆ ಮುಟ್ಟಿತು. ಏಕೆಂದರೆ ಪೌಲನು ಯೆಹೂದ್ಯರಿಗೆ ದೇವರ ರಾಜ್ಯದ ಕುರಿತು ಮತ್ತು ಯೇಸುವಿನ ಕುರಿತು “ಬೆಳಗಿನಿಂದ ಸಾಯಂಕಾಲದ ವರೆಗೆ” ‘ಕೂಲಂಕಷವಾಗಿ ಸಾಕ್ಷಿನೀಡುವಾಗ’ ಅವರೂ ಕೇಳಿಸಿಕೊಳ್ಳುತ್ತಿದ್ದರು.—ಅರಮನೆಯನ್ನು ಕಾಯುತ್ತಿದ್ದ ಅಂಗರಕ್ಷಕ ದಳದ ಸೈನಿಕರ ಗುಂಪು ಪ್ರತಿದಿನ ಬದಲಾಗುತ್ತಿತ್ತು. ಹಾಗಾಗಿ ಪೌಲನನ್ನು ಕಾಯಲು ಪ್ರತಿದಿನ ಬೇರೆ ಬೇರೆ ಸೈನಿಕರು ಬಂದಿರಬೇಕು. ಹೀಗೆ ಬಾಡಿಗೆ ಮನೆಯಲ್ಲಿ ಪೌಲನಿದ್ದ ಆ ಎರಡು ವರ್ಷಗಳಲ್ಲಿ ಅನೇಕ ಸೈನಿಕರಿಗೆ ಜೀವರಕ್ಷಕ ಸಂದೇಶ ಮುಟ್ಟಿತು. ಪೌಲನು ಜೊತೆವಿಶ್ವಾಸಿಯ ಸಹಾಯದಿಂದ ಎಫೆಸ, ಫಿಲಿಪ್ಪಿ, ಕೊಲೊಸ್ಸೆ, ಇಬ್ರಿಯ ಸಭೆಯವರಿಗೆ ಪತ್ರ ಬರೆಯಿಸುವಾಗ ಆ ಮಾತುಗಳನ್ನು ಸೈನಿಕರು ಕೇಳಿಸಿಕೊಂಡರು. ಕ್ರೈಸ್ತ ಸಹೋದರನಾದ ಫಿಲೆಮೋನನಿಗೆ ಪೌಲನೇ ಪತ್ರ ಬರೆದದ್ದನ್ನೂ ಅವರು ನೋಡಿದರು. ಯಜಮಾನನ ಹತ್ತಿರದಿಂದ ಓಡಿಬಂದಿದ್ದ ಒನೇಸಿಮನಿಗೆ ‘ಒಬ್ಬ ತಂದೆಯಂತಿದ್ದು’ ವೈಯಕ್ತಿಕ ಕಾಳಜಿ ತೋರಿಸಿದ್ದನ್ನೂ ಅವನನ್ನು ಪುನಃ ಯಜಮಾನನ ಬಳಿಗೆ ಹಿಂದೆ ಕಳುಹಿಸಿದ್ದನ್ನೂ ನೋಡಿದರು. (ಫಿಲೆ. 10) ಪೌಲನು ತನ್ನನ್ನು ಕಾಯುತ್ತಿದ್ದ ಸೈನಿಕರಲ್ಲೂ ವೈಯಕ್ತಿಕ ಆಸಕ್ತಿ ತೋರಿಸಿ ಅವರೊಂದಿಗೆ ಮಾತಾಡಿದ್ದಿರಬೇಕು. (1 ಕೊರಿಂ. 9:22) ಅವರು ಧರಿಸುತ್ತಿದ್ದ ರಕ್ಷಾಕವಚದ ಪ್ರತಿಯೊಂದು ಭಾಗದ ಕುರಿತು ಮಾಹಿತಿಯನ್ನು ಕೇಳಿ ತಿಳಿದುಕೊಂಡಿರಬೇಕು. ಅದನ್ನೇ ನಂತರ ಅವನು ದೃಷ್ಟಾಂತವನ್ನಾಗಿ ಉಪಯೋಗಿಸಿದನು.—ಎಫೆ. 6:13-17.
‘ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡಿ’
ಪೌಲನ ಬಂದಿವಾಸವು ಅಂಗರಕ್ಷಕ ದಳದವರಿಗೆ ಮಾತ್ರವಲ್ಲ ಇತರ ಅನೇಕರಿಗೂ “ಸುವಾರ್ತೆಯು” ತಲಪುವಂತೆ ಸಹಾಯಮಾಡಿತು. (ಫಿಲಿ. 1:12, 13) ಹೇಗೆ? ಅಂಗರಕ್ಷಕ ದಳದವರಿಗೆ ಇಡೀ ರೋಮ್ ಸಾಮ್ರಾಜ್ಯದಾದ್ಯಂತ ಸಂಪರ್ಕವಿತ್ತು ಮಾತ್ರವಲ್ಲ ಸಾಮ್ರಾಟ ಹಾಗೂ ಅವನ ದೊಡ್ಡ ಪರಿವಾರದೊಂದಿಗೂ ಸಂಪರ್ಕವಿತ್ತು. ರಾಜ ಪರಿವಾರದಲ್ಲಿ ಸಾಮ್ರಾಟನ ಕುಟುಂಬದವರು, ಸೇವಕರು, ಆಳುಗಳು ಇದ್ದರು. ಹೀಗೆ ಅನೇಕರಿಗೆ ಸುವಾರ್ತೆ ಹರಡಿತು. ಕೆಲವರು ಕ್ರೈಸ್ತರಾದರು ಕೂಡ. (ಫಿಲಿ. 4:22) ಪೌಲನ ಈ ಧೀರ ಮಾದರಿ ‘ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡುವಂತೆ’ ರೋಮ್‌ನ ಕ್ರೈಸ್ತರಲ್ಲಿ ಧೈರ್ಯತುಂಬಿತು.—ಫಿಲಿ. 1:14.
ಪೌಲನ ಮಾದರಿ ನಮ್ಮನ್ನೂ ಉತ್ತೇಜಿಸುತ್ತದೆ. “ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ” ಸುವಾರ್ತೆ ಸಾರುವಂತೆ ಪ್ರೋತ್ಸಾಹಿಸುತ್ತದೆ. (2 ತಿಮೊ. 4:2) ನಮ್ಮಲ್ಲಿ ಕೆಲವರು ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿರಬಹುದು. ಉದಾಹರಣೆಗೆ ಶುಶ್ರೂಷಾ ಗೃಹದಲ್ಲಿ ಆರೈಕೆ ಪಡೆಯುತ್ತಿರಬಹುದು, ಆಸ್ಪತ್ರೆಯಲ್ಲಿರಬಹುದು ಅಥವಾ ನಂಬಿಕೆಗಾಗಿ ಸೆರೆಯಲ್ಲಿರಬಹುದು. ಇಂಥ ಯಾವುದೇ ಸನ್ನಿವೇಶದಲ್ಲಿರಲಿ, ನಮ್ಮನ್ನು ಭೇಟಿಮಾಡಲು ಅಥವಾ ನೆರವು ನೀಡಲು ಬರುವ ವ್ಯಕ್ತಿಗಳಿಗೆ ಸುವಾರ್ತೆ ಸಾರುವ ಅವಕಾಶ ನಮಗೆ ಸಿಗಬಹುದು. ನಾವು ಒಂದು ರೀತಿಯಲ್ಲಿ ಬಂಧನದಲ್ಲಿದ್ದರೂ ಸಿಗುವ ಪ್ರತಿಯೊಂದು ಅವಕಾಶವನ್ನು ಉಪಯೋಗಿಸುತ್ತಾ ಧೈರ್ಯದಿಂದ ಸಾರುವಲ್ಲಿ “ದೇವರ ವಾಕ್ಯವು ಬಂಧನದಲ್ಲಿಲ್ಲ” ಎನ್ನುವುದನ್ನು ರುಜುಪಡಿಸುತ್ತೇವೆ.—2 ತಿಮೊ. 2:8, 9.
[ಪಾದಟಿಪ್ಪಣಿಗಳು]
^ ಪ್ಯಾರ. 2 “ನೀರೊ ಕಾಲದ ಅಂಗರಕ್ಷಕ ದಳ” ಎಂಬ ಚೌಕ ನೋಡಿ.
^ ಪ್ಯಾರ. 4 ರೋಮ್‌ನ ಸೇನಾಪಡೆಯ ಒಂದು ಗಣದಲ್ಲಿ ಹೆಚ್ಚೆಂದರೆ 1,000 ಸೈನಿಕರಿರುತ್ತಿದ್ದರು.
^ ಪ್ಯಾರ. 7 “ಸೆಕ್ಸ್‌ಟಸ್ ಆಫ್ರಾನ್ಯುಸ್ ಬುರೋಸ್” ಎಂಬ ಚೌಕ ನೋಡಿ.
^ ಪ್ಯಾರ. 9 ಕ್ರಿ.ಶ. 36/37ರಲ್ಲಿ ಹೆರೋದ ಅಗ್ರಿಪ್ಪನನ್ನು ಅಂಗರಕ್ಷಕ ದಳದ ಕೋಟೆಯಲ್ಲಿರುವ ಸೆರೆಮನೆಯಲ್ಲಿ ಹಾಕಲಾಯಿತು. ಕಲಿಗ್ಯೆಲನು ರೋಮಿನ ಸಾಮ್ರಾಟನಾಗಬೇಕೆಂದು ಅಗ್ರಿಪ್ಪನು ಹೇಳಿದ್ದರಿಂದ ಸಾಮ್ರಾಟ ತಿಬೇರಿಯನು ಅವನನ್ನು ಸೆರೆಗೆ ದೊಬ್ಬಿದ್ದನು. ತದನಂತರ ಕಲಿಗ್ಯೆಲನು ಸಾಮ್ರಾಟನಾದಾಗ ಅಗ್ರಿಪ್ಪನನ್ನು ಯೂದಾಯದ ಅರಸನನ್ನಾಗಿ ಮಾಡುವ ಮೂಲಕ ಬಹುಮಾನಿಸಿದನು.—ಅ. ಕಾ. 12:1.
[ಪುಟ 13ರಲ್ಲಿರುವ ಚಿತ್ರ]
[ಪುಟ 13ರಲ್ಲಿರುವ ಚಿತ್ರ]
ಅಂಗರಕ್ಷಕ ದಳದ ಸೈನಿಕರ ಕೆತ್ತನೆಚಿತ್ರ. ಇದು ಕ್ರಿ.ಶ. 51ರಲ್ಲಿ ಕಟ್ಟಲಾದ ಕ್ಲೌದ್ಯ ಚಕ್ರವರ್ತಿಯ ಕಮಾನಿನ ಮೇಲಿತ್ತೆಂದು ನೆನಸಲಾಗುತ್ತದೆ
[ಕೃಪೆ]
© RMN-Grand Palais/Art Resource, NY
[ಪುಟ 14ರಲ್ಲಿರುವ ಚೌಕ]
ಸಾಮ್ರಾಟ ನೀರೊ ಸಮಯದ ಅಂಗರಕ್ಷಕ ದಳ
ಅಂಗರಕ್ಷಕ ದಳವು ಸಾಮ್ರಾಟನನ್ನೂ ಅವನ ಕುಟುಂಬವನ್ನೂ ಸಂರಕ್ಷಿಸುವ ಪ್ರಮಾಣ ಮಾಡಿರುತ್ತದೆ. ಯುದ್ಧಕ್ಕೆ ಹೋಗುವಾಗ ಅವರು ಸಾಮ್ರಾಟನ ಚಿಹ್ನೆಯಿರುವ ಧ್ವಜಗಳನ್ನು ಮತ್ತು ಚಕ್ರವರ್ತಿ ತಿಬೇರಿಯನ ರಾಶಿಯೆಂದು ನಂಬುತ್ತಿದ್ದ ವೃಶ್ಚಿಕ (ಚೇಳಿನ) ಚಿಹ್ನೆಗಳಿರುವ ಗುರಾಣಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಈ ದಳದ ಸೈನಿಕರನ್ನು ಗುಂಪುಗಳಾಗಿ ವಿಂಗಡಿಸಿ ಅವರ ಮೇಲೆ ಸೈನ್ಯಾಧಿಕಾರಿ ಮತ್ತು ಶತಾಧಿಪತಿಗಳನ್ನು ನೇಮಿಸಲಾಗುತ್ತಿತ್ತು. ಅವರು ಕ್ರೀಡೆಗಳು ನಡೆಯುವ ಸ್ಥಳದಲ್ಲಿ, ನಾಟಕಶಾಲೆಗಳಲ್ಲಿ ಶಿಸ್ತು ಕಾಪಾಡುತ್ತಿದ್ದರು. ಅಗ್ನಿ ದುರಂತ ನಡೆದಾಗ ಸಹಾಯಕ್ಕೆ ಬರುತ್ತಿದ್ದರು. ಇವರಿಗೆ ಹೆಚ್ಚಿನ ಸೌಲಭ್ಯಗಳಿರುತ್ತಿದ್ದವು. ಸಾಮಾನ್ಯ ಸೈನಿಕರು 25 ವರ್ಷ ಸೇವೆ ಸಲ್ಲಿಸಬೇಕಾಗಿದ್ದರೆ ಇವರು ಕೇವಲ 16 ವರ್ಷ ಮಾತ್ರ ಸೇವೆ ಸಲ್ಲಿಸಬೇಕಿತ್ತು. ಸಾಮಾನ್ಯ ಸೈನಿಕರಿಗಿಂತ ಮೂರು ಪಟ್ಟು ಹೆಚ್ಚು ಸಂಬಳ ಕೊಡಲಾಗುತ್ತಿತ್ತು. ತುಂಬ ಬೋನಸ್, ನಿವೃತ್ತಿಯಾಗುವಾಗ ದೊಡ್ಡ ಮೊತ್ತದ ಹಣವನ್ನು ಕೊಡಲಾಗುತ್ತಿತ್ತು. ಕೈದಿಗಳಿಗೆ ಚಿತ್ರಹಿಂಸೆ ಕೊಡುವ, ಮರಣದಂಡನೆ ಜಾರಿಗೊಳಿಸುವ ಕೆಲಸವು ಸಹ ಅಂಗರಕ್ಷಕ ದಳದ್ದಾಗಿತ್ತು. ಪೌಲನು ಎರಡನೇ ಬಾರಿ ಬಂದಿವಾಸದಲ್ಲಿದ್ದಾಗ, ಈ ಮುಂಚೆ ಯಾರಿಗೆ ಜೀವರಕ್ಷಕ ಸಂದೇಶವನ್ನು ಸಾರಿದನೋ ಅಂಥದ್ದೇ ಸೈನಿಕರಿಂದ ಪ್ರಾಣ ಕಳೆದುಕೊಂಡಿರಬೇಕು.—2 ತಿಮೊ. 4:16, 17.
[ಪುಟ 14ರಲ್ಲಿರುವ ಚಿತ್ರ]
ಪ್ರೈಟೋರಿಯ ಕೋಟೆಯ ಚಿತ್ರವಿರುವ 1ನೇ ಶತಮಾನದ ಒಂದು ನಾಣ್ಯ
[ಕೃಪೆ]
Courtesy Classical Numismatic Group, Inc./cngcoins.com
[ಪುಟ 15ರಲ್ಲಿರುವ ಚಿತ್ರ]
ಕಾಸ್ಟ್ರಾ ಪ್ರೈಟೋರೀಯಾ ಕೋಟೆಯ ಗೋಡೆಗಳು—ಇಂದು
[ಪುಟ 15ರಲ್ಲಿರುವ ಚಿತ್ರ]
ಪೌಲನು ಪತ್ರಗಳನ್ನು ಬರೆಯಿಸುತ್ತಿದ್ದಾಗ ಸೈನಿಕರು ಕೇಳಿಸಿಕೊಂಡರು
[ಪುಟ 16ರಲ್ಲಿರುವ ಚಿತ್ರ]
ನಾವು ಯಾವುದೇ ಸನ್ನಿವೇಶದಲ್ಲಿರಲಿ, ನೆರವು ನೀಡಲು ಬರುವ ವ್ಯಕ್ತಿಗಳಿಗೆ ಸುವಾರ್ತೆ ಸಾರುವ ಅವಕಾಶ ನಮಗೆ ಸಿಗಬಹುದು
[ಪುಟ 16ರಲ್ಲಿರುವ ಚೌಕ]
ಸೆಕ್ಸ್‌ಟಸ್ ಆಫ್ರಾನ್ಯುಸ್ ಬುರೋಸ್
ವೆಝಾನ್ ಲಾ ರೋಮ್ಯಾನ್ ಎಂಬ ಸ್ಥಳದಲ್ಲಿ ಬುರೋಸ್ ಜನಿಸಿದ್ದಿರಬಹುದು. ಅದು ಈಗ ದಕ್ಷಿಣ ಫ್ರಾನ್ಸ್‌ಗೆ ಸೇರಿದ್ದಾಗಿದೆ. ಅವನ ಹೆಸರಿರಿರುವ ಒಂದು ಶಿಲಾಶಾಸನವು ಕ್ರಿ.ಶ. 1884ರಲ್ಲಿ ಅಲ್ಲಿ ದೊರೆತಿದೆ. ಕ್ರಿ.ಶ. 51ರಲ್ಲಿ ಚಕ್ರವರ್ತಿ ಕ್ಲೌದ್ಯನ ಹೆಂಡತಿಯಾದ ಅಗ್ರಿಪೈನ ದ ಯಂಗರ್ ಅವನನ್ನು ಅಂಗರಕ್ಷಕ ದಳದ ಮುಖ್ಯಾಧಿಕಾರಿಯ ಹುದ್ದೆಗೇರಿಸಿದಳು. ಅಗ್ರಿಪೈನ ತನ್ನ ಮಗನಾದ ನೀರೊನನ್ನು ಮುಂದಿನ ಸಾಮ್ರಾಟನಾಗಲು ತರಬೇತಿ ಕೊಡಲು ಇಬ್ಬರು ತರಬೇತುಗಾರರನ್ನು ನೇಮಿಸಿದ್ದಳು. ಅವರಲ್ಲೊಬ್ಬನು ಬುರೋಸ್. ಸಮರ್ಥ ಸೈನಿಕನಾಗಿದ್ದ ಇವನು ನೀರೊಗೆ ಮಿಲಿಟರಿ ತರಬೇತಿ ಕೊಟ್ಟನು. ಇನ್ನೊಬ್ಬನು ತತ್ವಜ್ಞಾನಿ ಸೆನಿಕ. ಅವನು ನೀರೊಗೆ ಜ್ಞಾನವಿದ್ಯೆ ಕೊಟ್ಟನು. ಅನಂತರ ಅಗ್ರಿಪೈನಳು ಸಂದರ್ಭ ನೋಡಿ ತನ್ನ ಗಂಡನನ್ನೇ ವಿಷಹಾಕಿ ಕೊಂದಳು. ತಕ್ಷಣ ಬುರೋಸನು ನೀರೊನನ್ನು ಪ್ರೈಟೋರೀಯ ಕೋಟೆಗೆ ಕರೆದುಕೊಂಡು ಹೋಗಿ ಅಂಗರಕ್ಷಕ ದಳದವರ ಬೆಂಬಲದೊಂದಿಗೆ ಅವನನ್ನು ಸಾಮ್ರಾಟನನ್ನಾಗಿ ಘೋಷಿಸಿದನು. ರೋಮ್‌ನ ಪರಿಷತ್ತು ಅದನ್ನು ಒಪ್ಪಲೇಬೇಕಾಯಿತು. ಕ್ರಿ.ಶ. 59ರಲ್ಲಿ ನೀರೊ ತನ್ನ ತಾಯಿಯಾದ ಅಗ್ರಿಪೈನಳನ್ನು ಸಾಯಿಸಿದನು. ಇದರಿಂದ ನೀರೊಗೆ ಏನೂ ಅಪಾಯವಾಗದಂತೆ ಬುರೋಸನೇ ಸಹಾಯಮಾಡಿದನು. ಅನಂತರ ಕ್ರಿ.ಶ. 62ರಲ್ಲಿ ಬುರೋಸನನ್ನು ನೀರೊ ವಿಷಹಾಕಿ ಕೊಂದನು ಎಂಬುದು ರೋಮಿನ ಇತಿಹಾಸಕಾರರಾದ ಸ್ವೀಟೋನಿಯಸ್ ಮತ್ತು ಕಾಸ್ಯಸ್ ಡೀಯೋ ಅವರ ಅಭಿಪ್ರಾಯ.
[ಪುಟ 16ರಲ್ಲಿರುವ ಚಿತ್ರ]
ಸೆಕ್ಸ್‌ಟಸ್ ಆಫ್ರಾನ್ಯುಸ್ ಬುರೋಸ್‌ನ ಹೆಸರಿರುವ ಒಂದು ಶಿಲಾಶಾಸನ
[ಕೃಪೆ]
Musée Calvet Avignon