ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಏಕೆ ಸತ್ತನು?

ಯೇಸು ಏಕೆ ಸತ್ತನು?

ಯೇಸು ಏಕೆ ಸತ್ತನು?

‘ಮನುಷ್ಯಕುಮಾರನು ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೆ ಬಂದನು.’—ಮಾರ್ಕ 10:45.

ಯೇಸುವಿಗೆ ತನ್ನ ಬದುಕಿನಲ್ಲಿ ಏನೆಲ್ಲ ನಡೆಯಬಹುದೆಂದು ಗೊತ್ತಿತ್ತು. ಅದು ಕಷ್ಟವಿಲ್ಲದ ಬದುಕು ಆಗಿರುವುದಿಲ್ಲವೆಂದು ಆತನು ಗ್ರಹಿಸಿದ್ದನು. 33ನೇ ವಯಸ್ಸಿನಲ್ಲೇ ಅಕಾಲಿಕವಾಗಿ ತನ್ನ ಜೀವನ ಘೋರವಾಗಿ ಕೊನೆಗೊಳ್ಳುವುದೆಂಬ ಅರಿವು ಆತನಿಗಿತ್ತು. ಮರಣವನ್ನು ಎದುರಿಸಲು ಆತನು ಪೂರ್ಣ ರೀತಿಯಲ್ಲಿ ಸಿದ್ಧನಾಗಿದ್ದನು.

ಯೇಸುವಿನ ಮರಣಕ್ಕೆ ಬೈಬಲ್‌ ತುಂಬ ಮಹತ್ವ ಕೊಡುತ್ತದೆ. ಆತನ ಮರಣದ ಬಗ್ಗೆ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಅಂದರೆ ಹೊಸ ಒಡಂಬಡಿಕೆಯಲ್ಲಿ 175 ಸಲ ನೇರವಾಗಿ ಹೇಳಲಾಗಿದೆಯೆಂದು ಒಂದು ಪುಸ್ತಕ ಹೇಳುತ್ತದೆ. ಆದರೆ ಯೇಸು ಕಷ್ಟಗಳನ್ನು ಅನುಭವಿಸಿ ಸಾಯಬೇಕಾಗಿತ್ತು ಏಕೆ? ನಾವಿದನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಯೇಸುವಿನ ಮರಣ ನಮ್ಮ ಜೀವನದ ಮೇಲೆ ಗಾಢ ಪರಿಣಾಮ ಬೀರಬಲ್ಲದು.

ಯೇಸುವಿಗೆ ಏನು ಗೊತ್ತಿತ್ತು? ಯೇಸು ತನ್ನ ಜೀವನದ ಕೊನೆ ವರ್ಷದಲ್ಲಿ, ತಾನು ಯಾತನಾಮಯ ಮರಣಕ್ಕೆ ಈಡಾಗಲಿದ್ದೇನೆಂದು ಹಲವಾರು ಸಲ ತನ್ನ ಶಿಷ್ಯರಿಗೆ ಮುಂದಾಗಿ ತಿಳಿಸಿದ್ದನು. ತನ್ನ ಕೊನೆಯ ಪಸ್ಕಹಬ್ಬವನ್ನು ಆಚರಿಸಲು ಯೆರೂಸಲೇಮಿಗೆ ಹೋಗುತ್ತಿದ್ದಾಗ ತನ್ನ 12 ಮಂದಿ ಅಪೊಸ್ತಲರಿಗೆ ಆತನು ಹೀಗಂದನು: “ಮನುಷ್ಯಕುಮಾರನು ಮುಖ್ಯ ಯಾಜಕರ ಹಾಗೂ ಶಾಸ್ತ್ರಿಗಳ ಕೈಗೆ ಒಪ್ಪಿಸಲ್ಪಡುವನು; ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು. ಮತ್ತು ಅವರು ಅವನನ್ನು ಅಪಹಾಸ್ಯಮಾಡಿ ಅವನ ಮೇಲೆ ಉಗುಳಿ ಅವನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು.” * (ಮಾರ್ಕ 10:33, 34) ತನಗೆ ಹೀಗೇ ಆಗಲಿದೆಯೆಂದು ಆತನಿಗೆ ಏಕೆ ಅಷ್ಟು ಖಾತ್ರಿಯಿತ್ತು?

ತನ್ನ ಜೀವನ ಹೇಗೆ ಕೊನೆಗೊಳ್ಳುವುದೆಂದು ಮುಂತಿಳಿಸಿದ್ದ ಹೀಬ್ರು ಶಾಸ್ತ್ರಗಳ ಅನೇಕ ಪ್ರವಾದನೆಗಳು ಅಂದರೆ ಭವಿಷ್ಯನುಡಿಗಳು ಯೇಸುವಿಗೆ ಚೆನ್ನಾಗಿ ತಿಳಿದಿದ್ದವು. (ಲೂಕ 18:31-33) ಆ ಪ್ರವಾದನೆಗಳಲ್ಲಿ ಕೆಲವೊಂದನ್ನೂ, ಅವು ಹೇಗೆ ನೆರವೇರಿದವೆಂದು ವಿವರಿಸುವ ವಚನಗಳನ್ನೂ ಈಗ ಪರಿಗಣಿಸಿ.

ಮೆಸ್ಸೀಯನನ್ನು . . .

▪ 30 ಬೆಳ್ಳಿ ನಾಣ್ಯಗಳಿಗಾಗಿ ಹಿಡಿದುಕೊಡಲಾಗುವುದು.—ಜೆಕರ್ಯ 11:12; ಮತ್ತಾಯ 26:14-16.

▪ ಹೊಡೆದು, ಆತನ ಮೇಲೆ ಉಗುಳಲಾಗುವುದು.—ಯೆಶಾಯ 50:6; ಮತ್ತಾಯ 26:67; 27:26, 30.

▪ ಶೂಲಕ್ಕೇರಿಸಲಾಗುವುದು.—ಕೀರ್ತನೆ 22:16; ಮಾರ್ಕ 15:24, 25.

▪ ಯಾತನಾ ಕಂಬದ ಮೇಲಿರುವಾಗ ದೂಷಿಸಲಾಗುವುದು.—ಕೀರ್ತನೆ 22:7, 8; ಮತ್ತಾಯ 27:39-43.

▪ ಕೊಲ್ಲಲ್ಪಡುವಾಗ ಆತನ ಒಂದು ಎಲುಬನ್ನೂ ಮುರಿಯಲಾಗುವುದಿಲ್ಲ.—ಕೀರ್ತನೆ 34:20; ಯೋಹಾನ 19:33, 36.

ಯೇಸು ಈ ಪ್ರವಾದನೆಗಳನ್ನೂ ಇತರ ಅನೇಕ ಪ್ರವಾದನೆಗಳನ್ನೂ ನೆರವೇರಿಸಿದನು. ಇದನ್ನು ಸ್ವತಃ ಆತನೇ ನೆರವೇರಿಸಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಈ ಎಲ್ಲ ಪ್ರವಾದನೆಗಳ ನೆರವೇರಿಕೆಯು ಆತನು ಖಂಡಿತವಾಗಿ ದೇವರಿಂದ ಕಳುಹಿಸಲ್ಪಟ್ಟವನೆಂದು ರುಜುಪಡಿಸುತ್ತದೆ. *

ಆದರೆ ಯೇಸು ಕಷ್ಟಗಳನ್ನು ಅನುಭವಿಸಿ ಸಾಯುವ ಅಗತ್ಯವಾದರೂ ಏನಿತ್ತು?

ಪ್ರಮುಖ ವಿವಾದಾಂಶಗಳನ್ನು ಇತ್ಯರ್ಥಗೊಳಿಸಲು ಯೇಸು ಸತ್ತನು. ಇಡೀ ವಿಶ್ವಕ್ಕೆ ಮಹತ್ವದ್ದಾಗಿದ್ದ ವಿವಾದಾಂಶಗಳ ಬಗ್ಗೆ ಯೇಸುವಿಗೆ ತಿಳಿದಿತ್ತು. ಇವನ್ನು ಆರಂಭದಲ್ಲಿ ಏದೆನ್‌ ತೋಟದಲ್ಲಿ ಎಬ್ಬಿಸಲಾಗಿತ್ತು. ದೇವರ ವಿರುದ್ಧ ದಂಗೆಯೆದ್ದ ಒಬ್ಬ ದೇವದೂತನ ಪ್ರಭಾವಕ್ಕೊಳಗಾಗಿ ಆದಾಮಹವ್ವರು ದೇವರಿಗೆ ಅವಿಧೇಯರಾದರು. ಈ ದಂಪತಿಯ ದಂಗೆಯು, ದೇವರ ಪರಮಾಧಿಕಾರ ಅಂದರೆ ಆತನು ಆಳುವ ವಿಧದ ಔಚಿತ್ಯದ ಬಗ್ಗೆ ಸವಾಲೆಬ್ಬಿಸಿತು. ಅವರ ಅವಿಧೇಯತೆ ಅಥವಾ ಪಾಪವು, ಯಾವ ಮನುಷ್ಯನಾದರೂ ಕಷ್ಟಪರೀಕ್ಷೆಗಳ ಮಧ್ಯೆ ದೇವರಿಗೆ ನಂಬಿಗಸ್ತನಾಗಿರುವನೊ ಎಂಬ ಸವಾಲನ್ನೂ ಎಬ್ಬಿಸಿತು.—ಆದಿಕಾಂಡ 3:1-6; ಯೋಬ 2:1-5.

ಯೆಹೋವನ ಪರಮಾಧಿಕಾರ ಮತ್ತು ದೇವರ ಕಡೆಗಿನ ಮಾನವನ ನಂಬಿಗಸ್ತಿಕೆ ಇವೆರಡರ ಕುರಿತು ಎಬ್ಬಿಸಲಾದ ಆ ವಿವಾದಾಂಶಗಳಿಗೆ ಯೇಸು ಅತ್ಯಂತ ನಿರ್ಣಾಯಕ ಉತ್ತರ ಕೊಟ್ಟನು. ಆತನು “ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ” ಪರಿಪೂರ್ಣ ವಿಧೇಯತೆ ತೋರಿಸುವ ಮೂಲಕ ದೇವರ ಪರಮಾಧಿಕಾರವನ್ನು ಸಮರ್ಥಿಸಿದನು. (ಫಿಲಿಪ್ಪಿ 2:8) ಪರಿಪೂರ್ಣ ಮನುಷ್ಯನು ಅತ್ಯಂತ ಕಠಿನವಾದ ಕಷ್ಟಸಂಕಟದ ಮಧ್ಯೆಯೂ ಯೆಹೋವನಿಗೆ ಪೂರ್ಣವಾಗಿ ನಂಬಿಗಸ್ತನಾಗಿರಬಲ್ಲನೆಂದೂ ಯೇಸು ರುಜುಪಡಿಸಿದನು.

ಮಾನವಕುಲವನ್ನು ವಿಮೋಚಿಸಲು ಯೇಸು ಸತ್ತನು. ವಾಗ್ದತ್ತ ಮೆಸ್ಸೀಯನ ಕಷ್ಟಾನುಭವ ಮತ್ತು ಮರಣವು ಮಾನವರ ಪಾಪಗಳಿಗಾಗಿ ಪರಿಹಾರ ಒದಗಿಸುವುದೆಂದು ಪ್ರವಾದಿ ಯೆಶಾಯನು ಮುಂತಿಳಿಸಿದ್ದನು. (ಯೆಶಾಯ 53:5, 10) ಯೇಸುವಿಗೆ ಇದು ಸ್ಪಷ್ಟವಾಗಿ ಅರ್ಥವಾಯಿತು. ಆತನು ಸಿದ್ಧಮನಸ್ಸಿನಿಂದ “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ” ಕೊಟ್ಟನು. (ಮತ್ತಾಯ 20:28) ಆತನ ತ್ಯಾಗಮಯ ಮರಣವು, ಪಾಪಮಾಡುವವರಾದ ಮಾನವರು ಯೆಹೋವನೊಂದಿಗೆ ಸುಸಂಬಂಧ ಬೆಸೆಯಲು ಮತ್ತು ಪಾಪಮರಣಗಳಿಂದ ಬಿಡುಗಡೆ ಹೊಂದಲು ದಾರಿಮಾಡಿಕೊಟ್ಟಿತು. ಆದಾಮಹವ್ವರು ಏನನ್ನು ಕಳೆದುಕೊಂಡರೊ ಅದನ್ನು, ಅಂದರೆ ಭೂಮಿಯ ಮೇಲೆ ಪರಿಪೂರ್ಣ ಪರಿಸ್ಥಿತಿಗಳಲ್ಲಿ ಅನಂತ ಜೀವನದ ನಿರೀಕ್ಷೆಯನ್ನು ನಾವು ಪುನಃ ಗಳಿಸುವ ಅವಕಾಶವನ್ನು ಆತನ ಮರಣವು ಕೊಡುತ್ತದೆ. *ಪ್ರಕಟನೆ 21:3, 4.

ನೀವೇನು ಮಾಡಬಹುದು? ಈ ಲೇಖನಮಾಲೆಯಲ್ಲಿ ನಾವು ಯೇಸುವಿನ ಬಗ್ಗೆ ಅಂದರೆ ಆತನು ಎಲ್ಲಿಂದ ಬಂದನು, ಹೇಗೆ ಜೀವಿಸಿದನು, ಏಕೆ ಸತ್ತನು ಎಂಬ ವಿಷಯಗಳ ಬಗ್ಗೆ ಬೈಬಲ್‌ ಏನನ್ನುತ್ತದೆ ಎಂಬುದನ್ನು ಪರಿಶೀಲಿಸಿದೆವು. ಯೇಸುವಿನ ಕುರಿತ ಆ ಸತ್ಯಗಳನ್ನು ತಿಳಿದುಕೊಳ್ಳುವುದು ಆತನ ಕುರಿತ ತಪ್ಪಭಿಪ್ರಾಯಗಳನ್ನು ಹೋಗಲಾಡಿಸುತ್ತದೆ ಮಾತ್ರವಲ್ಲ ಹೆಚ್ಚಿನದ್ದನ್ನು ಮಾಡುತ್ತದೆ. ನಾವು ಆ ಸತ್ಯಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈದರೆ ಆಶೀರ್ವಾದಗಳನ್ನು, ಅಂದರೆ ಈಗ ಉತ್ತಮ ಜೀವನ ಮತ್ತು ಭವಿಷ್ಯದಲ್ಲಿ ಅನಂತ ಜೀವನವನ್ನು ಪಡೆಯುವೆವು. ಇಂಥ ಪ್ರಯೋಜನಗಳನ್ನು ಪಡೆಯಬೇಕಾದರೆ ನಾವೇನು ಮಾಡಬೇಕೆಂದು ಬೈಬಲ್‌ ನಮಗೆ ತಿಳಿಸುತ್ತದೆ.

▪ ಯೇಸು ಕ್ರಿಸ್ತನ ಬಗ್ಗೆ ಮತ್ತು ಯೆಹೋವನ ಉದ್ದೇಶದಲ್ಲಿ ಆತನ ಪಾತ್ರದ ಬಗ್ಗೆ ಹೆಚ್ಚನ್ನು ಕಲಿಯುವುದು ಅಗತ್ಯ.—ಯೋಹಾನ 17:3.

▪ ಯೇಸುವಿನಲ್ಲಿ ನಂಬಿಕೆಯನ್ನಿಡಬೇಕು. ಅಂದರೆ ಆತನನ್ನು ನಿಮ್ಮ ಉದ್ಧಾರಕನಾಗಿ ಸ್ವೀಕರಿಸಿದ್ದೀರೆಂದು ನಿಮ್ಮ ಜೀವನ ರೀತಿಯಿಂದ ತೋರಿಸಬೇಕು.—ಯೋಹಾನ 3:36; ಅ. ಕಾರ್ಯಗಳು 5:31.

ಯಾರ ಮೂಲಕ ನಾವು “ನಿತ್ಯಜೀವವನ್ನು” ಪಡೆಯಬಲ್ಲೆವೊ ದೇವರ ಆ “ಏಕೈಕಜಾತ ಪುತ್ರ”ನಾದ ಯೇಸು ಕ್ರಿಸ್ತನ ಬಗ್ಗೆ ಹೆಚ್ಚನ್ನು ಕಲಿಯುವಂತೆ ನಿಮಗೆ ನೆರವಾಗಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.—ಯೋಹಾನ 3:16. (w11-E 04/01)

[ಪಾದಟಿಪ್ಪಣಿಗಳು]

^ ಪ್ಯಾರ. 5 ಯೇಸು ಅನೇಕ ಸಲ ತನ್ನನ್ನೇ “ಮನುಷ್ಯಕುಮಾರ” ಎಂದು ಕರೆದನು. (ಮತ್ತಾಯ 8:20) ಈ ಅಭಿವ್ಯಕ್ತಿಯು ಆತನು ನಿಜವಾಗಿಯೂ ಒಬ್ಬ ಮನುಷ್ಯನಾಗಿದ್ದನೆಂದು ತೋರಿಸಿತು ಮಾತ್ರವಲ್ಲ, ಬೈಬಲ್‌ ಪ್ರವಾದನೆಯಲ್ಲಿ ತಿಳಿಸಲಾದ “ಮನುಷ್ಯಕುಮಾರ” ಆತನೇ ಎಂಬುದನ್ನೂ ತೋರಿಸಿಕೊಟ್ಟಿತು.—ದಾನಿಯೇಲ 7:13, 14.

^ ಪ್ಯಾರ. 13 ಯೇಸುವಿನಲ್ಲಿ ನೆರವೇರಿದ ಪ್ರವಾದನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪರಿಶಿಷ್ಟದಲ್ಲಿ “ಯೇಸು ಕ್ರಿಸ್ತನು—ವಾಗ್ದತ್ತ ಮೆಸ್ಸೀಯನು” ಎಂಬ ವಿಷಯವನ್ನು ನೋಡಿ.

^ ಪ್ಯಾರ. 17 ಯೇಸುವಿನ ಮರಣದ ಯಜ್ಞಾರ್ಪಿತ ಮೌಲ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ “ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ” ಎಂಬ 5ನೇ ಅಧ್ಯಾಯ ನೋಡಿ.