ಸಹವಾಸದಿಂದ ಕೆಟ್ಟ ಯೆಹೋವಾಷ
ನಿಮ್ಮ ಮಕ್ಕಳಿಗೆ ಕಲಿಸಿರಿ
ಸಹವಾಸದಿಂದ ಕೆಟ್ಟ ಯೆಹೋವಾಷ
ದೇವರ ಆಲಯವಿದ್ದ ಯೆರೂಸಲೇಮ್ ಪಟ್ಟಣಕ್ಕೆ ಅದೊಂದು ಭಯಾನಕ ಸಮಯವಾಗಿತ್ತು. ರಾಜ ಅಹಜ್ಯನು ಆಗ ತಾನೇ ಕೊಲೆಯಾಗಿದ್ದನು. ಅಹಜ್ಯನ ತಾಯಿಯಾದ ಅತಲ್ಯ ಆಗ ಮಾಡಿದ ವಿಷಯವನ್ನು ನಮಗೆ ಊಹಿಸಲೂ ಅಸಾಧ್ಯ. ಅದೇನದು? ಅಹಜ್ಯನ ಗಂಡುಮಕ್ಕಳನ್ನು ಅಂದರೆ ತನ್ನ ಸ್ವಂತ ಮೊಮ್ಮಕ್ಕಳನ್ನೇ ಅವಳು ಕೊಂದುಹಾಕಿದಳು! ಅದೇಕೆಂದು ನಿಮಗೆ ಗೊತ್ತೋ?— * ಏಕೆಂದರೆ ಅವಳಿಗೆ ತಾನೇ ರಾಣಿಯಾಗಬೇಕಿತ್ತು, ಬೇರೆ ಯಾರೂ ರಾಜ್ಯವಾಳುವುದು ಅವಳಿಗೆ ಬೇಡವಿತ್ತು.
ಆದರೂ ಅತಲ್ಯಳ ಮೊಮ್ಮಕ್ಕಳಲ್ಲಿ ಪುಟ್ಟ ಮಗು ಯೆಹೋವಾಷನು ಬದುಕುಳಿದನು. ಇದರ ಬಗ್ಗೆ ಅವನ ಅಜ್ಜಿಗೆ ಕಿಂಚಿತ್ತೂ ತಿಳಿದಿರಲಿಲ್ಲ. ಅದು ಹೇಗೆಂದು ನೋಡೋಣವೇ?— ಒಳ್ಳೇದು, ಮಗುವಿಗೆ ಯೆಹೋಷೆಬಳೆಂಬ ಸೋದರತ್ತೆ ಇದ್ದಳು. ಅವಳು ಮಗುವನ್ನು ತೆಗೆದುಕೊಂಡು ಹೋಗಿ ದೇವರ ಆಲಯದಲ್ಲಿ ಅಡಗಿಸಿಟ್ಟಳು. ಅದು ಹೇಗೆ ಸಾಧ್ಯವಿತ್ತು? ಹೇಗೆಂದರೆ ಅವಳ ಗಂಡನಾದ ಯೆಹೋಯಾದಾವನು ಆಲಯದಲ್ಲಿ ಮಹಾಯಾಜಕನಾಗಿ ಇದ್ದದರಿಂದಲೇ. ಅವರಿಬ್ಬರು ಆ ಮಗುವಿಗೆ ಯಾವ ಹಾನಿಯೂ ಆಗದಂತೆ ನೋಡಿಕೊಂಡರು.
ಹೀಗೆ ಆರು ವರ್ಷಗಳ ವರೆಗೆ ಯೆಹೋವಾಷನನ್ನು ದೇವಾಲಯದಲ್ಲಿ ಗುಪ್ತವಾಗಿಟ್ಟು ಅವರು ಪೋಷಿಸಿದರು. ಅಲ್ಲಿ ಅವನಿಗೆ ಯೆಹೋವ ದೇವರ ಮತ್ತು ಆತನ ಕಟ್ಟಳೆಗಳ ಕುರಿತು ಕಲಿಸಿದರು. ಕೊನೆಗೆ, ಯೆಹೋವಾಷನು ಏಳು ವರ್ಷದವನಾದಾಗ ಅವನನ್ನು ಅರಸನನ್ನಾಗಿ ಮಾಡಲು ಯೆಹೋಯಾದಾವನು ಕ್ರಿಯೆಗೈದನು. ಇದನ್ನು ಅವನು ಹೇಗೆ ಮಾಡಿದನು ಮತ್ತು ಯೆಹೋವಾಷನ ಅಜ್ಜಿಯಾದ ದುಷ್ಟರಾಣಿ ಅತಲ್ಯಳಿಗೆ ಏನಾಯಿತೆಂದು ನೀವು ತಿಳಿಯಬಯಸುವಿರೋ?—
ಆ ಸಮಯದಲ್ಲಿ ಯೆರೂಸಲೇಮಿನ ರಾಜರಿಗಿದ್ದ ವಿಶೇಷ ಅಂಗರಕ್ಷಕರನ್ನು ಯೆಹೋಯಾದಾವನು ಗುಪ್ತವಾಗಿ ಕರೆತಂದನು. ತಾನೂ ತನ್ನ ಪತ್ನಿಯೂ ರಾಜ ಅಹಜ್ಯನ ಚಿಕ್ಕ ಕೂಸನ್ನು ಹೇಗೆ ಕಾಪಾಡಿ ಉಳಿಸಿದ್ದೆವೆಂದು ಅವರಿಗೆ ತಿಳಿಸಿದನು. ಅನಂತರ ಯೆಹೋವಾಷನನ್ನು ಅಂಗರಕ್ಷಕರಿಗೆ ತೋರಿಸಿದನು. ಆಗ ಅವನೇ ಹಕ್ಕುದಾರ ಅರಸನೆಂದು ಅವರು ಮನಗಂಡರು. ಮುಂದೇನು ಮಾಡಬೇಕೆಂಬ ವಿಷಯದಲ್ಲಿ ಆಲೋಚಿಸಿದರು.
ಯೆಹೋಯಾದಾವನು ಯೆಹೋವಾಷನನ್ನು ಹೊರಕ್ಕೆ ತಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟನು. ಆಗ “ಕೂಡಲೆ ಜನರು ಚಪ್ಪಾಳೆಹೊಡೆದು ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿ ಹೇಳಿದರು. ಅಂಗರಕ್ಷಕರು ಯೆಹೋವಾಷನನ್ನು ರಕ್ಷಿಸಲಿಕ್ಕಾಗಿ ಅವನನ್ನು ಸುತ್ತುವರಿದರು. ಅತಲ್ಯಳು ಈ ಎಲ್ಲಾ ಸಂಭ್ರಮವನ್ನು ಕೇಳಿದಾಗ ಹೊರಗೋಡಿ ಬಂದು ಅದು ದ್ರೋಹ ದ್ರೋಹ ಎಂದು ಕೂಗಾಡಿ ಆಕ್ಷೇಪವೆತ್ತಿದಳು. ಆದರೆ ಯೆಹೋಯಾದಾವನು ಆಜ್ಞಾಪಿಸಲಾಗಿ ಅಂಗರಕ್ಷಕರು ಅತಲ್ಯಳನ್ನು ಹಿಡಿದು ಕೊಂದುಹಾಕಿದರು.—2 ಅರಸುಗಳು 11:1-16.
ಯೆಹೋವಾಷನು ಯೆಹೋಯಾದಾವನ ಮಾತನ್ನು ಕೇಳುತ್ತಾ ಒಳ್ಳೆಯದನ್ನು ಮಾಡುವುದನ್ನು ಮುಂದುವರಿಸಿದನೋ?— ಯೆಹೋಯಾದಾವನು ಬದುಕಿದ್ದಷ್ಟು ಕಾಲ ಅವನು ಅದನ್ನೇ ಮಾಡಿದನು. ಅವನ ತಂದೆ ಅಹಜ್ಯ, ಅಜ್ಜ ಯೆಹೋರಾಮ ನಿರ್ಲಕ್ಷ್ಯಿಸಿದ್ದ ದೇವರ ಆಲಯದ ದುರಸ್ತಿ ಕೆಲಸವನ್ನು ಮಾಡಿಸಲಿಕ್ಕಾಗಿ ಜನರು 2 ಅರಸುಗಳು 12:1-16.
ಹಣತೆರುವಂತೆಯೂ ಏರ್ಪಾಡು ಮಾಡಿದನು. ಆದರೆ ಮಹಾಯಾಜಕ ಯೆಹೋಯಾದಾವನು ಸತ್ತಾಗ ಏನಾಯಿತೆಂದು ನೋಡೋಣ.—ಆ ಸಮಯದೊಳಗೆ ಯೆಹೋವಾಷನಿಗೆ ಸುಮಾರು 40 ವಯಸ್ಸಾಗಿತ್ತು. ಯೆಹೋವನ ಭಕ್ತರೊಂದಿಗೆ ಸಹವಾಸ ಮುಂದುವರಿಸುವ ಬದಲು ಅವನು ಸುಳ್ಳು ದೇವರುಗಳ ಆರಾಧಕರೊಂದಿಗೆ ಸ್ನೇಹ ಬೆಳೆಸಿದನು. ಆ ಸಮಯದಲ್ಲಿ ಯೆಹೋಯಾದಾವನ ಮಗನಾದ ಜೆಕರ್ಯನು ಯೆಹೋವನ ಯಾಜಕನಾಗಿದ್ದನು. ಯೆಹೋವಾಷನು ಈಗ ಮಾಡುತ್ತಿದ್ದ ಕೆಟ್ಟಕೆಲಸದ ಕುರಿತು ತಿಳಿದಾಗ ಜೆಕರ್ಯನು ಏನು ಮಾಡಿದನೆಂದು ನೀವು ನೆನಸುತ್ತೀರಿ?—
ಜೆಕರ್ಯನು ಯೆಹೋವಾಷನಿಗೆ ಹೇಳಿದ್ದು: “ನೀವು ಯೆಹೋವನನ್ನು ಬಿಟ್ಟಿದರಿಂದ ಆತನೂ ನಿಮ್ಮನ್ನು ಬಿಟ್ಟಿದ್ದಾನೆ.” ಆ ಮಾತುಗಳು ಯೆಹೋವಾಷನನ್ನು ಎಷ್ಟು ಸಿಟ್ಟುಗೊಳಿಸಿತೆಂದರೆ ಜೆಕರ್ಯನನ್ನು ಕಲ್ಲೆಸೆದು ಕೊಲ್ಲಬೇಕೆಂದು ಅವನು ಆಜ್ಞಾಪಿಸಿದನು. ತುಸು ಯೋಚಿಸಿರಿ—ಯೆಹೋವಾಷನನ್ನು ಯೆಹೋಯಾದಾವನು ಕೊಲೆಗಾರರಿಂದ ಕಾಪಾಡಿ ಉಳಿಸಿದ್ದನು; ಆದರೆ ಈಗ ಅವನ ಮಗ ಜೆಕರ್ಯನನ್ನು ಯೆಹೋವಾಷನೇ ಕೊಲ್ಲಿಸಿದನು!—2 ಪೂರ್ವಕಾಲವೃತ್ತಾಂತ 24:1-3, 15-22.
ಈ ವೃತ್ತಾಂತದಿಂದ ಯಾವುದಾದರೂ ಪಾಠವನ್ನು ನಾವು ಕಲಿಯಬಹುದೋ?— ಒಳ್ಳೇದು, ನಾವು ಅತಲ್ಯಳಂತೆ ಇರಲು ಎಂದೂ ಬಯಸಲಾರೆವು. ಯಾಕೆಂದರೆ ಅವಳು ದುರುದ್ದೇಶಿಯೂ ನಿರ್ದಯಿಯೂ ಆಗಿದ್ದಳು. ನಾವು ನಮ್ಮ ಜೊತೆ ಆರಾಧಕರನ್ನು ಮತ್ತು ನಮ್ಮ ವೈರಿಗಳನ್ನು ಸಹ ಪ್ರೀತಿಸುವವರು ಆಗಿರಬೇಕು. ಯೇಸು ನಮಗೆ ಅದನ್ನೇ ಕಲಿಸಿದ್ದಾನಲ್ಲಾ. (ಮತ್ತಾಯ 5:44; ಯೋಹಾನ 13:34, 35) ಆದ್ದರಿಂದ ಒಮ್ಮೆ ನಾವು ಒಳ್ಳೇದನ್ನು ಮಾಡತೊಡಗಿದರೆ ಅದನ್ನು ಯಾವಾಗಲೂ ಮಾಡಬೇಕು. ಹೇಗೆ? ಯೆಹೋವನನ್ನು ಪ್ರೀತಿಸುವವರ ಮತ್ತು ಆತನ ಸೇವೆ ಮಾಡಲು ನಮ್ಮನ್ನು ಉತ್ತೇಜಿಸುವವರ ಸ್ನೇಹವನ್ನು ಮಾಡುವ ಮೂಲಕ. ಇಲ್ಲವಾದರೆ ಯೆಹೋವಾಷನಂತೆ ದುಸ್ಸಹವಾಸದಿಂದ ಯೆಹೋವನನ್ನು ಬಿಟ್ಟು ಕೆಟ್ಟು ಹೋದೇವು. (w09 4/1)
[ಪಾದಟಿಪ್ಪಣಿ]
^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಉತ್ತೇಜಿಸಿರಿ.
ಪ್ರಶ್ನೆಗಳು:
❍ ಯೆಹೋವಾಷನು ಹೇಗೆ ರಕ್ಷಿಸಲ್ಪಟ್ಟನು ಮತ್ತು ಯಾರಿಂದ?
❍ ಯೆಹೋವಾಷನು ಹಕ್ಕುದಾರ ಅರಸನಾದದ್ದು ಹೇಗೆ ಮತ್ತು ಅವನು ಯಾವ ಒಳ್ಳೆಯ ಕೆಲಸವನ್ನು ಮಾಡಿದನು?
❍ ಯೆಹೋವಾಷನು ಕೆಟ್ಟವನಾದದ್ದು ಹೇಗೆ ಮತ್ತು ಅವನು ಯಾರನ್ನು ಕೊಲೆಮಾಡಿದನು?
❍ ಈ ಬೈಬಲ್ ಕಥೆಯಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
[ಪುಟ 23ರಲ್ಲಿರುವ ಚಿತ್ರ]
ಯೆಹೋವಾಷನು ರಕ್ಷಿಸಲ್ಪಟ್ಟನು