ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ?

ಪ್ರಾರ್ಥನೆ​​—⁠ಇದರಿಂದ ನಮಗೇನು ಪ್ರಯೋಜನ?

ಪ್ರಾರ್ಥನೆ​​—⁠ಇದರಿಂದ ನಮಗೇನು ಪ್ರಯೋಜನ?

ಯಾವುದೇ ಕೆಲಸಕ್ಕೆ ಕೈ ಹಾಕುವ ಮುಂಚೆ ನಾವೆಲ್ಲರೂ ಸಾಮಾನ್ಯವಾಗಿ ‘ಇದರಿಂದೇನು ಪ್ರಯೋಜನ?’ ಅಂತ ಯೋಚಿಸುತ್ತೇವೆ. ಅದೇ ರೀತಿ, ಪ್ರಾರ್ಥನೆ ಮಾಡುವುದರಿಂದ ನಮಗೇನು ಪ್ರಯೋಜನ ಅಂತ ಯೋಚಿಸಿದರೆ ನಾವು ಸ್ವಾರ್ಥಿಗಳು ಅಂತಾಗುತ್ತಾ? ಇಲ್ಲ. ಆ ರೀತಿ ಯೋಚಿಸುವುದರಲ್ಲಿ ತಪ್ಪೇನಿಲ್ಲ.

ಹಿಂದಿನ ಮೂರು ಲೇಖನಗಳಲ್ಲಿ ಕಲಿತಂತೆ, ಪ್ರಾರ್ಥನೆ ಅನ್ನುವುದು ಕೇವಲ ಒಂದು ಧಾರ್ಮಿಕ ಚಟುವಟಿಕೆ ಅಥವಾ ಮಾನಸಿಕ ಚಿಕಿತ್ಸೆ ಅಲ್ಲ. ದೇವರು ನಿಜವಾಗಿಯೂ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ. ಸರಿಯಾದ ರೀತಿಯಲ್ಲಿ ಸರಿಯಾದ ವಿಷಯಗಳಿಗಾಗಿ ಪ್ರಾರ್ಥಿಸುವುದಾದರೆ ಆತನು ಕಿವಿಗೊಡುತ್ತಾನೆ. ಅಷ್ಟೇ ಅಲ್ಲದೆ, ನಾವು ಆತನಿಗೆ ಹತ್ತಿರವಾಗಬೇಕೆಂದು ಸ್ವತಃ ಆತನೇ ಬಯಸುತ್ತಾನೆ. (ಯಾಕೋಬ 4:8) ಹಾಗಾಗಿ, ಪ್ರಾರ್ಥನೆ ಮಾಡುವುದರಿಂದ ನಮಗೇನು ಪ್ರಯೋಜನ ಎಂದು ಈಗ ನೋಡೋಣ.

ನೆಮ್ಮದಿ.

ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ನಿಮಗೆ ತುಂಬ ಚಿಂತೆಯಾಗಿದೆಯಾ? ಇಂಥ ಸಮಯದಲ್ಲಿ “ಎಡೆಬಿಡದೆ ಪ್ರಾರ್ಥನೆಮಾಡಿರಿ” ಮತ್ತು “ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ” ಎಂದು ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. (1 ಥೆಸಲೊನೀಕ 5:17; ಫಿಲಿಪ್ಪಿ 4:6) ಹೀಗೆ ಮಾಡಿದರೆ ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಮ್ಮ ಹೃದಯಗಳನ್ನೂ, ಮಾನಸಿಕ ಶಕ್ತಿಗಳನ್ನೂ ಕಾಯುವುದು’ ಎಂದು ಬೈಬಲ್‌ ಆಶ್ವಾಸನೆ ಸಹ ನೀಡುತ್ತದೆ. (ಫಿಲಿಪ್ಪಿ 4:7) ನಮ್ಮ ಚಿಂತೆಗಳನ್ನೆಲ್ಲಾ ಪರಲೋಕದಲ್ಲಿರುವ ನಮ್ಮ ತಂದೆಯ ಹತ್ತಿರ ಹೇಳಿಕೊಂಡರೆ ಮನಸ್ಸಿಗೆ ಹಾಯೆನಿಸುತ್ತದೆ. ಈ ರೀತಿ ಹೇಳಿಕೊಳ್ಳಿ ಎಂದು ಸ್ವತಃ ಆತನೇ ಹೇಳಿದ್ದಾನೆ. “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು” ಎಂದು ಕೀರ್ತನೆ 55:22 ರಲ್ಲಿ ತಿಳಿಸಲಾಗಿದೆ.

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”—ಕೀರ್ತನೆ 55:22.

ಅಸಂಖ್ಯಾತ ಜನರು ಪ್ರಾರ್ಥನೆ ಮಾಡಿ ನೆಮ್ಮದಿ ಅಥವಾ ಮನಶ್ಶಾಂತಿಯನ್ನು ಪಡೆದಿದ್ದಾರೆ. ದಕ್ಷಿಣ ಕೊರಿಯಾದ ಹೀ ರಾನ್‌ ಹೀಗೆ ಹೇಳುತ್ತಾಳೆ: “ನನಗೆ ತುಂಬ ದೊಡ್ಡ ಸಮಸ್ಯೆಗಳೇ ಇರುವುದಾದರೂ, ಅವುಗಳ ಬಗ್ಗೆ ಒಂದು ಸಲ ಪ್ರಾರ್ಥಿಸಿದರೆ ಸಾಕು, ನನಗೆಷ್ಟೋ ಹಾಯೆನಿಸುತ್ತದೆ. ಅವುಗಳನ್ನು ಎದುರಿಸಲು ನನಗೆ ಬಲ ಸಿಗುತ್ತದೆ.” ಸೆಸೀಲ್ಯಾ ಎಂಬ ಫಿಲಿಪೀನ್ಸ್‌ನ ಸ್ತ್ರೀ ಹೀಗೆ ಹೇಳುತ್ತಾಳೆ: “ಒಬ್ಬ ತಾಯಿಯಾಗಿ ನಾನು ನನ್ನ ಹೆಣ್ಣು ಮಕ್ಕಳ ಬಗ್ಗೆ ಮತ್ತು ನನ್ನನ್ನು ಗುರುತು ಹಿಡಿಯಲಿಕ್ಕಾಗದ ಪರಿಸ್ಥಿತಿಯಲ್ಲಿರುವ ನನ್ನ ಅಮ್ಮನ ಬಗ್ಗೆ ತುಂಬ ಚಿಂತೆ ಮಾಡುತ್ತೇನೆ. ಆದರೆ ಪ್ರಾರ್ಥನೆ ಮಾಡುವುದರಿಂದ ಜೀವನದಲ್ಲಿ ಚಿಂತೆಗಳು ಕಡಿಮೆಯಾಗಿ ದಿನಗಳನ್ನು ದೂಡಲು ಸಾಧ್ಯವಾಗುತ್ತಿದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಯೆಹೋವನು ನನಗೆ ಸಹಾಯ ಮಾಡೇ ಮಾಡುತ್ತಾನೆ ಎಂಬ ನಂಬಿಕೆ ನನಗಿದೆ.”

ಕಷ್ಟಗಳು ಎದುರಾದಾಗ ಬಲ ಮತ್ತು ಸಾಂತ್ವನ.

ಪ್ರಾಣಕ್ಕೆ ಅಪಾಯ ತರುವ ಅಥವಾ ತುಂಬ ನೋವಿನ ಪರಿಸ್ಥಿತಿಯಿಂದಾಗಿ ನಿಮಗೆ ಹೇಳಲಾಗದಷ್ಟು ಚಿಂತೆಯಾಗುತ್ತಿದೆಯಾ? ಹಾಗಾದರೆ, ‘ಸಕಲ ಸಾಂತ್ವನದ ದೇವರಾದ’ ಯೆಹೋವನಿಗೆ ಪ್ರಾರ್ಥಿಸಿ, ಎಷ್ಟೋ ನೆಮ್ಮದಿ ಸಿಗುತ್ತದೆ. “ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ” ಎನ್ನುತ್ತದೆ ಬೈಬಲ್‌. (2 ಕೊರಿಂಥ 1:3, 4) ಉದಾಹರಣೆಗೆ, ಒಮ್ಮೆ ಯೇಸು ತುಂಬ ದುಃಖದಲ್ಲಿದ್ದಾಗ ‘ಮೊಣಕಾಲೂರಿ ಪ್ರಾರ್ಥಿಸಿದನು.’ ಪ್ರಯೋಜನ? “ಸ್ವರ್ಗದಿಂದ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡು ಅವನನ್ನು ಬಲಪಡಿಸಿದನು.” (ಲೂಕ 22:41, 43) ಇನ್ನೊಬ್ಬ ನಂಬಿಗಸ್ತ ವ್ಯಕ್ತಿಯಾಗಿದ್ದ ನೆಹೆಮೀಯನಿಗೆ ಅವನು ಮಾಡುತ್ತಿದ್ದ ದೇವರ ಕೆಲಸವನ್ನು ನಿಲ್ಲಿಸುವಂತೆ ದುಷ್ಟ ಜನರು ಬೆದರಿಕೆ ಹಾಕಿದರು. ಆಗ ಅವನು “ನನ್ನ ಕೈಗಳನ್ನು ಬಲಪಡಿಸು” ಎಂದು ಪ್ರಾರ್ಥಿಸಿದನು. ಅದರ ನಂತರ ನಡೆದ ಘಟನೆಗಳನ್ನು ಪರಿಶೀಲಿಸಿದರೆ ಭಯವನ್ನು ಮೆಟ್ಟಿನಿಲ್ಲಲು ಮತ್ತು ತನ್ನ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ದೇವರು ಅವನಿಗೆ ಸಹಾಯ ಮಾಡಿದನು ಎಂದು ತಿಳಿಯುತ್ತದೆ. (ನೆಹೆಮೀಯ 6:9-16) ಪ್ರಾರ್ಥನೆ ಮಾಡಿದಾಗ ತನಗಾಗುವ ಅನುಭವವನ್ನು ಘಾನದ ರೆಜನಲ್ಡ್‌ ಹೀಗೆ ಹೇಳುತ್ತಾನೆ: “ತುಂಬ ಕಷ್ಟದ ಸಮಯದಲ್ಲಿ ಪ್ರಾರ್ಥಿಸಿದಾಗ ಸಹಾಯ ಮಾಡುವ ಸಾಮರ್ಥ್ಯ ಇರುವ ಒಬ್ಬ ವ್ಯಕ್ತಿಯೊಂದಿಗೆ ನನ್ನ ಕಷ್ಟಗಳನ್ನು ಹೇಳಿಕೊಂಡಂತೆ ಮತ್ತು ಭಯಪಡುವ ಅಗತ್ಯ ಇಲ್ಲ ಅಂತ ಆತನು ನನಗೆ ಆಶ್ವಾಸನೆ ಕೊಟ್ಟಂತೆ ಅನಿಸುತ್ತದೆ.” ನಾವು ಪ್ರಾರ್ಥಿಸುವುದಾದರೆ ದೇವರು ನಮಗೆ ಖಂಡಿತ ಸಾಂತ್ವನ ನೀಡುತ್ತಾನೆ.

ದೇವರಿಂದ ವಿವೇಕ.

ನಾವು ಮಾಡುವ ಕೆಲವು ನಿರ್ಣಯಗಳು ನಮ್ಮ ಮೇಲೆ ಮತ್ತು ನಮ್ಮ ಪ್ರಿಯರ ಮೇಲೆ ಜೀವನದುದ್ದಕ್ಕೂ ಪ್ರಭಾವ ಬೀರಬಹುದು. ಹಾಗಾದರೆ ಸರಿಯಾದ ನಿರ್ಣಯಗಳನ್ನು ಹೇಗೆ ಮಾಡಬಹುದು? “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ [ಮುಖ್ಯವಾಗಿ ಸಮಸ್ಯೆಗಳನ್ನು ಎದುರಿಸುವಾಗ] ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 1:5) ನಾವು ವಿವೇಕಕ್ಕಾಗಿ ಪ್ರಾರ್ಥಿಸುವುದಾದರೆ ದೇವರು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿ ಸರಿಯಾದ ನಿರ್ಣಯಗಳನ್ನು ಮಾಡುವಂತೆ ನಮ್ಮನ್ನು ಮಾರ್ಗದರ್ಶಿಸುತ್ತಾನೆ. ನಾವು ನೇರವಾಗಿ, ಪವಿತ್ರಾತ್ಮದ ಸಹಾಯವನ್ನು ಕೊಡುವಂತೆ ಸಹ ಪ್ರಾರ್ಥಿಸಬಹುದು. ಯಾಕೆಂದರೆ, ‘ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಪವಿತ್ರಾತ್ಮವನ್ನು ಕೊಡುತ್ತಾನೆ’ ಎಂದು ಯೇಸುವೇ ಹೇಳಿದ್ದಾನೆ.—ಲೂಕ 11:13.

“ಸರಿಯಾದ ನಿರ್ಣಯ ಮಾಡಲು ಸಹಾಯಕ್ಕಾಗಿ ನಾನು ದೇವರಿಗೆ ಎಡೆಬಿಡದೆ ಪ್ರಾರ್ಥಿಸಿದೆ.”—ಕ್ವಾಬೆನಾ, ಘಾನ

ಪ್ರಾಮುಖ್ಯವಾದ ನಿರ್ಣಯಗಳನ್ನು ಮಾಡಬೇಕಿದ್ದಾಗ ಯೇಸು ಸಹ ತನ್ನ ತಂದೆಯ ಸಹಾಯವನ್ನು ಕೇಳಿದನು. 12 ಮಂದಿಯನ್ನು ತನ್ನ ಶಿಷ್ಯರನ್ನಾಗಿ ಆರಿಸುವ ಮುಂಚೆ “ಇಡೀ ರಾತ್ರಿ ದೇವರಿಗೆ ಪ್ರಾರ್ಥನೆಮಾಡುತ್ತಾ ಕಳೆದನು” ಎನ್ನುತ್ತದೆ ಬೈಬಲ್‌.—ಲೂಕ 6:12.

ಯೇಸುವಿನಂತೆ ಇಂದು ಅನೇಕರಿಗೆ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬ ಪೂರ್ಣ ಭರವಸೆ ಇದೆ. ಯಾಕೆಂದರೆ, ಸರಿಯಾದ ನಿರ್ಣಯಗಳನ್ನು ಮಾಡಲು ಸಹಾಯಕ್ಕಾಗಿ ಕೇಳಿಕೊಂಡಾಗ ದೇವರು ತಮಗೂ ಸಹಾಯ ಮಾಡಿದ್ದನ್ನು ಅವರು ಈಗಾಗಲೇ ನೋಡಿದ್ದಾರೆ. ಫಿಲಿಪೀನ್ಸ್‌ನ ರೆಜೀನಾ ತನಗೆ ಯಾವೆಲ್ಲಾ ಕಷ್ಟಗಳು ಎದುರಾದವೆಂದು ತಿಳಿಸುತ್ತಾಳೆ. ಆಕೆಯ ಗಂಡ ತೀರಿಹೋದಾಗ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆಯ ಮೇಲೆ ಬಂತು, ಕೆಲಸವನ್ನು ಕಳೆದುಕೊಂಡಳು, ಮಕ್ಕಳನ್ನು ಬೆಳೆಸುವಾಗ ಅನೇಕ ಸಮಸ್ಯೆಗಳು ಎದುರಾದವು. ಇಂಥ ಸಮಯಗಳಲ್ಲಿ ಸರಿಯಾದ ನಿರ್ಣಯ ಮಾಡಲು ಆಕೆಗೆ ಯಾವುದು ಸಹಾಯ ಮಾಡಿತು? “ನಾನು ಪ್ರಾರ್ಥನೆ ಮಾಡುವ ಮೂಲಕ ಯೆಹೋವನನ್ನು ಅವಲಂಬಿಸಿದೆ” ಎನ್ನುತ್ತಾಳೆ ಆಕೆ. ಘಾನದ ಕ್ವಾಬೆನಾ ಎಂಬಾತನು ಕೈತುಂಬ ಸಂಬಳ ನೀಡುವ ನಿರ್ಮಾಣ ಕೆಲಸವನ್ನು ಕಳೆದುಕೊಂಡಾಗ ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದನು. “ಸರಿಯಾದ ನಿರ್ಣಯ ಮಾಡಲು ಸಹಾಯಕ್ಕಾಗಿ ನಾನು ದೇವರಿಗೆ ಎಡೆಬಿಡದೆ ಪ್ರಾರ್ಥಿಸಿದೆ. ನನ್ನ ಆಧ್ಯಾತ್ಮಿಕ ಮತ್ತು ಶಾರೀರಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಅನುಮತಿಸುವಂಥ ಕೆಲಸವನ್ನು ಆರಿಸುವಂತೆ ಯೆಹೋವನು ನನಗೆ ಸಹಾಯ ಮಾಡಿದ್ದಾನೆ” ಎಂದವನು ಹೇಳುತ್ತಾನೆ. ದೇವರೊಂದಿಗಿನ ನಿಮ್ಮ ಸಂಬಂಧವನ್ನು ಪ್ರಭಾವಿಸುವಂಥ ನಿರ್ಣಯಗಳನ್ನು ಮಾಡುವಾಗ ನೀವು ಸಹ ಸಹಾಯಕ್ಕಾಗಿ ಪ್ರಾರ್ಥಿಸಬಹುದು.

ಪ್ರಾರ್ಥನೆಯ ಕೆಲವೇ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. (ಹೆಚ್ಚಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು “ ಪ್ರಾರ್ಥನೆಯ ಪ್ರಯೋಜನಗಳು” ಎಂಬ ಚೌಕವನ್ನು ನೋಡಿ.) ಈ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ಮೊದಲಾಗಿ ನೀವು ದೇವರ ಬಗ್ಗೆ ಮತ್ತು ಆತನ ಚಿತ್ತದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಇದನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ, ಬೈಬಲನ್ನು ಕಲಿಯಲು ಸಹಾಯ ಮಾಡುವಂತೆ ಯೆಹೋವನ ಸಾಕ್ಷಿಗಳಿಗೆ ಹೇಳಿ. * ‘ಪ್ರಾರ್ಥನೆಯನ್ನು ಕೇಳುವವನಿಗೆ’ ಹತ್ತಿರವಾಗಲು ಇದೇ ಮೊದಲ ಹೆಜ್ಜೆ.—ಕೀರ್ತನೆ 65:2. ▪ (w15-E 10/01)

^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ www.mt1130.com ವೆಬ್‌ಸೈಟನ್ನು ನೋಡಿ.