ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯಿರಿ

ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯಿರಿ

ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯಿರಿ

“ಯೆಹೋವನು . . . ಯುದ್ಧ ದಿನದಲ್ಲಿ ಹೇಗೋ ಹಾಗೆಯೇ ಆ ಜನಾಂಗಗಳಿಗೆ ಪ್ರತಿಭಟಿಸುವನು.”​—⁠ಜೆಕ. 14:⁠3.

ವಿವರಿಸುವಿರಾ?

“ಎಣ್ಣೆಯ ಮರಗಳ ಗುಡ್ಡ” ಸೀಳಿಹೋಗುವುದು ಏನನ್ನು ಸೂಚಿಸುತ್ತದೆ?

“ದೊಡ್ಡ ಕಣಿವೆ” ಏನನ್ನು ಸೂಚಿಸುತ್ತದೆ? ನಾವು ಅದರಲ್ಲಿ ಉಳಿಯುವುದು ಹೇಗೆ?

“ಜೀವಕರವಾದ ಜಲಪ್ರವಾಹ” ಏನನ್ನು ಸೂಚಿಸುತ್ತದೆ? ಅದರಿಂದ ಯಾರು ಪ್ರಯೋಜನ ಪಡೆಯುತ್ತಾರೆ?

1, 2. (1) ಬೇಗನೆ ಯಾವ ನೈಜ ಯುದ್ಧ ನಡೆಯಲಿದೆ? (2) ಆ ಯುದ್ಧದ ಸಮಯದಲ್ಲಿ ದೇವಜನರು ಏನನ್ನು ಮಾಡಬೇಕೆಂದಿಲ್ಲ?

ಇಸವಿ 1938ರ ಅಕ್ಟೋಬರ್‌ 30ರಂದು ನಡೆದ ಘಟನೆ. ಅಮೆರಿಕದಾದ್ಯಂತ ಲಕ್ಷಾಂತರ ಜನರು ಎಂದಿನಂತೆ ರೇಡಿಯೊದಲ್ಲಿ ನಾಟಕವನ್ನು ಆಲಿಸುತ್ತಿದ್ದರು. ಅಂದು ಒಂದು ವೈಜ್ಞಾನಿಕ ಕಲ್ಪನಾಕಥೆಯನ್ನು ಆಧರಿಸಿದ ನಾಟಕವನ್ನು ಪ್ರಸಾರ ಮಾಡಲಾಗಿತ್ತು. ನಾಟಕದಲ್ಲಿ ವಾರ್ತಾ ವರದಿಗಾರರಂತೆ ನಟಿಸುತ್ತಿದ್ದ ಕಲಾವಿದರು ಈ ಪ್ರಕಟನೆಯನ್ನು ಮಾಡಿದರು: ‘ಮಂಗಳ ಗ್ರಹದಿಂದ ಜೀವಿಗಳು ಭೂಮಿಗೆ ಬಂದು ಇಡೀ ಭೂಮಿಯನ್ನು ಆಕ್ರಮಣ ಮಾಡಿ ನಾಶಗೊಳಿಸಲಿವೆ.’ ಇದು ನಾಟಕವೆಂದು ಹೇಳಲಾಗಿತ್ತಾದರೂ ಅನೇಕ ಕೇಳುಗರು ಅದನ್ನು ನಿಜವೆಂದೇ ನೆನಸಿ ಭಯದಿಂದ ಕಂಗಾಲಾದರು. ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಪರದಾಡಿದರು.

2 ಆದರೆ ಬೇಗನೆ ನಿಜವಾದ ಒಂದು ಯುದ್ಧ ನಡೆಯಲಿದೆ. ಜನರಾದರೋ ಅದರ ಪರಿವೆಯೇ ಇಲ್ಲದಂತಿದ್ದಾರೆ. ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲಿರುವ ವಿಷಯವಲ್ಲ. ಬದಲಿಗೆ ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿರುವ ನೈಜ ಸಂಗತಿ. ಆ ಯುದ್ಧದ ಹೆಸರು ಅರ್ಮಗೆದೋನ್‌. ದುಷ್ಟ ಲೋಕದ ಮೇಲೆ ದೇವರು ಮಾಡಲಿರುವ ಯುದ್ಧ ಅದಾಗಿದೆ. (ಪ್ರಕ. 16:​14-16) ಈ ಯುದ್ಧದ ಸಮಯದಲ್ಲಿ ದೇವಜನರು ಇನ್ನೊಂದು ಗ್ರಹದಿಂದ ಬರುವ ಜೀವಿಗಳ ವಿರುದ್ಧ ಹೋರಾಡಬೇಕಾಗಿಲ್ಲ. ಆದರೂ ದಿಗ್ಭ್ರಾಂತಗೊಳಿಸುವ ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಅವರು ನೋಡುತ್ತಾರೆ. ದೇವರ ಶಕ್ತಿಯ ಬೆರಗುಗೊಳಿಸುವ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಾರೆ.

3. (1) ನಾವು ಯಾವ ಪ್ರವಾದನೆಯನ್ನು ಅಧ್ಯಯನ ಮಾಡಲಿದ್ದೇವೆ? (2) ಅದನ್ನು ನಾವೇಕೆ ಅಧ್ಯಯನ ಮಾಡಬೇಕು?

3 ಬೈಬಲಿನ ಜೆಕರ್ಯ ಪುಸ್ತಕದ 14ನೇ ಅಧ್ಯಾಯದಲ್ಲಿರುವ ಒಂದು ಪ್ರವಾದನೆಯು ಅರ್ಮಗೆದೋನ್‌ ಯುದ್ಧದ ಕುರಿತು ಅನೇಕ ವಿಷಯಗಳನ್ನು ತಿಳಿಯಪಡಿಸುತ್ತದೆ. ಇದನ್ನು ಸುಮಾರು 2,500 ವರ್ಷಗಳ ಹಿಂದೆ ಬರೆಯಲಾಯಿತಾದರೂ ಅದು ಇಂದು ನಮ್ಮೆಲ್ಲರ ಜೀವನದ ಮೇಲೆ ಪ್ರಭಾವಬೀರುತ್ತದೆ. (ರೋಮ. 15:⁠4) ಅದರಲ್ಲಿ ಹೇಳಿರುವ ಹೆಚ್ಚಿನ ವಿಷಯಗಳು 1914ರಲ್ಲಿ ಮೆಸ್ಸೀಯ ರಾಜ್ಯ ಸ್ಥಾಪನೆಯಾದ ನಂತರ ನಡೆದ ಸಂಗತಿಗಳಿಗೆ ಸಂಬಂಧಿಸಿವೆ. ಮಾತ್ರವಲ್ಲ ಭವಿಷ್ಯತ್ತಿನಲ್ಲಿ ಬೇಗನೆ ನಡೆಯಲಿರುವ ವಿಸ್ಮಯಕಾರಿ ಘಟನೆಗಳಿಗೂ ಸಂಬಂಧಿಸಿವೆ. “ದೊಡ್ಡ ಡೊಂಗರ” ಅಥವಾ “ದೊಡ್ಡ ಕಣಿವೆ”ಯ (NW) ರಚನೆ ಹಾಗೂ “ಜೀವಕರವಾದ ಜಲಪ್ರವಾಹವು” ಹೊರಡುವುದು ಆ ಪ್ರವಾದನೆಯಲ್ಲಿರುವ ಮುಖ್ಯ ವಿಷಯಗಳು. (ಜೆಕ. 14:​4, 8) ಈ “ಕಣಿವೆ” ದೇವಜನರಿಗೆ ರಕ್ಷಣೆ ಒದಗಿಸಲಿದೆ. ಅದು ಹೇಗೆ ಮತ್ತು ಆ ಕಣಿವೆ ಯಾವುದು ಎನ್ನುವುದನ್ನು ಮುಂದಕ್ಕೆ ಕಲಿಯಲಿದ್ದೇವೆ. ಜೀವಕರವಾದ ಜಲಪ್ರವಾಹದಿಂದ ನಮಗೆ ಯಾವ ಪ್ರಯೋಜನವಿದೆ ಎಂದು ಕಲಿತ ಮೇಲೆ, ಅದನ್ನು ಕುಡಿಯುವ ಅಗತ್ಯ ನಮಗಿದೆ ಎಂದು ತಿಳಿದುಬರುವುದು. ಮಾತ್ರವಲ್ಲ ಅದನ್ನು ಕುಡಿಯಲು ನಾವು ಹಾತೊರೆಯುವೆವು. ಹಾಗಾಗಿ ಈ ಪ್ರವಾದನೆಯನ್ನು ಗಮನಕೊಟ್ಟು ಅಧ್ಯಯನ ಮಾಡೋಣ.​—⁠2 ಪೇತ್ರ 1:​19, 20.

“ಯೆಹೋವನು ನೇಮಿಸಿದ ದಿನ” ಆರಂಭವಾಗುತ್ತದೆ

4. (1) “ಯೆಹೋವನು ನೇಮಿಸಿದ ದಿನ” ಯಾವಾಗ ಆರಂಭಗೊಂಡಿತು? (2) 1914ಕ್ಕಿಂತ ಎಷ್ಟೋ ವರ್ಷಗಳ ಮುಂಚಿನಿಂದಲೂ ಯೆಹೋವನ ಜನರು ಏನನ್ನು ಪ್ರಕಟಿಸುತ್ತಿದ್ದರು? (3) ಅದಕ್ಕೆ ಲೋಕದ ಧುರೀಣರ ಪ್ರತಿಕ್ರಿಯೆ ಹೇಗಿತ್ತು?

4 ಜೆಕರ್ಯ ಪುಸ್ತಕದ 14ನೇ ಅಧ್ಯಾಯ ‘ಯೆಹೋವನು ನೇಮಿಸಿದ ದಿನದ’ ಕುರಿತು ಹೇಳುತ್ತಾ ಆರಂಭಗೊಳ್ಳುತ್ತದೆ. (ಜೆಕರ್ಯ 14:​1, 2 ಓದಿ.) ಯಾವುದು ಆ ದಿನ? ಅದು “ಕರ್ತನ ದಿನ.” ಯಾವಾಗ ‘ಲೋಕದ ರಾಜ್ಯವು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತೋ’ ಆಗ ಆ ದಿನ ಆರಂಭವಾಯಿತು. (ಪ್ರಕ. 1:10; 11:15) ಅಂದರೆ 1914ರಲ್ಲಿ ಮೆಸ್ಸೀಯ ರಾಜ್ಯವು ಸ್ವರ್ಗದಲ್ಲಿ ಸ್ಥಾಪನೆಯಾದಾಗ ಅದು ಆರಂಭಗೊಂಡಿತು. ಎಷ್ಟೋ ವರ್ಷಗಳ ಮುಂಚಿನಿಂದಲೇ ಯೆಹೋವನ ಜನರು ‘1914ರಲ್ಲಿ “ಅನ್ಯಜನಾಂಗಗಳ ನೇಮಿತ ಕಾಲಗಳು” ಮುಗಿದು ಇಡೀ ಲೋಕವು ಹಿಂದೆಂದೂ ಅನುಭವಿಸಿರದ ಸಂಕಟದ ಸಮಯಾವಧಿಗೆ ಕಾಲಿಡಲಿದೆ’ ಎಂದು ಎಚ್ಚರಿಸುತ್ತಾ ಬಂದಿದ್ದರು. (ಲೂಕ 21:24) ಆದರೆ ಆ ಎಚ್ಚರಿಕೆಗೆ ಜನಾಂಗಗಳವರು ಕಿವಿಗೊಡಲಿಲ್ಲ. ಬದಲಿಗೆ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಈ ಹುರುಪಿನ ಸೌವಾರ್ತಿಕರನ್ನು ಹೀಯಾಳಿಸಿದರು, ಹಿಂಸಿಸಿದರು. ಹೀಗೆ ಮಾಡುವ ಮೂಲಕ ಆ ಧುರೀಣರೆಲ್ಲರೂ ಸರ್ವಶಕ್ತ ದೇವರನ್ನೇ ಗೇಲಿಮಾಡಿದಂತಿತ್ತು. ಏಕೆಂದರೆ ದೇವರ ರಾಜ್ಯದ ರಾಯಭಾರಿಗಳಾದ ಅಭಿಷಿಕ್ತ ಕ್ರೈಸ್ತರು ‘ಸ್ವರ್ಗೀಯ ಯೆರೂಸಲೇಮನ್ನು’ ಅಂದರೆ ಮೆಸ್ಸೀಯ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ಆ ರಾಜ್ಯದ ಭಾಗವಾಗಿದ್ದಾರೆ.​—⁠ಇಬ್ರಿ. 12:​22, 28.

5, 6. (1) ಪ್ರವಾದನೆಯಲ್ಲಿ ತಿಳಿಸಲಾದಂತೆ “ಪಟ್ಟಣ” ಹಾಗೂ ‘ಪಟ್ಟಣದ ಪ್ರಜೆಗಳಿಗೆ’ ಜನಾಂಗಗಳು ಏನು ಮಾಡಿದವು? (2) ‘ಮಿಕ್ಕವರು’ ಯಾರು?

5 ಜನಾಂಗಗಳು ಏನು ಮಾಡಲಿವೆಯೆಂದು ಜೆಕರ್ಯನು ಮುಂತಿಳಿಸಿದ್ದನು. ಅವನು ಹೇಳಿದ್ದು: ‘ಅವು [ಯೆರೂಸಲೇಮ್‌] ಪಟ್ಟಣವನ್ನು ಆಕ್ರಮಿಸುವವು.’ “ಪಟ್ಟಣ” ದೇವರ ಮೆಸ್ಸೀಯ ರಾಜ್ಯವನ್ನು ಸೂಚಿಸುತ್ತದೆ. ಭೂಮಿಯಲ್ಲಿದ್ದ ಅದರ ‘ಪ್ರಜೆಗಳಾದ’ ಅಭಿಷಿಕ್ತ ಕ್ರೈಸ್ತರು ಆ ರಾಜ್ಯವನ್ನು ಪ್ರತಿನಿಧಿಸುತ್ತಾರೆ. (ಫಿಲಿ. 3:20) ಈ ಅಭಿಷಿಕ್ತರಲ್ಲಿ ಕೆಲವರನ್ನು, ಅಂದರೆ ಯೆಹೋವನ ಸಂಘಟನೆಯ ಭೂಭಾಗದ ಪ್ರಧಾನ ಸದಸ್ಯರನ್ನು ಒಂದನೇ ಮಹಾ ಯುದ್ಧದ ಸಮಯಾವಧಿಯಲ್ಲಿ ದಸ್ತಗಿರಿ ಮಾಡಲಾದಾಗ ಆ ‘ಪಟ್ಟಣ ಆಕ್ರಮಣಕ್ಕೊಳಗಾಯಿತು.’ ಅವರನ್ನು ಅಮೆರಿಕದ ಜಾರ್ಜಿಯದ ಅಟ್ಲಾಂಟದಲ್ಲಿರುವ ಸೆರೆಮನೆಗೆ ಹಾಕಲಾಯಿತು. ಮಾತ್ರವಲ್ಲ ಜೆಕರ್ಯನು ಹೇಳಿದಂತೆ ಆ ಪಟ್ಟಣದ ‘ಮನೆಗಳನ್ನು ಸಹ ಸೂರೆಮಾಡಲಾಯಿತು.’ ಹೇಗೆ? ಈ ಸಮಗ್ರತಾ ಪಾಲಕರನ್ನು ಮತ್ತು ಇತರ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರನ್ನು ಅನ್ಯಾಯದಿಂದ ಕ್ರೂರವಾಗಿ ಉಪಚರಿಸಿದಾಗ, ಅವರ ಸಾಹಿತ್ಯವನ್ನು ನಿಷೇಧಿಸಿ ಸಾರುವ ಕೆಲಸದ ಮೇಲೆ ನಿರ್ಬಂಧ ಹೇರಿದಾಗ ಈ ಮಾತು ನೆರವೇರಿತು.

6 ಯೆಹೋವನ ಜನರು ಸ್ವಲ್ಪವೇ ಮಂದಿ ಇದ್ದರು. ಅವರ ಕುರಿತು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಲಾಯಿತು. ವಿರೋಧಿಗಳ ಕೈಯಲ್ಲಿ ಹಿಂಸಿಸಲ್ಪಟ್ಟರು. ಆದರೂ ಸತ್ಯಾರಾಧನೆಯನ್ನು ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವಾಗಲಿಲ್ಲ. ಅಭಿಷಿಕ್ತರಲ್ಲಿ ಉಳಿದವರು ತಮ್ಮ ನಿಷ್ಠೆಯನ್ನು ಬಿಟ್ಟುಕೊಡದೆ ಪ್ರವಾದನೆಯಲ್ಲಿ ಹೇಳಿದಂತೆ ‘ಆ ಪಟ್ಟಣದಲ್ಲೇ ಉಳಿದರು.’ ಇವರೇ ಆ ‘ಮಿಕ್ಕವರು.’

7. ಅಭಿಷಿಕ್ತ ಕ್ರೈಸ್ತರು ನಮಗೆ ಯಾವ ಮಾದರಿಯಿಟ್ಟಿದ್ದಾರೆ?

7 ಹಾಗಾದರೆ ಒಂದನೇ ಮಹಾಯುದ್ಧ ಮುಗಿಯುವಷ್ಟಕ್ಕೆ ಈ ಪ್ರವಾದನೆಯು ಸಂಪೂರ್ಣವಾಗಿ ನೆರವೇರಿತ್ತೋ? ಇಲ್ಲ. ಏಕೆಂದರೆ ನಂತರವೂ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರ ಮೇಲೆ ಹಾಗೂ ಭೂನಿರೀಕ್ಷೆಯಿರುವ ಅವರ ಸಂಗಡಿಗರ ಮೇಲೆ ಜನಾಂಗಗಳು ಆಕ್ರಮಣ ಮಾಡಿದವು. (ಪ್ರಕ. 12:17) ಇದಕ್ಕೆ ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ ಘಟನೆಗಳೇ ಸಾಕ್ಷ್ಯ. ಅಂಥ ಕಷ್ಟಕರ ಸನ್ನಿವೇಶಗಳಲ್ಲಿ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ತೋರಿಸಿದ ಸಮಗ್ರತೆ ಇಂದಿರುವ ದೇವಜನರಿಗೆ ಪ್ರೋತ್ಸಾಹಕರವಾಗಿದೆ. ಏನೇ ಬರಲಿ ಅದನ್ನು ತಾಳಿಕೊಳ್ಳಲು ಸಹಾಯಮಾಡುತ್ತದೆ. ಸಾಕ್ಷಿಗಳಲ್ಲದ ಸಂಬಂಧಿಕರು, ಸಹೋದ್ಯೋಗಿಗಳು, ಸಹಪಾಠಿಗಳು ವಿರೋಧಿಸಿದಾಗ ಅಥವಾ ನಮ್ಮ ನಂಬಿಕೆಯನ್ನು ಅಪಹಾಸ್ಯ ಮಾಡಿದಾಗ ಅದನ್ನು ಸಹಿಸಿಕೊಳ್ಳಲು ಬಲವನ್ನು ತುಂಬುತ್ತದೆ. (1 ಪೇತ್ರ 1:​6, 7) ಯೆಹೋವನ ಆರಾಧಕರು ಭೂಮಿಯ ಯಾವುದೇ ಮೂಲೆಯಲ್ಲಿರಲಿ ‘ವಿರೋಧಿಗಳಿಗೆ ಹೆದರದೆ ಒಂದೇ ಮನಸ್ಸಿನಲ್ಲಿ ದೃಢವಾಗಿ ನಿಲ್ಲಲು’ ಸಂಕಲ್ಪ ಮಾಡಿದ್ದಾರೆ. (ಫಿಲಿ. 1:​27, 28) ಆದರೆ ಒಂದು ಪ್ರಶ್ನೆ ನಮ್ಮಲ್ಲಿ ಏಳಬಹುದು. ಸುತ್ತಲೂ ವಿರೋಧವಿರುವಾಗ ಯೆಹೋವನ ಜನರಿಗೆ ರಕ್ಷಣೆ ಎಲ್ಲಿ ಸಿಗುತ್ತದೆ?​—⁠ಯೋಹಾ. 15:​17-19.

ಯೆಹೋವನು ‘ದೊಡ್ಡ ಕಣಿವೆಯನ್ನು’ ಉಂಟುಮಾಡುತ್ತಾನೆ

8. (1) ಯಾವುದನ್ನು ಸೂಚಿಸಲು ಬೈಬಲಿನಲ್ಲಿ ‘ಗುಡ್ಡ’ ಅಥವಾ ‘ಪರ್ವತ’ ಎಂಬ ಪದವನ್ನು ಬಳಸಲಾಗಿದೆ? (2) “ಎಣ್ಣೆಯ ಮರಗಳ ಗುಡ್ಡ” ಏನನ್ನು ಸೂಚಿಸುತ್ತದೆ?

8 ಪ್ರವಾದನೆಯಲ್ಲಿ ಹೇಳಲಾದ ಯೆರೂಸಲೇಮ್‌ ‘ಪಟ್ಟಣಕ್ಕೆ’ ಸಾಂಕೇತಿಕ ಅರ್ಥವಿದೆ ಅಂದ ಮೇಲೆ ‘ಯೆರೂಸಲೇಮಿಗೆ ಮೂಡಲಲ್ಲಿ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡಕ್ಕೂ’ ಸಾಂಕೇತಿಕ ಅರ್ಥವಿರಬೇಕು. ಹಾಗಾದರೆ ಈ ಗುಡ್ಡ ಯಾವುದನ್ನು ಸೂಚಿಸುತ್ತದೆ? ಅದು “ಸೀಳಿಹೋಗಿ” ಎರಡು ಗುಡ್ಡಗಳಾಗುವುದು ಹೇಗೆ? ಯೆಹೋವನು ಅವುಗಳನ್ನು ‘ನನ್ನ ಗುಡ್ಡಗಳು’ ಎಂದು ಏಕೆ ಕರೆದಿದ್ದಾನೆ? (ಜೆಕರ್ಯ 14:​3-5 ಓದಿ.) ಬೈಬಲಿನಲ್ಲಿ ಅನೇಕಬಾರಿ ರಾಜ್ಯಗಳನ್ನು ಅಥವಾ ಸರಕಾರಗಳನ್ನು ಸೂಚಿಸಲಿಕ್ಕಾಗಿ ‘ಗುಡ್ಡ’ ಅಥವಾ ‘ಪರ್ವತ’ ಎಂಬ ಪದಗಳನ್ನು ಬಳಸಲಾಗಿದೆ. ಮಾತ್ರವಲ್ಲ ದೇವರ ಪರ್ವತದಿಂದ ಆಶೀರ್ವಾದ ಹಾಗೂ ಸಂರಕ್ಷಣೆ ಸಿಗುತ್ತದೆಂದೂ ಹೇಳಲಾಗಿದೆ. (ಕೀರ್ತ. 72:3; ಯೆಶಾ. 25:​6, 7) ಹಾಗಾಗಿ, ದೇವರು ನಿಂತಿದ್ದ ‘ಎಣ್ಣೆಯ ಮರಗಳ ಗುಡ್ಡವು’ ಯೆಹೋವನ ವಿಶ್ವ ಪರಮಾಧಿಕಾರವನ್ನು ಅಂದರೆ ಎಲ್ಲವನ್ನೂ ಆಳಲು ಆತನಿಗಿರುವ ಹಕ್ಕನ್ನು ಸೂಚಿಸುತ್ತದೆ.

9. “ಎಣ್ಣೆಯ ಮರಗಳ ಗುಡ್ಡ” ಸೀಳಿಹೋಗುವುದು ಏನನ್ನು ಸೂಚಿಸುತ್ತದೆ?

9 ಎಣ್ಣೆಯ ಮರಗಳ ಗುಡ್ಡವು ಸೀಳಿಹೋಗುವುದು ಏನನ್ನು ಸೂಚಿಸುತ್ತದೆ? ಅದು ಸೀಳಿ ಎರಡಾಗುವುದು, ಯೆಹೋವನು ಇನ್ನೊಂದು ಆಡಳಿತವನ್ನು ಅಥವಾ ಒಂದು ಉಪ ಆಡಳಿತವನ್ನು ಸ್ಥಾಪಿಸುವುದನ್ನು ಸೂಚಿಸುತ್ತದೆ. ಈ ಉಪ ಆಡಳಿತ ಮೆಸ್ಸೀಯ ರಾಜ್ಯವಾಗಿದೆ. ಅದರ ರಾಜನು ಯೇಸು ಕ್ರಿಸ್ತನು. ಆದ್ದರಿಂದಲೇ ಆ ಎರಡೂ ಗುಡ್ಡಗಳನ್ನು ಯೆಹೋವನು ‘ನನ್ನ ಗುಡ್ಡಗಳು’ ಎಂದು ಕರೆಯುತ್ತಾನೆ. ಅವೆರಡೂ ಯೆಹೋವನಿಗೆ ಸೇರಿದವುಗಳಾಗಿವೆ.

10. ಎರಡು ಗುಡ್ಡಗಳ ಮಧ್ಯೆ ಉಂಟಾದ “ದೊಡ್ಡ ಕಣಿವೆ” ಏನನ್ನು ಸೂಚಿಸುತ್ತದೆ?

10 ಈ ಸಾಂಕೇತಿಕ ಪರ್ವತವು ಸೀಳಿಹೋಗಿ ಅರ್ಧಭಾಗ ಬಡಗಲಿಗೆ ಅಂದರೆ ಉತ್ತರಕ್ಕೆ, ಇನ್ನರ್ಧಭಾಗ ತೆಂಕಲಿಗೆ ಅಂದರೆ ದಕ್ಷಿಣಕ್ಕೆ ಸರಿದುಕೊಂಡಾಗ ಯೆಹೋವನ ಪಾದಗಳು ಆಚೀಚೆ ಎರಡರ ಮೇಲೂ ನಿಂತಿದ್ದವು. ಎರಡೂ ಪರ್ವತಗಳ ಮಧ್ಯೆ “ದೊಡ್ಡ ಡೊಂಗರ [ಕಣಿವೆ, NW]” ಉಂಟಾಯಿತು. ಈ ಕಣಿವೆ ದೈವಿಕ ರಕ್ಷಣೆಯನ್ನು ಸೂಚಿಸುತ್ತದೆ. ಅಂದರೆ ಯೆಹೋವನ ವಿಶ್ವ ಪರಮಾಧಿಕಾರದ ಹಾಗೂ ಆತನ ಮಗನ ಮೆಸ್ಸೀಯ ರಾಜ್ಯದ ಕೆಳಗೆ ದೇವಜನರು ಪಡೆಯುವ ಸಂರಕ್ಷಣೆಯನ್ನು ಇದು ಸೂಚಿಸುತ್ತದೆ. ಸತ್ಯಾರಾಧನೆ ಅಳಿದುಹೋಗಲು ಯೆಹೋವನು ಎಂದಿಗೂ ಬಿಡನು ಖಂಡಿತ. ಪ್ರವಾದನೆಯಲ್ಲಿ ಹೇಳಲಾದ ಈ ಗುಡ್ಡದ ವಿಭಜನೆ ಯಾವಾಗ ಆಯಿತು? 1914ರಲ್ಲಿ ಅನ್ಯಜನಾಂಗಗಳ ಸಮಯ ಕೊನೆಗೊಂಡು ಸ್ವರ್ಗದಲ್ಲಿ ಮೆಸ್ಸೀಯ ರಾಜ್ಯ ಸ್ಥಾಪನೆಯಾದಾಗಲೇ. ಸರಿ, ಹಾಗಾದರೆ, ಸತ್ಯಾರಾಧಕರು ಯೆಹೋವನ ರಕ್ಷಣಾ ಕಣಿವೆಗೆ ಓಡಿಹೋಗಲು ಆರಂಭಿಸಿದ್ದು ಯಾವಾಗ?

ಸಂರಕ್ಷಣಾ ಕಣಿವೆಗೆ ಓಡಿಹೋಗಿರಿ!

11, 12. (1) ಯೆಹೋವನ ಸಂರಕ್ಷಣಾ ಕಣಿವೆಗೆ ದೇವಜನರು ಓಡಿಹೋಗಲು ಆರಂಭಿಸಿದ್ದು ಯಾವಾಗ? (2) ಯೆಹೋವನು ತನ್ನ ಬಲಾಢ್ಯ ಹಸ್ತದ ಮೂಲಕ ತನ್ನ ಜನರನ್ನು ಸಂರಕ್ಷಿಸುತ್ತಿದ್ದಾನೆ ಎಂದು ಯಾವುದು ತೋರಿಸುತ್ತದೆ?

11 “ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗುವಿರಿ” ಎಂಬ ಎಚ್ಚರಿಕೆಯನ್ನು ಯೇಸು ತನ್ನ ಹಿಂಬಾಲಕರಿಗೆ ಕೊಟ್ಟನು. (ಮತ್ತಾ. 24:⁠9) 1914ರಿಂದ ಅಂದರೆ ಕಡೇ ದಿವಸಗಳು ಆರಂಭವಾದಾಗಿನಿಂದ ಆ ದ್ವೇಷ ಇನ್ನೂ ಹೆಚ್ಚಾಗಿದೆ. ಒಂದನೇ ಮಹಾಯುದ್ಧದ ಸಮಯದಲ್ಲಿ ವೈರಿಗಳು ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರನ್ನು ಕ್ರೂರವಾಗಿ ಹಿಂಸಿಸಿದರು. ಆದರೂ ಆ ನಂಬಿಗಸ್ತ ಕ್ರೈಸ್ತರ ಗುಂಪನ್ನು ಅಳಿಸಿಹಾಕಲು ಅವರಿಂದ ಆಗಲಿಲ್ಲ. 1919ರಲ್ಲಿ ನಂಬಿಗಸ್ತ ಅಭಿಷಿಕ್ತರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಹಿಡಿತದಿಂದ ಬಿಡಿಸಲ್ಪಟ್ಟರು. (ಪ್ರಕ. 11:​11, 12) * ಯೆಹೋವನ ಸಂರಕ್ಷಣಾ ಕಣಿವೆಗೆ ದೇವಜನರು ಓಡಿಹೋಗಲು ಆರಂಭಿಸಿದ್ದು ಆಗಿನಿಂದಲೇ.

12 ಲೋಕಾದ್ಯಂತವಿರುವ ದೇವಜನರು 1919ರಿಂದಲೂ ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸುರಕ್ಷಿತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಕೆಲಸ ಹಾಗೂ ಸಾಹಿತ್ಯದ ಮೇಲೆ ಅನೇಕ ದೇಶಗಳಲ್ಲಿ ನಿಷೇಧ, ನಿರ್ಬಂಧಗಳನ್ನು ಹೇರಲಾಗಿತ್ತು. ಕೆಲವೊಂದು ದೇಶಗಳಲ್ಲಿ ಇನ್ನೂ ಅಂಥದ್ದೇ ಪರಿಸ್ಥಿತಿಯಿದೆ. ಆದರೆ ಒಂದಂತೂ ನಿಜ. ಜನಾಂಗಗಳು ಎಷ್ಟೇ ಪ್ರಯತ್ನಿಸಲಿ ಸತ್ಯಾರಾಧನೆಯನ್ನು ನಿರ್ನಾಮ ಮಾಡಲು ಅವರಿಂದ ಎಂದಿಗೂ ಆಗದು! ಯೆಹೋವನು ತನ್ನ ಬಲಾಢ್ಯ ಹಸ್ತದ ಮೂಲಕ ತನ್ನ ಜನರನ್ನು ಸಂರಕ್ಷಿಸುವನು.​—⁠ಧರ್ಮೋ. 11:⁠2.

13. (1) ನಾವು ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಉಳಿಯುವುದು ಹೇಗೆ? (2) ಆ ಕಣಿವೆಯಲ್ಲಿ ಉಳಿಯುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯ ಏಕೆ?

13 ನಾವು ಯೆಹೋವನಿಗೆ ನಿಷ್ಠೆಯಿಂದ ಅಂಟಿಕೊಂಡಿರುವುದಾದರೆ ಹಾಗೂ ಸತ್ಯದಲ್ಲಿ ಸ್ಥಿರವಾಗಿ ನಿಲ್ಲುವುದಾದರೆ ಆತನ ಸಂರಕ್ಷಣಾ ಕಣಿವೆಯಲ್ಲಿ ಉಳಿಯುತ್ತೇವೆ. ಆಗ ನಮಗೆ ದೇವರ, ಯೇಸು ಕ್ರಿಸ್ತನ ಸಹಾಯ ಇದ್ದೇ ಇದೆ. ನಮ್ಮನ್ನು ಯಾರೇ ಆಗಲಿ ಯಾವುದೇ ಆಗಲಿ ‘ತನ್ನ ಕೈಯಿಂದ ಕಸಿದುಕೊಳ್ಳುವಂತೆ’ ದೇವರು ಬಿಡನು. (ಯೋಹಾ. 10:​28, 29) ಯೆಹೋವನನ್ನು ವಿಶ್ವ ಪರಮಾಧಿಕಾರಿಯಾಗಿ ಅಂಗೀಕರಿಸಿರುವ ನಾವು ಆತನಿಗೆ ವಿಧೇಯರಾಗಲು ಹಾಗೂ ಮೆಸ್ಸೀಯ ರಾಜ್ಯದ ನಿಷ್ಠಾವಂತ ಪ್ರಜೆಗಳಾಗಿ ಸದಾ ಉಳಿಯಲು ಬೇಕಾದ್ದೆಲ್ಲ ಸಹಾಯವನ್ನು ಆತನು ಕೊಡಲು ಸಿದ್ಧನು. ಆದರೆ ನಾವು ಸದಾ ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಉಳಿಯಬೇಕು. ಏಕೆಂದರೆ ಬೇಗನೆ ಬರಲಿರುವ ಮಹಾ ಸಂಕಟದ ಸಮಯದಲ್ಲಿ ಅದು ಇನ್ನೂ ಹೆಚ್ಚು ಮಹತ್ವಾರ್ಥದ್ದಾಗಿರುವುದು.

“ಯುದ್ಧ ದಿನ” ಇಗೋ ಬಂತು!

14, 15. ಯೆಹೋವನು “ಯುದ್ಧ ದಿನದಲ್ಲಿ” ವಿರೋಧಿಗಳ ವಿರುದ್ಧ ಹೋರಾಡುವಾಗ ಸಂರಕ್ಷಣಾ ಕಣಿವೆಯ ಹೊರಗಿರುವವರ ಗತಿ ಏನಾಗುವದು?

14 ಈ ದುಷ್ಟ ಲೋಕದ ಅಂತ್ಯವು ಹತ್ತಿರವಾಗುತ್ತಿದ್ದಂತೆ ಸೈತಾನನು ದೇವಜನರ ವಿರುದ್ಧ ಆಕ್ರಮಣಗಳನ್ನು ಹೆಚ್ಚೆಚ್ಚು ತೀವ್ರಗೊಳಿಸುವನು. ಆಗ “[ದೇವರ] ಯುದ್ಧ ದಿನ” ಬರುವುದು. ಆತನು ಶತ್ರುಗಳ ವಿರುದ್ಧ ಹೋರಾಡುವನು. ಸೈತಾನನ ಆಕ್ರಮಣಗಳಿಗೆ ಪೂರ್ಣವಿರಾಮ ಹಾಕುವನು. ವಿಶ್ವದ ಪರಮಾಧಿಕಾರಿ ಯೆಹೋವನು ಹಿಂದೆ ಮಾಡಿರುವ ಎಲ್ಲಾ ಯುದ್ಧಗಳಿಗಿಂತಲೂ ಮಹೋನ್ನತ ರೀತಿಯಲ್ಲಿ ತನ್ನನ್ನು ಯುದ್ಧವೀರನಾಗಿ ತೋರ್ಪಡಿಸಿಕೊಳ್ಳುವನು.​—⁠ಜೆಕ. 14:⁠3.

15 ದೇವರ ಯುದ್ಧದಿನದಲ್ಲಿ ಸಂರಕ್ಷಣೆಯ ‘ದೊಡ್ಡ ಕಣಿವೆಯ’ ಹೊರಗಿರುವವರ ಗತಿ ಏನಾಗುವುದು? ದೇವರ ಅನುಗ್ರಹವೆಂಬ ‘ಬೆಳಕು’ ಅವರ ಮೇಲಿರದು. ಜನಾಂಗಗಳ ಮಿಲಿಟರಿ ಅಸ್ತ್ರಗಳನ್ನು ಸೂಚಿಸುವ ‘ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ, ಅಂತು ಸಮಸ್ತಪಶುಗಳು’ ಬಾಧಿಸಲ್ಪಡುವವು ಅಂದರೆ ಆ ಯುದ್ಧದಿನದಲ್ಲಿ ಆ ಎಲ್ಲ ಅಸ್ತ್ರಗಳು ಚಳಿಯಿಂದ ಮರಗಟ್ಟಿಹೋದ ನಿರುಪಯೋಗಿ ಅಸ್ತ್ರಗಳಂತೆ “ಉಡುಗಿಹೋಗುವವು.” ಯೆಹೋವನು ಅಂಟುರೋಗಗಳನ್ನು, ‘ವ್ಯಾಧಿಯನ್ನು’ ಅವರ ಮೇಲೆ ತರುವನು. ಇದು ಸಾಂಕೇತಿಕವೋ ಅಕ್ಷರಾರ್ಥವೋ ನಮಗೆ ಗೊತ್ತಿಲ್ಲ. ಆದರೆ ಅವು ವಿರೋಧಿಗಳ ಸದ್ದಡಗಿಸುವವು. ಅವರ ಅಟ್ಟಹಾಸ, ಬೆದರಿಕೆಗಳು ನಿಂತುಹೋಗುವವು. ಅವರ ‘ಕಣ್ಣು ಇಂಗುವದು, ನಾಲಿಗೆಯು ಕ್ಷಯಿಸುವದು.’ ಅಂದರೆ ಶತ್ರುಗಳು ಆಕ್ರಮಣ ಮಾಡಲು ಪ್ರಯತ್ನಿಸಿದರೂ ಅದು ಕತ್ತಲೆಯಲ್ಲಿ ತಡಕಾಡಿದಂತಿರುವುದು. ಯೆಹೋವನು ಅವರ ಬಾಯಿ ಮುಚ್ಚಿಸುವನು, ಅವರು ಯೆಹೋವನ ವಿರುದ್ಧ ಮಾತಾಡಲಾರರು. (ಜೆಕ. 14:​6, 7, 12, 15) ಸೈತಾನನ ಪಕ್ಷದಲ್ಲಿ ದೊಡ್ಡ ದಂಡೇ ಇರುವುದು. ಆದರೆ ಅವರು ಭೂಮಿಯ ಯಾವ ಭಾಗದಲ್ಲಿದ್ದರೂ ನಾಶನದಿಂದ ತಪ್ಪಿಸಿಕೊಳ್ಳಲಾರರು. (ಪ್ರಕ. 19:​19-21) “ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು.”​—⁠ಯೆರೆ. 25:​32, 33.

16. (1) ಬೇಗನೆ ಬರಲಿರುವ ದೇವರ ಯುದ್ಧದ ದಿನದ ಕುರಿತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (2) ಸಂಕಷ್ಟದ ಆ ಸಮಯದಲ್ಲಿ ನಾವೇನು ಮಾಡಬೇಕು?

16 ಯುದ್ಧದ ಸಮಯದಲ್ಲಿ ಪರಿಸ್ಥಿತಿ ಅಸ್ತವ್ಯಸ್ತವಾಗುವುದು ಸಾಮಾನ್ಯ. ಯುದ್ಧದಲ್ಲಿ ಜಯಗಳಿಸಲಿರುವವರ ಮೇಲೂ ಇದರ ಪರಿಣಾಮ ಆಗುತ್ತದೆ. ಹಾಗೆಯೇ ಯೆಹೋವನ ಯುದ್ಧದಿನದಲ್ಲಿ ನಮಗೆ ಸಹ ಕೆಲವು ಸಂಕಷ್ಟಗಳು ಎದುರಾಗಬಹುದು. ಸರಿಯಾಗಿ ಊಟ ಸಿಗಲಿಕ್ಕಿಲ್ಲ. ಆಸ್ತಿಪಾಸ್ತಿ ನಷ್ಟವಾಗಬಹುದು. ಒಮ್ಮಿಂದೊಮ್ಮೆಲೆ ಜೀವನದ ಮಟ್ಟ ಕುಸಿಯಬಹುದು. ಈಗಿರುವಷ್ಟು ಸ್ವಾತಂತ್ರ್ಯವಿರಲಿಕ್ಕಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವೇನು ಮಾಡುವೆವು? ಹೆದರಿ ಕಂಗಾಲಾಗುವೆವಾ? ಒತ್ತಡಕ್ಕೆ ಮಣಿದು ನಂಬಿಕೆಯನ್ನು ಬಿಟ್ಟುಬಿಡುವೆವಾ? ಪರಿಸ್ಥಿತಿ ಸರಿಯಾಗಲಾರದು ಎಂದು ಹತಾಶರಾಗುವೆವಾ? ಆ ಮಹಾ ಸಂಕಟದ ಸಮಯದಲ್ಲಿ ಯೆಹೋವನು ನಮ್ಮನ್ನು ರಕ್ಷಿಸುವನೆಂಬ ಭರವಸೆಯನ್ನು ಬಿಟ್ಟುಕೊಡದೆ ಆತನ ಸಂರಕ್ಷಣಾ ಕಣಿವೆಯಲ್ಲೇ ಉಳಿಯುವುದು ಪ್ರಾಮುಖ್ಯ.​ಹಬಕ್ಕೂಕ 3:​17, 18 ಓದಿ.

“ಜೀವಕರವಾದ ಜಲಪ್ರವಾಹವು . . . ಹೊರಡುವದು”

17, 18. (1) “ಜೀವಕರವಾದ ಜಲಪ್ರವಾಹ” ಎಂದರೇನು? (2) “ಪೂರ್ವಸಮುದ್ರ” ಮತ್ತು “ಪಶ್ಚಿಮಸಮುದ್ರ” ಯಾವುದನ್ನು ಸೂಚಿಸುತ್ತದೆ? (3) ನಿಮ್ಮ ಸಂಕಲ್ಪವೇನು?

17 ಅರ್ಮಗೆದೋನಿನ ನಂತರ ಮೆಸ್ಸೀಯ ರಾಜ್ಯದ ಸಿಂಹಾಸನದಿಂದ “ಜೀವಕರವಾದ ಜಲಪ್ರವಾಹ” ಉಕ್ಕಿ ಹರಿಯುವುದು. ‘ಜೀವಕರವಾದ ಜಲಪ್ರವಾಹವು’ ನಾವು ಶಾಶ್ವತವಾಗಿ ಜೀವಿಸಲಿಕ್ಕಾಗಿ ಯೆಹೋವನು ಮಾಡಿರುವ ಎಲ್ಲ ಒದಗಿಸುವಿಕೆಗಳನ್ನು ಸೂಚಿಸುತ್ತದೆ. “ಜೀವಕರವಾದ ಜಲಪ್ರವಾಹ” ಪೂರ್ವಸಮುದ್ರಕ್ಕೂ ಪಶ್ಚಿಮಸಮುದ್ರಕ್ಕೂ ಹರಿದುಹೋಗುವುದೆಂದು ಪ್ರವಾದನೆ ತಿಳಿಸುತ್ತದೆ. “ಪೂರ್ವಸಮುದ್ರ” ಮೃತ ಸಮುದ್ರವಾಗಿದೆ. “ಪಶ್ಚಿಮಸಮುದ್ರ” ಮೆಡಿಟರೇನಿಯನ್‌ ಸಮುದ್ರವಾಗಿದೆ. ಈ ಎರಡೂ ಸಮುದ್ರಗಳು ಜನರನ್ನು ಸೂಚಿಸುತ್ತವೆ. ಮೃತ ಸಮುದ್ರವು ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿರುವ ಮೃತಜನರನ್ನು ಸೂಚಿಸುತ್ತದೆ. ಮೆಡಿಟರೇನಿಯನ್‌ ಸಮುದ್ರದಲ್ಲಿ ಜೀವರಾಶಿ ಇರುವುದರಿಂದ ಇದು ಅರ್ಮಗೆದೋನನ್ನು ಪಾರಾಗುವ ‘ಮಹಾ ಸಮೂಹವನ್ನು’ ಸೂಚಿಸುತ್ತದೆ. (ಜೆಕರ್ಯ 14:​8, 9 ಓದಿ; ಪ್ರಕ. 7:​9-15.) ಮಹಾ ಸಮೂಹದವರು ಮತ್ತು ಪುನರುತ್ಥಾನಗೊಂಡವರು ಹೀಗೆ ಎರಡೂ ಗುಂಪಿನವರು ಸಾಂಕೇತಿಕ ‘ಜೀವಜಲದ ನದಿಯ’ ಅಥವಾ ‘ಜೀವಕರವಾದ ಜಲಪ್ರವಾಹದ’ ನೀರನ್ನು ಕುಡಿಯುವರು. ಫಲಿತಾಂಶವಾಗಿ ಅವರು ಪರಿಪೂರ್ಣರಾಗುವರು ಮತ್ತು ಆದಾಮನಿಂದ ಬಂದ ಮರಣದಿಂದ ಮುಕ್ತರಾಗುವರು.​—⁠ಪ್ರಕ. 22:​1, 2.

18 ಬೇಗನೆ ನಾವು ಯೆಹೋವನ ಸಂರಕ್ಷಣಾ ಹಸ್ತದ ಕೆಳಗೆ ಈ ದುಷ್ಟ ಲೋಕದಿಂದ ಪಾರಾಗಿ ದೇವರ ನೀತಿಯ ಹೊಸ ಲೋಕವನ್ನು ಪ್ರವೇಶಿಸುವೆವು. ಹಾಗಾಗಿ ಎಲ್ಲ ಜನಾಂಗಗಳು ನಮ್ಮನ್ನು ದ್ವೇಷಿಸಿದರೂ ದೇವರ ರಾಜ್ಯದ ನಿಷ್ಠಾವಂತ ಪ್ರಜೆಗಳಾಗಿದ್ದು ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯುವ ಸಂಕಲ್ಪ ಮಾಡೋಣ.

[ಪಾದಟಿಪ್ಪಣಿ]

^ ಪ್ಯಾರ. 11 ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ ಪುಟ 169-170 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರ]

[ಪುಟ 21ರಲ್ಲಿರುವ ಚಿತ್ರ]

ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯುವ ಸಂಕಲ್ಪ ನಿಮ್ಮದಾಗಿರಲಿ