ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಾಪ್ತಿ

ಸಮಾಪ್ತಿ

‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸುವವರಾಗಿರಿ.’​—ಇಬ್ರಿಯ 6:12.

1, 2. ನಾವು ಇಂದು ನಂಬಿಕೆಯನ್ನು ಬೆಳೆಸಿ, ಸಂರಕ್ಷಿಸುವುದು ಏಕೆ ಅಗತ್ಯ? ದೃಷ್ಟಾಂತ ಕೊಡಿ.

ನಂಬಿಕೆ. ಇದೊಂದು ಸುಂದರ ಪದ. ಅತ್ಯಾಕರ್ಷಕ ಗುಣ. ನಂಬಿಕೆ ಎಂಬ ಪದವನ್ನು ನೋಡಿದಾಗೆಲ್ಲ ಕೇಳಿದಾಗೆಲ್ಲ ನಮಗೆ “ತುರ್ತು!” ಎಂಬ ಇನ್ನೊಂದು ಪದವೂ ತಟ್ಟನೆ ನೆನಪಿಗೆ ಬರಬೇಕು. ಕಾರಣವೇನೆಂದರೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದರೆ ಅದನ್ನು ತುರ್ತಾಗಿ ಬೆಳೆಸಿಕೊಳ್ಳಬೇಕಿದೆ. ಈಗಾಗಲೇ ನಂಬಿಕೆ ಇದ್ದರೆ ಅದನ್ನು ತುರ್ತಾಗಿ ಸಂರಕ್ಷಿಸುವ, ಪೋಷಿಸುವ ಅಗತ್ಯವಿದೆ. ಏಕೆ?

2 ನೆನಸಿ, ನೀವೊಂದು ದೊಡ್ಡ ಮರುಭೂಮಿಯಲ್ಲಿ ಪ್ರಯಾಣಿಸುತ್ತಿದ್ದೀರಿ. ನಿಮಗೆ ನೀರು ಬೇಕೇ ಬೇಕು. ನೀರು ಸಿಕ್ಕಿದಾಗ ಅದನ್ನು ಸೂರ್ಯನ ತಾಪದಿಂದ ಸಂರಕ್ಷಿಸಬೇಕು. ಅನಂತರ, ಗಮ್ಯಸ್ಥಾನವನ್ನು ತಲಪುವ ವರೆಗೂ ನಿಮ್ಮ ಬಳಿ ಇರುವ ನೀರು ಖಾಲಿಯಾಗದಿರುವ ಹಾಗೆ ದಾರಿಯಲ್ಲಿ ನೀರು ಸಿಗುವಲ್ಲೆಲ್ಲ ತುಂಬಿಸಿಕೊಳ್ಳಬೇಕು. ಇಂದು ನಾವು ಜೀವಿಸುತ್ತಿರುವ ಈ ಲೋಕವು ಆಧ್ಯಾತ್ಮಿಕ ಮರುಭೂಮಿಯಂತಿದೆ. ನಿಜವಾದ ನಂಬಿಕೆ ನೀರಿನ ಹಾಗೆ. ಅದು ಸಿಗುವುದು ತೀರ ವಿರಳ. ಸಿಕ್ಕರೂ ಅದನ್ನು ಸಂರಕ್ಷಿಸಿ, ಪೋಷಿಸದಿದ್ದರೆ ಬತ್ತಿಹೋಗುತ್ತದೆ. ನೀರಿಲ್ಲದೆ ನಾವು ಹೇಗೆ ಬದುಕಲಾರೆವೊ ಹಾಗೆಯೇ ನಂಬಿಕೆಯಿಲ್ಲದೆ ಆಧ್ಯಾತ್ಮಿಕವಾಗಿ ಬದುಕಿರಲಾರೆವು.—ರೋಮ. 1:17.

3. (1) ನಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಯೆಹೋವನು ಯಾವ ಸಹಾಯ ಕೊಟ್ಟಿದ್ದಾನೆ? (2) ನಾವು ಯಾವ ಎರಡು ವಿಷಯಗಳನ್ನು ಮಾಡಬೇಕು?

3 ನಂಬಿಕೆ ನಮಗೆ ಎಷ್ಟು ತುರ್ತಾಗಿ ಬೇಕೆನ್ನುವುದು ಯೆಹೋವನಿಗೆ ತಿಳಿದಿದೆ. ನಂಬಿಕೆಯನ್ನು ಬೆಳೆಸಿ, ಕಾಪಾಡುವುದು ಇಂದು ಎಷ್ಟು ಕಷ್ಟವೆಂದೂ ಆತನಿಗೆ ತಿಳಿದಿದೆ. ಅನುಕರಣಯೋಗ್ಯ ಮಾದರಿಗಳನ್ನು ಆತನು ನಮಗೆ ಕೊಟ್ಟಿರುವುದು ನಿಸ್ಸಂಶಯವಾಗಿ ಇದಕ್ಕಾಗಿಯೇ. ಅಪೊಸ್ತಲ ಪೌಲನು ಹೀಗೆ ಬರೆಯುವಂತೆ ಯೆಹೋವನು ಪ್ರೇರಿಸಿದನು: ‘ನಂಬಿಕೆ ಮತ್ತು ತಾಳ್ಮೆಯ ಮೂಲಕ ವಾಗ್ದಾನಗಳನ್ನು ಬಾಧ್ಯತೆಯಾಗಿ ಹೊಂದುವವರನ್ನು ಅನುಕರಿಸುವವರಾಗಿರಿ.’ (ಇಬ್ರಿ. 6:12) ಆದ್ದರಿಂದಲೇ ಈ ಪುಸ್ತಕದಲ್ಲಿ ಚರ್ಚಿಸಲಾಗಿರುವಂಥ ನಂಬಿಗಸ್ತ ಸ್ತ್ರೀಪುರುಷರ ಮಾದರಿಗಳನ್ನು ಅನುಕರಿಸಲು ನಮ್ಮಿಂದಾದದ್ದೆಲ್ಲವನ್ನು ಮಾಡುವಂತೆ ಯೆಹೋವನ ಸಂಘಟನೆ ಪ್ರೋತ್ಸಾಹಿಸಿದೆ. ಈಗ ನಾವೇನು ಮಾಡಬೇಕು? ಎರಡು ವಿಷಯಗಳನ್ನು: (1) ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಬೇಕು. (2) ನಮ್ಮ ನಿರೀಕ್ಷೆಯನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಡಬೇಕು.

4. (1) ಸೈತಾನನು ಹೇಗೆ ನಂಬಿಕೆಗೆ ಶತ್ರುವಾಗಿದ್ದಾನೆ? (2) ಆದರೂ ನಾವೇಕೆ ಹತಾಶರಾಗಬಾರದು?

4 ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಿ. ನಂಬಿಕೆಗೆ ಪರಮ ಶತ್ರು ಈ ಲೋಕದ ಅಧಿಪತಿಯಾದ ಸೈತಾನ. ನಂಬಿಕೆ ಕಾಪಾಡಿಕೊಳ್ಳಲು ಕಷ್ಟಕರವಾಗುವಂಥ ವಾತಾವರಣವನ್ನು ಅವನು ಈ ಲೋಕದಲ್ಲಿ ಸೃಷ್ಟಿಸಿದ್ದಾನೆ. ಅಲ್ಲದೆ ಅವನು ನಮಗಿಂತ ಹೆಚ್ಚು ಬಲಶಾಲಿ. ಹಾಗಂತ ನಂಬಿಕೆಯನ್ನು ಬೆಳೆಸಿ, ಬಲಪಡಿಸಿಕೊಳ್ಳಲು ನಮ್ಮಿಂದ ಅಸಾಧ್ಯವೆಂದು ಕೈಚೆಲ್ಲಿ ಕೂರಬೇಕೇ? ಖಂಡಿತ ಇಲ್ಲ! ನಿಜವಾದ ನಂಬಿಕೆಯನ್ನು ತೋರಿಸಲು ಪ್ರಯತ್ನಿಸುವವರೆಲ್ಲರಿಗೆ ಯೆಹೋವನು ಪರಮ ಮಿತ್ರ. ಆತನ ಸಹಾಯದಿಂದ ನಾವು ಪಿಶಾಚನನ್ನು ವಿರೋಧಿಸಿ ನಮ್ಮಿಂದ ದೂರ ಓಡಿಹೋಗುವಂತೆಯೂ ಮಾಡಬಲ್ಲೆವೆಂದು ಆತನು ಆಶ್ವಾಸನೆ ಕೊಡುತ್ತಾನೆ. (ಯಾಕೋ. 4:7) ಸೈತಾನನನ್ನು ವಿರೋಧಿಸಬೇಕಾದರೆ ನಾವು ಪ್ರತಿದಿನ ಸಮಯ ಮಾಡಿಕೊಂಡು ನಮ್ಮ ನಂಬಿಕೆಯನ್ನು ಬಲಪಡಿಸಿ ಹೆಚ್ಚಿಸಬೇಕು. ಹೇಗೆ?

5. ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರು ನಂಬಿಕೆಯನ್ನು ಹೇಗೆ ಪಡೆದುಕೊಂಡರು? ವಿವರಿಸಿ.

5 ನಾವು ಈ ಪುಸ್ತಕದಲ್ಲಿ ನೋಡಿದ ಹಾಗೆ ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರು ಹುಟ್ಟಿನಿಂದಲೇ ನಂಬಿಕೆಯನ್ನು ಪಡೆದುಕೊಂಡು ಬಂದಿರಲಿಲ್ಲ. ಅವರು ನಂಬಿಕೆಯನ್ನು ಬೆಳೆಸಿಕೊಳ್ಳಬೇಕಾಯಿತು. ನಂಬಿಕೆಯು ಯೆಹೋವನ ಪವಿತ್ರಾತ್ಮದ ಫಲವೆಂಬುದಕ್ಕೆ ಅವರ ಜೀವನವೇ ಸಾಕ್ಷಿ. (ಗಲಾ. 5:22, 23) ಅವರು ಸಹಾಯಕ್ಕಾಗಿ ಪ್ರಾರ್ಥಿಸಿದರು. ಪ್ರತಿಯಾಗಿ ಯೆಹೋವನು ಅವರ ನಂಬಿಕೆಯನ್ನು ಬಲಪಡಿಸುತ್ತಾ ಇದ್ದನು. ನಾವೂ ಅವರಂತೆ ಪ್ರಾರ್ಥಿಸೋಣ. ಪವಿತ್ರಾತ್ಮಕ್ಕಾಗಿ ಬೇಡುವವರಿಗೆ ಮತ್ತು ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕೆಲಸಮಾಡುವವರಿಗೆ ಯೆಹೋವನು ಉದಾರವಾಗಿ ಪವಿತ್ರಾತ್ಮ ಕೊಡುವನೆಂದು ಎಂದಿಗೂ ಮರೆಯದಿರೋಣ. (ಲೂಕ 11:13) ನಂಬಿಕೆ ಬಲಪಡಿಸಿಕೊಳ್ಳಲು ನಾವು ಇನ್ನೇನಾದರೂ ಮಾಡಬಹುದೇ?

6. ಬೈಬಲ್‌ ವೃತ್ತಾಂತಗಳನ್ನು ನಾವು ಅಧ್ಯಯನಮಾಡುವಾಗ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯಬಲ್ಲೆವು?

6 ಗಮನಾರ್ಹ ನಂಬಿಕೆಯುಳ್ಳ ಕೆಲವರ ಮಾದರಿಗಳನ್ನು ಮಾತ್ರ ಈ ಪುಸ್ತಕದಲ್ಲಿ ಚರ್ಚಿಸಿದ್ದೇವೆ. ಅಂಥವರು ಇನ್ನೆಷ್ಟೋ ಮಂದಿ ಇದ್ದಾರೆ! (ಇಬ್ರಿಯ 11:32 ಓದಿ.) ಅವರಲ್ಲಿ ಪ್ರತಿಯೊಬ್ಬರ ಮಾದರಿಯಿಂದ ನಮ್ಮ ಪ್ರಾರ್ಥನಾಪೂರ್ವಕ, ಮನಃಪೂರ್ವಕ ಅಧ್ಯಯನಕ್ಕೆ ವಿಷಯಗಳ ಭಂಡಾರವೇ ಸಿಗುತ್ತದೆ. ನಂಬಿಗಸ್ತ ವ್ಯಕ್ತಿಗಳ ಕುರಿತ ಬೈಬಲ್‌ ವೃತ್ತಾಂತಗಳನ್ನು ನಾವು ಅವಸರ ಅವಸರದಿಂದ ಓದಿ ಹಾಳೆಗಳನ್ನು ತಿರುವಿಹಾಕಿದರೆ ನಮ್ಮ ನಂಬಿಕೆ ದೃಢವಾಗದು. ನಮ್ಮ ಬೈಬಲ್‌ ವಾಚನದಿಂದ ಪೂರ್ಣ ಪ್ರಯೋಜನ ಪಡೆಯಬೇಕಾದರೆ ಆ ವೃತ್ತಾಂತಗಳ ಪೂರ್ವಾಪರ, ಸಂದರ್ಭ-ಸನ್ನಿವೇಶಗಳನ್ನು ಶೋಧಿಸಿ ತಿಳಿಯಲು ನಾವು ಸಮಯ ಕೊಡಬೇಕು. ಆ ಅಪರಿಪೂರ್ಣ ಸ್ತ್ರೀಪುರುಷರು “ನಮ್ಮಂಥ ಭಾವನೆಗಳಿದ್ದ”ವರು ಎಂಬದನ್ನು ಯಾವಾಗಲೂ ನೆನಪಿನಲ್ಲಿಟ್ಟರೆ ಅವರ ಮಾದರಿಯನ್ನು ನಮ್ಮಿಂದಲೂ ಅನುಕರಿಸಸಾಧ್ಯವೆಂದು ನಮಗೆ ಅರಿವಾಗುವುದು. (ಯಾಕೋ. 5:17) ನಮ್ಮಂಥದ್ದೇ ಸವಾಲುಗಳೂ ಸಮಸ್ಯೆಗಳೂ ಅವರಿಗಿದ್ದಾಗ ಅವರಿಗೆ ಹೇಗೆಲ್ಲ ಅನಿಸಿರಬಹುದೆಂದು ನಾವು ಅವರ ಜಾಗದಲ್ಲಿ ನಿಂತು ಊಹಿಸಿಕೊಳ್ಳಬಹುದು.

7-9. (1) ಬೈಬಲ್‌ ಕಾಲಗಳ ಕೆಲವು ನಂಬಿಗಸ್ತ ಸ್ತ್ರೀಪುರುಷರಿಗೆ ನಾವಿಂದು ಯೆಹೋವನನ್ನು ಆರಾಧಿಸುತ್ತಿರುವ ರೀತಿಯ ಅವಕಾಶ ಸಿಕ್ಕಿರುತ್ತಿದ್ದರೆ ಹೇಗನಿಸುತ್ತಿತ್ತು? (2) ನಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ಹಾಕುವ ಮೂಲಕ ಏಕೆ ಬಲಪಡಿಸಿಕೊಳ್ಳಬೇಕು?

7 ನಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ಹಾಕುವ ಮೂಲಕ ಸಹ ಅದನ್ನು ಬಲಪಡಿಸಿಕೊಳ್ಳುತ್ತೇವೆ. ಕಾರಣ ‘ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದಾಗಿದೆ.’ (ಯಾಕೋ. 2:26) ನಾವು ಯಾರ ಬಗ್ಗೆ ಚರ್ಚಿಸಿದೆವೊ ಆ ಸ್ತ್ರೀಪುರುಷರಿಗೆ ಯೆಹೋವನು ನಮಗಿಂದು ಮಾಡಲು ಕೊಟ್ಟಿರುವಂಥ ಕೆಲಸವನ್ನು ಕೊಟ್ಟಿರುತ್ತಿದ್ದರೆ ಅವರೆಷ್ಟು ಖುಷಿಪಡುತ್ತಿದ್ದರೆಂದು ಸ್ವಲ್ಪ ಊಹಿಸಿ!

8 ಉದಾಹರಣೆಗೆ ಅಬ್ರಹಾಮನನ್ನು ತೆಗೆದುಕೊಳ್ಳಿ. ಅರಣ್ಯದಲ್ಲಿ ಹೋದಲ್ಲೆಲ್ಲ ಒರಟೊರಟಾದ ಕಲ್ಲುಗಳನ್ನು ಒಂದರ ಮೇಲೆ ಒಂದು ಜೋಡಿಸಿ ವೇದಿ ಕಟ್ಟಿ ಅಲ್ಲಿ ಆರಾಧಿಸುವುದಕ್ಕಿಂತ ಸುಂದರ ರಾಜ್ಯ ಸಭಾಗೃಹಗಳಲ್ಲಿ, ದೊಡ್ಡ ಅಧಿವೇಶನಗಳಲ್ಲಿ ಜೊತೆ ಆರಾಧಕರೊಂದಿಗೆ ಕೂತು, ಅವನು ‘ದೂರದಿಂದಷ್ಟೇ ನೋಡಿದ’ ವಾಗ್ದಾನಗಳ ಬಗ್ಗೆ ಚರ್ಚಿಸಿ, ವಿವರಿಸಲಾಗುವುದನ್ನು ಕೇಳುತ್ತಾ ಯೆಹೋವನನ್ನು ಆರಾಧಿಸುವಂತೆ ಹೇಳಿರುತ್ತಿದ್ದರೆ ಅವನಿಗೆ ಹೇಗನಿಸುತ್ತಿತ್ತು? (ಇಬ್ರಿಯ 11:13 ಓದಿ.) ಎಲೀಯನ ವಿಷಯ ನೋಡೋಣ. ಧರ್ಮಭ್ರಷ್ಟ, ದುಷ್ಟ ರಾಜನ ಆಳ್ವಿಕೆಯ ಕೆಳಗೆ ಯೆಹೋವನ ಸೇವೆಮಾಡುತ್ತಾ ಬಾಳನ ದುಷ್ಟ ಪ್ರವಾದಿಗಳನ್ನು ಹತಿಸುವ ಕೆಲಸದ ಬದಲಿಗೆ ಶಾಂತಿಯುತವಾಗಿ ಜನರನ್ನು ಮನೆಗಳಲ್ಲಿ ಭೇಟಿಮಾಡಿ ಸಾಂತ್ವನ ಹಾಗೂ ನಿರೀಕ್ಷೆಯ ಸಂದೇಶವನ್ನು ತಿಳಿಸುವ ಕೆಲಸವನ್ನು ಅವನಿಗೆ ಕೊಟ್ಟಿರುತ್ತಿದ್ದರೆ ಹೇಗನಿಸುತ್ತಿತ್ತು? ಬೈಬಲಿನಲ್ಲಿ ತಿಳಿಸಲಾಗಿರುವ ನಂಬಿಗಸ್ತ ಸ್ತ್ರೀಪುರುಷರಿಗೆ ಯೆಹೋವನನ್ನು ಆರಾಧಿಸಲು ನಮಗಿರುವಂಥ ರೀತಿಯ ಅವಕಾಶಗಳು ಸಿಕ್ಕಿದ್ದರೆ ಖಂಡಿತ ಅವನ್ನು ಬಾಚಿಕೊಳ್ಳುತ್ತಿದ್ದರು.

9 ಹಾಗಾಗಿ ಕ್ರಿಯೆಗಳ ಮೂಲಕ ನಮ್ಮ ನಂಬಿಕೆಯನ್ನು ಬಲಪಡಿಸುತ್ತಾ ಇರೋಣ. ಹೀಗೆ ನಾವು ದೇವರ ಪ್ರೇರಿತ ವಾಕ್ಯದಲ್ಲಿರುವ ನಂಬಿಗಸ್ತ ಸ್ತ್ರೀಪುರುಷರ ಮಾದರಿಗಳಿಂದ ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕುತ್ತಿರುವೆವು. ಆಗ ಈ ಪುಸ್ತಕದ ಪೀಠಿಕೆಯಲ್ಲಿ ತಿಳಿಸಲಾದಂತೆ ಅವರು ನಮ್ಮ ಆಪ್ತ ಸ್ನೇಹಿತರೆಂದು ಅನಿಸತೊಡಗುವುದು. ಬಲುಬೇಗನೆ ಆ ಸ್ನೇಹಬಂಧಗಳು ವಾಸ್ತವರೂಪ ತಾಳುವ ಸಾಧ್ಯತೆಯಿದೆ.

10. ಪರದೈಸಿನಲ್ಲಿ ನಮಗೆ ಯಾವ ಸಂತೋಷವಿರುವುದು?

10 ನಿಮ್ಮ ನಿರೀಕ್ಷೆಯನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಡಿ. ನಂಬಿಗಸ್ತ ಸ್ತ್ರೀಪುರುಷರು ದೇವದತ್ತ ನಿರೀಕ್ಷೆಯಿಂದ ಯಾವಾಗಲೂ ಬಲ ಪಡೆದುಕೊಂಡರು. ನೀವು ಹಾಗೆ ಪಡೆದುಕೊಳ್ಳುತ್ತಿದ್ದೀರಾ? ಉದಾಹರಣೆಗೆ, ‘ನೀತಿವಂತರ ಪುನರುತ್ಥಾನದ’ ಸಮಯದಲ್ಲಿ ದೇವರ ನಂಬಿಗಸ್ತ ಸೇವಕರು ಜೀವಿತರಾಗಿ ವಾಪಸ್‌ ಬರುವಾಗ ಅವರನ್ನು ಭೇಟಿಯಾಗುವ ಸಂತೋಷದ ಕುರಿತು ಯೋಚಿಸಿ. (ಅಪೊಸ್ತಲರ ಕಾರ್ಯಗಳು 24:15 ಓದಿ.) ಅಲ್ಲಿ ನೀವು ಅವರಿಗೆ ಯಾವ ಪ್ರಶ್ನೆಗಳನ್ನು ಕೇಳಬೇಕೆಂದಿದ್ದೀರಿ?

11, 12. ಹೊಸ ಲೋಕದಲ್ಲಿ ನೀವು ಇವರಿಗೆಲ್ಲ ಯಾವ ಪ್ರಶ್ನೆಗಳನ್ನು ಕೇಳಬೇಕೆಂದಿದ್ದೀರಿ: (1) ಹೇಬೆಲ? (2) ನೋಹ? (3) ಅಬ್ರಹಾಮ? (4) ರೂತ್‌? (5) ಅಬೀಗೈಲ್‌? (6) ಎಸ್ತೇರ್‌?

11 ಉದಾಹರಣೆಗೆ ನೀವು ಹೇಬೆಲನನ್ನು ಭೇಟಿಯಾದಾಗ ಹೀಗೆ ಕೇಳಲು ತುಂಬ ಮನಸ್ಸಾಗಬಹುದು: “ನಿಮ್ಮ ಅಪ್ಪಅಮ್ಮ ನೋಡಲಿಕ್ಕೆ ಹೇಗಿದ್ದರು, ಎಂಥವರಾಗಿದ್ದರು?” ಅಥವಾ ನೀವು ಈ ಪ್ರಶ್ನೆ ಕೂಡ ಕೇಳಬಹುದು: “ಏದೆನಿನ ಪ್ರವೇಶದ್ವಾರವನ್ನು ಕಾಯುತ್ತಿದ್ದ ಆ ಕೆರೂಬಿಯರನ್ನು ನೀವು ಯಾವತ್ತಾದರೂ ಮಾತಾಡಿಸಿದ್ದೀರಾ? ಅವರೇನಾದರೂ ಉತ್ತರಕೊಟ್ಟರಾ?” ನೋಹನನ್ನು ನೋಡಿದಾಗ ನೀವು ಹೀಗೆ ಕೇಳಬಹುದು: “ನೆಫೀಲಿಯರನ್ನು ಕಂಡರೆ ನಿಮಗೆ ಹೆದರಿಕೆಯಾಗುತ್ತಿತ್ತಾ? ಒಂದು ಇಡೀ ವರ್ಷ ನಾವೆಯಲ್ಲಿ ಆ ಎಲ್ಲ ಪ್ರಾಣಿಪಕ್ಷಿಗಳನ್ನು ಹೇಗೆ ನೋಡಿಕೊಂಡಿರಿ?” ಅಬ್ರಹಾಮ ಸಿಕ್ಕಿದಾಗ ನಿಮಗೆ ಈ ಪ್ರಶ್ನೆಗಳನ್ನು ಕೇಳಬೇಕೆನಿಸಬಹುದು: “ನೀವು ಶೇಮ್‌ ಒಟ್ಟಿಗೆ ಮಾತಾಡಿದ್ದೀರಾ? ಯೆಹೋವನ ಬಗ್ಗೆ ನಿಮಗೆ ಯಾರು ಕಲಿಸಿದರು? ಊರ್‌ ಪಟ್ಟಣ ಬಿಟ್ಟುಬರಲು ನಿಮಗೆ ತುಂಬ ಸಂಕಟ ಆಯಿತಾ?”

12 ಪುನರುತ್ಥಾನವಾಗಿ ಬರುವ ನಂಬಿಗಸ್ತ ಸ್ತ್ರೀಯರಿಗೆ ನೀವು ಈ ತರದ ಪ್ರಶ್ನೆ ಕೇಳಬಹುದು: “ರೂತ್‌, ಯಾಕೆ ನಿಮಗೆ ಯೆಹೋವನ ಆರಾಧಕಳಾಗಬೇಕೆಂದು ಅನಿಸಿತು?” “ಅಬೀಗೈಲ್‌, ನೀವು ದಾವೀದನಿಗೆ ಸಹಾಯ ಮಾಡಿದ್ದನ್ನು ನಿಮ್ಮ ಗಂಡ ನಾಬಾಲನಿಗೆ ಹೇಳಲು ಹೆದರಿಕೆ ಆಯಿತಾ?” “ಎಸ್ತೇರ್‌, ಬೈಬಲಿನಲ್ಲಿ ನಿಮ್ಮ ವೃತ್ತಾಂತ ಮುಗಿದ ಮೇಲೆ ನಿಮಗೆ ಮತ್ತು ಮೊರ್ದೆಕೈಗೆ ಏನಾಯಿತು?”

13. (1) ಪುನರುತ್ಥಾನವಾದವರು ನಿಮ್ಮ ಬಳಿ ಯಾವ ಪ್ರಶ್ನೆಗಳನ್ನು ಕೇಳಬಹುದು? (2) ಪ್ರಾಚೀನ ಕಾಲದ ನಂಬಿಗಸ್ತ ಸ್ತ್ರೀಪುರುಷರನ್ನು ಭೇಟಿಯಾಗುವ ಪ್ರತೀಕ್ಷೆ ಬಗ್ಗೆ ನಿಮಗೆ ಹೇಗನಿಸುತ್ತದೆ?

13 ಆ ನಂಬಿಗಸ್ತ ಸ್ತ್ರೀಪುರುಷರಿಗೂ ನಿಮ್ಮ ಬಳಿ ಕೇಳಲು ನೂರೆಂಟು ಪ್ರಶ್ನೆಗಳಿರಬಹುದು. ಕಡೇ ದಿವಸಗಳ ಕೊನೆಕೊನೆಯಲ್ಲಿ ಏನೇನಾಯಿತು, ಕಷ್ಟಕರ ಸಮಯಗಳಲ್ಲಿ ಯೆಹೋವನು ತನ್ನ ಜನರನ್ನು ಹೇಗೆಲ್ಲ ಆಶೀರ್ವದಿಸಿದನು ಎಂಬುದರ ಬಗ್ಗೆ ಅವರಿಗೆ ವಿವರಿಸುವುದು ಎಷ್ಟು ರೋಮಾಂಚಕರ ಆಗಿರುವುದಲ್ಲವೇ? ಯೆಹೋವನು ತನ್ನ ಒಂದೊಂದು ವಾಗ್ದಾನವನ್ನೂ ಹೇಗೆ ನೆರವೇರಿಸಿದನೆಂದು ಕೇಳಿ ಖಂಡಿತ ಅವರ ಮನತುಂಬಿ ಬರುವುದು. ಬೈಬಲಿನಲ್ಲಿ ತಿಳಿಸಲಾಗಿರುವ ದೇವರ ನಿಷ್ಠಾವಂತ ಸೇವಕರು ಹಾಗಿದ್ದರೇನೊ ಹೀಗಿದ್ದರೇನೊ ಅಂತ ನಾವು ಈಗಿನ ತರ ಹೊಸ ಲೋಕದಲ್ಲಿ ಕಲ್ಪಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಅವರೆಲ್ಲರೂ ಅಲ್ಲಿ ನಮ್ಮ ಜೊತೆಯಲ್ಲೇ ಇರುತ್ತಾರೆ! ಆದ್ದರಿಂದ ಆ ಜನರು ಈಗಲೇ ನಿಮಗೆ ನೈಜವಾಗಿರುವಂತೆ ನಿಮ್ಮಿಂದಾದದ್ದೆಲ್ಲ ಪ್ರಯತ್ನ ಮಾಡಿ. ಅವರ ನಂಬಿಕೆಯನ್ನು ಅನುಕರಿಸುತ್ತಾ ಇರಿ. ಅವರೂ ನೀವೂ ಆತ್ಮೀಯ ಸ್ನೇಹಿತರಾಗಿದ್ದು ಸದಾಕಾಲಕ್ಕೂ ಜೊತೆಜೊತೆಯಾಗಿ ಯೆಹೋವನ ಸೇವೆ ಮಾಡುತ್ತಾ ಆನಂದಿಸುವಂತಾಗಲಿ!