ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಓದುಗರ ಪ್ರಶ್ನೆ

ದೇವರನ್ನು ಯಾರು ಸೃಷ್ಟಿ ಮಾಡಿದರು?

ದೇವರನ್ನು ಯಾರು ಸೃಷ್ಟಿ ಮಾಡಿದರು?

ಅಪ್ಪ ತನ್ನ ಏಳು ವರ್ಷದ ಮಗನಿಗೆ, “ಪುಟ್ಟ, ತುಂಬಾ ಹಿಂದೆ ದೇವರು ಭೂಮಿ ಮತ್ತು ಅದರಲ್ಲಿರೋದೆಲ್ಲವನ್ನೂ ಸೃಷ್ಟಿ ಮಾಡಿದ್ರು. ಅವರು ಸೂರ್ಯನ್ನ, ಚಂದ್ರನ್ನ, ನಕ್ಷತ್ರಗಳನ್ನ ಸೃಷ್ಟಿ ಮಾಡಿದ್ರು” ಎಂದು ಹೇಳಿದರು. ಆಗ ಮಗ ಸ್ವಲ್ಪ ಹೊತ್ತು ಯೋಚಿಸಿ, “ಹಾಗಾದ್ರೆ ದೇವರನ್ನು ಯಾರು ಸೃಷ್ಟಿ ಮಾಡಿದ್ರಪ್ಪಾ?” ಅಂತ ಕೇಳ್ತಾನೆ.

“ದೇವರನ್ನು ಯಾರೂ ಸೃಷ್ಟಿ ಮಾಡಿಲ್ಲ ಪುಟ್ಟಾ. ಅವರಿಗೆ ಆರಂಭನೇ ಇಲ್ಲ. ಅವರು ಯಾವಾಗಲೂ ಇದ್ದರು” ಅಂತಾರೆ ಅಪ್ಪ. ‘ಸರಿ ಅಪ್ಪಾ’ ಎಂದು ಪುಟ್ಟ ಸುಮ್ಮನಾಗುತ್ತಾನೆ. ಆದರೆ ಅವನು ದೊಡ್ಡವನಾದ ಮೇಲೆ ಮತ್ತೆ ಅದೇ ಪ್ರಶ್ನೆ ಅವನ ಮನಸ್ಸನ್ನು ಕಾಡುತ್ತದೆ. ‘ಯಾರಿಗೇ ಆದರೂ ಆರಂಭನೇ ಇಲ್ಲದಿರೋಕೆ ಸಾಧ್ಯನಾ! ಇಡೀ ವಿಶ್ವಕ್ಕೇ ಆರಂಭ ಇದೆ. ದೇವರಿಗೆ ಮಾತ್ರ ಇಲ್ವಾ?’ ಎಂದು ಯೋಚಿಸುತ್ತಾನೆ.

ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ? ಒಂದು ರೀತಿ ಬೈಬಲ್‌ ಕೂಡ ಆ ತಂದೆ ಹೇಳಿದ ಉತ್ತರವನ್ನೇ ಕೊಡುತ್ತದೆ. “ಕರ್ತನೇ, . . . ಬೆಟ್ಟಗಳು ಉಂಟಾಗುವದಕ್ಕಿಂತ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವದಕ್ಕಿಂತ ಮುಂಚಿನಿಂದ ಯುಗಯುಗಾಂತರ ಗಳಲ್ಲಿಯೂ ನೀನೇ ದೇವರು” ಎಂದು ಮೋಶೆ ಬರೆದನು. (ಕೀರ್ತನೆ 90:1, 2) ಯೆಶಾಯನು ಸಹ “ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ” ಎಂದು ಹೇಳಿದನು. (ಯೆಶಾಯ 40:28) ಅದೇ ರೀತಿ ಯೂದನ ಪತ್ರದಲ್ಲಿ ‘ಎಲ್ಲಾ ಕಾಲಕ್ಕಿಂತ ಮೊದಲೂ’ ದೇವರಿದ್ದನು ಎಂದು ತಿಳಿಸಲಾಗಿದೆ.—ಯೂದ 25. (ಸತ್ಯವೇದವು)

ಆ ಮೇಲಿನ ವಚನಗಳು ಪೌಲನು ಹೇಳಿದಂತೆ ದೇವರು “ನಿತ್ಯತೆಯ ಅರಸ” ಎಂದು ತೋರಿಸಿಕೊಡುತ್ತವೆ. (1 ತಿಮೊಥೆಯ 1:17) ಅಂದರೆ ಇಲ್ಲಿಂದ ಎಷ್ಟೇ ವರ್ಷ ಹಿಂದೆ ಹೋಗುವುದಾದರೂ ಆಗಲೂ ದೇವರು ಅಸ್ತಿತ್ವದಲ್ಲಿದ್ದನು. ಮುಂದೆಯೂ ಇರುತ್ತಾನೆ. (ಪ್ರಕಟನೆ 1:8) ಸರ್ವಶಕ್ತನು ಅಂದ ಮೇಲೆ ಯಾವಾಗಲೂ ಅಸ್ತಿತ್ವದಲ್ಲಿರಬೇಕಲ್ವಾ?

ಈ ವಿಷಯವನ್ನು ಅರ್ಥಮಾಡಿಕೊಳ್ಳಲು ನಮಗೆ ಯಾಕೆ ಕಷ್ಟ ಆಗುತ್ತದೆ? ಕಾರಣ ನಾವು ಅಲ್ಪಾಯುಷ್ಯಿಗಳು. ಆದ್ದರಿಂದ ಸಮಯದ ಬಗ್ಗೆ ನಮ್ಮ ಯೋಚನಾಧಾಟಿ ಯೆಹೋವನದಕ್ಕಿಂತ ಭಿನ್ನವಾಗಿದೆ. ಯೆಹೋವನು ಶಾಶ್ವತನಾಗಿರುವುದರಿಂದ ಆತನಿಗೆ ಸಾವಿರ ವರ್ಷಗಳು ಒಂದು ದಿನದಂತಿವೆ. (2 ಪೇತ್ರ 3:8) ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ಗಮನಿಸಿ: ಪೂರ್ಣವಾಗಿ ಬೆಳೆದ ನಂತರ 50 ದಿನ ಮಾತ್ರ ಬದುಕುವ ಒಂದು ಮಿಡತೆಗೆ 70ರಿಂದ 80 ವರ್ಷದ ನಮ್ಮ ಬದುಕನ್ನು ಅರ್ಥಮಾಡಿಕೊಳ್ಳಲಿಕ್ಕೆ ಆಗುತ್ತದಾ? ಇಲ್ಲ ಅಲ್ವಾ? ನಮ್ಮ ಸೃಷ್ಟಿಕರ್ತನಿಗೆ ಹೋಲಿಸುವಾಗ ನಾವು ಸಹ ಆ ಮಿಡತೆಯಂತಿದ್ದೇವೆ ಎಂದು ಬೈಬಲ್‌ ತಿಳಿಸುತ್ತದೆ. ನಿಜ ಹೇಳಬೇಕೆಂದರೆ ಹಾಗೆ ಹೋಲಿಸುವಾಗ ನಮ್ಮ ಸಾಮರ್ಥ್ಯ ಮಿಡತೆಗಳಷ್ಟೂ ಇಲ್ಲ. (ಯೆಶಾಯ 40:22; 55:8, 9) ಯೆಹೋವನ ಕೆಲವೊಂದು ಲಕ್ಷಣಗಳನ್ನು ಮಾನವರು ಸರಿಯಾಗಿ ಅರ್ಥಮಾಡಿಕೊಳ್ಳಲಿಕ್ಕೆ ಆಗಲ್ಲ ಅನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ದೇವರು ಶಾಶ್ವತವಾಗಿರುತ್ತಾನೆ ಮತ್ತು ಯಾವಾಗಲೂ ಇದ್ದನು ಅನ್ನೋದನ್ನು ಅರ್ಥಮಾಡಿಕೊಳ್ಳಲಿಕ್ಕೆ ಕಷ್ಟ ಆದ್ರೂ ಈ ವಿಷಯ ನಿಜ ಅಂತ ನಂಬಲಿಕ್ಕೆ ಆಧಾರವಿದೆ. ದೇವರನ್ನು ಯಾರಾದರೊಬ್ಬರು ಸೃಷ್ಟಿ ಮಾಡಿದ್ದೇ ಆದರೆ ಆ ವ್ಯಕ್ತಿ ಸೃಷ್ಟಿಕರ್ತ ಆಗುತ್ತಿದ್ದ. ಆದರೆ ಬೈಬಲ್‌, ಯೆಹೋವನೇ ‘ಎಲ್ಲವನ್ನೂ ಸೃಷ್ಟಿಸಿದ್ದಾನೆ’ ಅಂತ ಹೇಳುತ್ತದೆ. (ಪ್ರಕಟನೆ 4:11) ಒಂದು ಸಮಯದಲ್ಲಿ ಈ ವಿಶ್ವನೇ ಇರಲಿಲ್ಲ ಅಂತ ಸಹ ನಮಗೆ ಗೊತ್ತಿದೆ. (ಆದಿಕಾಂಡ 1:1, 2) ಹಾಗಾದರೆ ಅದು ಎಲ್ಲಿಂದ ಬಂತು? ಅದು ಬರಬೇಕಾದ್ರೆ ಅದರ ಸೃಷ್ಟಿಕರ್ತ ಮೊದಲೇ ಅಸ್ತಿತ್ವದಲ್ಲಿರಬೇಕಲ್ವಾ? ತನ್ನ ಮಗ, ದೇವದೂತರು ಮತ್ತು ಬೇರೆ ಯಾವುದೇ ಬುದ್ಧಿಜೀವಿ ಹುಟ್ಟುವ ಮೊದಲೇ ದೇವರು ಅಸ್ತಿತ್ವದಲ್ಲಿದ್ದನು. (ಯೋಬ 38:4, 7; ಕೊಲೊಸ್ಸೆ 1:15) ಅಂದರೆ ಎಲ್ಲದ್ದಕ್ಕಿಂತ ಮೊದಲೇ ಆತನೊಬ್ಬನೇ ಅಸ್ತಿತ್ವದಲ್ಲಿದ್ದನು. ಆತನನ್ನು ಯಾರೂ ಸೃಷ್ಟಿಸಿರಲಿಕ್ಕೆ ಸಾಧ್ಯವೇ ಇಲ್ಲ. ಅಷ್ಟಕ್ಕೂ ಆತನನ್ನು ಸೃಷ್ಟಿ ಮಾಡಲಿಕ್ಕೆ ಅಲ್ಲಿ ಯಾರೂ ಇರಲಿಲ್ಲ.

ನಾವು ಇದ್ದೇವೆ, ಇಡೀ ವಿಶ್ವ ಇದೆ ಅನ್ನುವಾಗ ಇದರ ಹಿಂದೆ ಒಬ್ಬ ಶಾಶ್ವತ ದೇವರು ಅಸ್ತಿತ್ವದಲ್ಲಿರಲೇಬೇಕು ಅಲ್ವ? ಇಡೀ ವಿಶ್ವವನ್ನು ನಡೆಸುವಾತನು, ಅದು ನಿಯಂತ್ರಣ ತಪ್ಪದಿರಲು ನಿಯಮಗಳನ್ನು ಇಟ್ಟವನು ಖಂಡಿತವಾಗಿಯೂ ಯಾವಾಗಲೂ ಇರುವಾತನಾಗಿರಬೇಕು. ಆತನು ಮಾತ್ರ ಎಲ್ಲವುಗಳಿಗೆ ಜೀವವನ್ನು ಕೊಡಲಿಕ್ಕೆ ಸಾಧ್ಯ.—ಯೋಬ 33:4. (w14-E 08/01)