ಸಾಲ . . . ಸಂಕಟದ ಶೂಲ
“ಸಾಲ ತೆಗೆದುಕೊಳ್ಳುವಾಗ ಹಬ್ಬದೂಟ, ತೀರಿಸುವಾಗ ಪ್ರಾಣಸಂಕಟ.” —ಸ್ವಾಹೀಲಿ ಗಾದೆ.
ಇದು ಪೂರ್ವ ಆಫ್ರಿಕದಲ್ಲಿನ ಸುಪ್ರಸಿದ್ಧ ಗಾದೆ. ಗಾದೆ ಆಫ್ರಿಕದ್ದಾದರೂ ಇದರಲ್ಲಿನ ನಿಜಾಂಶವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸಾಲ ಮಾಡುವುದರ ಬಗ್ಗೆ ನಿಮಗೂ ಹೀಗೆಯೇ ಅನಿಸುತ್ತದಾ? ಕೆಲವೊಮ್ಮೆ ಸಾಲ ತೆಗೆದುಕೊಳ್ಳುವುದು ಒಳ್ಳೇದೆಂದು ಅನಿಸಿದರೂ ಅದು ಸರಿನಾ? ಇಷ್ಟಕ್ಕೂ ಸಾಲದಿಂದಾಗುವ ಅಪಾಯಗಳೇನು?
ಇನ್ನೊಂದು ಸ್ವಾಹೀಲಿ ಗಾದೆ, ‘ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬಾರದೆಂದು’ ಹೇಳುತ್ತದೆ. ಸಾಲದಿಂದ ಸ್ನೇಹ ಮತ್ತು ಸಂಬಂಧಗಳು ಹಾಳಾಗುತ್ತವೆ. ಸಾಲ ತೀರಿಸಲು ಚೆನ್ನಾಗಿ ಯೋಜನೆ ಮಾಡಿದ್ದರೂ, ಪ್ರಾಮಾಣಿಕವಾಗಿ ತೀರಿಸಬೇಕು ಅಂತ ಅಂದುಕೊಂಡಿದ್ದರೂ ಕೆಲವೊಮ್ಮೆ ಹಾಗೆ ಮಾಡಲು ಆಗದೇ ಇರಬಹುದು. ಉದಾಹರಣೆಗೆ, ಹೇಳಿದ ಸಮಯಕ್ಕೆ ಸರಿಯಾಗಿ ಸಾಲ ತೀರಿಸಲು ತಪ್ಪಿಹೋದರೆ ಸಾಲ ಕೊಟ್ಟವನಿಗೆ ಕಿರಿ ಕಿರಿಯಾಗಬಹುದು. ಅಸಮಾಧಾನ ಆಗಬಹುದು. ಇದರಿಂದ ಸಾಲ ಕೊಟ್ಟವನ ಮತ್ತು ತೆಗೆದುಕೊಂಡವನ ನಡುವೆ ಮತ್ತವರ ಕುಟುಂಬಗಳ ನಡುವೆ ಇದ್ದ ಸಂಬಂಧ ಹಳಸಿಹೋಗಬಹುದು. ಸಾಲದಿಂದ ಮನಸ್ತಾಪಗಳು, ಜಗಳಗಳಾಗುವ ಸಾಧ್ಯತೆ ಹೆಚ್ಚಿರುವುದರಿಂದ ಹಣದ ಸಮಸ್ಯೆ ಎದುರಾದ ಕೂಡಲೇ ಸಾಲ ತೆಗೆದುಕೊಳ್ಳುವ ಯೋಚನೆ ಮಾಡಬಾರದು. ಬದಲಿಗೆ ಎಲ್ಲಾ ಪ್ರಯತ್ನಮಾಡಿ ಕೊನೆಗೆ ಬೇರೆ ದಾರಿಯೇ ಇಲ್ಲ ಅನ್ನುವಂಥ ಪರಿಸ್ಥಿತಿಯಲ್ಲಿ ಮಾತ್ರ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಬಹುದು.
ಸಾಲ ಮಾಡುವುದರಿಂದ ಯೆಹೋವ ದೇವರೊಂದಿಗೆ ನಮಗಿರುವ ಸಂಬಂಧ ಸಹ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಹೇಗೆ? ಬೇಕುಬೇಕೆಂದೇ ಅಥವಾ ಉದ್ದೇಶಪೂರ್ವಕವಾಗಿ ಸಾಲ ತೀರಿಸದೆ ಇರುವವನನ್ನು ಬೈಬಲ್ ದುಷ್ಟನು ಎಂದು ಕರೆಯುತ್ತದೆ. (ಕೀರ್ತನೆ 37:21) ಅಷ್ಟೇ ಅಲ್ಲದೆ “ಸಾಲಗಾರನು ಸಾಲಕೊಟ್ಟವನಿಗೆ ಸೇವಕ” ಎಂದೂ ಹೇಳುತ್ತದೆ. (ಜ್ಞಾನೋಕ್ತಿ 22:7) ಪೂರ್ತಿ ಸಾಲ ತೀರಿಸುವವರೆಗೆ ತಾನು ಸಾಲ ಕೊಟ್ಟವನ ಕೈಕೆಳಗಿದ್ದೇನೆಂದು ಸಾಲಗಾರನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಸಾಲಗಾರನು ಸಾಲ ಕೊಟ್ಟವನ ‘ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕಾಗುತ್ತದೆ’ ಎಂಬ ಗಾದೆಯೂ ಆಫ್ರಿಕದಲ್ಲಿ ಜನಪ್ರಿಯವಾಗಿದೆ. ಸಾಲದಲ್ಲಿದ್ದವನು ತನಗಿಷ್ಟ ಬಂದಂತೆ ಇರಲು ಸಾಧ್ಯವಿಲ್ಲ ಎನ್ನುವುದೇ ಇದರ ತಾತ್ಪರ್ಯ.
ಆದ್ದರಿಂದ ಸಾಲ ತೆಗೆದುಕೊಂಡರೆ ಅದನ್ನು ತಪ್ಪದೇ ತೀರಿಸಬೇಕು. ಹಾಗೆ ಮಾಡದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಸಾಲ ಮಾಡುತ್ತಾ ಹೋದರೆ ಅದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಇದರಿಂದ ನಿದ್ದೆ ಬಾರದಿರಬಹುದು, ಹೆಚ್ಚಿನ ತಾಸು ಕೆಲಸ ಮಾಡಬೇಕಾಗಬಹುದು, ಪತಿ-ಪತ್ನಿಯರ ಮಧ್ಯೆ ಜಗಳಗಳಾಗಬಹುದು, ಕುಟುಂಬಗಳೇ ಒಡೆದುಹೋಗಬಹುದು. ಕೆಲವೊಮ್ಮೆ ಜೈಲು ಪಾಲಾಗುವ ಸಾಧ್ಯತೆ ಕೂಡ ಇದೆ. ಆದ್ದರಿಂದಲೇ ರೋಮನ್ನರಿಗೆ 13:8ರಲ್ಲಿ ಈ ಬುದ್ಧಿವಾದ ಕೊಡಲಾಗಿದೆ: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು.”
ಸಾಲ ಮಾಡಲೇಬೇಕಾ?
ಮೇಲೆ ತಿಳಿಸಲಾದ ವಿಷಯಗಳನ್ನು ಗಮನಿಸುವಾಗ, ಸಾಲ
ಮಾಡುವ ವಿಷಯದಲ್ಲಿ ತುಂಬ ಹುಷಾರಾಗಿರಬೇಕು ಎಂದು ತಿಳಿದುಬರುತ್ತದೆ. ಆದ್ದರಿಂದ ಮೊದಲು ಹೀಗೆ ಕೇಳಿಕೊಳ್ಳಿ: ನಾನು ಸಾಲ ಮಾಡಲೇಬೇಕಾ? ಸಾಲ ಮಾಡದಿದ್ದರೆ ಕುಟುಂಬ ನಡೆಸಲು ಆಗುವುದೇ ಇಲ್ವಾ? ನನ್ನ ಹತ್ತಿರ ಇರುವುದಕ್ಕಿಂತ ಹೆಚ್ಚು ಬೇಕೆಂಬ ದುರಾಸೆಯಿಂದ ಸಾಲ ಮಾಡಬೇಕೆಂದು ಯೋಚಿಸುತ್ತಿದ್ದೇನಾ? ಹೆಚ್ಚಿನ ಸಂದರ್ಭಗಳಲ್ಲಿ ಸಾಲ ಮಾಡುವುದಕ್ಕಿಂತ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಉತ್ತಮ.ಆದರೆ ಕೆಲವೊಮ್ಮೆ ಕಷ್ಟದ ಪರಿಸ್ಥಿತಿಯಲ್ಲಿ ಬೇರೆ ದಾರಿ ಇಲ್ಲದೆ ಸಾಲ ಮಾಡಲೇಬೇಕಾಗಿ ಬರಬಹುದು. ಇಂಥ ಪರಿಸ್ಥಿತಿಯಲ್ಲಿ ಸಾಲ ತೆಗೆದುಕೊಳ್ಳುವುದಾದರೆ ಕೊಟ್ಟ ಮಾತಿಗೆ ತಕ್ಕಂತೆ ತಪ್ಪದೇ ಸಾಲ ತೀರಿಸಬೇಕು. ಇದನ್ನು ಮಾಡುವುದಾದರೂ ಹೇಗೆ?
ಮೊದಲನೆಯದಾಗಿ, ನಿಮ್ಮ ಪರಿಚಯಸ್ಥನೊಬ್ಬನ ಬಳಿ ತುಂಬ ಹಣವಿದೆ ಅಂದ ಮಾತ್ರಕ್ಕೆ ಅವನ ಬಳಿ ಸಾಲ ಮಾಡುತ್ತಿರಬೇಡಿ. ಅಥವಾ ‘ಅವರ ಹತ್ತಿರ ಹಣವಿದೆಯಲ್ಲಾ, ನನಗೆ ಒಂಚೂರು ಸಹಾಯ ಮಾಡ್ಲಿ ಬಿಡು’ ಅಂತ ನೆನಸಬೇಡಿ. ಇಂಥ ವ್ಯಕ್ತಿಗೆ ಸಾಲ ತೀರಿಸುವಾಗ ‘ಸ್ವಲ್ಪ ಹಿಂದೆ ಮುಂದಾದರೆ ಪರವಾಗಿಲ್ಲ, ಅವರ ಹತ್ತಿರ ಹಣ ಕೊಳೆಯುತ್ತಾ ಇದೆಯಲ್ಲಾ’ ಅಂತನೂ ಯೋಚಿಸಬೇಡಿ. ‘ನಾನೂ ಅವರಷ್ಟೇ ಶ್ರೀಮಂತನಾಗಬೇಕು’ ಎನ್ನುವ ದುರಾಸೆ ಬೇಡ.—ಜ್ಞಾನೋಕ್ತಿ 28:22.
ಎರಡನೆಯದಾಗಿ, ತೆಗೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ತೀರಿಸಿ. ಸಾಲ ಕೊಟ್ಟವನು ‘ಯಾವಾಗ ಬೇಕಾದರೂ ಹಿಂತಿರುಗಿಸಬಹುದು’ ಎಂದು ಹೇಳಿದರೂ ನೀವು ಮಾತ್ರ ಎಷ್ಟು ಹಣವನ್ನು ಯಾವ್ಯಾವಾಗ ಕೊಡಬೇಕೆಂದು ಒಂದು ಪುಸ್ತಕದಲ್ಲಿ ಬರೆದಿಟ್ಟು, ಅದಕ್ಕೆ ತಕ್ಕಂತೆ ಹಣವನ್ನು ಹಿಂತಿರುಗಿಸುತ್ತಿರಿ. ನೀವು ಸಾಲ ತೆಗೆದುಕೊಂಡ ಕುರಿತು ಒಪ್ಪಂದ ಪತ್ರ ಮಾಡಿಟ್ಟುಕೊಳ್ಳಿ. ಇದರಿಂದ ಮುಂದೆ ಅಪಾರ್ಥಗಳು ಆಗದಂತೆ ತಡೆಯಬಹುದು. (ಯೆರೆಮಿಾಯ 32:9, 10) ಸಾಲವನ್ನು ಸ್ವತಃ ನೀವೇ ಹೋಗಿ ಹಿಂತಿರುಗಿಸಿದರೆ ಉತ್ತಮ. ಇದರಿಂದ ನೀವು ಅವನಿಗೆ ಕೃತಜ್ಞತೆ ತಿಳಿಸಲು ಸಾಧ್ಯವಾಗುತ್ತದೆ. ತಪ್ಪದೇ ಹಣವನ್ನು ಕೊಡಬೇಕೆಂಬ ಅರಿವು ನಿಮಗಿದ್ದರೆ ನಿಮ್ಮ ಮತ್ತು ಸಾಲ ಕೊಟ್ಟವನ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಯೇಸು ಪರ್ವತ ಪ್ರಸಂಗದಲ್ಲಿ ಹೀಗೆ ಹೇಳಿದನು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.” (ಮತ್ತಾಯ 5:37) ಇದು ಮಾತ್ರವಲ್ಲದೆ, “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು” ಎಂಬ ಸುವರ್ಣ ನಿಯಮವನ್ನು ಯಾವಾಗಲೂ ನೆನಪಿನಲ್ಲಿಡಿ.—ಮತ್ತಾಯ 7:12.
ಬೈಬಲಿನ ಮಾರ್ಗದರ್ಶನ
ಸಾಲವೆಂಬ ಚಟಕ್ಕೆ ಮದ್ದು ಬೈಬಲಿನಲ್ಲಿದೆ. “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ ಎಂಬುದಂತೂ ಖಂಡಿತ” ಎಂದು ಬೈಬಲ್ ಹೇಳುತ್ತದೆ. (1 ತಿಮೊಥೆಯ 6:6) ಸಾಲದಿಂದ ಶೂಲ ಎನ್ನುವ ಮಾತಿದೆ. ಆದರೆ ಇರುವುದರಲ್ಲೇ ತೃಪ್ತರಾಗಿದ್ದರೆ ಈ ಶೂಲದಿಂದ ತಪ್ಪಿಸಿಕೊಳ್ಳಬಹುದು. ‘ಇವತ್ತು, ಈ ಕ್ಷಣದಲ್ಲಿ ಚೆನ್ನಾಗಿದ್ದರೆ ಸಾಕು’ ಅನ್ನುವ ಮನೋಭಾವದ ಜನರ ಮಧ್ಯೆ ಜೀವಿಸುವಾಗ ಇರುವುದರಲ್ಲೇ ತೃಪ್ತರಾಗಿರುವುದಂತೂ ಕಷ್ಟ. ಆದರೆ ಇದನ್ನು ಮಾಡಲು “ದೇವಭಕ್ತಿ” ಸಹಾಯ ಮಾಡುತ್ತದೆ. ಹೇಗೆ?
ಇದನ್ನು ತಿಳಿದುಕೊಳ್ಳಲು ಏಷ್ಯಾದ ಒಬ್ಬ ದಂಪತಿಯ ಉದಾಹರಣೆಯನ್ನು ನೋಡಿ. ಮದುವೆಯ ಹೊಸದರಲ್ಲಿ, ಬೇರೆಯವರ ಮನೆ ನೋಡಿ ‘ನಮಗೂ ಒಂದು ಸ್ವಂತ ಮನೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವಾ’ ಎಂದವರು ಯೋಚಿಸುತ್ತಿದ್ದರು. ತಾವು ಉಳಿಸಿಟ್ಟ ಹಣದ ಜೊತೆ ಬ್ಯಾಂಕಿನಿಂದ ಮತ್ತು ಸಂಬಂಧಿಕರಿಂದ ಸಾಲ ಪಡೆದು ಒಂದು ಮನೆ ಖರೀದಿಸಿದರು. ಆದರೆ ನಂತರ ಅವರಿಗೆ ಪ್ರತಿ ತಿಂಗಳು ಆ ದೊಡ್ಡ ಮೊತ್ತದ ಕಂತನ್ನು ಕಟ್ಟುವುದೇ ತಲೆನೋವಾಯಿತು. ಸಾಲ ತೀರಿಸಬೇಕೆಂದು ಅವರು ಹೆಚ್ಚು ತಾಸು ಕೆಲಸ ಮಾಡಲು ಪ್ರಾರಂಭಿಸಿದರು. ಪರಿಣಾಮ ತಮ್ಮ ಮಕ್ಕಳಿಗೆ ಹೆಚ್ಚು ಸಮಯ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. “ಈ ಚಿಂತೆ, ನೋವಿನಿಂದ ಮತ್ತು ನಿದ್ದೆ ಇಲ್ಲದಿದ್ದರಿಂದ ನಮ್ಮ ತಲೆಯ ಮೇಲೆ ಒಂದು ದೊಡ್ಡ ಬೆಟ್ಟನೇ ಇರೋ ಥರ ಅನಿಸುತ್ತಿತ್ತು, ಉಸಿರು ಕಟ್ಟಿದ ಹಾಗೆ ಆಗುತ್ತಿತ್ತು” ಎಂದು ಗಂಡ ಹೇಳುತ್ತಾನೆ.
“ದೇವರ ದೃಷ್ಟಿಯಲ್ಲಿ ಆಸ್ತಿ, ಐಶ್ವರ್ಯ ಎಲ್ಲ ಶೂನ್ಯ. ನಾವೂ ಅದೇ ರೀತಿ ಯೋಚಿಸಿದರೆ ಸಮಸ್ಯೆಗಳಿರುವುದಿಲ್ಲ”
ಹೀಗಿರುವಾಗ ಅವರಿಗೆ, ಮೇಲೆ ತಿಳಿಸಲಾದ 1 ತಿಮೊಥೆಯ 6:6ರ ಮಾತು ನೆನಪಾಯಿತು. ಆಗ ಅವರು ಮನೆಯನ್ನು ಮಾರಲು ನಿರ್ಣಯಿಸಿದರು. ಸಾಲದ ಹೊರೆಯಿಂದ ಮುಕ್ತರಾಗಲು ಅವರಿಗೆ ಎರಡು ವರ್ಷ ಹಿಡಿಯಿತು. ಈ ಕಹಿ ಅನುಭವದಿಂದ ಆ ದಂಪತಿ ಏನನ್ನು ಕಲಿತರು? “ದೇವರ ದೃಷ್ಟಿಯಲ್ಲಿ ಆಸ್ತಿ, ಐಶ್ವರ್ಯ ಎಲ್ಲ ಶೂನ್ಯ. ನಾವೂ ಅದೇ ರೀತಿ ಯೋಚಿಸಿದರೆ ಸಮಸ್ಯೆಗಳಿರುವುದಿಲ್ಲ” ಎಂದವರು ಹೇಳುತ್ತಾರೆ.
ಈ ಲೇಖನದ ಆರಂಭದಲ್ಲಿ ತಿಳಿಸಲಾದ ಸ್ವಾಹೀಲಿ ಗಾದೆ ಅನೇಕರಿಗೆ ಚಿರಪರಿಚಿತ. ಆದರೂ ಆ ಗಾದೆ ಜನರು ಸಾಲ ಮಾಡುವುದನ್ನು ನಿಲ್ಲಿಸಲು ಸಹಾಯ ಮಾಡಿಲ್ಲ. ಆದರೆ ಸಾಲದ ಬಗ್ಗೆ ಬೈಬಲ್ ಕೊಡುವ ಮಾರ್ಗದರ್ಶನವನ್ನು ಪಾಲಿಸುವುದಾದರೆ ನಮ್ಮ ಬಾಳು ಬಂಗಾರವಾಗುವುದಂತೂ ಖಚಿತ. ಹಾಗಾಗಿ ಬಾಳು ಬರಡು ಮಾಡಿಕೊಳ್ಳುವಿರೋ ಅಥವಾ ಬಂಗಾರವಾಗಿಸಿಕೊಳ್ಳುವಿರೋ, ನಿರ್ಧಾರ ನಿಮ್ಮ ಕೈಯಲ್ಲಿದೆ. ▪ (w14-E 12/01)