ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 7

ಇಸ್ರಾಯೇಲ್ಯರ ಬಿಡುಗಡೆ

ಇಸ್ರಾಯೇಲ್ಯರ ಬಿಡುಗಡೆ

ಈಜಿಪ್ಟ್‌ ದೇಶದವರ ಮೇಲೆ ಯೆಹೋವನು ಬಾಧೆಗಳನ್ನು ತರುತ್ತಾನೆ. ಮೋಶೆಯು ಇಸ್ರಾಯೇಲ್ಯರನ್ನು ಗುಲಾಮಗಿರಿಯಿಂದ ಬಿಡಿಸಿ ಈಜಿಪ್ಟಿನಿಂದ ಹೊರತರುತ್ತಾನೆ. ಮೋಶೆಯ ಮೂಲಕ ದೇವರು ಇಸ್ರಾಯೇಲ್ಯರಿಗೆ ಕಟ್ಟಳೆಗಳನ್ನು ಕೊಡುತ್ತಾನೆ

ಹಲವಾರು ವರ್ಷಗಳ ವರೆಗೆ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಜೀವಿಸಿದರು. ಅಲ್ಲಿ ಅವರ ವಂಶ ಬೆಳೆದು ದೊಡ್ಡದಾಯಿತು. ಅನಂತರ, ಯೋಸೇಫನನ್ನು ತಿಳಿಯದ ಒಬ್ಬ ಫರೋಹನು ಈಜಿಪ್ಟನ್ನು ಆಳಲು ಆರಂಭಿಸಿದನು. ಅವನು ತುಂಬಾ ಕ್ರೂರಿಯಾಗಿದ್ದನು. ಇಸ್ರಾಯೇಲ್ಯರ ವಂಶ ಬೆಳೆದು ದೊಡ್ಡದಾಗುವುದನ್ನು ನೋಡಿದಾಗ ಅವನಿಗೆ ಬಹಳ ಹೆದರಿಕೆಯಾಯಿತು. ಆದುದರಿಂದ, ಅವನು ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡನು. ಅಷ್ಟೇ ಅಲ್ಲ, ಇಸ್ರಾಯೇಲ್ಯರಿಗೆ ಜನಿಸುವ ಗಂಡುಕೂಸುಗಳನ್ನು ನೈಲ್‌ ನದಿಯಲ್ಲಿ ಹಾಕಿ ಸಾಯಿಸುವಂತೆ ರಾಜಾಜ್ಞೆಯನ್ನು ಹೊರಡಿಸಿದನು. ಆದರೆ, ಧೈರ್ಯವಂತೆ ಸ್ತ್ರೀಯೊಬ್ಬಳು ತನ್ನ ಕಂದನನ್ನು ಕಾಪಾಡಲು ಬಯಸಿದಳು. ಅವಳು ತನ್ನ ಕಂದನನ್ನು ಒಂದು ಬುಟ್ಟಿಯಲ್ಲಿ ಮಲಗಿಸಿ ಆಪುಹುಲ್ಲು ಬೆಳೆದಿದ್ದ ಸ್ಥಳದಲ್ಲಿ ಅಡಗಿಸಿಟ್ಟಳು. ಆ ಬುಟ್ಟಿಯು ಫರೋಹನ ಕುಮಾರಿಯ ಕಣ್ಣಿಗೆ ಬಿತ್ತು. ಅವಳು ಆ ಪುಟಾಣಿ ಮಗುವನ್ನು ಎತ್ತಿಕೊಂಡು ಹೋಗಿ ಮೋಶೆ ಎಂದು ಹೆಸರಿಟ್ಟು ಅರಮನೆಯಲ್ಲಿ ಸಾಕಿದಳು.

ಮೋಶೆ ದೊಡ್ಡವನಾಗಿ 40 ವರ್ಷದವನಾದನು. ಒಬ್ಬ ಇಸ್ರಾಯೇಲ್ಯನನ್ನು ಈಜಿಪ್ಟಿನ ಅಧಿಕಾರಿಯ ಕೈಯಿಂದ ರಕ್ಷಿಸಲು ಹೋಗಿ ಮೋಶೆ ಸಮಸ್ಯೆಯೊಂದರಲ್ಲಿ ಸಿಕ್ಕಿಬಿದ್ದನು. ಆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಕಾಣದೆ ಈಜಿಪ್ಟನ್ನು ಬಿಟ್ಟು ದೂರದ ದೇಶಕ್ಕೆ ಓಡಿಹೋಗಿ ಅಲ್ಲಿ ವಾಸಿಸಿದನು. ಮೋಶೆಗೆ 80 ವರ್ಷವಾದಾಗ, ಯೆಹೋವನು ಅವನನ್ನು ಪುನಃ ಈಜಿಪ್ಟಿಗೆ ಕಳುಹಿಸಿದನು. ಮತ್ತು ತನ್ನ ಜನರನ್ನು ಬಿಡುಗಡೆ ಮಾಡುವಂತೆ ಅವನ ಮೂಲಕ ಫರೋಹನಿಗೆ ಹೇಳಿದನು.

ಆದರೆ, ಆ ಬೇಡಿಕೆಯನ್ನು ಫರೋಹನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದನು. ಆದ್ದರಿಂದ ದೇವರು ಈಜಿಪ್ಟ್‌ ದೇಶದ ಮೇಲೆ ಒಂದರ ನಂತರ ಒಂದರಂತೆ 10 ಬಾಧೆಗಳನ್ನು ಬರಮಾಡಿದನು. ಪ್ರತಿಯೊಂದು ಬಾಧೆಯ ನಂತರ ಮೋಶೆ ಫರೋಹನನ್ನು ಭೇಟಿಯಾಗಿ, ಇನ್ನಾದರೂ ದೇವಜನರನ್ನು ಬಿಡುಗಡೆಗೊಳಿಸಿ ಮುಂದಿನ ಬಾಧೆಯಿಂದ ತಪ್ಪಿಸಿಕೊಳ್ಳುವಂತೆ ಕೇಳಿಕೊಂಡನು. ಹಾಗೆ ಕೇಳಿಕೊಂಡಾಗಲೆಲ್ಲಾ ಫರೋಹನು ಮೊಂಡುತನ ತೋರಿಸಿದನು. ಮೋಶೆಯ ಮಾತನ್ನಾಗಲಿ ಯೆಹೋವ ದೇವರ ಮಾತನ್ನಾಗಲಿ ಕಿವಿಗೆ ಹಾಕಿಕೊಳ್ಳದೆ ತಾತ್ಸಾರ ಮಾಡಿದನು. ಕೊನೆಗೆ, ಯೆಹೋವನು ಹತ್ತನೇ ಬಾಧೆ ತಂದಾಗ ಈಜಿಪ್ಟಿನ ಎಲ್ಲಾ ಚೊಚ್ಚಲ ಮಕ್ಕಳು ಸತ್ತರು. ಯಾರು ಯೆಹೋವನ ಮಾತನ್ನು ಕೇಳಿ, ಬಲಿಯರ್ಪಿಸಿದ ಕುರಿಮರಿಯ ರಕ್ತವನ್ನು ತಮ್ಮ ಬಾಗಿಲುಗಳ ನಿಲುವುಪಟ್ಟಿಗಳಿಗೆ ಹಚ್ಚಿದರೋ ಅವರ ಚೊಚ್ಚಲ ಮಕ್ಕಳು ಮಾತ್ರ ಜೀವದಿಂದ ಉಳಿದರು. ಏಕೆಂದರೆ, ದೇವರು ಕಳುಹಿಸಿದ ಸಂಹಾರಕ ದೂತನು ಅಂಥ ಮನೆಗಳನ್ನು ಬಾಧಿಸದೆ ಹಾದುಹೋದನು. ಈ ಅದ್ಭುತ ಘಟನೆಯನ್ನು ಸ್ಮರಿಸಿಕೊಳ್ಳಲಿಕ್ಕಾಗಿ ಇಸ್ರಾಯೇಲ್ಯರು ಪ್ರತಿವರ್ಷ ಪಸ್ಕ ಎಂಬ ಹಬ್ಬವನ್ನು ಆಚರಿಸಿದರು.

ಆ ಹತ್ತನೆಯ ಬಾಧೆಯಲ್ಲಿ ತನ್ನ ಚೊಚ್ಚಲ ಮಗನನ್ನು ಕಳೆದುಕೊಂಡ ಫರೋಹನು, ಇಸ್ರಾಯೇಲ್ಯರನ್ನು ಕರೆದುಕೊಂಡು ಹೋಗುವಂತೆ ಮೋಶೆಗೆ ಆಜ್ಞಾಪಿಸಿದನು. ಕೂಡಲೇ ಇಸ್ರಾಯೇಲ್ಯರ ಮಹಾಸಮೂಹವು ಈಜಿಪ್ಟ್‌ ದೇಶದಿಂದ ಹೊರಟಿತು. ಆದರೆ ಫರೋಹನು ಮತ್ತೆ ತನ್ನ ಮನಸ್ಸನ್ನು ಬದಲಾಯಿಸಿದನು. ತನ್ನ ಅನೇಕ ರಥಗಳನ್ನೂ ಸೈನಿಕರನ್ನೂ ತೆಗೆದುಕೊಂಡು ಅವರನ್ನು ಬೆನ್ನಟ್ಟಿದನು. ಅಷ್ಟರಲ್ಲಿ ಇಸ್ರಾಯೇಲ್ಯರು ಕೆಂಪು ಸಮುದ್ರದ ಹತ್ತಿರ ಬಂದಿದ್ದರು. ಅಗಾಧ ಸಮುದ್ರ ಮತ್ತು ಫರೋಹನ ಸೈನ್ಯದ ಮಧ್ಯೆ ಅವರು ಸಿಕ್ಕಿಬಿದ್ದಂತೆ ಕಂಡಿತು. ಆದರೆ ಯೆಹೋವನು ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದನು. ಇಸ್ರಾಯೇಲ್ಯರು ಒಣದಾರಿಯಲ್ಲಿ ನಡೆದು ಸಮುದ್ರವನ್ನು ದಾಟಿದರು. ಅವರ ಎರಡು ಕಡೆಗಳಲ್ಲಿ ನೀರು ಗೋಡೆಯಂತೆ ನಿಂತಿತ್ತು! ಈಜಿಪ್ಟಿನ ಸೈನ್ಯ ಸಹ ಆ ದಾರಿಯಲ್ಲೇ ಇಸ್ರಾಯೇಲ್ಯರನ್ನು ಬೆನ್ನಟ್ಟಿತು. ಇಬ್ಭಾಗಗೊಂಡ ಸಮುದ್ರದ ನೀರನ್ನು ಯೆಹೋವನು ದಿಢೀರೆಂದು ಬೀಳಿಸಿ ಒಂದಾಗುವಂತೆ ಮಾಡಿದನು. ಫರೋಹ ಹಾಗೂ ಅವನ ಇಡೀ ಸೈನ್ಯವು ಸಮುದ್ರದಲ್ಲಿ ಮುಳುಗಿಹೋಯಿತು.

ಇಸ್ರಾಯೇಲ್ಯರು ಮುಂದೆ ಪ್ರಯಾಣಿಸಿ ಸೀನಾಯಿ ಪರ್ವತದ ಬಳಿ ಪಾಳೆಯ ಹೂಡಿದರು. ಅಲ್ಲಿ ಯೆಹೋವನು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಮೋಶೆಯ ಮೂಲಕ ಅವರಿಗೆ ತನ್ನ ಕಟ್ಟಳೆಗಳನ್ನು ಕೊಟ್ಟನು. ಈ ಕಟ್ಟಳೆಗಳು ಅವರ ದೈನಂದಿನ ಜೀವನದಲ್ಲಿ ಮಾರ್ಗದರ್ಶನ ಹಾಗೂ ಸಂರಕ್ಷಣೆಯನ್ನು ಕೊಟ್ಟವು. ಎಷ್ಟರವರೆಗೆ ಅವರು ನಂಬಿಗಸ್ತರಾಗಿ ದೇವರ ಆಜ್ಞೆಗಳನ್ನು ಪಾಲಿಸುವರೋ ಅಷ್ಟರವರೆಗೆ ಯೆಹೋವನು ಅವರೊಂದಿಗಿದ್ದು ಅವರನ್ನು ಕಾಪಾಡಿ ಆಶೀರ್ವದಿಸಲಿದ್ದನು.

ಆದರೂ ಇಸ್ರಾಯೇಲ್ಯರಲ್ಲಿ ಹೆಚ್ಚಿನವರು ಯೆಹೋವನಲ್ಲಿ ನಂಬಿಕೆಯಿಡದೆ ಆತನ ಮನಸ್ಸನ್ನು ಬೇಸರಗೊಳಿಸಿದರು. ಆದ್ದರಿಂದ ಆ ಪೀಳಿಗೆ ಮುಗಿಯುವ ವರೆಗೂ ಇಸ್ರಾಯೇಲ್ಯರು 40 ವರ್ಷ ಅರಣ್ಯದಲ್ಲೇ ಅಲೆದಾಡುವಂತೆ ಯೆಹೋವನು ಮಾಡಿದನು. ಅನಂತರ ಮೋಶೆಯು ನೀತಿವಂತನಾದ ಯೆಹೋಶುವನನ್ನು ತನ್ನ ಸ್ಥಾನದಲ್ಲಿ ನಾಯಕನನ್ನಾಗಿ ನೇಮಿಸಿದನು. ದೇವರು ಅಬ್ರಹಾಮನಿಗೆ ವಾಗ್ದಾನಿಸಿದ್ದ ದೇಶವನ್ನು ಇಸ್ರಾಯೇಲ್ಯರು ಪ್ರವೇಶಿಸುವ ಸಮಯ ಕೊನೆಗೂ ಬಂತು.

ವಿಮೋಚನಕಾಂಡ; ಯಾಜಕಕಾಂಡ; ಅರಣ್ಯಕಾಂಡ; ಧರ್ಮೋಪದೇಶಕಾಂಡ; ಕೀರ್ತನೆ 136:10-15; ಅಪೊಸ್ತಲರ ಕಾರ್ಯಗಳು 7:17-36 ರ ಮೇಲೆ ಆಧಾರಿತವಾಗಿದೆ.