ಅಧ್ಯಾಯ 8
ಕಾನಾನ್ ದೇಶಕ್ಕೆ ಇಸ್ರಾಯೇಲ್ಯರ ಪ್ರವೇಶ
ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲ್ಯರು ಕಾನಾನನ್ನು ವಶಪಡಿಸಿಕೊಳ್ಳುತ್ತಾರೆ. ಶೋಷಣೆಗೊಳಗಾಗಿದ್ದ ತನ್ನ ಜನರನ್ನು ಕಾಪಾಡುವುದಕ್ಕಾಗಿ ಯೆಹೋವನು ನ್ಯಾಯಸ್ಥಾಪಕರನ್ನು ನೇಮಿಸುತ್ತಾನೆ
ಕಾನಾನ್ ದೇಶವನ್ನು ಅಬ್ರಹಾಮನ ಸಂತತಿಗೆ ನೀಡುವನೆಂದು ನೂರಾರು ವರ್ಷಗಳ ಹಿಂದೆಯೇ ಯೆಹೋವನು ವಾಗ್ದಾನಿಸಿದ್ದನು. ಈಗ ಇಸ್ರಾಯೇಲ್ಯರು ಕಾನಾನ್ ದೇಶವನ್ನು ವಶಪಡಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಯೆಹೋಶುವನು ಅವರ ನಾಯಕನು.
ಕಾನಾನ್ ದೇಶದವರನ್ನು ನಾಶಪಡಿಸಲು ಯೆಹೋವನು ತೀರ್ಮಾನಿಸಿದನು. ಅದಕ್ಕೆ ಸಕಾರಣವೂ ಇತ್ತು. ಅವರು ದೇಶವನ್ನು ಅತಿ ಕೀಳುಮಟ್ಟದ ಲೈಂಗಿಕ ಕೃತ್ಯಗಳಿಂದ ತುಂಬಿಸಿದ್ದರು. ಅವರ ಕ್ರೂರತನದ ಫಲವಾಗಿ ದೇಶದಲ್ಲೆಲ್ಲಾ ರಕ್ತದ ಹೊಳೆ ಹರಿಯುತ್ತಿತ್ತು. ಆದುದರಿಂದ, ಇಸ್ರಾಯೇಲ್ಯರು ಕಾನಾನಿನ ಪಟ್ಟಣಗಳನ್ನು ವಶಪಡಿಸಿಕೊಂಡು ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕಿತ್ತು.
ಆ ದೇಶಕ್ಕೆ ಹೋಗುವ ಮೊದಲು ಯೆಹೋಶುವನು ಇಬ್ಬರು ಗೂಢಚಾರರನ್ನು ಅಲ್ಲಿಗೆ ಕಳುಹಿಸಿದನು. ಅವರು ಆ ದೇಶದ ಯೆರಿಕೋ ಪಟ್ಟಣಕ್ಕೆ ಬಂದು ರಾಹಾಬ್ ಎಂಬ ಸ್ತ್ರೀಯ ಮನೆಯಲ್ಲಿ ತಂಗಿದರು. ಇಸ್ರಾಯೇಲ್ಯ ಗೂಢಚಾರರೆಂದು ಗೊತ್ತಿದ್ದರೂ ರಾಹಾಬಳು ಅವರನ್ನು ತನ್ನ ಮನೆಯಲ್ಲಿ ಇಳುಕೊಳ್ಳಲು ಅನುಮತಿಸಿ ಕಾಪಾಡಿದಳು. ಏಕೆಂದರೆ, ಅವಳಿಗೆ ಇಸ್ರಾಯೇಲ್ಯರ ದೇವರಲ್ಲಿ ತುಂಬಾ ನಂಬಿಕೆ ಇತ್ತು. ಇಸ್ರಾಯೇಲ್ಯರನ್ನು ಕಾಪಾಡಲಿಕ್ಕಾಗಿ ಯೆಹೋವನು ಮಾಡಿದ್ದ ಮಹಾತ್ಕಾರ್ಯಗಳನ್ನೆಲ್ಲಾ ಅವಳು ಕೇಳಿಸಿಕೊಂಡಿದ್ದಳು. ಆದುದರಿಂದ, ತನ್ನನ್ನೂ ತನ್ನ ಮನೆಯವರನ್ನೂ ರಕ್ಷಿಸುವರೆಂದು ಭಾಷೆ ಕೊಡುವಂತೆ ಆಕೆ ಆ ಗೂಢಚಾರರನ್ನು ಕೇಳಿಕೊಂಡಳು.
ಅನಂತರ, ಇಸ್ರಾಯೇಲ್ಯರು ಕಾನಾನ್ ದೇಶದ ಯೆರಿಕೋ ಪಟ್ಟಣಕ್ಕೆ ದಂಡೆತ್ತಿ ಹೋದಾಗ, ಆ ಪಟ್ಟಣದ ಕೋಟೆಯ ಗೋಡೆಯು ಪವಾಡಸದೃಶವಾಗಿ ಕುಸಿದು ಬೀಳುವಂತೆ ಯೆಹೋವನು ಮಾಡಿದನು. ಆಗ ಯೆಹೋಶುವನ ಸೈನಿಕರು ಆ ಪಟ್ಟಣದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆದರೆ, ರಾಹಾಬಳನ್ನೂ ಅವಳ ಮನೆಯವರನ್ನೂ ಮಾತ್ರ ಉಳಿಸಿ ಕಾಪಾಡಿದರು. ಆಮೇಲೆ ಮಿಂಚಿನದಾಳಿ ನಡೆಸಿದ ಯೆಹೋಶುವನು ಕೇವಲ ಆರು ವರ್ಷಗಳಲ್ಲಿ ಕಾನಾನ್ ದೇಶದ ಹೆಚ್ಚಿನ ಪ್ರದೇಶಗಳನ್ನು ವಶಪಡಿಸಿಕೊಂಡನು. ತದನಂತರ, ಆ ದೇಶವನ್ನು ಇಸ್ರಾಯೇಲ್ಯರ ಕುಲಗಳಿಗೆ ಹಂಚಿಕೊಡಲಾಯಿತು.
ತನ್ನ ಜೀವಿತದ ಕೊನೆಯ ಕಾಲದಲ್ಲಿ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಒಟ್ಟುಗೂಡಿಸಿ ಬುದ್ಧಿಮಾತು ಹೇಳಿದನು. ಅವರ ಪಿತೃಗಳಿಗಾಗಿ ಯೆಹೋವ ದೇವರು ಮಾಡಿದ ಸಕಲ ಕಾರ್ಯಗಳನ್ನು ಅವರ ನೆನಪಿಗೆ ತರುತ್ತಾ, ಸದಾ ಯೆಹೋವನ ಸೇವೆಮಾಡುವಂತೆ ಮನವಿ ಮಾಡಿಕೊಂಡನು. ಆದರೆ, ಯೆಹೋಶುವ ಹಾಗೂ ಇತರ ಹಿರೀಪುರುಷರ ಕಾಲದ ನಂತರ ಇಸ್ರಾಯೇಲ್ಯರು ಯೆಹೋವನನ್ನು ಬಿಟ್ಟು ಇತರ ದೇವರುಗಳನ್ನು ಆರಾಧಿಸಲು ಪ್ರಾರಂಭಿಸಿದರು. ಸುಮಾರು 300 ವರ್ಷಗಳ ವರೆಗೆ ಆ ಜನಾಂಗವು ಯೆಹೋವನ ಆಜ್ಞೆಗಳಿಗೆ ಸ್ವಲ್ಪವೂ ವಿಧೇಯತೆ ತೋರಿಸಲಿಲ್ಲ. ಹೀಗೆ ಅವರು ಯೆಹೋವನ ಅನುಗ್ರಹವನ್ನು ಕಳೆದುಕೊಂಡರು ಮತ್ತು ಫಿಲಿಷ್ಟಿಯರಂಥ ಶತ್ರು ದೇಶಗಳಿಂದ ಕಷ್ಟಸಂಕಟಕ್ಕೀಡಾದರು. ಆದರೆ, ತಮಗೆ ಸಹಾಯ ಮಾಡುವಂತೆ ಅವರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಲಾಲಿಸಿದನು. ಮಾತ್ರವಲ್ಲ, ಅವರನ್ನು ಕಾಪಾಡಲಿಕ್ಕಾಗಿ ನ್ಯಾಯಸ್ಥಾಪಕರನ್ನು ನೇಮಿಸಿದನು. ಒಟ್ಟು 12 ನ್ಯಾಯಸ್ಥಾಪಕರು ಬೇರೆಬೇರೆ ಸಮಯಗಳಲ್ಲಿ ಜೀವಿಸಿದ್ದರು.
ಈ ನ್ಯಾಯಸ್ಥಾಪಕರ ಸಮಯದಲ್ಲಿ ನಡೆದ ಘಟನೆಗಳನ್ನು ‘ನ್ಯಾಯಸ್ಥಾಪಕರು’ ಪುಸ್ತಕದಲ್ಲಿ ನೋಡಬಹುದು. ಮೊದಲನೇ ನ್ಯಾಯಸ್ಥಾಪಕ ಒತ್ನೀಯೇಲನಾದರೆ ಕೊನೆಯವನು ಜೀವಿಸಿದ್ದವರಲ್ಲಿಯೇ ಅತಿ ಬಲಶಾಲಿಯಾಗಿದ್ದ ಸಂಸೋನನಾಗಿದ್ದನು. ನ್ಯಾಯಸ್ಥಾಪಕರು ಪುಸ್ತಕದಲ್ಲಿರುವ ರೋಮಾಂಚಕ ಘಟನೆಗಳು ಒಂದು ಪ್ರಮುಖ ಸತ್ಯವನ್ನು ಮತ್ತೆ ಮತ್ತೆ ಒತ್ತಿಹೇಳುತ್ತವೆ. ಅದೇನೆಂದರೆ, ಯೆಹೋವನಿಗೆ ವಿಧೇಯತೆ ತೋರಿಸುವುದು ಆಶೀರ್ವಾದ ತರುತ್ತದೆ, ಅವಿಧೇಯತೆ ತೋರಿಸುವುದು ಆಪತ್ತನ್ನು ಬರಮಾಡುತ್ತದೆ.
—ಯೆಹೋಶುವ; ನ್ಯಾಯಸ್ಥಾಪಕರು; ಯಾಜಕಕಾಂಡ 18:24, 25 ರ ಮೇಲೆ ಆಧಾರಿತವಾಗಿದೆ.