ಸಂದರ್ಶನ | ಆ್ಯಂಟನಿಯೋ ಡೆಲ್ಲಾ ಗಟ್ಟಾ
ಒಬ್ಬ ಪಾದ್ರಿ ಯಾಕೆ ಚರ್ಚನ್ನ ಬಿಟ್ಟುಬಿಟ್ಟಾ?
ಆ್ಯಂಟನಿಯೋ ಡೆಲ್ಲಾ ಗಟ್ಟಾರವರು ಸುಮಾರು 9 ವರ್ಷ ರೋಮ್‌ನಲ್ಲಿ ಪಾದ್ರಿಯಾಗೋಕೆ ಓದಿದರು. 1969ರಲ್ಲಿ ಪಾದ್ರಿಯಾಗಿ ನೇಮಕವಾದರು. ಆಮೇಲೆ ಇಟಲಿಯ ನೇಪಲ್ಸ್ ಹತ್ರ ಇರೋ ಸೆಮಿನಾರಿಯಲ್ಲಿ ಮುಖ್ಯಸ್ಥರಾಗಿ ಸೇವೆ ಮಾಡ್ತಿದ್ದರು. ಬೈಬಲ್ ಓದಿದ ಮೇಲೆ ‘ಕ್ಯಾಥೋಲಿಕ್ ಧರ್ಮದವರು ಬೈಬಲ್ ಹೇಳೋ ತರ ನಡೀತಿಲ್ಲ’ ಅಂತ ಅರ್ಥಮಾಡಿಕೊಂಡರು. ದೇವರನ್ನ ಹುಡುಕೋಕೆ ಅವರು ಏನೆಲ್ಲಾ ಮಾಡಿದರು ಅಂತ ಎಚ್ಚರ! ಪತ್ರಿಕೆಯೊಂದಿಗೆ ಹಂಚಿಕೊಂಡರು.
ನಿಮ್ಮ ಬಾಲ್ಯದ ಬಗ್ಗೆ ಹೇಳ್ತೀರಾ?
ನಾನು 1943ರಲ್ಲಿ ಇಟಲಿಯಲ್ಲಿ ಹುಟ್ಟಿದೆ. ನಾವು 7 ಜನ ಮಕ್ಕಳು. ನಮ್ಮಪ್ಪ ಒಬ್ಬ ರೈತ. ಬಡಗಿ ಕೆಲಸವನ್ನೂ ಮಾಡ್ತಿದ್ದರು. ನಾವು ಕ್ಯಾಥೋಲಿಕ್ ಧರ್ಮದವರಾಗಿದ್ವಿ.
ನೀವು ಯಾಕೆ ಪಾದ್ರಿ ಆಗಬೇಕಂತ ಅಂದುಕೊಂಡ್ರಿ?
ಚಿಕ್ಕವನಿದ್ದಾಗ ಚರ್ಚಲ್ಲಿದ್ದ ಪಾದ್ರಿಗಳು ಕೊಡೋ ಭಾಷಣ ಕೇಳಿಸಿಕೊಳ್ಳೋಕೆ, ಅವರು ಮಾಡ್ತಿದ್ದ ಆಚಾರ ವಿಚಾರಗಳನ್ನ ನೋಡೋಕೆ ತುಂಬ ಇಷ್ಟ ಆಗ್ತಿತ್ತು. ಅದಕ್ಕೆ ದೊಡ್ಡವನಾದ ಮೇಲೆ ಪಾದ್ರಿ ಆಗಬೇಕು ಅಂದ್ಕೊಂಡೆ. ಹಾಗಾಗಿ ನನಗೆ 13 ವರ್ಷ ಇದ್ದಾಗ ನಮ್ಮಮ್ಮ, ಒಂದು ಬೋರ್ಡಿಂಗ್ ಶಾಲೆಗೆ ಸೇರಿಸಿದರು. ಅಲ್ಲಿ ಹುಡುಗರಿಗೆ ಮುಂದೆ ಪಾದ್ರಿಯಾಗೋಕೆ ಬೇಕಾದ ತರಬೇತಿ ಕೊಡುತ್ತಿದ್ದರು.
ನಿಮಗೆ ಸಿಕ್ಕಿದ ತರಬೇತಿಯಲ್ಲಿ ಬೈಬಲ್ ಕಲಿಸಿದ್ರಾ?
ಇಲ್ಲ. ನನಗೆ 15 ವರ್ಷ ಇದ್ದಾಗ ಒಬ್ಬ ಟೀಚರ್ ಯೇಸುವಿನ ಜೀವನ ಮತ್ತು ಸೇವೆ ಬಗ್ಗೆ ತಿಳಿಸೋ ಸುವಾರ್ತಾ ಪುಸ್ತಕ ಕೊಟ್ರು. ಅದನ್ನ ತುಂಬ ಸಲ ಓದಿದೆ. 18 ವರ್ಷ ಇದ್ದಾಗ ಪೋಪ್ ನಡೆಸ್ತಿದ್ದ ಯುನಿವರ್ಸಿಟಿಯಲ್ಲಿ ಓದೋಕೆ ರೋಮ್‌ಗೆ ಹೋದೆ. ಅಲ್ಲಿ ಲ್ಯಾಟಿನ್, ಗ್ರೀಕ್, ಹಿಸ್ಟರಿ, ಫಿಲೋಸಫಿ, ಸೈಕಾಲಜಿ, ಮತ್ತು ಥಿಯಾಲಜಿ ಓದಿದೆ. ಭಾನುವಾರ ಚರ್ಚಲ್ಲಿ ಕೊಡುತ್ತಿದ್ದ ಭಾಷಣದಲ್ಲಿ ಬೈಬಲ್ ಓದೋದನ್ನ ಕೇಳಿಸಿಕೊಳ್ಳುತ್ತಿದ್ವಿ, ವಚನಗಳನ್ನ ಬಾಯಿಪಾಠ ಮಾಡ್ತಿದ್ವಿ. ಆದ್ರೆ ಅಲ್ಲಿ ಬೈಬಲ್ ಬಗ್ಗೆ ಏನೂ ಕಲಿಸ್ತಿರಲಿಲ್ಲ.
ಸೆಮಿನಾರಿಯ ಮುಖ್ಯಸ್ಥ ಆಗಿದ್ದರಿಂದ ಕಲಿಸೋ ಜವಾಬ್ದಾರಿ ನಿಮಗಿತ್ತಾ?
ನಾನು ಮುಖ್ಯವಾಗಿ ಮೇಲ್ವಿಚಾರಕನಾಗಿ ಕೆಲಸ ಮಾಡ್ತಿದ್ದೆ. ಆದರೆ ಅಲ್ಲಿ ಸೆಕೆಂಡ್ ವ್ಯಾಟಿಕನ್ ಕೌನ್ಸಿಲ್‌ಗೆ ಸಂಬಂಧಪಟ್ಟ ಕೆಲವು ವಿಷಯಗಳನ್ನೂ ಕಲಿಸ್ತಿದ್ದೆ.
ಚರ್ಚ್‌ನ ಬೋಧನೆಗಳ ಮೇಲೆ ನಿಮಗೆ ಯಾಕೆ ಸಂಶಯ ಬಂತು?
ಅಲ್ಲಿ ನಡೀತಿದ್ದ ಮೂರು ವಿಷಯ ನನಗೆ ಇಷ್ಟ ಆಗ್ತಿರಲಿಲ್ಲ. ಒಂದು, ಚರ್ಚಿನವರು ರಾಜಕೀಯ ವಿಷಯಗಳಲ್ಲಿ ಒಳಗೂಡುತ್ತಿದ್ದರು. ಎರಡು, ಪಾದ್ರಿಗಳ ಮತ್ತು ಚರ್ಚಿಗೆ ಬರುತ್ತಿದ್ದ ಕೆಲವು ಜನರ ನಡತೆ ಚೆನ್ನಾಗಿರಲಿಲ್ಲ. ಆದ್ರೂ ಅವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೂರು, ಕ್ಯಾಥೋಲಿಕ್ ಬೋಧನೆಗಳು ಸರಿಯಾಗಿರಲಿಲ್ಲ. ಉದಾಹರಣೆಗೆ ‘ನಮ್ಮನ್ನ ತುಂಬ ಪ್ರೀತಿಸೋ ದೇವರು, ಒಬ್ಬ ಸತ್ತ ಮೇಲೂ ಹೇಗೆ ಅವನಿಗೆ ಶಿಕ್ಷೆ ಕೊಡೋಕೆ ಸಾಧ್ಯ? ಒಂದು ಪ್ರಾರ್ಥನೆಯನ್ನ ನೂರಾರು ಸಲ ಹೇಳಬೇಕು ಅಂತ ದೇವರು ಇಷ್ಟಪಡ್ತಾನಾ?’ ಅಂತೆಲ್ಲಾ ನನಗೆ ಅನಿಸ್ತಿತ್ತು. *
ನೀವೇನು ಮಾಡಿದ್ರಿ?
ಸಹಾಯಕ್ಕಾಗಿ ದೇವರ ಹತ್ತಿರ ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದೆ. ಆ ಸಮಯದಲ್ಲಿ ಇಟಾಲಿಯನ್ ಭಾಷೆಯಲ್ಲಿ ಬಿಡುಗಡೆಯಾದ ಕ್ಯಾಥೋಲಿಕ್ ಜೆರುಸಲೇಮ್ ಬೈಬಲ್ ತಗೊಂಡೆ. ಆಮೇಲೆ ಅದನ್ನ ಓದೋಕೆ ಶುರು ಮಾಡಿದೆ. ಒಂದು ದಿನ ಭಾನುವಾರ ಬೆಳಗ್ಗೆ ಮಾಸ್ ಮುಗಿಸಿಕೊಂಡು ಬಂದಾಗ ಇಬ್ಬರು ಸೆಮಿನಾರಿಗೆ ಬಂದ್ರು. ಅವರು ಯೆಹೋವನ ಸಾಕ್ಷಿಗಳಾಗಿದ್ರು. ನಾವು ಬೈಬಲ್ ಬಗ್ಗೆ ಮತ್ತು ಅದು ಸತ್ಯ ಧರ್ಮವನ್ನ ಕಂಡುಹಿಡಿಯೋಕೆ ಹೇಗೆ ಸಹಾಯ ಮಾಡುತ್ತೆ ಅನ್ನೋದರ ಬಗ್ಗೆ ಸುಮಾರು ಒಂದು ಒಂದೂವರೆ ತಾಸು ಮಾತಾಡಿದ್ವಿ.
ನಿಮ್ಮನ್ನ ಭೇಟಿ ಮಾಡೋಕೆ ಬಂದ ಯೆಹೋವನ ಸಾಕ್ಷಿಗಳ ಬಗ್ಗೆ ನಿಮಗೆ ಹೇಗನಿಸ್ತು?
ಅವರು ಕ್ಯಾಥೋಲಿಕ್ ಬೈಬಲನ್ನ ಚೆನ್ನಾಗಿ ಬಳಸೋದನ್ನ, ವಚನಗಳನ್ನ ತೆರೆಯೋದನ್ನ ನೋಡಿ ಆಶ್ಚರ್ಯ ಆಯ್ತು, ಖುಷಿನೂ ಆಯ್ತು. ಆಮೇಲೆ ಮ್ಯಾರಿಯೋ ಅನ್ನೋ ಇನ್ನೊಬ್ಬ ಸಾಕ್ಷಿ ನನ್ನನ್ನ ಭೇಟಿ ಮಾಡೋಕೆ ಶುರು ಮಾಡಿದರು. ಅವರು ತುಂಬ ತಾಳ್ಮೆ ತೋರಿಸಿದರು, ನಂಬಿಗಸ್ತರಾಗಿದ್ದರು. ಯಾಕಂದ್ರೆ ಪ್ರತೀ ಶನಿವಾರ ಬೆಳಗ್ಗೆ 9 ಗಂಟೆ ಅಂತ ಒಂದು ಸಮಯ ಇದ್ರೆ ಅವರು ಮಳೆಯಿರಲಿ, ಬಿಸಿಲಿರಲಿ ಸೆಮಿನಾರಿಗೆ ಬರುತ್ತಿದ್ದರು ಮತ್ತು ನನ್ನನ್ನ ಭೇಟಿ ಮಾಡೇ ಮಾಡ್ತಿದ್ದರು.
ಯೆಹೋವನ ಸಾಕ್ಷಿಗಳ ಭೇಟಿಯ ಬಗ್ಗೆ ಬೇರೆ ಪಾದ್ರಿಗಳಿಗೆ ಹೇಗನಿಸ್ತಿತ್ತು?
ನಾವು ಮಾಡ್ತಿದ್ದ ಚರ್ಚೆಗೆ ಅವರನ್ನೂ ಕರೆಯುತ್ತಿದ್ದೆ. ಆದ್ರೆ ಅವರಿಗೆ ಯಾರಿಗೂ ಬೈಬಲ್ ಕಲಿಯೋದರಲ್ಲಿ ಆಸಕ್ತಿ ಇರಲಿಲ್ಲ. ಆದ್ರೆ ನನಗೆ ತುಂಬ ಒಳ್ಳೊಳ್ಳೆ ವಿಷಯಗಳನ್ನ ಕಲಿಯೋಕೆ ಆಯ್ತು. ಅದು ನನಗೆ ತುಂಬ ಇಷ್ಟ ಆಗ್ತಿತ್ತು. ಉದಾಹರಣೆಗೆ ಇಷ್ಟೊಂದು ಕಷ್ಟ ಸಂಕಟವನ್ನ ದೇವರು ಯಾಕೆ ಬಿಟ್ಟಿದ್ದಾನೆ ಅನ್ನೋ ಪ್ರಶ್ನೆ ಸುಮಾರು ವರ್ಷದಿಂದ ಕಾಡ್ತಿತ್ತು. ಈಗ ಅದಕ್ಕೂ ಉತ್ತರ ಸಿಕ್ಕಿದೆ.
ನಿಮ್ಮ ಮೇಲಧಿಕಾರಿಗಳು ಬೈಬಲ್ ಕಲಿಯೋದನ್ನ ನಿಲ್ಲಿಸೋಕೆ ಪ್ರಯತ್ನ ಮಾಡಿದ್ರಾ?
1975ರಲ್ಲಿ ನನಗೆ ಏನು ಅನಿಸುತ್ತೆ ಅಂತ ಹೇಳಿಕೊಳ್ಳೋಕೆ ತುಂಬ ಸಲ ರೋಮ್‌ಗೆ ಹೋದೆ. ಆಗ ನನ್ನ ಮೇಲಧಿಕಾರಿಗಳು ನನ್ನ ಯೋಚನೆಯನ್ನ ಬದಲಾಯಿಸೋಕೆ ಪ್ರಯತ್ನ ಮಾಡಿದರೇ ವಿನಃ ಬೈಬಲನ್ನ ಉಪಯೋಗಿಸಿ ಒಂದು ಮಾತನ್ನೂ ಆಡಲಿಲ್ಲ. ಕೊನೆಗೆ ಜನವರಿ 9, 1976ರಲ್ಲಿ ‘ನಾನು ಇನ್ನು ಮುಂದೆ ಕ್ಯಾಥೋಲಿಕ್ ಧರ್ಮದಲ್ಲಿ ಇರೋದಿಲ್ಲ’ ಅಂತ ರೋಮ್‌ಗೆ ಪತ್ರ ಬರೆದು ಕಳಿಸಿದೆ. ಎರಡು ದಿನ ಆದ ಮೇಲೆ ನಾನು ಸೆಮಿನಾರಿ ಬಿಟ್ಟುಬಿಟ್ಟೆ. ಮೊದಲನೇ ಸಲ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದೆ. ಅಲ್ಲಿ ಪ್ರತಿಯೊಬ್ಬ ಯೆಹೋವನ ಸಾಕ್ಷಿಯ ಕೈಯಲ್ಲೂ ಬೈಬಲ್ ಇತ್ತು. ಭಾಷಣಗಾರ ಹೇಳ್ತಿದ್ದ ವಚನಗಳನ್ನೆಲ್ಲಾ ಅವರು ತೆರೆದು ನೋಡ್ತಿದ್ದರು. ಈ ತರ ಹಿಂದೆ ನಾನು ಯಾವತ್ತೂ ನೋಡಿರಲಿಲ್ಲ.
ಸತ್ಯ ಕಲಿತಿರೋದನ್ನ ನೋಡಿದಾಗ ನಿಮ್ಮ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?
ಹೆಚ್ಚಿನವರಿಗೆ ತುಂಬ ಕೋಪ ಬಂತು. ನನ್ನ ತಮ್ಮ ಇಟಲಿಯ ಲೋಂಬಾರ್ಡಿಯಲ್ಲಿದ್ದ. ಅವನು ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಕಲೀತಿದ್ದ. ನಾನು ಅವನನ್ನ ನೋಡೋಕೆ ಹೋದೆ. ಅಲ್ಲಿಗೆ ಹೋದಾಗ ನನಗೆ ಕೆಲಸ, ಮನೆ ಹುಡುಕಿ ಕೊಡೋಕೆ ಯೆಹೋವನ ಸಾಕ್ಷಿಗಳು ಸಹಾಯ ಮಾಡಿದರು. ಆ ವರ್ಷದ ಕೊನೆಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ನಾನೊಬ್ಬ ಯೆಹೋವನ ಸಾಕ್ಷಿಯಾದೆ.
ಕೊನೆಗೂ ನಾನು ದೇವರಿಗೆ ಆಪ್ತನಾದೆ
‘ಹೀಗೆ ಮಾಡಿಬಿಟ್ಟೆನಲ್ಲಾ’ ಅಂತ ನಿಮಗೆ ಯಾವತ್ತಾದರೂ ಬೇಜಾರಾಗಿದೆಯಾ?
ಖಂಡಿತ ಇಲ್ಲ! ಬೈಬಲ್ ಕಲಿತಾಗ ದೇವರಿಗೆ ಇನ್ನೂ ಆಪ್ತನಾದೆ. ಚರ್ಚ್‌ಗಳಲ್ಲಿ ಮತ್ತು ಫಿಲಾಸಫಿಯಲ್ಲಿ ದೇವರ ಬಗ್ಗೆ ಕಲಿಸೋದು ಶುದ್ಧ ಸುಳ್ಳು ಅಂತ ಅರ್ಥಮಾಡಿಕೊಂಡೆ. ದೇವರ ಬಗ್ಗೆ ಬೈಬಲಿನಿಂದಾನೇ ಚೆನ್ನಾಗಿ ಅರ್ಥಮಾಡಿಕೊಂಡೆ. ಈಗ ನನಗೆ ದೃಢಭರವಸೆಯಿಂದ ಬೇರೆಯವರಿಗೆ ಕಲಿಸೋಕೆ ಆಗ್ತಿದೆ.
^ ಈ ಪ್ರಶ್ನೆಗಳಿಗೆ ಮತ್ತು ಬೇರೆ ಪ್ರಶ್ನೆಗಳಿಗೆ ಬೈಬಲಿನಲ್ಲಿ ಉತ್ತರವಿದೆ. ಅದರಲ್ಲಿ ಬೈಬಲ್ ಬೋಧನೆಗಳು > ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ ಅನ್ನೋ ಟ್ಯಾಬ್ ನೋಡಿ.