ದೇವರನ್ನು ನಂಬುತ್ತೀರಾ?
ಹೀಗೆ ಕಲ್ಪಿಸಿಕೊಳ್ಳಿ: ನಿಮ್ಮ ಅಚ್ಚುಮೆಚ್ಚಿನ ಗೆಳೆಯನೊಬ್ಬ ಏನೋ ಒಂದು ಸಂಗತಿ ಮಾಡಿದ್ದಾನೆ. ಆದರೆ ಯಾಕೆ ಹಾಗೆ ಮಾಡಿದ ಅನ್ನೋದು ಅರ್ಥವಾಗುತ್ತಿಲ್ಲ. ಬೇರೆಯವರೆಲ್ಲ ಅವನನ್ನು ಬಯ್ಯುತ್ತಿದ್ದಾರೆ. ದುರುದ್ದೇಶ ಇಟ್ಟುಕೊಂಡೇ ಹೀಗೆಲ್ಲ ಮಾಡಿದ, ಕ್ರೂರಿ ಅಂತ ಹೇಳುತ್ತಿದ್ದಾರೆ. ಇದನ್ನು ನೀವು ನಂಬಿಬಿಡುತ್ತೀರಾ? ಅಥವಾ ಇದರ ಬಗ್ಗೆ ಮಾತಾಡಲು ಗೆಳೆಯನಿಗೆ ಒಂದು ಅವಕಾಶ ಕೊಡುತ್ತೀರಾ? ಅವನ ಹತ್ತಿರ ಮಾತಾಡುವ ತನಕ ಕಾಯುತ್ತೀರಾ? ಅಥವಾ ಅವನು ಕ್ರೂರಿ ಅಂತ ನೀವೂ ತೀರ್ಮಾನಿಸಿ ಬಿಡುತ್ತೀರಾ?
ನಿಮ್ಮ ಗೆಳೆಯನಿಂದ ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೀರಿ ತಾನೇ. ಮಾತ್ರವಲ್ಲ, ‘ನನ್ನ ಗೆಳೆಯನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೀನಾ? ಅವನು ನನ್ನ ಅಚ್ಚುಮೆಚ್ಚಿನ ಗೆಳೆಯ ಆಗಲು ಕಾರಣವೇನು?’ ಅಂತ ಕೂಡ ಯೋಚಿಸುತ್ತೀರಿ. ಅದೇ ರೀತಿ ದೇವರು ಕ್ರೂರಿ ಅಂತ ಯಾರಾದರೂ ಹೇಳಿದಾಗ ಹೀಗೆ ಯೋಚಿಸಬೇಕಲ್ವಾ?
ಬೈಬಲನ್ನು ಓದುವಾಗ ಕೆಲವೊಂದು ಸನ್ನಿವೇಶಗಳಲ್ಲಿ ದೇವರು ಯಾಕೆ ಹಾಗೆ ಮಾಡಿದನು ಅನ್ನೋದು ಅರ್ಥವಾಗಲ್ಲ. ಇನ್ನು ಕೆಲವೊಂದು ಸನ್ನಿವೇಶಗಳನ್ನು ಯಾಕೆ ಅನುಮತಿಸಿದ ಅಂತ ಅರ್ಥವಾಗಲ್ಲ. ಅಷ್ಟೇ ಅಲ್ಲ ದೇವರು ಕ್ರೂರಿ ಅಂತ ಹೇಳುವ ಜನರು ಸಾಕಷ್ಟಿದ್ದಾರೆ. ದೇವರ ಬಗ್ಗೆ ತಮಗಿರುವ ದುರಭಿಪ್ರಾಯವನ್ನೇ ನಿಮ್ಮ ಮೇಲೆ ಹೇರಲು ಯತ್ನಿಸುವವರೂ ಇದ್ದಾರೆ. ಹೀಗಿದ್ದಾಗ ಜನರು ಹೇಳುವ ಮಾತನ್ನು ಕಣ್ಣುಮುಚ್ಚಿ ನಂಬಿ ಬಿಡುತ್ತೀರಾ? ಇಲ್ಲ. ಹಾಗೆ ಮಾಡುವ ಬದಲು ದೇವರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಿ. ‘ದೇವರು ನನ್ನ ಬದುಕಲ್ಲಿ ಯಾವ ಪಾತ್ರ ವಹಿಸಿದ್ದಾನೆ? ಎಷ್ಟು ಸಹಾಯಮಾಡಿದ್ದಾನೆ?’ ಅಂತ ಯೋಚಿಸಿ.
ನೀವು ಜೀವನದಲ್ಲಿ ತುಂಬ ಕಷ್ಟಗಳನ್ನು ಅನುಭವಿಸಿದ್ದರೆ ಬಹುಶಃ ನೀವು ದೇವರಿಂದ ನನಗೆ ಅಂಥಾ ಸಹಾಯವೇನೂ ಆಗಿಲ್ಲ ಅಂತ ಹೇಳಬಹುದು. ಆದರೆ ಯೋಚಿಸಿ: ದೇವರು ನಿಮ್ಮ ಜೀವನದಲ್ಲಿ ಕೆಟ್ಟದ್ದನ್ನು ಮಾಡಿದ್ದಾನಾ? ಅಥವಾ ಒಳ್ಳೇದನ್ನು ಮಾಡಿದ್ದಾನಾ? ನಾವೀಗಾಗಲೇ ನೋಡಿರೋ ಹಾಗೆ “ಈ ಲೋಕದ ಅಧಿಪತಿ” ಯೆಹೋವ ದೇವರಲ್ಲ ಸೈತಾನ. (ಯೋಹಾನ 12:31) ಲೋಕದಲ್ಲಿ ನಡೆಯುತ್ತಿರುವ ಅಧಿಕಾಂಶ ಅನ್ಯಾಯ, ಅಕ್ರಮಗಳಿಗೆ ಸೈತಾನನೇ ಕಾರಣ. ಅದೂ ಅಲ್ಲದೆ ಮನುಷ್ಯರಾಗಿರುವ ಕಾರಣ ನಮ್ಮಲ್ಲಿರುವ ಕುಂದುಕೊರತೆಗಳಿಂದ ಮತ್ತು ಮುಂದೆ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲದೇ ಇರುವುದರಿಂದ ಎಷ್ಟೋ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಅನ್ನೋದನ್ನು ನೀವು ಒಪ್ಪುವುದಿಲ್ಲವೇ?
ದೇವರು ನಿಮ್ಮ ಜೀವನದಲ್ಲಿ ಕೆಟ್ಟದ್ದನ್ನು ಮಾಡಿದ್ದಾನಾ? ಅಥವಾ ಒಳ್ಳೇದನ್ನು ಮಾಡಿದ್ದಾನಾ?
ಹಾಗಾದರೆ ದೇವರು ಯಾವುದಕ್ಕೆ ಕಾರಣ? ಬೈಬಲ್ ಏನು ಹೇಳುತ್ತದೆ ಅಂತ ನೋಡಿ: ದೇವರು “ಭೂಮ್ಯಾಕಾಶಗಳನ್ನು ಉಂಟುಮಾಡಿ”ದ್ದಾನೆ. ನಮ್ಮನ್ನು ದೇವರು ‘ಅದ್ಭುತವಾಗಿ ರಚಿಸಿದ್ದಾನೆ’ ಮತ್ತು ನಮ್ಮ ‘ಪ್ರಾಣ ಆತನ ಕೈಯಲ್ಲಿದೆ.’ (ಕೀರ್ತನೆ 124:8; 139:14; ದಾನಿಯೇಲ 5:23) ಈ ಮಾತುಗಳ ಅರ್ಥವೇನು?
ನಾವು ಇವತ್ತು ಬದುಕಿರುವುದಕ್ಕೆ, ನಮ್ಮ ಒಂದೊಂದು ಉಸಿರಿಗೆ ಕಾರಣ ನಮ್ಮ ಸೃಷ್ಟಿಕರ್ತ. (ಅಪೊಸ್ತಲರ ಕಾರ್ಯಗಳು 17:28) ಅಂದರೆ ಜೀವ, ಸುಂದರವಾದ ಜಗತ್ತು, ಪ್ರೀತಿ ಸ್ನೇಹಬಂಧಗಳು, ನಾಲಗೆಗೆ ರುಚಿ, ಸ್ಪರ್ಶಜ್ಞಾನ, ಕೇಳುವ ಕಿವಿ, ಮೂಸಿನೋಡುವ ಸಾಮರ್ಥ್ಯ ಎಲ್ಲ ಕೊಟ್ಟವನು ದೇವರು. (ಯಾಕೋಬ 1:17) ಈ ಅನುಗ್ರಹಗಳನ್ನು ಕೊಟ್ಟ ದೇವರು ನಮ್ಮ ಕೃತಜ್ಞತೆ, ವಿಶ್ವಾಸಕ್ಕೆ ಅರ್ಹನಾದ ಮಿತ್ರನಂತೆ ಅಲ್ಲವೇ?
ಆದರೂ ದೇವರು ಕ್ರೂರಿಯಲ್ಲ ಅಂತ ಸಂಪೂರ್ಣವಾಗಿ ನಂಬಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಅಷ್ಟು ನಂಬಿಕೆಯನ್ನು ಬೆಳೆಸಿಕೊಳ್ಳಲು ಈ ಲೇಖನಗಳಲ್ಲಿರುವ ವಿಷಯಗಳು ಸಾಕಾಗಲ್ಲ ಅಂತ ಅನಿಸಬಹುದು. ದೇವರನ್ನು ಕ್ರೂರಿ ಅಂತ ಜನರು ಹೇಳಲು ಇರುವ ಕಾರಣಗಳನ್ನೆಲ್ಲ ಈ ಚಿಕ್ಕ ಚಿಕ್ಕ ಲೇಖನಗಳಲ್ಲಿ ಕೊಡುವುದು ಕಷ್ಟ. ಆದರೆ ದೇವರ ಬಗ್ಗೆ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ನೀವು ಪ್ರಯತ್ನಿಸೋದಾದರೆ ಅದು ಒಳ್ಳೇದಲ್ಲವೇ? * ಹಾಗೇ ಮಾಡುವುದರಿಂದ ಖಂಡಿತ ನೀವು ದೇವರ ಬಗ್ಗೆ ವಾಸ್ತವ ಏನು ಅಂತ ತಿಳಿದುಕೊಳ್ಳುತ್ತೀರ. ದೇವರು ಕ್ರೂರಿನಾ? ಖಂಡಿತ ಇಲ್ಲ. “ದೇವರು ಪ್ರೀತಿಸ್ವರೂಪಿ.”—1 ಯೋಹಾನ 4:8, ಸತ್ಯವೇದವು ಬೈಬಲ್. ▪ (w13-E 05/01)
^ ಪ್ಯಾರ. 8 ಲೋಕದಲ್ಲಿ ಕೆಟ್ಟದು ನಡೆಯುತ್ತಿದ್ದರೂ ದೇವರು ಯಾಕೆ ಸುಮ್ಮನಿದ್ದಾನೆ ಎನ್ನುವುದು ಒಂದು ವಿಷಯ. ಇಂಥ ವಿಷಯಗಳ ಬಗ್ಗೆ ತಿಳಿಯಲು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಅಧ್ಯಾಯ 11ನ್ನು ಓದಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.