ಅಧ್ಯಾಯ ಹದಿನಾಲ್ಕು
ಕರುಣೆಯ ಪಾಠ ಕಲಿತವನು
1. (1) ಯಾವ ರೀತಿಯ ಪ್ರಯಾಣವನ್ನು ಯೋನ ಕೈಗೊಳ್ಳಬೇಕಿತ್ತು? (2) ನಿನೆವೆಯ ಸಮೀಪ ಬಂದಂತೆ ಅವನಿಗೆ ಹೇಗನಿಸಿತು?
ಯೋನನಿಗೆ ತನಗಾದ ಅನುಭವಗಳ ಬಗ್ಗೆ ಯೋಚಿಸಲು ಸಾಕಷ್ಟು ಸಮಯ ಸಿಗಲಿತ್ತು. ಏಕೆಂದರೆ ಅವನೀಗ ಪ್ರಯಾಣ ಮಾಡಲಿಕ್ಕಿರುವುದು 800 ಕಿಲೋಮೀಟರ್ಗಿಂತಲೂ ಹೆಚ್ಚು ದೂರ. ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದ ಪ್ರಯಾಣ ಅದು. ಯಾವ ಮಾರ್ಗ ಹಿಡಿದು ಹೋಗೋದು? ಹತ್ತಿರದ ಮಾರ್ಗವಾ ಇಲ್ಲವೆ ದೂರವಾದರೂ ಸುರಕ್ಷಿತ ಮಾರ್ಗವಾ ಎಂಬದನ್ನು ಅವನು ಮೊದಲು ಆರಿಸಿ ನಂತರ ಪ್ರಯಾಣ ಆರಂಭಿಸಿದ. ಅನೇಕಾನೇಕ ಘಟ್ಟಗಳನ್ನು, ಕಣಿವೆಗಳನ್ನು ದಾಟಿದ. ಪ್ರಾಯಶಃ ಅವನು ಸಿರಿಯದ ವಿಶಾಲ ಮರುಭೂಮಿಯ ಅಂಚನ್ನು ಸುತ್ತಿಕೊಂಡು ನದಿಗಳನ್ನು ಅದರಲ್ಲೂ ಯೂಫ್ರೇಟೀಸ್ ಮಹಾನದಿಯನ್ನು ದಾಟಿದ. ರಾತ್ರಿಯಲ್ಲಿ ತಂಗಲು ಸಿರಿಯ, ಮೆಸಪೊಟೇಮಿಯ ಮತ್ತು ಅಶ್ಶೂರದ ಪಟ್ಟಣಗಳಲ್ಲಿ, ಹಳ್ಳಿಪಳ್ಳಿಗಳಲ್ಲಿ ಅಪರಿಚಿತರ ಬಳಿ ಬಹುಶಃ ಅವನು ಆಶ್ರಯ ಕೇಳಿದ. ದಿನಗಳು ಸಂದಂತೆ ನಿನೆವೆಯ ಹತ್ತಿರಹತ್ತಿರ ಬಂದ. ತಾನು ಅಷ್ಟು ಭಯಪಡುತ್ತಿದ್ದ ಆ ಪಟ್ಟಣದ ಕುರಿತು ಅವನು ಯೋಚಿಸಿದಂತೆ ಅವನ ತಳಮಳವೂ ಹೆಚ್ಚಾಯಿತು.
2. ನೇಮಕವನ್ನು ಸ್ವೀಕರಿಸುವಂತೆ ಯೆಹೋವನು ಯೋನನಿಗೆ ಹೇಗೆ ಕಲಿಸಿದ್ದನು?
2 ಹಿಂದೊಮ್ಮೆ ಮಾಡಿದಂತೆ ತಾನು ಈ ನೇಮಕ ಬಿಟ್ಟು ಓಡಿ ಹೋಗೋ ಹಾಗಿಲ್ಲ ಎನ್ನುವುದನ್ನು ಯೋನ ಚೆನ್ನಾಗಿ ತಿಳಿದುಕೊಂಡಿದ್ದನು. ಯೆಹೋವನು ತಾಳ್ಮೆಯಿಂದ ಯೋನನಿಗೆ ಇದನ್ನು ಕಲಿಸಿದ್ದನು. ಹೇಗೆಂದರೆ ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ ಸಮುದ್ರದಲ್ಲಿ ಬಿರುಗಾಳಿ ತಂದು ದೊಡ್ಡ ಮೀನಿನ ಮೂಲಕ ಅದ್ಭುತ ರೀತಿಯಲ್ಲಿ ಕಾಪಾಡಿದನು. ಮೂರು ದಿನಗಳ ನಂತರ ಆ ಮೀನು ಯೋನನನ್ನು ಯೋನ ಅಧ್ಯಾ. 1, 2.
ದಡದಲ್ಲಿ ಕಾರಿಬಿಟ್ಟಿತು. ಜೀವಂತವಾಗಿ ಹೊರಬಂದ ಯೋನ ತನಗಾದ ಅನುಭವದಿಂದ ಭಯವಿಸ್ಮಿತನೂ ಹೆಚ್ಚು ವಿಧೇಯನೂ ಆದನು.—3. (1) ಯೋನನ ವಿಷಯದಲ್ಲಿ ಯೆಹೋವನು ಯಾವ ಗುಣ ತೋರಿಸಿದನು? (2) ಯಾವ ಪ್ರಶ್ನೆ ಏಳುತ್ತದೆ?
3 ನಿನೆವೆಗೆ ಹೋಗಲು ಯೆಹೋವನು ಎರಡನೇ ಬಾರಿ ಆಜ್ಞಾಪಿಸಿದಾಗ ಯೋನ ವಿಧೇಯನಾದನು. ಪೂರ್ವಾಭಿಮುಖವಾಗಿ ದೀರ್ಘ ಪ್ರಯಾಣ ಕೈಗೊಂಡನು. (ಯೋನ 3:1-3 ಓದಿ.) ಆದರೆ ಯೆಹೋವನು ಶಿಸ್ತು ಕೊಟ್ಟ ಬಳಿಕ ಯೋನ ಪೂರ್ತಿ ಬದಲಾದನೇ? ಉದಾಹರಣೆಗೆ, ಯೋನನು ಸಮುದ್ರಪಾಲಾಗದಂತೆ ಕಾಪಾಡಿ, ಅವನ ದಂಗೆಗೆ ತಕ್ಕ ಶಿಕ್ಷೆ ಕೊಡದೆ, ಆ ನೇಮಕ ಪೂರೈಸಲು ಇನ್ನೊಂದು ಅವಕಾಶ ಕೊಡುವ ಮೂಲಕ ಯೆಹೋವನು ಕರುಣೆ ತೋರಿಸಿದ್ದನು. ಇದರಿಂದ ಯೋನ ತಾನು ಕೂಡ ಬೇರೆಯವರಿಗೆ ಕರುಣೆ ತೋರಿಸಬೇಕೆಂಬ ಪಾಠ ಕಲಿತನೇ? ಅಪರಿಪೂರ್ಣ ಮಾನವರಿಗೆ ಅನೇಕವೇಳೆ ಬೇರೆಯವರಿಗೆ ಕರುಣೆ ತೋರಿಸಲು ಕಷ್ಟವಾಗುತ್ತದೆ. ಈ ವಿಷಯದಲ್ಲಿ ಯೋನನಿಗೂ ಇದ್ದ ಸಮಸ್ಯೆಯಿಂದ ನಾವೇನು ಕಲಿಯಬಹುದೆಂದು ನೋಡೋಣ.
ತೀರ್ಪಿನ ಸಂದೇಶಕ್ಕೆ ಅನಿರೀಕ್ಷಿತ ಪ್ರತಿಕ್ರಿಯೆ
4, 5. (1) ನಿನೆವೆಯನ್ನು ದೊಡ್ಡ ಪಟ್ಟಣವೆಂದು ಯೆಹೋವನು ಕರೆದದ್ದು ಏಕೆ? (2) ಈ ಸಂಗತಿಯಿಂದ ಆತನ ಬಗ್ಗೆ ನಾವೇನು ಕಲಿಯಬಹುದು?
4 ನಿನೆವೆಯ ಬಗ್ಗೆ ಯೆಹೋವನಿಗಿದ್ದ ದೃಷ್ಟಿಕೋನ ಯೋನನಿಗಿರಲಿಲ್ಲ. ಯೆಹೋವನಿಗದು ಪ್ರಾಮುಖ್ಯ ಪಟ್ಟಣವಾಗಿತ್ತು. ಯೋನನ ದಾಖಲೆಯು ಉಲ್ಲೇಖಿಸುವ ಪ್ರಕಾರ ಯೆಹೋವನು ನಿನೆವೆಯನ್ನು ಮೂರು ಸಲ “ದೊಡ್ಡ ಪಟ್ಟಣ” ಎಂದು ಕರೆದನು. (ಯೋನ 1:2; 3:2; 4:11) ಯೆಹೋವನು ಏಕೆ ಆ ಪಟ್ಟಣವನ್ನು ದೊಡ್ಡದು ಅಥವಾ ಪ್ರಾಮುಖ್ಯ ಎಂದೆಣಿಸಿದನು?
5 ನಿನೆವೆ ಒಂದು ಪುರಾತನ ಪಟ್ಟಣ. ಜಲಪ್ರಳಯದ ನಂತರ ನಿಮ್ರೋದನು ಮೊತ್ತಮೊದಲು ಸ್ಥಾಪಿಸಿದ ಪಟ್ಟಣಗಳಲ್ಲಿ ಅದೂ ಒಂದು. ಇತರ ಅನೇಕ ಪಟ್ಟಣಗಳಿಂದ ಕೂಡಿದ್ದ ಮಹಾಪಟ್ಟಣವದು. ಅದೆಷ್ಟು ವಿಶಾಲವಾಗಿತ್ತೆಂದರೆ ಕಾಲ್ನಡಿಗೆಯಲ್ಲಿ ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಮೂರು ದಿನ ತಗಲುತ್ತಿತ್ತು. (ಆದಿ. 10:11; ಯೋನ 3:3) ನಿನೆವೆಯಲ್ಲಿ ಭವ್ಯ ದೇವಾಲಯಗಳು, ದೊಡ್ಡ ದೊಡ್ಡ ಕಟ್ಟಡಗಳು ಇದ್ದವು. ನಿನೆವೆಯ ಸುತ್ತ ಭದ್ರವಾದ ಗೋಡೆಗಳಿದ್ದವು. ಆದರೆ ಇದೆಲ್ಲದರ ಕಾರಣದಿಂದ ಯೆಹೋವನು ಅದನ್ನು ದೊಡ್ಡದು ಅಥವಾ ಪ್ರಾಮುಖ್ಯವೆಂದು ಎಣಿಸಲಿಲ್ಲ. ಬದಲಿಗೆ ಅಲ್ಲಿದ್ದ ಜನರಿಂದಾಗಿ ಆ ಪಟ್ಟಣ ಆತನಿಗೆ ಪ್ರಾಮುಖ್ಯವಾಗಿತ್ತು. ಆ ಕಾಲದ ಬೇರೆ ಪಟ್ಟಣಗಳಿಗೆ ಹೋಲಿಸಿದರೆ ನಿನೆವೆಯಲ್ಲೇ ಹೆಚ್ಚು ಜನರಿದ್ದರು. ಅವರು ದುಷ್ಟರಾಗಿದ್ದರೂ ಯೆಹೋವನಿಗೆ ಅವರ ಬಗ್ಗೆ ಕಾಳಜಿ ಇತ್ತು. ಏಕೆಂದರೆ ಮಾನವ ಜೀವ ಆತನಿಗೆ ಅಮೂಲ್ಯ. ಪ್ರತಿಯೊಬ್ಬ ವ್ಯಕ್ತಿಯು ಪಶ್ಚಾತ್ತಾಪಪಡಬೇಕು, ಸರಿಯಾದದ್ದನ್ನು ಮಾಡಲು ಕಲಿಯಬೇಕೆಂದು ಆತನು ಬಯಸುತ್ತಾನೆ.
6. (1) ನಿನೆವೆಯನ್ನು ಪ್ರವೇಶಿಸಿದಾಗ ಯೋನನ ಭಯ ಏಕೆ ಹೆಚ್ಚಾಗಿರಬಹುದು? (ಪಾದಟಿಪ್ಪಣಿ ಸಹ ನೋಡಿ.) (2) ಯೋನ ಸಾರಿದ ವಿಧದಿಂದ ಅವನ ಬಗ್ಗೆ ನಾವೇನು ಕಲಿಯಬಹುದು?
6 ಕೊನೆಗೂ ಯೋನ ನಿನೆವೆಗೆ ಬಂದು ತಲುಪಿದ. 1,20,000ಕ್ಕಿಂತಲೂ ಹೆಚ್ಚಿನ ಜನರಿಂದ ತುಂಬಿದ್ದ ಆ ಪಟ್ಟಣವನ್ನು ಪ್ರವೇಶಿಸಿದಾಗ ಅವನ ಎದೆ ಇನ್ನಷ್ಟು ಜೋರಾಗಿ ಬಡಿದುಕೊಂಡಿರಬಹುದು. * ಅವನು ಒಂದು ದಿನದಷ್ಟು ದೂರ ನಡೆದು ಬಹುಶಃ ತುಂಬ ಜನಸಂದಣಿಯಿರುವ ಸ್ಥಳಕ್ಕೆ ಬಂದು ತನ್ನ ಸಂದೇಶವನ್ನು ಘೋಷಿಸಲು ಒಂದು ಸೂಕ್ತ ಜಾಗದಲ್ಲಿ ನಿಂತನು. ಅಲ್ಲಿದ್ದ ಎಲ್ಲಾ ಜನರಿಗೆ ಯೆಹೋವನ ತೀರ್ಪನ್ನು ಅವನು ಹೇಗೆ ಹೇಳಲಿದ್ದನು? ಅಶ್ಶೂರ್ಯರ ಭಾಷೆ ಕಲಿತಿದ್ದನೇ? ಅಥವಾ ಆ ಭಾಷೆಯನ್ನಾಡುವ ಸಾಮರ್ಥ್ಯವನ್ನು ಯೆಹೋವನು ಅವನಿಗೆ ಅದ್ಭುತವಾಗಿ ನೀಡಿದನೇ? ನಮಗದು ಗೊತ್ತಿಲ್ಲ. ಬಹುಶಃ ತನ್ನ ಮಾತೃಭಾಷೆ ಹೀಬ್ರುವಿನಲ್ಲೇ ಯೋನನು ಆ ತೀರ್ಪಿನ ಘೋಷಣೆ ಮಾಡಿ, ಒಬ್ಬ ಭಾಷಾಂತರಕಾರನ ಮೂಲಕ ನಿನೆವೆಯ ಜನರಿಗೆ ಅದನ್ನು ತಿಳಿಸಿರಬೇಕು. ಅವನದನ್ನು ಹೇಗೆಯೇ ತಿಳಿಸಿರಲಿ ಅವನ ಸಂದೇಶ ಮಾತ್ರ ಸರಳವಾಗಿತ್ತು. “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು” ಎಂದು ಸಾರಿದನು. (ಯೋನ 3:4) ಇದು ಅವನಿಗೆ ಜನರ ಮೆಚ್ಚುಗೆಯನ್ನು ತರುವಂಥದ್ದಾಗಿರಲಿಲ್ಲ. ಆದರೂ ಧೈರ್ಯದಿಂದ ಮತ್ತು ಪದೇಪದೇ ಸಾರಿ ಹೇಳಿದನು. ಹೀಗೆ ಅಸಾಧಾರಣ ಧೈರ್ಯ ಮತ್ತು ನಂಬಿಕೆ ತೋರಿಸಿದನು. ಈ ಗುಣಗಳು ಕ್ರೈಸ್ತರಿಗೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಬೇಕಾಗಿವೆ.
ಯೋನ ಸಾರಿದ ಸಂದೇಶ ಸರಳ. ಆದರೆ ಅದು ಅವನಿಗೆ ಜನರ ಮೆಚ್ಚುಗೆಯನ್ನು ತರುವಂಥದ್ದಾಗಿರಲಿಲ್ಲ
7, 8. (1) ಯೋನನ ಸಂದೇಶಕ್ಕೆ ನಿನೆವೆಯ ಜನರು ಹೇಗೆ ಪ್ರತಿಕ್ರಿಯಿಸಿದರು? (2) ಯೋನನ ಘೋಷಣೆಗೆ ನಿನೆವೆಯ ರಾಜ ಹೇಗೆ ಪ್ರತಿಕ್ರಿಯಿಸಿದನು?
7 ಯೋನನ ಸಂದೇಶ ನಿನೆವೆಯ ಜನರ ಗಮನ ಸೆಳೆಯಿತು. ಅದನ್ನು ಕೇಳಿ ಜನರು ರೋಷಗೊಂಡು ತನ್ನ ಮೇಲೆ ಹಲ್ಲೆ ಮಾಡುವರೆಂದು ಅವನು ನೆನಸಿರಬಹುದು. ಆದರೆ ನಡೆದದ್ದೇ ಬೇರೆ! ಅನಿರೀಕ್ಷಿತ ಸಂಗತಿ! ಜನರ ಪ್ರತಿಕ್ರಿಯೆ ಒಳ್ಳೇದಾಗಿತ್ತು. ಯೋನನ ಮಾತುಗಳು ಕಾಡ್ಗಿಚ್ಚಿನಂತೆ ಹರಡಿದವು. ಸ್ವಲ್ಪದರಲ್ಲೇ ಇಡೀ ಪಟ್ಟಣದಲ್ಲಿ ವಿನಾಶದ ಕುರಿತ ಯೋನನ ಪ್ರವಾದನೆಯ ಬಗ್ಗೆ ಗುಜುಗುಜು ಶುರುವಾಯಿತು. (ಯೋನ 3:5 ಓದಿ.) ಧನಿಕ-ಬಡವ, ಬಲಿಷ್ಠ-ಬಲಹೀನ, ಹಿರಿಯ-ಕಿರಿಯರೆನ್ನದೆ ಎಲ್ಲರೂ ಪಶ್ಚಾತ್ತಾಪಪಟ್ಟರು. ಉಪವಾಸ ಮಾಡಿದರು. ಈ ಸುದ್ದಿ ಬೇಗನೆ ಅಲ್ಲಿನ ಅರಸನ ಕಿವಿಗೂ ಬಿತ್ತು.
8 ಯೋನನ ಘೋಷಣೆಗೆ ಪ್ರತಿಕ್ರಿಯೆಯಲ್ಲಿ ಅರಸನು ಸಹ ದೇವರಿಗೆ ಭಯಪಟ್ಟು ಪಶ್ಚಾತ್ತಾಪಪಡಲು ಮುಂದಾದನು. ಅವನು ತನ್ನ ಸಿಂಹಾಸನದಿಂದೆದ್ದು, ರಾಜವಸ್ತ್ರಗಳನ್ನು ಕಳಚಿ ತನ್ನ ಪ್ರಜೆಗಳಂತೆ ಗೋಣಿತಟ್ಟನ್ನು ಹೊದ್ದುಕೊಂಡು “ಬೂದಿಯಲ್ಲಿ ಕೂತನು.” ತನ್ನ “ರಾಜ್ಯಾಧಿಕಾರಿಗಳ” ಜೊತೆಸೇರಿ ರಾಜನು ಒಂದು ಆಜ್ಞೆ ಹೊರಡಿಸಿ ಜನರು ಈಗಾಗಲೇ ಮಾಡುತ್ತಿದ್ದ ಉಪವಾಸವನ್ನು ರಾಜ್ಯದಲ್ಲೆಲ್ಲಾ ಅಧಿಕೃತಗೊಳಿಸಿದನು. ಎಲ್ಲ ಜನರು, ಸಾಕುಪ್ರಾಣಿಗಳು ಸಹ ಗೋಣಿತಟ್ಟು ಹೊದ್ದುಕೊಳ್ಳಬೇಕೆಂದು ಆಜ್ಞಾಪಿಸಿದನು. * ತನ್ನ ಪ್ರಜೆಗಳು ಕೆಟ್ಟತನ ಮತ್ತು ಹಿಂಸಾಚಾರ ಮಾಡಿ ನಿಜವಾಗಿ ದೋಷಿಗಳಾಗಿದ್ದಾರೆಂದು ದೀನತೆಯಿಂದ ಒಪ್ಪಿಕೊಂಡನು. ತಮ್ಮ ಪಶ್ಚಾತ್ತಾಪವನ್ನು ಕಂಡು ಸತ್ಯದೇವರು ಮನಮರುಗಬಹುದೆಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಾ “ದೇವರು . . . ತನ್ನ ಉಗ್ರಕೋಪವನ್ನು ತೊಲಗಿಸಾನು, ನಾವು ನಾಶವಾಗದೆ ಉಳಿದೇವು” ಎಂದು ಹೇಳಿದನು.—ಯೋನ 3:6-9.
9. (1) ಟೀಕಾಕಾರರು ನಿನೆವೆಯ ಜನರ ಕುರಿತು ಯಾವ ಸಂದೇಹ ವ್ಯಕ್ತಪಡಿಸುತ್ತಾರೆ? (2) ಅವರ ಮಾತುಗಳಲ್ಲಿ ಹುರುಳಿಲ್ಲವೆಂದು ನಮಗೆ ಹೇಗೆ ಗೊತ್ತು?
9 ಅತಿ ದುಷ್ಟರಾದ ನಿನೆವೆಯ ಜನರು ಅಷ್ಟು ಬೇಗ ಪಶ್ಚಾತ್ತಾಪಪಡಲು ಸಾಧ್ಯವಿದೆಯಾ ಎಂದು ಕೆಲವು ಟೀಕಾಕಾರರು ಸಂದೇಹಪಡುತ್ತಾರೆ. ಆದರೆ ಪ್ರಾಚೀನ ಕಾಲದಲ್ಲಿ ಅಂಥ ಸಂಸ್ಕೃತಿಗಳ ಜನರಲ್ಲಿದ್ದ ಮೂಢನಂಬಿಕೆ ಮತ್ತು ಚಂಚಲ ಸ್ವಭಾವದಿಂದಾಗಿ ಮತ್ತಾಯ 12:41 ಓದಿ.) ಯೇಸು ನಿಜ ಸಂಗತಿಯನ್ನೇ ಹೇಳುತ್ತಿದ್ದನು. ನಿನೆವೆಯಲ್ಲಿ ಅದೆಲ್ಲ ನಡೆಯುತ್ತಿದ್ದಾಗ ಆತನು ಸ್ವರ್ಗದಿಂದ ನೋಡಿದ್ದನು. (ಯೋಹಾ. 8:57, 58) ನಿಜ ಏನೆಂದರೆ ಜನರು ಎಷ್ಟೇ ದುಷ್ಟರೆಂದು ತೋರಿದರೂ ಅವರು ಪಶ್ಚಾತ್ತಾಪಪಡಲು ಸಾಧ್ಯವೇ ಇಲ್ಲ ಎಂದು ನಾವು ಭಾವಿಸಬಾರದು. ಮನುಷ್ಯನ ಹೃದಯದಲ್ಲಿ ಏನಿದೆಯೆಂದು ತಿಳಿದುಕೊಳ್ಳಲು ಸಾಧ್ಯವಿರುವುದು ಯೆಹೋವ ದೇವರಿಗೆ ಮಾತ್ರ.
ಆ ಪ್ರತಿಕ್ರಿಯೆ ಅಸಾಮಾನ್ಯವಲ್ಲವೆಂದು ಬೈಬಲ್ ವಿದ್ವಾಂಸರು ಹೇಳುತ್ತಾರೆ. ಟೀಕಾಕಾರರ ಮಾತುಗಳಲ್ಲಿ ಯಾವುದೇ ಹುರುಳಿಲ್ಲವೆಂದು ನಮಗೆ ಗೊತ್ತು. ಏಕೆಂದರೆ ಕಾಲಾನಂತರ ಯೇಸು ಕ್ರಿಸ್ತನು ತಾನೇ ನಿನೆವೆಯ ಜನರ ಪಶ್ಚಾತ್ತಾಪದ ಬಗ್ಗೆ ಮಾತಾಡಿದನು. (ದೇವರ ಕಾರುಣ್ಯ ಮಾನವ ಕಾಠಿಣ್ಯ
10, 11. (1) ನಿನೆವೆಯ ಜನರು ಪಶ್ಚಾತ್ತಾಪಪಟ್ಟದ್ದಕ್ಕೆ ಯೆಹೋವನು ಏನು ಮಾಡಿದನು? (2) ಯೆಹೋವನು ಕೊಟ್ಟ ತೀರ್ಪಿನಲ್ಲಿ ಯಾವುದೇ ತಪ್ಪಿರಲಿಲ್ಲವೆಂದು ನಾವೇಕೆ ಖಾತ್ರಿಯಿಂದಿರಬಹುದು?
10 ನಿನೆವೆಯವರ ಪಶ್ಚಾತ್ತಾಪಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? “[ಸತ್ಯ] ದೇವರು ನಿನೆವೆಯವರ ಕಾರ್ಯಗಳನ್ನು ನೋಡಿ ಅವರು ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡರೆಂದು ತಿಳಿದು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು” ಎಂದು ಯೋನ ತದನಂತರ ಬರೆದನು.—ಯೋನ 3:10.
11 ಇದರರ್ಥ ನಿನೆವೆಯವರಿಗೆ ತಾನು ಕೊಟ್ಟ ತೀರ್ಪು ತಪ್ಪಾಗಿತ್ತೆಂದು ಯೆಹೋವನಿಗೆ ಅನಿಸಿತೊ? ಖಂಡಿತ ಇಲ್ಲ. ಯೆಹೋವನ ನ್ಯಾಯದಲ್ಲಿ ಯಾವುದೇ ಕುಂದಿಲ್ಲವೆಂದು ಬೈಬಲ್ ತಿಳಿಸುತ್ತದೆ. (ಧರ್ಮೋಪದೇಶಕಾಂಡ 32:4 ಓದಿ.) ನಿನೆವೆಯ ಜನರು ಬದಲಾವಣೆ ಮಾಡಿದ್ದನ್ನು ನೋಡಿ ಯೆಹೋವನ ಧರ್ಮಕ್ರೋಧ ಕಡಿಮೆಯಾಯಿತು. ತಾನು ಅವರ ಮೇಲೆ ವಿಧಿಸಬೇಕೆಂದಿದ್ದ ದಂಡನೆಯನ್ನು ತರುವುದು ಸೂಕ್ತವಲ್ಲವೆಂದು ಅವನಿಗನಿಸಿತು. ಅವರಿಗೆ ಕರುಣೆ ತೋರಿಸಲು ನಿರ್ಣಯಿಸಿದನು.
12, 13. (1) ಯೆಹೋವನು ನ್ಯಾಯಸಮ್ಮತನೂ ಹೊಂದಿಸಿಕೊಳ್ಳುವವನೂ ಕರುಣಾಮಯಿಯೂ ಆದ ದೇವರೆಂದು ಹೇಗೆ ಗೊತ್ತಾಗುತ್ತದೆ? (2) ಯೋನನ ಪ್ರವಾದನೆ ಸುಳ್ಳಾಗಿರಲಿಲ್ಲ ಏಕೆ?
12 ದೇವರು ನಿಷ್ಕರುಣಿ, ಕ್ರೂರಿ, ಕಲ್ಲುಹೃದಯದವನು ಎಂಬ ಚಿತ್ರಣವನ್ನು ಧರ್ಮಗುರುಗಳು ಅನೇಕವೇಳೆ ಕೊಡುತ್ತಾರೆ. ಆದರೆ ಯೆಹೋವ ದೇವರು ಹಾಗಿಲ್ಲ. ಆತನು ನ್ಯಾಯಸಮ್ಮತನೂ ಹೊಂದಿಸಿಕೊಳ್ಳುವವನೂ ಕರುಣಾಮಯಿಯೂ ಆದ ದೇವರು. ದುಷ್ಟರಿಗೆ ದಂಡನೆ ವಿಧಿಸಲು ನಿರ್ಣಯಿಸುವಾಗ ಆತನು ಮೊದಲು ಅವರಿಗೆ ತನ್ನ ಭೂಸೇವಕರ ಮೂಲಕ ಎಚ್ಚರಿಕೆ ನೀಡುತ್ತಾನೆ. ಯಾಕೆಂದರೆ ದುಷ್ಟರು ಸಹ ನಿನೆವೆಯ ಜನರಂತೆ ಪಶ್ಚಾತ್ತಾಪಪಟ್ಟು ತಮ್ಮ ದುರ್ಮಾರ್ಗಗಳನ್ನು ಬಿಟ್ಟುಬಿಡಬೇಕೆಂಬದೇ ಆತನ ತೀವ್ರಾಪೇಕ್ಷೆ. (ಯೆಹೆ. 33:11) ಯೆಹೋವನು ತನ್ನ ಪ್ರವಾದಿ ಯೆರೆಮೀಯನಿಗೆ, “ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ರಾಜ್ಯವನ್ನಾಗಲಿ ಕಿತ್ತುಕೆಡವಿ ನಾಶಪಡಿಸಬೇಕೆಂದು ಅಪ್ಪಣೆಕೊಟ್ಟಾಗ ನಾನು ದಂಡನೆನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು” ಎಂದು ಹೇಳಿದನು.—ಯೆರೆ. 18:7, 8.
ದುಷ್ಟರು ಸಹ ನಿನೆವೆಯ ಜನರಂತೆ ಪಶ್ಚಾತ್ತಾಪಪಟ್ಟು ತಮ್ಮ ದುರ್ಮಾರ್ಗಗಳನ್ನು ಬಿಟ್ಟುಬಿಡಬೇಕೆಂಬದೇ ದೇವರ ತೀವ್ರಾಪೇಕ್ಷೆ
14. ಯೆಹೋವನು ನಿನೆವೆಯ ಮೇಲೆ ಕರುಣೆ ತೋರಿಸಿದ್ದಕ್ಕೆ ಯೋನನು ಹೇಗೆ ಪ್ರತಿಕ್ರಿಯಿಸಿದನು?
14 ತಾನು ನಿರೀಕ್ಷಿಸಿದ ಸಮಯದಲ್ಲಿ ನಿನೆವೆಯ ಮೇಲೆ ನಾಶನ ಬಾರದಿದ್ದಾಗ ಯೋನನು ಹೇಗೆ ಪ್ರತಿಕ್ರಿಯಿಸಿದನು? ‘ಯೋನನಿಗೆ ಬಹು ಕರಕರೆಯಾಯಿತು; ಅವನು ಸಿಟ್ಟುಗೊಂಡನು’ ಎನ್ನುತ್ತದೆ ಬೈಬಲ್. (ಯೋನ 4:1, 2) ಆಗ ಅವನು ಮಾಡಿದ ಪ್ರಾರ್ಥನೆಯಲ್ಲಿ ಸರ್ವಶಕ್ತ ದೇವರದ್ದೇ ತಪ್ಪು ಎಂಬಂತೆ ಮಾತಾಡಿದನು! ತಾನು ಸ್ವದೇಶದಲ್ಲೇ ಇರುತ್ತಿದ್ದರೆ ಒಳ್ಳೇದಿರುತ್ತಿತ್ತು ಎಂದು ಹೇಳಿದನು ಸಹ. ನಿನೆವೆಯ ಮೇಲೆ ಯೆಹೋವನು ಯಾವತ್ತೂ ವಿಪತ್ತು ತರುವುದಿಲ್ಲವೆಂದು ತನಗೆ ಮೊದಲೇ ಗೊತ್ತಿತ್ತು, ಅದಕ್ಕೇ ತಾನು ತಾರ್ಷೀಷಿಗೆ ಓಡಿಹೋಗಿದ್ದು ಎಂಬ ನೆಪವನ್ನೂ ಕೊಟ್ಟನು. ತಾನು ಬದುಕಿರುವುದಕ್ಕಿಂತ ಸಾಯುವುದೇ ಲೇಸು ಎಂದು ಗೊಣಗುತ್ತಾ ತನ್ನ ಪ್ರಾಣವನ್ನು ತೆಗೆಯುವಂತೆ ಕೇಳಿಕೊಂಡನು.—ಯೋನ 4:2, 3 ಓದಿ.
15. (1) ಯೋನನು ಏಕೆ ಕರಕರೆಗೊಂಡಿರಬಹುದು? (2) ಕಂಗಾಲಾದ ಪ್ರವಾದಿಯೊಂದಿಗೆ ಯೆಹೋವನು ಹೇಗೆ ನಡಕೊಂಡನು?
15 ಯೋನನು ಅಷ್ಟು ಕರಕರೆಗೊಂಡಿದ್ದೇಕೆ? ಅವನ ಮನಸ್ಸಿನಲ್ಲಿ ಏನೆಲ್ಲ ಇತ್ತೆಂದು ನಮಗೆ ಗೊತ್ತಿಲ್ಲ. ನಮಗೆ ಇಷ್ಟು ಮಾತ್ರ ಗೊತ್ತು ಏನೆಂದರೆ ಅವನು ನಿನೆವೆಯ ಜನರಿಗೆ ನಾಶನವನ್ನು ಸಾರಿ ಹೇಳಿದ್ದನು, ಅವರು ಅವನ ಮಾತನ್ನು ನಂಬಿದರು, ಆದರೆ ಆ ನಾಶನ ಬರಲೇ ಇಲ್ಲ. ಆದ್ದರಿಂದ ಜನರು ತನ್ನನ್ನು ಪರಿಹಾಸ್ಯಮಾಡಿ ಸುಳ್ಳು ಪ್ರವಾದಿಯೆಂಬ ಹಣೆಪಟ್ಟಿ ಕಟ್ಟುವರೆಂಬ ಭಯ ಅವನಿಗಿದ್ದಿರಬಹುದೇ? ಅದೇನೇ ಇರಲಿ, ಜನರು ಪಶ್ಚಾತ್ತಾಪಪಟ್ಟದ್ದರ ಬಗ್ಗೆ ಅಥವಾ ಯೆಹೋವನು ಅವರಿಗೆ ಕರುಣೆ ತೋರಿಸಿದ್ದರ ಬಗ್ಗೆ ಅವನಿಗೆ ಸಂತೋಷವಾಗಲಿಲ್ಲ. ಬದಲಾಗಿ ಅವನು ಕಹಿಭಾವನೆಯ ಮಡುವಿನಲ್ಲಿ ಮುಳುಗಿಹೋದನು, ಅವನ ಬಗ್ಗೆ ಅವನಿಗೇ ಅನುಕಂಪ ಹುಟ್ಟಿತು, ಅವನಿಗೆ ಮುಖಭಂಗವಾದಂತೆ ಅನಿಸಿರಬೇಕು. ಹೀಗೆ ಕಂಗಾಲಾದ ಈ ಪ್ರವಾದಿಯಲ್ಲಿ ಕರುಣಾಮಯಿ ದೇವರು ಏನೋ ಒಳ್ಳೇದನ್ನು ಕಂಡನು. ಅವನು ತೋರಿಸಿದ ಅಗೌರವಕ್ಕಾಗಿ ಯೆಹೋವನು ಶಿಕ್ಷಿಸಲಿಲ್ಲ. “ನೀನು ಸಿಟ್ಟುಗೊಳ್ಳುವದು ಸರಿಯೋ” ಎಂಬ ಸ್ವಪರೀಕ್ಷೆಯ ಪ್ರಶ್ನೆಯೊಂದನ್ನು ಅವನಿಗೆ ಮೃದುವಾಗಿ ಕೇಳಿದನು. (ಯೋನ 4:4) ಅದಕ್ಕೆ ಯೋನನು ಉತ್ತರ ಕೊಟ್ಟನೇ? ಈ ವಿಷಯದಲ್ಲಿ ಬೈಬಲ್ ಏನೂ ಹೇಳುವುದಿಲ್ಲ.
16. (1) ಯಾವ ವಿಷಯಗಳಲ್ಲಿ ಯೆಹೋವನ ನಿರ್ಣಯ ಕೆಲವರಿಗೆ ಸರಿಕಾಣುವುದಿಲ್ಲ? (2) ಯೋನನ ಉದಾಹರಣೆಯಿಂದ ನಾವು ಯಾವ ಪಾಠ ಕಲಿಯುತ್ತೇವೆ?
16 ಯೋನ ಮಾಡಿದ್ದು ತಪ್ಪು ಎಂದು ಹೇಳುವುದು ಸುಲಭ. ಆದರೆ ಅಪರಿಪೂರ್ಣ ಮಾನವರಿಗೆ ಯೆಹೋವನ ನಿರ್ಣಯಗಳು ಸರಿಕಾಣದಿರುವುದು ಸಹಜ ಎನ್ನುವುದನ್ನು ನೆನಪಿಡೋಣ. ಉದಾಹರಣೆಗೆ ನಡೆದಿರುವ ಒಂದು ದುರಂತವನ್ನು ಯೆಹೋವನು ತಡೆಯಬೇಕಿತ್ತು ಎಂದೋ, ಕೆಟ್ಟದ್ದನ್ನು ಮಾಡುವವರಿಗೆ ಅಲ್ಲೇ ಆ ಕ್ಷಣವೇ ಶಿಕ್ಷೆ ವಿಧಿಸಬೇಕಿತ್ತು ಎಂದೋ, ಇಷ್ಟರೊಳಗೆ ಇಡೀ ಲೋಕ ವ್ಯವಸ್ಥೆಗೆ ದೇವರು ಅಂತ್ಯ ತರಬೇಕಿತ್ತು ಎಂದೋ ಕೆಲವರು ಯೋಚಿಸುತ್ತಾರೆ. ಯೆಹೋವನ ನಿರ್ಣಯಗಳು ನಮಗೆ ಸರಿಕಾಣದಿದ್ದಾಗ ಬದಲಾಗಬೇಕಾದದ್ದು ನಮ್ಮ ದೃಷ್ಟಿಕೋನವೇ ಹೊರತು ಆತನದ್ದಲ್ಲವೆಂದು ಯೋನನ ಉದಾಹರಣೆ ನಮಗೆ ನೆನಪು ಹುಟ್ಟಿಸುತ್ತದೆ.
ಯೆಹೋವನು ಕಲಿಸಿದ ಪಾಠ
17, 18. (1) ನಿನೆವೆಯನ್ನು ಬಿಟ್ಟು ಹೋದನಂತರ ಯೋನ ಏನು ಮಾಡಿದನು? (2) ಯೆಹೋವನು ಸೋರೆಗಿಡದ ವಿಷಯದಲ್ಲಿ ಮಾಡಿದ ಅದ್ಭುತಗಳು ಯೋನನ ಮೇಲೆ ಯಾವ ಪರಿಣಾಮ ಬೀರಿದವು?
17 ನಿರಾಶೆಗೊಂಡ ಈ ಪ್ರವಾದಿ ನಿನೆವೆಯಿಂದ ಹೊರಟನು. ತನ್ನ ಮನೆಗಲ್ಲ,
ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಪೂರ್ವ ದಿಕ್ಕಿಗೆ. ಅಲ್ಲಿ ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡು ನಿನೆವೆಗೆ ಏನಾಗುತ್ತದೆ ನೋಡೋಣವೆಂದು ಕಾಯುತ್ತಾ ಕುಳಿತನು. ನಿನೆವೆಯ ನಾಶನವನ್ನು ನೋಡುವ ನಿರೀಕ್ಷೆ ಅವನಿಗೆ ಇನ್ನೂ ಇದ್ದಿರಬಹುದು. ಇಂಥ ಮೊಂಡತನದ ವ್ಯಕ್ತಿಗೆ ಕರುಣೆಯ ಪಾಠವನ್ನು ಯೆಹೋವನು ಕಲಿಸಿದ್ದು ಹೇಗೆ?18 ರಾತ್ರಿಬೆಳಗಾಗುವುದರೊಳಗೆ ಯೆಹೋವನು ಒಂದು ಸೋರೆಗಿಡ ಬೆಳೆಯುವಂತೆ ಮಾಡಿದನು. ಸೊಂಪಾಗಿ ಬೆಳೆದು ಬಂದ ಈ ಗಿಡವನ್ನು ಯೋನ ನೋಡಿದನು. ಅದರ ಅಗಲವಾದ ಎಲೆಗಳಿಂದ ಸಿಗುತ್ತಿದ್ದ ನೆರಳು ತನ್ನ ಚಿಕ್ಕ ಗುಡಿಸಲು ನೀಡುವ ನೆರಳಿಗಿಂತ ಎಷ್ಟೋ ತಂಪೆನಿಸಿತು. ಆ ಗಿಡವನ್ನು ನೋಡಿ “ಯೋನನಿಗೆ ಬಹು ಸಂತೋಷವಾಯಿತು,” ಮನಸ್ಸು ಆನಂದದಿಂದ ಅರಳಿತು. ಯೆಹೋವನು ಅದ್ಭುತಮಾಡಿ ಬೆಳೆಸಿದ ಈ ಗಿಡ ನೋಡಿ ಆತನ ಆಶೀರ್ವಾದ, ಮೆಚ್ಚುಗೆ ತನಗಿದೆಯೆಂದು ಯೋನ ಅಂದುಕೊಂಡಿರಬೇಕು. ಆದರೆ ಯೆಹೋವನು ಆ ಗಿಡವನ್ನು ಬೆಳೆಸಿದ್ದು ಅವನನ್ನು ಆ ಬಿಸಿಲಬೇಗೆಯಿಂದ ಕಾಪಾಡಲಿಕ್ಕಾಗಿ ಅಲ್ಲ. ಅವನ ಮುಂಗೋಪ ತಣಿಸಲಿಕ್ಕಾಗಿಯೂ ಅಲ್ಲ. ಬದಲಾಗಿ ಒಂದು ಮನಮುಟ್ಟುವ ಪಾಠ ಕಲಿಸಲಿಕ್ಕಾಗಿ. ಆದುದರಿಂದ ಯೆಹೋವನು ಇನ್ನೂ ಹೆಚ್ಚಿನ ಅದ್ಭುತಗಳನ್ನು ಮಾಡಿದನು. ಮೊದಲು ಒಂದು ಹುಳ ಆ ಸೋರೆಗಿಡವನ್ನು ತಿಂದುಹಾಕಿ ಅದು ಒಣಗಿಹೋಗುವಂತೆ ಮಾಡಿದನು. ಅನಂತರ “ಬಿಸಿಯಾದ ಮೂಡಣ ಗಾಳಿ” ಬೀಸುವಂತೆ ಮಾಡಿದನು. ಆಗ ಯೋನನು ತಾಪದಿಂದ ಬಳಲಿ ‘ಮೂರ್ಛೆಹೋಗುವವನಾದನು.’ ಅವನ ಮನಸ್ಸು ಏಕಾಏಕಿ ಮುದುಡಿ, ಜೀವ ರೋಸಿಹೋಯಿತು. ದೇವರಲ್ಲಿ ಪುನಃ ಮರಣಭಿಕ್ಷೆ ಕೇಳಿದನು.—ಯೋನ 4:6-8.
19, 20. ಸೋರೆಗಿಡವನ್ನು ಉಪಯೋಗಿಸಿ ಯೆಹೋವನು ಯೋನನೊಂದಿಗೆ ಹೇಗೆ ತರ್ಕಿಸಿದನು?
19 ಯೆಹೋವನು ಮತ್ತೊಮ್ಮೆ ಯೋನನಿಗೆ ಅವನು ಸಿಟ್ಟುಗೊಳ್ಳುವುದೊ ಸರಿಯೋ ಎಂದು ಕೇಳಿದನು. ಈ ಸಲ ಅದನ್ನು ಕೇಳಿದ್ದು ಸೋರೆಗಿಡ ಒಣಗಿ ಹೋದದ್ದರ ಸಂಬಂಧದಲ್ಲಿ. ಆಗ ಯೋನನು, “ಮರಣವಾಗುವಷ್ಟು ಸಿಟ್ಟುಗೊಳ್ಳುವದು ಸರಿ” ಎಂದು ಉತ್ತರಕೊಟ್ಟನು. ಅವನು ಪಶ್ಚಾತ್ತಾಪಪಡಲಿಲ್ಲ. ತನ್ನನ್ನೇ ಸಮರ್ಥಿಸಿಕೊಂಡನು. ಈಗ ಯೆಹೋವನು ಯೋನನ ಮನಸ್ಸಿಗೆ ನಾಟುವಂಥ ಪಾಠವನ್ನು ಕಲಿಸುವ ಸಮಯ ಬಂದಿತ್ತು.—ಯೋನ 4:9.
20 ಆತನು ಯೋನನೊಂದಿಗೆ ತರ್ಕಿಸಿದನು. ಒಂದೇ ರಾತ್ರಿಯೊಳಗೆ ಬೆಳೆದು ಅನಂತರ ಸತ್ತು ಹೋದ, ಅದೂ ತಾನು ನೆಟ್ಟು ಬೆಳೆಸಿರದ ಬರೇ ಒಂದು ಸೋರೆಗಿಡಕ್ಕಾಗಿ ಯೋನ ದುಃಖಿಸುತ್ತಿದ್ದನು. ಹೀಗಿರುವಾಗ, “ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ” ಎಂದು ಯೆಹೋವನು ಕೇಳಿದನು.—ಯೋನ 4:10, 11. *
21. (1) ಸೋರೆಗಿಡದ ಮೂಲಕ ಯೆಹೋವನು ಯೋನನಿಗೆ ಯಾವ ಪಾಠ ಕಲಿಸಿದನು? (2) ನಮ್ಮ ಕುರಿತು ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡಿಕೊಳ್ಳಲು ಯೋನನ ವೃತ್ತಾಂತ ಹೇಗೆ ಸಹಾಯಮಾಡಬಲ್ಲದು?
21 ಯೆಹೋವನು ಸೋರೆಗಿಡದ ಮೂಲಕ ಯಾವ ಪಾಠ ಕಲಿಸಿದನು? ಆ ಸಸಿಯನ್ನು ನೆಟ್ಟು ಬೆಳೆಸಲು ಯೋನನು ಸ್ವಲ್ಪವೂ ಕಷ್ಟಪಟ್ಟಿರಲಿಲ್ಲ. ಯೆಹೋವನಾದರೋ ಆ ನಿನೆವೆಯ ಜನರ ಜೀವದಾತನಾಗಿದ್ದನು. ಭೂಮಿಯ ಸಕಲ ಜೀವಿಗಳನ್ನು ಹೇಗೋ ಹಾಗೆ ಅವರನ್ನೂ ಪೋಷಿಸುತ್ತಿದ್ದನು. ನಿನೆವೆಯ 1,20,000 ಜನರ ಹಾಗೂ ಎಷ್ಟೋ ಪಶುಪ್ರಾಣಿಗಳ ಜೀವಕ್ಕಿಂತ ಬರೇ ಒಂದು ಗಿಡ ಹೆಚ್ಚು ಅಮೂಲ್ಯವೆಂದು ಯೋನನು ಎಣಿಸಿದ್ದಾದರೂ ಹೇಗೆ? ಬರೀ ತನ್ನ ಬಗ್ಗೆ ಯೋಚಿಸಿದ್ದು ಅದಕ್ಕೆ ಕಾರಣವಾಗಿತ್ತಲ್ಲವೇ? ಅವನು ಆ ಗಿಡಕ್ಕಾಗಿ ಮರುಗಿದ್ದು ಅದು ತನಗೆ ಉಪಯುಕ್ತವಾಗಿದ್ದ ಕಾರಣದಿಂದ ಮಾತ್ರ. ಅಂತೆಯೇ ನಿನೆವೆಯ ಬಗ್ಗೆ ಅವನು ಸಿಟ್ಟುಗೊಂಡಿದ್ದು ಸ್ವಾರ್ಥದಿಂದಲೇ. ತನ್ನ ಹೆಸರು ಉಳಿಸಿಕೊಳ್ಳಬೇಕು, ತಾನು ಸಾರಿದಂತೆ ಆಗಬೇಕೆಂಬ ಸ್ವಾರ್ಥ ಅಲ್ಲದೆ ಬೇರೇನು? ಯೋನನ ಈ ಕಥೆ ನಾವು ನಮ್ಮ ಮನೋಭಾವವನ್ನು ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡಿಕೊಳ್ಳಲು ಸಹಾಯಮಾಡುತ್ತದೆ. ಸ್ವಾರ್ಥಪರ ಪ್ರವೃತ್ತಿಗಳಿಲ್ಲದವರು ನಮ್ಮಲ್ಲಿ ಯಾರಿದ್ದಾರೆ ಹೇಳಿ? ಯೆಹೋವನು ನಮಗೆ ಆತನಂತೆ ನಿಸ್ವಾರ್ಥಿಗಳು, ಸಹಾನುಭೂತಿ ಉಳ್ಳವರು ಹಾಗೂ ಕರುಣಾಮಯಿಗಳು ಆಗಿರುವಂತೆ ತಾಳ್ಮೆಯಿಂದ ಕಲಿಸುತ್ತಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬೇಕಲ್ಲವೇ?
22. (1) ಕರುಣೆಯ ಕುರಿತು ಯೆಹೋವನು ವಿವೇಕಯುತವಾಗಿ ಬೋಧಿಸಿದ ವಿಧದಿಂದ ಯೋನ ಪಾಠ ಕಲಿತನೆಂದು ಹೇಗೆ ಹೇಳಬಹುದು? (2) ನಾವೆಲ್ಲರು ಕಲಿಯಬೇಕಾದ ಪಾಠ ಯಾವುದು?
22 ಪ್ರಶ್ನೆ ಏನೆಂದರೆ ಯೋನ ಆ ಪಾಠವನ್ನು ಕಲಿತನೇ? “ನಿನೆವೆಗಾಗಿ ನಾನು ಕನಿಕರಪಡಬಾರದೋ” ಎಂದು ಯೆಹೋವನು ಯೋನನಿಗೆ ಕೇಳಿದ ಪ್ರಶ್ನೆಯೊಂದಿಗೆ ಯೋನ ಪುಸ್ತಕವು ಕೊನೆಗೊಳ್ಳುತ್ತದೆ. ಈ ಪ್ರಶ್ನೆಗೆ ಯೋನ ಎಂದೂ ಉತ್ತರವನ್ನೇ ಕೊಟ್ಟಿಲ್ಲ ಎನ್ನುವುದು ಕೆಲವು ಟೀಕಾಕಾರರ ಅಭಿಪ್ರಾಯ. ಆದರೆ ನಿಜ ಸಂಗತಿಯೇನೆಂದರೆ ಅವನು ಉತ್ತರ ಕೊಟ್ಟಿದ್ದಾನೆ. ಯೋನ ಪುಸ್ತಕವೇ ಅದಕ್ಕೆ ಉತ್ತರ. ಆ ಪುಸ್ತಕವನ್ನು ಬರೆದವನು ಯೋನನೇ ಎಂದು ಪುರಾವೆ ತೋರಿಸುತ್ತದೆ. ತನ್ನ ಸ್ವದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಿದ ಮೇಲೆ ಆ ಪ್ರವಾದಿಯು ತನ್ನ ಸ್ವಂತ ವೃತ್ತಾಂತ ಬರೆಯುತ್ತಿದ್ದದ್ದನ್ನು ತುಸು ಕಲ್ಪಿಸಿಕೊಳ್ಳಿ. ಇದನ್ನು ಬರೆಯುತ್ತಿದ್ದಾಗ ಅವನ ವಯಸ್ಸು ಹೆಚ್ಚಾಗಿತ್ತು. ಅನುಭವಸ್ಥನೂ ಇನ್ನಷ್ಟು ದೀನನೂ ಆಗಿದ್ದನು. ತಾನು ಯೆಹೋವನ ವಿರುದ್ಧ ದಂಗೆಯೆದ್ದದ್ದು, ಕರುಣೆ ತೋರಿಸದಿರಲು ಹಠ ಹಿಡಿದದ್ದು ಹೀಗೆ ತನ್ನ ಸ್ವಂತ ತಪ್ಪುಗಳನ್ನು ವಿವರಿಸುತ್ತಾ ಬರೆಯುವಾಗ ಅವನು ವಿಷಾದದಿಂದ ತಲೆಯಾಡಿಸಿದ್ದಿರಬಹುದಲ್ಲಾ? ಹೌದು, ಯೆಹೋವನು ವಿವೇಕಯುತವಾಗಿ ಬೋಧಿಸಿದ ವಿಧದಿಂದ ಯೋನ ನಿಜವಾಗಿಯೂ ಪಾಠ ಕಲಿತನು. ಕರುಣೆ ತೋರಿಸಲು ಕಲಿತನು. ನಾವೂ ಇತರರಿಗೆ ಕರುಣೆ ತೋರಿಸಲು ಕಲಿಯುವೆವಾ?—ಮತ್ತಾಯ 5:7 ಓದಿ.
^ ಪ್ಯಾರ. 6 ಹತ್ತು ಕುಲಗಳಿದ್ದ ಇಸ್ರಾಯೇಲ್ ರಾಜ್ಯದ ರಾಜಧಾನಿ ಸಮಾರ್ಯವಾಗಿತ್ತು. ಯೋನನ ದಿನಗಳಲ್ಲಿ ಅಲ್ಲಿನ ಜನಸಂಖ್ಯೆ 20,000ದಿಂದ 30,000 ಇತ್ತೆಂದು ಅಂದಾಜಿಸಲಾಗಿದೆ. ಅಂದರೆ ನಿನೆವೆಯ ಜನಸಂಖ್ಯೆಯ ಕಾಲು ಭಾಗಕ್ಕಿಂತಲೂ ಕಡಿಮೆ. ನಿನೆವೆಯ ಸಮೃದ್ಧಿಯ ಸಮಯದಲ್ಲಿ ಇಡೀ ಲೋಕದಲ್ಲೇ ನಿನೆವೆಯು ಅತೀ ದೊಡ್ಡ ಪಟ್ಟಣವಾಗಿದ್ದಿರಬಹುದು.
^ ಪ್ಯಾರ. 8 ಇದು ವಿಚಿತ್ರವಾಗಿ ಕಾಣಬಹುದಾದರೂ ಪುರಾತನ ಕಾಲದಲ್ಲಿ ಇಂಥ ಸಂಗತಿ ನಡೆದಿತ್ತು. ಪ್ರಾಚೀನ ಪರ್ಷಿಯನ್ನರು ಜನಪ್ರಿಯ ಸೇನಾನಿಯೊಬ್ಬನು ಮರಣಹೊಂದಿದ ಬಳಿಕ ಶೋಕಪದ್ಧತಿಗಳಲ್ಲಿ ತಮ್ಮ ಪ್ರಾಣಿಗಳನ್ನೂ ಒಳಗೂಡಿಸಿದ್ದರೆಂದು ಗ್ರೀಕ್ ಇತಿಹಾಸಕಾರ ಹೆರಡಟಸ್ ತಿಳಿಸಿದ್ದಾನೆ.
^ ಪ್ಯಾರ. 20 ನಿನೆವೆಯ ಜನರಿಗೆ ಎಡಗೈ ಬಲಗೈ ತಿಳಿಯದು ಎಂದು ದೇವರು ಹೇಳಿದ್ದು, ಅವರು ತನ್ನ ಮಟ್ಟಗಳ ಬಗ್ಗೆ ಯಾವ ಅರಿವೂ ಇಲ್ಲದ ಜನರಾಗಿದ್ದರು ಎಂಬ ಅರ್ಥದಲ್ಲಿ.