ದೇವರು ಕೊಡುವ ಐಶ್ವರ್ಯ
ದೇವರು ಕೊಡುವ ಐಶ್ವರ್ಯ
ದೇವರಲ್ಲಿ ನೀವು ನಂಬಿಕೆಯಿಟ್ಟರೆ ಆತನು ನಿಮಗೆ ಐಶ್ವರ್ಯ ಕೊಡುವನೋ? ಕೊಟ್ಟಾನು, ಆದರೆ ಆ ಐಶ್ವರ್ಯ ನೀವೆಣಿಸುವ ರೀತಿಯದ್ದಾಗಿರಲಿಕ್ಕಿಲ್ಲ. ಯೇಸುವಿನ ತಾಯಿ ಮರಿಯಳ ಉದಾಹರಣೆಯನ್ನು ತೆಗೆದುಕೊಳ್ಳಿ. ಗಬ್ರಿಯೇಲನೆಂಬ ದೇವದೂತ ಆಕೆಗೆ ಪ್ರತ್ಯಕ್ಷನಾಗಿ ಆಕೆ ದೇವರ ‘ಅತ್ಯಂತ ಅನುಗ್ರಹಕ್ಕೆ’ ಪಾತ್ರಳಾದ ಕಾರಣ ದೇವಪುತ್ರನಿಗೆ ಜನ್ಮಕೊಡುವಳೆಂದು ತಿಳಿಸಿದನು. (ಲೂಕ 1:28, 30-32) ಆದರೆ ಆಕೆ ಶ್ರೀಮಂತಳಾಗಿರಲಿಲ್ಲ. ಆದಕಾರಣವೇ ಯೇಸು ಹುಟ್ಟಿದ ಬಳಿಕ ಆಕೆ ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಿದ್ದು “ಒಂದು ಜೊತೆ ಬೆಳವಕ್ಕಿಯನ್ನು ಅಥವಾ ಪಾರಿವಾಳದ ಎರಡು ಮರಿಗಳನ್ನು” ಮಾತ್ರ. ಈ ರೀತಿಯ ಕಾಣಿಕೆಯನ್ನು ಸಾಮಾನ್ಯವಾಗಿ ಬಡಜನರೇ ಅರ್ಪಿಸುತ್ತಿದ್ದರು.—ಲೂಕ 2:24; ಯಾಜಕಕಾಂಡ 12:8.
ಮರಿಯಳು ಬಡವಳಾಗಿದ್ದ ಮಾತ್ರಕ್ಕೆ ಆಕೆಯ ಮೇಲೆ ದೇವರ ಆಶೀರ್ವಾದ ಇರಲಿಲ್ಲವೆಂದು ಅರ್ಥವೋ? ಖಂಡಿತ ಇಲ್ಲ. ಏಕೆಂದರೆ ಆಕೆ ತನ್ನ ಸಂಬಂಧಿಕಳಾದ ಎಲಿಸಬೇತಳನ್ನು ನೋಡಲು ಹೋದಾಗ “ಎಲಿಸಬೇತಳು ಪವಿತ್ರಾತ್ಮಭರಿತಳಾಗಿ ಗಟ್ಟಿಯಾದ ಸ್ವರದಿಂದ, ‘ಸ್ತ್ರೀಯರಲ್ಲಿ ನೀನು ಆಶೀರ್ವದಿತಳು ಮತ್ತು ನಿನ್ನ ಗರ್ಭಫಲವು ಆಶೀರ್ವದಿತವಾದದ್ದು!’” ಎಂದು ಆಕೆಗೆ ಹೇಳಿದಳು. (ಲೂಕ 1:41, 42) ಹೌದು, ಮರಿಯಳು ಬಡವಳಾಗಿದ್ದರೂ ದೇವರ ಪ್ರಿಯ ಪುತ್ರನ ತಾಯಿಯಾಗುವ ಭಾಗ್ಯವನ್ನು ಪಡೆದಳು.
ಯೇಸು ಕೂಡ ಶ್ರೀಮಂತನಾಗಿರಲಿಲ್ಲ. ಅವನು ಹುಟ್ಟಿಬೆಳೆದದ್ದು ಬಡ ಕುಟುಂಬದಲ್ಲಿ ಮಾತ್ರವಲ್ಲ ಭೂಮಿಯ ಮೇಲೆ ಜೀವಮಾನವಿಡೀ ಬಡವನಾಗಿದ್ದನು. ಒಮ್ಮೆ ತನ್ನ ಶಿಷ್ಯನಾಗಲು ಆಶಿಸಿದ ವ್ಯಕ್ತಿಗೆ ಅವನಂದದ್ದು: “ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ.” (ಲೂಕ 9:57, 58) ಹಾಗಿದ್ದರೂ ಯೇಸು ಕ್ರಿಸ್ತನು ಭೂಮಿಗೆ ಬಂದು ಏನನ್ನು ಪೂರೈಸಿದನೋ ಅದು ಅವನ ಶಿಷ್ಯರು ಬಹು ಐಶ್ವರ್ಯವನ್ನು ಪಡೆಯುವಂತೆ ದಾರಿಮಾಡಿತು. ಯೇಸುವಿನ ಹಿಂಬಾಲಕನಾಗಿದ್ದ ಪೌಲನು ಬರೆದದ್ದು: “ಅವನು . . . ತನ್ನ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ನಿಮಗೋಸ್ಕರ ಬಡವನಾದನು.” (2 ಕೊರಿಂಥ 8:9) ಹಾಗಾದರೆ ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ಐಶ್ವರ್ಯ ಎಂಥ ರೀತಿಯದ್ದು? ಇಂದು ಯಾವ ರೀತಿಯ ಐಶ್ವರ್ಯ ನಮಗಿದೆ?
ಎಂಥ ರೀತಿಯ ಐಶ್ವರ್ಯ?
ದೇವರಲ್ಲಿ ನಂಬಿಕೆಯಿಡಲು ಸಿರಿಸಂಪತ್ತು ಅನೇಕವೇಳೆ ಅಡ್ಡಿಯಾಗಿರುತ್ತದೆ ಏಕೆಂದರೆ ಶ್ರೀಮಂತನು ದೇವರಿಗಿಂತ ಧನದ ಮೇಲೆ ಭರವಸೆಯನ್ನಿಡಬಹುದು. “ಹಣವಂತರು ದೇವರ ರಾಜ್ಯವನ್ನು ಸೇರುವುದು ಎಷ್ಟು ಕಷ್ಟಕರವಾಗಿರುವ ಸಂಗತಿ!” ಅಂದನು ಯೇಸು. (ಮಾರ್ಕ 10:23) ತನ್ನ ಹಿಂಬಾಲಕರಿಗೆ ಯೇಸು ಕೊಟ್ಟ ಐಶ್ವರ್ಯವು ಲೌಕಿಕ ರೀತಿಯದ್ದಲ್ಲ ಎಂಬುದು ಇದರಿಂದ ಸ್ಪಷ್ಟ.
ವಾಸ್ತವದಲ್ಲಿ, ಮೊದಲನೇ ಶತಮಾನದಲ್ಲಿದ್ದ ಹೆಚ್ಚಿನ ಕ್ರೈಸ್ತರು ಬಡವರಾಗಿದ್ದರು. ಹುಟ್ಟುಕುಂಟನೊಬ್ಬನು ಭಿಕ್ಷೆ ಕೇಳಿದಾಗ ಯೇಸುವಿನ ಶಿಷ್ಯ ಪೇತ್ರನಂದದ್ದು: “ನನ್ನ ಬಳಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿ ಏನಿದೆಯೊ ಅದನ್ನು ನಿನಗೆ ಕೊಡುತ್ತೇನೆ: ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ!”—ಅ. ಕಾರ್ಯಗಳು 3:6.
ಯಾಕೋಬನೆಂಬ ಇನ್ನೊಬ್ಬ ಶಿಷ್ಯನು ಬರೆದದ್ದು: “ನನ್ನ ಯಾಕೋಬ 2:5) ಕ್ರೈಸ್ತ ಸಭೆಯಲ್ಲಿ ಅನೇಕರು ‘ಮಾನವ ದೃಷ್ಟಿಯಲ್ಲಿ ವಿವೇಕಿಗಳು ಅಥವಾ ಶಕ್ತಿಶಾಲಿಗಳು ಅಥವಾ ಕುಲೀನರಾಗಿ ಜನಿಸಿದ’ ವ್ಯಕ್ತಿಗಳು ಆಗಿರಲಿಲ್ಲ ಎಂದು ಅಪೊಸ್ತಲ ಪೌಲನು ಸಹ ಹೇಳಿದನು.—1 ಕೊರಿಂಥ 1:26.
ಪ್ರಿಯ ಸಹೋದರರೇ, ಕಿವಿಗೊಡಿರಿ. ದೇವರು ಲೋಕದ ಸಂಬಂಧದಲ್ಲಿ ಬಡವರಾಗಿರುವವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಲು ಮತ್ತು ತನ್ನನ್ನು ಪ್ರೀತಿಸುವವರಿಗೆ ಆತನು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರಾಗಲು ಆರಿಸಿಕೊಂಡನಲ್ಲವೆ?” ಈ ಮಾತುಗಳು ಕೂಡ ಕ್ರೈಸ್ತ ಸಭೆಯಲ್ಲಿ ಹೆಚ್ಚಾಗಿ ಬಡ ಜನರೇ ಇದ್ದರೆಂದು ತೋರಿಸುತ್ತವೆ. (ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ಐಶ್ವರ್ಯವು ಲೌಕಿಕ ರೀತಿಯದ್ದಲ್ಲವಾದರೆ ಇನ್ನಾವ ರೀತಿಯದ್ದು? ಸ್ಮುರ್ನ ಎಂಬಲ್ಲಿದ್ದ ಕ್ರೈಸ್ತರ ಸಭೆಗೆ ಯೇಸು, “ನಾನು ನಿನ್ನ ಸಂಕಟವನ್ನೂ ಬಡತನವನ್ನೂ ಬಲ್ಲೆನು. ಆದರೆ ನೀನು ಐಶ್ವರ್ಯವಂತನಾಗಿದ್ದೀ” ಎಂದು ಹೇಳಿದನು. (ಪ್ರಕಟನೆ 2:8, 9) ಅಲ್ಲಿದ್ದ ಕ್ರೈಸ್ತರು ಬಡವರಾಗಿದ್ದರೂ ಚಿನ್ನಬೆಳ್ಳಿಗಿಂತ ಮಿಗಿಲಾದ ಐಶ್ವರ್ಯ ಅವರ ಬಳಿಯಿತ್ತು. ಅದು ಯಾವುದು? ದೇವರಲ್ಲಿ ಅವರಿಗಿದ್ದ ನಂಬಿಕೆ ಮತ್ತು ಆತನಿಗೆ ತೋರಿಸುತ್ತಿದ್ದ ಪೂರ್ಣ ಹೃದಯದ ಭಕ್ತಿಯೇ. ನಂಬಿಕೆ ಬಹುಮೂಲ್ಯವಾದದ್ದು ಏಕೆಂದರೆ ಅದು “ಎಲ್ಲರ ಸೊತ್ತಾಗಿರುವುದಿಲ್ಲ.” (2 ಥೆಸಲೊನೀಕ 3:2) ವಾಸ್ತವದಲ್ಲಿ ನಂಬಿಕೆಯಿಲ್ಲದವರು ದೇವರ ದೃಷ್ಟಿಯಲ್ಲಿ ಬಡವರೇ.—ಪ್ರಕಟನೆ 3:17, 18.
ನಂಬಿಕೆಯಿಂದ ಸಿಗುವ ಐಶ್ವರ್ಯ
ನಂಬಿಕೆ ಯಾವ ವಿಧಗಳಲ್ಲಿ ಬಹುಮೂಲ್ಯ? ದೇವರಲ್ಲಿ ನಂಬಿಕೆಯಿಡುವವರು ಆತನ ‘ಅಪಾರ ದಯೆ, ಸೈರಣೆ ಮತ್ತು ದೀರ್ಘ ಸಹನೆಯಿಂದ’ ಪ್ರಯೋಜನ ಪಡೆಯುತ್ತಾರೆ. (ರೋಮನ್ನರಿಗೆ 2:4) ಅವರು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವುದರಿಂದ ಅವರ ಪಾಪಗಳು ಕೂಡ ‘ಕ್ಷಮಿಸಲ್ಪಡುತ್ತವೆ.’ (ಎಫೆಸ 1:7) ಅಷ್ಟುಮಾತ್ರವಲ್ಲದೆ, “ಕ್ರಿಸ್ತನ ವಾಕ್ಯವು” ಫಲಿಸುವ ವಿವೇಕ ಅವರಲ್ಲಿರುತ್ತದೆ. (ಕೊಲೊಸ್ಸೆ 3:16) ಅವರು ನಂಬಿಕೆಯಿಂದ ದೇವರಿಗೆ ಪ್ರಾರ್ಥಿಸುವಾಗ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಅವರ ಹೃದಮನಗಳನ್ನು ಕಾಯುತ್ತದೆ ಮತ್ತು ಇದು ಅವರಿಗೆ ಸಂತೃಪ್ತಿಯನ್ನೂ ಸಂತೋಷವನ್ನೂ ಕೊಡುತ್ತದೆ.—ಫಿಲಿಪ್ಪಿ 4:7.
ಯೋಹಾನ 3:16) ಯೇಸು ಹೀಗೂ ಅಂದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” ಯೆಹೋವ ದೇವರ ಮತ್ತು ಆತನ ಮಗನ ಕುರಿತು ನಾವು ಸರಿಯಾದ ಜ್ಞಾನವನ್ನು ಪಡೆದುಕೊಳ್ಳುವಾಗ ನಿತ್ಯಜೀವದ ಭವ್ಯ ಪ್ರತೀಕ್ಷೆ ಹೆಚ್ಚು ದೃಢವಾಗುತ್ತದೆ.—ಯೋಹಾನ 17:3.
ಈ ಪ್ರಯೋಜನಗಳಲ್ಲದೆ, ದೇವರ ಮಗನಾದ ಯೇಸು ಕ್ರಿಸ್ತನ ಮೂಲಕ ಆತನಲ್ಲಿ ನಂಬಿಕೆಯಿಡುವವರಿಗೆ ಶಾಶ್ವತವಾಗಿ ಜೀವಿಸುವ ಅದ್ಭುತಕರ ಪ್ರತೀಕ್ಷೆಯಿದೆ. ಯೇಸು ಕ್ರಿಸ್ತನ ಈ ಮಾತುಗಳು ಸುಪ್ರಸಿದ್ಧ: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ದೇವರ ಆಶೀರ್ವಾದಗಳು ಮೂಲತಃ ಆಧ್ಯಾತ್ಮಿಕ ರೀತಿಯದ್ದಾಗಿದ್ದರೂ ಅದರಿಂದ ಭಾವನಾತ್ಮಕ ಮತ್ತು ಶಾರೀರಿಕ ಪ್ರಯೋಜನಗಳೂ ಇವೆ. ಉದಾಹರಣೆಗೆ, ಬ್ರಸಿಲ್ನ ಡಾಲಿಡ್ಯೊ ಎಂಬವನನ್ನು ಪರಿಗಣಿಸಿ. ಅವನೊಬ್ಬ ಕುಡುಕನಾಗಿದ್ದನು. ಇದರಿಂದ ಅವನ ಕುಟುಂಬ ಸಂಬಂಧಗಳಲ್ಲಿ ಬಿರುಕು ಉಂಟಾಗಿತ್ತು. ಅವನಿಗೆ ವಿಪರೀತ ಹಣದ ತಾಪತ್ರಯ ಕೂಡ ಇತ್ತು. ಆದರೆ ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಕುರಿತು ಕಲಿಯಲು ಪ್ರಾರಂಭಿಸಿ ದೇವರ ಉದ್ದೇಶದ ಕುರಿತ ಸರಿಯಾದ ಜ್ಞಾನವನ್ನು ಪಡೆದುಕೊಂಡಾಗ ಅವನ ಬದುಕಿಗೆ ಹೊಸ ತಿರುವು ಸಿಕ್ಕಿತು. ಅವನು ತನ್ನ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡನು.
ಡಾಲಿಡ್ಯೊ ಬೈಬಲಿನಿಂದ ಕಲಿತ ಹೊಸ ವಿಷಯಗಳು ದುಶ್ಚಟಗಳನ್ನು ಬಿಟ್ಟುಬಿಡಲು ಅವನಿಗೆ ಸಹಾಯಮಾಡಿದವು. ಆಧ್ಯಾತ್ಮಿಕವಾಗಿ ಅವನು ತುಂಬ ಪ್ರಗತಿಮಾಡಿದನು. “ಮುಂಚೆ ಬಾರ್ನಿಂದ ಬಾರ್ಗೆ ಹೋಗುತ್ತಿದ್ದ ನಾನು ಈಗ ಮನೆಯಿಂದ ಮನೆಗೆ ಹೋಗುತ್ತೇನೆ” ಎಂದು ಅವನು ಹೇಳುತ್ತಾನೆ. ಈಗವನು ದೇವರ ವಾಕ್ಯವನ್ನು ಸಾರುವ ಪೂರ್ಣ ಸಮಯದ ಶುಶ್ರೂಷಕ. ಅವನು ಮಾಡಿದ ಬದಲಾವಣೆಗಳಿಂದಾಗಿ ಅವನ ಆರೋಗ್ಯ ಮಾತ್ರವಲ್ಲ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ. ಡಾಲಿಡ್ಯೊ ಹೀಗನ್ನುತ್ತಾನೆ: “ನನ್ನ ಕುಡಿತದಲ್ಲಿ ಪೋಲಾಗಿ ಹೋಗುತ್ತಿದ್ದ ಹಣವನ್ನು ನಾನೀಗ ಕಷ್ಟದಲ್ಲಿರುವವರಿಗೆ ಸಹಾಯಮಾಡಲು ಮತ್ತು ನನಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸುತ್ತೇನೆ.” ಆಧ್ಯಾತ್ಮಿಕ ದೃಷ್ಟಿಕೋನವುಳ್ಳ ಜನರೊಟ್ಟಿಗಿನ ಒಡನಾಟದಿಂದ ಅವನಿಗೀಗ ಅನೇಕ ನಿಜ ಮಿತ್ರರೂ ಇದ್ದಾರೆ. ನೆಮ್ಮದಿ, ಸಂತೃಪ್ತಿಯೂ ಅವನಿಗಿದೆ. ದೇವರನ್ನು ಅರಿಯುವ ಮುಂಚೆ ಇವೆಲ್ಲ ಅವನಿಗೆ ಕೇವಲ ಭ್ರಮೆಯಾಗಿದ್ದವಷ್ಟೆ.
ಯೆಹೋವ ದೇವರಲ್ಲಿ ನಂಬಿಕೆಯನ್ನು ಬೆಳೆಸಿಕೊಂಡದ್ದರಿಂದ ಬಾಳು ಬೆಳಗಿದ ಇನ್ನೊಂದು ಉದಾಹರಣೆ ರೆನಾಟೋ ಎಂಬವನದ್ದು. ಈಗ ಅವನ ಹಸನ್ಮುಖವನ್ನು ನೋಡುವಾಗ ಅವನಿಗೆ ಜೀವನದಲ್ಲಿ ಹಿಂದೆ ತುಂಬ ಅನ್ಯಾಯವಾಗಿತ್ತೆಂದು ನಂಬಲಾಗುವುದಿಲ್ಲ. ಹುಟ್ಟಿದಾಗಲೇ ಅವನು ತನ್ನ ತಾಯಿಗೆ ಬೇಡವಾದ. ಹಸುಳೆಯಾಗಿದ್ದ ಅವನನ್ನು ಚೀಲದಲ್ಲಿ ಹಾಕಿ ಬೀದಿ ಬದಿಯ ಬೆಂಚ್ ಅಡಿಯಲ್ಲಿ ಬಿಟ್ಟುಹೋಗಲಾಗಿತ್ತು. ಮೈಯೆಲ್ಲಾ ಪರಚುಗಾಯಗಳಿದ್ದವು. ಹೊಕ್ಕಳ ಬಳ್ಳಿ ಹಾಗೇ ಇತ್ತು. ಆ ದಾರಿಯಾಗಿ ನಡೆದು ಹೋಗುತ್ತಿದ್ದ ಇಬ್ಬರು ಸ್ತ್ರೀಯರು ಆ ಚೀಲ ಅಲುಗಾಡುತ್ತಿದದ್ದನ್ನು ಕಂಡು ಯಾರೋ ಬೆಕ್ಕಿನ ಮರಿ ಬಿಟ್ಟುಹೋಗಿರಬೇಕೆಂದು ನೆನಸಿದರು. ಆದರೆ ಚೀಲದಲ್ಲಿ ಅವರು ಕಂಡದ್ದು ನವಜಾತ ಕೂಸನ್ನು. ಕೂಡಲೇ ಅವರು ಅದನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
ಆ ಸ್ತ್ರೀಯರಲ್ಲಿ ಒಬ್ಬಳು ಯೆಹೋವನ ಸಾಕ್ಷಿಯಾಗಿದ್ದಳು. ಅವಳು ರೀಟಾ ಎಂಬ ಇನ್ನೊಬ್ಬಾಕೆ ಸಾಕ್ಷಿಗೆ ಈ ವಿಷಯ ತಿಳಿಸಿದಳು. ರೀಟಾ ಅನೇಕ ಸಲ ಗರ್ಭಿಣಿಯಾಗಿದ್ದರೂ ಮಗು ಹುಟ್ಟುವಾಗಲೇ ಸತ್ತುಹೋಗಿರುತ್ತಿತ್ತು. ಉಳಿದದ್ದು ಒಬ್ಬಳೇ ಮಗಳು. ಒಂದು ಗಂಡು ಮಗುವಿಗಾಗಿ ಹಾತೊರೆಯುತ್ತಿದ್ದ ಆಕೆ ರೆನಾಟೋವನ್ನು ದತ್ತುತೆಗೆದುಕೊಂಡಳು.
ರೆನಾಟೋ ಚಿಕ್ಕವನಿರುವಾಗಲೇ ರೀಟಾ ತಾನು ಹೆತ್ತ ತಾಯಿಯಲ್ಲ ಎಂದು ಹೇಳಿದ್ದಳು. ಅವನನ್ನು ಪ್ರೀತಿಮಮತೆಯಿಂದ ಬೆಳೆಸಿದಳು. ಬೈಬಲ್ ಮೂಲತತ್ತ್ವಗಳನ್ನು ಅವನಲ್ಲಿ ಬೇರೂರಿಸಿದಳು. ರೆನಾಟೋ ಬೆಳೆದಂತೆ ಬೈಬಲಿನಲ್ಲಿ ಅವನ ಆಸಕ್ತಿಯೂ ಬೆಳೆಯಿತು. ಊಹಿಸಲಸಾಧ್ಯವಾದ ರೀತಿಯಲ್ಲಿ ತನ್ನ ಜೀವ ಉಳಿಸಲ್ಪಟ್ಟದ್ದಕ್ಕಾಗಿ ಅವನ ಕೀರ್ತನೆ 27:10.
ಕೃತಜ್ಞತೆಯೂ ಹೆಚ್ಚಿತು. “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು” ಎಂಬ ಕೀರ್ತನೆಗಾರ ದಾವೀದನ ಮಾತುಗಳನ್ನು ಬೈಬಲಿನಲ್ಲಿ ಓದುವಾಗಲೆಲ್ಲಾ ಅವನ ಕಣ್ಣಾಲಿಗಳು ಒದ್ದೆಯಾಗುತ್ತವೆ.—ಯೆಹೋವನು ತನಗಾಗಿ ಮಾಡಿದ ಎಲ್ಲ ವಿಷಯಗಳಿಗೆ ಕೃತಜ್ಞತೆಯ ಪ್ರತೀಕವಾಗಿ ರೆನಾಟೋ 2002ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಮುಂದಿನ ವರ್ಷದಲ್ಲೇ ಪೂರ್ಣ ಸಮಯದ ಕ್ರೈಸ್ತ ಶುಶ್ರೂಷಕನಾದ. ತನ್ನ ಹೆತ್ತ ತಂದೆತಾಯಿ ಯಾರೆಂದು ಅವನಿಗೆ ಇವತ್ತಿಗೂ ತಿಳಿದಿಲ್ಲ. ಮುಂದೆಯೂ ಗೊತ್ತಾಗಲಿಕ್ಕಿಲ್ಲ. ಹಾಗಿದ್ದರೂ ಯೆಹೋವ ದೇವರು ತನ್ನ ಅಕ್ಕರೆಯ ಕಾಳಜಿಭರಿತ ತಂದೆಯೆಂದು ಕಲಿಯುವ ಮತ್ತು ಆತನಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವ ಅವಕಾಶವೇ ತನಗೆ ಸಿಕ್ಕಿರುವ ಬೆಲೆಕಟ್ಟಲಾಗದ ಉಡುಗೊರೆ ಎಂದವನು ನೆನಸುತ್ತಾನೆ.
ನೀವು ಕೂಡ ದೇವರೊಂದಿಗೆ ಪ್ರೀತಿಯ ಆಪ್ತ ಸಂಬಂಧವನ್ನಿಟ್ಟುಕೊಳ್ಳಲು ಹಂಬಲಿಸುತ್ತಿರಬಹುದು. ಈ ಸಂಬಂಧವು ನಿಜವಾಗಿ ನಿಮ್ಮ ಬಾಳನ್ನು ಬೆಳಗಿಸುವುದು. ಯೆಹೋವ ದೇವರೊಂದಿಗೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನೊಂದಿಗೆ ಆಪ್ತ ಸಂಬಂಧವನ್ನಿಟ್ಟುಕೊಳ್ಳಲು ಬಡವ-ಶ್ರೀಮಂತ ಎನ್ನದೆ ಎಲ್ಲರಿಗೂ ಸದವಕಾಶವಿದೆ. ಇದರಿಂದಾಗಿ ನಮಗೆ ಲೌಕಿಕ ಐಶ್ವರ್ಯ ಸಿಗದೆ ಹೋದರೂ ಮನಶ್ಶಾಂತಿ ಮತ್ತು ಸಂತೃಪ್ತಿಯಂತೂ ಸಿಕ್ಕೇಸಿಗುತ್ತದೆ. ಇವನ್ನು ಎಷ್ಟು ಹಣ ಕೊಟ್ಟರೂ ಖರೀದಿಸಲಾಗದು. ಜ್ಞಾನೋಕ್ತಿ 10:22ರಲ್ಲಿರುವ (NIBV) ಈ ಮಾತುಗಳು ಖಂಡಿತವಾಗಿಯೂ ಸತ್ಯ: “ಯೆಹೋವನ ಆಶೀರ್ವಾದವು ಐಶ್ವರ್ಯವನ್ನು ಉಂಟುಮಾಡುವುದು. ಅದರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವುದಿಲ್ಲ.”
ಯೆಹೋವ ದೇವರಿಗೆ ತನ್ನನ್ನು ಆಶ್ರಯಿಸುವ ಜನರ ಮೇಲಿರುವ ಅಪಾರ ಕಳಕಳಿಯು ಅವನ ಈ ಮಾತುಗಳಲ್ಲಿ ವ್ಯಕ್ತ: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:18) ಸರಿಯಾದ ಉದ್ದೇಶ ಮತ್ತು ಮನೋಭಾವದಿಂದ ತನ್ನನ್ನು ಆರಾಧಿಸುವ ಜನರಿಗೆ ಹೇರಳ ಆಶೀರ್ವಾದಗಳು ಸಿಗುವವೆಂದು ಆತನು ವಚನವಿತ್ತಿದ್ದಾನೆ: “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”—ಜ್ಞಾನೋಕ್ತಿ 22:4. (w09 09/01)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರಲ್ಲಿ ನಂಬಿಕೆಯು ಶಾಂತಿ, ಸಂತೃಪ್ತಿ, ಸಂತೋಷ ತರುತ್ತದೆ
[ಪುಟ 5ರಲ್ಲಿರುವ ಚಿತ್ರ]
ಯೇಸುವಿನ ಕುಟುಂಬ ಬಡತನದಲ್ಲಿದ್ದರೂ ದೇವರಿಂದ ಸಮೃದ್ಧ ಆಶೀರ್ವಾದಗಳನ್ನು ಪಡೆದುಕೊಂಡಿತು