ಸತ್ತವರಿಗೆ ಯಾವ ನಿರೀಕ್ಷೆಯಾದರೂ ಇದೆಯೊ?
ದೇವರ ವಾಕ್ಯದಿಂದ ಕಲಿಯಿರಿ
ಸತ್ತವರಿಗೆ ಯಾವ ನಿರೀಕ್ಷೆಯಾದರೂ ಇದೆಯೊ?
ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.
1. ಸತ್ತವರಿಗೆ ಯಾವ ನಿರೀಕ್ಷೆ ಇದೆ?
ಯೇಸು ಯೆರೂಸಲೇಮ್ ಪಟ್ಟಣದ ಹತ್ತಿರದ ಬೇಥಾನ್ಯಕ್ಕೆ ತಲಪುವಷ್ಟರಲ್ಲಿ ಅವನ ಮಿತ್ರ ಲಾಜರನು ಸತ್ತು ಆಗಲೇ ನಾಲ್ಕು ದಿನಗಳಾಗಿದ್ದವು. ಲಾಜರನ ಸಹೋದರಿಯರಾದ ಮಾರ್ಥ ಹಾಗೂ ಮರಿಯಳ ಸಂಗಡ ಯೇಸು ಸಮಾಧಿಯ ಬಳಿ ಹೋದನು. ಕೂಡಲೇ ಅಲ್ಲೊಂದು ಗುಂಪು ಜಮಾಯಿಸಿತು. ಯೇಸು ಲಾಜರನನ್ನು ಪುನಃ ಜೀವಂತ ಮಾಡಿದನು. ಆಗ ಮಾರ್ಥ ಹಾಗೂ ಮರಿಯಳಿಗಾದ ಆನಂದವನ್ನು ನೀವು ಊಹಿಸಿಕೊಳ್ಳಬಲ್ಲಿರೋ?—ಯೋಹಾನ 11:20-24, 38-44 ಓದಿ.
ಸತ್ತವರನ್ನು ಪುನಃ ಜೀವಂತಗೊಳಿಸಲಾಗುವುದೆಂದು ಮಾರ್ಥಳಿಗೆ ನಂಬಿಕೆಯಿತ್ತು. ಭವಿಷ್ಯದಲ್ಲಿ ದೇವರು ಮೃತರನ್ನು ಇದೇ ಭೂಮಿಯಲ್ಲಿ ಪುನಃ ಜೀವಿಸಲಿಕ್ಕಾಗಿ ಜೀವಂತಗೊಳಿಸುವನೆಂದು ಯೆಹೋವನ ನಂಬಿಗಸ್ತ ಸೇವಕರಿಗೆ ಬಹಳ ಹಿಂದಿನಿಂದಲೂ ತಿಳಿದಿತ್ತು.—ಯೋಬ 14:14, 15 ಓದಿ.
2. ಸತ್ತವರ ಸ್ಥಿತಿಯೇನು?
ಮನುಷ್ಯರನ್ನೂ ಪಶುಗಳನ್ನೂ ಜೀವಂತವಾಗಿರಿಸುವ “ಪ್ರಾಣ” ಎಂಬುದಿದೆ. ಆದರೆ, ಶರೀರ ಸತ್ತ ನಂತರವೂ ಜೀವಿಸುತ್ತಾ ಇರುವ ಆತ್ಮ ಎಂಬುದು ನಮ್ಮೊಳಗಿಲ್ಲ. (ಪ್ರಸಂಗಿ 3:19; ಆದಿಕಾಂಡ 7:21, 22) ಮನುಷ್ಯರಾದ ನಾವು ಮಣ್ಣಿನಿಂದ ರಚಿಸಲ್ಪಟ್ಟಿರುವ ಭೌತಿಕ ಜೀವಿಗಳು. (ಆದಿಕಾಂಡ 2:7; 3:19) ಮರಣದ ಸಮಯದಲ್ಲಿ ಮನುಷ್ಯನ ಮಿದುಳು ಸಾಯುತ್ತದೆ. ಆಗ ಅವನ ಯೋಚನೆಗಳೂ ಅಳಿದುಹೋಗುತ್ತವೆ. ಆದ್ದರಿಂದಲೇ ಲಾಜರನು ಪುನಃ ಜೀವಂತಗೊಳಿಸಲ್ಪಟ್ಟಾಗ ತಾನು ಸತ್ತಿದ್ದಾಗ ತನಗೇನಾಗಿತ್ತು ಎಂಬುದರ ಬಗ್ಗೆ ಏನನ್ನೂ ಹೇಳಲಿಲ್ಲ. ಏಕೆಂದರೆ ಮೃತ ವ್ಯಕ್ತಿಗಳಿಗೆ ಯಾವ ತಿಳುವಳಿಕೆಯೂ ಇಲ್ಲ.—ಕೀರ್ತನೆ 146:4; ಪ್ರಸಂಗಿ 9:5, 10 ಓದಿ.
ಹಾಗಾದರೆ ಸತ್ತವರಿಗೆ ಕಷ್ಟ, ನೋವು ಅನುಭವಿಸಲು ಸಾಧ್ಯವಿಲ್ಲವೆಂಬುದು ಸ್ಪಷ್ಟ. ಆದ್ದರಿಂದ ದೇವರು ಜನರನ್ನು ಮರಣಾನಂತರ ಯಾತನೆಗೆ ಒಳಪಡಿಸುತ್ತಾನೆಂಬ ಬೋಧನೆ ಸುಳ್ಳು. ಈ ಬೋಧನೆ ದೇವರನ್ನು ನಿಂದೆಗೊಳಪಡಿಸುತ್ತದೆ. ಜನರನ್ನು ಬೆಂಕಿಗೆ ಹಾಕಿ ಯಾತನೆಗೊಳಪಡಿಸುವ ವಿಚಾರವೇ ಆತನಿಗೆ ಅಸಹ್ಯ.—ಯೆರೆಮೀಯ 7:31 ಓದಿ.
3. ನಾವು ಸತ್ತವರೊಂದಿಗೆ ಮಾತಾಡಲು ಸಾಧ್ಯವೊ?
ಸತ್ತವರು ಮಾತಾಡಲಾರರು. (ಕೀರ್ತನೆ 115:17) ಆದರೆ ದುಷ್ಟ ದೇವದೂತರು ಜನರನ್ನು ವಂಚಿಸಿ, ಮೃತ ವ್ಯಕ್ತಿಯ ಆತ್ಮ ತಾವೆಂದು ಹೇಳಿಕೊಂಡು ಮಾತಾಡುತ್ತಾರೆ. (2 ಪೇತ್ರ 2:4) ಸತ್ತವರೊಂದಿಗೆ ಮಾತಾಡಲು ಯತ್ನಿಸುವುದನ್ನು ಯೆಹೋವನು ನಿಷೇಧಿಸುತ್ತಾನೆ.—ಧರ್ಮೋಪದೇಶಕಾಂಡ 18:10, 11 ಓದಿ.
4. ಯಾರನ್ನೆಲ್ಲ ಪುನಃ ಜೀವಂತಗೊಳಿಸಲಾಗುವುದು?
ಮೃತರಾದ ಕೋಟಿಗಟ್ಟಲೆ ಜನರನ್ನು ಬರಲಿರುವ ಹೊಸ ಲೋಕದಲ್ಲಿ ಜೀವಂತಗೊಳಿಸಲಾಗುವುದು. ಯೆಹೋವನನ್ನು ತಿಳಿಯದೇ ಇದ್ದ ಕಾರಣ ಕೆಟ್ಟ ಕೆಲಸಗಳನ್ನು ಮಾಡಿದ್ದ ಕೆಲವರನ್ನೂ ಪುನರುತ್ಥಾನಗೊಳಿಸಲಾಗುವುದು ಅಂದರೆ ಪುನಃ ಜೀವಂತಗೊಳಿಸಲಾಗುವುದು.—ಲೂಕ 23:43; ಅ. ಕಾರ್ಯಗಳು 24:15 ಓದಿ.
ಪುನರುತ್ಥಾನವಾದವರಿಗೆ ದೇವರ ಕುರಿತ ಸತ್ಯವನ್ನು ಕಲಿಯಲು ಮತ್ತು ಯೇಸುವಿಗೆ ವಿಧೇಯರಾಗುವ ಮೂಲಕ ಆತನಲ್ಲಿ ನಂಬಿಕೆ ತೋರಿಸಲು ಅವಕಾಶವಿರುವುದು. (ಪ್ರಕಟನೆ 20:11-13) ಪುನಃ ಜೀವಂತರಾದ ನಂತರ ಯಾರು ಒಳ್ಳೇದನ್ನು ಮಾಡುತ್ತಾರೊ ಅವರು ಭೂಮಿ ಮೇಲೆ ಸದಾಕಾಲ ಜೀವಿಸುವರು. ಆದರೆ ಪುನರುತ್ಥಾನವಾದವರಲ್ಲಿ ಕೆಲವರು ಕೆಟ್ಟದ್ದನ್ನು ಮಾಡುತ್ತಾ ಇರುವರು. ಅಂಥವರ ಪುನರುತ್ಥಾನ “ನ್ಯಾಯತೀರ್ಪಿಗಾಗಿ ಪುನರುತ್ಥಾನ” ಆಗಿ ಪರಿಣಮಿಸುವುದು.—ಯೋಹಾನ 5:28, 29 ಓದಿ.
5. ಪುನರುತ್ಥಾನವು ನಮಗೆ ಯೆಹೋವನ ಬಗ್ಗೆ ಏನನ್ನು ಕಲಿಸುತ್ತದೆ?
ಯೇಸು ತನ್ನ ಪ್ರಾಣವನ್ನು ನಮಗಾಗಿ ಕೊಡುವಂತೆ ದೇವರು ಕಳುಹಿಸಿದ್ದರಿಂದಲೇ ಪುನರುತ್ಥಾನ ಸಾಧ್ಯ. ಹೀಗಿರುವುದರಿಂದ ಅದು ನಮ್ಮ ಮೇಲೆ ಯೆಹೋವನಿಗಿರುವ ಪ್ರೀತಿ ಹಾಗೂ ಅಪಾತ್ರ ದಯೆಯನ್ನು ತೋರಿಸುತ್ತದೆ.—ಯೋಹಾನ 3:16; ರೋಮನ್ನರಿಗೆ 6:23 ಓದಿ. (w11-E 06/01)
ಹೆಚ್ಚಿನ ಮಾಹಿತಿಗಾಗಿ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಈ ಪುಸ್ತಕದ 6 ಮತ್ತು 7 ಅಧ್ಯಾಯಗಳನ್ನು ನೋಡಿ.
[ಪುಟ 20ರಲ್ಲಿರುವ ಚಿತ್ರ]
ಆದಾಮನನ್ನು ಮಣ್ಣಿನಿಂದ ನಿರ್ಮಿಸಲಾಯಿತು