ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 12

ದೇವರ ಗೆಳೆಯರಾಗಲು ಏನು ಮಾಡಬೇಕು?

ದೇವರ ಗೆಳೆಯರಾಗಲು ಏನು ಮಾಡಬೇಕು?

1. ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನಾ?

ತನ್ನ ಬಳಿ ಪ್ರಾರ್ಥಿಸುವಂತೆ ಪ್ರತಿಯೊಬ್ಬ ಮಾನವನನ್ನು ದೇವರು ಆಮಂತ್ರಿಸುತ್ತಾನೆ. (ಕೀರ್ತನೆ 65:2) ಹಾಗಿದ್ದರೂ ಕೆಲವರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ. ಉದಾಹರಣೆಗೆ, ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳದ ಪುರುಷರ ಪ್ರಾರ್ಥನೆಗಳು ದೇವರಿಗೆ ಇಷ್ಟವಿಲ್ಲ. (1 ಪೇತ್ರ 3:7) ಪದೇ ಪದೇ ಕೆಟ್ಟತನ ನಡೆಸಿದ ಇಸ್ರೇಲ್‌ ಜನಾಂಗದ ಪ್ರಾರ್ಥನೆಗಳನ್ನು ದೇವರು ಕೇಳಲಿಲ್ಲ ಎಂದು ಚರಿತ್ರೆ ತಿಳಿಸುತ್ತದೆ. ಪ್ರಾರ್ಥನೆ ಅನ್ನುವುದು ದೇವರು ನಮಗೆ ನೀಡಿರುವ ದೊಡ್ಡ ವರದಾನ. ಘೋರ ಪಾಪ ಮಾಡಿದವರು ಪಶ್ಚಾತ್ತಾಪಪಟ್ಟು ಮಾಡುವ ಪ್ರಾರ್ಥನೆಗಳನ್ನು ಸಹ ದೇವರು ಕೇಳುತ್ತಾನೆ.​ಯೆಶಾಯ 1:15; 55:7 ಓದಿ.

ವಿಡಿಯೊ ನೋಡಿ ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?

2. ಹೇಗೆ ಪ್ರಾರ್ಥಿಸಬೇಕು?

ದೇವರಿಗೆ ಆರಾಧನೆ ಸಲ್ಲಿಸುವ ಒಂದು ವಿಧ ಪ್ರಾರ್ಥನೆ. ಹಾಗಾಗಿ ಸೃಷ್ಟಿಕರ್ತ ದೇವರಾದ ಯೆಹೋವನಿಗೆ ಮಾತ್ರ ನಾವು ಪ್ರಾರ್ಥನೆ ಸಲ್ಲಿಸಬೇಕು. (ಮತ್ತಾಯ 4:10; 6:9) ಅಪರಿಪೂರ್ಣರಾಗಿರುವ ನಾವು ತಪ್ಪು ಮಾಡುವ ಪ್ರವೃತ್ತಿಯ ಜನರಾಗಿರುವುದರಿಂದ ನೇರವಾಗಿ ದೇವರ ಬಳಿ ಪ್ರಾರ್ಥಿಸಲು ಸಾಧ್ಯವಿಲ್ಲ. ನಮ್ಮ ಪಾಪ ಪರಿಹಾರಕ್ಕಾಗಿ ಪ್ರಾಣ ಅರ್ಪಿಸಿದ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಬೇಕು. (ಯೋಹಾನ 14:6) ಬಾಯಿಪಾಠ ಮಾಡಿ ಹೇಳುವ ಜಪಗಳನ್ನು ಅಥವಾ ಜಪ ಪುಸ್ತಕಗಳಿಂದ ಓದುವ ಪ್ರಾರ್ಥನೆಗಳನ್ನು ದೇವರು ಸುತರಾಂ ಇಷ್ಟಪಡುವುದಿಲ್ಲ. ಹೃದಯದಾಳದ ಪ್ರಾರ್ಥನೆಯನ್ನು ಮಾತ್ರ ಇಷ್ಟಪಡುತ್ತಾನೆ.​ಮತ್ತಾಯ 6:7; ಫಿಲಿಪ್ಪಿ 4:6, 7 ಓದಿ.

ಮೌನ ಪ್ರಾರ್ಥನೆಗಳನ್ನು ಸಹ ಸೃಷ್ಟಿಕರ್ತ ಕೇಳುತ್ತಾನೆ. (1 ಸಮುವೇಲ 1:12, 13) ಪ್ರಾರ್ಥನೆಗೆ ಇಂತಿಂಥ ಸಮಯವೆಂಬ ನಿರ್ಬಂಧವಿಲ್ಲ. ದಿನಚರಿ ಆರಂಭಿಸುವಾಗ, ಮಲಗುವ ಮುನ್ನ, ಊಟದ ವೇಳೆ, ಕಷ್ಟಗಳಿರುವಾಗ ಹೀಗೆ ಯಾವ ಸಮಯದಲ್ಲಿ ಬೇಕಾದರೂ ಪ್ರಾರ್ಥಿಸಬಹುದು.​ಕೀರ್ತನೆ 55:22; ಮತ್ತಾಯ 15:36 ಓದಿ.

3. ಸತ್ಯ ಕ್ರೈಸ್ತರು ಸಭೆ ಸೇರುವುದೇಕೆ?

ನಮ್ಮ ಸುತ್ತಲಿರುವ ಬಹುತೇಕ ಜನರು ದೇವರನ್ನು ನಂಬುವುದಿಲ್ಲ. ಈ ಭೂಮಿಯನ್ನು ಶಾಂತಿ ನೆಮ್ಮದಿಯ ತಾಣವಾಗಿ ಮಾಡುವೆನೆಂದು ದೇವರು ಕೊಟ್ಟಿರುವ ಮಾತಿನಲ್ಲೂ ಅವರಿಗೆ ನಂಬಿಕೆಯಿಲ್ಲ. ಅದನ್ನವರು ಗೇಲಿಮಾಡುತ್ತಾರೆ. ಹಾಗಾಗಿ ದೇವರ ಗೆಳೆಯರಾಗುವುದು ಈ ಲೋಕದಲ್ಲಿ ಅಷ್ಟು ಸುಲಭವಲ್ಲ. (2 ತಿಮೊಥೆಯ 3:1, 4; 2 ಪೇತ್ರ 3:3, 13) ಆದ್ದರಿಂದಲೇ ದೇವಭಕ್ತಿಯನ್ನು ಪ್ರೋತ್ಸಾಹಿಸುವಂಥ ಜನರೊಂದಿಗೆ ನಾವು ಸಭೆ ಸೇರಬೇಕು.​ಇಬ್ರಿಯ 10:24, 25 ಓದಿ.

ದೇವರನ್ನು ಗಾಢವಾಗಿ ಪ್ರೀತಿಸುವ ಜನರೊಂದಿಗೆ ನಮ್ಮ ಒಡನಾಟ ಹೆಚ್ಚಿದಾಗ ದೇವರ ಗೆಳೆಯರಾಗಲು ನೆರವು ಸಿಗುತ್ತದೆ. ಹೇಗೆಂದರೆ ಅವರು ದೇವರಲ್ಲಿಟ್ಟಿರುವ ನಂಬಿಕೆ ನಮ್ಮಲ್ಲಿ ಹುಮ್ಮಸ್ಸನ್ನು ಮೂಡಿಸುತ್ತದೆ. ಆ ರೀತಿಯ ಜನರನ್ನು ನಾವಿಂದು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಮಾತ್ರ ಕಾಣಸಾಧ್ಯ.​ರೋಮನ್ನರಿಗೆ 1:11, 12 ಓದಿ.

4. ದೇವರ ಗೆಳೆಯರಾಗಲು ಏನು ಮಾಡಬೇಕು?

ಬೈಬಲ್‌ನಿಂದ ಕಲಿತ ವಿಷಯಗಳ ಕುರಿತು ಧ್ಯಾನಿಸಬೇಕು. ದೇವರ ಕಾರ್ಯವೈಖರಿ, ಆತನು ಕೊಟ್ಟಿರುವ ಸಲಹೆ, ಆತನು ಮಾಡಿರುವ ವಾಗ್ದಾನ ಇವೆಲ್ಲ ಆತನ ಬಗ್ಗೆ ಏನನ್ನು ತಿಳಿಸುತ್ತವೆ ಎಂದು ನಾವು ಆಲೋಚಿಸಬೇಕು. ಮನನ ಮಾಡಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವಂತೆ ಪ್ರಾರ್ಥಿಸುವಲ್ಲಿ ದೇವರ ಅಗಾಧ ಪ್ರೀತಿ ಮತ್ತು ವಿವೇಕದ ಕುರಿತು ತಿಳಿದುಕೊಳ್ಳುತ್ತೇವೆ.​ಯೆಹೋಶುವ 1:8; ಕೀರ್ತನೆ 1:1-3 ಓದಿ.

ದೇವರ ಮೇಲೆ ಭರವಸೆ ನಂಬಿಕೆ ಇದ್ದರೆ ಮಾತ್ರ ಆತನ ಆಪ್ತ ಗೆಳೆಯರಾಗಲು ಸಾಧ್ಯ. ನಂಬಿಕೆ ಅನ್ನುವುದು ಗಿಡದಂತೆ. ಗಿಡ ಹೆಮ್ಮರವಾಗಿ ಬೆಳೆಯಬೇಕಾದರೆ ಪ್ರತಿದಿನ ನೀರುಣಿಸಬೇಕು. ಅದರಂತೆ ದೇವರಲ್ಲಿನ ನಮ್ಮ ವಿಶ್ವಾಸ ಹೆಚ್ಚೆಚ್ಚು ದೃಢವಾಗಬೇಕಾದರೆ ಪ್ರತಿದಿನವೂ ಧ್ಯಾನಿಸುವುದು ಅಗತ್ಯ.​ಮತ್ತಾಯ 4:4; ಇಬ್ರಿಯ 11:1, 6 ಓದಿ.

5. ದೇವರ ಗೆಳೆಯರಾದರೆ ಯಾವ ಪ್ರಯೋಜನ ಸಿಗುತ್ತದೆ?

ದೇವರು ತನ್ನ ಸ್ನೇಹಿತರಿಗೆ ಅಪಾರ ಕಾಳಜಿ ತೋರಿಸುತ್ತಾನೆ. ಈ ಪ್ರಪಂಚದಲ್ಲಿರುವ ಅನೇಕ ವಿಷಯಗಳು ದೇವರ ಮೇಲೆ ನೀವಿಟ್ಟಿರುವ ವಿಶ್ವಾಸವನ್ನು ಕಸಿದುಕೊಳ್ಳಬಹುದು. ಅಲ್ಲದೆ ಸಾವಿಲ್ಲದೆ ಬದುಕುವ ಅವಕಾಶವನ್ನೂ ಕೈ ತಪ್ಪಿಸಬಹುದು. ಆದರೆ ಆ ರೀತಿ ಆಗದಂತೆ ದೇವರು ನಿಮ್ಮನ್ನು ಕಾಪಾಡುತ್ತಾನೆ. (ಕೀರ್ತನೆ 91:1, 2, 7-10) ನಮ್ಮ ಆರೋಗ್ಯ ಹಾಗೂ ನೆಮ್ಮದಿಗೆ ಕುತ್ತು ತರುವ ಮಾರ್ಗಗಳಲ್ಲಿ ಕಾಲಿಡದಂತೆ ಎಚ್ಚರಿಕೆ ನೀಡುತ್ತಾನೆ. ಅತ್ಯುತ್ತಮ ಬದುಕನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸುತ್ತಾನೆ.​ಕೀರ್ತನೆ 73:27, 28; ಯಾಕೋಬ 4:4, 8 ಓದಿ.