ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಕುರಿತ ಸತ್ಯ

ದೇವರ ಕುರಿತ ಸತ್ಯ

“ಮನುಷ್ಯರು ದೇವರ ಬಗ್ಗೆ ತಿಳಿದುಕೊಳ್ಳೋಕೆ ಸಾಧ್ಯನೇ ಇಲ್ಲ!” —ಫೀಲೋ, ಅಲೆಕ್ಸಾಂಡ್ರಿಯಾ, ಮೊದಲನೇ ಶತಮಾನದ ತತ್ವಜ್ಞಾನಿ.

‘ಆತನು [ದೇವರು] ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.’ —ತಾರ್ಸದ ಸೌಲ, ಮೊದಲ ಶತಮಾನದಲ್ಲಿ ಅಥೆನ್ಸಿನ ತತ್ವಜ್ಞಾನಿಗಳಿಗೆ ಹೇಳಿದ್ದು.

ಮೇಲಿನ ಎರಡು ಮಾತುಗಳಲ್ಲಿ ಯಾವುದು ನಿಮಗೆ ಸರಿ ಅನಿಸುತ್ತೆ? ತಾರ್ಸದ ಸೌಲನು ಹೇಳಿದ ಮಾತು ಅನೇಕರ ಹೃದಯ ಸ್ಪರ್ಶಿಸಿ ಸಾಂತ್ವನ ನೀಡಿದೆ. (ಅಪೊಸ್ತಲರ ಕಾರ್ಯಗಳು 17:26, 27) ಈ ಮಾತನ್ನು ಒಪ್ಪುವಂತಹ ಇನ್ನೂ ಅನೇಕ ಮಾತುಗಳು ಬೈಬಲಿನಲ್ಲಿವೆ. ಉದಾಹರಣೆಗೆ, ಯೇಸು ಪ್ರಾರ್ಥನೆಯಲ್ಲಿ, ತನ್ನ ಶಿಷ್ಯರು ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಆತನಿಂದ ಆಶೀರ್ವಾದ ಪಡೆದುಕೊಳ್ಳಲು ಸಾಧ್ಯವಿದೆ ಎಂಬ ಆಶ್ವಾಸನೆ ಕೊಟ್ಟನು.—ಯೋಹಾನ 17:3.

ಆದರೆ ಫೀಲೋರಂತಹ ತತ್ವಜ್ಞಾನಿಗಳ ಅಭಿಪ್ರಾಯವೇ ಬೇರೆ. ದೇವರು ನಮ್ಮ ಊಹೆಗೂ ಮೀರಿದವನಾಗಿರುವುದರಿಂದ ಆತನನ್ನು ನಾವು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ಅನ್ನುವುದು ಅವರ ಅಭಿಪ್ರಾಯ. ಹಾಗಾದರೆ, ಸತ್ಯ ಏನು?

ದೇವರ ಬಗ್ಗೆ ಕೆಲವು ವಿಷಯಗಳನ್ನು ಮನುಷ್ಯರು ಅರ್ಥಮಾಡಿಕೊಳ್ಳಲು ಆಗಲ್ಲ ಅಂತ ಬೈಬಲ್‌ ಕೂಡ ಹೇಳುತ್ತದೆ. ಉದಾಹರಣೆಗೆ, ದೇವರ ಅಸ್ತಿತ್ವ, ಆತನಲ್ಲಿರುವ ವಿವೇಕ ಮತ್ತು ಆತನ ಯೋಚನಾ ಸಾಮರ್ಥ್ಯ. ಇವು ನಮ್ಮ ಊಹೆಗೂ ಮೀರಿದ್ದು. ಆದರೆ ಈ ವಿಷಯಗಳನ್ನು ತಿಳಿದುಕೊಳ್ಳಲು ಆಗಲ್ಲ ಎಂದ ಮಾತ್ರಕ್ಕೆ ದೇವರ ಬಗ್ಗೆ ಏನೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಅಂತಲ್ಲ. ನಿಜ ಏನೆಂದರೆ, ಈ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇದ್ದರೆ ನಾವು ‘ದೇವರಿಗೆ ಆಪ್ತರಾಗುತ್ತೇವೆ.’ (ಯಾಕೋಬ 4:8) ಹಾಗೆ ಧ್ಯಾನಿಸಬಹುದಾದ ಕೆಲವು ವಿಷಯಗಳನ್ನು ನಾವೀಗ ನೋಡೋಣ. ನಂತರ ದೇವರ ಬಗ್ಗೆ ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿರುವ ವಿಷಯಗಳನ್ನು ಚರ್ಚಿಸೋಣ.

ದೇವರ ಬಗ್ಗೆ ತಿಳಿದುಕೊಳ್ಳಲು ಆಗದಿರುವ ವಿಷಯಗಳು

ದೇವರ ಅಸ್ತಿತ್ವ: ದೇವರು ‘ಯುಗಯುಗಾಂತರಗಳಿಂದಲೂ’ ಅಸ್ತಿತ್ವದಲ್ಲಿದ್ದಾನೆಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 90:2) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ದೇವರಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅಸಂಖ್ಯಾತ ವರ್ಷಗಳಿಂದ ದೇವರು ಅಸ್ತಿತ್ವದಲ್ಲಿರುವುದರಿಂದ ಮನುಷ್ಯರು ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.—ಯೋಬ 36:26.

ಇದರಿಂದ ನಮಗಾಗುವ ಪ್ರಯೋಜನ: ತನ್ನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವವರಿಗೆಲ್ಲಾ ಸದಾಕಾಲ ಜೀವಿಸುವ ಆಶೀರ್ವಾದವನ್ನು ಯೆಹೋವ ದೇವರು ಕೊಡುತ್ತಾನೆ. (ಯೋಹಾನ 17:3) ನಮಗೆ ಸದಾಕಾಲ ಜೀವಿಸುವ ಆಶೀರ್ವಾದ ಕೊಟ್ಟು, ಆತನೇ ಶಾಶ್ವತವಾಗಿ ಜೀವಿಸುವುದಿಲ್ಲ ಅಂದರೆ ಆತನ ಮಾತಲ್ಲಿ ನಂಬಿಕೆ ಇಡಲು ಆಗುತ್ತಾ? ಇಲ್ಲ ತಾನೇ. ದೇವರು ‘ನಿತ್ಯತೆಯ ಅರಸನಾಗಿರುವುದರಿಂದ’ ನಾವು ಸದಾಕಾಲ ಜೀವಿಸುವಂತೆ ಮಾಡಬಲ್ಲನು.—1 ತಿಮೊಥೆಯ 1:17.

ದೇವರ ವಿವೇಕ: ಯೆಹೋವ ದೇವರ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ಉನ್ನತವಾಗಿರುವುದರಿಂದ “ಆತನ ವಿವೇಕವು ಪರಿಶೋಧನೆಗೆ ಅಗಮ್ಯ” ಎಂದು ಬೈಬಲ್‌ ಹೇಳುತ್ತದೆ. (ಯೆಶಾಯ 40:28; 55:9) ಆದ್ದರಿಂದ ದೇವರ ಮನಸ್ಸನ್ನು ತಿಳಿದುಕೊಂಡು, ಆತನಿಗೆ ಉಪದೇಶಿಸಲು ಯಾರಿಂದಲೂ ಸಾಧ್ಯವಿಲ್ಲ.—1 ಕೊರಿಂಥ 2:16.

ಇದರಿಂದ ನಮಗಾಗುವ ಪ್ರಯೋಜನ: ದೇವರಿಗೆ ಇಂತಹ ಅಸಾಮಾನ್ಯ ಶಕ್ತಿ ಇರುವುದರಿಂದ ಕೋಟಿಗಟ್ಟಲೆ ಜನರ ಪ್ರಾರ್ಥನೆಗಳನ್ನು ಒಂದೇ ಸಮಯದಲ್ಲಿ ಕೇಳಬಲ್ಲನು. (ಕೀರ್ತನೆ 65:2) ಯಾವತ್ತಾದರೂ ದೇವರು ತನಗೆ ಕೆಲಸ ಜಾಸ್ತಿಯಾಗಿ ನಮ್ಮ ಪ್ರಾರ್ಥನೆಗಳನ್ನು ಕೇಳದೆ ಇದ್ದಾನಾ? ಖಂಡಿತ ಇಲ್ಲ. ಕಾರಣ ಆತನ ಶಕ್ತಿ-ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ. ದೇವರಿಗೆ ಸಣ್ಣ-ಪುಟ್ಟ ಪಕ್ಷಿಗಳ ಬಗ್ಗೆಯೂ ಗೊತ್ತಿದೆ. ಹಾಗಾಗಿ “ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು,” ಚಿಂತಿಸಬೇಡಿ ಎಂದು ಯೇಸು ಹೇಳಿದ್ದಾನೆ.—ಮತ್ತಾಯ 10:29, 31.

ದೇವರ ಕಾರ್ಯವಿಧಾನ: ‘ಆದಿಯಿಂದ ಅಂತ್ಯದವರೆಗೂ ತನ್ನ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸದಂತೆ ದೇವರು ಮಾಡಿದ್ದಾನೆ’ ಎಂದು ಬೈಬಲ್‌ ಹೇಳುತ್ತದೆ. (ಪ್ರಸಂಗಿ 3:11) ಆದ್ದರಿಂದ ಎಂದಿಗೂ ನಾವು ದೇವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ದೇವರ ಮಾರ್ಗಗಳ ಹಿಂದಿರುವ ವಿವೇಕವನ್ನು ‘ಕಂಡುಹಿಡಿಯುವುದು ಅಸಾಧ್ಯ!’ (ರೋಮನ್ನರಿಗೆ 11:33) ಆದರೂ ತನ್ನನ್ನು ಪ್ರೀತಿಸುವ ಜನರಿಗೆ ತನ್ನ ಕಾರ್ಯವಿಧಾನಗಳನ್ನು ತಿಳಿಸಬೇಕೆಂದು ದೇವರೇ ಬಯಸುತ್ತಾನೆ.—ಆಮೋಸ 3:7.

ದೇವರ ಅಸ್ತಿತ್ವ, ಆತನಲ್ಲಿರುವ ವಿವೇಕ ಮತ್ತು ಆತನ ಯೋಚನಾ ಸಾಮರ್ಥ್ಯ, ಇವು ನಮ್ಮ ಊಹೆಗೂ ಮೀರಿದ್ದು

ಇದರಿಂದ ನಮಗಾಗುವ ಪ್ರಯೋಜನ: ನೀವು ಬೈಬಲನ್ನು ಓದಿ ಅಧ್ಯಯನ ಮಾಡುತ್ತಾ ಇದ್ದರೆ, ದೇವರ ಬಗ್ಗೆ ಹೊಸ ಹೊಸ ವಿಷಯಗಳನ್ನು ಮತ್ತು ಆತನ ಕಾರ್ಯವಿಧಾನಗಳನ್ನು ಕಲಿಯುತ್ತೀರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗೆ ಮಾಡುವಾಗ ನಾವು ದೇವರಿಗೆ ಹಿಂದೆಂದಿಗಿಂತಲೂ ಹೆಚ್ಚು ಆಪ್ತರಾಗುತ್ತೇವೆ.

ದೇವರ ಬಗ್ಗೆ ತಿಳಿದುಕೊಳ್ಳಲು ಆಗುವ ವಿಷಯಗಳು

ದೇವರ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಎಂದ ಮಾತ್ರಕ್ಕೆ ನಾವು ದೇವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯನೇ ಇಲ್ಲ ಅಂತಲ್ಲ. ದೇವರ ಬಗ್ಗೆ ತಿಳಿದುಕೊಳ್ಳಲು ನೆರವಾಗುವಂಥ ತುಂಬಾ ವಿಷಯಗಳು ಬೈಬಲಿನಲ್ಲಿವೆ. ಅವುಗಳಲ್ಲಿ ಕೆಲವನ್ನು ಈಗ ನೋಡೋಣ.

ದೇವರ ಹೆಸರು: ದೇವರಿಗೆ ಒಂದು ಹೆಸರಿದೆ. “ನಾನೇ ಯೆಹೋವನು; ಇದೇ ನನ್ನ ನಾಮ” ಎಂದು ಬೈಬಲಿನಲ್ಲಿ ಆತನೇ ತಿಳಿಸಿದ್ದಾನೆ. ಬೈಬಲಿನಲ್ಲಿ ಅತೀ ಹೆಚ್ಚು ಬಾರಿ ಕಂಡುಬರುವ ಹೆಸರು ಇದೇ ಆಗಿದೆ. ಇದನ್ನು ಸುಮಾರು 7,000 ಬಾರಿ ಉಪಯೋಗಿಸಲಾಗಿದೆ.—ಯೆಶಾಯ 42:8.

ಇದರಿಂದ ನಮಗಾಗುವ ಪ್ರಯೋಜನ: ಮಾದರಿ ಪ್ರಾರ್ಥನೆಯಲ್ಲಿ ಯೇಸು, “ಸ್ವರ್ಗದಲ್ಲಿರುವ ನಮ್ಮ ತಂದೆಯೇ ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ಹೇಳಿದನು. (ಮತ್ತಾಯ 6:9) ನೀವೂ ನಿಮ್ಮ ಪ್ರಾರ್ಥನೆಗಳಲ್ಲಿ ದೇವರ ಹೆಸರನ್ನು ಉಪಯೋಗಿಸುತ್ತೀರೋ? ಯಾರು ತನ್ನ ಹೆಸರಿಗೆ ಗೌರವ ಕೊಡುತ್ತಾರೋ ಅಂತವರೆಲ್ಲರನ್ನೂ ಕಾಪಾಡಬೇಕೆನ್ನುವುದು ಯೆಹೋವ ದೇವರ ಬಯಕೆ.—ರೋಮನ್ನರಿಗೆ 10:13.

ದೇವರ ವಾಸಸ್ಥಾನ: ಬೈಬಲ್‌ ಎರಡು ವಾಸಸ್ಥಾನಗಳ ಬಗ್ಗೆ ಹೇಳುತ್ತದೆ. ಒಂದು, ಆತ್ಮಜೀವಿಗಳ ವಾಸಸ್ಥಾನ ಅಂದರೆ ಪರಲೋಕ, ಇನ್ನೊಂದು ವಿಶ್ವ. ಇದರಲ್ಲಿ ನಮ್ಮ ಭೂಮಿಯೂ ಸೇರಿದೆ. (ಯೋಹಾನ 8:23; 1 ಕೊರಿಂಥ 15:44) ಬೈಬಲಿನಲ್ಲಿ “ಪರಲೋಕ” ಎಂದು ಹೇಳಿದಾಗೆಲ್ಲ ಅದು ಆತ್ಮಜೀವಿಗಳು ಜೀವಿಸುವ ಸ್ಥಳವನ್ನು ಸೂಚಿಸುತ್ತದೆ. ಹಾಗಾಗಿ ‘ದೇವರ ನಿವಾಸ ಪರಲೋಕದಲ್ಲಿದೆ.’—1 ಅರಸುಗಳು 8:43.

ಇದರಿಂದ ನಮಗಾಗುವ ಪ್ರಯೋಜನ: ದೇವರ ಬಗ್ಗೆ ನಿಮಗೆ ಸ್ಪಷ್ಟ ಮಾಹಿತಿ ಸಿಗುತ್ತದೆ. ದೇವರು ಎಲ್ಲಾ ಕಡೆಗಳಲ್ಲಿ, ವಸ್ತುಗಳಲ್ಲಿ ಇಲ್ಲ ಅಂತ ಇದರಿಂದ ಗೊತ್ತಾಗುತ್ತದೆ. ಯೆಹೋವ ದೇವರು ಒಬ್ಬ ನೈಜ ವ್ಯಕ್ತಿ. ಆತನು ನಿಜವಾದ ಸ್ಥಳದಲ್ಲಿ ವಾಸಿಸುತ್ತಾನೆ. ಆತನು ಪರಲೋಕದಲ್ಲಿರುವುದಾದರೂ “ಆತನ ದೃಷ್ಟಿಗೆ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.”—ಇಬ್ರಿಯ 4:13.

ದೇವರ ವ್ಯಕ್ತಿತ್ವ: ದೇವರಲ್ಲಿ ಅನೇಕ ಆಕರ್ಷಕವಾದ ಗುಣಗಳಿವೆ ಎಂದು ಬೈಬಲ್‌ ಹೇಳುತ್ತದೆ. ಉದಾಹರಣೆಗೆ, ‘ದೇವರು ಪ್ರೀತಿಸ್ವರೂಪಿ.’ (1 ಯೋಹಾನ 4:8) ಆತನು ಸುಳ್ಳಾಡುವವನಲ್ಲ. (ತೀತ 1:2) ನಿಷ್ಪಕ್ಷಪಾತ, ಕನಿಕರ, ದಯೆ ಮತ್ತು ದೀರ್ಘಶಾಂತಿಯುಳ್ಳವನು. (ವಿಮೋಚನಕಾಂಡ 34:6; ಅಪೊಸ್ತಲರ ಕಾರ್ಯಗಳು 10:34) ತನ್ನನ್ನು ಗೌರವಿಸುವವರ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಕೆಲವರಿಗೆ ಇದು ಆಶ್ಚರ್ಯ ಆಗಬಹುದಾದರೂ ಇದೇ ಸತ್ಯ.—ಕೀರ್ತನೆ 25:14.

ಇದರಿಂದ ನಮಗಾಗುವ ಪ್ರಯೋಜನ: ನೀವು ಯೆಹೋವ ದೇವರ ಸ್ನೇಹಿತರಾಗಬಲ್ಲಿರಿ. (ಯಾಕೋಬ 2:23) ನೀವು ದೇವರ ವ್ಯಕ್ತಿತ್ವವನ್ನು ಚೆನ್ನಾಗಿ ಕಲಿತುಕೊಂಡಂತೆ ಬೈಬಲಿನಲ್ಲಿರುವ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಿರಿ.

“ಆತನನ್ನು ಹುಡುಕಿರಿ”

ಬೈಬಲ್‌ ಯೆಹೋವ ದೇವರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡುತ್ತದೆ. ತನ್ನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕೆಂದು ದೇವರೇ ಬಯಸುತ್ತಾನೆ. “ಆತನನ್ನು ಹುಡುಕುವದಾದರೆ ಆತನು . . . ಸಿಕ್ಕುವನು” ಎಂದು ಬೈಬಲ್‌ ಹೇಳುತ್ತದೆ. (1 ಪೂರ್ವಕಾಲವೃತ್ತಾಂತ 28:9) ಹಾಗಂದ ಮೇಲೆ ನಾವ್ಯಾಕೆ ಬೈಬಲನ್ನು ಓದಿ, ಧ್ಯಾನಿಸಿ ಆತನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಬಾರದು? ನಾವು ದೇವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಹಾಕುವಲ್ಲಿ ದೇವರು ನಮ್ಮ “ಸಮೀಪಕ್ಕೆ ಬರುವನು.”— ಯಾಕೋಬ 4:8.

ನೀವು ಬೈಬಲನ್ನು ಓದಿ ಅಧ್ಯಯನ ಮಾಡುತ್ತಾ ಇದ್ದರೆ, ದೇವರ ಬಗ್ಗೆ ಹೊಸ ಹೊಸ ವಿಷಯಗಳನ್ನು ಮತ್ತು ಆತನ ಕಾರ್ಯವಿಧಾನಗಳನ್ನು ಕಲಿಯುವಿರಿ ಎಂಬುದರಲ್ಲಿ ಸಂಶಯವೇ ಇಲ್ಲ

‘ದೇವರ ಬಗ್ಗೆ ನನಗೆ ಎಲ್ಲ ತಿಳಿಯದೆ ಇರುವುದರಿಂದ ನಾನು ಹೇಗೆ ತಾನೇ ದೇವರ ಸ್ನೇಹಿತನಾಗಲು ಸಾಧ್ಯ?’ ಅಂತ ನಿಮಗನಿಸಬಹುದು. ಹಾಗಾದರೆ ಇದರ ಬಗ್ಗೆ ಯೋಚಿಸಿ: ಒಬ್ಬ ವ್ಯಕ್ತಿ ಡಾಕ್ಟರ್‌ನ ಸ್ನೇಹಿತನಾಗಬೇಕಾದರೆ, ಡಾಕ್ಟರ್‌ಗೆ ಗೊತ್ತಿರುವುದೆಲ್ಲ ಈ ವ್ಯಕ್ತಿಗೂ ಗೊತ್ತಿರಬೇಕಾ? ಖಂಡಿತ ಇಲ್ಲ. ಸ್ನೇಹ ಬೆಳೆಯಲು ಮುಖ್ಯವಾಗಿ ಒಬ್ಬರು ಇನ್ನೊಬ್ಬರ ವ್ಯಕ್ತಿತ್ವವನ್ನು, ಅವರ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳಬೇಕು. ದೇವರ ವ್ಯಕ್ತಿತ್ವ ಮತ್ತು ಆತನ ಇಷ್ಟಾನಿಷ್ಟಗಳ ಬಗ್ಗೆ ಬೈಬಲಿನಲ್ಲಿದೆ. ಅವುಗಳನ್ನು ತಿಳಿದುಕೊಂಡರೆ ನಾವು ದೇವರ ಸ್ನೇಹಿತರಾಗಬಹುದು.

ದೇವರ ಬಗ್ಗೆ ಬೈಬಲ್‌ನಲ್ಲಿ ಅಲ್ಪಸ್ವಲ್ಪ ಅಲ್ಲ, ನಾವೆಲ್ಲರೂ ತಿಳಿದುಕೊಳ್ಳಲೇಬೇಕಾದ ಅನೇಕ ವಿಷಯಗಳಿವೆ. ಯೆಹೋವ ದೇವರ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಲು ನಿಮಗೆ ಮನಸ್ಸಿದೆಯಾ? ಯೆಹೋವನ ಸಾಕ್ಷಿಗಳು ಉಚಿತ ಮನೆ ಬೈಬಲ್‌ ಅಧ್ಯಯನ ನಡೆಸಲು ಸಂತೋಷಪಡುತ್ತಾರೆ. ನಿಮಗೆ ಹತ್ತಿರವಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವಂತೆ ಅಥವಾ www.mt1130.com ವೆಬ್‌ಸೈಟಿಗೆ ಭೇಟಿ ನೀಡುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ▪ (w15-E 10/01)